ಮಧ್ಯಪ್ರದೇಶ ಬಿಜೆಪಿ ಸರ್ಕಾರದ ಸಚಿವ ವಿಜಯ್ ಶಾ ಕರ್ನಲ್ ಸೋಫಿಯಾ ಖುರೇಶಿ ವಿರುದ್ಧ ನಿಂದನಾತ್ಮಕ ಟೀಕೆ ಮಾಡಿದ್ದಕ್ಕಾಗಿ ಸುಪ್ರೀಂ ಕೋರ್ಟ್‌ನಿಂದ ತೀವ್ರ ತರಾಟೆಗೆ ಒಳಗಾಗಿದ್ದಾರೆ.
ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ವಿಜಯ್ ಶಾ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಕರ್ನಲ್ ಸೋಫಿಯಾ ಖುರೇಶಿ ಭಯೋತ್ಪಾದಕರ ಸೋದರಿ ಎಂಬ ಟೀಕೆಯನ್ನು ಮಧ್ಯಪ್ರದೇಶ ಹೈಕೋರ್ಟ್ (ಸ್ವಯಂಪ್ರೇರಿತವಾಗಿ ಗಮನಿಸಿ) ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶಿಸಿತ್ತು.
ಈ ಬೆಳವಣಿಗೆಯ ನಂತರ ವಿಜಯ್ ಶಾ ಕ್ಷಮೆ ಯಾಚಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ಶಾ ವಿರುದ್ಧ ಆಕ್ರೋಶ ಎದ್ದಷ್ಟೇ ಪ್ರಮಾಣದಲ್ಲಿ ಅವರನ್ನು ಮೋದಿ ಅಭಿಮಾನಿಗಳು ಬೆಂಬಲಿಸಿರುವುದೂ ಉಂಟು.
ಮಧ್ಯಪ್ರದೇಶ ಹೈಕೋರ್ಟ್ ಅವರ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಪೊಲೀಸರ ಮೇಲೆ ಕಠಿಣ ಧೋರಣೆ ತಳೆದಿದ್ದು ತನಿಖೆಯನ್ನು ಸ್ವತಃ ಮೇಲ್ವಿಚಾರಣೆ ಮಾಡುವುದಾಗಿ ಸಾರಿದೆ.
ಸುಪ್ರೀಂ ಕೋರ್ಟ್ ಏನು ಹೇಳಿತು?
ಮಧ್ಯಪ್ರದೇಶ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟು ಗುರುವಾರ ನಿರಾಕರಿಸಿತು. ಮುಖ್ಯ “ಎಂತಹ ಹೇಳಿಕೆ ನೀಡುತ್ತಿದ್ದೀರಿ? ಸಂವಿಧಾನಾತ್ಮಕ ಹುದ್ದೆಯಲ್ಲಿರುವ ವ್ಯಕ್ತಿಯಿಂದ ಮರ್ಯಾದೆ ಘನತೆಯನ್ನು ನಿರೀಕ್ಷಿಸಲಾಗುತ್ತದೆ. ದೇಶವು ಇಂತಹ ಗಂಭೀರ ಸ್ಥಿತಿಯನ್ನು ಎದುರಿಸುತ್ತಿರುವಾಗ ಪ್ರತಿಯೊಂದು ಪದವನ್ನು ಜವಾಬ್ದಾರಿ ಅರಿತು ಆಡಬೇಕು,” ಎಂದು ನ್ಯಾಯಮೂರ್ತಿ ಬಿ ಆರ್ ಗವಾಯಿ ಹೇಳಿದರು. ವಿಚಾರಣೆ ಶುಕ್ರವಾರ ಮುಂದುವರೆಯಲಿದೆ.
ವಿಜಯ್ ಶಾ ಯಾರು?
ವಿಜಯ್ ಶಾ ಅವರ ಪೂರ್ಣ ಹೆಸರು ಕುಂವರ್ ವಿಜಯ್ ಶಾ. ಎಂಟು ಬಾರಿ ಶಾಸಕರಾಗಿದ್ದಾರೆ. ಮೊದಲ ಸಲ 1990ರಲ್ಲಿ ಬಿಜೆಪಿ ಟಿಕೆಟ್‌ನಿಂದ ಗೆದ್ದರು. ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಹರಸೂದ್ ವಿಧಾನಸಭಾ ಕ್ಷೇತ್ರ ಗೋಂಡ್ ಆದಿವಾಸಿ ಬಾಹುಳ್ಯ ಕ್ಷೇತ್ರ. 1993, 1998, 2003, 2008, 2013, 2018 ಮತ್ತು 2023 ರಲ್ಲಿ ವಿಜಯ್ ಶಾ ಇಲ್ಲಿಂದ ಗೆದ್ದಿದ್ದಾರೆ.
ವಿಜಯ್ ಶಾ ಅವರು ಗೋಂಡ್ ಆದಿವಾಸಿ ರಾಜ ಕುಟುಂಬದಿಂದ ಬಂದವರು ಮತ್ತು ಖುದ್ದು ಆದಿವಾಸಿ. ಈ ಹಿಂದೆ ಅಂದಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರ ಪತ್ನಿಯ ಬಗ್ಗೆ ದ್ವಂದ್ವಾರ್ಥದ ಟೀಕೆ ಮಾಡಿ ನಾಲ್ಕು ತಿಂಗಳ ಕಾಲ ಸಚಿವ ಸ್ಥಾನ ಕಳೆದುಕೊಂಡಿದ್ದರು.
“ಒಮ್ಮೆ ಆದಿವಾಸಿ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಅವರಿಗೆ ತಲಾ ಎರಡು ಟೀ-ಶರ್ಟ್‌ಗಳನ್ನು ನೀಡಬೇಕು” ಎಂಬ ಅಸಭ್ಯ ಟೀಕೆಗಾಗಿ ಆಗಲೂ ತೀವ್ರ ಟೀಕೆ ಎದುರಿಸಿದ್ದರು.