ಕೋಲ್ಕತ್ತಾದಲ್ಲಿ ಇತ್ತೀಚೆಗೆ ನಡೆದ ಕಾನೂನು ಕಾಲೇಜು ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡಿರುವ ಅಲ್ಲಿನ ಟಿಎಂಸಿ ಶಾಸಕ ಮದನ್ ಮಿತ್ರಾ ತಮ್ಮ ವಿಕೃತಿ ಹೊರಹಾಕಿದ್ದಾರೆ ‘ಅವಳ್ಯಾಕೆ ಅಲ್ಲಿಗೆ ಹೋಗಿದ್ಲು. ಆಕೆ ಅಲ್ಲಿಗೆ ಹೋಗಿದ್ದರಿಂದ ಜನರು ಅದರ ಲಾಭ ಪಡೆದರು’ ಎಂದು ಪುರುಷಾಹಂಕಾರದ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ವಿರುದ್ಧ ಟಿಎಂಸಿ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
24 ವರ್ಷದ ಕಾನೂನು ವಿದ್ಯಾರ್ಥಿನಿಯನ್ನು ಬುಧವಾರ ಸಂಜೆ ಕಾನೂನು ಕಾಲೇಜಿನ ಭದ್ರತಾ ಕೊಠಡಿಗೆ ಎಳೆದೊಯ್ದು ಮೂವರು ಕಾಮುಕರು ಅತ್ಯಾಚಾರ ಎಸಗಿದ್ದರು. ಆರೋಪಿಗಳು ಅದೇ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಮತ್ತು ಓರ್ವ ಸಿಬ್ಬಂದಿಯಾಗಿದ್ದು, ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ. ಕೆಲವು ತಿಂಗಳ ಹಿಂದೆ ನಡೆದಿದ್ದ ಕೋಲ್ಕೊತ್ತಾ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ-ಕೊಲೆ ಪ್ರಕರಣದ ಬಳಿಕ, ಈ ಕೃತ್ಯವು ಪಶ್ಚಿಮ ಬಂಗಾಳದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಕೋಲ್ಕತ್ತಾದಲ್ಲಿ ವಿದ್ಯಾರ್ಥಿನಿಯರ ಮೇಲೆ ಕಾಲೇಜುಗಳಲ್ಲೇ ನಡೆಯುತ್ತಿರುವ ಅತ್ಯಾಚಾರ ಕೃತ್ಯಗಳನ್ನು ತಡೆಯುವಂತೆ ಮತ್ತು ರಾಜ್ಯದಲ್ಲಿ ಮಹಿಳೆಯ ರಕ್ಷಣೆಗಾಗಿ ಆಗ್ರಹಗಳೂ ಕೇಳಿಬಂದಿದ್ದವು.
ಈ ಬೆನ್ನಲ್ಲೇ, ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಆಡಳಿತಾರೂಢ ಟಿಎಂಸಿ ಶಾಸಕ ಮದನ್ ಮಿತ್ರಾ, “ಸಂತ್ರಸ್ತೆ ಘಟನಾ ಸ್ಥಳಕ್ಕೆ ಯಾಕೆ ಹೋಗಿದ್ದಳು. ಆಕೆ ಏಕಾಂಗಿಯಲ್ಲಿ ಅಲ್ಲಿಗೆ ಹೋಗಿದ್ದಕ್ಕೇ ಆಕೆಯ ನೇಲೆ ಅತ್ಯಾಚಾರ ನಡೆದಿದೆ. ಆಕೆ ಒಬ್ಬಂಟಿಯಾಗಿ ಬಂದಿದ್ದ ಪರಿಸ್ಥಿತಿಯ ಲಾಭವನ್ನು ಅಪರಾಧ ಮಾಡಿದ ಜನರು ಪಡೆದುಕೊಂಡಿದ್ದಾರೆ. ಆಕೆ ಆ ಸ್ಥಳಕ್ಕೆ ಹೋಗದಿದ್ದರೆ, ಪರಿಸ್ಥಿತಿ ಲಾಭ ಪಡೆದರು. ಆಕೆ ಅಪರಾಧದ ಸ್ಥಳಕ್ಕೆ ಹೋಗದಿದ್ದರೆ ಘಟನೆ ಎಂದಿಗೂ ಸಂಭವಿಸುತ್ತಿರಲಿಲ್ಲ” ಎಂದು ಹೇಳಿದ್ದು, ವಿವಾದ ಸೃಷ್ಟಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಭೀಕರ ಯುದ್ಧಗಳಿಗೆ ಬಲಿಯಾಗುತ್ತಿದೆ ಜಗತ್ತು; ಪರಿಣಾಮಗಳೂ ವಿನಾಶಕಾರಿ
“ಸಂತ್ರಸ್ತೆ ಎಲ್ಲಿಗೆ ಹೋಗುತ್ತಿದ್ದೇನೆಂದು ಯಾರಿದಾರೂ ಹೇಳಿದ್ದರೆ ಅಥವಾ ತನ್ನೊಂದಿಗೆ ಒಂದಿಬ್ಬರು ಸ್ನೇಹಿತರನ್ನು ಕರೆದೊಯ್ದಿದ್ದರೂ ಘಟನೆ ಸಂಭವಿಸುತ್ತಿರಲಿಲ್ಲ” ಎಂದು ಮಿತ್ರಾ ಹೇಳಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದೂ ಆಗ್ರಹಿಸಿದ್ದಾರೆ.
ಮದನ್ ಮಿತ್ರಾ ಹೇಳಿಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ, ಅವರ ಹೇಳಿಕೆಯನ್ನು ಸ್ವತಃ ಟಿಎಂಸಿ ನಾಯಕರು ಖಂಡಿಸಿದ್ದಾರೆ. ಮದನ್ ಮಿತ್ರಾ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ. ಅಲ್ಲದೆ, ಮಿತ್ರಾ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.