ನಿಷೇಧಿಸಲಾದ ಏಕ ಬಳಕೆ ಪ್ಲಾಸ್ಟಿಕ್‌ಗಳ ಪಟ್ಟಿಯಲ್ಲಿ ಪ್ಲಾಸ್ಟಿಕ್ ಹೂವುಗಳ ಪಟ್ಟಿಯಲ್ಲಿ ಸೇರಿಸಿಲ್ಲ? ಈ ಪ್ಲಾಸ್ಟಿಕ್ ಹೂವುಗಳನ್ನು ಮರುಬಳಕೆ ಮಾಡಲು ಸಾಧ್ಯವೇ ಎಂದು ಕೇಂದ್ರ ಸರ್ಕಾರವನ್ನು ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾದೆ ಮತ್ತು ನ್ಯಾಯಮೂರ್ತಿ ಭಾರತಿ ದಂಗ್ರೆ ಅವರು ಪ್ಲಾಸ್ಟಿಕ್ ಹೂವುಗಳನ್ನು ಮರುಬಳಕೆ ಮಾಡಬಹುದೇ ಅಥವಾ ಅದು ಕೊಳೆಯಬಲ್ಲದೇ ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು | ಏಕ ಬಳಕೆಯ ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿರುವ ಮಳಿಗೆಗಳಿಗೆ ಬೀಗ ಜಡಿದ ಬಿಬಿಎಂಪಿ
ಪ್ಲಾಸ್ಟಿಕ್ ಹೂವು ಬಳಕೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಹೂವು ಬೆಳೆಗಾರರ ಕೌನ್ಸಿಲ್ (ಜಿಎಫ್‌ಸಿಐ) ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿದೆ.
“ಪ್ಲಾಸ್ಟಿಕ್ ಹೂವುಗಳನ್ನು ಮರುಬಳಕೆ ಮಾಡಬಹುದು ಎಂಬುದು ಕೇಂದ್ರ ಸರ್ಕಾರಕ್ಕೆ ಖಚಿತವಾಗಿದೆಯೇ ಅಥವಾ ಅದು ಕೊಳೆದು ಮಣ್ಣಿನಲ್ಲಿ ಸೇರುವಂತದ್ದೇ? ಅವುಗಳು ಅತೀ ತೆಳ್ಳಗೆ ಇರುತ್ತವೆ. ಅದನ್ನು ಮರುಬಳಕೆ ಮಾಡಲಾಗುತ್ತದೆಯೇ” ಎಂದು ಕೇಂದ್ರ ಸರ್ಕಾರವನ್ನು ಹೈಕೋರ್ಟ್ ಪ್ರಶ್ನಿಸಿದೆ. ಹಾಗೆಯೇ ಅರ್ಜಿದಾರರಿಗೆ ಎರಡು ವಾರಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದೆ.
ಪ್ಲಾಸ್ಟಿಕ್ ಹೂವುಗಳು ಗರಿಷ್ಠವಾಗಿ 30 ಮೈಕ್ರೋನ್ಸ್ ಇರುತ್ತದೆ. ಆದರೆ ಕೇಂದ್ರ ಹಾಗೂ ಮಹಾರಾಷ್ಟ್ರ ಸರ್ಕಾರವು 100 ಮೈಕ್ರೋನ್‌ಗಿಂತ ಕಡಿಮೆ ದಪ್ಪವಾಗಿರುವ ಪ್ಲಾಸ್ಟಿಕ್‌ಗಳನ್ನು ಏಕ ಬಳಕೆಯ ಪ್ಲಾಸ್ಟಿಕ್ ಎಂದು ಪರಿಗಣಿಸುವಂತೆ ಸುತ್ತೋಲೆ ಹೊರಡಿಸಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಹಾಗೆಯೇ ಸುತ್ತೋಲೆಯು ಪ್ಲಾಸ್ಟಿಕ್ ಹೂವುಗಳನ್ನು ನಿಷೇಧಿಸಬೇಕು ಎಂದು ಹೇಳಿಲ್ಲ. 100 ಮೈಕ್ರೋನ್‌ಗಿಂತ ಕಡಿಮೆ ದಪ್ಪವಿರುವ ಪ್ಲಾಸ್ಟಿಕ್ ಹೂವುಗಳನ್ನು ನಿಷೇಧಿಸಬೇಕು ಎಂದು ಅರ್ಜಿದಾರರು ಆಗ್ರಹಿಸಿದ್ದಾರೆ.
