ಈ ನಡೆಯ ಹಿಂದೆ ಬಹುದೊಡ್ಡ ಹುನ್ನಾರವೇ ಅಡಗಿದಂತಿದೆ. ಭಾರತದಲ್ಲಿ ಆಳುವವರು ಬಹುಸಂಖ್ಯಾತ ಹಿಂದುಗಳಲ್ಲಿ ಮುಸಲ್ಮಾನರ ವಿರುದ್ಧ ಹುಟ್ಟು ಹಾಕಿರುವ ದ್ವೇಷ ಅಪನಂಬಿಕೆಗಳ ಕಂದರವನ್ನು ಮತ್ತಷ್ಟು ದೊಡ್ಡದು ಮಾಡುವುದು; ಕಾಶ್ಮೀರಿಗಳು ಉಳಿದ ಭಾರತದ ಜೊತೆಗೆ ಯಾವುದೇ ರೀತಿಯಿಂದ ಹತ್ತಿರವಾಗದಂತೆ, ಅವರನ್ನು ದೂರ ಇರಿಸುವುದು, ಅವರ ಮನಃಪಟಲದಿಂದ ಪಾಕಿಸ್ತಾನ ಮರೆಯಾಗದಂತೆ ಕಾಪಾಡುವ ಉದ್ದೇಶ ಈ ಹತ್ಯೆಯ ಹಿಂದೆ ಅಡಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಜಗತ್ತಿನ ಅತಿದೊಡ್ಡ ಬಯಲು ಜೈಲುಗಳಲ್ಲಿ ಒಂದೆಂದು ನೋಮ್ ಚಾಮ್ ಸ್ಕಿ ಕಾಶ್ಮೀರವನ್ನು ಬಣ್ಣಿಸಿರುವುದುಂಟು. ಅಷ್ಟೊಂದು ಸಂಖ್ಯೆಯಲ್ಲಿ ಸೇನಾ ಪಡೆಗಳು, ಅರೆಸೇನಾ ಪಡೆಗಳನ್ನು ನಿಯುಕ್ತಿಗೊಳಿಸಲಾಗಿದೆ. ಭಯೋತ್ಪಾದನೆಯ ತಿದಿ ಒತ್ತುತ್ತುಲೇ ಬಂದಿರುವ ನೆರೆಹೊರೆಯ ಪಾಕಿಸ್ತಾನ, ಕಾಶ್ಮೀರೀ ಪ್ರತ್ಯೇಕವಾದಿಗಳು ಹಾಗೂ ಸೇನೆ ಮತ್ತು ಅರೆಸೇನಾ ಪಡೆಗಳ ಕಣ್ಗಾವಲಿನಲ್ಲಿ ದಶಕಗಟ್ಟಲೆ ನರಳಿರುವವರು ಜನಸಾಮಾನ್ಯ ಕಾಶ್ಮೀರಿಗಳು. ಅವರ ಸಂಕಟ ಸಂಘರ್ಷ ಬಲು ದೊಡ್ಡದು. ಇತ್ತೀಚಿನ ವರ್ಷಗಳಲ್ಲಿ ಹಲವು ಬಗೆಯ ಅವಹೇಳನಗಳು ಅಪನಿಂದೆಗಳಿಗೆ ಗುರಿಯಾಗಿರುವವರು ಅವರು. ನಿರುದ್ಯೋಗಕ್ಕೂ ಬೇಟೆಯ ಮಿಕವಾಗಿ ಬದುಕಿರುವವರು.
ಪಹಲ್ಗಾಮ್ ಪ್ರಕರಣದಲ್ಲಿ ಭಯೋತ್ಪಾದಕರು ಧರ್ಮವನ್ನು ವಿಚಾರಿಸಿ ತಿಳಿದುಕೊಂಡು ಅದರ ಹೆಸರಿನಲ್ಲೇ ಹಿಂದೂ ಪ್ರವಾಸಿಗರ ಹತ್ಯೆ ಮಾಡಿರುವುದು ಹೌದು.
ಈ ನಡೆಯ ಹಿಂದೆ ಬಹುದೊಡ್ಡ ಹುನ್ನಾರವೇ ಅಡಗಿದಂತಿದೆ. ಭಾರತದಲ್ಲಿ ಆಳುವವರು ಬಹುಸಂಖ್ಯಾತ ಹಿಂದುಗಳಲ್ಲಿ ಮುಸಲ್ಮಾನರ ವಿರುದ್ಧ ಹುಟ್ಟಿ ಹಾಕಿರುವ ದ್ವೇಷ ಅಪನಂಬಿಕೆಗಳ ಕಂದರವನ್ನು ಮತ್ತಷ್ಟು ದೊಡ್ಡದು ಮಾಡುವುದು; ಕಾಶ್ಮೀರಿಗಳು ಉಳಿದ ಭಾರತದ ಜೊತೆಗೆ ಯಾವುದೇ ರೀತಿಯಿಂದ ಹತ್ತಿರವಾಗದಂತೆ, ಅವರನ್ನು ದೂರ ಇರಿಸುವುದು, ಅವರ ಮನಃಪಟಲದಿಂದ ಪಾಕಿಸ್ತಾನ ಮರೆಯಾಗದಂತೆ ಕಾಪಾಡುವ ಉದ್ದೇಶ ಈ ಹತ್ಯೆಯ ಹಿಂದೆ ಅಡಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಪ್ರಕರಣದಲ್ಲಿ ಒಡೆದು ಕಾಣುವ ಮತ್ತೊಂದು ದೊಡ್ಡ ಅಂಶವೆಂದರೆ ಅದು ಪಹಲ್ಗಾಮ್ ನ ಸುತ್ತಮುತ್ತ ಭದ್ರತಾ ಪಡೆಗಳ ನಿಯುಕ್ತಿ ಆಗದಿರುವುದು. ಹಂತಕರು ಅತ್ಯಂತ ಸಾವಧಾನದಿಂದ ತಮ್ಮ ಕೃತ್ಯವನ್ನು ನಡೆಸಿ ಪರಾರಿಯಾಗಿರುವುದು ಬೇಹುಗಾರಿಕೆ ವೈಫಲ್ಯ ಮತ್ತು ಭದ್ರತಾ ವೈಫಲ್ಯಗಳತ್ತ ಬೆರಳು ಮಾಡಿದೆ.
ಪ್ರವಾಸಿಗಳ ರಕ್ಷಣೆಗೆ ಮುಂದಾದ ಕಾಶ್ಮೀರಿ ಯುವಕ ಆದಿಲ್ ಹುಸೇನ್ ವಿನಾ ಉಳಿದವರೆಲ್ಲ ಹಿಂದುಗಳಾಗಿದ್ದರು ನಿಜ. ಜಮ್ಮು-ಕಾಶ್ಮೀರದಲ್ಲಿ ಜನರಿಂದ ಚುನಾಯಿತಗೊಂಡ ಓಮರ್ ಅಬ್ದುಲ್ಲ ಸರ್ಕಾರ ಅಧಿಕಾರದಲ್ಲಿರುವುದೂ ವಾಸ್ತವ. ಆದರೆ ಜಮ್ಮು-ಕಾಶ್ಮೀರದಲ್ಲಿ ಈಗಲೂ ನಡೆದಿರುವ ಅಸಲು ಅಧಿಕಾರ ಯಾರದು?

ಜಮ್ಮು-ಕಾಶ್ಮೀರ ಈಗಲೂ ಕೇಂದ್ರಾಡಳಿತ ಪ್ರದೇಶ. ಸೇನೆ, ಅರೆಸೇನೆ ಎಲ್ಲ ಕೇಂದ್ರ ಸರ್ಕಾರದ ನೇರ ಹಿಡಿತದಲ್ಲಿವೆ. ಆ ರಾಜ್ಯದ ಪೊಲೀಸರೂ ಈ ಮಾತಿಗೆ ಹೊರತಲ್ಲ. ಐದು ವರ್ಷಗಳ ಕೇಂದ್ರಾಡಳಿತ ಉಗ್ರರ ಚಟುವಟಿಕೆಗಳನ್ನು ಬಹುಪಾಲು ಹತ್ತಿಕ್ಕಿದ್ದು ದಿಟ.
2019ರ ಆಗಸ್ಟ್ 19ಕ್ಕೆ ಮುನ್ನ ಜಮ್ಮು-ಕಾಶ್ಮೀರವು ರಾಜ್ಯದ ಸ್ಥಾನಮಾನ ಹೊಂದಿತ್ತು. ಆಗ ಸೇನೆಯೂ ಸೇರಿದಂತೆ ಇಡೀ ಭದ್ರತಾ ವ್ಯವಸ್ಥೆಯು ಮುಖ್ಯಮಂತ್ರಿಯ ಏಕೀಕೃತ ಹೈಕಮಾಂಡ್ ಗೆ ಒಳಪಟ್ಟಿತ್ತು. ಆದರೆ ಕೇಂದ್ರಾಡಳಿತದಲ್ಲಿ ಅದು ಕೇಂದ್ರ ಸರ್ಕಾರ ನೇಮಕ ಮಾಡಿರುವ ರಾಜ್ಯಪಾಲರ ಕೈಗೆ ವರ್ಗವಾಗಿದೆ.
ಮುಖ್ಯಮಂತ್ರಿ ಓಮರ್ ಅಬ್ದುಲ್ಲ ಅವರಿಗೆ ಕಾನೂನು-ಸುವ್ಯವಸ್ಥೆ ಮತ್ತು ಭದ್ರತಾ ಏರ್ಪಾಡುಗಳ ಮೇಲೆ ಕಿಂಚಿತ್ತೂ ಅಧಿಕಾರವಿಲ್ಲ. ರಾಜ್ಯದ ಬೇಹುಗಾರಿಕೆ ಏಜೆನ್ಸಿಗಳು ಕೂಡ ರಾಜ್ಯಪಾಲ ಮನೋಜ್ ಸಿನ್ಹ ಅವರಿಗೆ ವರದಿ ಮಾಡಿಕೊಳ್ಳುತ್ತವೆ. 2019ರಿಂದ ಜಮ್ಮು-ಕಾಶ್ಮೀರವನ್ನು ನೇರವಾಗಿ ದೆಹಲಿಯೇ ಆಳುತ್ತಿದೆ. ನಿರ್ವಿವಾದದ ಮಾತಿದು.
ಕೇಂದ್ರ ಗೃಹಸಚಿವ ಅಮಿತ್ ಶಾ ಕಾಲಕಾಲಕ್ಕೆ ಶ್ರೀನಗರದಲ್ಲಿ ಜಮ್ಮು-ಕಾಶ್ಮೀರ ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದ ಸಭೆಗಳನ್ನು ನಡೆಸುತ್ತ ಬಂದಿದ್ದಾರೆ. ಇವುಗಳ ಪೈಕಿ ಯಾವುದಕ್ಕೂ ಓಮರ್ ಅಬ್ದುಲ್ಲ ಅವರನ್ನು ಕರೆದಿಲ್ಲ. ಶ್ರೀನಗರದ ವಿಮಾನನಿಲ್ದಾಣದಲ್ಲಿ ಶಾ ಅವರನ್ನು ಎದುರುಗೊಂಡು, ಅವರಿಗೆ ರಾಜ್ಯದ ಪರಿಸ್ಥಿತಿ ಕುರಿತ ತಮ್ಮ ತಿಳಿವಳಿಕೆಯನ್ನು ನೀಡಿ ವಾಪಸಾಗುತ್ತಿದ್ದರು ಅಬ್ದುಲ್ಲ. ಮೊನ್ನೆ ಮಂಗಳವಾರ ಸಂಜೆಯೂ ಅಷ್ಟೇ.
ಬೈಸರನ್ ಹುಲ್ಲುಗಾವಲಿನ ಚರಿತ್ರೆ ರಕ್ತಸಿಕ್ತ. ಸುತ್ತಮುತ್ತ ದಟ್ಟಕಾಡಿನ ಪರ್ವತ ಕಣಿವೆಗಳು. ಪಹಲ್ಗಾಮ್ ನಿಂದ ಐದು ಐದಾರು ಕಿ.ಮೀ.ದೂರದಲ್ಲಿದೆ. ಮೋಟರುಗಾಡಿ ಚಲಿಸುವಂತಿಲ್ಲ. ಕಾಲ್ನಡಿಗೆ ಅಥವಾ ಕುದುರೆ ಸವಾರಿಯೇ ಗತಿ. ಮೋಟರು ಗಾಡಿಗಳು ಸಂಚರಿಸಿದ ಕಾಲವೊಂದಿತ್ತು. ಪ್ರವಾಸಿಗರನ್ನು ಟ್ಯಾಕ್ಸಿಗಳು ಕರೆದೊಯ್ದರೆ, ತಮ್ಮ ಹೊಟ್ಟೆಯ ಮೇಲೆ ಹೊಡೆದಂತೆಂದು ಸ್ಥಳೀಯ ಘೋಡಾವಾಲಾಗಳು ಪ್ರತಿಭಟಿಸಿದ್ದರು. ಟ್ಯಾಕ್ಸಿ ಸಂಚಾರ ಬಂದ್ ಆಗಿತ್ತು. ಬೈಸರನ್ ನಿಂದ ಅಮರನಾಥ ಧಾಮಕ್ಕೆ 50 ಕಿ.ಮೀ.ದೂರ.ಮೊನ್ನೆ ಬೈಸರನ್ ಹುಲ್ಲುಗಾವಲಿನ ಮೇಲೆ ಉಗ್ರರ ದಾಳಿ ಜರುಗಿದಾಗ ಆ ವಿಶಾಲ ಮೈದಾನದಲ್ಲಿ 500-600 ಮಂದಿ ಪ್ರವಾಸಿಗರಿದ್ದರು ಎನ್ನಲಾಗಿದೆ. ಅಲ್ಲಿ ಸುತ್ತಮುತ್ತ ಎಲ್ಲಿಯಾದರೂ ಭದ್ರತಾ ಪಡೆಗಳು ಇದ್ದಿದ್ದ ಪಕ್ಷದಲ್ಲಿ ಸಾವು ನೋವಿನ ಸಂಖ್ಯೆ 26ಕ್ಕೆ ಏರುತ್ತಿರಲಿಲ್ಲ ಎನ್ನುತ್ತಾರೆ ಪ್ರತ್ಯಕ್ಷ ದರ್ಶಿಗಳು.
ಪಹಲ್ಗಾಮ್ ನಲ್ಲಿ ಈ ಹಿಂದೆ ಉಗ್ರರ ದಾಳಿ ನಡೆದಿತ್ತು. ಅದು 2000 ಇಸವಿಯ ಆಗಸ್ಟ್ ತಿಂಗಳು. 32 ನಾಗರಿಕರ ಹತ್ಯೆಯಾಗಿತ್ತು. ಇವರು ಪ್ರವಾಸಿಗರಾಗಿರದೆ ಅಮರನಾಥ ಯಾತ್ರಿಗಳಾಗಿದ್ದರು. ಅಂದು ಉಗ್ರರು ಕೊಂದ 32 ಮಂದಿಯಲ್ಲಿ ಏಳು ಮಂದಿ ಸ್ಥಳೀಯ ಮುಸಲ್ಮಾನರೂ ಇದ್ದರು.

2001ರಲ್ಲಿ ಪುನಃ ಇದೇ ಪಹಲ್ಗಾಮ್ ನಲ್ಲಿ ಉಗ್ರರು 24 ಮಂದಿ ಅಮರನಾಥ ತೀರ್ಥಯಾತ್ರಿಗಳನ್ನು ಕೊಂದಿದ್ದರು. ಪ್ರವಾಸಿಗರ ಮೇಲೆ ಉಗ್ರರ ದಾಳಿಯನ್ನು ಕಾಶ್ಮೀರಿಗಳು ಪ್ರತಿಭಟಿಸಿರುವುದು, ಬಂದ್ ಆಚರಿಸಿರುವುದು ಇದೇ ಮೊದಲು. ಈ ಮೊದಲಿನ ಪ್ರತಿಭಟನೆಗಳು ಉಗ್ರರು ದಾಳಿ ಮಾಡಿದ ಪ್ರದೇಶಗಳಿಗೆ ಸೀಮಿತವಾಗಿ ಸ್ಥಳೀಯವಾಗಿರುತ್ತಿದ್ದವು.
ನಿರುದ್ಯೋಗ ಮುತ್ತಿ ಕಾಡಿರುವ ಕಾಶ್ಮೀರ ಕಣಿವೆಯ ನಿವಾಸಿಗಳ ಪಾಲಿಗೆ ಪ್ರವಾಸೋದ್ಯಮ ಏಕೈಕ ದೊಡ್ಡ ಆದಾಯ ಮೂಲ. ಕಳೆದ ವರ್ಷ 2.3 ಕೋಟಿ ಪ್ರವಾಸಿಗರು ಕಾಶ್ಮೀರಕ್ಕೆ ಬಂದಿದ್ದರು. ಕಣಿವೆಯ 70 ಸಾವಿರ ಮಂದಿಗೆ ಉದ್ಯೋಗ ಒದಗಿಸಿದ್ದು ಪ್ರವಾಸೋದ್ಯಮವೇ. ಟ್ಯಾಕ್ಸಿ ಚಾಲಕರು, ಶಾಲು ವ್ಯಾಪಾರಿಗಳು, ಉಪಾಹಾರ ಮಂದಿರಗಳು, ಹೊಟೆಲು ಸಿಬ್ಬಂದಿ, ಚಾರಣ ಮಾರ್ಗದರ್ಶಕರು…ಹೀಗೆ ಬೆಳೆಯುತ್ತಲೇ ಹೋಗುತ್ತದೆ ಪಟ್ಟಿ. ಕಳೆದ ವರ್ಷ ಎಂಟು ಸಾವಿರ ಕೋಟಿ ರುಪಾಯಿಯ ವಹಿವಾಟು ನಡೆಸಿತ್ತು ಇಲ್ಲಿನ ಪ್ರವಾಸೋದ್ಯಮ.
ಯಶಸ್ವೀ ಪ್ರವಾಸೋದ್ಯಮವು ಕಾಶ್ಮೀರಿಗಳ ಸಂಬಂಧವನ್ನು ಭಾರತದೊಂದಿಗೆ ಬೆಸೆಯುತ್ತದೆ ಮತ್ತು ಅದೇ ಕಾಲಕ್ಕೆ ಅವರ ಬದುಕಿನಲ್ಲಿ ಪಾಕಿಸ್ತಾನವನ್ನು ಹೆಚ್ಚು ಹೆಚ್ಚು ಅಪ್ರಸ್ತುತ ಆಗಿಸುತ್ತದೆ. ಕಳೆದ ವರ್ಷ ಪೀರ್ ಪಂಜಾಲ್ ಪರ್ವತಶ್ರೇಣಿಯ ಮೇಲೆ ದಾಳಿ ನಡೆಸಲು ಪ್ರಯತ್ನಿಸಿ ವಿಫಲವಾಗಿದ್ದ ಪಾಕಿಸ್ತಾನಿ ಸೇನೆ, ಕಠುವಾದತ್ತ ಗುರಿ ತಿರುಗಿಸಿತ್ತು. ಆದರೆ ಅಲ್ಲಿಯೂ ವಿಫಲವಾಗಿತ್ತು.
ಕಾಶ್ಮೀರ ಕಣಿವೆಯ ತಾಣಗಳ ಕದ ತಟ್ಟಿದ್ದರು ಉತ್ಸಾಹೀ ಪ್ರವಾಸಿಗರು. ಈ ಹಣಕಾಸು ಚಟುವಟಿಕೆ ಸ್ಥಳೀಯರು ಹುಮ್ಮಸ್ಸನ್ನು ಹೆಚ್ಚಿಸಿತ್ತು, ಜೀವನೋತ್ಸಾಹವನ್ನು ಗರಿಗೆದರಿಸಿತ್ತು. ಕಣಿವೆಯಲ್ಲಿ ಪಾಕಿಸ್ತಾನದ ಮಾರ್ದನಿ ಕ್ಷೀಣಿಸಿತ್ತು. ಹೀಗಾಗಿ ಪ್ರವಾಸೋದ್ಯಮಕ್ಕೆ ಮರಣಾಂತಿಕ ಹೊಡೆತ ನೀಡುವುದೇ ಉಗ್ರರು ಮತ್ತು ಅವರ ಹಿಂದಿನ ಅದೃಶ್ಯ ಶಕ್ತಿಗಳ ಗುರಿಯಾಗಿತ್ತು. ಕಾಶ್ಮೀರಿಗಳ ಮನಃಪಟಲದಲ್ಲಿ ಪಾಕಿಸ್ತಾನದ ಪಾತ್ರ ಅಳಿಸಿ ಹೋಗದಂತೆ ಕಾಯುವುದೇ ಅದರ ಪರಮ ಗಮ್ಯ.
ಕಾಶ್ಮೀರ ಕಣಿವೆಯ ಸಂಬಂಧವನ್ನು ಭಾರತದಿಂದ ಆರ್ಥಿಕವಾಗಿ ಮಾನಸಿಕವಾಗಿ ಕಡಿದು ಹಾಕಿ ನಿರುದ್ಯೋಗ ಅರಾಜಕತೆಯನ್ನು ಹಬ್ಬಿಸುವುದೇ ಪಾಕಿಸ್ತಾನಿ ಸೇನೆಯ ಕಾರ್ಯಸೂಚಿ.
1947ರಲ್ಲಿ ಬ್ರಿಟಿಷರು ಭಾರತದಿಂದ ತೊಲಗಿದ ಹೊತ್ತಿನಲ್ಲಿ ಮುಸ್ಲಿಮ್ ಬಾಹುಳ್ಯದ ಕಾಶ್ಮೀರ ಸ್ವಾಭಾವಿಕವಾಗಿಯೇ ತನಗೆ ಸೇರಬೇಕೆಂದು ಪಾಕಿಸ್ತಾನ ಬಯಸಿತ್ತು. ರಾಜಾ ಹರಿಸಿಂಗ್ ಭಾರತವೇ, ಪಾಕಿಸ್ತಾನವೇ ಅಥವಾ ಸ್ವತಂತ್ರ ರಾಜ್ಯವೇ ಎಂದು ತೀರ್ಮಾನಿಸುವಲ್ಲಿ ತಡ ಮಾಡಿದ. ಪಾಕಿಸ್ತಾನ ಕಾಶ್ಮೀರಿಗಳ ಮೇಲೆ ದಾಳಿ ನಡೆಸಿ ಇನ್ನಿಲ್ಲದ ಕೊಲೆ ಸುಲಿಗೆ ದೌರ್ಜನ್ಯ ಅತ್ಯಾಚಾರ ನಡೆಸಿತ್ತು.
ಮುಸ್ಲಿಮ್ ಬಹುಸಂಖ್ಯಾತ ಕಾಶ್ಮೀರದ ಹಿಂದೂ ರಾಜ ಹರಿಸಿಂಗ್ 1947ರಲ್ಲಿ ಭಾರತದೊಂದಿಗೆ ಸೇರುವ ಒಪ್ಪಂದಕ್ಕೆ ಸಹಿ ಹಾಕಿದ್ದ. ಈ ಒಪ್ಪಂದದ ಭಾಗವಾಗಿ ನೀಡಲಾಗಿದ್ದ ವಿಶೇಷ ಸ್ಥಾನಮಾನವೇ 370ನೆಯ ಪರಿಚ್ಛೇದ.
ವಿಲೀನ ಒಪ್ಪಂದ 1949ರ ಅಕ್ಟೋಬರ್ ನಲ್ಲಿ ಜಾರಿಗೆ ಬಂದಿತ್ತು. ಈ ಒಪ್ಪಂದದ ಪ್ರಕಾರ ಆಂತರಿಕ ಆಡಳಿತದಲ್ಲಿ ಸ್ವಾಯತ್ತ ಅಧಿಕಾರದ ಜೊತೆಗೆ ತನ್ನದೇ ಸಂವಿಧಾನ, ಧ್ವಜ ಹಾಗೂ ಅಪರಾಧ ಸಂಹಿತೆ ಹೊಂದಲು ಕಾಶ್ಮೀರಕ್ಕೆ ಅವಕಾಶ ನೀಡಿತ್ತು ಭಾರತ. ಹಣಕಾಸು, ರಕ್ಷಣೆ, ವಿದೇಶಾಂಗ ವ್ಯವಹಾರಗಳು ಹಾಗೂ ಸಂಪರ್ಕದ ವಿನಾ ಉಳಿದೆಲ್ಲ ವಿಷಯಗಳಲ್ಲಿ ತನ್ನದೇ ಕಾನೂನುಗಳನ್ನು ರಚಿಸಿಕೊಳ್ಳುವ ಸ್ವಾತಂತ್ರ್ಯವನ್ನು ಕಲ್ಪಿಸಿತ್ತು. ಹೊರರಾಜ್ಯಗಳವರು ಅಲ್ಲಿ ಆಸ್ತಿಪಾಸ್ತಿಯನ್ನು ಖರೀದಿಸುವಂತಿರಲಿಲ್ಲ. 1953ರಲ್ಲಿ ಕಾಶ್ಮೀರದ ಪ್ರಧಾನಮಂತ್ರಿ ಶೇಖ್ ಅಬ್ದುಲ್ಲಾ ಅವರನ್ನು ನೆಹರೂ ಸರ್ಕಾರ ಬಂಧಿಸಿತ್ತು. ಆನಂತರ ಕಾಶ್ಮೀರದ ಪ್ರಧಾನಮಂತ್ರಿ ಹುದ್ದೆಯನ್ನು ರದ್ದುಗೊಳಿಸಿತ್ತು.
ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ 370ನೆಯ ಕಲಮಿನ ಪ್ರಕಾರ ನೀಡಲಾಗಿರುವ ವಿಶೇಷ ಸ್ಥಾನಮಾನ ರದ್ದಾಗಬೇಕು ಎಂಬ ತಮ್ಮ ಮೂಲ ಕಾರ್ಯಸೂಚಿಯ ದಾಳವನ್ನು ಬಿಜೆಪಿ-ಆರೆಸ್ಸೆಸ್ 2019ರಲ್ಲಿ ಕಡೆಗೂ ಉರುಳಿಸಿದ್ದವು. ಈ ಕ್ರಮಕ್ಕೆ ಮುನ್ನವೇ ಅಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು.

ತನಗೆ ಸೇರಬೇಕಿದ್ದ ಕಾಶ್ಮೀರವನ್ನು ಭಾರತ ಕಿತ್ತುಕೊಂಡಿತೆಂಬ ಕಿಚ್ಚನ್ನು ಹೊಟ್ಟೆಯಲ್ಲಿ ತುಂಬಿಕೊಂಡಿರುವ ಪಾಕಿಸ್ತಾನಿ ಸೇನೆಯನ್ನು ಮತ್ತಷ್ಟು ಕೆರಳಿಸಿ ಹತಾಶೆಗೆ ತಳ್ಳಿದ ಕ್ರಮವನ್ನು ಇಂದಿರಾಗಾಂಧಿ ಜರುಗಿಸಿದ್ದರು. ಭಾರತದ ಬಹುಮುಖ್ಯ ನೆರೆಹೊರೆ ಬಾಂಗ್ಲಾದೇಶ. ಸ್ವಾತಂತ್ರ್ಯಪೂರ್ವ ಭಾರತದ ಪೂರ್ವ ಬಂಗಾಳ. ದೇಶವಿಭಜನೆಯ ಹೊತ್ತಿನಲ್ಲಿ ಪಾಕಿಸ್ತಾನದ ಪಾಲಾಯಿತು. ಪೂರ್ವ ಪಾಕಿಸ್ತಾನ ಎನಿಸಿಕೊಂಡಿತು. ಇಲ್ಲಿನ ಶೇ.99ರಷ್ಟು ಜನಸಂಖ್ಯೆ ಬಂಗಾಳಿ ಭಾಷಿಕರು. 1952ರಲ್ಲಿ ಆರಂಭವಾದ ಬಂಗಾಳಿ ಭಾಷಾ ಆಂದೋಲನ 1971ರಲ್ಲಿ ವಿಮೋಚನಾ ಹೋರಾಟದ ರೂಪ ತಳೆಯಿತು.
ಇದನ್ನೂ ಓದಿ ಖಂಡನೆ, ಸಭೆ, ಬಂದ್, ಪ್ರತಿಭಟನೆ – ಇವು ಪಹಲ್ಗಾಮ್ ದಾಳಿಗೆ ರಾಜಕೀಯ ಪಕ್ಷಗಳ ಪ್ರತಿಕ್ರಿಯೆ; ಅಸಹ್ಯ ಮೆರೆದ ಬಿಜೆಪಿ
ಪಶ್ಚಿಮ ಪಾಕಿಸ್ತಾನವು ಬಂಗಾಳಿ ಭಾಷಿಕರ ಪೂರ್ವ ಪಾಕಿಸ್ತಾನದ ಮೇಲೆ ಬಲವಂತವಾಗಿ ಉರ್ದುವನ್ನು ರಾಷ್ಟ್ರೀಯ ಭಾಷೆ ಎಂದು ಹೇರಿತ್ತು. ತನ್ನ ತಾಯ್ನುಡಿ ಬಂಗಾಳಿಯ ಮೇಲೆ ನಡೆದಿದ್ದ ಈ ಹಲ್ಲೆಯನ್ನು ಪ್ರತಿಭಟಿಸಿ ಪೂರ್ವ ಪಾಕಿಸ್ತಾನ ಇಡಿಯಾಗಿ ಭುಗಿಲೆದ್ದಿತ್ತು.
ಉರ್ದುವಿನ ಬಲವಂತ ಹೇರಿಕೆ ವಿರುದ್ಧ ಸಿಡಿದೆದ್ದ ಆಂದೋಲನ ಅಂತಿಮವಾಗಿ ಪ್ರತ್ಯೇಕ ರಾಷ್ಟ್ರೀಯತೆಯ ಆಂದೋಲನವಾಗಿ ಪರಿಣಮಿಸಿತು. ಉರ್ದು ಹೇರಿಕೆ ವಿರುದ್ಧ ನಡೆದ ವಿದ್ಯಾರ್ಥಿ ಆಂದೋಲನದ ನೇತೃತ್ವ ವಹಿಸಿದ್ದ ಷೇಕ್ ಮುಜಿಬುರ್ ರೆಹಮಾನ್ ಮುಂದಿನ ದಿನಗಳಲ್ಲಿ ಪ್ರತ್ಯೇಕ ರಾಷ್ಟ್ರಕ್ಕಾಗಿ ನಡೆದ ಹೋರಾಟದ ನಾಯಕತ್ವವನ್ನೂ ವಹಿಸಿದ್ದರು. ಪೂರ್ವ ಪಾಕಿಸ್ತಾನವು ಸ್ವತಂತ್ರ ಬಾಂಗ್ಲಾ ದೇಶವಾಗಿ ಉದಯಿಸಿತು.
ಭಾರತದ ಅಂದಿನ ಇಂದಿರಾಗಾಂಧಿ ಸರ್ಕಾರ ಈ ಹೋರಾಟವನ್ನು ಬೆಂಬಲಿಸಿ ಪಾಕಿಸ್ತಾನದೊಂದಿಗೆ ಯುದ್ಧ ನಡೆಸಿ ಗೆದ್ದಿತ್ತು. ಭಯೋತ್ಪಾದನೆಯ ಕೃತ್ಯಗಳನ್ನು ಚರಿತ್ರೆಯ ಈ ಅಂಶಗಳ ಸಂದರ್ಭದಲ್ಲೂ ಇರಿಸಿ ನೋಡಬೇಕಾಗುತ್ತದೆ.