ದೇಶದ ಬರಪೀಡಿತ ಪ್ರದೇಶಗಳಲ್ಲಿ ಒಂದಾಗಿರುವ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯೂ ಒಂದು. ಅಲ್ಲಿನ ಅನೇಕ ರೈತ ಕುಟುಂಬಗಳು ಕೃಷಿ ನಷ್ಟದಿಂದ ಹತಾಶರಾಗಿದ್ದಾರೆ. ಕೃಷಿಯಿಂದ ವಿಮುಖರಾಗಿದ್ದಾರೆ. ಆದರೆ, ಅಂತಹ ಬರಪೀಡಿತ ಪ್ರದೇಶದಲ್ಲಿ ವಿಧವೆಯರು, ಪತಿಯಿಂದ ದೂರವಾದ ಮಹಿಳೆಯರು ಮತ್ತು ಒಂಟಿ ತಾಯಂದಿರು ‘REDS ಸ್ವಯಂಸೇವಾ ಸಂಸ್ಥೆ’ಯ ನೇತೃತ್ವದಲ್ಲಿ ಸಾಮೂಹಿಕ ನೈಸರ್ಗಿಕ ಕೃಷಿಯಲ್ಲಿ ತೊಡಗಿದ್ದಾರೆ. ಉತ್ತಮ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಮಾತ್ರವಲ್ಲದೆ, ಘನತೆ ಮತ್ತು ಆರ್ಥಿಕ ಸ್ವಾತಂತ್ರ್ಯದ ಬದುಕು ಕಟ್ಟಿಕೊಂಡಿದ್ದಾರೆ. ಕೃಷಿಯಲ್ಲಿ ಮಾದರಿಯಾಗಿದ್ದಾರೆ.
ತಮ್ಮ ಗಂಡಂದಿರ ಆತ್ಮಹತ್ಯೆ ಅಥವಾ ಪತಿಯರು ಊರು ತೊರೆದ ಕಾರಣದಿಂದಾಗಿ ಏಕಾಂಗಿಯಾಗಿರುವ ಮಹಿಳೆಯರು, ಈಗ ಶಕ್ತಿ ಮತ್ತು ಸ್ವಾವಲಂಬನೆಯ ಸಂಕೇತಗಳಾಗಿ ಹೊರಹೊಮ್ಮುತ್ತಿದ್ದಾರೆ. ರಾಸಾಯನಿಕಗಳು ಅಥವಾ ಕೀಟನಾಶಕಗಳನ್ನು ಬಳಸದೆ ಅವರು ವಿವಿಧ ತರಕಾರಿಗಳು, ಹಣ್ಣುಗಳು, ಸೊಪ್ಪುಗಳು ಹಾಗೂ ರಾಗಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸ್ಥಳೀಯರಿಗೆ ಉತ್ಪನ್ನಗಳನ್ನು ಒದಗಿಸುತ್ತಾರೆ ಮತ್ತು ಸುಸ್ಥಿರ ಜೀವನೋಪಾಯ ಕಟ್ಟಿಕೊಂಡಿದ್ದಾರೆ.
ವಿಧವೆಯರು ಅಥವಾ ಒಬ್ಬಂಟಿ ಮಹಿಳೆಯರ ಜೀವನ ಪರಿಸ್ಥಿತಿಗಳನ್ನು ಗಮನಿಸಿದ REDS ಸಂಸ್ಥಾಪಕಿ ಭಾನುಜಾ ಅವರು, ಅಂತಹ ಮಹಿಳೆಯರಿಗಾಗಿ ಕೃಷಿ ರಂಗದಲ್ಲಿ ವೇದಿಕೆಯನ್ನು ರಚಿಸಿದ್ದಾರೆ. ಅನಂತಪುರ ಗ್ರಾಮೀಣ ಮಂಡಲದ ಕುರುಗುಂಟದಲ್ಲಿ, REDS ಸಂಸ್ಥೆಯು ಎಂಟು ಎಕರೆ ಕೃಷಿ ಭೂಮಿಯನ್ನು ಗುತ್ತಿಗೆಗೆ ಪಡೆದಿದೆ. ಈ ಭೂಮಿಯಲ್ಲಿ ‘ಮನ ಭೂಮಿ – ಮಹಿಳಾ ಸಾಮೂಹಿಕ ನೈಸರ್ಗಿಕ ಕೃಷಿ’ ಎಂಬ ಬ್ಯಾನರ್ ಅಡಿಯಲ್ಲಿ, ಸಿ ಅಲಿವೇಲಮ್ಮ, ಚೌಡಮ್ಮ, ಲಕ್ಷ್ಮಿದೇವಿ, ಕೆ ರತ್ನಮ್ಮ, ಗಂಗಮ್ಮ ಹಾಗೂ ಸಿ ಪೆದ್ದಕ್ಕ ಮುಂತಾದ ಒಬ್ಬಂಟಿ ಮಹಿಳೆಯರು, ವಿಧವೆಯರು ಕೃಷಿ ಮಾಡುತ್ತಿದ್ದಾರೆ. ಅವರಿಗೆ REDS ಸಂಸ್ಥೆಯು ಬೀಜಗಳು ಮತ್ತು ಅಗತ್ಯ ವಸ್ತುಗಳನ್ನು ಪೂರೈಸುತ್ತಿದೆ.
ಈ ವರದಿ ಓದಿದ್ದೀರಾ?: ‘ಸಂಸತ್ತು ಸರ್ವೋಚ್ಚ’ ಎಂದಿದ್ದಾರೆ ಧನಕರ್; ನಿಜಕ್ಕೂ ಯಾವುದು ಶ್ರೇಷ್ಠ ಮತ್ತು ಸರ್ವೋಚ್ಚ?
ಜಿಲ್ಲೆಯಲ್ಲಿ ಕೃಷಿ ಮಾಡುತ್ತಿರುವ ಪ್ರಿತಿಯೊಬ್ಬ ಒಬ್ಬಂಟಿ ಮಹಿಳೆಗೂ ವಿಭಿನ್ನ ಕಥೆಗಳಿವೆ. ಆದರೆ, ಬಡತನ ಮತ್ತು ಪರಾವಲಂಬನೆಯ ವಿರುದ್ಧದ ಹೋರಾಟದಲ್ಲಿ ಅವರು ಒಗ್ಗಟ್ಟಿನಿಂದ ದುಡಿಯುತ್ತಿದ್ದಾರೆ. ಅವರು ವಾಟ್ಸ್‌ಆ್ಯಪ್ ಗ್ರೂಪ್‌ವೊಂದನ್ನು ರಚಿಸಿಕೊಂಡಿದ್ದು, ಅದರ ಮೂಲಕ ಅನಂತಪುರ ನಗರ ಖರೀದಿದಾರರೊಂದಿಗೆ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಗುಂಪಿನಲ್ಲಿ ದೈನಂದಿನ ಕೃಷಿ ಉತ್ಪನ್ನಗಳ ಬೇಡಿಕೆ-ಪೂರೈಕೆಯ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ಅವರ ರಾಸಾಯನಿಕ ಮುಕ್ತ, ಹೊಸದಾಗಿ ಕೊಯ್ಲು ಮಾಡಿದ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ.
ಆರಂಭದಲ್ಲಿ REDS ಸಂಸ್ಥೆಯು ಮಹಿಳೆಯರನ್ನು ರಾಗಿ ಬೆಳೆಯುವುದರಲ್ಲಿ ತೊಡಗಿಸಿತು. ಬಳಿಕ, ಕಡಿಮೆ ವೆಚ್ಚದ, ಹವಾಮಾನ ವೈಪರೀತ್ಯದ ನಡುವೆಯೂ ಬೆಳೆಯಬಲ್ಲ ಹಾಗೂ ಶೀಘ್ರ ಆದಾಯದ ತರಕಾರಿಗಳು ಮತ್ತು ಹಣ್ಣುಗಳ ಬೆಳೆಗಳನ್ನು ಪರಿಚಯಿಸಿತು. ಈಗ ನಾನಾ ರೀತಿಯ ಬೆಳೆಗಳನ್ನು ಮಹಿಳೆಯರು ಬೆಳೆಯುತ್ತಿದ್ದಾರೆ.
ಕೃಪೆ: ಟಿಎನ್‌ಐಇ