ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಪತ್ನಿಯನ್ನು ಕೊರೆದೊಯ್ದು, ಸಂಗಮ ನಗರದಲ್ಲಿ ಆಕೆಯನ್ನು ಕೊಲೆ ಮಾಡಿದ್ದ ದುರುಳ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ದೆಹಲಿ ಅಶೋಕ್ ಕುಮಾರ್ ಎಂದು ಹೆಸರಿಸಲಾಗಿದೆ. ಆತ ತನ್ನ ಪತ್ನಿಯನ್ನು ಕೊಲೆಗೈದು, ನಾಪತ್ತೆಯಾಗಿದ್ದಾರೆ ಎಂದು ಸುಳ್ಳಿನ ಕತೆ ಕಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ತ್ರಿಲೋಕಪುರಿ ಪ್ರದೇಶದಲ್ಲಿ ವಾಸವಾಗಿದ್ದ ಅಶೋಕ್ ಕುಮಾರ್, ವಿವಾಹೇತರ ಸಂಬಂಧ ಹೊಂದಿದ್ದ. ಆತನ ವಿವಾಹೇತರ ಸಂಬಂಧವನ್ನು ಪ್ರಶ್ನಿಸಿದ್ದಕ್ಕಾಗಿ, ತನ್ನ ಪತ್ನಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಕೊಲೆ ಮಾಡಿ, ಪ್ರಕರಣದಿಂದ ಪಾರಾಗಲು ಕುಂಭಮೇಳವು ಉತ್ತಮ ಅವಕಾಶವೆಂದು ಭಾವಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಮಂಗಳವಾರ ತನ್ನ ಪತ್ನಿಯನ್ನು ಪ್ರಯಾಗ್‌ರಾಜ್ ನಗರಕ್ಕೆ ಕರೆದೊಯ್ದಿದ್ದ ಆರೋಪಿ ಅಶೋಕ್ ಕುಮಾರ್, ಆಕೆಯನ್ನು ಕೊಲೆ ಮಾಡಿದ್ದಾನೆ. ಬಳಿಕ, ಪೊಲೀಸ್ ಠಾಣೆಗೆ ಬಂದು ತನ್ನ ಪತ್ನಿ ನಾಪತ್ತೆಯಾಗಿದ್ದಾರೆ ಎಂದು ದೂರ ದಾಖಲಿಸಿದ್ದ. ಆ ನಂತರ, ತಲೆ ಮರೆಸಿಕೊಂಡಿದ್ದ ಎಂದು ಡಿಸಿಪಿ ಅಶೋಕ್ ಭಾರ್ತಿ ಹೇಳಿದ್ದಾರೆ.
दिल्ली से महाकुंभ लाकर पत्नी को मार डाला: परिवार से कहा- भीड़ में खो गई; शक न हो इसलिए संगम पर वीडियो बनाए #MahaKumbh2025 #delhi #Prayagraj https://t.co/XOdri1VELF pic.twitter.com/Qcq5HgJSsU
— Dainik Bhaskar (@DainikBhaskar) February 22, 2025
ಆದಾಗ್ಯೂ, ಪ್ರಯಾಗ್‌ರಾಜ್ ನಗರದ ಅಜಾತ್‌ನಗರದಲ್ಲಿ ಬಾಡಿಗೆ ಕೊಠಡಿಯೊಂದರಲ್ಲಿ ಮಹಿಳೆಯ ಮೃತದೇಹವೊಂದು ಪತ್ತೆಯಾಗಿತ್ತು. ಮೃತ ಮಹಿಳೆಯ ಗುರುತನ್ನು ಪತ್ತೆ ಮಾಡಿದಾಗ, ಆಕೆಯೇ ಅಶೋಕ್‌ನ ಪತ್ನಿ ಎಂಬುದನ್ನು ಪೊಲೀಸರು ಕಂಡುಕೊಂಡಿದ್ದಾರೆ. ಬಳಿಕ, ಆಶೋಕ್‌ನನ್ನು ಬಂಧಿಸಿ, ವಿಚಾರಣೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ, ತಾನೇ ಆಕೆಯ ಕತ್ತು ಸೀಳ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.