ಹಮ್‌ದರ್ದ್ ಸಂಸ್ಥೆಯ ಶರಬತ್ ಉತ್ಪನ್ನದ ಬಗ್ಗೆ ಆಕ್ಷೇಪಾರ್ಹ ಮತ್ತು ನಿಂದನಾತ್ಮಕ ಹೇಳಿಕೆ ನೀಡಿದ್ದ ಸ್ವಯಂಘೋಷಿತ ಯೋಗಗುರು ಬಾಬಾ ರಾಮ್‌ದೇವ್ ಅವರು ನ್ಯಾಯಾಲಯದ ಎದುರು ಕ್ಷಮೆಯಾಚಿಸಿದ್ದಾರೆ. ಮತ್ತೆ ಎಂದಿಗೂ ಈ ರೀತಿ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ತಮ್ಮ ಪತಂಜಲಿ ಸಂಸ್ಥೆಯ ಶರಬತ್ ಉತ್ಪನ್ನದ ಬಗ್ಗೆ ಪ್ರಚಾರ ಮಾಡುತ್ತಿದ್ದ ಬಾಬಾ ರಾಮ್‌ದೇವ್, ಹಮ್‌ದರ್ದ್ ಸಂಸ್ಥೆಯ ಶರಬತ್ ಉತ್ಪನ್ನವನ್ನು ‘ಶರಬತ್ ಜಿಹಾದ್’ ಎಂದು ಕರೆದಿದ್ದರು. ಅಲ್ಲದೆ, ಹಮ್‌ದರ್ದ್ ರೂಹ್ ಅಫ್ಜಾದಿಂದ ಸಂಪಾದಿಸಿದ ಹಣದಲ್ಲಿ ಮದರಸಾ ಮತ್ತು ಮಸೀದಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಅವರ ಹೇಳಿಕೆಯ ವಿರುದ್ಧ ಹಮ್‌ದರ್ದ್ ಸಂಸ್ಥೆ ದೆಹಲಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿತ್ತು. ಇತ್ತೀಚೆಗೆ, ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು ರಾಮ್‌ದೇವ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. “ಬಾಬಾ ರಾಮ್‌ದೇವ್ ಅವರ ಹೇಳಿಕೆಯು ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತ ತಂದಿದೆ. ಅವರು ನೀಡಿರುವ ಹೇಳಿಕೆ ಅಸಮರ್ಥನೀಯವಾದದ್ದು. ಇಂತಹ ಹೇಳಕೆಗಳ ಬಗ್ಗೆ ರಾಮ್‌ದೇವ್ ಎಚ್ಚವಹಿಸಬೇಕು. ಇಲ್ಲದಿದ್ದಲ್ಲಿ, ಕಠಿಣವಾದ ಆದೇಶ ನೀಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿತ್ತು.
ಇದೀಗ, ರಾಮ್‌ದೇವ್ ಅವರು ನ್ಯಾಯಾಲಯದ ಎದುರು ಕ್ಷಮೆಯಾಚಿಸಿದ್ದಾರೆ. ‘ರಾಮ್‌ದೇವ್ ಅವರಿಗೆ ನ್ಯಾಯಾಲಯದ ಬಗ್ಗೆ ಅಪಾರ ಗೌರವವಿದೆ. ನ್ಯಾಯಾಲಯದ ನಿರ್ದೇಶನಗಳನ್ನು ರಾಮ್‌ದೇವ್ ಪಾಲಿಸುತ್ತಾರೆ’ ಎಂದು ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.