ನಿವೃತ್ತಿಯ ನಂತರ ಯಾವುದೇ ಸರ್ಕಾರಿ ಹುದ್ದೆಯನ್ನು ಸ್ವೀಕರಿಸುವುದಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಶುಕ್ರವಾರ ಹೇಳಿದ್ದಾರೆ. ಈ ವರ್ಷದ ನವೆಂಬರ್‌ನಲ್ಲಿ ಗವಾಯಿ ನಿವೃತ್ತರಾಗಲಿದ್ದಾರೆ.
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ತಮ್ಮ ಹುಟ್ಟೂರು ದಾರಾಪುರದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಸಿಜೆಐ ನಿವೃತ್ತಿ ಬಳಿಕ ಅಧಿಕ ಸಮಯ ಮನೆಯಲ್ಲೇ ಕಳೆಯುವುದಾಗಿ ಹೇಳಿದ್ದಾರೆ. ಕೆಲವು ನಿವೃತ್ತ ನ್ಯಾಯಾಧೀಶರು ನಿವೃತ್ತಿ ಬೆನ್ನಲ್ಲೇ ಸರ್ಕಾರಿ ಹುದ್ದೆಯನ್ನು ಸ್ವೀಕರಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಗವಾಯಿ ಅವರ ಹೇಳಿಕೆ ಮಹತ್ವವನ್ನು ಪಡೆದಿದೆ.
ಇದನ್ನು ಓದಿದ್ದೀರಾ? ಸಂವಿಧಾನ ‘ಭೀಮಸ್ಮೃತಿ’ ಎನ್ನುವ ಸಿಜೆಐ- ತಳಸ್ತರದ ಅಸಹಾಯಕರ ನ್ಯಾಯ ಪ್ರತಿಪಾದಕ
“ನನ್ನ ನಿವೃತ್ತಿಯ ನಂತರ ನಾನು ಯಾವುದೇ ಸರ್ಕಾರಿ ಹುದ್ದೆಯನ್ನು ಸ್ವೀಕರಿಸದೆ ಇರಲು ನಿರ್ಧರಿಸಿದ್ದೇವೆ. ನಿವೃತ್ತಿ ಬಳಿಕ ಹೆಚ್ಚು ಸಮಯ ಸಿಗುತ್ತದೆ. ಈ ವೇಳೆ ನಾನು ದಾರಾಪುರ, ಅಮರಾವತಿ ಮತ್ತು ನಾಗ್ಪುರದಲ್ಲಿ ಸಮಯ ಕಳೆಯುತ್ತೇನೆ” ಎಂದು ಸಿಜೆಐ ತಿಳಿಸಿದ್ದಾರೆ.
ಇನ್ನು ಈ ಕಾರ್ಯಕ್ರಮದಲ್ಲಿ ತಮ್ಮ ತಂದೆ, ಕೇರಳ ಮತ್ತು ಬಿಹಾರದ ಮಾಜಿ ರಾಜ್ಯಪಾಲ ಆರ್.ಎಸ್. ಗವಾಯಿ ಅವರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಹಾಗೆಯೇ ಆರ್.ಎಸ್. ಗವಾಯಿ ಅವರ ಹೆಸರಿಡಲಾದ ದಾರಾಪುರಕ್ಕೆ ಹೋಗುವ ದಾರಿಯಲ್ಲಿ ನಿರ್ಮಿಸಲಾಗುವ ಭವ್ಯ ದ್ವಾರಕ್ಕೆ ಗವಾಯಿ ಅವರು ಅಡಿಪಾಯ ಹಾಕಿದರು.
