ಛತ್ತೀಸ್‌ಗಢದ ಮಾಜಿ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಟಿ.ಎಸ್. ಸಿಂಗ್ ದೇವ್ ಅವರು ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಪಾರದರ್ಶಕತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತ ಸರ್ಕಾರದ ಬದಲಾಗಿ ಅಮೆರಿಕದ ಅಧಿಕಾರಿಗಳು ಒಪ್ಪಂದದ ವಿವರಗಳನ್ನು ಬಹಿರಂಗಪಡಿಸುತ್ತಿರುವುದು ಏಕೆ ಎಂದು ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಅಲ್ಲದೆ, ಒಪ್ಪಂದಕ್ಕೆ ಔಪಚಾರಿಕ ಅನುಮೋದನೆ ನೀಡುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಸಂಸತ್ತಿಗೆ ಸಂಪೂರ್ಣ ವಿವರಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿರುವ ಸಿಂಗ್ ದೇವ್, ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಮೆರಿಕದ ಅಧಿಕಾರಿಯೊಬ್ಬರು ಆಡಿದ ಮಾತುಗಳನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ಕಾಲೆಳೆದಿದ್ದಾರೆ. ಭಾರತದ ಆರ್ಥಿಕ ಹಾಗೂ ಕಾರ್ಯತಂತ್ರದ ನಿರ್ಧಾರಗಳ ಬಗ್ಗೆ ವಾಷಿಂಗ್ಟನ್ ನಮಗೆ ಮಾಹಿತಿ ನೀಡುತ್ತಿದೆ ಎಂದು ಅವರು ತೈಲ ಖರೀದಿ ಮತ್ತು ರಕ್ಷಣಾ ಒಪ್ಪಂದಗಳ ವಿಚಾರವನ್ನು ಪ್ರಸ್ತಾಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
”ಭಾರತಕ್ಕೆ ಸಿಹಿಸುದ್ದಿ. ನಮ್ಮ ವ್ಯಾಪಾರ ಒಪ್ಪಂದ ಬಹುತೇಕ ಅಂತಿಮಗೊಂಡಿದೆ. ಆದರೆ ಇದು ನಮಗೆ ತಿಳಿದದ್ದು ಹೇಗೆ? ನಮ್ಮ ಸಂಸತ್ತಿನಿಂದಲ್ಲ, ನಮ್ಮ ಸರ್ಕಾರದಿಂದಲೂ ಅಲ್ಲ. ಮುಂಬೈಗೆ ಭೇಟಿ ನೀಡಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯವರ ಪತ್ರಿಕಾಗೋಷ್ಠಿಯಿಂದ! ನಾವು ಯಾವ ಕಚ್ಚಾ ತೈಲವನ್ನು ಶುದ್ಧೀಕರಿಸಲು ಸಿದ್ಧರಿದ್ದೇವೆ, ನಾವು ಎಲ್ಲಿಂದ ತೈಲ ಖರೀದಿಸುತ್ತಿದ್ದೇವೆ ಎಂಬ ಬಗ್ಗೆ ವಾಷಿಂಗ್ಟನ್ ಎಷ್ಟು ಸಂತೋಷಪಟ್ಟಿದೆ ಮತ್ತು ಮುಂದಿನ ದಿನಗಳಲ್ಲಿ ನಾವು ಯಾವ ಅಮೆರಿಕನ್ ರಕ್ಷಣಾ ವ್ಯವಸ್ಥೆಗಳನ್ನು ಖರೀದಿಸಬೇಕು ಎಂಬ ಬಗ್ಗೆಯೂ ಅವರು ನಮಗೆ ಮಾಹಿತಿ ನೀಡಿದ್ದಾರೆ. ಇದು ಅತ್ಯಂತ ವಿವರವಾದ ಬ್ರೀಫಿಂಗ್. ನಮ್ಮ ಸರ್ಕಾರವೂ ಅವರಿಂದ ಪಾಠ ಕಲಿಯಬಹುದು” ಎಂದು ಸಿಂಗ್ ದೇವ್ ವ್ಯಂಗ್ಯವಾಡಿದ್ದಾರೆ.
ಈ ವ್ಯಾಪಾರ ಒಪ್ಪಂದದ ಮಾತುಕತೆಗಳಲ್ಲಿ ಪಾರದರ್ಶಕತೆಯ ತೀವ್ರ ಕೊರತೆಯಿದೆ ಎಂದು ಆರೋಪಿಸಿರುವ ಅವರು, ಇದು ನೇರವಾಗಿ ರೈತರು, ಸಣ್ಣ ಉತ್ಪಾದಕರು ಹಾಗೂ ಸಾಮಾನ್ಯ ಕುಟುಂಬಗಳ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ. ಕೇಂದ್ರ ಬಜೆಟ್ ಮಂಡನೆಗೆ ಈ ವಿದ್ಯಮಾನವನ್ನು ಹೋಲಿಸಿರುವ ಅವರು ಸರ್ಕಾರದ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದ್ದಾರೆ.
”ಇದೇ ರೀತಿ ಮುಂದುವರಿದರೆ, ಮುಂದಿನ ಬಜೆಟ್ ಅನ್ನು ಅಮೆರಿಕದ ಪತ್ರಿಕಾಗೋಷ್ಠಿಯಲ್ಲೇ ಘೋಷಿಸಬಹುದು ಮತ್ತು ನಮ್ಮ ಹಣಕಾಸು ಸಚಿವರನ್ನು ಅಲ್ಲಿಗೆ ವಿಶೇಷ ಅತಿಥಿಯಾಗಿ ಆಹ್ವಾನಿಸಬಹುದು! ಒಂದು ವ್ಯಾಪಾರ ಒಪ್ಪಂದವು ರೈತರು ಬೆಳೆದ ಬೆಳೆಗೆ ಸಿಗುವ ಬೆಲೆ, ಸಣ್ಣ ಉತ್ಪಾದಕರ ಲಾಭದ ಪ್ರಮಾಣ ಹಾಗೂ ಪ್ರತಿಯೊಂದು ಕುಟುಂಬದ ಇಂಧನ ವೆಚ್ಚವನ್ನು ನಿರ್ಧರಿಸುತ್ತದೆ. ಇಂತಹ ಅತಿಮುಖ್ಯ ವಿಚಾರಗಳನ್ನು ದೇಶದ ಜನತೆ ವಿದೇಶಿ ಸಚಿವರೊಬ್ಬರ ಪ್ರವಾಸದ ಡೈರಿಯಿಂದ ತಿಳಿದುಕೊಳ್ಳುವಂತಾಗಬಾರದು. ಈ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಭಾರತವು ಏನು ಬಿಟ್ಟುಕೊಡುತ್ತಿದೆ ಮತ್ತು ಏನನ್ನು ಪಡೆಯುತ್ತಿದೆ ಎಂಬುದನ್ನು ಪ್ರಧಾನಿಯವರು ಸಂಸತ್ತಿಗೆ ತಿಳಿಸುವರೇ?” ಎಂದು ಅವರು ಪ್ರಶ್ನಿಸಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು ಅಂತಿಮ ಹಂತದಲ್ಲಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಇತ್ತೀಚೆಗಷ್ಟೇ ಸುಳಿವು ನೀಡಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಈ ಟೀಕೆ ಮಾಡಿದ್ದಾರೆ. ಇದಲ್ಲದೆ, ಮಂಗಳವಾರ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಒಪ್ಪಂದದ ಬಗ್ಗೆ ಮಾತನಾಡಿದ್ದರು. “ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಅತ್ಯಂತ ಸನಿಹದಲ್ಲಿದ್ದೇವೆ. ಅವರು ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದ್ದಾರೆ, ನಾವೂ ಒಪ್ಪಂದ ಮಾಡಿಕೊಳ್ಳಲಿದ್ದೇವೆ. ಇದು ಹಿಂದಿನ ಒಪ್ಪಂದಗಳಿಗಿಂತ ಸಾಕಷ್ಟು ಭಿನ್ನವಾಗಿರಲಿದೆ” ಎಂದು ಟ್ರಂಪ್ ಹೇಳಿದ್ದರು.





