ಯುವಕ-ಯುವತಿ ವಿವಾಹವಾಗಿದ್ದಕ್ಕೆ, ಯುವತಿಯ ಕುಟುಂಬದವರು ಯುವಕನ ತಾಯಿಯನ್ನು ಥಳಿಸಿ, ಅರೆಬೆತ್ತಲೆ ಮೆರವಣಿಗೆ ಮಾಡಿ ವಿಕೃತಿ ಮೆರೆದಿರುವ ಘಟನೆ ಪಂಜಾಬ್‌ನ ತರ್ನ್ ತರನ್‌ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಮಹಿಳೆಯ ಮಗ ಮತ್ತು ಆರೋಪಿಗಳ ಕುಟುಂಬದ ಯುವತಿ ಪ್ರೀತಿಸಿದ್ದರು. ಮಾರ್ಚ್ 31ರಂದು ಊರು ತೊರೆದು ಹೋಗಿ ವಿವಾಹವಾಗಿದ್ದರು. ಆದರೆ, ಅವರ ಪ್ರೀತಿ ಮತ್ತು ಮದುವೆಗೆ ಯುವತಿಯ ಪೋಷಕರು ಒಪ್ಪಿರಲಿಲ್ಲ.
ತಮ್ಮ ಇಚ್ಛೆಗೆ ವಿರುದ್ಧವಾಗಿ ಯುವಕ-ಯುವತಿ ವಿವಾಹವಾಗಿದ್ದಾರೆ ಎಂಬ ಕಾರಣಕ್ಕೆ, ಯುವತಿಯ ಪೊಲೀಸರು ಯುವಕನ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಆಕೆಯನ್ನು ಅರೆಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿ, ಅಮಾನವೀಯತೆ ಮರೆದಿದ್ದಾರೆ.
ಸಂತ್ರಸ್ತೆ ನೀಡಿರುವ ದೂರಿನ ಪ್ರಕಾರ, ಆಕೆ ತನ್ನ ಮನೆಯಲ್ಲಿ ಒಬ್ಬಳೇ ಇದ್ದಾಗ ಯುವತಿಯ ಕುಟುಂಬದವರು ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಆಕೆಯ ಬಟ್ಟೆ ಹರಿದು ಹಾಕಿದ್ದಾರೆ. ಅವರು ಅವಳನ್ನು ಅರೆಬೆತ್ತಲೆ ಸ್ಥಿತಿಯಲ್ಲಿ ಗ್ರಾಮದಲ್ಲಿ ಬೀದಿಗಳಲ್ಲಿ ಎಳೆದೊಯ್ದಿದ್ದಾರೆ.
ಘಟನೆ ಸಂಬಂಧ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಮೂವರು ಆರೋಪಿಗಳನ್ನು ಕುಲ್ವಿಂದರ್ ಕೌರ್ ಮಣಿ, ಶರಣಜಿತ್ ಸಿಂಗ್ ಶಾನಿ ಮತ್ತು ಗುರ್ಚರಣ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ, ಏಪ್ರಿಲ್ 3ರಂದು ಐಪಿಸಿ ಸೆಕ್ಷನ್ 354, 354ಬಿ. 354ಡಿ, 323 ಹಾಗೂ 149 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.