ಮಧ್ಯಪ್ರದೇಶದ ಮಹಿಳೆಯೊಬ್ಬಳು ತನ್ನ ಗಂಡ ಹನಿಮೂನ್‌ಗೆ ಗೋವಾ ಬದಲು ಅಯೋಧ್ಯೆ ಹಾಗೂ ವಾರಣಾಸಿಗೆ ಕರೆದುಕೊಂಡು ಹೋಗಿದ್ದಕ್ಕೆ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ.
ಮಾಧ್ಯಮಗಳ ವರದಿಗಳ ಪ್ರಕಾರ, ಈ ಅಸಮಾನ್ಯ ಪ್ರಕರಣವು ಜನವರಿ 19ರಂದು ವರದಿಯಾಗಿದೆ. 10 ದಿನಗಳ ಪ್ರವಾಸದಿಂದ ವಾಪಸಾದ ನಂತರ ಮಹಿಳೆಯು ಭೋಪಾಲ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾಳೆ.
ವಿಚ್ಛೇದನದ ಅರ್ಜಿಯಲ್ಲಿ ಮಹಿಳೆಯು, ತನ್ನ ಪತಿ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಉತ್ತಮ ವೇತನ ಪಡೆಯುತ್ತಿದ್ದಾರೆ. ನಾನು ಕೂಡ ಕೆಲಸ ಮಾಡುತ್ತಿದ್ದು ಉತ್ತಮ ಸಂಬಳ ಪಡೆಯುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಇಬ್ಬರು ವಿದೇಶಕ್ಕೆ ಹನಿಮೂನ್‌ಗೆ ಹೋಗುವುದು ದೊಡ್ಡ ವಿಷಯವಾಗಿರಲಿಲ್ಲ.
ಹಣಕಾಸಿನ ಯಾವುದೇ ನಿರ್ಬಂಧದ ಹೊರತಾಗಿಯೂ ಮಹಿಳೆಯ ಪತಿಯು ವಿದೇಶಕ್ಕೆ ಹನಿಮೂನ್‌ಗೆ ಕರೆದುಕೊಂಡು ಹೋಗಲು ನಿರಾಕರಿಸಿ ಭಾರತದಲ್ಲಿಯೇ ಇರುವ ಯಾವುದಾದರೂ ಸ್ಥಳಕ್ಕೆ ಕರೆದೊಯ್ಯಲು ಒತ್ತಾಯಿಸಿದ್ದ. ಇದಕ್ಕೆ ಕಾರಣ ತನ್ನ ಪೋಷಕರನ್ನು ಈತ ನೋಡಿಕೊಳ್ಳಬೇಕಿತ್ತು. ಈ ಹಿನ್ನೆಲೆಯಲ್ಲಿ ದಂಪತಿಗಳು ಗೋವಾ ಅಥವಾ ದಕ್ಷಿಣ ಭಾರತಕ್ಕೆ ಹೋಗಲು ಪರಸ್ಪರ ಒಪ್ಪಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇವೇಗೌಡರ ದೈವಭಕ್ತಿ ಮತ್ತು ಕುಟುಂಬ ಕಲ್ಯಾಣ
ಆದಾಗ್ಯೂ, ಮಹಿಳೆಯ ಪತಿ ತನ್ನ ಪತ್ನಿಗೆ ತಿಳಿಸದೆ ಅಯೋಧ್ಯೆ ಹಾಗೂ ವಾರಣಾಸಿಗೆ ವಿಮಾನವನ್ನು ಕಾಯ್ದಿರಿಸಿದ್ದ. ನಂತರ ಪತ್ನಿಗೆ ಒಂದು ದಿನ ಮೊದಲು, ತನ್ನ ತಾಯಿಯು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೂ ಮುನ್ನ ಅಯೋಧ್ಯೆ ನೋಡಬಯಸಿದ ಕಾರಣ ತಾನು ಪ್ರವಾಸದ ಯೋಜನೆಗಳನ್ನು ಬದಲಿಸಿರುವುದಾಗಿ ಹೇಳಿದ್ದ.
ಅಯೋಧ್ಯೆ ಪ್ರವಾಸಕ್ಕೆ ತೆರಳುವ ಸಂದರ್ಭದಲ್ಲಿ ಆಕೆ ಯಾವುದೇ ವಿರೋಧ ವ್ಯಕ್ತಪಡಿಸದೆ ಗಂಡನೊಂದಿಗೆ ಪ್ರವಾಸಕ್ಕೆ ತೆರಳಿದ್ದಳು. ದೇವಸ್ಥಾನ ಪ್ರವಾಸದಿಂದ ಬಂದ ನಂತರದಲ್ಲಿ ತನ್ನ ಪತಿಯ ವಿರುದ್ಧ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಅರ್ಜಿಯಲ್ಲಿ ತನ್ನ ಪತಿ ನನಗಿಂತ ತನ್ನ ಪೋಷಕರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದ ಎಂದು ತಿಳಿಸಿದ್ದಾಳೆ.
ಆದರೆ ಪತಿ ತನ್ನ ಹೇಳಿಕೆಯಲ್ಲಿ ಪತ್ನಿ ಸದಾ ಜಗಳವಾಡುತ್ತಿದ್ದಳು ಎಂದು ತಿಳಿಸಿದ್ದಾನೆ. ಪ್ರಸ್ತುತ ಇಬ್ಬರು ಭೋಪಾಲ್ ಕೌಟುಂಬಿಕ ನ್ಯಾಯಾಲಯದಲ್ಲಿ ಸಮಾಲೋಚನೆ ಪಡೆಯುತ್ತಿದ್ದಾರೆ.