ಅಮಾನತ್ತುಗೊಂಡಿದ್ದ ವಕೀಲನಿಂದ ಗುಂಡಿನ ದಾಳಿ
ಹಳೆಯ ವೈಷಮ್ಯದ ಹಿನ್ನೆಲೆ ದಾಳಿ ನಡೆಸಿರುವ ಶಂಕೆ
ದೆಹಲಿಯ ಸಾಕೇತ್ ಕೋರ್ಟ್‌ನಲ್ಲಿ ಮಹಿಳೆ ಮತ್ತು ಪ್ರಕರಣವೊಂದರಲ್ಲಿ ಆಕೆಯ ಪರ ವಾದ ಮಂಡಿಸುತ್ತಿದ್ದ ವಕೀಲರ ಮೇಲೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ನ್ಯಾಯಾಲಯದ ಒಳಾಂಗಣದಲ್ಲಿಯೇ ಈ ಘಟನೆ ನಡೆದಿದೆ.
ಗುಂಡಿನ ದಾಳಿಗೆ ಒಳಗಾದ ಮಹಿಳೆಯನ್ನು ದೆಹಲಿಯ ನಿವಾಸಿ ರಾಧಾ ಎಂದು ಗುರುತಿಸಲಾಗಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿ ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ರಾಧಾ ಸಾಕೇತ್ ಕೋರ್ಟ್‌ಗೆ ಬಂದಿದ್ದಾರೆ. ರಾಧಾ ಅವರೊಂದಿಗೆ ಹಳೆಯ ವೈಷಮ್ಯ ಹೊಂದಿದ್ದ, ಇತ್ತೀಚೆಗೆ ಸೇವೆಯಿಂದ ಅಮಾನತ್ತುಗೊಂಡಿದ್ದ ವಕೀಲನೊಬ್ಬ ಇದೇ ವೇಳೆ ಕೋರ್ಟ್ ಆವರಣ ಪ್ರವೇಶಿಸಿ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.
ಆರೋಪಿ ನಾಲ್ಕು ಸುತ್ತು ಗುಂಡು ಹಾರಿಸಿದ್ದು, ರಾಧಾ ಅವರ ಹೊಟ್ಟೆಯ ಭಾಗಕ್ಕೆ ಒಂದು ಗುಂಡು ತಗುಲಿದೆ. ಅವರ ಪರ ವಾದ ಮಂಡಿಸುತ್ತಿದ್ದ ವಕೀಲರ ಕುತ್ತಿಗೆ ಭಾಗಕ್ಕೆ ಮತ್ತೊಂದು ಗುಂಡು ತಾಗಿದೆ. ದಾಳಿಯ ಬಳಿಕ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಸ್ಥಳದಲ್ಲಿದ್ದವರು ಇಬ್ಬರೂ ಗಾಯಾಳುಗಳನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಬ್ಬರ ಸ್ಥಿತಿಯೂ ಗಂಭೀರವಾಗಿದೆ ಎಂದು ವರದಿಯಾಗಿದೆ. ಆರೋಪಿಯ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ದೆಹಲಿಯ ದಕ್ಷಿಣ ಭಾಗದ ಪೊಲೀಸ್ ಉಪ ಆಯುಕ್ತ ಚಂದನ್ ಚೌಧರಿ ತಿಳಿಸಿದ್ದಾರೆ.
ಗುಂಡೇಟು ತಿಂದ ರಾಧಾ ಅವರನ್ನು ಕೋರ್ಟ್‌ನಿಂದ ಆಸ್ಪತ್ರೆಗೆ ಕೊಂಡೊಯ್ಯುವ ದೃಶ್ಯ ಸ್ಥಳದಲ್ಲಿದ್ದ ಹಲವರ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸಂದರ್ಭದ ವಿಡಿಯೋಗಳು ವೈರಲ್ ಆಗಿದ್ದು, “ದೆಹಲಿ ಜನಸಾಮಾನ್ಯರು ಬದುಕುಲು ಸುರಕ್ಷಿತ ಸ್ಥಳವೇ?” ಎಂದು ನೆಟ್ಟಿಗರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಪಹರಣ, ಹಲ್ಲೆ ಆರೋಪ : ಹನಿಸಿಂಗ್ ವಿರುದ್ಧ ದೂರು ದಾಖಲು
ಕೆಲ ದಿನಗಳ ಹಿಂದೆ ಇದೇ ದೆಹಲಿಯ ʼರೋಹಿಣಿ ಕೋರ್ಟ್ʼನಲ್ಲಿ ನಡೆದಿದ್ದ ಗುಂಡಿನ ದಾಳಿ ಮತ್ತು ಗ್ಯಾಂಗ್‌ಸ್ಟರ್ ಹತ್ಯೆಯನ್ನು ಉಲ್ಲೇಖಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕೇಂದ್ರ ಮತ್ತು ದೆಹಲಿ ಸರ್ಕಾರಗಳು ವಿಫಲವಾಗಿವೆ ಎಂದು ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.