ಮಹಾರಾಷ್ಟ್ರದಲ್ಲಿ 23 ವರ್ಷದ ಮಹಿಳೆಯೋರ್ವಳು ನಕಲಿ ಪಾಸ್‌ಪೋರ್ಟ್ ಮತ್ತು ವೀಸಾದೊಂದಿಗೆ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ ಆರೋಪವನ್ನು ಎದುರಿಸುತ್ತಿದ್ದು, ಯುವತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಥಾಣೆ ಮೂಲದ ನಗ್ಮಾ ನೂರ್ ಮಕ್ಸೂದ್ ಅಲಿ ಅಲಿಯಾಸ್ ಸನಮ್ ಖಾನ್ ಎಂದು ಗುರುತಿಸಲಾದ ಯುವತಿ ತನ್ನ ಹೆಸರನ್ನು ಬದಲಾಯಿಸಿಕೊಂಡು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ತನ್ನ ಮಗಳ ಜನನ ಪ್ರಮಾಣಪತ್ರವನ್ನು ಥಾಣೆಯ ಲೋಕಮಾನ್ಯ ನಗರದಿಂದ ಪಡೆದಿದ್ದಾಳೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಪಾಸ್‌ಪೋರ್ಟ್ ಅರ್ಜಿಯೊಂದಿಗೆ ಈ ನಕಲಿ ದಾಖಲೆಗಳನ್ನು ಸಲ್ಲಿಸಿದ್ದು ದಾಖಲೆಗಳ ಆಧಾರದ ಮೇಲೆ ಆಕೆ ನಕಲಿ ಪಾಸ್‌ಪೋರ್ಟ್ ಪಡೆದಿದ್ದಾಳೆ. ಈ ಪಾಸ್‌ಪೋರ್ಟ್ ಬಳಸಿಕೊಂಡು ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ನದಿಗೆ ಹಾರಿದ್ದ ಜಮ್ಮು ಯುವಕನ ಮೃತದೇಹ ಪಾಕಿಸ್ತಾನದಲ್ಲಿ ಪತ್ತೆ
ಮಹಿಳೆ ನಕಲಿ ದಾಖಲೆ ಬಳಸಿಕೊಂಡು ಪಾಕಿಸ್ತಾನಕ್ಕೆ ಪ್ರಯಾಣಿಸಿದ ಘಟನೆ 2023ರ ಮೇ ತಿಂಗಳಿನಿಂದ ಈ ವರ್ಷದ ಮೇ ನಡುವೆ ನಡೆದಿದೆ. ಆದರೆ ಇದೀಗ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. ಇಬ್ಬರ ವಿರುದ್ದವೂ ಭಾರತೀಯ ಪಾಸ್‌ಪೋರ್ಟ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.