ವಿಕೃತ ಕಾಮುಕರು 34 ವರ್ಷದ ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಆಕೆಯನ್ನು ರಸ್ತೆ ಬದಿಯಲ್ಲಿ ಎಸೆದು ಹೋಗಿರುವ ಅಮಾನುಷ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಅರೆಪ್ರಜ್ಞಾವಸ್ಥೆಯಲ್ಲಿದ್ದ ಸಂತ್ರಸ್ತೆಯನ್ನು ದಾರಿಹೋಕರು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯನ್ನು ಕಾಮುಕರು ಸರಾಯ್ ಕಾಲೇ ಖಾನ್ ಪ್ರದೇಶದಲ್ಲಿ ಎಸೆದು ಹೋಗಿದ್ದರು. ಮುಂಜಾನೆ 3.30ರ ಸುಮಾರಿಗೆ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ತಕ್ಷಣವೇ ಪೊಲೀಸರ ತಂಡವೊಂದು ಘಟನಾ ಸ್ಥಳಕ್ಕೆ ಧಾವಿಸಿದ್ದು, ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ, ಮಹಿಳೆಯನ್ನು ಅಪಹರಿಸಿ, ಆಕೆಯ ಮೇಲೆ ಬೇರೊಂದು ಸ್ಥಳದಲ್ಲಿ ಅತ್ಯಾಚಾರ ಎಸಗಲಾಗಿದೆ. ಬಳಿಕ, ಆಕೆಯನ್ನು ಸರಾಯ್ ಕಾಲೇ ಖಾನ್ ಪ್ರದೇಶದಲ್ಲಿ ಆರೋಪಿಗಳು ಎಸೆದುಹೋಗಿದ್ದಾರೆ.
ಅತ್ಯಾಚಾರಕ್ಕೆ ಒಳಗಾದ ಮಹಿಳೆ ಒಡಿಶಾ ನಿವಾಸಿಯಾಗಿದ್ದು, ಒಂದು ವರ್ಷದ ಹಿಂದೆ ದೆಹಲಿಗೆ ಬಂದು ನೆಲೆಸಿದ್ದರು. “ಸಂತ್ರಸ್ತ ಮಹಿಳೆ ದೆಹಲಿಯ ಕಟ್ವಾರಿಯಾ ಸರಾಯ್‌ನಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ವಾಸುಸುತ್ತಿದ್ದರು. ಆದರೆ, ಕೆಲ ದಿನಗಳ ಹಿಂದೆ ಸಹನಿವಾಸಿ ಆಕೆಯನ್ನು ಮನೆಯಿಂದ ಹೊರಹಾಕಿದ್ದರು. ಪರಿಣಾಮ, ಕಳೆದ ಆಗಸ್ಟ್‌ನಿಂದ ಸಂತ್ರಸ್ತೆ ಬೀದಿಗಳಲ್ಲಿ ವಾಸಿಸುತ್ತಿದ್ದರು” ಎಂದು ಪೊಲೀಸರು ತಿಳಿಸಿದ್ದಾರೆ.
“ನಾವು ಘಟನೆಯ ಬಗ್ಗೆ ಸಂತ್ರಸ್ತೆಯ ಪೋಷಕರಿಗೆ ತಿಳಿಸಿದ್ದೇವೆ ಮತ್ತು ಪ್ರಸ್ತುತ ಅವರನ್ನು ನಿಗಾದಲ್ಲಿ ಇರಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
ಆರೋಪಿಗಳ ಪತ್ತೆಗೆ ಪ್ರಯತ್ನ ಮುಂದುವರಿದಿದ್ದು, ಅದಕ್ಕಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಮತ್ತು ಇತರ ತಾಂತ್ರಿಕ ಕಣ್ಗಾವಲು ಆಧರಿಸಿ ಆರೋಪಿಗಳನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.