ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಅನುಚಿತವಾಗಿ ವರ್ತಿಸಿರುವ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಡಿಎಸ್‌ಪಿ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುರು ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ನಡೆಸಿದ ಪ್ರತಿಭಟನೆ ವೇಳೆ, ಮಹಿಳಾ ಅಧಿಕಾರಿ ಮೇಲೆ ಡಿಎಸ್‌ಪಿ ಸುನಿಲ್ ಜಜಾರಿಯಾ ಅವರು ದುಂಡಾವರ್ತನೆ ಪ್ರದರ್ಶಿಸಿದ್ದಾರೆ.
ಚುರು ಸಂಸದ ರಾಹುಲ್ ಕಸ್ವಾನ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಬಿಜೆಪಿ ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಪ್ರವೇಶಿಸದಂತೆ ತಡೆಯುವ ಸಮಯದಲ್ಲಿ ಘಟನೆ ನಡೆದಿದೆ. ಡಿಎಸ್‌ಪಿ ಜಜಾರಿಯಾ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ, ಮಹಿಳಾ ಪೊಲೀಸ್ ಅಧಿಕಾರಿಯ ಬೆನ್ನಿಗೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ; ಮುಂದೆ ಸಾಗುತ್ತದ್ದ ಮಹಿಳಾ ಪೊಲೀಸ್ ಅಧಿಕಾರಿಯ ಬೆನ್ನಿಗೆ ಹಿಂದಿನಿಂದ ಡಿಎಸ್‌ಪಿ ಸುನಿಲ್ ಜಜಾರಿಯಾ ಅವರು ಹೊಡೆಯುತ್ತಿರುವುದು ಮತ್ತು ನಿಂದಿಸುತ್ತಿರುವುದು ಕಂಡುಬಂದಿದೆ.
ಆದರೆ, ತಾವು ಮಹಿಳಾ ಪೊಲೀಸ್ ಅಧಿಕಾರಿಗೆ ಹೊಡೆದಿಲ್ಲವೆಂದು ಡಿಎಸ್‌ಪಿ ಜಜಾರಿಯಾ ಹೇಳಿಕೊಂಡಿದ್ದಾರೆ. ಮಾತ್ರವಲ್ಲದೆ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪತ್ರಕರ್ತೆಯ ವಿರುದ್ಧ ವಿಡಿಯೋದಲ್ಲಿ ಹಲ್ಲೆಗೊಳಗಾದ ಮಹಿಳಾ ಪೊಲೀಸ್ ಅಧಿಕಾರಿಯೇ ಪ್ರಕರಣ ದಾಖಲಿಸಿದ್ದಾರೆ.
DSP सुनील झाझड़िया जी को अपनी #महिला_सहकर्मी के साथ किया गया ये व्यवहार देकर महसूस होता है की माननीय को अब #पुलिस_रत्न_सम्मान के साथ प्रमोट करते हुए SP बना देना चाहिए pic.twitter.com/VPMDsNztoM
— एक नजर (@1K_Nazar) June 9, 2025
“ಡಿಎಸ್‌ಪಿ ಸರ್ ನನಗೆ ಅವರಿಗೆ ಹೊಡೆದಿಲ್ಲ. ಅವರು ಹಿಂದಿನಿಂದ ನನ್ನನ್ನು ಕರೆದರು ಅಷ್ಟೇ. ವೀಡಿಯೊವನ್ನು ವೈರಲ್ ಆಗಿದ್ದರಿಂದ ನನ್ನ ಪ್ರತಿಷ್ಠೆಗೆ ಧಕ್ಕೆಯಾಗಿದೆ. ಡಿಎಸ್‌ಪಿ ನನ್ನೊಂದಿಗೆ ಕೆಟ್ಟದಾಗಿ ವರ್ತಿಸಿಲ್ಲ” ಎಂದು ಮಹಿಳಾ ಅಧಿಕಾರಿ ಹೇಳಿದ್ದಾರೆ.
ಆದಾಗ್ಯೂ, ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಘಟನೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಮತ್ತು ನೆಟ್ಟಿಗರು ತೀವ್ರವಾಗಿ ಖಂಡಿಸಿದ್ದಾರೆ. ಡಿಎಎಸ್‌ಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಘಟನೆಯನ್ನು ‘ಸಮವಸ್ತ್ರದ ದುರುಪಯೋಗ’ ಎಂದು ಕಾಂಗ್ರೆಸ್ ಕರೆದಿದೆ.
“ಮಹಿಳೆಯರ ಗೌರವ ಮತ್ತು ಘಟನೆಯ ವಿಚಾರದಲ್ಲಿ ಬಿಜೆಪಿ ಬರೀ ಮಾತಿಗಷ್ಟೇ ಸೀಮಿತವಾಗಿದೆ. ಬಿಜೆಪಿ ಸರ್ಕಾರದಲ್ಲಿ, ಪೊಲೀಸ್ ಅಧಿಕಾರಿಗಳೇ ಗೂಂಡಾಗಿರಿ ಮಾಡಿದ್ದಾರೆ. ಇದು ಮಹಿಳೆಯರಿಗೆ ಮಾಡಿದ ಅವಮಾನ. ಡಿಎಸ್‌ಪಿ ಸುನಿಲ್ ಜಜಾರಿಯಾ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಕಾಂಗ್ರೆಸ್ ಆಗ್ರಹಿಸಿದೆ.