ಕೋಮು ದ್ವೇಷ ಭಾಷಣ ಮಾಡುವ ಮೂಲಕ ವಿವಾದ ಸೃಷ್ಟಿಸಿ, ಸುದ್ದಿಯಾಗಿರುವ ಅರ್ಚಿ ಯತಿ ನರಸಿಂಹಾನಂದ್, ಇತ್ತೀಚೆಗೆ ಮತ್ತೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಕುರಿತು ದ್ವೇಷದ ಭಾಷಣ ಮಾಡಿದ್ದಾರೆ.
‘ಎಲ್ಲ ದಸರಾದ ಸಂದರ್ಭದಲ್ಲಿ ಇತರೆ ಪ್ರತಿಕೃತಿಯನ್ನು ಸುಡುವ ಬದಲು ಪ್ರವಾದಿ ಮುಹಮ್ಮದ್ ಅವರ ಪ್ರತಿಕೃತಿಯನ್ನು ಸುಡಬೇಕು’ ಎಂದು ಕರೆಕೊಟ್ಟಿರುವ ಅವರ ಕೋಮು ದ್ವೇಷ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅವರ ಹೇಳಿಕೆಯ ವಿಡಿಯೋವನ್ನು ಹಂಚಿಕೊಂಡಿರುವ ಪತ್ರಕರ್ತ ಮುಹಮ್ಮದ್ ಝಬೇರ್, “ಕಳೆದ ನಾಲ್ಕು ವರ್ಷಗಳಿಂದ ಯತಿ ನರಸಿಂಹಾನಂದ್ ವಿರುದ್ಧ ಹಲವು ಎಫ್‌ಐಆರ್‌ಗಳು ದಾಖಲಾಗಿವೆ. ಆದರೂ, ಅವರ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಕೋಮು ದ್ವೇಷ ಮತ್ತು ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವ ನರಸಿಂಹಾನಂದ್ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಝುಬೇರ್ ಒತ್ತಾಯಿಸಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ ಪ್ರಧಾನಿ ಮೋದಿ, ರಾಷ್ಟ್ರಪತಿ ಭವನ ಮತ್ತು ಸಿಎಂ ಆದಿತ್ಯನಾಥ್, ಉತ್ತರಪ್ರದೇಶ ಪೊಲೀಸರು ಮತ್ತು ಗಾಝಿಯಾಬಾದ್ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. “ಇಂತಹ ಭಾಷಣಗಳು ಮುಂದುವರಿಯಲು ಏಕೆ ಅನುಮತಿ ನೀಡುತ್ತಿದ್ದೀರಿ” ಎಂದು ಪ್ರಶ್ನಿಸಿದ್ದಾರೆ.
ನರಸಿಂಹಾನಂದ್ ವಿರುದ್ಧ ಉತ್ತರ ಪ್ರದೇಶ ಸೇರಿದಂತೆ ಹಲವು ಕಡೆಗಳಲ್ಲಿ ಪ್ರತಿಭಟನೆಗಳು ಆರಂಭಗೊಂಡ ಬೆನ್ನಲ್ಲೇ, ಸಿಹಾನಿ ಗೇಟ್ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಗಾಝಿಯಾಬಾದ್ ಪೊಲೀಸರು ಮಾಹಿತಿ ಹಂಚಿಕೊಂಡಿದ್ದು, ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಯತಿ ನರಸಿಂಹಾನಂದ್ ಅವರ ಹೇಳಿಕೆಯು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿದ್ದು, ನಾನಾ ದೇಶಗಳ ಮುಸ್ಲಿಂ ಧಾರ್ಮಿಕ ಮುಖಂಡರು ಖಂಡಿಸಿದ್ದು. ಮೋದಿ ಸರ್ಕಾರವು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.