ಗೃಹರಕ್ಷಕ ದಳ ನೇಮಕಾತಿ ಅಭಿಯಾನದಲ್ಲಿ ಭಾಗವಹಿಸಿದ್ದ ಯುವತಿ ಮೇಲೆ ಆ್ಯಂಬುಲೆನ್ಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಗಯಾದ ಬಿಹಾರ್ ಮಿಲಿಟರಿ ಪೊಲೀಸ್ ಮೈದಾನದಲ್ಲಿ ಗೃಹರಕ್ಷಕ ದಳ ನೇಮಕಾತಿಯ ಅಭಿಯಾನ ನಡೆಯುತ್ತಿತ್ತು. ಅಭಿಯಾನದಲ್ಲಿ ದೈಹಿಕ ಪರೀಕ್ಷೆ ನಡೆಯುವ ವೇಳೆ 26 ವರ್ಷದ ಯುವತಿ ಮೂರ್ಛೆ ಹೋಗಿದ್ದು, ಕುಸಿದು ಬಿದ್ದಿದ್ದಾರೆ. ಆಕೆಯನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳಿಸಲಾಗಿದೆ. ಮಾರ್ಗಮಧ್ಯೆ, ಆ್ಯಂಬುಲೆನ್ಸ್‌ನಲ್ಲಿ ಆಕೆಯ ಮೇಲೆ ಚಾಲಕ ಮತ್ತು ತಂತ್ರಜ್ಞರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಜುಲೈ 24ರಂದು ಘಟನೆ ನಡೆದಿದೆ. ಮಹಿಳೆ ಪ್ರಜ್ಞಾಹೀನಳಾಗಿದ್ದಾಗ ಯುವತಿ ಮೇಲೆ ಮೂರ್ನಾಲ್ಕು ಆರೋಪಿಗಳು ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತ ಯುವತಿ ಗಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂಬುದನ್ನು ವೈದ್ಯರು ಕೂಡ ಖಚಿತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಆ್ಯಂಬುಲೆನ್ಸ್ ಚಾಲಕ ಮತ್ತು ತಂತ್ರಜ್ಞರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರು ಮತ್ತು ವಿಧಿವಿಜ್ಞಾನ ತಂಡವು ತನಿಖೆ ನಡೆಸುತ್ತಿದೆ. ಆ್ಯಂಬುಲೆನ್ಸ್ ಚಾಲಕ ವಿನಯ್ ಕುಮಾರ್ ಮತ್ತು ಟೆಕ್ನಿಷಿಯನ್ ಅಜಿತ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಬಗ್ಗೆ ಲೋಕ ಜನಶಕ್ತಿ ಪಕ್ಷದ ಸಂಸದ ಚಿರಾಗ್ ಪಾಸ್ವಾನ್ ಕಳವಳ ವ್ಯಕ್ತಪಡಿಸಿದ್ದು, ಬಿಹಾರ ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಟೀಕೆ ಮಾಡಿದ್ದಾರೆ.