ಜುಲೈ 14ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಧ್ಯಾಹ್ನ 2:35ಕ್ಕೆ ಚಂದ್ರಯಾನ-3 ಉಡಾವಣೆ ಆಗಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಜಿ 20 ಬಾಹ್ಯಾಕಾಶ ಆರ್ಥಿಕ ನಾಯಕರ ಸಭೆಯಲ್ಲಿ ಚಂದ್ರಯಾನ-3 ಉಡಾವಣೆ ಕುರಿತು ಇಸ್ರೋ ಅಧ್ಯಕ್ಷ ಹೇಳಿಕೆ ನೀಡಿದ್ದಾರೆ.
“ಜುಲೈ 14 ರಂದು ಮಧ್ಯಾಹ್ನ 2.35ಕ್ಕೆ, ಚಂದ್ರಯಾನ -3 ಉಡಾವಣೆಯಾಗುತ್ತದೆ ಮತ್ತು ಎಲ್ಲವೂ ಸರಿಯಾಗಿ ನಡೆದರೆ ಅದು ಆಗಸ್ಟ್ 23ರಂದು ಚಂದ್ರನ ಮೇಲೆ ಇಳಿಯಲಿದೆ” ಎಂದು ತಿಳಿಸಿದ್ದಾರೆ.
ಸೂರ್ಯೋದಯ ಯಾವಾಗ ಎಂಬುದನ್ನು ಆಧರಿಸಿ ದಿನಾಂಕವನ್ನು ನಿರ್ಧರಿಸಲಾಗುತ್ತದೆ. ಅದು ಲೆಕ್ಕಾಚಾರಗಳ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಅದು ತಡವಾದರೆ ನಾವು ಮುಂದಿನ ತಿಂಗಳು ಸೆಪ್ಟೆಂಬರ್‌ನಲ್ಲಿ ಇಳಿಯಬೇಕಾಗುತ್ತದೆ ಎಂದೂ ಇಸ್ರೋ ಅಧ್ಯಕ್ಷ ತಿಳಿಸಿದ್ದಾರೆ.
ಈ ಮೊದಲು ಜುಲೈ 13ಕ್ಕೆ ಚಂದ್ರಯಾನ -3 ಉಡಾವಣೆಯಾಗಲಿದೆ ಎಂದು ಇಸ್ರೋ ಘೋಷಿಸಿತ್ತು.
ಚಂದ್ರಯಾನ-3 ರ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವಲ್ಲಿ ಯಶಸ್ವಿಯಾದರೆ, ಭಾರತ ಈ ಸಾಧನೆ ಮಾಡಿದ ನಾಲ್ಕನೇ ದೇಶವಾಗಲಿದೆ. ಈ ಹಿಂದೆ ಅಮೆರಿಕ, ರಷ್ಯಾ ಮತ್ತು ಚೀನಾ ತಮ್ಮ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲೆ ಇಳಿಸಿದ್ದವು.