ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ನಿಲ್ಲಿಸಬೇಕು ಹಾಗೂ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವಂತೆ ಆಗ್ರಹಿಸಿ ಇಂದು ಬೆಂಗಳೂರಿನ ಆರ್ಚ್ ಡಯಾಸೀಸ್‌ನ ಮಹಿಳಾ ಘಟಕದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬೆಂಗಳೂರಿನ ಕೋಲ್ಸ್ ಪಾರ್ಕಿನಲ್ಲಿರುವ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಕ್ಯಾಥೆಡ್ರಲ್‌ನ ಮುಂಭಾಗ ನಡೆದ ಪ್ರತಿಭಟನೆಯ ವೇಳೆ ಸೇರಿದ್ದ ನೂರಾರು ಜನರು ಸಾಂಕೇತಿಕವಾಗಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾನವ ಹಕ್ಕುಗಳ ಕಾರ್ಯಕರ್ತೆ ಬೃಂದಾ ಅಡಿಗೆ ಮಾತನಾಡಿ, ‘ರಾಷ್ಟ್ರೀಯ ಮಹಿಳಾ ಆಯೋಗವು ಮಣಿಪುರದ ಮಹಿಳೆಯರನ್ನು ಭೇಟಿ ಮಾಡಬೇಕು. ಅಲ್ಲಿನ ಪರಿಸ್ಥಿತಿಯನ್ನು ಅವಲೋಕನ ನಡೆಸಿ, ಶಾಂತಿ ನೆಲೆಯೂರುವಂತೆ ಮಾಡಬೇಕು. ಪುನರ್ವಸತಿ ಕಲ್ಪಿಸಲು ಶ್ರಮಿಸಬೇಕು’ ಎಂದು ಆಗ್ರಹಿಸಿದರು.

ಸಾಮಾಜಿಕ ಕಾರ್ಯಕರ್ತೆ ಸೀಮಾ ಮೊಹ್ಸಿನ್ ಮಾತನಾಡಿ, ‘ಕೆಲವರು ತಮ್ಮ ರಾಜಕೀಯ ದುರುದ್ದೇಶದಿಂದ ಮಣಿಪುರದ ಜನರನ್ನು ವಿಭಜಿಸುತ್ತಿದ್ದಾರೆ. ದುಷ್ಕೃತ್ಯಗಳನ್ನು ಮರೆ ಮಾಚಲು ಕ್ಷಮೆಯಾಚಿಸುವ ನಾಟಕ ಮಾಡುತ್ತಿದ್ದಾರೆ. ಆದರೆ, ಹಿಂಸಾಚಾರ ನಿರತರಿಗೆ ಬೆಂಬಲ ಕೂಡ ನೀಡುತ್ತಿದ್ದಾರೆ. ಇದಕ್ಕೆ ಮಣಿಪುರದ ಜನ ಬೆಲೆ ತೆರುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಮುಖಂಡೆ ರುತ್ ಮನೋರಮಾ ಮಾತನಾಡಿ, ‘ಮಣಿಪುರದಲ್ಲಿ ನಡೆಯುತ್ತಿರುವುದು ಅಲ್ಪಸಂಖ್ಯಾತರ ಮೇಲಿನ ಸಾಮಾಜಿಕ-ಧಾರ್ಮಿಕ ದಾಳಿಯಾಗಿದೆ. ಗಂಭೀರ ಪರಿಸ್ಥಿತಿ ಇದ್ದರೂ ಕೂಡ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಣಿಪುರಕ್ಕೆ ಭೇಟಿ ನೀಡಲು ಸಮಯ ಸಿಗುತ್ತಿಲ್ಲ ಏಕೆ’ ಎಂದು ಪ್ರಶ್ನಿಸಿದರು.
ಕ್ಯಾಥೋಲಿಕ್ ಮಹಿಳಾ ಸಮೂಹದ ಅಧ್ಯಕ್ಷೆ ಪ್ರಿಯಾ ಫ್ರಾನ್ಸಿಸ್ ಮಾತನಾಡಿ, ‘ಮಣಿಪುರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನಿಜಕ್ಕೂ ಖಂಡನೀಯ. ಮಹಿಳೆಯರನ್ನು ಅಮಾನವೀಯವಾಗಿ ನಡೆಸಲಾಗುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಕಾರ್ಯ ಪ್ರವೃತ್ತವಾಗಬೇಕು ಎಂಬುದು ದೇಶದ ಮಹಿಳೆಯರಿಗೆ ನ್ಯಾಯಯುತವಾದ ಬೇಡಿಕೆ’ ಎಂದರು.
“ಮಣಿಪುರದಲ್ಲಿನ ಅನ್ಯಾಯದ ಸರಪಳಿಯನ್ನು ಮುರಿಯಿರಿ, ಮಹಿಳಾ ಹಕ್ಕುಗಳನ್ನು ರಕ್ಷಿಸಿ’ ಎಂದು ಸೇರಿದ್ದ ಪ್ರತಿಭಟನಾಕಾರರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಬಳಿಕ ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ರಾಷ್ಟ್ರಪತಿಗಳಿಗೆ ಕಳುಹಿಸಿದರು.
ಪ್ರತಿಭಟನೆಯಲ್ಲಿ ಬೆಂಗಳೂರು ಆರ್ಚ್‌ಡಯಾಸಿಸ್‌ನ ಫಾ. ಸುಸೈರಾಜ್, ಸೈಂಟ್ ಜೋಸೆಫ್ ಸಂಜೆ ಕಾಲೇಜಿನ ಪ್ರಾಂಶುಪಾಲ ಪಾಲ್ ನ್ಯೂಮನ್, ಕಮಿಲಾ ಉರೂಜ್, ಸಿಖ್ ಮುಖಂಡ ಪ್ರೊ.ಹರ್ಜಿಂದರ್ ಸಿಂಗ್ ಭಾಟಿಯಾ, ಸುಷ್ಮಾ ವೀರ್, ಕಾಲಿನ್ ಕ್ಯಾಲ್ಮಿಯಾನೊ, ಶಶಿಂತ ಮೊಂತೇರೊ ಮಾತನಾಡಿದರು.