ಸ್ಥಳೀಯ ಮತ್ತು ಪೌಷ್ಟಿಕಾಂಶವುಳ್ಳ ಆಹಾರವನ್ನು ಪಡಿತರ ವ್ಯವಸ್ಥೆಯಲ್ಲಿ ಒಳಗೊಳ್ಳಲು ಸರ್ಕಾರ ತೆಗೆದುಕೊಳ್ಳಬಹುದಾದ ಒಂದು ಕ್ರಮವು ರಾಜ್ಯದಲ್ಲಿ ಸರ್ಕಾರ ಬೊಕ್ಕಸಕ್ಕೆ ಹೊರೆಯನ್ನು ತಗ್ಗಿಸಲು, ಪಡಿತರದಾರರಲ್ಲಿ ಪೌಷ್ಟಿಕತೆಯನ್ನು ಹೆಚ್ಚಿಸಲು, ಆರೋಗ್ಯವನ್ನು ಸುಧಾರಿಸಲು, ರೈತರನ್ನು ಸಬಲೀಕರಣಗೊಳಿಸಲು ನೆರವಾಗುತ್ತದೆ...
ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಕುರಿತಾದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಯೋಜನೆಯಡಿ 5 ಕೆ.ಜಿ ಅಕ್ಕಿ ಬದಲಿಗೆ ನೀಡಲಾಗುತ್ತಿದ್ದ 170 ರೂ. ಹಣವನ್ನು ನಿಲ್ಲಿಸಲಾಗುತ್ತದೆ. ಫೆಬ್ರವರಿಯಿಂದ ಸಂಪೂರ್ಣ 10 ಕೆ.ಜಿ ಅಕ್ಕಿಯನ್ನೇ ನೀಡಲಾಗುತ್ತದೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಅನ್ನಭಾಗ್ಯ ಯೋಜನೆಯಡಿ ಪಡಿತರದಾರರಿಗೆ ತಲಾ 10 ಕೆ.ಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಯೋಜನೆಯನ್ನೂ ಜಾರಿಗೂ ತಂದಿತು. ಆದರೆ, 10 ಕೆ.ಜಿ ಅಕ್ಕಿ ವಿತರಿಸಲು ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ಕೊಡಲು ಕೇಂದ್ರ ಸರ್ಕಾರ ನಿರಾಕರಿಸಿತು. ಅನ್ನಭಾಗ್ಯ ಕೊಕ್ಕೆ ಹಾಕಲು ಯತ್ನಿಸಿತು. ರಾಜ್ಯ ಸರ್ಕಾರವು ವಿವಿಧ ರಾಜ್ಯಗಳಿಂದ ನೇರವಾಗಿ ಅಕ್ಕಿ ಖರೀದಿಸಲು ನಡೆಸಿದ ಪ್ರಯತ್ನಗಳೂ ವಿಫಲವಾದವು. ಆ ಬಳಿಕ, 5 ಅಕ್ಕಿ ವಿತರಿಸುತ್ತೇವೆ. ಉಳಿದ 5 ಕೆ.ಜಿ ಅಕ್ಕಿ ಬದಲಿಗೆ 170 ರೂ. (ಕೆಜಿಗೆ 34 ರೂ.) ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ಜಮೆ ಮಾಡುವುದಾಗಿ ಘೋಷಿಸಿತು.
ಕಳೆದ ಒಂದೂವರೆ ವರ್ಷಗಳಿಂದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಇದೇ ಪ್ರಕ್ರಿಯೆ ನಡೆದುಬಂದಿದೆ. ಆದರೆ, ಇದೀಗ, ಕೇಂದ್ರ ಸರ್ಕಾರವು ಭಾರತೀಯ ಆಹಾರ ನಿಗಮದಲ್ಲಿ (ಎಫ್‌ಸಿಐ) ಹೆಚ್ಚು ಅಕ್ಕಿ ಸಂಗ್ರಹವಿದೆ. ರಾಜ್ಯಕ್ಕೆ ಮಾರಾಟ ಮಾಡಲು ಸಿದ್ದರಿದ್ದೇವೆ ಎಂದು ಹೇಳಿದೆ. ರಾಜ್ಯ ಸರ್ಕಾರ ಕೂಡ, ‘ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ’ (ಓಎಂಎಸ್‌ಎಸ್) ಅಡಿಯಲ್ಲಿ ಎಫ್‌ಸಿಐನಿಂದ ಅಕ್ಕಿ ಖರೀದಿಸುತ್ತೇವೆ. ಫೆಬ್ರವರಿಯಿಂದ ಹಣದ ಬದಲಿಗೆ ಅಕ್ಕಿಯನ್ನೇ ವಿತರಿಸುತ್ತೇವೆ ಎಂದು ಹೇಳಿದೆ.
ಪಡಿತರದಾರರಿಗೆ ತಿಂಗಳಿಗೆ 10 ಕೆ.ಜಿ ಅಕ್ಕಿ ಬೇಕೇ – ಸರ್ಕಾರ ಹೊರಗಿನಿಂದ ಖರೀದಿಸಬೇಕೇ?
ರಾಜ್ಯದಲ್ಲಿ ಒಟ್ಟು 4.45 ಕೋಟಿ ಜನರು ಪಡಿತರ ಯೋಜನೆಯಡಿ ಹೆಸರು ನೋಂದಾಯಿಸಿದ್ದಾರೆ. ಸರ್ಕಾರದಿಂದ ನೀಡಲಾಗುವ ಪಡಿತರ ಆಹಾರವನ್ನು ಪಡೆದು ಜೀವನ ಸಾಗಿಸುತ್ತಿದ್ದಾರೆ. ಪಡಿತರ ಆಹಾರವನ್ನೇ ಅವಲಂಬಿಸಿದ್ದಾರೆ. ಈ ಪ್ರಮಾಣದ ಜನರಿಗೆ ಹೆಚ್ಚುವರಿ 5 ಕೆ.ಜಿ ಅಕ್ಕಿ ವಿತರಣೆಗಾಗಿಯೇ ಸರ್ಕಾರವು ವಾರ್ಷಿಕ 9,020 ಕೋಟಿ ರೂ.ಗಳನ್ನು ವ್ಯಯಿಸುತ್ತಿದೆ.
ಪಡಿತರದಾರರಿಗೆ 10 ಕೆ.ಜಿ ಅಕ್ಕಿ ನೀಡುವುದು ಹಸಿವನ್ನು ನೀಗಿಸುತ್ತದೆ. ಆದರೆ, ಹಸಿವು ನೀಗಿಸುವುದಷ್ಟೇ ಸಾಕಾಗದು. ಅಕ್ಕಿ ಅಥವಾ ಅನ್ನದಲ್ಲಿ ದೊರೆಯುವುದು ಕಾರ್ಬೋಹೈಡ್ರೇಟ್ ಮಾತ್ರ. ಹೆಚ್ಚಿನ ಪ್ರೊಟೀನ್ ಹಾಗೂ ವಿಟಮಿನ್ ಸೇರಿದಂತೆ ಅಗತ್ಯ ಪೌಷ್ಟಿಕಾಂಶವು ಅಕ್ಕಿಯಿಂದ ದೊರೆಯುವುದಿಲ್ಲ. ಹೀಗಾಗಿಯೇ, ಇತ್ತೀಚಿನ ದಿನಗಳಲ್ಲಿ ಜನರು ಅನ್ನ (ಅಕ್ಕಿ) ತಿನ್ನುವುದನ್ನು ಕಡಿಮೆ ಮಾಡುತ್ತಿದ್ದಾರೆ. ಪೋಷಕಾಂಶವುಳ್ಳ ಏಕದಳ-ದ್ವಿದಳ ಧಾನ್ಯಗಳು, ತರಕಾರಿ, ಕಾಳುಗಳನ್ನು ಬಳಸಲು ಮುಂದಾಗಿದ್ದಾರೆ. ವೈದ್ಯರು ಕೂಡ ಇದೇ ಸಲಹೆಯನ್ನೂ ನೀಡುತ್ತಿದ್ದಾರೆ.
ಹೀಗಾಗಿಯೇ, ಬಹುತೇಕ ಪಡಿತರದಾರರು ತಮಗೆ ದೊರೆಯುವ ಅಕ್ಕಿಯನ್ನು ಇತರರಿಗೆ ಮಾರಾಟ ಮಾಡಿ, ಇತರ ಅಗತ್ಯ ಆಹಾರ ಧಾನ್ಯಗಳನ್ನು ಖರೀದಿಸುತ್ತಿದ್ದಾರೆ. ಹೀಗಾಗಿ, ಪಡಿತರ ವ್ಯವಸ್ಥೆಯಲ್ಲಿ ವಿತರಿಸಲಾದ ಅಕ್ಕಿಯಲ್ಲಿ ಹೆಚ್ಚಿನ ಅಕ್ಕಿ ನಾನಾ ರೀತಿಯಲ್ಲಿ ಮಾರಾಟವಾಗಿ ಮರಳಿ ಆಹಾರ ಸರಬರಾಜು ಇಲಾಖೆ ಗೋಡೌನ್‌ಗೆ ಬರುತ್ತಿದೆ ಎಂದೂ ಹೇಳಲಾಗುತ್ತಿದೆ.
ಜೊತೆಗೆ, ಕೇಂದ್ರ ಸರ್ಕಾರ ಅಥವಾ ಹೊರ ರಾಜ್ಯಗಳಿಂದ ಅಕ್ಕಿ ಖರೀದಿಗೆ ರಾಜ್ಯ ಸರ್ಕಾರವು ವಾರ್ಷಿಕ 9,020 ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದೆ. ಈ ಹಣವು ಹೊರ ರಾಜ್ಯ ಅಥವಾ ಕೇಂದ್ರದ ಪಾಲಾಗುತ್ತದೆ. ಕರ್ನಾಟಕದ ಹಣ ರಾಜ್ಯದಿಂದ ಹೊರಹೋಗುತ್ತಿದೆ. ಇದು ರಾಜ್ಯದ ಆರ್ಥಿಕತೆಗೆ ಯಾವುದೇ ಕೊಡುಗೆ ನೀಡುವುದಿಲ್ಲ. ರಾಜ್ಯದ ರೈತರಿಗೆ ಅನುಕೂಲವಾಗಲೀ, ರಾಜ್ಯದ ಜನರಿಗೆ ಯಾವುದೇ ರೀತಿಯ ಉಪಯೋಗವಾಗಲೀ ಆಗುವುದಿಲ್ಲ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ.
ಆದ್ದರಿಂದ, ರಾಜ್ಯದ ಹಣ ರಾಜ್ಯದಲ್ಲಿ ಬಳಕೆಯಾಗಬೇಕು. ರಾಜ್ಯದಲ್ಲಿಯೇ ಉಳಿಯಬೇಕು ಎಂದು ಆಗ್ರಹಿಸಿದ್ದಾರೆ. ರೈತ ಸಂಘವೂ ಅದನ್ನೇ ಹೇಳುತ್ತದೆ. ಅದಕ್ಕಾಗಿ, ಒಂದು ವರ್ಷದ ಹಿಂದೆಯೇ ರೈತ ಸಂಘ ಮತ್ತು ಆರ್ಥಿಕ-ಆಹಾರ ತಜ್ಞರು ಸರ್ಕಾರದ ಮುಂದೆ ಪ್ರಸ್ತಾವನೆಯನ್ನೂ ಇಟ್ಟಿದ್ದಾರೆ. ಆದರೆ, ಅದಕ್ಕೆ ಸರ್ಕಾರ ಈವರೆಗೆ ಮನ್ನಣೆ ಕೊಟ್ಟಿಲ್ಲ. ಪರಿಗಣಿಸಿಲ್ಲ.
ತಜ್ಞರು ಮತ್ತು ರೈತ ಸಂಘ ಹೇಳುವುದೇನು?
ಪಡಿತರ ಯೋಜನೆಯಡಿ ಪಡಿತರದಾರರಿಗೆ ಕೇವಲ ಅಕ್ಕಿ ಮಾತ್ರವೇ ವಿತರಿಸಬಾರದು. ಈಗ ವಿತರಣೆಯಾಗುತ್ತಿರುವ ತಲಾ 5 ಕೆ.ಜಿ. ಅಕ್ಕಿ ಆಹಾರಕ್ಕೆ (ಅನ್ನ) ಸಾಕಾಗುತ್ತದೆ. ಉಳಿದ, 5 ಕೆ.ಜಿ. ಅಕ್ಕಿ ಬದಲಿಗೆ ಜೋಳ, ರಾಗಿ, ತೊಗರಿ ಬೇಳೆ, ಕಡಲೆಕಾಯಿ ಎಣ್ಣೆಯನ್ನು ವಿತರಿಸಬೇಕು ಎಂದು ಆಹಾರ ತಜ್ಞರು ಹೇಳುತ್ತಾರೆ.
ಈ ಎಲ್ಲ ಆಹಾರ ಸಾಮಗ್ರಿಗಳನ್ನು ವಿತರಿಸುವುದರಿಂದ ಪಡಿತರದಾರರಿಗೆ ಪೌಷ್ಟಿಕಾಂಶಯುಕ್ತ ಆಹಾರ ದೊರೆಯುತ್ತದೆ. ಪ್ರೋಟೀನ್ ಸೇರಿದಂತೆ ಅಗತ್ಯವಿರುವ ಎಲ್ಲ ರೀತಿಯ ಪೋಷಕಾಂಶಗಳನ್ನೂ ಒದಗಿಸಿದಂತಾಗುತ್ತದೆ. ಉತ್ತಮ ಆಹಾರ ಸೇವನೆಯಿಂದ ಜನರ ಆರೋಗ್ಯ ಸ್ಥಿತಿ ಮತ್ತಷ್ಟು ಸುಧಾರಿಸುತ್ತದೆ. ಸರ್ಕಾರಕ್ಕೆ ಹೆಚ್ಚಿನ ಹೊರೆಯೂ ಆಗುವುದಿಲ್ಲ ಎಂಬುದು ತಜ್ಞರ ವಾದ.
ರೈತ ಸಂಘ ಹೇಳುವಂತೆ, ರಾಜ್ಯ ಸರ್ಕಾರವು ರಾಜ್ಯದಲ್ಲಿಯೇ ರೈತರು ಬೆಳೆಯುವ ಅಕ್ಕಿಯನ್ನು ಖರೀದಿಸಬೇಕು. ಜೊತೆಗೆ, ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಯುವ ರಾಗಿ ಮತ್ತು ಜೋಳವನ್ನು ಪಡಿತರ ವ್ಯವಸ್ಥೆಯು ಒಳಗೊಳ್ಳಬೇಕು. ರಾಗಿ, ಜೋಳವನ್ನು ಕನಿಷ್ಠ ಬೆಂಬಲ ಬೆಲೆಯೊಂದಿಗೆ (ಎಂಎಸ್‌ಪಿ) ಸರ್ಕಾರ ಖರೀದಿಸಬೇಕು. ದಕ್ಷಿಣ ಕರ್ನಾಟಕ ಭಾಗದ ಪಡಿತರದಾರರಿಗೆ ಪ್ರತಿ ಕಾರ್ಡ್‌ಗೆ 5 ಕೆ.ಜಿ ರಾಗಿಯನ್ನೂ, ಉತ್ತರ ಕರ್ನಾಟಕ ಭಾಗದವರಿಗೆ 5 ಕೆ.ಜಿ ಜೋಳವನ್ನೂ ವಿತರಣೆ ಮಾಡಬೇಕು. ಜೊತೆಗೆ, ಪ್ರತಿ ಕಾರ್ಡ್‌ಗೆ 1 ಕೆ.ಜಿ ತೊಗರಿಬೇಳೆ ಮತ್ತು 1 ಲೀಟರ್ ಕಡಲೆಕಾಯಿ ಎಣ್ಣೆ ವಿತರಿಸಬೇಕು.
ಈ ವರದಿ ಓದಿದ್ದೀರಾ?: ಕರ್ನಾಟಕ | 5 ವರ್ಷದೊಳಗಿನ 1.3 ಲಕ್ಷ ಮಕ್ಕಳನ್ನು ಕಾಡುತ್ತಿದೆ ಅಪೌಷ್ಟಿಕತೆ
ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ ಜೊತೆಗೆ ಜೋಳ, ರಾಗಿ, ತೊಗರಿ ಹಾಗೂ ಕಡಲೆಕಾಯಿ ಎಣ್ಣೆಯನ್ನು ಒಳಗೊಳ್ಳುವುದರಿಂದ ರಾಜ್ಯಕ್ಕೆ ನಾನಾ ರೀತಿಯಲ್ಲಿ ಉಪಯೋಗಗಳಿವೆ. ಇದಕ್ಕಾಗಿ ಸರ್ಕಾರವು ಹೆಚ್ಚುವರಿ ಹಣವನ್ನೂ ವ್ಯಯಿಸಬೇಕಾಗಿಲ್ಲ. ಬದಲಾಗಿ, ಸರ್ಕಾರಕ್ಕೇ ಹೆಚ್ಚಿನ ಲಾಭವಾಗುತ್ತದೆ. ರಾಜ್ಯದ ಆರ್ಥಿಕತೆಯೂ ಹೆಚ್ಚುತ್ತದೆ. ಅದು ಹೇಗೆ?
- ಸರ್ಕಾರವು ಹೆಚ್ಚುವರಿ 5 ಕೆ.ಜಿ. ಅಕ್ಕಿ ವಿತರಿಸಲು ವಾರ್ಷಿಕ ಖರ್ಚು ಮಾಡುವ 9,020 ಕೋಟಿ ರೂ.ಗಿಂತ ಕಡಿಮೆ ಖರ್ಚಾಗುತ್ತದೆ.
- ರಾಗಿ, ಜೋಳ, ತೊಗರಿ ಮತ್ತು ಕಡಲೆಕಾಯಿ ಖರೀದಿಗೆ 6.800 ಕೋಟಿ ರೂ. ಸಾಕಾಗುವುದರಿಂದ 2,200 ಕೋಟಿ ರೂ. ಸರ್ಕಾರದ ಬೊಕ್ಕಸದಲ್ಲೇ ಉಳಿಯುತ್ತದೆ.
- ರಾಗಿ, ಜೋಳ, ತೊಗರಿ ಮತ್ತು ಕಡಲೆಕಾಯಿಯನ್ನು ರಾಜ್ಯದ ರೈತರೇ ಹೆಚ್ಚಾಗಿ ಬೆಳೆಯುವುದರಿಂದ ಮತ್ತು ಅದನ್ನು ಸರ್ಕಾರವು ಖರೀದಿಸುವುದರಿಂದ ಸರ್ಕಾರ ಹಣ ರಾಜ್ಯದಲ್ಲಿಯೇ ಉಳಿಯುತ್ತದೆ.
- ಈ ಪದಾರ್ಥಗಳನ್ನು ವಿತರಿಸುವುದರಿಂದ ರಾಜ್ಯದ ಜನರಲ್ಲಿ ಪೌಷ್ಟಿಕತೆ ಹೆಚ್ಚುತ್ತದೆ.
- ಜನರ ಆರೋಗ್ಯವೂ ಸುಧಾರಿಸುತ್ತದೆ.
- ರಾಗಿ, ಜೋಳ, ತೊಗರಿ ಮತ್ತು ಕಡಲೆಕಾಯಿ ಬೆಳೆಗಳಿಗೆ ಸರ್ಕಾರವು ನಿರ್ದಿಷ್ಟ ಬೆಲೆ ನಿಗದಿ ಮಾಡಿ, ಖರೀದಿಸುವುದರಿಂದ ಖಾಸಗಿಯವರೂ ಅದೇ ಬೆಲೆಗೆ ಖರೀದಿಸಬೇಕಾಗುತ್ತದೆ. ರೈತರಿಗೆ ಅನುಕೂಲವಾಗುತ್ತದೆ.
- ರಾಜ್ಯದಲ್ಲಿ ಬೆಳೆಯಲಾಗುವ ಒಟ್ಟು ಬೆಳೆಯಲ್ಲಿ 10% ಉತ್ಪನ್ನವನ್ನು ಮಾತ್ರವೇ ಸರ್ಕಾರ ಖರೀದಿಸಿದರೂ, ಸರ್ಕಾರ ನಿಗದಿ ಮಾಡುವ ಬೆಲೆಯಿಂದ ಎಂಎಸ್‌ಪಿ ನಿಗದಿಯಾಗುತ್ತದೆ. ರೈತರಿಗೆ ಲಾಭವಾಗುತ್ತದೆ.
- ಬೆಲೆ ನಿಗದಿ, ಮಾರಾಟ ಹೆಚ್ಚುವುದರಿಂದ ಹೆಚ್ಚಿನ ಯುವಜನರನ್ನು ಕೃಷಿಯಲ್ಲಿ ತೊಡಗಿಸಬೇಕು. ಅದು ಸಾಧ್ಯವಾದಲ್ಲಿ ನಿರುದ್ಯೋಗ ಸಮಸ್ಯೆ ತಗ್ಗುತ್ತದೆ.
- ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸಲು ಕೂಡ ಸಾಧ್ಯವಾಗುತ್ತದೆ.
ಪಡಿತರ ವ್ಯವಸ್ಥೆಯಲ್ಲಿ ಸ್ಥಳೀಯ ಆಹಾರ ಉತ್ಪನ್ನಗಳನ್ನು ಒಳಗೊಳ್ಳುವುದರಿಂದ ರೈತರ ಸಬಲೀಕರಣದೊಂದಿಗೆ ಪಡಿತರ ವ್ಯವಸ್ಥೆಯನ್ನು ಸ್ವಾವಲಂಬಿ ಮತ್ತು ಸೃದೃಢಗೊಳಿಸಿ, ಕೇಂದ್ರದ ಮೇಲಿನ ಅವಲಂಬನೆಯಿಂದ ಹೊರಬರುವ ಮೂಲಕ ಕರ್ನಾಟಕ ಸರ್ಕಾರವು ಇಡೀ ದೇಶಕ್ಕೆ ಮಾದರಿಯಾಗುತ್ತದೆ. ಇದೆಲ್ಲವೂ ಪ್ರಾಯೋಗಿಕವಾಗಿ ಸಾಧ್ಯ ಎಂಬುದು ರೈತ ಸಂಘ ಮತ್ತು ತಜ್ಞರ ಬಲವಾದ ಅಭಿಪ್ರಾಯ.
ಪ್ರಾಯೋಗಿಕವಾಗಿ ಹೇಗೆ ಸಾಧ್ಯ?
ರಾಗಿ, ಜೋಳ, ತೊಗರಿಬೇಳೆ ಮತ್ತು ಕಡಲೆಕಾಯಿ ಎಣ್ಣೆಯನ್ನು ಪಡಿತರ ವ್ಯವಸ್ಥೆಯಲ್ಲಿ ವಿತರಿಸುವುದರಿಂದ ಸ್ಥಳೀಯ ಬೆಳೆಗಳಿಗೆ ಬೇಡಿಕೆ-ಪೂರೈಕೆ ಹೆಚ್ಚುತ್ತದೆ. ಪಡಿತರದಲ್ಲಿ ವಿತರಣೆಗೆ ವಾರ್ಷಿಕ ರಾಗಿ ಮತ್ತು ಜೋಳ ತಲಾ 3.3 ಲಕ್ಷ ಟನ್ ಬೇಕಾಗುತ್ತದೆ. ಜೊತೆಗೆ, ತೊಗರಿ 1.6 ಲಕ್ಷ ಟನ್ ಹಾಗೂ ಕಡಲೆಕಾಯಿ 1.3 ಲಕ್ಷ ಟನ್ ಬೇಕಾಗುತ್ತದೆ.
ಈ ಉತ್ಪನ್ನಗಳಲ್ಲಿ – ರಾಗಿ ಕೆ.ಜಿ.ಗೆ 43.5 ರೂ.ಗಳಂತೆ 1,435 ಕೋಟಿ ರೂ., ಜೋಳ ಕೆ.ಜಿ.ಗೆ 37 ರೂ.ಗಳಂತೆ 1,221 ಕೋಟಿ ರೂ., ತೊಗರಿ ಕೆ.ಜಿ.ಗೆ 90 ರೂ.ಗಳಂತೆ 1440 ಕೋಟಿ ರೂ. ಹಾಗೂ ಕಡಲೆಕಾಯಿ ಕೆ.ಜಿ.ಗೆ 200 ರೂ.ಗಳಂತೆ 2,700 ಕೋಟಿ ರೂ. ಖರೀದಿ ವೆಚ್ಚವಾಗಲಿದೆ. ಇದು ವರ್ಷಕ್ಕೆ ಒಟ್ಟು 6,800 ಕೋಟಿ ರೂ. ವೆಚ್ಚವಾಗುತ್ತದೆ. ಇದು, ರಾಜ್ಯ ಸರ್ಕಾರವು ಈಗ ಅಕ್ಕಿ ಖರೀದಿಗಾಗಿ ವ್ಯಯಿಸುತ್ತಿರುವ 9,020 ಕೋಟಿ ರೂ.ಗೆ ಹೋಲಿಸಿದರೆ, ಇನ್ನೂ 1,200 ಕೋಟಿ ರೂ. ಕಡಿಮೆ ವೆಚ್ಚವಾಗಲಿದೆ.
ಅಲ್ಲದೆ, ಪ್ರಸ್ತುತ ರಾಜ್ಯದಲ್ಲಿ 11 ಲಕ್ಷ ಟನ್ ರಾಗಿ, 7 ಲಕ್ಷ ಟನ್ ಜೋಳ, 11 ಲಕ್ಷ ಟನ್ ತೊಗರಿ ಹಾಗೂ 4.5 ಲಕ್ಷ ಟನ್ ಕಡಲೆಕಾಯಿ ಬೆಳೆಯಾಗುತ್ತಿದೆ. ಈ ಪೈಕಿ ರೈತರು ತಮ್ಮ ಬಳಕೆಗಾಗಿ 5.5 ಟನ್ ರಾಗಿಯನ್ನೂ, 3.5 ಟನ್ ಜೋಳವನ್ನೂ ಹಾಗೂ 20% ತೊಗರಿಯನ್ನೂ ಬಳಸುತ್ತಿದ್ದಾರೆ. ಉಳಿದ ಸುಮಾರು 50%ನಿಂದ 80% ಬೆಳೆಗಳನ್ನು ಮಾರಾಟ ಮಾಡುತ್ತಿದ್ದಾರೆ.
ಮಾರಾಟವಾಗುವ ಬಹುತೇಕ ಉತ್ಪನ್ನಗಳನ್ನು ಪಡಿತರ ವ್ಯವಸ್ಥೆಗಾಗಿ ಸರ್ಕಾರವು ಖರೀದಿಸಿದರೆ, ಕೃಷಿ ಉತ್ಪನ್ನಗಳ ಪೂರೈಕೆ ಹೆಚ್ಚುತ್ತದೆ. ಉತ್ತಮ ಬೆಲೆಯೂ ದೊರೆಯುತ್ತದೆ. ಸರ್ಕಾರವೇ ಬೆಲೆ ನಿಗದಿ ಮಾಡುವುದರಿಂದ ಖಾಸಗಿ ಖರೀದಿದಾರರು ಅದೇ ಬೆಲೆಗೆ ಖರೀದಿ ಮಾಡಬೇಕಾಗುತ್ತದೆ. ರೈತರೂ ಸಬಲರಾಗುತ್ತಾರೆ. ರೈತರ ಆರ್ಥಿಕತೆಯ ಜೊತೆಗೆ ಗ್ರಾಮೀಣ ಆರ್ಥಿಕತೆ ಹಾಗೂ ರಾಜ್ಯದ ಆರ್ಥಿಕತೆ ಮತ್ತಷ್ಟು ಹೆಚ್ಚಾಗುತ್ತದೆ. ರೈತರ ಆತ್ಮಹತ್ಯೆಗಳನ್ನೂ ತಡೆಯಲು ಸಾಧ್ಯವಾಗುತ್ತದೆ.
ಹೀಗಾಗಿ, ಸ್ಥಳೀಯ ಮತ್ತು ಪೌಷ್ಟಿಕಾಂಶವುಳ್ಳ ಆಹಾರವನ್ನು ಪಡಿತರ ವ್ಯವಸ್ಥೆಯಲ್ಲಿ ಒಳಗೊಳ್ಳಲು ಸರ್ಕಾರ ತೆಗೆದುಕೊಳ್ಳಬಹುದಾದ ಒಂದು ಕ್ರಮವು ರಾಜ್ಯದಲ್ಲಿ ಸರ್ಕಾರ ಬೊಕ್ಕಸಕ್ಕೆ ಹೊರೆಯನ್ನು ತಗ್ಗಿಸಲು, ಪಡಿತರದಾರರಲ್ಲಿ ಪೌಷ್ಟಿಕತೆಯನ್ನು ಹೆಚ್ಚಿಸಲು, ಆರೋಗ್ಯವನ್ನು ಸುಧಾರಿಸಲು, ರೈತರನ್ನು ಸಬಲೀಕರಣಗೊಳಿಸಲು, ಕೃಷಿ ಮಾರುಕಟ್ಟೆಯಲ್ಲಿ ಎಂಎಸ್‌ಪಿ ಜಾರಿಗೆ ತರಲು, ರಾಜ್ಯದ ಹಣ ರಾಜ್ಯದಲ್ಲಿಯೇ ಉಳಿಯುವಂತೆ ಮಾಡಲು, ಆರ್ಥಿಕತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಬೇಕು. ರೈತ ಮುಖಂಡರು ಮತ್ತು ತಜ್ಞರೊಂದಿಗೆ ಸಮಾಲೋಚನೆ ನಡೆಸಬೇಕು.