ಪಂಚಮಸಾಲಿ ಸಮುದಾಯದ ವಿಚಾರದಲ್ಲಿ ಗಮನಿಸಬೇಕಾದ ವಿಚಾರ, ಸಮುದಾಯವೂ ಸರ್ಕಾರದ ಮುಂದೆ 2ಎ ಮೀಸಲಾತಿ ಕೊಡಬೇಕು ಎಂಬುದಕ್ಕೆ ಗಟ್ಟಿಯಾದ ವಾದ, ಡೇಟಾವನ್ನು ಮುಂದಿಟ್ಟಿಲ್ಲ. ಆದರೂ, ಮೀಸಲಾತಿ ಕೊಡಬೇಕೆಂದು ಒತ್ತಾಯಿಸುತ್ತಿದೆ. ಸರ್ಕಾರವು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆಂದು ಹೇಳುತ್ತಿದೆ.
ರಾಜ್ಯದಲ್ಲಿ ಮೀಸಲಾತಿ ಕುರಿತ ಚರ್ಚೆಗಳು, ಹೋರಾಟಗಳು ನಡೆಯುತ್ತಲೇ ಇವೆ. 30 ವರ್ಷಗಳ ಸುದೀರ್ಘ ಹೋರಾಟ ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ಫಲವಾಗಿ ಒಳಮೀಸಲಾತಿ ಜಾರಿಗೆ ಸರ್ಕಾರ ಒಪ್ಪಿಕೊಂಡಿದೆ. ಸಮೀಕ್ಷೆ ನಡೆಸಲು ಏಕಸದಸ್ಯ ಆಯೋಗ ರಚನೆ ಮಾಡಿದೆ. ಎಸ್‌ಸಿ/ಎಸ್‌ಟಿ ಸಮುದಾಯಗಳ ಹೋರಾಟ ತಾತ್ವಿಕ ಘಟ್ಟ ತಲುಪುತ್ತಿರುವ ಸಮಯದಲ್ಲಿ, ಪಂಚಮಸಾಲಿ ಮತ್ತು ಕುರುಬ ಸಮುದಾಯಗಳು ತಮ್ಮನ್ನು ಕ್ರಮವಾಗಿ 2ಎ ಮತ್ತು ಎಸ್‌ಟಿ ವರ್ಗಗಳಡಿ ತರಬೇಕೆಂದು ಮತ್ತೆ ಹೋರಾಟ ನಡೆಸುತ್ತಿವೆ.
ಪಂಚಮಸಾಲಿ ಸಮುದಾಯದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಮುದಾಯವು ಹೋರಾಟ ನಡೆಸುತ್ತಿದೆ. ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಎ2 ಮೀಸಲಾತಿ ನೀಡಬೇಕೆಂದು ಆಗ್ರಹಿಸುತ್ತಿದೆ. ಡಿಸೆಂಬರ್ 10ರಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ವೇಳೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದಾಗಿಯೇ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳುತ್ತಿದ್ದಾರೆ.
”ಸರ್ಕಾರ ಮೀಸಲಾತಿ ವಿಷಯದಲ್ಲಿ ಮುಕ್ತ ಮನಸ್ಸು ಹೊಂದಿದೆ. ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದೆ. ಎಲ್ಲ ದುರ್ಬಲ ವರ್ಗದವರಿಗೂ ನ್ಯಾಯ ದೊರೆಯಬೇಕು ಎಂಬುದೇ ನಮ್ಮ ನಿಲುವು. ಪ್ರವರ್ಗ-2ಎ ಅಡಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂಬ ಬೇಡಿಕೆ ಕುರಿತು ಕಾನೂನು ಪ್ರಕಾರ, ಸಂವಿಧಾನದ ಆಶಯಕ್ಕೆ ಅನುಗುಣವಾಗಿ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಹೇಳಿದ್ದಾರೆ.
ಅಂದಹಾಗೆ, ಲಿಂಗಾಯತ ಸಮುದಾಯದ ಒಳ ಜಾತಿಗಳಲ್ಲಿ ಪಂಚಮಸಾಲಿ ಸಮುದಾಯವೂ ಒಂದು. ಕಿತ್ತೂರನ್ನು ಆಳಿದ ರಾಣಿ ಚೆನ್ನಮ್ಮ ಕೂಡ ಇದೇ ಸಮುದಾಯದವರು. ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಕೆಲ ಭಾಗಗಳಲ್ಲಿ ಸಮುದಾಯವು ನೆಲೆಸಿದೆ. ಕರ್ನಾಟಕದಲ್ಲಿ ಸರಿಸುಮಾರು 90 ಲಕ್ಷ ಆಸುಪಾಸಿನಷ್ಟು ಜನಸಂಖ್ಯೆ ಹೊಂದಿರುವ ಸಮುದಾಯವು ಒಬಿಸಿ ವರ್ಗದಲ್ಲಿ 3ಎ ಅಡಿಯಲ್ಲಿ ಮೀಸಲಾತಿಯನ್ನೂ ಪಡೆದಿದೆ. ಕೃಷಿ ಮತ್ತು ಕೃಷಿ ಸಂಬಂಧಿತ ಕಸುಬನ್ನೇ ಮೂಲ ವೃತ್ತಿಯಾಗಿಸಿಕೊಂಡಿದೆ.
ಅತಿ ಹಿಂದುಳಿದ ಸಮುದಾಯವೇನೂ ಅಲ್ಲದ ಪಂಚಮಸಾಲಿಗರಿಗೆ ಇತರ ಹಿಂದುಳಿದ ವರ್ಗಗಳ ಅಡಿಯಲ್ಲಿ 3ಎ ಮೀಸಲಾತಿ ನೀಡಲಾಗುತ್ತಿದೆ. ಆದಾಗ್ಯೂ, ‘ಲಿಂಗಾಯತ ಸಮುದಾಯದೊಳಗೆ ತಮ್ಮ ಸಮುದಾಯ ತೀರಾ ಹಿಂದುಳಿದಿದೆ. ಲಿಂಗಾಯತ ಸಮುದಾಯದ ಸುಮಾರು 34 ಸಮುದಾಯಗಳು 2ಎ ಮೀಸಲಾತಿ ಪಡೆದಿವೆ. ಆದರೆ, ಉದ್ಯೋಗ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಪಂಚಮಸಾಲಿ ಸಮುದಾಯವು ತೀರಾ ಹಿಂದುಳಿದಿದೆ. ಹೀಗಾಗಿ, ಪಂಚಮಸಾಲಿ ಸಮುದಾಯಕ್ಕೂ 2ಎ ಮೀಸಲಾತಿಯನ್ನೇ ಕೊಡಬೇಕು’ ಎಂದು ಸಮುದಾಯವು ಒತ್ತಾಯಿಸುತ್ತಿದೆ.
ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಮುಂದಿನ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸುತ್ತೇವೆ. ಅಧಿಕಾರದಿಂದ ಕಿತ್ತೊಗೆಯುತ್ತೇವೆ ಎಂಬ ಮಾತನಾಡಿದ್ದಾರೆ. ಪಂಚಮಸಾಲಿ ಸಮುದಾಯ ಮಾತ್ರವಲ್ಲದೆ, ಇನ್ನೂ ಕೆಲವು ಸಮುದಾಯಗಳು ತಮ್ಮ ಪ್ರಾಬಲ್ಯತೆ ಹೆಚ್ಚಿದೆ ಎಂಬ ಕಾರಣವನ್ನೇ ಮುಂದಿಟ್ಟು, ತಮಗೆ ಇಂತಹ ವರ್ಗದಲ್ಲಿ ಮೀಸಲಾತಿ ಬೇಕೆಂದು ಹೋರಾಟ ಮಾಡುತ್ತಿವೆ. ಬೇಡಿಕೆ ಇಡುತ್ತಿವೆ.
ಆ ಸಮುದಾಯಗಳು ಬಲಾಢ್ಯವಾಗಿವೆ. ಹೆಚ್ಚಿನ ಜನಸಂಖ್ಯೆ ಹೊಂದಿವೆ. ಅವು ಚುನಾವಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂಬ ಕಾರಣಕ್ಕಾಗಿ, ಜಯಮೃತ್ಯುಂಜಯ ಸ್ವಾಮೀಜಿ ಅವರಂತಹ ಎಚ್ಚರಿಕೆಯ ಮಾತುಗಳಿಗೆ ಅಂಜಿ, ಅವರ ಬೇಡಿಕೆಯಂತೆ ಮೀಸಲಾತಿ ಕೊಡುತ್ತೇವೆ ಎಂದು ಸರ್ಕಾರಗಳು ಹೇಳಲು ಸಾಧ್ಯವಿಲ್ಲ.
ಯಾವುದೇ ಸಮುದಾಯವು ಮೀಸಲಾತಿ ಕೇಳುವುದು, ಬೇಡಿಕೆ ಇಡುವುದು ಹಾಗೂ ಸರ್ಕಾರಗಳು ಅದಕ್ಕೆ ಸ್ಪಂದಿಸುವುದು ತಪ್ಪೇನು ಅಲ್ಲ. ಆದರೆ, ಯಾವುದೇ ಸಮುದಾಯಕ್ಕೆ ಆದ್ಯತೆ ನೀಡಬೇಕೆಂದರೆ, ಮೀಸಲಾತಿಯ ಪಟ್ಟಿಯಲ್ಲಿ ಬದಲಾವಣೆ ಮಾಡಬೇಕೆಂದರೆ, ಅದಕ್ಕೆ ವೈಜ್ಞಾನಿಕವಾದ ಕಾರಣ, ದಾಖಲೆ, ಸಮೀಕ್ಷಾ ವರದಿಗಳು ಇರಬೇಕು.
ನಿರ್ದಿಷ್ಟ ವರ್ಗದಲ್ಲಿ ಮೀಸಲಾತಿ ಕೇಳುವ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ನೆಲೆಯಲ್ಲಿ ಯಾವ ಸಮುದಾಯ ಎಷ್ಟು ಹಿಂದುಳಿದಿದೆ ಎಂಬುದರ ಮೇಲೆ ಆ ಸಮುದಾಯಕ್ಕೆ ಮೀಸಲಾತಿ ಒದಗಿಸಬೇಕೆಂದು ಸಂವಿಧಾನದ 15ನೇ ಮತ್ತು 29ನೇ ವಿಧಿ ಹೇಳುತ್ತದೆ. ಅದರಂತೆಯೇ ಸಮುದಾಯಗಳು ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿ ಅಥವಾ ಹಿಂದುಳಿಯುವಿಕೆಯ ಆಧಾರದ ಮೇಲೆ ಮೀಸಲಾತಿ ಸೌಲಭ್ಯ ಒದಗಿಸಬೇಕು. ಈ ಮಾನದಂಡಗಳಿಗೆ ಅನುಗುಣವಾಗಿಯೇ ಮೀಸಲಾತಿ ಬೇಡಿಕೆಯನ್ನೂ ಸಮುದಾಯಗಳು ಸರ್ಕಾರಗಳ ಮುಂದಿಡಬೇಕು.
ಆದರೆ, ಪಂಚಮಸಾಲಿ ಸಮುದಾಯವು ತಾವು ಬಲಿಷ್ಠ ಸಮುದಾಯ ಎಂಬ ಕಾರಣಕ್ಕೆ ಮೀಸಲಾತಿಗೆ ಬೇಡಿಕೆ ಇಡುವುದು ಅಥವಾ ಸರ್ಕಾರವನ್ನು ಉರುಳಿಸುತ್ತೇವೆ ಎನ್ನುವುದು ಅಕ್ಷಮ್ಯ. ಬದಲಾಗಿ, ತಮ್ಮ ಬೇಡಿಕೆಯನ್ನು ಒಪ್ಪಿಕೊಳ್ಳುವಂತಹ, ಅಗತ್ಯವಿರುವ ಡೇಟಾಗಳು ಮತ್ತು ವಾದವನ್ನು ಮುಂದಿಡಬೇಕು. ಸಮುದಾಯದ ಬೇಡಿಕೆಗಳ ಬಗ್ಗೆ ಸರ್ಕಾರವು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಮೀಕ್ಷೆ ನಡೆಸಬೇಕು. ಆಯೋಗವು ದತ್ತಾಂಶ ಸಂಗ್ರಹಿಸಬೇಕು. ಅದರಂತೆ, ಸಮುದಾಯಕ್ಕೆ ಇಂತಹ ವರ್ಗದಲ್ಲಿ ಮೀಸಲಾತಿ ಕೊಡಬೇಕೆಂದು ಶಿಫಾರಸು ಮಾಡಬೇಕು. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.
ಈ ವರದಿ ಓದಿದ್ದೀರಾ?: ಬಾಬರಿ ಮಸೀದಿ ತೀರ್ಪನ್ನೇ ತಿಪ್ಪೆಗೆಸದ ಸಂಘಿಗಳು, ಸುಪ್ರೀಂನ ‘ಬುಲ್ಡೋಜರ್’ ತೀರ್ಪನ್ನು ಪಾಲಿಸುವರೇ?
ಪಂಚಮಸಾಲಿ ಸಮುದಾಯದ ವಿಚಾರದಲ್ಲಿ ಗಮನಿಸಬೇಕಾದ ವಿಚಾರ, ಸಮುದಾಯವೂ ಸರ್ಕಾರದ ಮುಂದೆ ಯಾಕೆ 2ಎ ಮೀಸಲಾತಿ ಕೊಡಬೇಕು ಎಂಬುದಕ್ಕೆ ಗಟ್ಟಿಯಾದ ವಾದ, ಡೇಟಾವನ್ನು ಮುಂದಿಟ್ಟಿಲ್ಲ. ಆದರೂ, ಮೀಸಲಾತಿ ಕೊಡಬೇಕೆಂದು ಒತ್ತಾಯಿಸುತ್ತಿದೆ. ಸರ್ಕಾರವು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆಂದು ಹೇಳುತ್ತಿದೆ.
ಅಂತೆಯೇ, ಈಗಾಗಲೇ 2ಎ ಪ್ರವರ್ಗದಡಿ 101 ಹಿಂದುಳಿದ ಜಾತಿಗಳು ಮೀಸಲಾತಿ ಪಡೆದಿವೆ. ಅವುಗಳಲ್ಲಿ ಕುರುಬ ಸಮುದಾಯವೂ ಒಂದು. 2ಎ ಅಡಿಯಲ್ಲಿರುವ ಜಾತಿಗಳಲ್ಲಿ ಕುರುಬ ಸಮುದಾಯವೇ ದೊಡ್ಡ ಸಮುದಾಯ. ಆದರೆ, ಕುರುಬ ಸಮುದಾಯ ಈಗ ತಮ್ಮನ್ನು ಎಸ್‌ಟಿ ವರ್ಗಕ್ಕೆ ಸೇರಿಸಬೇಕು. ಎಸ್‌ಟಿ ಮೀಸಲಾತಿ ಕೊಡಬೇಕೆಂದು ಒತ್ತಾಯಿಸುತ್ತಿದೆ.
ಗಮನಾರ್ಹವಾಗಿ, ಕುರುಬ ಸಮುದಾಯದೊಳಗೆ ಆದಿವಾಸಿ ಸಮುದಾಯಗಳೂ ಇವೆ. ಜೇನು ಕುರುಬ, ಕಾಡು ಕುರುಬರಂತಹ ಸಮುದಾಯಗಳು ಎಸ್‌ಟಿ ಮೀಸಲಾತಿ ಪಡೆದಿವೆ. ಆದರೆ, ಕುರಿ ಸಾಕಾಣಿಕೆ ಮಾಡುವ ಕುರುಬ ಸಮುದಾಯ ಆದಿವಾಸಿ ಅಥವಾ ಬುಡಕಟ್ಟು ಸಮುದಾಯವಲ್ಲ. ಈ ಸಮುದಾಯ ಹಿಂದುಳಿದ ವರ್ಗಗಳಿಗೆ ಸೇರಿದ ಸಮುದಾಯ. ಹಾಗಾಗಿಯೇ, 2ಎ ಮೀಸಲಾತಿ ಪಡೆದಿದೆ. ಆದಾಗ್ಯೂ, ಎಸ್‌ಟಿ ಮೀಸಲಾತಿ ಬೇಕೆಂದು ಸಮುದಾಯ ಕೇಳುತ್ತಿದೆ. ಈ ಸಮುದಾಯವೂ ತನ್ನ ಬೇಡಿಕೆಗೆ ನಿರ್ದಿಷ್ಟ ದತ್ತಾಂಶ, ವಾದಗಳನ್ನು ಮುಂದಿಟ್ಟಿಲ್ಲ.
ದಕ್ಷಿಣ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರಬಲವಾಗಿರುವ ಒಕ್ಕಲಿಗ ಸಮುದಾಯವೂ ಹಿಂದೆ ಮೀಸಲಾತಿಗಾಗಿ ಹೋರಾಟ ನಡೆಸಿತ್ತು. ಆಗ, ತನ್ನ ವಾದವನ್ನೂ ಸರ್ಕಾರದ ಮುಂದಿಟ್ಟಿತ್ತು. ಬಳಿಕ, ಸರ್ಕಾರ ಕೂಡ ಸಮೀಕ್ಷೆ ನಡೆಸಿತು. ಸಮೀಕ್ಷಾ ವರದಿಯಲ್ಲಿ ನಗರ ಭಾಗದ ಒಕ್ಕಲಿಗರಿಗೆ ಹೋಲಿಸಿದರೆ, ಗ್ರಾಮೀಣ ಭಾಗದ ಒಕ್ಕಲಿಗ ಸಮುದಾಯವು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ ಎಂಬುದನ್ನು ಸೂಚಿಸಿತು. ಅದರಂತೆ, ಗ್ರಾಮೀಣ ಭಾಗದ ಒಕ್ಕಲಿಗರಿಗೆ ಒಬಿಸಿ ಪ್ರವರ್ಗ 3ಎ ಅಡಿಯಲ್ಲಿ ಮೀಸಲಾತಿ ನೀಡಲಾಯಿತು. ಅಂತೆಯೇ, ಲಿಂಗಾಯತ ಸಮುದಾಯದ ಹಲವು ಉಪ ಪಂಗಡಗಳು 2ಎ, 3ಎ ಅಡಿಯಲ್ಲಿ ಮೀಸಲಾತಿ ಪಡೆದಿವೆ.
ಈಗ, ಮತ್ತೊಂದು ವರ್ಗದಡಿ ಮೀಸಲಾತಿ ಕೇಳುತ್ತಿವೆ. ಆದರೆ, ಅದಕ್ಕೆ ಪೂರಕ ವಾದಗಳನ್ನು ಮುಂದಿಟ್ಟಿಲ್ಲ. ಸಮುದಾಯಗಳು ತಮ್ಮ ಬೇಡಿಕೆಯ ಜೊತೆಗೆ ಗಮನಾರ್ಹ ವಾದವನ್ನು ಮುಂದಿಡಬೇಕು. ಸರ್ಕಾರಗಳು ಅವುಗಳನ್ನು ಪರಿಶೀಲಿಸಬೇಕು. ಸಮೀಕ್ಷೆ ನಡೆಸಬೇಕು. ವರದಿ ಪಡೆಯಬೇಕು. ಬಳಿಕ ಕ್ರಮ ಕೈಗೊಳ್ಳಬೇಕು.
ಪಂಚಮಸಾಲಿ ಲಿಂಗಾಯತರು ತಮ್ಮ ಪಂಗಡದ ಪಾಪುಲೇಶನ್‌ಗೆ ತಕ್ಕಂತೆ ಮೀಸಲಾತಿಕೇಳಲಿ, ೨ಎ ಒಳಗೆ ಸೇರಿಸಿ ಎಂಬುದು ಸರಿಯಲ್ಲ