70 ಗಂಟೆ, 90 ಗಂಟೆ ಕೆಲಸ: ಉದ್ಯೋಗಿಗಳ ರಕ್ತ ಹೀರುವುದು ಲಾಭಕೋರ ಬಂಡವಾಳಿಗರ ಸಂಚು

Date:

Advertisements

ಉದ್ಯಮಿ, ಲಾರ್ಸೆನ್ & ಟೂಬ್ರೊ ಅಧ್ಯಕ್ಷ ಎಸ್.ಎನ್ ಸುಬ್ರಹ್ಮಣ್ಯನ್ ಅವರು ಕೆಲಸದ ಸಮಯದ ಬಗ್ಗೆ ತಮ್ಮ ಉದ್ಯೋಗಿಗಳೊಂದಿಗೆ ದರ್ಪದ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ”ಎಷ್ಟು ಕಾಲ ನೀವು ನಿಮ್ಮ ಪತ್ನಿಯ ಮುಖವನ್ನೇ ನೋಡುತ್ತಾ ಕೂರುತ್ತೀರಿ? ಭಾನುವಾರಗಳಲ್ಲೂ ನಿಮ್ಮನ್ನು ಕೆಲಸ ಮಾಡುವಂತೆ ಮಾಡಲು ನನಗೆ ಸಾಧ್ಯವಾದರೆ, ನಾನು ಹೆಚ್ಚು ಸಂತೋಷಪಡುತ್ತೇನೆ. ನೀವು ಮನೆಯಲ್ಲಿ ಕಡಿಮೆ ಸಮಯ ಕಳೆದು, ಕಚೇರಿಯಲ್ಲಿ ಹೆಚ್ಚು ಸಮಯ ವ್ಯಯಿಸಿ” ಎಂದು ಹೇಳಿದ್ದಾರೆ.

ಅವರ ಮಾತಿನಲ್ಲಿ ಎರಡು ಅರ್ಥಗಳಿವೆ. ಒಂದು, ಪುರುಷರಷ್ಟೇ ದುಡಿಯುವುದು. ಮಹಿಳೆಯರು ಮನೆಯಲ್ಲಿ ಪುರುಷರಿಗೆ ಮುಖ ತೋರಿಸಿಕೊಂಡಷ್ಟೇ ಕುಳಿತಿರುತ್ತಾರೆನ್ನುವುದು. ಮಹಿಳೆಯರು ದುಡಿಯುವುದಿಲ್ಲ. ಅವರು 2ನೇ ದರ್ಜೆಯ ಪ್ರಜೆಗಳೆಂಬಂತೆ ನೋಡುವ ಪುರುಷಾಹಂಕಾರ. ಮತ್ತೊಂದು, ಉದ್ಯೋಗಿಗಳು ತಮ್ಮ ಗುಲಾಮರು. ಅವರಿಂದ ತಮಗೆ ಬೇಕಾದಂತೆ ಎಷ್ಟು ಬೇಕಾದರೂ, ಎಷ್ಟು ಸಮಯವಾದರೂ ದುಡಿಸಿಕೊಳ್ಳಬೇಕು ಎಂಬ ಶೋಷಕ ಯಾಜಮಾನಿಕೆಯ ಅಹಂಕಾರ.

ಇದೇ ಅಂಹಕಾರವನ್ನು ಈ ಹಿಂದೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರೂ ವ್ಯಕ್ತಪಡಿಸಿದ್ದರು. ಅದಕ್ಕೆ ‘ದೇಶದ ಅಭಿವೃದ್ದಿ’ ಎಂಬ ಪದರ ಎಳೆದಿದ್ದರು. ”ಭಾರತವು ಆರ್ಥಿಕವಾಗಿ ಉತ್ತುಂಗಕ್ಕೆ ಏರಿದ ಶಕ್ತಿಯಾಗಬೇಕು ಎಂದರೆ, ಯುವಜನರು ವಾರದಲ್ಲಿ 70 ಗಂಟೆ ದುಡಿಯಬೇಕು” ಎಂದಿದ್ದರು.

Advertisements

ನಾರಾಯಣ ಮೂರ್ತಿ ಅವರ ಹಿಂದಿನ ಹೇಳಿಕೆ ಮತ್ತು ಸುಬ್ರಹ್ಮಣ್ಯನ್ ಅವರ ಈಗಿನ ಹೇಳಿಕೆ – ಈ ಎರಡೂ ಹೇಳಿಕೆಗಳು ಪ್ರತಿಪಾದಿಸುವುದು ಒಂದೇ – ಅದು ಉದ್ಯೋಗಿಗಳ ಶ್ರಮ, ಶಕ್ತಿ, ಸಮಯ ಜೊತೆಗೆ ರಕ್ತವನ್ನು ಇಂಚಿಂಚಾಗಿ ಹೀರುವುದು.

ಈ 70 ಗಂಟೆ, 90 ಗಂಟೆ ದುಡಿಯಬೇಕು ಎಂಬ ಹೇಳಿಕೆ, ಪ್ರತಿಪಾದನೆಗಳ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಬಂಡವಾಳಶಾಹಿ ಉದ್ಯಮಿಗಳು ಈಗಾಗಲೇ ಕಡಿಮೆ ವೇತನ ಕೊಟ್ಟು, ದುಪ್ಪಟ್ಟು ದುಡಿಸಿಕೊಳ್ಳುತ್ತಿದ್ದಾರೆ. ಉದ್ಯೋಗಿಗಳು ಕೆಲಸದ ಒತ್ತಡಕ್ಕೆ ಸಿಲುಕಿಕೊಂಡು ನರಳುತ್ತಿದ್ದಾರೆ. ಅದರಲ್ಲೂ, ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳು ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ಇತ್ತೀಚೆಗೆ ವರದಿಯಾಗಿವೆ.

ಈಗಾಗಲೇ, ಉದ್ಯೋಗ ಸ್ಥಳದಲ್ಲಿನ ಒತ್ತಡದಿಂದಾಗಿ ಆತ್ಮಹತ್ಯೆಗಳು ಸಂಭವಿಸುತ್ತಿರುವ, ಉದ್ಯೋಗಿಗಳು ಮೈಗ್ರೇನ್, ಡಯಾಬಿಟಿಸ್‌, ಮಾನಸಿಕ ಒತ್ತಡ ಅಥವಾ ಅನಾರೋಗ್ಯ ರೀತಿಯ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ಉದ್ಯೋಗಿಗಳ ಕೆಲಸದ ಒತ್ತಡವನ್ನು ಕಡಿಮೆ ಮಾಡುವ ಬಗ್ಗೆ ಚರ್ಚೆಗಳು ನಡೆಯಬೇಕಿದೆ. ಉದ್ಯೋಗಿಗಳು ವಿಶ್ರಾಂತಿಯೊಂದಿಗೆ ಚುರುಕಿನಿಂದ ಕೆಲಸ ಮಾಡುವಂತಹ ವಾತಾವರಣ ಸೃಷ್ಟಿಸುವ ಬಗ್ಗೆ ಚಿಂತನೆಗಳು ನಡೆಯಬೇಕಿದೆ.

ಈ ವರದಿ ಓದಿದ್ದೀರಾ?: ಕಾನೂನು ದುರುಪಯೋಗ ಕುರಿತ ಸುಪ್ರೀಂ ಕೋರ್ಟ್‌ ಹೇಳಿಕೆ ಅಪಾಯಕಾರಿ

ಹೀಗಿರುವಾಗ ನಾಯಯಣ ಮೂರ್ತಿ ಮತ್ತು ಸುಬ್ರಹ್ಮಣ್ಯನ್ ಅವರಂತಹವರು ವಿಶ್ರಾಂತಿ ಇಲ್ಲದೆ, ಹೆಚ್ಚಿನ ಸಮಯ ದುಡಿಯಬೇಕು ಎಂಬುದು ಹೆಚ್ಚು ಲಾಭ ಗಳಿಸುವ ಲಾಭಕೋರತನ ಮತ್ತು ಸ್ವ-ಅಭಿವೃದ್ಧಿಯ ಹಂಬಲ, ಹವಣಿಕೆಯೇ ಹೊರತು, ದೇಶದ ಅಭಿವೃದ್ಧಿಯ ಉದ್ದೇಶವಲ್ಲ.

ಅದರಲ್ಲೂ ಭಾರತದಂತಹ ಹೆಚ್ಚು ಯುವಜನರಿರುವ ದೇಶದಲ್ಲಿ ಮಾನಸ ಸಂಪನ್ಮೂಲ ಮತ್ತು ಶಕ್ತಿ ಹೆಚ್ಚಿನ ಪ್ರಮಾಣದಲ್ಲಿದೆ. ಅದನ್ನು ಬಳಸಿಕೊಂಡರೆ ಮಾತ್ರವೇ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಾಗುವುದು. ಬಡತನ ನಿರ್ಮೂಲನೆಯಾಗುವುದೇ ಹೊರತು, ಕಡಿಮೆ ಉದ್ಯೋಗಿಗಳಿಂದ ಹೆಚ್ಚು ದುಡಿಸಿಕೊಂಡರೆ ದೇಶ ಅಭಿವೃದ್ದಿಯಾಗದು ಎಂಬ ಸಾಮಾನ್ಯಜ್ಞಾನ ಈ ಇಬ್ಬರಲ್ಲೂ ಇದ್ದಂತಿಲ್ಲ.

ಹೆಚ್ಚು ಸಮಯ ದುಡಿಯಬೇಕು ಎನ್ನುತ್ತಿರುವ ಸುಬ್ರಹ್ಮಣ್ಯನ್ ಅವರು ತಮ್ಮ ಕಂಪನಿಯಲ್ಲಿ ತಾವೇ ಹೊಂದಿರುವ ಸಿಇಒ ಹುದ್ದೆಯ ವೇತನವನ್ನು 2014ರಲ್ಲಿ ವಾರ್ಷಿಕ 13 ಕೋಟಿ ರೂ. ನಿಗದಿ ಮಾಡಿಕೊಂಡಿದ್ದರು. ಈಗ, 2024ರಲ್ಲಿ ಆ ವೇತನವು 53 ಕೋಟಿ ರೂ.ಗೆ ಏರಿಕೆಯಾಗಿದೆ. ಆದರೆ, ಸಾಮಾನ್ಯ ಉದ್ಯೋಗಿಗಳ ವೇತನ 2014ರಲ್ಲಿ ವಾರ್ಷಿಕ 3-4 ಲಕ್ಷ ರೂ. ಇದ್ದದ್ದು, 2024ರಲ್ಲಿ 4-5 ಲಕ್ಷ ರೂ.ಗೆ ಮಾತ್ರವೇ ಏರಿಕೆಯಾಗಿದೆ. ಉದ್ಯೋಗಿಗಳಿಂದ ಹೆಚ್ಚು ದುಡಿಸಿಕೊಳ್ಳಬಯಸುವವರು, ಹೆಚ್ಚು ವೇತನ ನೀಡಲು ಸಿದ್ದರಿಲ್ಲ.

ಅಂದಹಾಗೆ, ಉದ್ಯೋಗ ಕ್ಷೇತ್ರದಲ್ಲಿ ಕೆಲಸದ ಒತ್ತಡವನ್ನು ನಿಯಂತ್ರಿಸುವ ಕಾರಣಕ್ಕಾಗಿಯೇ ಕಾರ್ಮಿಕ ಕಾನೂನುಗಳಿವೆ. ಅದರಂತೆ, ಯಾವುದೇ ವ್ಯಕ್ತಿ ವಾರದಲ್ಲಿ ದುಡಿಯುವ ಒಟ್ಟು ಅವಧಿಯು 48 ಗಂಟೆಗಳನ್ನು ಮೀರುವಂತಿಲ್ಲ. ಉದ್ಯೋಗಿ ದಿನಕ್ಕೆ 12 ಗಂಟೆ ದುಡಿದರೆ, ಅವರು ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಮಾಡಬೇಕು. ದಿನಕ್ಕೆ 8 ತಾಸಿನಂತೆ ವಾರಕ್ಕೆ ಆರು ದಿನ ಕೆಲಸ ಮಾಡಬೇಕು. ಅದಕ್ಕೂ ಮೀರಿ ಕೆಲಸ ಮಾಡಿದರೆ ಅಥವಾ ಕಂಪನಿಗಳು ಕೆಲಸ ಮಾಡಿಸಿಕೊಂಡರೆ, ಹೆಚ್ಚುವರಿ ಸಮಯದ ಕೆಲಸಕ್ಕೆ ಹೆಚ್ಚುವರಿ ವೇತನ ಪಾವತಿ ಮಾಡಬೇಕು. ಪಾವತಿ ಇಲ್ಲದೆ ವಾರಕ್ಕೆ 48 ಗಂಟೆಗಿಂತ ಹೆಚ್ಚು ದುಡಿಸಿಕೊಂಡರೆ, ಅದು ದಂಡ ಮತ್ತು ಶಿಕ್ಷೆ ವಿಧಿಸಬಹುದಾದ ಅಪರಾಧವಾಗುತ್ತದೆ ಎಂದು ಕಾರ್ಮಿಕ ಸಂಹಿತೆ ಹೇಳುತ್ತದೆ.

ಆದರೆ, ಈ ಕಾನೂನು ಸಂಹಿತೆಯನ್ನೇ ಬುಡಮೇಲು ಮಾಡಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ. 70 ಗಂಟೆಗಳ ಕೆಲಸವನ್ನು ಜಾರಿಗೊಳಿಸಲು ಹವಣಿಸುತ್ತಿದೆ. ಅದಕ್ಕಾಗಿ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರಲು ನೋಡುತ್ತಿದೆ. ಸಮಾಜದೊಳಗೆ 70 ಗಂಟೆಗಳ ಕೆಲಸ ಎಂಬುದನ್ನು ಚರ್ಚಾ ವಿಷಯವನ್ನಾಗಿಸಿ, ಸಾಮಾನ್ಯೀಕರಿಸಿದರೆ, ತಿದ್ದುಪಡಿ ತರುವುದು ಸುಲಭವಾಗುತ್ತದೆ ಎಂಬ ಹುನ್ನಾರವು ಈ ಹೇಳಿಕೆಗಳ ಹಿಂದಿದೆ ಎಂದೂ ಆರೋಪಿಸಲಾಗಿದೆ.

ಈ ವರದಿ ಓದಿದ್ದೀರಾ?: ಅರಮನೆ ಮೈದಾನ ಸ್ವಾಧೀನ | BBMPಯ ಒಂದು ಪತ್ರದಿಂದ ಸರ್ಕಾರಕ್ಕೆ 3 ಸಾವಿರ ಕೋಟಿಯ ಭಾರೀ ಹೊರೆ!

ಉದ್ಯೋಗಿಗಳು ಹೆಚ್ಚು ದುಡಿಯಬೇಕು ಎಂಬ ಇಂತಹ ಮೂರ್ಖ ಮತ್ತು ಲಾಭಕೋರತನದ ಹೇಳಿಕೆಗಳನ್ನು ಕೆಲ ಉದ್ಯಮಿಗಳೇ ಅಲ್ಲಗಳೆದಿದ್ದಾರೆ. ಟೀಕಿಸಿದ್ದಾರೆ. ಇತ್ತಿಚೆಗೆ, ನಾರಾಯಣ ಮೂರ್ತಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಉದ್ಯಮಿ ನಮಿತಾ ಥಾಪರ್, ”ನಾವು ಮಾಲೀಕರು. ಹೆಚ್ಚು ಬಂಡವಾಳ ಹಾಕಿರುತ್ತೇವೆ. ಲಾಭಗಳಿಕೆ ಆದ್ಯತೆಯಾಗಿರುತ್ತದೆ. ಅದಕ್ಕಾಗಿ ನಾವು ಟನ್‌ಗಟ್ಟಲೆ ಕೆಲಸ ಮಾಡಬಹುದು. ದಿನದ 24 ಗಂಟೆಯೂ ಕೆಲಸ ಮಾಡಬಹುದು. ಆದರೆ, ಉದ್ಯೋಗಿಗಳ ಕತೆ ಏನು? ಉದ್ಯೋಗಿಗಳು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ನಿರೀಕ್ಷಿಸುವುದು ಅವರ ಮೇಲೆ ಹೆಚ್ಚು ಒತ್ತಡ ಹೇರಿದಂತೆ ಆಗುತ್ತದೆ. ಉದ್ಯೋಗಿಗಳ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ. ಅದು ತಪ್ಪು. ಉದ್ಯೋಗಿಗಳಿಗೆ ಸಮಂಜಸವಾದ ಕೆಲಸದ ಸಮಯದ ಮಿತಿ ಇರಬೇಕು” ಎಂದು ಹೇಳಿದ್ದಾರೆ.

ಅಂತೆಯೇ, ಕ್ಯೂರ್‌ಫಿಟ್ ಸಂಸ್ಥಾಪಕ ಮುಖೇಶ್ ಬನ್ಸಾಲ್ ಅವರು, “ಉದ್ಯೋಗಿಗಳು ವಾರಕ್ಕೆ 70 ಗಂಟೆಗಳ ಕಾಲ ದುಡಿಯಬೇಕೆಂದು ನಿರೀಕ್ಷಿಸುವುದು ಮೂರ್ಖತನ. 40 ಗಂಟೆಗಳ ಸಂಬಳದಲ್ಲಿ 70-90 ಗಂಟೆಗಳ ಕೆಲಸ ಕೇಳಲು ಸಾಧ್ಯವಿಲ್ಲ. ಅದು ಸರಿಯಲ್ಲ” ಎಂದು ಹೇಳಿದ್ದಾರೆ.

ವಾರವೊಂದರಲ್ಲಿ 70 ಗಂಟೆಗಳ ಕಾಲ ದುಡಿಯವುದು ಉದ್ಯೋಗಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಬೊಜ್ಜು, ಅಧಿಕ ರಕ್ತದೊತ್ತಡದಂತಹ ಆರೋಗ್ಯದ ಸಮಸ್ಯೆಗಳು ತಲೆದೋರಬಹುದು ಎಂದು ವೈದ್ಯರು ಹೇಳುತ್ತಾರೆ.

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು, “ಕೆಲಸ-ಜೀವನ ಸಮತೋಲನ ಮತ್ತು ಮಾನಸಿಕ ಆರೋಗ್ಯದ ಮಹತ್ವದ ಅರಿವು ಇರಬೇಕು. ಇಂತಹ ಹಿರಿಯ ಹುದ್ದೆಗಳಲ್ಲಿರುವ ಜನರು ಇಂತಹ ಹೇಳಿಕೆ ನೀಡುವುದನ್ನು ನೋಡಿದರೆ ಆಘಾತಕಾರಿ ಎನಿಸುತ್ತದೆ. ಇದು, ಮಾನಸಿಕ ಆರೋಗ್ಯದ ವಿಷಯ” ಎಂದು ಹೇಳಿದ್ದಾರೆ.

”ಇಡೀ ಜಗತ್ತು ವಾರದಲ್ಲಿ ನಾಲ್ಕು ದಿನ ಮಾತ್ರವೇ ಕೆಲಸ ಮಾಡುವತ್ತ ಸಾಗುತ್ತಿದೆ. ಇಂತಹ ಸಮಯದಲ್ಲಿ, ವಾರದ ಏಳು ದಿನವೂ, ಅಧಿಕ ಸಮಯದ ಕಾಲ ದುಡಿಯಬೇಕೆಂದು ಮಾತನಾಡುತ್ತಿದ್ದಾರೆ. ಒಬ್ಬ ಉದ್ಯೋಗದಾತ ತನ್ನ ಉದ್ಯೋಗಿಯಿಂದ ಗರಿಷ್ಠ ದುಡಿಸಿಕೊಳ್ಳಲು ಹವಣಿಸುತ್ತಾನೆ. ಆದರೆ, ಉದ್ಯೋಗಿಗಳ ಮಾನಸಿಕ ಆರೋಗ್ಯ ಏನಾಗಬೇಕು? ಅವರ ಕೌಟುಂಬಿಕ ಜೀವನ ಏನಾಗಬೇಕು?” ಎಂದು ಖಾಸಗಿ ಕಂಪನಿಯ ಉದ್ಯೋಗಿ ಕಮಲ್‌ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವರದಿ ಓದಿದ್ದೀರಾ?: ಸಾರಿಗೆ ದರ ಏರಿಕೆ ಖಂಡನೀಯ, ಜೀವ ಹಿಂಡುವ ಜಿಎಸ್‌ಟಿ ಬಗ್ಗೆ ಬಿಜೆಪಿ ಏಕೆ ಬಾಯಿ ಬಿಡುತ್ತಿಲ್ಲ?

ಜೊತೆಗೆ, ಸುಬ್ರಹ್ಮಣ್ಯನ್ ಹೇಳಿಕೆಯಲ್ಲಿ ಮಹಿಳಾ ನಿಂದನೆಯೂ ಪ್ರಧಾನವಾಗಿದೆ. ‘ಪತ್ನಿಯ ಮುಖವನ್ನೇ ಎಷ್ಟು ಹೊತ್ತು ನೋಡುತ್ತಾ ಕೂರುತ್ತೀರಿ?’ ಎಂಬ ಅವರ ಮಾತು. ಹೆಣ್ಣನ್ನು ಕೀಳಾಗಿ ಕಾಣುವ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ, ಕೌಟುಂಬಿಕ ಜೀವನ ಮತ್ತು ಆ ಸಮಯದ ಪ್ರಜ್ಞೆ ಅರಿವಿಲ್ಲದ ಮೂರ್ಖತನವನ್ನು ಎತ್ತಿ ತೋರಿಸುತ್ತದೆ.

ಇಂದಿನ ಸಮಾಜದೊಳಗೆ ಗಂಡಿಗೆ ಸಮಾನಳಾಗಿ ಹೆಣ್ಣು ದುಡಿಯುತ್ತಿದ್ದಾರೆ. ಪಿತೃಪ್ರಭುತ್ವದ ಸಮಾಜದೊಳಗೆ ಗಂಡು ಹೊರಗೆ ಮಾತ್ರವೇ ದುಡಿದರೆ, ಹೆಣ್ಣು ಮನೆಯ ಹೊರಗೂ-ಒಳಗೂ ದುಡಿಯುತ್ತಿದ್ದಾಳೆ. ಜೊತೆಗೆ, ಪೋಷಕರು, ಗಂಡ, ಮಕ್ಕಳ ಪೋಷಣೆಯನ್ನೂ ಮಾಡುತ್ತಿದ್ದಾಳೆ. ಎರಡು ರೀತಿಯ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾಳೆ. ಈಗಾಗಲೇ ಹೊರಗಿನ ಉದ್ಯೋಗ ಮತ್ತು ಕುಟುಂಬದ ನಡುವೆ ಭಾರತವನ್ನು ಕಟ್ಟುವಲ್ಲಿ, ಮುಂದಿನ ಪೀಳಿಗೆಯನ್ನು ಬೆಳೆಸುವಲ್ಲಿ ಮಹಿಳೆಯರು ಹೆಚ್ಚು ದುಡಿಯುತ್ತಿದ್ದಾರೆ. ಆದರೆ, ಪುರುಷ ಪ್ರಧಾನ ಸಮಾಜದ ಕುಚೋದ್ಯತನದಿಂದಾಗಿ ಮಹಿಳೆಯರ ದುಡಿಮೆಯು ಸಾಮಾಜಿಕವಾಗಿ ಚರ್ಚೆಗೆ ಬರುತ್ತಿಲ್ಲ.

ಯಾವುದೇ ಉದ್ಯೋಗಿ – ಪುರುಷನಾಗಲೀ, ಮಹಿಳೆಯಾಗಲೀ – ತಮ್ಮ ಕುಟುಂಬದ ಜೊತೆಗೆ ಹೆಚ್ಚಿನ ಸಮಯ ಕಳೆಯಬೇಕು. ಆ ಸಮಯವು ಅತ್ಯಮೂಲ್ಯವಾದದ್ದು. ಪೋಷಕರ ಜೊತೆಗೆ, ಸಂಗಾತಿಯ ಜೊತೆಗೆ, ಮಕ್ಕಳ ಜೊತೆಗೆ ಸಮಯ ಕಳೆಯುವುದು, ಆ ಸಮಯವು ಸಂತೋಷದಿಂದ ಕೂಡಿರುವುದು ಮನುಷ್ಯನಿಗೆ ಹೆಚ್ಚು ವಿಶ್ರಾಂತಿಯನ್ನು ನೀಡುತ್ತದೆ. ಉತ್ಸಾಹವನ್ನು ದುಪ್ಪಟ್ಟುಗೊಳಿಸುತ್ತದೆ. ಮಾತ್ರವಲ್ಲ, ಆಲೋಚನಾ ಸಾಮರ್ಥ್ಯದ ಬೆಳವಣಿಗೆಗೂ ಸಹಕಾರಿಯಾಗುತ್ತದೆ.

ಜೊತೆಗೆ, ಸಂಗಾತಿ ತನಗೆ ಹೆಚ್ಚು ಸಮಯ ನೀಡುತ್ತಿಲ್ಲ ಎಂಬ ಕಾರಣಕ್ಕಾಗಿ ವಿಚ್ಛೇದನ ಪಡೆಯುತ್ತಿರುವ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚುತ್ತಿವೆ. ಇಂತಹ ಸಮಯದಲ್ಲಿ ಕುಟುಂಬ ಮತ್ತು ಉದ್ಯೋಗದ ನಡುವೆ ಸಮತೋಲನ ಇರಬೇಕೆಂದು ತಜ್ಞರು ಪ್ರತಿಪಾದಿಸುತ್ತಾರೆ.

ಕೌಟುಂಬಿಕ ಜೀವನ ಮತ್ತು ಸಮಯ ಇಲ್ಲದೆ ದುಡಿಯುವುದು ಮನುಷ್ಯನನ್ನು ಕುಗ್ಗಿಸುತ್ತದೆ. ಮಾನವ ಸಂತತಿಯನ್ನು ನಾಶ ಮಾಡುತ್ತದೆ. ಇದಾವುದರ ಅರಿವೂ ಇಲ್ಲದ ಸುಬ್ರಹ್ಮಣ್ಯನ್ ರೀತಿಯ ಲಾಭಬಾಕ ಬಂಡವಾಳಶಾಹಿಗಳಿಗೆ ದುಡಿಮೆಯ ಸಮಯ ಮತ್ತು ಕೌಟುಂಬಿಕ ಸಮಯದ ಪಾಠ ಹೇಳುವ ಅಗತ್ಯವಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X