ಪೇಜಾವರ ಶ್ರೀಗಳೇ, ಅಬ್ರಾಹ್ಮಣರ ಮೇಲೆ ನಿಮಗೇಕೆ ಇಷ್ಟು ಅಸಹನೆ?

Date:

Advertisements

ದೇಶದಲ್ಲಿ ಬ್ರಾಹ್ಮಣೇತರರು ಐಎಎಸ್ ಅಧಿಕಾರಿಯಾಗುವುದು ಅಥವಾ ರಾಷ್ಟ್ರಪತಿಯಾಗುವುದು ಸುಲಭ. ಆದರೆ ಪುರೋಹಿತರಾಗುವುದು ಕಷ್ಟ ಎನ್ನುತ್ತಾರೆ ತಮಿಳುನಾಡಿನ ಶೂದ್ರ, ದಲಿತ ಅರ್ಚಕರು

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಸುವರ್ಣ ಟಿವಿ ಸಂಪಾದಕ ಅಜಿತ್ ಹನುಮಕ್ಕನವರ್‌ ವಿರುದ್ಧ ಗಂಭೀರ ದೂರು ದಾಖಲಾಗಿದೆ. ಇತ್ತೀಚೆಗೆ ಸುವರ್ಣ ಟಿ.ವಿಯಲ್ಲಿ ನಡೆದ ವಿಶೇಷ ಚರ್ಚೆಯ ವೇಳೆ, “ಬ್ರಾಹ್ಮಣೇತರರಿಗೆ ದೇವಾಲಯದಲ್ಲಿ ಪೂಜೆಗೆ ಅವಕಾಶ ನೀಡಲು ಸಾಧ್ಯವೇ?” ಎಂಬ ಪ್ರಶ್ನೆಯನ್ನು ದಲಿತ ಸಂಘಟನೆಯ ಮುಖಂಡ ನಾಗರಾಜ್ ಕೇಳಿದ್ದರು. ಸ್ವಾಮೀಜಿ ಮತ್ತು ಅಜಿತ್ ಆಡಿರುವ ಮಾತುಗಳು ಆಘಾತಕಾರಿಯಾಗಿದ್ದವು.

ಸ್ವಾಮೀಜಿಯವರ ಮಾತುಗಳಲ್ಲಿ ಯಾವುದೇ ಲಾಜಿಕ್ ಇರಲಿಲ್ಲ. ಜಾತಿ ಅಸಮಾನತೆಯ ಸಮರ್ಥನೆಗಳು ಅವರ ಮಾತುಗಳಲ್ಲಿ ಇಣುಕಿದ್ದವು.

Advertisements

‘ದೇವಸ್ಥಾನದೊಳಗೆ ಪೂಜೆ ಸಲ್ಲಿಸಲು ದಲಿತರಿಗೆ ಅವಕಾಶ ಇದೆಯಾ?’ ಅಂತ ನಾಗರಾಜ್ ಕೇಳಿದರು. “ಮಂದಿರ ಎಂದ ಮೇಲೆ ಎಲ್ಲರೂ ಬಂದು ಪೂಜೆ ಮಾಡಲು ಸಾಧ್ಯವಿಲ್ಲ. ಒಬ್ಬರು ಮಾತ್ರ ಪೂಜೆ ಮಾಡಬಹುದು. ಕಾಶಿ ಒಂದನ್ನು ಬಿಟ್ಟರೆ, ಉಳಿದೆಲ್ಲ ಕಡೆ ಅದಕ್ಕಾಗಿ ನಿಯತರಾಗಿರುವವರು ಮಾತ್ರ ಮಾಡ್ತಾರೆ. ಇದು ಮಂದಿರದೊಳಗೆ ಮಾತ್ರ ಅಲ್ಲ, ಯಾವುದೇ ಆಫೀಸ್‌, ಸಂಸ್ಥೆ ತಗೊಳ್ಳಿ, ಎಲ್ಲರೂ ಹೋಗಿ ಆ ಪೋಸ್ಟ್‌ಗೆ ಹೋಗಿ ಕೂರಲು ಆಗೋದಿಲ್ಲ. ಯಾರು ನಿಯಕ್ತರಾಗಿರಾಗಿರುತ್ತಾರೆ. ಅವರು ಮಾತ್ರ ಬರ್ತಾರೆ. ಅದಕ್ಕೊಂದು ಕ್ವಾಲಿಫಿಕೇಷನ್ ಇದೆ” ಎಂದರು ಸ್ವಾಮೀಜಿ.

ಅದಕ್ಕೆ ನಾಗರಾಜ್, “ಕ್ವಾಲಿಫಿಕೇಷನ್ ಸರಿ, ಆದರೆ ಜಾತಿಬೇಧ ಈ ಸೀಟ್‌ನಲ್ಲಿ ಕೂರಿಸೋಕೆ ಇಲ್ಲವಲ್ಲ” ಎಂತ ಕೇಳಿದ್ದರು. “ಈ ತನಕ ಯಾವ ಸಂಪ್ರದಾಯದವರು ಪೂಜೆ ಮಾಡ್ತಾ ಬರುತ್ತಾ ಇದ್ದಾರೋ ಅವರು ಮಾತ್ರ ಪೂಜೆ ಮಾಡಲು ಆಗುತ್ತೆ. ಮತ್ತೊಬ್ಬರು ಬಂದು ಪೂಜೆ ಮಾಡಲು ಆಗೋದಿಲ್ಲ”  ಅಂತ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದರು.

ಸ್ವಾಮೀಜಿ ಗೊಂದಲಕ್ಕೆ ಬಿದ್ದವರಂತೆ ಮಾತಾಡ್ತಾ, “ನೋಡಿ ಒಂದು ಪಕ್ಷ ಇದೆ. ಒಂದು ಪಕ್ಷದಲ್ಲಿ ರಾಜ್ಯಾಧ್ಯಕ್ಷ ಯಾರಾಗಬೇಕು? ಈ ವರ್ಷ ಈ ಪಕ್ಷದವನಾಗಲಿ, ಮುಂದಿನ ವರ್ಷ ಇನ್ನೊಂದು ಪಕ್ಷದವನಾಗಲಿ ಎಂಬ ಮಾತು ಬರುತ್ತದೆಯೇ? ಇಲ್ಲ” ಎನ್ನುತ್ತಾರೆ. ಅದನ್ನು ಅಜಿತ್‌ ಸಮರ್ಥಿಸುತ್ತಾ, “ಪಕ್ಷದ ಅಧ್ಯಕ್ಷನಾಗಬೇಕಾದವನು, ಪಕ್ಷದ ಸದಸ್ಯನಾಗಿರಬೇಕು ಎಂಬುದು ಬೇಸಿಕ್ ಪ್ರಶ್ನೆ” ಎಂದು ಸ್ವಾಮೀಜಿ ಪರ ಬ್ಯಾಟ್ ಮಾಡುತ್ತಾರೆ. ’ಅದು ರಾಜಕೀಯ’ ಅಂತಾರೆ ನಾಗರಾಜ್. ಅದಕ್ಕೆ ಸ್ವಾಮೀಜಿ, “ಇಲ್ಲಿ ಲೋಕನಿಯಮವನ್ನು ಎಲ್ಲಾ ಕಡೆ ಅಪ್ಲಾಯ್ ಮಾಡ್ಕೋಬೇಕು. ಈ ಪ್ರಶ್ನೆ ಮಂದಿರ ಧಾರ್ಮಿಕ ಶ್ರದ್ಧೆ ಕೇಂದ್ರಗಳಿಗೆ ಮಾತ್ರ ಯಾಕೆ ಬರುತ್ತೆ?” ಎಂದು ಕೇಳಿದರು. ನಾಗರಾಜ್ ಪ್ರತಿಕ್ರಿಯಿಸಿ, “ಗೋಕರ್ಣದಲ್ಲಿ ಬೇರೆಯವರು ಪೂಜೆ ಮಾಡೋ ವ್ಯವಸ್ಥೆ ಇದೆ” ಎಂದು ತಿಳಿಸಿದರು. ಆದರೆ ಮಾತಿಗೆ ಅಡ್ಡಿಪಡಿಸುವ ಸಂತರು, “ಇನ್ನೊಂದು ನಿಮಿಷ, ಇನ್ನೊಂದು ನಿಮಿಷ” ಎನ್ನುತ್ತಾ, “ಒಂದು ಮಸೀದಿ ಇದೆ, ಚರ್ಚ್ ಇದೆ, ಒಂದು ವರ್ಷ ಹಿಂದೂಗಳು ಅಲ್ಲಿ ಮಾಡಲಿ, ಮತ್ತೊಂದು ವರ್ಷ ಮತ್ತೊಬ್ಬರು ಮಾಡಲಿ” ಎಂಬ ಲಾಜಿಕ್ ಇಲ್ಲದ ವಾದವನ್ನಿಟ್ಟರು.

“ಜಾತ್ಯತೀತ ಜಾಗಗಳಲ್ಲಿ ಧಾರ್ಮಿಕ ಲಾಜಿಕ್‌ಗಳನ್ನು ಅಪ್ಲೇಯ್ ಮಾಡಲು ಬರದಿದ್ದರೆ ಧಾರ್ಮಿಕ ಜಾಗಗಳಲ್ಲಿ ಜಾತ್ಯತೀತ ಲಾಜಿಕ್‌ಗಳನ್ನು ಅಪ್ಲಾಯ್ ಮಾಡಲು ಬರಲ್ಲ” ಎಂದು ಅಜಿತ್‌ ಸಮರ್ಥನೆಯನ್ನು ನೀಡಿದರು. ಬ್ರಾಹ್ಮಣತ್ವ ಕಲಿತು ಪೂಜೆ ಮಾಡಬಹುದಲ್ಲವೇ ಎಂದು ಯಾರೋ ಇನ್ನೊಬ್ಬರು ಹೇಳ್ತಾರೆ. ಅದಕ್ಕೆ ಸ್ವಾಮೀಜಿ ಹೌದು ಎಂದರೂ ಮಾತು ಮುಂದುವರಿಸಿ, “ದಲಿತರು ಹಿಂದೂಗಳು ಹೌದು ಅಲ್ವೋ, ದಲಿತ ಸಂಘಟನೆಗಳು ಇದವೋ ಅಲ್ಲವೋ? ಅಲ್ಲಿ ಬ್ರಾಹ್ಮಣರಿಗೆ ಅವಕಾಶ ಕೊಡ್ತೀರಾ? ದಲಿತ ಸಂಘಟನೆಯ ಮುಖಂಡ ಒಬ್ಬ ಬ್ರಾಹ್ಮಣ ಆಗಲಿಕ್ಕೆ ಬಿಡ್ತೀರಾ?” ಎಂದು ಮತ್ತೊಂದು ಲಾಜಿಕ್ ಇಲ್ಲದ ಪ್ರಶ್ನೆಯನ್ನು ಎಸೆದರು.

ಪೇಜಾವರರ ಮಾತಿನಲ್ಲಿ ಅರ್ಥವಿದೆಯೇ?

ಸ್ವಾಮೀಜಿಯವರ ಈ ಪ್ರಶ್ನೆಗಳಲ್ಲಿ ಕೆಲವು ಗೊಂದಲಗಳಿರುವುದು ಎದ್ದು ಕಾಣುತ್ತೆ. “ಹಿಂದೂ ನಾವೆಲ್ಲ ಒಂದು” ಎನ್ನುವವರು ದಲಿತರಿಗಾಗಲೀ ಇತರೆ ಒಬಿಸಿಗಳಿಗಾಗಲಿ ಪೂಜೆ ಮಾಡುವ ಅವಕಾಶಗಳನ್ನು ನೀಡುವುದಿಲ್ಲ. ಮಸೀದಿ, ಚರ್ಚ್‌ಗಳನ್ನೂ ಎಳೆದು ತಂದು ಜಾತಿ ಅಸಮಾನತೆಯ ಪ್ರಶ್ನೆಯನ್ನು ಗೌಣವಾಗಿಸುವ ಪ್ರಯತ್ನ ಮಾಡಲಾಗುತ್ತದೆ. ಯಾವಾಗೆಲ್ಲ ಜಾತಿ ಪ್ರಶ್ನೆ ಬರುತ್ತದೆಯೋ ಆಗ ಹಿಂದುತ್ವದ ಪ್ರತಿಪಾದಕರಿಗೆ ’ಹಿಂದೂ ನಾವೆಲ್ಲ ಒಂದು’ ಅನ್ನೋದು ಮರೆತು ಹೋಗುತ್ತದೆ. ಇನ್ನೊಂದು ಧರ್ಮದತ್ತ ಬೆರಳು ತೋರಿಸೋದು ಉತ್ತರವಾಗಲ್ಲ. ಒಂದು ಪಕ್ಷದ ಮುಖಂಡ ಇನ್ನೊಂದು ಪಕ್ಷದ ಅಧ್ಯಕ್ಷ ಆಗುತ್ತಾನಾ ಅಂತ ಸ್ವಾಮೀಜಿ ಕೇಳಿದ್ದಾರೆ. ಅಲ್ಲ ಯತಿವರ್ಯರೇ, ಇಂದು ಈ ಪಕ್ಷದಲ್ಲಿದ್ದರು, ಇನ್ನೊಂದು ದಿನ ಇನ್ನೊಂದು ಪಕ್ಷಕ್ಕೆ ಹೋಗುತ್ತಾರೆ. ಪಕ್ಷದ ರೀತಿ, ಜಾತಿ ಬದಲಿಸಲು ಸಾಧ್ಯವೇ? ಒಂದೇ ಪಕ್ಷದೊಳಗೆ ಎಲ್ಲಾ ಜಾತಿಯವರು ಇರಲ್ವೆ? ಬಿಜೆಪಿಯೊಳಗೆ ದಲಿತರು, ಒಬಿಸಿಗಳು, ಲಿಂಗಾಯತರು, ಒಕ್ಕಲಿಗರು, ಕುರುಬರು ಇಲ್ವೆ? ಬರೀ ಬ್ರಾಹ್ಮಣರು ಮಾತ್ರ ಇದ್ದಾರಾ? ದಲಿತ ಜಾತಿಯ ಬಂಗಾರು ಲಕ್ಷ್ಮಣ್‌ ಅವರು ಒಮ್ಮೆ ಬಿಜೆಪಿ ಅಧ್ಯಕ್ಷರಾಗಿದ್ದರು ಅಲ್ಲವೇ? ಕಾಂಗ್ರೆಸ್‌ಗೆ ಖರ್ಗೆಯವರು ಅಧ್ಯಕ್ಷರಾಗಿದ್ದಾರಲ್ಲವೇ? ಪಕ್ಷದ ಲಾಜಿಕ್‌ನ ಇಲ್ಲಿ ಅಪ್ಲಾಯ್ ಮಾಡೋದು ಸರಿಯೇ? ಲೋಕನಿಯಮ ಎಲ್ಲಾ ಕಡೆ ಅಪ್ಲಾಯ್ ಆಗಬೇಕಲ್ವೇ?- ಈ ಪ್ರಶ್ನೆಗಳಿಗೆ ನೀವು ಉತ್ತರಿಸುತ್ತೀರಾ?

ದಲಿತ ಸಂಘಟನೆಗೆ ಬ್ರಾಹ್ಮಣರು ಅಧ್ಯಕ್ಷರಾಗಲು ಸಾಧ್ಯವೇ ಎಂದು ಕೇಳುವುದೇ ಅರ್ಥವಿಲ್ಲದ್ದು. ಬ್ರಾಹ್ಮಣ ಸಂಘಟನೆಗೆ ದಲಿತರು ಅಧ್ಯಕ್ಷರಾಗಲು ಸಾಧ್ಯವಿಲ್ಲ ಎಂಬುದೂ ಸತ್ಯ ಅಲ್ಲವೇ? ಇದು ಜಾತಿ ಸಂಘಟನೆ. ಆದರೆ ದೇವರು ಯಾವ ಜಾತಿಗೆ ಸೇರಿದವನು? ಪೌರಕಾರ್ಮಿಕ ಕೆಲಸದಂತೆಯೇ ಪುರೋಹಿತರ ಕೆಲಸವೂ ಒಂದೇ. ಒಂದು ಶ್ರೇಷ್ಠ, ಇನ್ನೊಂದು ಕನಿಷ್ಠ ಎಂಬುದು ಅಮಾನವೀಯ. ಪೌರಕಾರ್ಮಿಕರು ಕೇವಲ ದಲಿತರೋ, ಒಬಿಸಿಗಳೋ ಆಗಬೇಕೆಂದೇನೂ ಇಲ್ಲ. ಬ್ರಾಹ್ಮಣರೂ ಈ ಕೆಲಸ ಮಾಡಬಹುದು. ಅದಕ್ಕೆ ಯಾವ ದಲಿತ ಸಂಘಟನೆಯೂ ತಕರಾರು ತೆಗೆದಿದ್ದಾರಾ? ಬ್ರಾಹ್ಮಣರು ಈ ಕೆಲಸ ಮಾಡಬಾರದು ಅಂದಿದ್ದಾರಾ? ಅಂತೆಯೇ ಕೇವಲ ಬ್ರಾಹ್ಮಣರಷ್ಟೇ ಪೂಜೆ ಮಾಡಬೇಕು ಎಂಬುದು ಸಂವಿಧಾನಕ್ಕೆ ತೋರುವ ಅಗೌರವವಾಗುತ್ತೆ ಅಲ್ಲವೇ? ಮುಖ್ಯವಾಗಿ ಮುಜರಾಯಿ ದೇವಾಲಯಗಳು ಸರ್ಕಾರದ ಅಧೀನದಲ್ಲಿರುತ್ತವೆ. ಅದು ಸರ್ಕಾರದ ಭಾಗವೇ ಹೊರತು, ಒಂದು ಒಂದು ಜಾತಿಯ ಸ್ವತ್ತಲ್ಲ ಅಲ್ಲವೇ? ದೇವಾಲಯಗಳಲ್ಲಿ ಪೌರೋಹಿತ್ಯ ತಮ್ಮ ಸ್ವತ್ತು ಎಂದು ಪ್ರತಿಪಾದಿಸೋದು ತಪ್ಪಾಗುತ್ತೆ ಅಲ್ಲವೆ? ಜಾತಿ ಸಂಘಟನೆಗಳು ಸರ್ಕಾರ ಭಾಗವಲ್ಲ ಅಲ್ಲವೇ? ಇವುಗಳು ಸ್ವಾಮೀಜಿಯವರಿಗೆ ಅರ್ಥವಾಗಲಿಲ್ಲವಾ? ದಲಿತರ ಕೇರಿಗೆ ಹೋಗಿ ದೊಡ್ಡಸ್ತಿಕೆ ತೋರುವ ಸವರ್ಣೀಯ ಜಾತಿಗಳ ಸ್ವಾಮೀಜಿಗಳ ವರ್ತನೆಯು, ದಲಿತರು ಸಮಾನತೆಯ ಕುರಿತು ಮಾತನಾಡಿದ ತಕ್ಷಣ ಬದಲಾಗುವುದು ಏತಕ್ಕೆ?

ಇಷ್ಟು ಸ್ವಾಮೀಜಿಯವರ ಮಾತಿಗೆ ಪ್ರತಿಕ್ರಿಯೆಯಾದರೆ, ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ತಾರತಮ್ಯ, ಕಿರುಕುಳ ಎಷ್ಟು ಬೇರು ಮಟ್ಟದಲ್ಲಿರುತ್ತದೆ ಅನ್ನೋಕೆ, ’ಅಬ್ರಾಹ್ಮಣರು ಪೂಜಾರಿಗಳಾದರೂ ಸರ್ವೈವ್ ಆಗೋದು ಕಷ್ಟ’ ಎಂಬ ಸತ್ಯಗಳನ್ನೂ ನೋಡಬೇಕಾಗುತ್ತೆ.

ತಮಿಳುನಾಡಿನಲ್ಲಿ ಏನೇನಾಯ್ತು? ಬ್ರಾಹ್ಮಣೇತರರು ಅರ್ಚಕರಾದ ಮೇಲೆ ಎಷ್ಟೆಲ್ಲ ಹರಸಾಹಸ ಪಡುತ್ತಿದ್ದಾರೆ? ಬ್ರಾಹ್ಮಣರು ನೀಡುವ ಮಾನಸಿಕ ಹಿಂಸೆಯನ್ನು ಹೇಗೆಲ್ಲ ಅನುಭವಿಸುತ್ತಿದ್ದಾರೆ?- ಎಂಬುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಿದೆ.

ಎಂ.ಕೆ.ಸ್ಟಾಲಿನ್‌ ಅವರು ತಮಿಳುನಾಡಿನ ಸಿಎಂ ಆದಮೇಲೆ ಕ್ರಾಂತಿಕಾರಕ ಹೆಜ್ಜೆ ಇರಿಸಿದರು. 2021ನೇ ಇಸವಿ, ಆಗಸ್ಟ್‌ 14ರಂದು ರಾಜ್ಯದ ವಿವಿಧ ದೇವಾಲಯಗಳಿಗೆ 23 ಮಂದಿ ಬ್ರಾಹ್ಮಣೇತರ ಅರ್ಚಕರನ್ನ ನೇಮಕ ಮಾಡಿದರು. ಅರ್ಚಕರಾದ ಅಬ್ರಾಹ್ಮಣರಿಗೆ ಸ್ವರ್ಗವೇ ಧರೆಗಿಳಿದು ಬಂದಂತೆ ಅನಿಸಿತು. ’ವೈಯಕ್ತಿಕವಾಗಿ ಸ್ವಾತಂತ್ರ್ಯ ಪಡೆದಿದ್ದೇವೆ’ ಅಂದಿದ್ದರು ಆ ಅರ್ಚಕರು.

non bramhins
ತಮಿಳುನಾಡು ಸರ್ಕಾರ ಅಬ್ರಾಹ್ಮಣರನ್ನು ಅರ್ಚಕರನ್ನಾಗಿ ನೇಮಿಸಿದ ಸಂದರ್ಭ

ನಂತರ ಏನಾಯ್ತು ಗೊತ್ತೆ? ಶ್ರೀವಿಲ್ಲಿಪುತ್ತೂರಿನ ಸೇತುನಾರಾಯಣ ಪೆರುಮಾಳ್ ದೇವಸ್ಥಾನಕ್ಕೆ ಅರ್ಚಕರಾಗಿ ನೇಮಕಗೊಂಡಿದ್ದ 30 ವರ್ಷದ ಕೆ ಕನ್ನಬೀರನ್ ಅವರು 2022ರ ಜನವರಿಯಲ್ಲಿ ರಾಜೀನಾಮೆ ಕೊಟ್ಟು ಹೊರಬಂದರು. ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ತನ್ನನ್ನು ಪ್ರತಿದಿನ ಬ್ರಾಹ್ಮಣ ಅರ್ಚಕರು ಅವಮಾನಿಸುತ್ತಿದ್ದರು ಎಂದು ಅವರು ನೋವು ತೋಡಿಕೊಂಡಿದ್ದರು. “ಇದು ನನಗಷ್ಟೇ ಅಲ್ಲ, ನನ್ನ ಕುಟುಂಬಕ್ಕೂ ಒತ್ತಡ ತಂತು. ಹೀಗಾಗಿ ಅರ್ಚಕ ಹುದ್ದೆ ಬಿಡಲು ನಿರ್ಧರಿಸಿದೆ” ಎಂದಿದ್ದರು ಕನ್ನಬೀರನ್‌.

ಬ್ರಾಹ್ಮಣೇತರರು ಅರ್ಚಕರಾಗಬೇಕು ಅನ್ನೋದು ಪೆರಿಯಾರ್‌ ಕನಸಾಗಿತ್ತು. ”ಹಿಂದೂ ದೇವಾಲಯಗಳಲ್ಲಿನ ಜಾತಿ ಆಧಾರಿತ ತಾರತಮ್ಯವು ನನ್ನ ಹೃದಯದಲ್ಲಿ ಹೊಕ್ಕಿದ ಮುಳ್ಳು” ಎಂದಿದ್ದರು ಪೆರಿಯಾರ್‌. ಈ ಧಾರ್ಮಿಕ ಸ್ಥಳಗಳಿಗೆ ಎಲ್ಲರಿಗೂ ಪ್ರವೇಶ ನೀಡಬೇಕೆಂದು ಆಗ್ರಹಿಸಿದ್ದ ಅವರು ಕೆಲವು ಬ್ರಾಹ್ಮಣರು ಮಾತ್ರ ಪುರೋಹಿತ್ಯ ನಡೆಸುತ್ತಿರುವುದನ್ನು ಪ್ರಶ್ನಿಸಿದ್ದರು.

1971ರಲ್ಲಿ ಅಧಿಕಾರದಲ್ಲಿದ್ದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವು ಪೆರಿಯಾರ್‌ ಅಭಿಯಾನದ ಫಲವಾಗಿ ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಕಾಯಿದೆಗೆ ತಿದ್ದುಪಡಿ ತಂದಿತು. ವಂಶ ಪಾರಂಪರ್ಯವಾಗಿ ನಡೆಯುತ್ತಿದ್ದ ನೇಮಕಗಳನ್ನು ರದ್ದುಗೊಳಿಸಲು ಇದು ಪ್ರೇರಕವಾಗಿತ್ತು.

ಸರ್ಕಾರದ ನಿರ್ಧಾರದ ವಿರುದ್ಧ ಸಿಟ್ಟಿಗೆದ್ದವರು ಕೋರ್ಟ್ ಮೆಟ್ಟಿಲೇರಿದರು. 1972ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. “ದೇವಾಲಯದ ನಿಯಮಗಳ ಪ್ರಕಾರ ಅರ್ಚಕರನ್ನು ನೇಮಿಸಬೇಕು” ಎಂದಿತು. ಆದರೆ, ಸರ್ಕಾರದ ತಿದ್ದುಪಡಿಗಳನ್ನು ‘ಜಾತ್ಯತೀತ’ ಎಂದು ಗುರುತಿಸಿ ಮಾನ್ಯ ಮಾಡಿತು.

ಸುಪ್ರಿಂ ತೀರ್ಪಿನ ಕುರಿತು ಡಿಎಂಕೆಯ ಮುಖವಾಣಿಯಾದ ‘ವಿದುತಲೈ’ಗೆ ಸಂಪಾದಕೀಯ ಬರೆದ ಪೆರಿಯಾರ್‌, “ಆಪರೇಷನ್‌ ಯಶಸ್ವಿ; ಆದರೆ ರೋಗಿ ನಿಧನ” ಎಂದಿದಿದ್ದರು. 1971ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಂ.ಕರುಣಾನಿಧಿಯವರು, 2006ರಲ್ಲಿ ಮತ್ತೆ ಸಿಎಂ ಆದರು. ಪೆರಿಯಾರ್ ಅವರ ಉದ್ದೇಶವನ್ನು ಪೂರೈಸಲು ಮತ್ತೊಂದು ಪ್ರಯತ್ನವನ್ನು ಮಾಡಿದರು. ರಾಜ್ಯದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಅಡಿಯಲ್ಲಿರುವ 44,713 ದೇವಾಲಯಗಳಲ್ಲಿ “ಅಗತ್ಯವಾದ ಅರ್ಹತೆ ಮತ್ತು ತರಬೇತಿ” ಪಡೆದ ಯಾವುದೇ ವ್ಯಕ್ತಿ ಅರ್ಚಕ ಹುದ್ದೆಗೆ ಅರ್ಹರಾಗಿರುತ್ತಾರೆ ಎಂದು ಘೋಷಿಸಿ ವಿಶೇಷ ಸರ್ಕಾರಿ ಆದೇಶ ಅಂಗೀಕರಿಸಿದರು.

18 ತಿಂಗಳ ಕೋರ್ಸ್ ಅನ್ನು 2007ರಲ್ಲಿ ಪರಿಚಯಿಸಲಾಯಿತು. ಆಸಕ್ತ ಅಭ್ಯರ್ಥಿಗಳು ಯಾವುದೇ ಜಾತಿಯಾದರೂ ಅರ್ಚಕರಾಗಲು ತರಬೇತಿಯನ್ನು ಈ ಕೋರ್ಸ್ ನೀಡುತ್ತದೆ. ಕೋರ್ಸ್‌ಗೆ ದಾಖಲಾದ 240 ಜನರಲ್ಲಿ, 207 ಜನರು ಪದವಿ ಪಡೆದರು. ಆದರೆ ಅಖಿಲ ಭಾರತ ಆದಿಶೈವ ಶಿವಾಚಾರ್ಯರಗಳ ಸೇವಾ ಸಂಘವು ಅರ್ಚಕ ತರಬೇತಿ ಶಾಲೆಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಕಾರಣ ಈ ಪದವೀಧರರು ನಿರುದ್ಯೋಗಿಗಳಾದರು.

ಸುಪ್ರೀಂ ಕೋರ್ಟ್‌ನ 2015ರ ತೀರ್ಪು ಕೋರ್ಸ್‌ಗೆ ಅನುಮತಿ ನೀಡಿದ್ದರೂ, ಅರ್ಚಕ ತರಬೇತಿ ಶಾಲೆಗಳು ಕಾರ್ಯನಿರ್ವಹಿಸದೆ ಉಳಿದವು. ಪದವಿ ಪಡೆದ ವಿದ್ಯಾರ್ಥಿಗಳಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಆದರೆ ಅರ್ಚಕರಾಗಲು ಅರ್ಹತೆ ಪಡೆದ ಈ ಪದವೀಧರರಲ್ಲಿ 23 ಮಂದಿಗೆ 13 ವರ್ಷಗಳ ಬಳಿಕ ಅರ್ಚಕರಾಗುವ ಅವಕಾಶ ದೊರಕಿತು. 24 ಜನರ ಅರ್ಚಕ ಹುದ್ದೆಯಲ್ಲಿ 23 ಮಂದಿ ಬ್ರಾಹ್ಮಣೇತರರಿಗೆ ಅವಕಾಶ ನೀಡಿ ಸ್ಟಾಲಿನ್ ಆದೇಶ ಹೊರಡಿಸಿದರು.

ನಂತರ ಏನಾಗಿದೆ ಎಂದು ಪ್ರಖ್ಯಾತ ಸುದ್ದಿಜಾಲತಾಣ ’ನ್ಯೂಸ್‌ ಲಾಂಡ್ರಿ’ ಹಿಂದೊಮ್ಮೆ ಒಂದು ಗ್ರೌಂಡ್ ರಿಪೋರ್ಟ್ ಮಾಡಿತ್ತು.

non bramhins2
ತಮಿಳುನಾಡಿನಲ್ಲಿ ಬ್ರಾಹ್ಮಣೇತರರು ದೇವಸ್ಥಾನದಲ್ಲಿ ಅರ್ಚಕರಾಗಿರುವುದು

ದಲಿತ ಸಮುದಾಯಕ್ಕೆ ಸೇರಿದ ಅರ್ಚಕರೊಬ್ಬರು, ಅವರು 2008ರ ಬ್ಯಾಚ್‌ನಲ್ಲಿ ಪದವಿ ಪಡೆದಿದ್ರು. ಅವರು ಹೇಳುತ್ತಾರೆ: “ನನ್ನ ಜಾತಿ ಯಾವುದೆಂದು ಎಲ್ಲರಿಗೂ ತಿಳಿದಿರುವ ಹಳ್ಳಿಯಲ್ಲಿ ನಾನು ವಾಸಿಸುತ್ತಾ ಇದ್ದೇನೆ. ಖಾಸಗಿ ಕಾರ್ಯಕ್ರಮಗಳಿಗೆ ಯಾರೂ ನನ್ನನ್ನು ಕರೆಯುವುದಿಲ್ಲ”.

“ನನ್ನ ನೇಮಕಾತಿಗೆ ಮೊದಲು, ನನಗೆ ಬೆದರಿಕೆ ಕರೆಗಳು ಬಂದಿದ್ದವು. ಆದರೆ ಇಂದಿಗೂ ಬ್ರಾಹ್ಮಣರು ನನ್ನನ್ನು ಸಾಯಿಸುವಂತೆ ನೋಡ್ತಾರೆ. ನಾನು ಆಗಮಶಾಸ್ತ್ರಕ್ಕೆ ಬದ್ಧನಾಗಿ ಪೂಜೆ ಮಾಡಿದರೂ, ನನ್ನ ಪೂಜಾ ವಿಧಾನಗಳನ್ನು ಟೀಕಿಸುತ್ತಾರೆ” ಅಂತ ತಿರುಚಿರಾಪಳ್ಳಿಯ ನಾಗನಾಥಸ್ವಾಮಿ ದೇವಸ್ಥಾನದಲ್ಲಿ ನಿಯೋಜಿಸಲಾದ 33 ವರ್ಷದ ಎಂ ವೇಲುಮುರುಗನ್ ಬೇಸರ ವ್ಯಕ್ತಪಡಿಸಿದ್ದರು.

2021ರಲ್ಲಿ ನೇಮಕವಾದ 23 ಬ್ರಾಹ್ಮಣೇತರ ಅರ್ಚಕರಲ್ಲಿ 10 ಮಂದಿಯೊಂದಿಗೆ ಮಾತನಾಡಿದ್ದ ನ್ಯೂಸ್‌ಲಾಂಡ್ರಿ, “ಕೇವಲ ಇಬ್ಬರು ಮಾತ್ರ ತಾವು ನೇಮಿಸಿದ ಕೆಲಸವನ್ನು ಮಾಡುತ್ತಾ ಇದ್ದಾರೆ, ಮುಖ್ಯವಾಗಿ ಈ ಇಬ್ಬರೂ ಬ್ರಾಹ್ಮಣ ಸಹೋದ್ಯೋಗಿಗಳಿಲ್ಲದ ದೇವಸ್ಥಾನಗಳಲ್ಲಿ ಕೆಲಸ ಮಾಡುತ್ತಿದ್ದಾರೆ” ಎಂದಿತ್ತು.

“ಈ ದೇವಸ್ಥಾನದಲ್ಲಿ ನಾನೊಬ್ಬನೇ ಅರ್ಚಕನಾಗಿರುವುದರಿಂದ ನನಗೆ ಯಾವುದೇ ತಾರತಮ್ಯವಿಲ್ಲ. ಭಕ್ತರಿಂದ ಯಾವುದೇ ವಿರೋಧವಿಲ್ಲ” ಎಂದು ಕೊಯಮತ್ತೂರು ಬಳಿಯ ವಝೈ ತೊಟ್ಟತ್ತು ಅಯ್ಯನ್ ದೇವಸ್ಥಾನದ ಅರ್ಚಕ ಟಿ.ಯೋಗನಾಥನ್ ತಿಳಿಸಿದ್ದರು.

ಶ್ರೀವಿಲ್ಲಿಪುತ್ತೂರಿನ ಸೇತುನಾರಾಯಣ ಪೆರುಮಾಳ್ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ, ಆದರೆ 2022 ರ ಜನವರಿಯಲ್ಲಿ ರಾಜೀನಾಮೆ ನೀಡಿದ ಕನ್ನಬಿರಾನ್, “ನನ್ನನ್ನು ಅರ್ಚಕ ಹುದ್ದೆಗೆ ನೇಮಿಸಲಾಯಿತು. ಆದರೆ ಎಂದಿಗೂ ನಾನು ಅರ್ಚಕನಾಗಿ ಕೆಲಸ ಮಾಡಲಿಲ್ಲ. ನಾನು ಮಾಡಿದ್ದು ದೇಗುಲವನ್ನು ಶುಚಿಗೊಳಿಸುವುದಷ್ಟೆ” ಎಂದು ವಿಷಾದಿಸಿದ್ದರು.

ತಿಂಡಿವನಂನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಮಡಪಲ್ಲಿ ಪರಿಚಾರಗಾರ ಅಥವಾ ಅಡುಗೆಯವರಾಗಿ 34 ವರ್ಷದ ಆರ್ ಮುರುಗನ್ ನೇಮಕಗೊಂಡಿದ್ದರು. ಆದರೆ, ಅವರಿಗೆ ದೇವಸ್ಥಾನದ ಅಡುಗೆ ಕೋಣೆಗೆ ಪ್ರವೇಶ ನಿರಾಕರಿಸಲಾಗಿತ್ತು. “ಹಬ್ಬದ ಸಂದರ್ಭದಲ್ಲಿ ವಾಚ್‌ಮನ್‌ ಜೊತೆಯಲ್ಲಿ ಜನಸಂದಣಿ ನೋಡಿಕೊಳ್ಳುವಂತೆ ನನಗೆ ಹೇಳಲಾಯಿತು” ಎಂದು ಅವರು ನೋವು ತೋಡಿಕೊಂಡಿದ್ದರು. ಒಂದು ಸಂದರ್ಭದಲ್ಲಿ, ಪುರೋಹಿತನೊಬ್ಬ ಮುರುಗನ್ ಅಂಗೈ ಮೇಲೆ ಉರಿಯುತ್ತಿರುವ ಕರ್ಪೂರದ ತುಂಡನ್ನು ಇರಿಸಿ, ಇದು ನಿನ್ನನ್ನು ಶುದ್ಧೀಕರಿಸುತ್ತದೆ ಎಂದಿದ್ದನ್ನು ಮುರುಗನ್ ನೆನೆದಿರುವುದನ್ನು ‘ನ್ಯೂಸ್ ಲಾಂಡ್ರಿ’ ಉಲ್ಲೇಖಿಸಿದೆ.

“ದೇಶದಲ್ಲಿ ದಲಿತ ಅಥವಾ ಬ್ರಾಹ್ಮಣೇತರರು ಐಎಎಸ್ ಅಧಿಕಾರಿಯಾಗುವುದು ಅಥವಾ ರಾಷ್ಟ್ರಪತಿಯಾಗುವುದು ಸುಲಭ. ಆದರೆ ಪುರೋಹಿತರಾಗುವುದು ಕಷ್ಟ ಎಂಬುದನ್ನು ಅನುವಂಶಿಕ ಪೌರೋಹಿತ್ಯ ಪ್ರಾಬಲ್ಯ ಸಾಬೀತುಪಡಿಸುತ್ತದೆ. ಈ ಆಚರಣೆಗಳು ಭಾರತೀಯ ಸಂವಿಧಾನದ 17ನೇ ವಿಧಿ [ಅಸ್ಪೃಶ್ಯತೆ ನಿರ್ಮೂಲನೆ] ಉಲ್ಲಂಘನೆಯಾಗಿದೆ” ಎಂದು ತಮಿಳುನಾಡು ಸರ್ಕಾರಿ ಅರ್ಚಕರ ಸಂಘದ ಅಧ್ಯಕ್ಷ ಮತ್ತು 2008ರ ಬ್ಯಾಚ್‌ನ ಸದಸ್ಯ ವಿ ರಂಗನಾಥನ್ ಅಭಿಪ್ರಾಯಪಡುತ್ತಾರೆ.

ದಲಿತರು, ಶೂದ್ರರು ಅರ್ಚಕರಾದರೂ ಮಾನಸಿಕ ಕಿರುಕುಳ, ಒತ್ತಡ, ನಿಂದನೆಗಳನ್ನು ಅನುಭವಿಸುತ್ತಾರೆ. ಇದೆಲ್ಲ ಬದಲಾಗಬೇಕಾದರೆ ಜನರು ಶಿಕ್ಷಿತರಾಗಬೇಕು, ಸಂವಿಧಾನದ ಆಶಯವೇ ಅಂತಿಮ ಅನ್ನೋದು ಅರ್ಥಮಾಡಿಕೊಳ್ಳಬೇಕು. ಇದಕ್ಕಾಗಿ ಜಾಗೃತಿ ಆಗಬೇಕು ಅನಿಸುತ್ತದೆ. ಜೊತೆಗೆ ಜಾತಿವಾದಿಗಳ ವಿರುದ್ಧ ಕಾನೂನು ಸಮರವೂ ಅಗತ್ಯವಿದೆ. ಒಂದು ವೇಳೆ ಕಾನೂನಿಗೆ ಭಯವೂ ಇಲ್ಲವಾಗಿದ್ದರೆ ದಲಿತರ ಮೇಲಿನ ದೌರ್ಜನ್ಯಗಳು ಏರಿಕೆಯಾಗುತ್ತಿದ್ದವು. ಹೀಗಾಗಿ ಪೇಜಾವರ ಸ್ವಾಮೀಜಿ ಮತ್ತು ಅಜಿತ್ ಹನುಮಕ್ಕನವರ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವ ಕೆಲಸ ಆಗಬೇಕಿದೆ.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X