ಅನ್ಯಾಯಗಳನ್ನು ಸಹಿಸಿಕೊಂಡು ಪ್ರತಿಭಟಿಸಲಾಗದಂತೆ ಬದುಕುವ ಅನಿವಾರ್ಯತೆ ನಮ್ಮಲ್ಲಿ ಅನೇಕರಿಗೆ ಇದೆ. ಆದರೆ ನ್ಯಾಯವಾಗಿ ಬದುಕುವುದು ಸರಿಯಾದರೂ, ಅನ್ಯಾಯದ ವಿರುದ್ಧ ‘ದನಿ ಎತ್ತದಿರುವುದು’ ಅತಿದೊಡ್ಡ ತಪ್ಪೆಂದು ಹಿರೇಮಠರ ಬಾಳ್ಕಥನ ನಮಗೆ ತಿಳಿ ಹೇಳುತ್ತದೆ. ಮುಂದಿನ ಪೀಳಿಗೆಗೆ ಸಮಾಜಸೇವೆ ಕುರಿತು ಏನಾದರೂ ಹೇಳಲು ಪಠ್ಯಗಳು ಬೇಕಿದ್ದಲ್ಲಿ ‘ಮಹಾಸಂಗ್ರಾಮಿ’ ಅತ್ಯುತ್ತಮ ಪುಸ್ತಕವಾಗುತ್ತದೆ
ಮಲ್ಲಿಕಾರ್ಜುನಸ್ವಾಮಿಗಳ ಪ್ರವಚನ, ಶಿವರಾಮ ಕಾರಂತರ ಭಾಷಣ, ಬಾಲಕ ಹಿರೇಮಠ ಅವರಲ್ಲಿ ಪರಿವರ್ತನೆಯ ಬೀಜ ಬಿತ್ತುತ್ತವೆ. ಇವು ಬೆಳೆದು ಫಲಕೊಡಲು ಶೂಮಾಕರ್ ಅವರ ವಿಚಾರಗಳು, ಪುಸ್ತಕ ನೆರವಾಗುತ್ತವೆ. ಬಾಲಕ ಹಿರೇಮಠ ನುಂಗಿದ ಹುಣಸೇ ಬೀಜಗಳು ಗಿಡವಾಗಿ, ಮರವಾಗಿ ಬೆಳೆಯುವುದಿಲ್ಲ! ಆದರೆ ಹಿರೇಮಠರವರು ‘ಮಹಾಸಂಗ್ರಾಮಿ’ ಪುಸ್ತಕದ ಮೂಲಕ ಓದುಗನೆದೆಗೆ ಬಿತ್ತಿದ ಸಮಾಜಸೇವೆಯ ಬೀಜಗಳು ಖಂಡಿತಾ ಕೆಲವರಲ್ಲಾದರೂ ಮೊಳೆತು ಬೃಹತ್ ವೃಕ್ಷವಾಗಿ ಬೆಳೆಯುತ್ತದೆಂಬುದು ಲೇಖಕಿ ರೂಪ ಹಾಸನ ಅವರ ಆಶಯ.
ಪುಸ್ತಕವನ್ನು ಓದುತ್ತಾ ಹೋದಂತೆ ಬಾಲಕ ಹಿರೇಮಠ ನಮ್ಮೆದುರೇ ಬೆಳೆದು ದೊಡ್ಡವರಾಗುತ್ತಾರೆ. ಓಡಾಡುತ್ತಾರೆ, ಮಾತನಾಡುತ್ತಾರೆ, ಸರಿತಪ್ಪುಗಳ ಅರಿವನ್ನು ಮಾಡಿಸುತ್ತಾ, ನಿಜವಾದ ಸಮಾಜಸೇವೆಯ ವಿಶ್ವರೂಪ ದರ್ಶನ ಮಾಡಿಸುತ್ತಾರೆ. ಘಟನೆಗಳು ನಮ್ಮೆದುರೇ ನಡೆಯುತ್ತಿವೆ ಎಂಬ ಭಾವನೆ ಉಂಟಾಗುತ್ತದೆ. ನಾವೂ ಹಿರೇಮಠರವರೊಂದಿಗೆ ಹೆಜ್ಜೆ ಹಾಕುತ್ತೇವೆ, ಸಭೆಗಳಲ್ಲಿ ಭಾಗವಹಿಸುತ್ತೇವೆ, ತೀರ್ಮಾನಗಳನ್ನೂ ತೆಗೆದುಕೊಳ್ಳುತ್ತೇವೆ! ಇದು ರೂಪ ಹಾಸನರವರ ಬರವಣಿಗೆ ಶೈಲಿ. ಈ ಪುಸ್ತಕ ನಾವು ಕಾಣದ ರೂಪ ಅವರ ಇನ್ನೊಂದು ಅಗಾಧ ಪ್ರತಿಭೆಯ ಮುಖವನ್ನು ಪರಿಚಯಿಸುತ್ತದೆ. ಪುಸ್ತಕ ಓದಿದ ಮೇಲೆ ನಮ್ಮೊಳಗೆ ಹಿರೇಮಠರು ಪರಕಾಯ ಪ್ರವೇಶ ಮಾಡುತ್ತಾರೆ. ನಮ್ಮ ಮಾತಿನಲ್ಲಿ, ಕೃತಿಯಲ್ಲಿ ಆಗಾಗ್ಗೆ ಇಣುಕುತ್ತಾರೆ. ನಮ್ಮ ಮೇಲೆ ಇನ್ನೂ ಸಮಾಜದ ಋಣ ಇರುವುದು ನೆನಪಾಗುತ್ತದೆ. ಏನಾದರೂ ಮಾಡಲೇಬೇಕೆಂಬ ಛಲ ಹುಟ್ಟಿಸುತ್ತದೆ. ಹೀಗೆ ರೂಪರವರು ‘ಮಹಾಸಂಗ್ರಾಮಿ’ ಪುಸ್ತಕದಲ್ಲಿ ಒಬ್ಬ ನಾಯಕ ರೂಪುಗೊಂಡ ಬಗೆಯನ್ನು ಬಹಳ ಅಚ್ಚುಕಟ್ಟಾಗಿ ಕಟ್ಟಿಕೊಡುವ ಜೊತೆಗೆ, ನಮ್ಮಲ್ಲಿ ಸಮಾಜಕ್ಕಾಗಿ ತುಡಿಯಬೇಕೆಂಬ ಪ್ರೇರಣೆಯನ್ನೂ ಮೂಡಿಸುತ್ತಾರೆ!
ಹಿಂದೆ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುವಾಗ ನಾಲ್ಕಾರು ಬಾರಿ ಮೆಡ್ಲೇರಿಗೆ ಹೋಗುವ ಸಂದರ್ಭ ಬಂದಿತ್ತು. ಒಮ್ಮೆ ಮೆಡ್ಲೇರಿಗೆ ಹೋದಾಗ ಅಲ್ಲಿನ ಕಂಬಳಿ ನೇಕಾರರ ಸಂಘದಲ್ಲಿ ಸುಮಾರು ಎಪ್ಪತ್ತು ವರ್ಷದ ವೃದ್ಧರೊಬ್ಬರು ಪಿಟ್ ಲೂಮ್ ನಲ್ಲಿ ಕಂಬಳಿ ನೇಯ್ತಾ ಇದ್ದರು. ಮೈಮೇಲೆ ತುಂಡು ಪಂಚೆ ಬಿಟ್ಟರೆ ಏನೂ ಇರಲಿಲ್ಲ. ಮಧ್ಯಾಹ್ನದ ಉರಿ ಸೆಖೆಯಲ್ಲಿ ನೇಯುತ್ತಾ ಬೆವರಿನಲ್ಲಿ ತೋಯ್ದಿದ್ದ ಅವರನ್ನು ನೋಡಿ ಸಂಕಟವಾಯಿತು. ಹೊಟ್ಟೆಪಾಡಿಗೆ ಇದು ಅವರಿಗೆ ಅನಿವಾರ್ಯ. ಇಂತಹ ಜನರನ್ನು ತಲುಪುವ ಸಲುವಾಗಿ ಹಿರೇಮಠರವರು ವಿದೇಶದಲ್ಲಿ ಕೈ ತುಂಬಾ ಗಳಿಸುತ್ತಿದ್ದ ಕೆಲಸವನ್ನು ಬಿಟ್ಟು ವಿದೇಶಿ ಪತ್ನಿಯೊಡನೆ ಮೆಡ್ಲೇರಿಯಲ್ಲಿಯೇ ಕೆಲ ವರ್ಷಗಳು ನಿಂತು ಕೆಲಸ ಮಾಡಿದುದನ್ನು ಕಂಡು ಅವರ ಬಗ್ಗೆ ಮತ್ತು ಅವರ ಪತ್ನಿ ಶ್ಯಾಮಲಾರವರ ಬಗ್ಗೆ ಅಭಿಮಾನ ಮೂಡಿತು. ಅದುವರೆಗೆ ಮಾಧ್ಯಮಗಳಲ್ಲಿ ಹಿರೇಮಠರವರ ಬಗ್ಗೆ ಓದಿದ್ದೆ ಅಷ್ಟೆ. ಆಗ ಅವರ ಕೆಲಸಗಳನ್ನು ಕಣ್ಣಾರೆ ಕಂಡಂತಾಯಿತು. ಬೆಂಗಾಡಿನ ಪರಿಸರ ಮತ್ತು ಬಡ ಜನರಿಗೆ ಐ.ಡಿ.ಎಸ್. ಸಂಸ್ಥೆ ಮಾಡಿರುವ ಕೆಲಸಗಳನ್ನು ಕಣ್ಣಾರೆ ಕಂಡಾಗ ಸಂಸ್ಥೆ ಬಗ್ಗೆ ಗೌರವ ಭಾವನೆ ಉಂಟಾಯಿತು. ಆದರೆ ಹಿರೇಮಠರು ಎಂದೂ ಗೆಲುವನ್ನು ಸಂಭ್ರಮಿಸಿದವರಲ್ಲ. ಗೆಲುವಿನ ಲಾಭವನ್ನೂ ಪಡೆದವರಲ್ಲ!
ಸುಧಾರಿತ ಮೆಡ್ಲೇರಿ ಚರಕವನ್ನು ನೀಡಿದ ಹಿರೇಮಠರವರನ್ನು ಅಲ್ಲಿನ ಜನರು ಈಗಲೂ ನೆನೆಯುತ್ತಾರೆ. ಚರಕಗಳನ್ನು ಕೊಳ್ಳಲು ನಾನು ಕೆಲಸ ಮಾಡುತ್ತಿದ್ದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ಕುರಿಗಾರರಿಗೆ ಸಹಾಯಧನವನ್ನು ನೀಡಿತ್ತು. ಮೆಡ್ಲೇರಿ ಮತ್ತು ಸುತ್ತಲಿನ ಗ್ರಾಮಗಳ ದನ ಮತ್ತು ಕುರಿಮೇಕೆಗಳ ಮೇವಿಗಾಗಿ ಕುರಿಗಾರರಿಗೂ ಅರಣ್ಯ ಇಲಾಖೆ ಸಿಬ್ಬಂದಿಗೂ ನಡೆದ ಸಂಘರ್ಷ ಒಂದು ಕೊಲೆಯಲ್ಲಿ ಅಂತ್ಯವಾದಾಗ ಈ ಸಂಘರ್ಷವನ್ನು ಬಗೆಹರಿಸಿ ಐರಣಿ ಗ್ರಾಮದಲ್ಲಿ 80 ಎಕರೆ ಬರಡು ಪ್ರದೇಶದಲ್ಲಿ ಮೇವಿನಹುಲ್ಲು ಮತ್ತು ಮೇವಿನ ಮರಗಳನ್ನು ರೈತರಿಂದಲೇ ಬೆಳೆಸಿ ಸಮಸ್ಯೆ ಬಗೆಹರಿಸುತ್ತಾರೆ. ಅರೆಮಲ್ಲಾಪುರ ಗ್ರಾಮದಲ್ಲಿ 25 ಎಕರೆ ಜಮೀನನ್ನು ಜಿಲ್ಲಾಧಿಕಾರಿಯವರಿಂದ ಮಂಜೂರು ಮಾಡಿಸಿ ಮಹಿಳಾ ಗುಂಪುಗಳ ಸಹಕಾರದಿಂದ ಮೇವು ಫಾರಂ ಅನ್ನು ಪ್ರಾರಂಭಿಸಿ ಮೇವಿನ ಕೊರತೆ ನೀಗುವಲ್ಲಿ ಯಶಸ್ವಿಯಾಗುತ್ತಾರೆ. ಇದು ನಿಜಕ್ಕೂ ಅಸಾಧಾರಣವಾದ ಕೆಲಸ.
ನಾನು ಮೆಡ್ಲೇರಿಗೆ ಭೇಟಿ ನೀಡಿದ ಮೂರು ವರ್ಷಗಳ ನಂತರ ಶ್ರೀಮತಿ ರೂಪ ಹಾಸನರವರು ಹಿರೇಮಠರವರ ಜೀವನ ಚರಿತ್ರೆ ಬರೆಯುತ್ತಿರುವುದು ತಿಳಿಯಿತು. ಅವರಿಗೆ ನಾನು ಮೆಡ್ಲೇರಿಗೆ ಹೋಗಿ ಕಣ್ಣಾರೆ ಕಂಡ ಹಿರೇಮಠರವರ ಕೆಲಸಗಳನ್ನು ತಿಳಿಸಿದೆ. ಅದಾಗಲೇ ಅವರು ಹಿರೇಮಠರ ಕುರಿತು ಎಲ್ಲಾ ವಿವರವಾದ ದಾಖಲೆಗಳನ್ನು ಪಡೆದಿದ್ದರು. ಪಡೆದ ದಾಖಲೆಗಳನ್ನು ಕಾಲಾನುಕ್ರಮದಲ್ಲಿ ಬರೆದ ಬರವಣಿಗೆಯ ಸಾಫ್ಟ್ ಕಾಪಿ ನನಗೆ ಕಳುಹಿಸಿದರು. ಒಬ್ಬ ಮನುಷ್ಯ ತನ್ನ ಜೀವಿತ ಕಾಲದಲ್ಲಿ ಮಾಡಬಹುದಾದ ಎಲ್ಲಾ ಕೆಲಸಗಳನ್ನು ಹತ್ತು ಪಟ್ಟು ಆಗಲೇ ಹಿರೇಮಠರು ಮಾಡಿರುವುದನ್ನು ಕಂಡು ಆಶ್ಚರ್ಯವಾಯಿತು. ಅವರ ಕೆಲಸಗಳು ಒಂದೇ ರೂಪದ್ದಲ್ಲ, ಒಂದೇ ತೆರನಾದವೂ ಕೂಡ ಅಲ್ಲ. ಅವರೂ ಒಂದೆಡೆ ನಿಲ್ಲುವವರಲ್ಲ! ಶಿವರಾಮ ಕಾರಂತರ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ನೆನಪಾಗುತ್ತದೆ. 1975ರ ತುರ್ತು ಪರಿಸ್ಥಿತಿ ವಿರುದ್ಧ ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ ಅವರು ಕಟ್ಟಿದ ಪ್ರತಿಭಟನೆ, ಹೋರಾಟ- ನೇತಾಜಿಯವರ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸುತ್ತದೆ. ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಅಂದಿನ ಸರ್ಕಾರ, ಅವರ ಮತ್ತು ಅವರ ನಾಲ್ಕು ಜನ ಸಹಚರರ ಪಾಸ್‌ಪೋರ್ಟ್ ರದ್ದು ಮಾಡಲಷ್ಟೇ ಸಾಧ್ಯವಾಗುತ್ತದೆ. ಹೋರಾಟವನ್ನು ಹತ್ತಿಕ್ಕಲು ಸಾಧ್ಯವಾಗುವುದಿಲ್ಲ. ನಂತರ ಬಂದ ಸರ್ಕಾರ ಇವರ ಪರವಾಗಿದ್ದರೂ ಹಿರೇಮಠರು ಪ್ರತಿಫಲವನ್ನು ನಿರೀಕ್ಷಿಸುವುದಿಲ್ಲ. ಹಿರೇಮಠರು ಎಂದಿಗೂ ರಾಜಕೀಯದಲ್ಲಿ ಯಾರ ಪರವನ್ನೂ ವಹಿಸುವುದಿಲ್ಲ!
ಇದನ್ನು ಓದಿದ್ದೀರಾ?: ಕೆ ಸಿ ರಘು: ಮಾಸದ ನಗು, ಜ್ಞಾನದ ಬೆರಗು
ಸಾಮಾನ್ಯವಾಗಿ ಹಳ್ಳಿಗಳಲ್ಲಿ, ಬಡತನದಲ್ಲಿ ಹುಟ್ಟಿದ ಯುವಕರು ತುಂಬಾ ಕಷ್ಟಪಟ್ಟು ವಿದ್ಯೆಗಳಿಸಿ, ವಿದೇಶದಲ್ಲಿ ಕೆಲಸ ದೊರೆತು ಕೈತುಂಬಾ ಗಳಿಸುವಂತಾದಾಗ ಅವರು, ನಮ್ಮ ಮಕ್ಕಳ ಆದರ್ಶ ವ್ಯಕ್ತಿಗಳಾಗುತ್ತಾರೆ. ಬಡತನದಲ್ಲಿ ಬೆಳೆದವರಿಗೆ ಜೀವನ ಸಾಗಿಸಲು, ಒಂದು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಅಥವಾ ಸರ್ಕಾರಿ ಹುದ್ದೆ ಪಡೆಯುವುದೇ ಜೀವನದ ಪರಮ ಗುರಿಯಾಗಿರುತ್ತದೆ. ಹೀಗೆ ಪಡೆದ ಕೆಲಸಗಳು- ಪ್ರಭುತ್ವದ ಪರವಾಗಿಯೇ ಇರಬೇಕೆಂಬ ಅಲಿಖಿತ ಷರತ್ತು ಮತ್ತು ಗುಲಾಮೀ ಮನೋಭಾವವನ್ನು ಅಪೇಕ್ಷಿಸುತ್ತವೆ! ಈ ಕೆಲಸಗಳಿಗೆ ವೃತ್ತಿ ಕೌಶಲ್ಯ ಮತ್ತು ವಿದ್ಯಾ ಅರ್ಹತೆಗಳಷ್ಟೇ ಮುಖ್ಯವಾಗುತ್ತವೆ. ಸಮಾಜಸೇವೆ ಗಣನೆಗೆ ಬರುವುದಿಲ್ಲ. ಆದರೆ ಸಮಾಜಸೇವೆ ಮಾಡಬೇಕೆಂಬ ಅದಮ್ಯ ತುಡಿತ ಹಿರೇಮಠರವರು ಮಾಡುತ್ತಿದ್ದ ಇಂತಹ ಗುಲಾಮಿ ಕೆಲಸ ಬಿಡುವಂತೆ ಮಾಡುತ್ತದೆ. ಸಮಾಜಸೇವೆ ಮಾಡುವವರಿಗೆ ಇವರ ಜೀವನ ಚರಿತ್ರೆ ಭಿನ್ನವಾದ ದಾರಿಗಳನ್ನು ತೋರಿಸುತ್ತದೆ. ಸುತ್ತಲೂ ನಡೆಯುತ್ತಿರುವ ಅನ್ಯಾಯಗಳನ್ನು ಸಹಿಸಿಕೊಂಡು ಪ್ರತಿಭಟಿಸಲಾಗದಂತೆ ಬದುಕುವ ಅನಿವಾರ್ಯತೆ ನಮ್ಮಲ್ಲಿ ಅನೇಕರಿಗೆ ಇದೆ. ಆದರೆ ನ್ಯಾಯವಾಗಿ ಬದುಕುವುದು ಸರಿಯಾದರೂ, ಅನ್ಯಾಯದ ವಿರುದ್ಧ ‘ದನಿ ಎತ್ತದಿರುವುದು’ ಅತಿದೊಡ್ಡ ತಪ್ಪೆಂದು ಹಿರೇಮಠರ ಬಾಳ್ಕಥನ ನಮಗೆ ತಿಳಿ ಹೇಳುತ್ತದೆ. ಮುಂದಿನ ಪೀಳಿಗೆಗೆ ಸಮಾಜಸೇವೆ ಕುರಿತು ಏನಾದರೂ ಹೇಳಲು ಪಠ್ಯಗಳು ಬೇಕಿದ್ದಲ್ಲಿ ‘ಮಹಾಸಂಗ್ರಾಮಿ’ ಅತ್ಯುತ್ತಮ ಪುಸ್ತಕವಾಗುತ್ತದೆ.
ಡಾ.ಕೆ.ಜಿ. ಮಹೇಶ್ವರಪ್ಪ
ನಿವೃತ್ತ ಪಶುವೈದ್ಯಾಧಿಕಾರಿಗಳು, ಶಿವಮೊಗ್ಗ
(ಪುಸ್ತಕಕ್ಕಾಗಿ: ಅಭಿರುಚಿ ಪ್ರಕಾಶನ- 9980560013)