ಭಾರತದಲ್ಲಿ ಹೋಮಿ ಭಾಭಾ ಯಾವ ಸ್ಥಾನಮಾನ ಹೊಂದಿರುವರೋ ಸಲಾಂ ಪಾಕಿಸ್ತಾನದಲ್ಲಿ ಅದೇ ಸ್ಥಾನಮಾನ ಗಳಿಸಿಕೊಂಡರು. ವಾಸ್ತವದಲ್ಲಿ ಭಾಭಾ ಅವರೇ ಡಾ.ಸಲಾಂ ಅವರಿಗೆ ರೋಲ್ ಮಾಡೆಲ್ ಆಗಿದ್ದರು. ಪಾಕಿಸ್ತಾನವನ್ನು ನ್ಯೂಕ್ಲಿಯರ್ ಶಕ್ತಿಯನ್ನಾಗಿ ಮಾಡುವಲ್ಲಿ ಸಲಾಂ ಅವರ ಪ್ರಮುಖ ಪಾತ್ರವಿದೆ. ಅಂತಹ ಸಲಾಂ ನೊಬೆಲ್ ಪ್ರಶಸ್ತಿ ಪಡೆದು, ಅದನ್ನು ತಮಗೆ ಗಣಿತ ಕಲಿಸಿದ ಪ್ರೊ. ಗಾಂಗುಲಿಯವರ ಕೊರಳಿಗೆ ಹಾಕಿದ್ದು ಐತಿಹಾಸಿಕ ಕ್ಷಣ...
ಈಗ ಮನುಷ್ಯ ಹೆಚ್ಚು ವ್ಯಾವಹಾರಿಕನಾಗಿಬಿಟ್ಟಿದ್ದಾನೆ ಎನ್ನಬಹುದು. ಹಾಗಾಗಿ ಯಾವುದೂ ಪುಕ್ಕಟೆಯಾಗಿ ಸಿಗುವುದಿಲ್ಲ ಎನ್ನಲಾಗುತ್ತಿದೆ. ವಿದ್ಯೆಯೂ ಅಷ್ಟೇ. ಶಾಲೆ ಕಾಲೇಜುಗಳು ಈಗ ಸಣ್ಣ ದೊಡ್ಡ ಕಾರ್ಖಾನೆಗಳೇ. ಈ ಕಾರ್ಖಾನೆಗಳ ಮಾಲೀಕರು ತಮ್ಮನ್ನು ಕಾಯಕಜೀವಿಗಳು ಎಂದು ಹೇಳಿಕೊಳ್ಳುತ್ತಾರೆ. ಕಾಲಕ್ಕೆ ತಕ್ಕಂತೆ ‘ಕಾಯಕ’ ಹಾಗೂ ‘ಕಾಯಕ ಜೀವಿ’ ಪದಗಳ ಅರ್ಥವೂ ಬದಲಾಗಿದೆಯೇನೋ. ಇಲ್ಲಿ ತಯಾರಾಗಿ ಬರುವುದು ವಿದ್ಯಾರ್ಥಿಗಳೆಂಬ ಸರಕುಗಳು. ಹೀಗಾಗಿ ಗುರುಗಳಲ್ಲಿ ಶಿಷ್ಯವಾತ್ಸಲ್ಯ ಕಂಡು ಬರಲಿಕ್ಕಿಲ್ಲ. ಶಿಷ್ಯ ಗುರುವಿಗೆ ಋಣ ತೀರಿಸುವ ಮಾತೇ ಇಲ್ಲ. ಹಾಗೆಂದು ಗುರುಗಳು ಕೆಟ್ಟವರೇನಾಗಿರುವುದಿಲ್ಲ. ಕೆಟ್ಟ ಗುರು ಕೆಟ್ಟ ಶಿಷ್ಯರು ಎಲ್ಲ ಕಾಲಕ್ಕೂ ಇರುವವರೇ. ಗುರು ಬ್ರಹ್ಮನೆಂದು ಹೇಳುವ ಕಾಲದಲ್ಲಿ ದ್ರೋಣಾಚಾರ್ಯರಿಗೆ ಏಕಲವ್ಯ ಹೆಬ್ಬೆರಳನ್ನು ಕಾಣಿಕೆಯಾಗಿ ನೀಡಬೇಕಾಯಿತು. ಹಾಗಾಗಿ ಒಳ್ಳೆಯ ಗುರುವು ಒಳ್ಳೆಯ ಶಿಷ್ಯರ ಕಾಲ ಇದಲ್ಲ ಎನ್ನಲಾಗದು.
ನೊಬೆಲ್ ವಿಜೇತ ಭೌತ ವಿಜ್ಞಾನಿ ಡಾ.ಅಬ್ದುಸ್ಸಲಾಂ ಹೆಸರನ್ನು ಕೇಳದವರಿರಲಿಕ್ಕಿಲ್ಲ. ಕೇಳಿರದಿದ್ದರೆ ಆಶ್ಚರ್ಯವೂ ಇಲ್ಲ. ಕಾರಣ ಈ ವಿಜ್ಞಾನಿಯ ದೇಶವಾಸಿಗಳು ಇಂದಿಗೂ ಅವರನ್ನು ನೆನಪಿಸಿಕೊಳ್ಳುವ ಸಾಧ್ಯತೆ ಇಲ್ಲ. ಭೌತಶಾಸ್ತ್ರಕ್ಕೆ ನೀಡುವ ನೊಬೆಲ್ ಪಾರಿತೋಷಕಕ್ಕಾಗಿ ಅವರನ್ನು ಆಯ್ಕೆ ಮಾಡಲಾದ ದಿನದಿಂದ ಇಂದಿನವರೆಗೆ ಅವರು ಚರ್ಚೆಗೆ ಗ್ರಾಸವಾಗಿದ್ದಾರೆ. ಅವರ ಸಾಧನೆ ಅದೆಷ್ಟು ಮಹತ್ವಪೂರ್ಣವಾಗಿತ್ತೆಂದರೆ ಅವರು ಇನ್ನಷ್ಟು ಕಾಲ ಬದುಕಿದ್ದರೆ ಅವರಿಗೆ ಇನ್ನೊಂದು ನೊಬೆಲ್ ಪಾರಿತೋಷಕ ಬರಬಹುದಿತ್ತು. ಇದು ಅವರ ಆತ್ಮೀಯ ಸ್ನೇಹಿತ ಹಾಗೂ ಮತ್ತೊಬ್ಬ ಪ್ರಸಿದ್ಧ ಭೌತವಿಜ್ಞಾನಿ ಪರ್ವೇಜ್ ಹೂದ್‌ಭಾಯಿ ಅಭಿಪ್ರಾಯ. ಸಲಾಂ ಅವರ ಸಂಶೋಧನೆಯು ‘ದೇವ ಕಣ’ ಎಂದು ಸುಪರಿಚಿತವಾಗಿರುವ ‘ಹಿಗ್ಸ್ ಬೊಸನ್’ ಆವಿಷ್ಕಾರಕ್ಕೆ ಬುನಾದಿ ಹಾಕಿತ್ತು. ಅದೇನೇ ಇರಲಿ ಆಲ್ಬರ್ಟ್ ಐನ್‌ಸ್ಟೀನ್ ಮೊದಲು ಮಾಡಿ ಅನೇಕ ಕಣಭೌತ ವಿಜ್ಞಾನಿಗಳು ಪಕ್ಕಾ ಆಸ್ತಿಕರಾಗಿದ್ದಾರೆ.
ಸಲಾಂ ಅವರು ನೊಬೆಲ್ ಪ್ರಶಸ್ತಿ ಸ್ವೀಕರಿಸಿದ ನಂತರ ಭಾರತ ಸರ್ಕಾರಕ್ಕೆ ಪತ್ರ ಬರೆದರು. ಪ್ರೊ.ಅನಿಲೇಂದ್ರ ಗಾಂಗುಲಿಯವರನ್ನು ಹುಡುಕಿ ಅವರ ವಿಳಾಸ ತಿಳಿಸಬೇಕೆಂದು ಅವರು ವಿನಂತಿಸಿಕೊಂಡರು. ಅವರನ್ನು ಪತ್ತೆ ಹಚ್ಚಲು ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಹಿಡಿಯಿತು. ಭಾರತ ಸರ್ಕಾರದಿಂದ ಪ್ರೊ.ಅನಿಲೇಂದ್ರ ಗಾಂಗುಲಿಯವರ ವಿಳಾಸ ಪಡೆದಾಗ ಅವರಿಗೆ ನೊಬೆಲ್ ಪ್ರಶಸ್ತಿ ಸ್ವೀಕರಿಸಿದ್ದಕ್ಕಿಂತ ಹೆಚ್ಚು ಖುಷಿಯಾಯಿತಂತೆ. ಡಾ.ಸಲಾಂ ಆ ಪ್ರೊಫೆಸರ್‌ರನ್ನು ಏಕೆ ಭೇಟಿಯಾಗಲು ತವಕಿಸುತ್ತಿದ್ದರು?
ಪ್ರೊ.ಗಾಂಗುಲಿಯವರು ಪಶ್ಚಿಮ ಬಂಗಾಳದ ದಕ್ಷಿಣ ಕೊಲಕತ್ತಾದ ತಮ್ಮ ನಿವಾಸದಲ್ಲಿ ಅಪರೂಪದ ಅತಿಥಿಯನ್ನು ಸ್ವಾಗತಿಸಲು, ಅಭಿನಂದಿಸಲು ಎದ್ದು ಕುಳಿತುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಡಾ.ಸಲಾಂ ಆ ಹಿರಿಯ ಜೀವವನ್ನು ಕಂಡೊಡನೆ ಅವರಿಗೆ ವಂದಿಸಿ ತಮ್ಮ ಜೇಬಿನಿಂದ ಪದಕ ತೆಗೆದವರೇ ಅವರ ಕೊರಳಲ್ಲಿ ಹಾಕಿದರು. “ಸರ್, ಈ ನೊಬೆಲ್ ಪಾರಿತೋಷಕ ತಮ್ಮದು. ತಮಗೆ ಇದನ್ನು ಸಮರ್ಪಿಸುತ್ತಿದ್ದೇನೆ” ಎಂದರು ಡಾ.ಸಲಾಂ. ಇಬ್ಬರೂ ಆನಂದಭಾಷ್ಪ ಸುರಿಸಿದರು.
ಇದನ್ನು ಓದಿದ್ದೀರಾ?: ನೆನಪು | ಮೌನಕ್ರಾಂತಿಯ ಹರಿಕಾರ ರಾಗಿತಜ್ಞ ಲಕ್ಷ್ಮಣಯ್ಯ: ಕೆ. ಪುಟ್ಟಸ್ವಾಮಿ ಬರೆಹ
ಡಾ.ಮುಹಮ್ಮದ್ ಅಬ್ದುಸ್ಸಲಾಂ ಅವಿಭಜಿತ ಪಂಜಾಬಿನ ಝಾಂಗದಲ್ಲಿ ಜನಿಸಿದ್ದರು. ಅವರು ಲಾಹೋರಿನ ಸನಾತನ ಧರ್ಮ ಕಾಲೇಜಿನಲ್ಲಿ ಓದುತ್ತಿದ್ದಾಗ ಪ್ರೊ.ಅನಿಲೇಂದ್ರ ಗಾಂಗುಲಿಯವರು ಗಣಿತ ಪ್ರಾಧ್ಯಾಪಕರಾಗಿದ್ದರು. ಸಲಾಂ ಅವರಿಗೆ ಗಣಿತದಲ್ಲಿ ಅಷ್ಟೇನೂ ಆಸಕ್ತಿ ಇರಲಿಲ್ಲ. ಆದರೆ ಪ್ರೊ.ಗಾಂಗುಲಿಯವರು ಹೇಗೆ ಗಣಿತ ವಿಷಯವನ್ನು ಅಧ್ಯಯನ ಮಾಡಬೇಕೆಂಬುದನ್ನು ತಿಳಿಸಿಕೊಟ್ಟರು. ಅವರ ಈ ಕಲಿಕೆಯಿಂದಾಗಿ ಸಲಾಂ ಅವರಿಗೆ ತುಂಬ ಪ್ರಯೋಜನವಾಯಿತು. ಅವರು ಭೌತಶಾಸ್ತ್ರದಲ್ಲಿ ಮಹತ್ವದ್ದನ್ನೇನಾದರೂ ಸಾಧಿಸಬೇಕೆಂದು ದೃಢಸಂಕಲ್ಪ ಮಾಡಿದಾಗ ಗಣಿತದ ಜ್ಞಾನ ಅವರಿಗೆ ಸಹಕಾರಿಯಾಯಿತು. ಸಲಾಂ ವಾಸ್ತವದಲ್ಲಿ ಅಪರೂಪದ ಪ್ರತಿಭೆಯ ಗಣಿಯಾಗಿದ್ದರು.
ಭಾರತ ವಿಭಜನೆ ನಂತರ ಗಾಂಗುಲಿಯವರು ಪಶ್ಚಿಮ ಬಂಗಾಳಕ್ಕೆ ವಲಸೆ ಬಂದರು. ಅವರ ಶಿಷ್ಯ ಉನ್ನತ ವ್ಯಾಸಂಗಕ್ಕೆ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದ. ಸಲಾಂ ಕ್ಯಾಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪೂರೈಸಿ ಅಲ್ಲಿಯೇ ಅಧ್ಯಾಪಕರಾಗಿ ಸೇವೆ ಸಲ್ಲಿಸತೊಡಗಿದರು. ಪ್ರತಿಭಾವಂತ ಭೌತವಿಜ್ಞಾನಿಯಾಗಿ ಹೆಸರು ಮಾಡಿದರು. ಕಡೆಗೆ ಆ ವಿಜ್ಞಾನಿಯನ್ನು ಪಾಕಿಸ್ತಾನದ ಅಧ್ಯಕ್ಷರಿಗೆ ವಿಜ್ಞಾನ ಸಲಹೆಗಾರರಾಗಿ ಸೇವೆ ಸಲ್ಲಿಸಲು ಕೇಳಿಕೊಳ್ಳಲಾಯಿತು. ತಮ್ಮ ದೇಶವನ್ನು ಬಹುವಾಗಿ ಪ್ರೀತಿಸುತ್ತಿದ್ದ ಸಲಾಂ ಸ್ವದೇಶಕ್ಕೆ ಬರಲು ಒಪ್ಪಿಕೊಂಡರು. ಆಗ ಪಾಕಿಸ್ತಾನದಲ್ಲಿ ಬಡತನ ತಾಂಡವವಾಡುತ್ತಿತ್ತು. ಸಲಾಂ ಪಾಕಿಸ್ತಾನಕ್ಕೆ ಆಗಮಿಸಿದಾಗ ಶೈಕ್ಷಣಿಕವಾಗಿ ಅದು ಇನ್ನೂ ಬಡವಾಗಿತ್ತು. ಒಂದು ಪುಟ್ಟ ಕೋಣೆಯಲ್ಲಿ ಸಲಾಂ ತಮ್ಮ ಕೆಲಸ ನಿರ್ವಹಿಸತೊಡಗಿದರು.
ಭಾರತದಲ್ಲಿ ಹೋಮಿ ಭಾಭಾ ಯಾವ ಸ್ಥಾನಮಾನ ಹೊಂದಿರುವರೋ ಸಲಾಂ ಪಾಕಿಸ್ತಾನದಲ್ಲಿ ಅದೇ ಸ್ಥಾನಮಾನ ಗಳಿಸಿಕೊಂಡರು. ವಾಸ್ತವದಲ್ಲಿ ಭಾಭಾ ಅವರೇ ಡಾ.ಸಲಾಂ ಅವರಿಗೆ ರೋಲ್ ಮಾಡೆಲ್ ಆಗಿದ್ದರು. ಪಾಕಿಸ್ತಾನವನ್ನು ನ್ಯೂಕ್ಲಿಯರ್ ಶಕ್ತಿಯನ್ನಾಗಿ ಮಾಡುವಲ್ಲಿ ಸಲಾಂ ಅವರ ಪ್ರಮುಖ ಪಾತ್ರವಿದೆ. ಆದರೆ ಅವರನ್ನು ಮುಸ್ಲಿಮರೇ ಅಲ್ಲವೆಂದು ಸರ್ಕಾರ ಘೋಷಿಸಿಬಿಟ್ಟಿತು. ಸಲಾಂ ಅಷ್ಟೇ ಅಲ್ಲ ಅವರ ಸ್ನೇಹಿತರು, ಅಭಿಮಾನಿಗಳು ಕಣ್ಣೀರಾದರು. ತಕ್ಷಣ ಸಲಾಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂಗ್ಲೆಂಡಿಗೆ ಮರಳಿ ಹೋದರು. ಅವರು ಮತ್ತೆಂದೂ ಪಾಕಿಸ್ತಾನಕ್ಕೆ ಬರಲೇ ಇಲ್ಲ. ಹಾಂ ಕಡೆಗೊಂದು ದಿನ ಅವರ ಮೃತದೇಹ ಅವರ ತಾಯ್ನಾಡಿಗೆ ಬಂದಿತು. ಆದರೆ ಸರ್ಕಾರದ ಪರವಾಗಿ ಒಬ್ಬ ಪ್ರತಿನಿಧಿಯೂ ಹಾಜರಾಗಿ ಆ ಪ್ರತಿಭಾವಂತ ವಿಜ್ಞಾನಿಗೆ ಅಂತಿಮ ನಮನ ಸಲ್ಲಿಸಲಿಲ್ಲ. ಕಾರಣ ಅವರು ಅಹಮದಿಯಾ ಪಂಗಡಕ್ಕೆ ಸೇರಿದವರಾಗಿದ್ದರು. ಧರ್ಮಾಧಾರಿತ ದೇಶದಲ್ಲಿ ಧರ್ಮದ ಗುತ್ತಿಗೆ ಹಿಡಿದವರು ಹಾಗೂ ದುರುಳ ರಾಜಕಾರಣಿಗಳ ದುಷ್ಟಕೂಟ ಕಾರ್ಯಪ್ರವೃತ್ತವಾದಾಗ ಆಗುವುದು ಇಷ್ಟೇ.

ಇಂದು ಯಾರಾದರೂ ಸಲಾಂ ಅವರ ಸಮಾಧಿಗೆ ಭೇಟಿ ಕೊಟ್ಟರೆ ಅಲ್ಲಿ ನಟ್ಟಿರುವ ಕಲ್ಲಿನಲ್ಲಿ “ಪಾಕಿಸ್ತಾನದ ಪ್ರಥಮ ಮುಸ್ಲಿಂ ನೊಬೆಲ್ ಪ್ರಶಸ್ತಿ ವಿಜೇತ ಡಾ.ಮುಹಮ್ಮದ್ ಅಬ್ದುಸ್ಸಲಾಂ” ಎಂದು ಬರೆದಿದ್ದರೂ ‘ಮುಸ್ಲಿಂ’ ಎನ್ನುವುದರ ಮೇಲೆ ಬಿಳಿ ಬಣ್ಣ ಬಳಿದು ಅಳಿಸಿ ಹಾಕಿರುವುದನ್ನು ಗಮನಿಸಿ ಅವರಿಗೆ ತುಂಬ ವಿಷಾದವೆನಿಸುತ್ತದೆ. ಇಂದು ಪಾಕಿಸ್ತಾನದ ಯಾವ ಪಠ್ಯ ಪುಸ್ತಕದಲ್ಲೂ ಸಲಾಂ ಅವರ ಹೆಸರಿಲ್ಲ. ಅವರೊಬ್ಬ ಸಾಮಾನ್ಯ ವಿಜ್ಞಾನಿಯೇನೋ ಎನ್ನುವಂತೆ ಇಂದಿನ ತಲೆಮಾರು ಭಾವಿಸುವಂತಾಗಿದೆ. ಆದರೆ ಡಾ.ಸಲಾಂ ಅವರನ್ನು ಜಗತ್ತು ಎಂದಿಗೂ ಮರೆಯಲಾರದು.
-ಹಸನ್ ನಯೀಂ ಸುರಕೋಡ