ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್‌ಗೆ ಹೋಗಿದ್ದರ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಶಾಸಕನಾಗಿ ಕ್ಷೇತ್ರದ ಕಾರ್ಯಕ್ರಮಗಳಿಗೆ ಹೋಗದೇ ತಪ್ಪಿಸಿಕೊಳ್ಳುತ್ತಿದ್ದ ಪ್ರದೀಪ್ ಈಶ್ವರ್, ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿದ್ದರು. ಅದರ ಸುತ್ತಲಿನ ಬೆಳವಣಿಗೆಗಳ ಬಗ್ಗೆ ಒಂದು ವಿಡಂಬನೆ ಇಲ್ಲಿದೆ.
ನಮ್ಮ ಫೂಟ್ ಲಾಯರ್ ಪರಮೇಶಿ ಅಂದ್ರೆ ನಮಗೆ ನ್ಯೂಸ್ ಬುಲೆಟಿನ್ ಇದ್ದ ಹಾಗೆ. ಜಗತ್ತಿನ ಸಕಲ ಸುದ್ದಿ ಸ್ವಾರಸ್ಯಗಳನ್ನೂ ಅವನು ತಂದು ನಮ್ಮ ಮುಂದೆ ಸುರಿಯುತ್ತಿದ್ದ. ಚಾನೆಲ್‌ಗಳಲ್ಲಿ ತೋರಿಸೋ ನ್ಯೂಸ್ ಬುಲೆಟಿನ್‌ನಲ್ಲಿ ಒಂದು ಅಥವಾ ಎರಡು ಬ್ರೇಕಿಂಗ್ ನ್ಯೂಸ್ ಇದ್ದರೆ ಹೆಚ್ಚು. ಆದರೆ, ನಮ್ಮ ಪರಮೇಶಿ ಬುಲೆಟಿನ್ ತುಂಬಾ ಬ್ರೇಕಿಂಗ್ ನ್ಯೂಸ್‌ಗಳೇ ತುಂಬಿರುತ್ತವೆ.
ಪರಮೇಶಿ ಕಳೆದ ಮೂರ್ನಾಲ್ಕು ದಿನದಿಂದ ಕಂಡಿರಲಿಲ್ಲ. ಅಂದರೆ, ಭರ್ಜರಿ ಸುದ್ದಿನೇ ಸಿಗುತ್ತೆ ಅನ್ನೋದು ನಮಗೆ ಖಾತ್ರಿಯಾಯಿತು.
‘ಏನ್ ಪರಮೇಶಣ್ಣ, ನಾಕ್ ದಿನದಿಂದ ಎಲ್ಲೋಗಿದ್ದೆ, ಕಾಣ್ಲಿಲ್ಲ’ ಎಂದ ಗಫೂರ. ಪರಮೇಶಿ ಖುಷಿಯಿಂದ ಸುದ್ದಿ ಹೇಳಲಿ ಎಂದು ‘ಅಣ್ಣ’ ಎಂದಿದ್ದ.
‘ಬಿಗ್ ಬಾಸ್ ಮನೆ ಹತ್ರ ಹೋಗಿದ್ನಪ್ಪಾ’ ಎಂದ ಪರಮೇಶಿ.
‘ಬಿಗ್ ಬಾಸ್ ಮನೆಗೆ ಎಲ್ರನ್ನೂ ಬಿಡ್ತಾರಾ’ ಎಂದ ಮಧ್ಯೆ ಬಾಯಿ ಹಾಕಿದ ಆತುರಗಾರ ಪ್ರಶಾಂತ.
‘ಎಲ್ರನ್ನೂ ಬಿಡಲ್ವೋ. ನಾನು ಜರ್ನಲಿಸ್ಟ್ ಆಗಿದ್ದಕ್ಕೆ ಇನಾಗರೇಷನ್‌ಗೆ ಕರೆದಿದ್ರು..’ ಎಂದು ಸಿಡಿಮಿಡಿಗೊಂಡ ಪರಮೇಶಿ.
ಇಲ್ಲೊಂದು ವಿಷಯ ಹೇಳಬೇಕು; ಪರಮೇಶ್ ಅಲಿಯಾಸ್ ಪರಮೇಶಿ, ಆಲ್ ಇನ್ ಒನ್ ಮಷೀನ್ ಇದ್ದಂತೆ. ವಕೀಲ, ಪತ್ರಕರ್ತ, ರಾಜಕಾರಣಿ, ಹೀಗೆ ಸಮಯಕ್ಕೆ ತಕ್ಕ ವೇಷ, ಅಗತ್ಯಕ್ಕೆ ತಕ್ಕ ಉದ್ಯೋಗ ಆತನದ್ದು. ಇರಲಿ, ಈಗ ಮುಖ್ಯ ವಿಚಾರಕ್ಕೆ ಬರೋಣ.
ಪತ್ರಕರ್ತ ಪರಮೇಶಿ ಹೇಳಿದ್ದರ ಸಾರಾಂಶ ಇಷ್ಟು: ಬಿಗ್ ಬಾಸ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆಯೋಜಕರು ಪತ್ರಕರ್ತರನ್ನು ಕರೆದುಕೊಂಡು ಹೋಗಿದ್ದರು. ಕಾರ್ಯಕ್ರಮ ಮುಗಿದ ನಂತರ ಎಲ್ಲರೂ ವಾಪಸ್ ಬಂದುಬಿಟ್ಟರು. ಪರಮೇಶಿ ಮಾತ್ರ, ಕಳ್ಳ ಕುರಿಯಂತೆ ಮಂದೆಯಿಂದ ತಪ್ಪಿಸಿಕೊಂಡು, ಅಲ್ಲೇ ಅಲೆಯುತ್ತಾ, ಬ್ರೇಕಿಂಗ್ ನ್ಯೂಸ್‌ಗಾಗಿ ಹುಡುಕಾಡ್ತಿದ್ದನಂತೆ.
‘ಹಾಗೆ ಅಲ್ಲಿ ಓಡಾಡ್ತಾ ಇದ್ದಾಗ ಏನೇನು ನೋಡಿದೆ ಗೊತ್ತೇನ್ರೋ’ ಎಂದು ನಮ್ಮ ಕಡೆ ನೋಡಿದ.
ಏನು ಮಾತಾಡಿದ್ರೂ ಅವನು ಬ್ರೇಕಿಂಗ್ ನ್ಯೂಸ್ ಹೇಳೋದು ತಡ ಮಾಡ್ತಾನೆ ಎಂದು ನಾವೆಲ್ಲ ಸುಮ್ಮನೇ ಅವನ ಮುಖ ನೋಡತೊಡಗಿದವು.
‘ತಮ್ಮ ಎಂಎಲ್‌ಎ ಪ್ರದೀಪ್ ಈಶ್ವರ್‌ನ ಹುಡುಕ್ಕೊಂಡು ಅವರ ಕ್ಷೇತ್ರ ಚಿಕ್ಕಬಳ್ಳಾಪುರದ ಜನ ಲಾರಿಗಳಲ್ಲಿ ಬಿಗ್ ಬಾಸ್ ಮನೆ ಹತ್ರ ಬಂದಿದ್ರು..’
‘ಹೌದೇನೋ ಪರಮೇಶಿ..’ ಬ್ರೇಕಿಂಗ್ ನ್ಯೂಸ್‌ನ ಬಿಸಿಗೆ ಧಡಕ್ಕನೆ ಎದ್ದುನಿಂತ ಗಫೂರ.
ತೆಲುಗು ಸಿನಿಮಾಗಳಲ್ಲಿ ಹೀರೋನ ಹುಡುಕಿಕೊಂಡು ರೌಡಿಗಳು ಲಾರಿಗಳಲ್ಲಿ ಬರುವ ಸೀನ್ ಕಣ್ಣ ಮುಂದೆ ಬಂತು ಅವನಿಗೆ.
‘ಹೌದಪ್ಪಾ. ಅವರೆಲ್ಲ ಬಿಗ್ ಬಾಸ್ ಮನೆ ಮೇಲೆ ಬಿದ್ರೆ ಮನೆ ಪೀಸ್ ಪೀಸ್ ಅಂತಾ ಅವರೇನು ಮಾಡಿದ್ರು ಅಂದ್ರೆ, ಪ್ರದೀಪ್ ಈಶ್ವರ್‌ನ ಮನೆಯ ಹಿಂಬಾಗಿಲಿನಿಂದ ಹೊರಗೆ ಕಳಿಸಿಬಿಟ್ರು..’
‘ಹಂಗಾದ್ರೆ, ಅವರನ್ನು ಬಿಗ್ ಬಾಸ್ ಮನೆಯಿಂದ ಸದಸ್ಯರೆಲ್ಲ ಬೀಳ್ಕೊಡುವ ದೃಶ್ಯಗಳೂ ಪ್ರಸಾರವಾದವಲ್ಲ..’ ನಡುವೆ ಬಾಯಿ ಹಾಕಿದ ಪ್ರಶಾಂತ.
‘ಹೇಳ್ತೀನಿ ಕೇಳ್ರೋ.. ಲಾರಿಯಲ್ಲಿ ಬಂದಿದ್ದ ಚಿಕ್ಕಬಳ್ಳಾಪುರದ ಜನ ಮನೆಯೊಳಗೆ ಹೋಗಿ ಎಲ್ಲಾ ಕಡೆ ಹುಡುಕಿದ್ರೂ ಪ್ರದೀಪ್ ಈಶ್ವರ ಸಿಗಲಿಲ್ಲ. ಅಷ್ಟೊತ್ತಿಗೆ ಮೀಡಿಯಾದಲ್ಲಿ ಪ್ರದೀಪ್ ಈಶ್ವರ್ ವಾಪಸ್ ಬಂದುಬಿಟ್ಟ ಅಂತ ಸುದ್ದಿ ಬಂತು. ಸರಿ, ಊರ್ಕಡೆ ಹೋಗಿರ್ತಾನೆ ಬನ್ನಿ ಅಂತ ಜನರೆಲ್ಲ ಲಾರಿ ತಿರುಗಿಸಿಕೊಂಡು ವಾಪಸ್ ಹೊರಟೋದ್ರು..’
‘ಐನಾತಿ ವಿಚಾರ ಏನಪ್ಪಾ ಅಂದ್ರೆ, ಪ್ರದೀಪ್ ಈಶ್ವರ್ ಹಿಂಬಾಗಿಲ ಮೂಲಕ ವಾಪಸ್ ಬಂದ್ರಾ. ಆದ್ರೆ, ಬಿಗ್ ಬಾಸ್ ಮನೆ ಬಿಟ್ಟು ಬಂದಿರ್ಲಿಲ್ಲ. ಅಲ್ಲೇ ಮೂಲೇಲಿ ಬಚ್ಚಿಟ್ಟುಕೊಂಡಿದ್ರು. ಜನ ವಾಪಸ್ ಹೋಗ್ತಿದ್ದಂಗೇನೇ ಅವರನ್ನು ಮತ್ತೆ ಒಳಗೆ ಕರೆದುಕೊಂಡು ಬೀಳ್ಕೊಡುಗೆ ಸೀನ್ ಶೂಟ್ ಮಾಡಿದ್ರು..’
‘ಏನೇನು ನಡೆಯುತ್ತೋ..’ ಎಂದ ಪ್ರಶಾಂತ.
‘ಇಷ್ಟೆಲ್ಲ ಆದ್ರೂ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಯಲ್ಲೇ ಅವ್ರೆ’
ಮತ್ತೊಂದು ಬ್ರೇಕಿಂಗ್ ನ್ಯೂಸ್ ಕೊಟ್ಟ ಪರಮೇಶಿ
‘ಇದೇನೋ ಉಪೇಂದ್ರನ ಸಿನಿಮಾಗಳ ಥರ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡ್ತೀಯಾ..’ ಎಂದ ಗಫೂರ.
‘ಎಲೆಕ್ಷನ್ ಟೈಮಲ್ಲಿ ಪ್ರದೀಪ್ ಈಶ್ವರ್ ಡೈಲಾಗ್ ಹೊಡೀತಿದ್ರಲ್ಲಾ, ಅದೆಲ್ಲ ವೈರಲ್ ಆಗಿದ್ದನ್ನು ಬಿಗ್ ಬಾಸ್ ಗಮನಿಸಿದ್ರು. ಈ ಥರ ಜನರನ್ನು ಸೆಳೆಯೋ ಥರ ಡೈಲಾಗ್ ಹೊಡೆಯೋದೆಂಗೆ ಅನ್ನೋದನ್ನು ಸ್ಪರ್ಧಿಗಳಿಗೆಲ್ಲ ಕಲಿಸಿ ಅಂತ ಕೇಳಿಕೊಂಡ್ರು. ಸ್ಕ್ರೀನ್ ಮೇಲೆ ಬಂದರಲ್ವೆ ಜನ ಬಂದು ಗಲಾಟೆ ಮಾಡೋದು. ಅದಿಕ್ಕೇ ಅಲ್ಲೇ ಬಾಗಿಲ ಹಿಂದೆ ನಿಂತ್ಕೊಂಡು ಯಾವ ಡೈಲಾಗ್ ಹೆಂಗೆ ಹೇಳ್ಬೇಕು, ಹೆಂಗ್ ಮಾಡಿದ್ರೆ ಜನಕ್ಕೆ ಹೆಚ್ಚು ರಂಜನೆ ಸಿಗುತ್ತೆ ಅನ್ನೋದೆಲ್ಲ ಹೇಳಿಕೊಡ್ತಾ ಅವ್ರೆ..’
‘ಜನ ಹುಡಿಕ್ಕೊಂಡು ಬಂದ್ರೂ ಬಾಗಿಲ ಹಿಂದೆ ಬಚ್ಚಿಟ್ಟುಕೊಳ್ಳೋ ಅವನ್ಯಾವ ಸೀಮೆ ಎಂಎಲ್‌ಎನೋ. ಬಿಗ್ ಬಾಸ್‌ನವ್ರಿಗೆ ಇನ್ಯಾರೂ ಸಿಗಲಿಲ್ವಾ’ ಕೇಳಿದ ಪ್ರಶಾಂತ.
‘ಅವರೂ ಹುಡುಕಿದ್ರಪ್ಪಾ.. ಘನಂದಾರಿ ಆಸಾಮಿಗಳನ್ನೇ ಲಿಸ್ಟ್ ಮಾಡಿದ್ರು. ರೇಪಿಸ್ಟ್ ಉಮೇಶ್ ರೆಡ್ಡಿ, ಸೀರಿಯಲ್ ಕಿಲ್ಲರ್ಸ್ ದಂಡುಪಾಳ್ಯ ಗ್ಯಾಂಗ್‌ನವ್ರು, ಸೈನೇಡ್ ಮೋಹನ ಇವರನ್ನೆಲ್ಲ ಕರ್ಕೊಂಡೋಗಬೇಕು ಅಂತ ಪ್ಲಾನ್ ಮಾಡಿದ್ರು. ಆದರೆ, ಪೊಲೀಸರು ಪರ್ಮಿಷನ್ ಕೊಡ್ಲಿಲ್ಲ. ಹಂಗಾಗಿ ಸುಮ್ಕಾಗಿಬಿಟ್ರು’
ಇವನು ಕೊಡೋ ಬ್ರೇಕಿಂಗ್ ನ್ಯೂಸ್‌ಗೆ ತನ್ನ ತಲೆ ಕೆಡೋದು ಗ್ಯಾರಂಟಿ ಅನ್ನಿಸ್ತು ಗಫೂರನಿಗೆ.
‘ಹೋಗೋಣ ನಡೀರೋ’ ಅಂದ ಏಳುತ್ತಾ.
‘ಇನ್ನೊಂದ್ ವಿಚಾರ ಗೊತ್ತೇನ್ರೋ..’ ಇನ್ನೂ ತನ್ನ ಸರಕು ಮುಗಿದಿಲ್ಲ ಎನ್ನುವವನಂತೆ ಕೇಳಿದ ಪರಮೇಶಿ.
‘ಏನು’ ಎಂದು ಕೇಳಲು ಧೈರ್ಯ ಮತ್ತು ಶಕ್ತಿ ಎರಡೂ ಸಾಲದೇ ಅವನೆಡೆಗೇ ನೋಡಿದರು.
ಈ ಸುದ್ದಿ ಓದಿದ್ದೀರಾ: ಬಿಗ್‌ಬಾಸ್‌ಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್; ನೆಟ್ಟಿಗರು ಕಿಡಿ
‘ಡ್ರೋನ್ ಪ್ರತಾಪ್ ಬಿಗ್ ಬಾಸ್‌ಗೆ ಹೋಗೋ ಮೊದಲು ತನ್ನ ಬಳಿ ಇದ್ದ ಡ್ರೋನ್‌ನ ವಿಶ್ವೇಶ್ವರ ಭಟ್ಟರಿಗೆ ಕೊಟ್ಟ. ಬಿಗ್ ಬಾಸ್ ಮನೆಯ ಹೊರಗೆ ಅವನು ಭಟ್ಟರಿಗೆ ಡ್ರೋನ್ ಕೊಡ್ತಾ ಇದ್ದದ್ದನ್ನು ನಾನೇ ನೋಡಿದೆ. ಭಟ್ಟರು ಅದನ್ನು ತೆಗೆದುಕೊಂಡು ಜರ್ಮನಿಗೆ ಹೋಗಿ ಅಲ್ಲಿನ ನದಿ, ಕಣಿವೆ ಎಲ್ಲ ವಿಡಿಯೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹಾಕ್ತಾ ಇದ್ದಾರೆ. ನೋಡು ಟ್ವಿಟರ್‌ನಲ್ಲಿ ಭಟ್ಟರು ಡ್ರೋನ್‌ನಲ್ಲಿ ತೆಗೆದಿರೋ ವಿಡಿಯೋ..’ ಎಂದು ತೋರಿಸಿದ.
ಮನೆಗೆ ಹೋಗಲು ಎದ್ದಿದ್ದವರು ಪರಮೇಶಿಯ ಬ್ರೇಕಿಂಗ್ ನ್ಯೂಸ್‌ಗಳ ದಾಳಿಗೆ ಸುಸ್ತಾಗಿ ಅಲ್ಲೇ ಕುಳಿತರು.

ಕೆರೆಕೆಳಗಿನಹಳ್ಳಿ ಶ್ರೀನಿವಾಸ್
ಲೇಖಕ, ಸಾಮಾಜಿಕ ಹೋರಾಟಗಾರ