1992ರ ಬಾಬರಿ ಮಸೀದಿ ಧ್ವಂಸದಿಂದ 2019ರಲ್ಲಿ ಜಾರಿಗೊಂಡ ಸಿಎಎ ಕಾಯ್ದೆವರೆಗಿನ ಬಿಜೆಪಿ-ಆರ್‌ಎಸ್‍ಎಸ್‍ನ ಮತಧರ್ಮಾಂಧತೆ-ಬ್ರಾಹ್ಮಣಶಾಹಿ ಸಿದ್ಧಾಂತ ಏರುಮುಖದಲ್ಲಿದ್ದರೆ, ನೂರಾನಿಯಂತಹ ರಾಜಕೀಯ ಚಿಂತಕರು ಈ ನಾಗಲೋಟಕ್ಕೆ ಸೈದ್ಧಾಂತಿಕವಾಗಿ, ಚಾರಿತ್ರಿಕವಾಗಿ ಅಲ್ಲಲ್ಲಿ ತಡೆಯೊಡ್ಡುವ ಒಡ್ಡುಗಳಂತಿದ್ದರು.
ಆಗಸ್ಟ್ 29ರಂದು ಅನಾರೋಗ್ಯದ ಕಾರಣದಿಂದ 94ರ ವಯಸ್ಸಿನಲ್ಲಿ ನಿಧನರಾದ ಎ.ಜಿ.ನೂರಾನಿ ಅವರು ವಿಶಿಷ್ಟ ಮಾದರಿಯ ರಾಜಕೀಯ ಚಿಂತಕ, ಕಾನೂನು ತಜ್ಞರಾಗಿದ್ದರು. ಆರ್‌ಎಸ್‍ಎಸ್‍ನ ಸಿದ್ಧಾಂತಗಳು, ಅದರ ಸಂಘಟನೆಯ ಸ್ವರೂಪ ಕುರಿತು ಅವರು ಬರೆದ ಪುಸ್ತಕಗಳು ಇಂದಿಗೂ ನಮಗೆ ಆಕರ ಕೃತಿಗಳಾಗಿವೆ. ಹತ್ತು ವರ್ಷಗಳ ಹಿಂದೆ 1, ಜೂನ್ 2014ರಂದು ‘ಇಂತಹ ಎದೆ ಒಡೆಯುವಂತಹ ಸವಾಲುಗಳು ಮುಂದಿದ್ದರೂ ಸಹ ಸೆಕ್ಯುಲರ್ ಶಕ್ತಿಗಳು ತಮ್ಮನ್ನು ಪುನರ್ ರೂಪಿಸಿಕೊಳ್ಳಬೇಕಿದೆ’ ಎಂದು ಹೇಳಿದ್ದರು. ಆಗ ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮೇಲಿನಂತೆ ಅಭಿಪ್ರಾಯಪಟ್ಟಿದ್ದ ನೂರಾನಿಯವರು ಹತ್ತು ವರ್ಷಗಳ ನಂತರ ಮೋದಿ ಮೂರನೇ ಬಾರಿಗೆ ಪುನರಾಯ್ಕೆಯಾದಾಗ ಯಾವ ರೀತಿ ಪ್ರತಿಕ್ರಿಯಿಸಿದ್ದರು ಎಂದು ಗೊತ್ತಿಲ್ಲ. ಏಕೆಂದರೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ನೂರಾನಿಯಂತಹ ಅಪಾರ ಬದ್ಧತೆಯುಳ್ಳ ಸೆಕ್ಯುಲರ್ ಚಿಂತಕರು ದೈಹಿಕ ನೋವಿನ ಜೊತೆಗೆ ತನ್ನ ದೇಶ ಹಿಡಿದಿರುವ ದಿಕ್ಕನ್ನು ಕಂಡು ಮಾನಸಿಕವಾಗಿಯೂ ಯಾತನೆ ಅನುಭವಿಸುತ್ತಾರೆ.
1992ರ ಬಾಬರಿ ಮಸೀದಿ ಧ್ವಂಸದಿಂದ 2019ರಲ್ಲಿ ಜಾರಿಗೊಂಡ ಸಿಎಎ ಕಾಯ್ದೆವರೆಗಿನ ಬಿಜೆಪಿ-ಆರ್‌ಎಸ್‍ಎಸ್‍ನ ಮತಧರ್ಮಾಂದತೆ-ಬ್ರಾಹ್ಮಣಶಾಹಿ ಸಿದ್ಧಾಂತ ಏರುಮುಖದಲ್ಲಿದ್ದರೆ ನೂರಾನಿಯಂತಹ ರಾಜಕೀಯ ಚಿಂತಕರು ಈ ನಾಗಲೋಟಕ್ಕೆ ಸೈದ್ಧಾಂತಿಕವಾಗಿ, ಚಾರಿತ್ರಿಕವಾಗಿ ಅಲ್ಲಲ್ಲಿ ತಡೆಯೊಡ್ಡುವ ಒಡ್ಡುಗಳಂತಿದ್ದರು. ಈ ಮತಾಂಧರೊಂದಿಗೆ ಜೀವಪರ ಚಿಂತನೆಯಲ್ಲಿ ಮುಖಾಮುಖಿಯಾಗುವ ಬಗೆಯನ್ನು ತಾವೂ ಕಲಿಯುತ್ತಾ ನಮಗೂ ಕಲಿಸಿದರು. ಜವಾಹರಲಾಲ್ ನೆಹರೂ ಘರಾಣದ ಸೆಕ್ಯುಲರ್ ಚಿಂತಕರಾಗಿದ್ದ ನೂರಾನಿ ಅಧ್ಯಯನ ಮತ್ತು ಸಂಶೋಧನೆಯ ಕುರಿತಾದ ಅಚಲ ನಿಷ್ಠೆ ಮತ್ತು ಸೂಕ್ಷ್ಮ ಸಂವೇದನೆಯನ್ನು ಮೈಗೂಡಿಸಿಕೊಂಡಿದ್ದರು.
ತಾವು ಕಂಡುಕೊಂಡ ಲಿಬರಲ್ ಪ್ರಜಾತಾಂತ್ರಿಕ ಮಾರ್ಗದಲ್ಲಿ ಚಿಂತಿಸಿದರು ಮತ್ತು ಅದೆ ರೀತಿ ಬದುಕಿದರು. ಸುಮಾರು ಹದಿನೈದು ವರ್ಷಗಳ ಹಿಂದೆ 1968ರ ಅಹಮದಾಬಾದ್ ಕೋಮು ಗಲಭೆ, 1980ರ ಮೊರದಬಾದ್, 1984ರ ಭಿವಂಡಿ ಗಲಭೆ, 1989ರ ಬಾಗಲ್ಪುರ್ ಗಲಭೆ, 1992ರ ಬಾಬರಿ ಮಸೀದಿ ಧ್ವಂಸ, 2002ರ ಗುಜರಾತ್ ಹತ್ಯಾಕಾಂಡ ಕುರಿತು ನೂರಾನಿಯವರೊಂದಿಗೆ ಸುಮಾರು ನಾಲ್ಕು ಗಂಟೆಗಳ ಕಾಲ ಚರ್ಚೆ ನಡೆಸಿದ್ದೆ. ಈ ಮಾತುಕತೆಯಲ್ಲಿ ಆರ್‌ಎಸ್‍ಎಸ್ ಪ್ರಾಯೋಜಿತ ಕೋಮು ಗಲಭೆಗಳ ವಿವಿಧ ಆಯಾಮಗಳ ಕುರಿತು ಅವರಿಂದ ನಾನು ಕಲಿತ ಪಾಠಗಳು ಕೇವಲ ಮಾಹಿತಿಯಾಗಿರಲಿಲ್ಲ. ನನ್ನ ಆಲೋಚನಾ ಕ್ರಮವನ್ನೇ ಬದಲಿಸಿಬಿಟ್ಟಿತು. ಅವರ ನೆನಪಿನ ಗಣಿಯಲ್ಲಿರುವ ಚಾರಿತ್ರಿಕ ಘಟನೆಗಳು ನಿಖರ ಗ್ರಹಿಕೆಗಳ ಮೂಲಕ ನಮಗೆ ಕರಾರುವಾಕ್ಕಾಗಿ ಮನದಟ್ಟು ಮಾಡಿಕೊಡುತ್ತಿದ್ದವು. ಈ ಮೂವತ್ತು ವರ್ಷಗಳಲ್ಲಿ ಭಾರತದ ಬಹು ಸಂಸ್ಕೃತಿ ಹಂತ ಹಂತವಾಗಿ ಅವನತಿ ಹೊಂದುತ್ತಾ ಬಂದರೂ ಸಹ ನೂರಾನಿಯಂತಹ ಚಿಂತಕರು ಚಾರಿತ್ರಿಕ ಉತ್ಖನನದ ಮೂಲಕ ಅದರ ಪುನರ್ ರೂಪಿಸುವ ಕೆಲಸದಲ್ಲಿ ತೊಡಗಿದ್ದರು.

ಆಪ್ತ ಸ್ನೇಹಿತರ ಪಾಲಿಗೆ ಗಫೂರ್ ಸಾಬ್ ಆಗಿದ್ದ ನೂರಾನಿಯವರು ಬರೆದ Savarkar And Hindutva The Godse Connection(2002), The Babri Masjid Question 1528–2003: ‘A Matter of National Honour(volumes 1&2), the RSS menace of india (2019), kashmir dispute (1947-2012)ಪುಸ್ತಕಗಳು ಸ್ವತಂತ್ರ ಭಾರತದಲ್ಲಿ ಪ್ರಕಟಗೊಂಡ ಮಹತ್ವದ, ಅಥೆಂಟಿಕ್ ಆದ ಆಕರ ಕೃತಿಗಳು, ಎಲ್ಲಾ ತಲೆಮಾರುಗಳು ಅಧ್ಯಯನ ಮಾಡಬೇಕಾದ ಮಾದರಿ ಚಂತನೆಗಳಾಗಿವೆ. 8, ಎಪ್ರಿಲ್ 2005ರಲ್ಲಿ ಫ್ರಂಟ್‍ಲೈನ್ ಪತ್ರಿಕೆಯಲ್ಲಿ ಪ್ರಕಟಗೊಂಡ ಸಾವರ್ಕರ್ ಕ್ಷಮಾಪಣೆ ಪತ್ರ ಎನ್ನುವ ದೀರ್ಘ ಲೇಖನ ಈ ಹಿಂದುತ್ವವಾದಿಯ ಅಸಲಿ ಬಣ್ಣವನ್ನು ಬಹಿರಂಗಗೊಳಿಸಿತು. ಹತ್ತೊಂಬತ್ತು ವರ್ಷಗಳ ನಂತರವೂ ಬಿಜೆಪಿ ಪಕ್ಷವು ಗಫೂರ್ ಸಾಬ್ ಬಿಚ್ಚಿಟ್ಟ ಆ ಚಾರಿತ್ರಿಕ ದಾಖಲೆಗೆ ಉತ್ತರಿಸಲು ಹೆಣಗುತ್ತಿದೆ.
168 ಪುಟಗಳ Savarkar And Hindutva ಪುಸ್ತಕದಲ್ಲಿ ‘ಹಿಂದುತ್ವ’ ನುಡಿಕಟ್ಟನ್ನು ಟಂಕಿಸಿದ ಸಾವರ್ಕರ್ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತಾರೆ. ಒಳಗೊಳ್ಳುವಿಕೆಯನ್ನು, ಪ್ರಾದೇಶಿಕ ರಾಷ್ಟ್ರೀಯತೆಯನ್ನು ತಿರಸ್ಕರಿಸಿ ತೀವ್ರವಾದಿ ಹಿಂದೂ ರಾಷ್ಟ್ರೀಯತೆಯನ್ನು ಪ್ರತಿಪಾದಿಸಿದ ಸಾವರ್ಕರ್ ಚಿಂತನೆಗಳನ್ನು ವಿಶ್ಲೇಷಿಸುತ್ತಾರೆ. 1948ರಲ್ಲಿ ಗಾಂಧಿಯವರ ವಿರುದ್ದ ನಡೆಸಲಾದ ಪಿತೂರಿಯಲ್ಲಿ ಸಾವರ್ಕರ್ ಪಾತ್ರವನ್ನು ಅಥೆಂಟಿಕ್ ಮಾಹಿತಿಗಳ ಮೂಲಕ ಬಹಿರಂಗೊಳಿಸುತ್ತಾರೆ. 1929ರಿಂದಲೂ ಗೋಡ್ಸೆ ಮತ್ತು ಸಾವರ್ಕರ್ ಪರಸ್ಪರ ಪರಿಚಿತರಾಗಿದ್ದರು ಮತ್ತು ಗಾಂಧಿ ಹತ್ಯೆಯ ಹಿಂದಿನ ದಿನಗಳಲ್ಲಿ ‘ವಿಜಯಿಯಾಗಿ ಬಾ’ ಎಮದು ಗೋಡ್ಸೆಗೆ ಹರಸಿದ ಘಟನೆಗಳನ್ನು ಸಾಕ್ಷಿ ಸಮೇತ ಮಂಡಿಸುತ್ತಾರೆ. ಸಾವರ್ಕರ್ ‘ಕ್ಷಮಾಪಣಾ ಶೂರತ್ವ’ ವನ್ನು ಸಹ ಬಯಲುಗೊಳಿಸುತ್ತಾರೆ. ಸತ್ಯೋತ್ತರ ಕಾಲದಲ್ಲಿ ಸಾವರ್ಕರ್ ವಿರುದ್ಧ ದೊಡ್ಡ ಪ್ರಕರಣವನ್ನೇ ದಾಖಲಿಸುತ್ತಾರೆ.
RSS menace of india(2019) ಎನ್ನುವ 500ಕ್ಕೂ ಹೆಚ್ಚು ಪುಟಗಳ, 25 ಅಧ್ಯಾಯಗಳ ಪುಸ್ತಕದಲ್ಲಿ ತನ್ನದು ಸಾಂಸ್ಕೃತಿಕ ಮತ್ತು ಫಿಲಾಂತ್ರೆಫಿ ಸಂಘಟನೆ ಎಂದು ಹೇಳಿಕೊಳ್ಳುವ ಆರ್‌ಎಸ್‍ಎಸ್‍ನ ಮುಖವಾಡವನ್ನು ಬಯಲುಗೊಳಿಸುತ್ತಾರೆ. ಸ್ವಾತಂತ್ರ್ಯ ಪೂರ್ವದಿಂದ ಸ್ವಾತಂತ್ರ್ಯ ನಂತರದ 21ನೆ ಶತಮಾನದವರೆಗಿನ ಆರ್‌ಎಸ್‍ಎಸ್‍ನ ಕೋಮುವಾದಿ ಅಜೆಂಡಾವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ. ಆರ್‌ಎಸ್‍ಎಸ್, ಬಿಜೆಪಿ, ಎಬಿವಿಪಿ, ವಿಎಚ್‍ಪಿ, ಬಜರಂಗದಳ ನಡುವಿನ ಸಂಬಂಧಗಳನ್ನು ವಿವರಿಸುತ್ತಾರೆ. ತಮ್ಮ ಕಾನೂನು ಪರಿಣಿತಿಯ ಮೂಲಕ ಈ ಸಂಘಟನೆಯ ಹಣಕಾಸು ಅವ್ಯವಹಾರಗಳ ಕುರಿತು ಬರೆಯುತ್ತಾರೆ. ಈ ಪುಸ್ತಕದಲ್ಲಿ ಆರ್‌ಎಸ್‍ಎಸ್ ಬಾಂಬೆ ಹೈಕೋರ್ಟ್ ಮುಂದೆ ‘ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿನ ಸೆಕ್ಷನ್ 10(2) ಪ್ರಕಾರ ಚಾರಿಟಿ ಸಂಸ್ಥೆ ತನ್ನದು’ ಎಂದು ಹೇಳಿಕೆ ಕೊಡುತ್ತದೆ, ಚಾರಿಟಿ ಆಯುಕ್ತರ ಮುಂದೆ ‘ತನ್ನದು ಚಾರಿಟಿ ಟ್ರಸ್ಟ್ ಅಲ್ಲ, ಬಾಂಬೆ ಸಾರ್ವಜನಿಕ ಟ್ರಸ್ಟ್ ಕಾಯ್ದೆ 1950ರ ಪ್ರಕಾರ ರಾಜಕೀಯ ಸಂಸ್ಥೆ ಸಂಘಟನೆ’ ಎಂದು ದಾಖಲಿಸುತ್ತದೆ’ ಎಂದು ಆರ್‌ಎಸ್‍ಎಸ್‍ನ ಸುಳ್ಳುಗಳನ್ನು ಖಚಿತ ಸಾಕ್ಷ್ಯಾಧಾರಗಳ ಮೂಲಕ ವಿವರಿಸುತ್ತಾರೆ. ಕಡೆಯ ಅಧ್ಯಾಯಗಳಲ್ಲಿ 2002ರ ಗುಜರಾತ್ ಹತ್ಯಾಕಾಂಡವು ಮೋದಿಯವರನ್ನು ‘ಆರ್‌ಎಸ್‍ಎಸ್‍ನ ಪೋಸ್ಟರ್ ಹುಡುಗನಾಗಿ’ ರೂಪಿಸಿರುವುದನ್ನು ವಿವರಿಸುತ್ತಾರೆ.
The Babri Masjid Question, 1528-2003(1947-2012) ಪುಸ್ತಕದಲ್ಲಿ ‘ಇಂಡೋ-ಪಾಕ್ ವಿವಾದ’, ‘ಯುಎಸ್‍ಎ ಮತ್ತು ಕಾಶ್ಮೀರ’, ‘ಮುಗಿದ ಆಟ’ ಎನ್ನುವ ಮೂರು ಅಧ್ಯಾಯಗಳಿವೆ. ಕಾಶ್ಮೀರ ವಿಚಾರವನ್ನು ರಾಜಕೀಯ ನಾಯಕತ್ವ ಹೇಗೆ ಸಂಕೀರ್ಣಗೊಳಿಸಿತು ಎಂದು ವಿವರಿಸುತ್ತಾರೆ. ನೆಹರೂ ಅವರ ಭಾಷಣಗಳು, ಕನ್ನಿಂಗ್‍ಹ್ಯಾಂ ದಾಖಲೆಗಳು, ಲಿಯಾಖತ್ ಖಾನ್‍ಗೆ ನೆಹರೂ ಬರೆದ ಅಧಿಕೃತ ಪತ್ರಗಳು, ಜಿನ್ನಾರ ಧೋರಣೆ ಮುಂತಾದ ಚಾರಿತ್ರಿಕ ದಾಖಲೆಗಳ ಮೂಲಕ ಕಾಶ್ಮೀರ ಪರಿಸ್ಥಿತಿ ಕುರಿತು ವಿವರಿಸುತ್ತಾರೆ. ಬ್ರಿಟಿಷರು, ಪಾಕಿಸ್ತಾನ ಮತ್ತು ಭಾರತದ ಸರ್ಕಾರಗಳು ಇಡೀ ಕಾಶ್ಮೀರ ವಿಷಯವನ್ನು ಕಗ್ಗಂಟಾಗಿಸಿರುವುದನ್ನು ವಿಶ್ಲೇಷಿಸುತ್ತಾರೆ. ನೆಹರೂ ಅವರು ತಮ್ಮ ಸಹೋದರಿ ವಿಜಯಲಕ್ಷ್ಮಿ ಪಂಡಿತ್ ಬರೆದ ಪತ್ರದಲ್ಲಿ ‘ಕಾಶ್ಮೀರಿಗಳು ಸ್ವತಂತ್ರರಾಗಲು ಬಯಸಿದರೆ ನಾನೇನು ಮಾಡಲು ಸಾಧ್ಯವಿಲ್ಲ, ಆದರೆ ಪಾಕಿಸ್ತಾನದ ಆಟಿಕೆಯಾಗಿ ದುರ್ಬಳಕೆಯಾಗುವುದು ಅತ್ಯಂತ ಕ್ರೌರ್ಯ ಎನಿಸಿಕೊಳ್ಳುತ್ತದೆ’ ಎಂದು ಹೇಳುತ್ತಾರೆ. ಮಹಮದ್ ಅಲಿ ಜಿನ್ನಾ ಅವರ ಪಾತ್ರವನ್ನು ಸಹ ವಿವರಿಸುತ್ತಾರೆ. ತನ್ನ ಅಹಂಕಾರದ ಮೂಲಕ ಷೇಕ್ ಅಬ್ದುಲ್ಲಾ (ಫರೂಕ್ ಅಬ್ದುಲ್ಲಾ ಅವರ ತಂದೆ) ಜೊತೆಗೆ ಕಣ್ಣಾಮುಚ್ಚಾಲೆ ಆಟವಾಡುವ ಜಿನ್ನಾ ಅಲ್ಲಿನ ಆದಿವಾಸಿ ಸಮುದಾಯವನ್ನೂ ಬೆಂಬಲಿಸುವುದರ ಮೂಲಕ ಪರಿಸ್ಥಿತಿಯನ್ನು ಸಂಕೀರ್ಣಗೊಳಿಸುತ್ತಾರೆ ಎಂದು ವಿವರಿಸಿದ್ದಾರೆ.
468 ಪುಟಗಳ ‘The madness of revivalism, Myth, history and archaeology, The nineteenth-century litigation, The Babri Masjid: 1886-1949, How a Masjid was converted into a temple on 22-23 December 1949, Prelude to the mosque’s demolition, 1984-1992, ಎರಡು ಸಂಪುಟಗಳಲ್ಲಿ ಪ್ರಕಟವಾದ ಪುಸ್ತಕದಲ್ಲಿ ರಾಮಮಂದಿರ-ಬಾಬರಿ ಮಸೀದಿ ವಿವಾದದ ಪುರಾತತ್ವ, ಕಾನೂನು, ರಾಜಕೀಯ, ಧಾರ್ಮಿಕ ಮುಖಗಳನ್ನು ವಿವರಿಸುತ್ತಾರೆ. ಇಂದಿಗೂ ಈ ಕೃತಿ ಎಲ್ಲಾ ಸಂಶೋಧಕರಿಗೆ ಅಥೆಂಟಿಕ್ ಅಕರ ಗ್ರಂಥ. 19ನೆ ಶತಮಾನದಲ್ಲಿ ಸಮಾಪ್ತಿಗೊಂಡಿದ್ದ ವಿವಾದಕ್ಕೆ 20ನೆ ಶತಮಾನದಲ್ಲಿ ಮರಳಿ ಬೆಂಕಿ ಹಚ್ಚಿದ್ದು ಯಾರು, ಮುಂದೆ ಈ ಕಿಚ್ಚು ರಾಮ ಜನ್ಮಭೂಮಿ ಚಳುವಳಿಯಾಗಿ ಬೆಳೆದು ಬಾಬರಿ ಮಸೀದಿ ಧ್ವಂಸದಲ್ಲಿ ಪರ್ಯಾವಸಾನಗೊಂಡಿದ್ದನ್ನು ವಿಶ್ಲೇಷಿಸುತ್ತಾರೆ. ಸಂಘಪರಿವಾರವು ರಾಮಮಂದಿರ ಕಟ್ಟುವುದಕ್ಕೆ ಅಯೋಧ್ಯೆ ವಿವಾದವನ್ನು ಹುಟ್ಟು ಹಾಕುವುದಿಲ್ಲ, ಹಿಂದೂರಾಷ್ಟ್ರಕ್ಕಾಗಿ ಅದನ್ನು ವಿವಾದವಾಗಿಸುತ್ತಾರೆ, ಇಲ್ಲಿ ಸೆಕ್ಯುಲರಿಸಂ ಅಪಾಯದಲ್ಲಿದೆ ಎಂದು ವಿಷಾದಿಸುತ್ತಾರೆ.
ಸಂಪುಟ 1ರಲ್ಲಿ Demolition of the Babri Masjid, 6 December 1992, The CBI’s chargesheet on the crime and the sessions judge’s charges, Criminal proceedings, 1993-2003, The BJP’s Ayodhya Campaign 1985-2003: misusing the name of Rama as symbol of Hindurva, The law’s tortuous course: civil suits, 1950-2003, Agreement of 12 October 1968 on the Shri Krishna Janmasthan ಅಧ್ಯಾಯಗಳಿವೆ.
ಇಲ್ಲಿನ ಎಲ್ಲಾ ಅಧ್ಯಾಯಗಳನ್ನು ಪುರಾತತ್ವ ಮತ್ತು ಚಾರಿತ್ರಿಕವಾಗಿ ಸಂಶೋಧನೆ ನಡೆಸಿ, ಕಾನೂನಾತ್ಮಕವಾಗಿ ವಿಶ್ಲೇಷಿಸಿರುವ ನೂರಾನಿ ಸಾಬ್ ನಮಗೆ ಎಂದಿಗೂ ಮರೆಯಾಗದ ಅಥೆಂಟಿಕ್ ಆದ ಮಹತ್ವದ ಕೃತಿಯನ್ನು ಕೈಗಿಟ್ಟಿದ್ದಾರೆ. 2019ರಲ್ಲಿ ರಾಮ ಜನ್ಮಭೂಮಿ ಪರವಾಗಿ ತೀರ್ಪು ಕೊಟ್ಟ ಸುಪ್ರೀಂಕೋರ್ಟಿನ ಸಂವಿಧಾನ ಪೀಠವು ವಿಚಾರಣೆ ವೇಳೆಗೆ ಈ ಪುಸ್ತಕವನ್ನು ಯಾಕೆ ಆಕರವಾಗಿ ಪರಿಗಣಿಸಲಿಲ್ಲ ಎಂದು ನಾವೆಲ್ಲಾ ವಿಷಾದಿಸಿದ್ದೇವೆ. ಗಫೂರ್ ಸಾಬ್ ಸುಪ್ರೀಂಕೋರ್ಟಿನ ಈ ಸಂವಿಧಾನ ವಿರೋಧಿ ತೀರ್ಪಿನ ಕುರಿತು ಹೊಸ ಪುಸ್ತಕ ಬರೆಯುವ ತಯಾರಿಯಲ್ಲಿದ್ದರು ಎಂದು ಅವರ ಸ್ನೇಹಿತರು ತಿಳಿಸಿದಾಗ ಜವರಾಯ ಆ ಪುಸ್ತಕ ಮುಗಿಯುವವರೆಗೂ ಕಾಯಬೇಕಿತ್ತಲ್ಲಾ ಎಂದು ಪರಿತಪಿಸಿದ್ದೇನೆ.
ʼಫ್ರಂಟ್‍ಲೈನ್ʼ ಪಾಕ್ಷಿಕ ಪತ್ರಿಕೆಗೆ ಮೂರು ವರ್ಷಕ್ಕೂ ಹೆಚ್ಚು ಕಾಲ ಅಂಕಣವನ್ನು ಬರೆದ ನೂರಾನಿಯವರು EPWU ವಾರಪತ್ರಿಕೆಗೆ ನಿರಂತರವಾಗಿ ಲೇಖನಗಳನ್ನು ಬರೆದರು. ನ್ಯಾಯವಾದಿಯಾಗಿದ್ದ ಗಫೂರ್ ಸಾಬ್ ಜಮ್ಮು ಮತ್ತು ಕಾಶ್ಮೀರದ ವಿಚಾರಕ್ಕೆ ಸಂಬಂಧಿಸಿದಂತೆ ಷೇಕ್ ಅಬ್ದುಲ್ಲಾ ಮತ್ತು ಕರುಣಾನಿಧಿಯವರ ಪ್ರಕರಣಗಳನ್ನು ನಿರ್ವಹಿಸಿದ್ದರು. ಆದರೆ ಕೋರ್ಟಿನಲ್ಲಿ ಪ್ರಾಕ್ಟೀಸ್ ಮಾಡಿ ಪ್ರಖ್ಯಾತರಾಗಿರಲಿಲ್ಲ. ಬದಲಿಗೆ ತಮ್ಮ ಸರಿಸಾಟಿಯಿಲ್ಲದ ಕಾನೂನು ಜ್ಞಾನದ ಮೂಲಕ ನಮಗೆ ಇಡೀ ನ್ಯಾಯಾಂಗ ವ್ಯವಸ್ಥೆಯ ಪದರುಗಳನ್ನು ವಿವರಿಸಿದರು. ಕ್ಷೇತ್ರ ಸಂಶೋಧನೆಯಲ್ಲಿ ಹೆಚ್ಚಿನ ಆಸಕ್ತಿ ಇಲ್ಲದ ಗಫೂರ್ ಭಾಯಿ 1940ರ ದಶಕಗಳಿಂದಲೂ ದಿನಪತ್ರಿಕೆಗಳ ಸುದ್ದಿಗಳನ್ನು ದಶಕಗಳ ಕಾಲ ಜತನದಿಂದ ಕಾಪಾಡಿಕೊಂಡು ಬಂದಿದ್ದರು, ನೂರಾರು ಪುಸ್ತಕಗಳನ್ನು ಅಧ್ಯಯನ ಮಾಡಿದ್ದರು. ಅಧಿಕೃತ ದಾಖಲೆಗಳನ್ನು, ಗೆಜೆಟ್ ಸುತ್ತೋಲೆ, ಆದೇಶಗಳನ್ನು ಹುಡುಕಿ ಹೆಕ್ಕಿ ತೆಗೆಯುವುದರಲ್ಲಿ ಪರಿಣಿತರಾಗಿದ್ದರು. ದೆಹಲಿಯ ರಾಜಕಾರಣದ ಕಾರಿಡಾರ್‌ನಲ್ಲಿ ಅಡ್ಡಾಡುವಷ್ಟು ಸಲುಗೆ ಹೊಂದಿದ್ದ ನೂರಾನಿಯವರು ಆ ಮೂಲಕ ತಮ್ಮ ಸಂಶೋಧನೆಗೆ ಅಧಿಕೃತ ದಾಖಲೆ ಪಡೆದುಕೊಳ್ಳುತ್ತಿದ್ದರು. ಕಾನೂನು ತಜ್ಞ, ಇತಿಹಾಸಕಾರ, ರಾಜಕೀಯ ಚಿಂತಕ ಮತ್ತು ನಾಗರಿಕ ಹಕ್ಕುಗಳ ರಕ್ಷಕ ಎಲ್ಲವೂ ಆಗಿದ್ದ ನೂರಾನಿಯವರನ್ನು ಕೆಲವರು ‘ತುಂಬಾ ಆದರ್ಶವಾದಿ, ಮುಂಗೋಪಿ. ಇಲ್ಲಿನ ವಾಸ್ತವ ರಾಜಕಾರಣದಲ್ಲಿ ಅವರ ಚಿಂತನೆಗಳ ಪ್ರಯೋಗ ಸಾಧ್ಯವಿಲ್ಲ’ ಎಂದು ಟೀಕಿಸಿದ್ದರು.
ಇಂದಿನ ಸತ್ಯೋತ್ತರ ಕಾಲದ ರಾಜಕಾರಣದಲ್ಲಿ ಆರ್‌ಎಸ್‍ಎಸ್ ಗತಕಾಲವನ್ನು ಬಳಸಿಕೊಂಡು ವರ್ತಮಾನದಲ್ಲಿ ತಿರುಚಿದ ಇತಿಹಾಸದ ಮೂಲಕ ಸತ್ಯವನ್ನು ಹುಟ್ಟಿಸಿ ಅದನ್ನು ತನ್ನ ಸಿದ್ಧಾಂತದ ಮೂಲಕ ಬ್ರಾಹ್ಮಣಶಾಹಿ ವ್ಯವಸ್ಥೆ ಕಟ್ಟುತ್ತಿದೆ. ಸತ್ಯೋತ್ತರ ಕಾಲದ ಈ ದಾಳಿಯನ್ನು ಮುಖಾಮುಖಿಯಾಗಲು ನೂರಾನಿಯವರ ಚಿಂತನೆಯ ಮಾದರಿಗಳು ತುಂಬಾ ಮಹತ್ವದ್ದಾಗಿದೆ. ಲೋಕ ಚಿಂತಕ ಕೆ. ಬಾಲಗೋಪಾಲ್‍ರಂತೆ ನೂರಾನಿ ಸಾಬ್‍ರನ್ನು ಕೂಡ ಇಲ್ಲಿನ ವಿಶ್ವವಿದ್ಯಾಲಯಗಳು, ಶೈಕ್ಷಣಿಕ, ಬೌದ್ಧಿಕ ವಲಯ ತೆರೆದ ಮನಸ್ಸಿನಿಂದ ಸ್ವೀಕರಿಸಲಿಲ್ಲ. ಇದು ಈ ದೇಶದ ದುರಂತ.
ಬದುಕಿನ ಮೌಲ್ಯ ಮತ್ತು ಗುಣಾತ್ಮಕತೆ ಬಗ್ಗೆ ಸಂವೇದನೆ, ಸೂಕ್ಷ್ಮತೆ ಹೊಂದಿದ್ದ ನೂರಾನಿಯಂತಹ ಚಿಂತಕರು ಸಹಜವಾಗಿಯೇ ದೇಶದ ಆಸ್ತಿಯಾಗಬೇಕಿದ್ದ ಸಂದರ್ಭದಲ್ಲಿ, ಅವರನ್ನು ನೇಪಥ್ಯದಿಂದ ಹೊರತಂದು ವೇದಿಕೆಯ ಮೇಲೆ ಪರಿಚಯಿಸಬೇಕಾದಂತಹ ಸತ್ಯೋತ್ತರ ಕಾಲದಲ್ಲಿ ನಾವು ಬದುಕುತ್ತಿದ್ದೇವೆ. ಅವರ ಸಾವಿನಿಂದ ಅಧಿಕೃತ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇವೆ. ನೆಹರೂವಿಯನ್ ಸೆಕ್ಯುಲರಿಸಂನ ಕೊನೆಯ ವಾರಸುದಾರರ ಅಂತ್ಯವೂ ಹೌದು. ಅಲ್ವಿದಾ ಗಫೂರ್ ಸಾಬ್ …

ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ