‘ಅಜ್ಜ-ಅಜ್ಜಿ: ನೆನಪುಗಳು’ | ಕುತೂಹಲಕಾರಿ ಸಂಗತಿಗಳನ್ನು ಅರಹುವ ಆಕರ ಗ್ರಂಥ 

Date:

Advertisements
ಬಹುಬಗೆಯ ಆಕರಗಳ ಮೂಲಕ ಕೆ.ಎನ್. ಗುರುಸ್ವಾಮಿಯವರ ವರ್ಣರಂಜಿತ ವ್ಯಕ್ತಿತ್ವವನ್ನು, ಅವರು ಕಟ್ಟಿದ ಉದ್ಯಮವನ್ನು, ಬೆಳೆಸಿದ ಪತ್ರಿಕೋದ್ಯಮವನ್ನು ಹಾಗೂ ವಿವಿಧ ರೀತಿಯಲ್ಲಿ ಸಾರ್ವಜನಿಕವಾಗಿ ತೊಡಗಿಸಿಕೊಂಡಿದ್ದನ್ನು ‘ತೆರೆದು ತೋರಿಸುವ’ ಕೃತಿ

“ಕೆಲವು ಪುಸ್ತಕಗಳ ರುಚಿಯನ್ನು ನೋಡಬೇಕು; ಕೆಲವು ಪುಸ್ತಕಗಳನ್ನು ಗುಟುಕರಿಸಬೇಕು; ಇನ್ನು ಕೆಲವೇ ಕೆಲವು ಪುಸ್ತಕಗಳನ್ನು ಅಗಿಯಬೇಕು ಮತ್ತು ಅರಗಿಸಿಕೊಳ್ಳಬೇಕು” ಎಂದು ಹೇಳಿದವನು ಜಗದ್ವಿಖ್ಯಾತ ಪ್ರಬಂಧಕಾರ ಫ್ರಾನ್ಸಿಸ್ ಬೇಕನ್. ಈ ಹೇಳಿಕೆಯು ಅತ್ಯಂತ ಜನಜನಿತವಾದದ್ದು. ‘ಅಜ್ಜ-ಅಜ್ಜಿ: ನೆನಪುಗಳು’ ಕೃತಿಯನ್ನು ಓದಿದಾಗ ಬೇಕನ್‌ನ ಮಾತುಗಳು ನೆನಪಾದವು. ಮೊಮ್ಮಗನಾದ ಕೆ.ಎನ್. ಹರಿ ಕುಮಾರ್‌ರ ಕಣ್ಣೋಟದಲ್ಲಿ ತಮ್ಮ ಅಜ್ಜ ಕೆ.ಎನ್. ಗುರುಸ್ವಾಮಿ ಹಾಗೂ ಅಜ್ಜಿ ಕದಿರಮ್ಮ ಅವರೊಂದಿಗಿನ ಬಾಂಧವ್ಯವು ಅಕ್ಷರದ ರೂಪ ತಾಳಿದೆ. ಇದು ಪುಸ್ತಕ ಲೋಕಕ್ಕೆ ಸಂಬಂಧಿಸಿದಂತೆ ರುಚಿ ಮತ್ತು ಅಭಿರುಚಿಯನ್ನು ಪ್ರತಿನಿಧಿಸುತ್ತದೆ. ಪುಸ್ತಕದ ಆಕಾರ, ಪುಟ ವಿನ್ಯಾಸ, ಛಾಯಾಚಿತ್ರಗಳ ಜೋಡಣೆ ಹಾಗೂ ಛಾಯಾಚಿತ್ರಗಳನ್ನು ಪೇಂಟಿಂಗ್ ರೂಪಗಳಿಗೆ ಪರಿವರ್ತಿಸಿರುವ ವಿಧಾನ- ಇವೆಲ್ಲವು ಕೃತಿಗೆ ಬಾಹ್ಯವಾಗಿ ಸೌಂದರ್ಯವನ್ನು ವರ್ಧಿಸುವಂತೆ ಮಾಡಿವೆ. ಆಂತರಿಕವಾಗಿಯೂ ಕೂಡ ಒಂದು ಕುಟುಂಬದ ಕತೆಯ ಜೊತೆಯಲ್ಲಿ ಅಂದಿನ ಮೈಸೂರು ರಾಜ್ಯದ ಒಂದು ಕಾಲಘಟ್ಟದ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಒಲವು ನಿಲುವುಗಳನ್ನು ದಾಖಲಿಸುತ್ತದೆ.

ಈಡಿಗ (ಕಳ್ಳು ಇಳಿಸುವ) ಸಮುದಾಯದಿಂದ ಬಂದ ಕೆ.ಎನ್. ಗುರುಸ್ವಾಮಿ ಅವರು ಹೆಂಡದ ವ್ಯಾಪಾರದ ಮೂಲಕ ಸ್ವಾತಂತ್ರ್ಯಪೂರ್ವದಲ್ಲಿಯೇ ಅಪಾರವಾದ ಆಸ್ತಿಪಾಸ್ತಿಯನ್ನು ಸಂಪಾದಿಸಿದ್ದರು. ಅವರಿಗೆ ತಮ್ಮ ತಂದೆಯಾದ ಕೆ. ನೆಟ್ಟಕಲ್ಲಪ್ಪ ಅವರಿಂದಲೂ ಸಾಕಷ್ಟು ಪಿತ್ರಾರ್ಜಿತ ಆಸ್ತಿಯು ಬಳುವಳಿಯಾಗಿ ಬಂದಿತ್ತು. ಕೆ.ಎನ್. ಗುರುಸ್ವಾಮಿ ಅವರು ಹೆಂಡದ ಉದ್ಯಮದಿಂದ ಸಂಪಾದಿಸಿದ್ದ ಸಂಪತ್ತನ್ನು 1948 ರಲ್ಲಿ ‘ಡೆಕ್ಕನ್ ಹೆರಾಲ್ಡ್’ ಮತ್ತು ‘ಪ್ರಜಾವಾಣಿ’ ದೈನಿಕಗಳನ್ನು ಆರಂಭಿಸಲು ವಿನಿಯೋಗಿಸಿದರು. ಆರಂಭಿಕ ವರ್ಷಗಳಲ್ಲಿ ಆರ್ಥಿಕ ಮುಗ್ಗಟ್ಟು ತಲೆದೋರಿತು; ಭಾರೀ ಪ್ರಮಾಣದ ನಷ್ಟವಾಯಿತು. ಆಗ ಪತ್ರಿಕೆಗಳನ್ನು ಮುಚ್ಚುವಂತೆ ಸಲಹೆಗಳು ಕೇಳಿಬರುತ್ತವೆ. ಆದರೆ ಗುರುಸ್ವಾಮಿಯವರ ಅಸಾಧಾರಣ ಧೈರ್ಯ, ಚಾಣಾಕ್ಷತನ, ದಕ್ಷ ಆಡಳಿತವು ಪತ್ರಿಕೋದ್ಯಮಕ್ಕೆ ಭದ್ರ ಬುನಾದಿಯನ್ನು ಒದಗಿಸಿದವು. ಪತ್ರಿಕೆಗಳ ಬಗೆಗಿನ ಅವರ ಬದ್ಧತೆ ಪ್ರಶ್ನಾತೀತವಾಗಿತ್ತು. ಇವೆರಡೂ ಪತ್ರಿಕೆಗಳು ಅಂದಿನ ಮೈಸೂರು ಸಂಸ್ಥಾನದಲ್ಲಿ ಹಾಗೂ ಮುಂದೆ ಕರ್ನಾಟಕ ರಾಜ್ಯದಲ್ಲಿ ಹೊಸ ಯುಗಧರ್ಮಕ್ಕೆ ನಾಂದಿ ಹಾಡಿದ್ದು ಈಗ ಚರಿತ್ರೆಯ ಭಾಗವಾಗಿದೆ.

ಈ ಪುಸ್ತಕದ ಶೀರ್ಷಿಕೆ ‘ಅಜ್ಜ-ಅಜ್ಜಿ: ನೆನಪುಗಳು’ ಅಂತ ಇದ್ದರೂ ಇದರಲ್ಲಿ ನೆನಪುಗಳ ಪ್ರಮಾಣ ತುಂಬಾ ಕಡಿಮೆ ಇದೆ. ಮೊಮ್ಮಗನಾಗಿ ಹರಿ ಕುಮಾರ್‌ರು ತಮ್ಮ ಅಜ್ಜ-ಅಜ್ಜಿಯರ ಜೊತೆಗಿನ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ. ಹರಿ ಕುಮಾರ್‌ರ ಮೇಲೆ ತನ್ನ ತಂದೆ ತಾಯಿಗಿಂತಲೂ ಅಜ್ಜ-ಅಜ್ಜಿಯರ ಪ್ರಭಾವವೇ ಜಾಸ್ತಿಯಿದೆ. ಅಜ್ಜನಿಗೆ ಹೋಲಿಸಿದರೆ ಇದರಲ್ಲಿ ಅಜ್ಜಿಯ ಬಗೆಗಿನ ನೆನಪುಗಳು ಇನ್ನೂ ಕಡಿಮೆ ಅಂತಲೇ ಹೇಳಬೇಕು. ಈ ಹಿನ್ನೆಲೆಯಲ್ಲಿ ಗಮನಿಸುವುದಾದರೆ, ಇಂದಿರಾ ಗಾಂಧಿಯವರು ದೇಶದ ಪ್ರಧಾನಿಯಾಗಿದ್ದಾಗ ಅವರಿಗೆ ಪತ್ರಿಕಾ ಸಲಹೆಗಾರರಾಗಿದ್ದ ಎಚ್.ವೈ. ಶಾರದಾಪ್ರಸಾದ್ ಹಾಗೂ ತಮ್ಮಂದಿರು ಸೇರಿಕೊಂಡು ತಮ್ಮ ಅಜ್ಜಿ ಬಗ್ಗೆ ‘ಮಕ್ಕಳು ಬರೆದ ಅಜ್ಜಿ ಕತೆ’ ಪುಸ್ತಕವನ್ನು ಪ್ರಕಟಿಸಿದ್ದರು. ಇದು ಮೊಮ್ಮಕ್ಕಳು ತಮ್ಮ ಅಜ್ಜಿಯ ಬಗ್ಗೆ ಬರೆದ ಕನ್ನಡದ ಅತ್ಯುತ್ತಮ ಕೃತಿಯಾಗಿದೆ. ಲಂಕೇಶ್ ಅವರು ಸಹ ಈ ಪುಸ್ತಕವನ್ನು ಬಹಳ ಮೆಚ್ಚಿಕೊಂಡಿದ್ದರು. ಅಂದಿನ ಸಾಂಪ್ರದಾಯಿಕ ಕಾಲದಲ್ಲಿ ಅಜ್ಜಿಯೊಬ್ಬಳು ಮೌನವಾಗಿಯೇ ತನ್ನ ಗಂಡನ ಬಗೆಗೆ ತೋರಿದ ಪ್ರತಿರೋಧ ವಿಶಿಷ್ಟವಾಗಿದೆ. ಜಗಳಗಂಟಿ, ಹಠಮಾರಿಯಾಗಿದ್ದ, ಹಲವು ಸಲ ಮನೆಬಿಟ್ಟು ಹೋಗಿದ್ದ ಈ ಅಜ್ಜಿಯ ನೆನಪುಗಳು ಮೊಮ್ಮಕ್ಕಳ ಕಣ್ಣ ಕನ್ನಡಿಯಲ್ಲಿ ಪ್ರಾಮಾಣಿಕವಾಗಿ ಅಭಿವ್ಯಕ್ತಿಯನ್ನು ಪಡೆದುಕೊಂಡಿವೆ. ಈ ಹಿನ್ನೆಲೆಯಲ್ಲಿ ಕದಿರಮ್ಮರ ಬಗ್ಗೆ ಈ ಕೃತಿಯಲ್ಲಿ ಹೆಚ್ಚಿನ ಸ್ಪೇಸ್ ಸಿಕ್ಕಿಲ್ಲ; ಅಥವಾ ಆ ಸ್ಪೇಸ್ ಅನ್ನು ಗುರುಸ್ವಾಮಿಯವರೇ ಆಕ್ರಮಿಸಿಕೊಂಡಿದ್ದಾರೆ; ಅಥವಾ ಸಾರ್ವಜನಿಕ ಬದುಕು ಗಂಡಿಗಷ್ಟೇ ಸೀಮಿತವಾದ ಲೋಕವೆಂದು ಪರಿಭಾವಿಸಿಕೊಂಡಿರುವುದರಿಂದ ಹೀಗಾಗುತ್ತದೆಯೋ ಏನೋ! ಇದರ ಬಗ್ಗೆ ಹೇಳುವುದು ಕಷ್ಟವೇ ಸರಿ.

Advertisements

‘ಅಜ್ಜ-ಅಜ್ಜಿ: ನೆನಪುಗಳು’ ಕೃತಿಯಲ್ಲಿ ನೆನಪಿಗೆ ಸಂಬಂಧಿಸಿದಂತೆ ಹಲವು ಬಗೆಯ ಆಕರಗಳನ್ನು ಬಳಸಿಕೊಳ್ಳಲಾಗಿದೆ. ಇದನ್ನು ಛಾಯಾಚಿತ್ರಗಳ ಸಂಪುಟ ಎಂದೇ ಕರೆಯಬೇಕಾಗುತ್ತದೆ. ಇದರಲ್ಲಿ 1. ಕೌಟುಂಬಿಕ ಚಿತ್ರಗಳಿವೆ. ಗುರುಸ್ವಾಮಿಯರು ಅಶ್ವ ಪ್ರೇಮಿಯಾಗಿದ್ದರು ಎಂಬುದನ್ನು ಹಲವು ಚಿತ್ರಗಳೇ ಹೇಳುತ್ತವೆ. ಶಿಕಾರಿ ಅವರ ಅಚ್ಚುಮೆಚ್ಚಿನ ಹವ್ಯಾಸವಾಗಿತ್ತು; ಶಿಕಾರಿಯ ಚಿತ್ರಗಳಿವೆ. 2. ಪತ್ರಿಕೆಗಳಿಗೆ ಸಂಬಂಧಿಸಿದ ದಾಖಲು ಪತ್ರಗಳು, ಆ ಕಾಲದ ಎಂ.ಜಿ. ರಸ್ತೆಯಲ್ಲಿ ಕೊಂಡ ಜಾಗದ ಅಪರೂಪದ ಚಿತ್ರಗಳಿವೆ. 3. ಗುರುಸ್ವಾಮಿಯವರ ಸಾರ್ವಜನಿಕ ಬದುಕಿನ ಅನೇಕ ಛಾಯಾಚಿತ್ರಗಳಿವೆ. ಇದರ ಜೊತೆಯಲ್ಲಿ ಅವರ ಸಾರ್ವಜನಿಕ ಬದುಕಿನ ಸಾಕಷ್ಟು ಚಿತ್ರಗಳನ್ನು ಇಲ್ಲಿ ಸೇರಿಸಲಾಗಿದೆ. 4. ಹಳೆಯ ಪತ್ರಿಕೆಗಳಿಂದ ಆಯ್ದ ಪುಟಗಳನ್ನು ಇದರಲ್ಲಿ ಮುದ್ರಿಸಲಾಗಿದೆ. 5. ಪತ್ರಿಕೆ, ಪತ್ರಿಕೋದ್ಯಮ, ಕೆಲವು ವ್ಯಕ್ತಿಗಳಿಗೆ ಸಂಬಂಧಿಸಿದ ಪುಸ್ತಕಗಳಿಂದ ಆಯ್ದ ಪುಟಗಳನ್ನು ಇಲ್ಲಿ ಕೊಡಲಾಗಿದೆ. 6. ಪತ್ರಗಳು, ಸರ್ಕಾರಿ ಪತ್ರಗಳು, ಆರ್ಕೈವ್‌ನ ದಾಖಲೆಗಳು ಕೂಡ ಇಲ್ಲಿವೆ. ಈ ರೀತಿಯಲ್ಲಿ ಇದು ಬಹುಬಗೆಯ ಆಕರಗಳ ಮೂಲಕ ಕೆ.ಎನ್. ಗುರುಸ್ವಾಮಿಯವರ ವರ್ಣರಂಜಿತ ವ್ಯಕ್ತಿತ್ವವನ್ನು, ಅವರು ಕಟ್ಟಿದ ಉದ್ಯಮವನ್ನು, ಬೆಳೆಸಿದ ಪತ್ರಿಕೋದ್ಯಮವನ್ನು ಹಾಗೂ ವಿವಿಧ ರೀತಿಯಲ್ಲಿ ಸಾರ್ವಜನಿಕವಾಗಿ ತೊಡಗಿಸಿಕೊಂಡಿದ್ದನ್ನು ‘ತೆರೆದು ತೋರಿಸುವ’ ಕೃತಿಯಾಗಿದೆ. ಇಷ್ಟೆಲ್ಲ ಆಕರಗಳನ್ನು ಬಳಸಿಕೊಂಡು ಹರಿ ಕುಮಾರ್ ಅವರಿಗೆ ಸಮರ್ಥವಾದ ಕಥನವನ್ನು ನಿರೂಪಿಸುವ ಎಲ್ಲ ಸಾಧ್ಯತೆಗಳಿದ್ದವು. ಆದಾಗ್ಯೂ ಇದೊಂದು ಛಾಯಾಚಿತ್ರಗಳ ಪುಸ್ತಕವಾಗಿಯಷ್ಟೇ ಉಳಿಯುತ್ತದೆ.

ಜಗತ್ತಿನ ಯಾವುದೇ ಮೂಲೆಯ ಜನರಿಗೆ ಅರ್ಥವಾಗುವ ಏಕೈಕ ಭಾಷೆಯೆಂದರೆ ಅದು ‘ಛಾಯಾಚಿತ್ರಗಳ’ ಭಾಷೆಯಾಗಿದೆ. ಛಾಯಾಚಿತ್ರಗಳು ಒಂದು ಕಾಲದಲ್ಲಿ ಶ್ರೀಮಂತರ ಹಾಗೂ ಪ್ರತಿಷ್ಠಿತ ಸಮುದಾಯಗಳ ಪ್ರತಿಷ್ಠೆಯನ್ನು ಸಾರುವ ಸಂಕೇತಗಳಾಗಿದ್ದವು. ಉಳ್ಳವರ ಸ್ವತ್ತಾಗಿದ್ದ ಕ್ಯಾಮೆರಾ ಒಂದು ಕುಟುಂಬದ ನೆನಪುಗಳನ್ನು ಛಾಯಾಚಿತ್ರಗಳಲ್ಲಿ ಬಂಧಿಸಿಟ್ಟಿತು. ಕ್ಯಾಮೆರಾ ಆ ಕ್ಷಣದ ಸತ್ಯವನ್ನು ಛಾಯಾಚಿತ್ರಗಳಲ್ಲಿ ಸೆರೆಹಿಡಿಯುತ್ತದೆ. ಹೀಗೆ ಬಿಂಬಿತವಾಗುವ ಆ ಕ್ಷಣದ ಸತ್ಯವು, ಒಂದು ನಿರ್ದಿಷ್ಟ ಕಾಲದ ವಾಸ್ತವತೆಯನ್ನು ದಾಖಲಿಸುತ್ತದೆ. ಈ ಛಾಯಾಚಿತ್ರಗಳೇ ವ್ಯಕ್ತಿಗತ ಸಾಧನೆಗಳನ್ನು ನೆನಪಿಸುತ್ತವೆ. ಈ ನಿಟ್ಟಿನಲ್ಲಿ ಕೆ.ಎನ್. ಗುರುಸ್ವಾಮಿಯವರ ಕೌಟುಂಬಿಕ ಛಾಯಾಚಿತ್ರಗಳು ಸಮಾಜ, ವ್ಯವಹಾರ, ಉದ್ಯಮ ಮತ್ತು ಸಾರ್ವಜನಿಕ ಬದುಕಿನೊಂದಿಗೂ ಸಂಬಂಧವನ್ನು ಕಲ್ಪಿಸುತ್ತವೆ. ಇವು ವ್ಯಕ್ತಿಗಳ ವ್ಯಕ್ತಿತ್ವವನ್ನು ಹೊಸ ಬಗೆಯಲ್ಲಿ ವ್ಯಾಖ್ಯಾನಿಸುವಂತೆ ಪ್ರೇರೇಪಿಸುತ್ತವೆ. ಈ ಚಿತ್ರಗಳು ಓದುಗರ, ವೀಕ್ಷಿಸುವವರ, ಗಮನಿಸುವವರ ಮನೋರಂಗದ ಖಾಲಿ ಜಾಗಗಳನ್ನು ತುಂಬುತ್ತವೆ.

ಇದನ್ನು ಓದಿದ್ದೀರಾ?: ದುರಿತ ಕಾಲದ ದಿಟ್ಟ ಧ್ವನಿ ರವೀಶ್ ಕುಮಾರ್ ಮತ್ತು ಆತ್ಮಸಾಕ್ಷಿಯುಳ್ಳ ಪತ್ರಕರ್ತರ ಮೌನ, ಗೊಂದಲ ಹಾಗೂ ಆಳದ ನೋವು..

ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಿಗಿಂತ ಮೊದಲು, ಅಂದರೆ ಸ್ವಾತಂತ್ರ್ಯಪೂರ್ವದಲ್ಲಿಯೇ ಕನ್ನಡ ನಾಡಿನಲ್ಲಿ ಅನೇಕ ಪತ್ರಿಕೆಗಳಿದ್ದವು. ಪಿ. ರಾಮಯ್ಯನವರಿಂದ 1927ರಲ್ಲಿ ಮೈಸೂರಿನಲ್ಲಿ ಶುರುವಾದ ‘ತಾಯಿನಾಡು’ ಪತ್ರಿಕೆಯು ಹಲವು ದಶಕಗಳ ಕಾಲ ಕನ್ನಡಿಗರ ಜನಮಾನಸದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿತ್ತು. ಪಿ. ರಾಮಯ್ಯನವರ ಮಗ ಪಾಲಹಳ್ಳಿ ವಿಶ್ವನಾಥ್ (ಪ್ರಸಿದ್ಧ ವಿಜ್ಞಾನಿ, ವಿಜ್ಞಾನ ಲೇಖಕರು) ಅವರು ತಮ್ಮ ತಂದೆಯ ಬಗ್ಗೆ ‘ಹೀಗೊಂದು ಕುಟುಂಬದ ಕತೆ’ (2020, ವಸಂತ ಪ್ರಕಾಶನ) ಎಂಬ ಪುಸ್ತಕವನ್ನು ಬರೆದಿದ್ದಾರೆ. ಈ ಕೃತಿಯು ಪಿ. ರಾಮಯ್ಯನವರು ‘ತಾಯಿನಾಡು’ ಪತ್ರಿಕೆಯನ್ನು ಆರಂಭಿಸಿದ ಬಗೆಯನ್ನು, ಆ ಕಾಲದಲ್ಲಿ ಎದುರಾದ ಎಡರು ತೊಡರುಗಳನ್ನು ಹಾಗೂ ಸಾಧನೆಗಳನ್ನು ಅತ್ಯಂತ ಪ್ರಾಮಾಣಿಕವಾಗಿ ದಾಖಲಿಸುತ್ತದೆ. ಬಹುಮುಖಿ ಆಕರಗಳನ್ನು ಬಳಸಿಕೊಂಡು ಪಾಲಹಳ್ಳಿ ವಿಶ್ವನಾಥ್ ಅವರು ಒಂದು ಕುಟುಂಬದ ಕತೆಯನ್ನು ನಿರೂಪಿಸುತ್ತಲೇ ಕನ್ನಡ ನಾಡಿನ ಒಂದು ಪತ್ರಿಕೆಯ ಚರಿತ್ರೆಯನ್ನು ಹಾಗೂ ಅದರ ಬೇರೆ ಬೇರೆ ಆಯಾಮಗಳನ್ನು ಅತ್ಯಂತ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ. ಕನ್ನಡ ಪತ್ರಿಕೊದ್ಯಮ, ಕನ್ನಡ ಪತ್ರಿಕೆಗಳ ಬಗ್ಗೆ ಅಧ್ಯಯನ ಕೈಗೊಳ್ಳುವ ಸಂಶೋಧಕರಿಗೆ ಇದೊಂದು ಅತ್ಯುತ್ತಮ ಆಕರ ಗ್ರಂಥವಾಗಿದೆ.

ಇಂಗ್ಲಿಷ್ ಪತ್ರಿಕೆ ‘ಡೆಕ್ಕನ್ ಹೆರಾಲ್ಡ್’ನ್ನು ಆರಂಭಿಸಲು ಗುರುಸ್ವಾಮಿಯವರಿಗೆ ಸಲಹೆ ನೀಡಿದ್ದು ಯಾರು ಎಂಬುದರ ಬಗ್ಗೆ ಒಂದಿಷ್ಟು ಸಂಶಯ, ಗೊಂದಲಗಳು ಇದ್ದಂತೆ ತೋರುತ್ತದೆ. ಗುರುಸ್ವಾಮಿಯವರ ಆಪ್ತರಾದ, ಉದ್ಯಮದಲ್ಲಿ ಸಮಾನ ಷೇರುಗಳನ್ನು ಹೊಂದಿದ್ದ, ದಕ್ಷ ಆಡಳಿತಗಾರರೂ ಆಗಿದ್ದ ಕೆ. ವೆಂಕಟಸ್ವಾಮಿಯವರು ಬರೆದ ಪುಸ್ತಕದಲ್ಲಿ ತಾನೇ ಸಲಹೆ ನೀಡಿದೆ ಎಂದು ಹೇಳಿಕೊಂಡಿದ್ದಾರೆ. ಮೈಸೂರು ಸಂಸ್ಥಾನದಲ್ಲಿ ಅಂದು ದಿವಾನರಾಗಿದ್ದ ಅರ್ಕಾಟ್ ರಾಮಸ್ವಾಮಿ ಮೊದಲಿಯಾರ್‌ರು ಆಂಗ್ಲ ಪತ್ರಿಕೆಯೊಂದನ್ನು ಶುರು ಮಾಡುವಂತೆ ಸೂಚಿಸಿದರು ಎನ್ನಲಾಗಿದೆ. ಈ ಗೊಂದಲದ ಗೋಜಲನ್ನು ನಿವಾರಿಸಲು ಹಾಗೂ ಇದರ ಸತ್ಯಾಸತ್ಯತೆಯನ್ನು ಅನ್ವೇಷಿಸಲು ಹರಿ ಕುಮಾರ್‌ರು ಪ್ರಯತ್ನಿಸಿದ್ದಾರೆ. ಅದಕ್ಕಾಗಿಯೋ ಏನೋ ಈ ಪುಸ್ತಕದಲ್ಲಿ ಪರಿವಿಡಿಯ ಪೂರ್ವದಲ್ಲಿಯೇ ಚಾರ್ಲ್ಸ್ ಲ್ಯಾಂಬ್‌ನ ‘ದಿ ಎಸ್ಸೇಸ್ ಆಫ್ ಎಲಿಯಾ’ ಪುಸ್ತಕದ ‘ದಿ ಓಲ್ಡ್ ಬೆಂಚರ್ಸ್ ಆಫ್ ದಿ ಟೆಂಪಲ್’ ಪ್ರಬಂಧದಿಂದ “ಇನ್ನು ಮುಂದೆ ಯಾರೂ ಎಲಿಯಾನ ಕಥನಗಳನ್ನು ಸತ್ಯದ ದಾಖಲೆಗಳೆಂಬಂತೆ ಸ್ವೀಕರಿಸದಿರಲಿ. ಸತ್ಯ ಹೇಳಬೇಕೆಂದರೆ, ಅವು ನಿಜದ ನೆರಳುಗಳು; ವಾಸ್ತವದ ಚಿತ್ರಣಗಳು, ಸತ್ಯಗಳಲ್ಲ-ಅವು ಇತಿಹಾಸದ ಪರಿಧಿಯಲ್ಲಿ ಹಾಗೂ ಅತಿ ದೂರದ ಅಂಚುಗಳಲ್ಲಿ ಕುಳಿತಂತಹವು” ಎಂಬ ಮಾತುಗಳನ್ನು ಉಲ್ಲೇಖಿಸಲಾಗಿದೆ. ಕಾಲಗರ್ಭದಲ್ಲಿ ಹೂತು ಹೋದ ಸತ್ಯವನ್ನು ಇಂದಿನ ಸಂದರ್ಭದಲ್ಲಿ ಹೊರತಂದು ಮಂಡಿಸಲು ಪ್ರಯತ್ನಿಸಿದ್ದಾರೆ. ಇಷ್ಟಾಗಿಯೂ ಪ್ರೇರಕ ಶಕ್ತಿ ಅಥವಾ ವ್ಯಕ್ತಿಯ ಬಗ್ಗೆ ಸ್ಪಷ್ಟವಾದ, ಖಚಿತವಾದ ನಿರ್ಣಯಕ್ಕೆ ಬರಲು ಹರಿ ಕುಮಾರ್‌ರಿಗೂ ಸಾಧ್ಯವಾಗಿಲ್ಲ.

ಪ್ರತಿಷ್ಠಿತ ಸಮುದಾಯಕ್ಕೆ ಸೇರಿದ ಅನೇಕರಿಗೆ ತಮ್ಮ ಕುಟುಂಬದ ವ್ಯಕ್ತಿಗಳ ಬಗ್ಗೆ ಬರೆಯುವುದು ಅತೀವ ಹೆಮ್ಮೆ, ತೀವ್ರ ಅಭಿಮಾನದ ಸಂಗತಿಯಾಗಿರುತ್ತದೆ. ಅದೇ ಪ್ರತಿಷ್ಠಿತವಲ್ಲದ ಸಮುದಾಯಗಳಿಂದ ಬರುವ ಬಹುತೇಕರಿಗೆ ತಮ್ಮ ಕುಟುಂಬದ ಬಗ್ಗೆ ಬರೆಯುವುದೆಂದರೆ ಅಸ್ಪೃಶ್ಯತೆ, ಜಾತಿಯ ಕೀಳರಿಮೆ, ಸಾಮಾಜಿಕ ಅವಮಾನಗಳ ಗಾಯಗಳಿಂದ ತತ್ತರಿಸಿ ಸದಾ ನರಳುವ ಕೂಪವೇ ಆಗಿರುತ್ತದೆ. ಇಂತಹ ಎರಡೂ ಸಂಗತಿಗಳಲ್ಲಿ ನೆನಪುಗಳಿರುತ್ತವೆ. ಮೊದಲನೆಯದರಲ್ಲಿ ವ್ಯಕ್ತಿಯೊಬ್ಬನ ಸಂಪತ್ತು ಹಾಗೂ ಸಾಧನೆಯು ಮತ್ತೊಂದು ಕಾಲಘಟ್ಟದಲ್ಲಿ ನೆನಪುಗಳ ಮೂಲಕ ಚಾರಿತ್ರಿಕ ಸಂಗತಿಗಳಾಗಿ ರೂಪಾಂತರಗೊಳ್ಳುತ್ತವೆ. ಅದೇ ಎರಡನೆಯ ಸಂಗತಿಯಲ್ಲಿ ಅಂತಹದೇ ನೆನಪುಗಳು ಕೇವಲ ಆಕ್ರಂದನ, ರೋದನಗಳಾಗಿ ಅಂಚಿಗೆ ತಳ್ಳಲ್ಪಡುತ್ತವೆ; ಅನುಕಂಪಕ್ಕಷ್ಟೇ ಸೀಮಿತಗೊಳ್ಳುತ್ತವೆ. ಇಂತಹ ವೈರುಧ್ಯಗಳ ಹಿನ್ನೆಲೆಯಲ್ಲಿ ಆತ್ಮಕತೆಗಳನ್ನು, ಜೀವನ ಚರಿತ್ರೆಗಳನ್ನು, ನೆನಪಿನ ಕಥನಗಳನ್ನು ಒರೆಗೆ ಹಚ್ಚಿ ನೋಡುವ ಪ್ರಯತ್ನಗಳು ಕನ್ನಡದಲ್ಲಿ ಅಷ್ಟಾಗಿ ನಡೆದಂತೆ ಕಾಣುವುದಿಲ್ಲ.

ಪಾಶ್ಚಾತ್ಯರಲ್ಲಿ ‘ಕಾಫಿ ಟೇಬಲ್’ ಪುಸ್ತಕಗಳಿಗೆ ವಿಶೇಷವಾದ ಸ್ಥಾನಮಾನ ಹಾಗೂ ಮಹತ್ವವಿದೆ. ಈ ಲೋಕದಲ್ಲಿ ಕಲೆ, ಶಿಲ್ಪ, ದೇವಾಲಯ, ದೇವರು, ನಗರ, ಸಿನಿಮಾ, ಪೇಂಟಿಂಗ್, ಸಸ್ಯ, ನಿಸರ್ಗ, ಪರ್ವತ ಹಾಗೂ ಇನ್ನೂ ಅಸಂಖ್ಯಾತ ವಿಷಯಗಳಿಗೆ ಸಂಬಂಧಿಸಿದಂತೆ ಛಾಯಾಚಿತ್ರ ಪ್ರಧಾನವಾದ ಪುಸ್ತಕಗಳಿವೆ. ಇವುಗಳಿಗೆ ಬಳಸುವ ಕಾಗದ, ಬಣ್ಣ, ಮಸಿ, ವಿನ್ಯಾಸ, ಮುದ್ರಣ ಎಲ್ಲವೂ ದುಬಾರಿಯೇ; ಬೆಲೆಯೂ ಅಷ್ಟೇ, ಜನಸಾಮಾನ್ಯರ ಕೈಗೆಟುಕದ ಗಗನ ಕುಸುಮವೇ ಆಗಿರುತ್ತದೆ. ಇಂತಹ ಪುಸ್ತಕಗಳು ಹಣವಂತರ, ಪುಸ್ತಕ ವ್ಯಾಮೋಹಿಗಳ ಸ್ವಂತ ಗ್ರಂಥಾಲಯಗಳಲ್ಲಿ ನೋಡಲು ಸಿಗುತ್ತವೆ. ಕೆ.ಎನ್. ಹರಿ ಕುಮಾರ್‌ರ ಪುಸ್ತಕವು ‘ಕಾಫಿ ಟೇಬಲ್’ ಕೃತಿಯೂ ಹೌದು; ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಇತಿಹಾಸವನ್ನು ಹಾಗೂ ಆ ಕಾಲದ ವಿದ್ಯಮಾನಗಳನ್ನು ತಿಳಿಯಲು ಬಯಸುವವರಿಗೆ ಕೆಲವು ಕುತೂಹಲಕಾರಿ ಸಂಗತಿಗಳನ್ನು ಅರಹುವ ಆಕರ ಗ್ರಂಥವೂ ಆಗಿದೆ.        

ಸುಭಾಷ್ ರಾಜಮಾನೆ
ಸುಭಾಷ್ ರಾಜಮಾನೆ
+ posts

ಲೇಖಕ, ವಿಮರ್ಶಕ, ಸಹಾಯಕ ಪ್ರಾಧ್ಯಾಪಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸುಭಾಷ್ ರಾಜಮಾನೆ
ಸುಭಾಷ್ ರಾಜಮಾನೆ
ಲೇಖಕ, ವಿಮರ್ಶಕ, ಸಹಾಯಕ ಪ್ರಾಧ್ಯಾಪಕ

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X