ಅಂಬೇಡ್ಕರ್ ಫಿಲಾಸಫಿ | ಮನುಷ್ಯನ ಮನಸ್ಸು – ಬೌದ್ಧಿಕ ಕ್ರಿಯಾಶೀಲತೆ ಅರಳುವುದೇ ಮಾನವೀಯ ಮೌಲ್ಯಗಳಿಂದ

Date:

Advertisements
ಮನುಷ್ಯ ಮನುಷ್ಯರ ನಡುವೆ ತರತಮ ನೀತಿಯನ್ನು ಪಸರಿಸಿರುವ ʼವರ್ಣ ಪದ್ಧತಿʼಯನ್ನು ನಿರಾಕರಿಸಿ ʼಸಾಮಾನತೆಯ ಸಮಾಜ ಪದ್ಧತಿʼಯನ್ನು ಅನುಮೋದಿಸಿದರು. ಮನುಷ್ಯರನ್ನು ಅವರ ಜನ್ಮ, ಸ್ಥಳ, ಧರ್ಮ, ಜಾತಿ ಮತ್ತು ಸಂಪತ್ತಿನ ನೆಲೆಯಿಂದ ವಿಂಗಡಿಸಬಾರದು, ತಾರತಮ್ಯ ನೀತಿ ಅನುಸರಿಸಬಾರದು ಎಂಬುದು ಅಂಬೇಡ್ಕರ್ ತತ್ವವಾಗಿತ್ತು

ತತ್ವಶಾಸ್ತ್ರವು ಮನುಷ್ಯ ಜೀವನದ ತಳಹದಿಯಾಗಿದೆ. ಧಾರ್ಮಿಕ ಅನಾಚಾರ ಮತ್ತು ಮೂಢನಂಬಿಕೆಗಳ ವಿರುದ್ಧ ಇದೊಂದು ಪ್ರಮುಖ ಅಸ್ತ್ರವಾಗಿದೆ. ಮಾನವ ಜನಾಂಗದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಹಾಗೂ ಜೀವನದುದ್ದಕ್ಕೂ ಬದುಕಿನ ಅರ್ಥವನ್ನು ಶೋಧಿಸಿಕೊಳ್ಳಲು ತತ್ವಜ್ಞಾನವು ಮಾರ್ಗದರ್ಶಿಯಾಗಿದೆ. ತತ್ವಜ್ಞಾನವು ಮಾನವನ ಬೌದ್ಧಿಕತೆಯಲ್ಲಿ, ಜ್ಞಾನದ ಶಕ್ತಿಯಲ್ಲಿ ನಂಬಿಕೆಯನ್ನು ಇರಿಸುತ್ತದೆ ಹಾಗೂ ಸುತ್ತಮುತ್ತ ಆವರಿಸಿಕೊಂಡಿರುವ ಲೋಕದ ನಿಗೂಢತೆಗಳನ್ನು ತಿಳಿಯಲು ಉತ್ತೇಜಿಸುತ್ತದೆ. ತತ್ವಜ್ಞಾನದ ನಿಜವಾದ ಕಾರ್ಯವು ಈ ಜಗತ್ತಿನ ಸ್ವರೂಪವನ್ನು ವಿವರಿಸುವುದು ಮಾತ್ರವಲ್ಲ; ಮಾನವ ಕುಲಕ್ಕೆ ಒಳಿತನ್ನು ಮಾಡಲು ಮನುಷ್ಯನನ್ನು ಪ್ರೇರೇಪಿಸುವುದಾಗಿದೆ.

ಅಂಬೇಡ್ಕರ್ ತತ್ವಜ್ಞಾನವನ್ನು ತಮ್ಮ ತೀಕ್ಷ್ಣವಾದ ದೃಷ್ಟಿಕೋನದಿಂದ ಅವಲೋಕಿಸಿದ್ದಾರೆ. ಅವರು ತತ್ವಜ್ಞಾನವನ್ನು ಆಧ್ಯಾತ್ಮಿಕ ಸಮಸ್ಯೆಗಳೊಂದಿಗೆ ಸಮೀಕರಿಸಿ ನೋಡಲಿಲ್ಲ. ಅಂಬೇಡ್ಕರ್ ಅವರಿಗೆ ತತ್ವಜ್ಞಾನವು ಒಂದು ಸಾಮಾಜಿಕ ಮತ್ತು ನೈತಿಕ ಅರ್ಥವನ್ನು ಉಳ್ಳದ್ದಾಗಿದೆ. ಏಕೆಂದರೆ ಅವರು ಪ್ರಧಾನವಾಗಿ ಸಾಮಾಜಿಕ ಬದಲಾವಣೆಯನ್ನು ಬಯಸುತ್ತಾರೆ. ಅವರು ಅಲಕ್ಷಿತ ಮನುಷ್ಯ ಜನಾಂಗದ ಆಶೋತ್ತರಗಳ ಪ್ರತಿಪಾದಕರಾದ್ದರಿಂದ ಅವರಿಗೆ ಸಾಮಾನ್ಯ ಮನುಷ್ಯನ ಫಿಲಾಸಫಿಯಲ್ಲಿಯೇ ಹೆಚ್ಚಿನ ಆಸಕ್ತಿ ಇತ್ತು. ಅಂಬೇಡ್ಕರ್ ಅವರು ”ಪ್ರತಿಯೊಬ್ಬ ಮನುಷ್ಯ ತನ್ನ ಜೀವನದ ಫಿಲಾಸಫಿಯನ್ನು ರೂಪಿಸಿಕೊಳ್ಳಬೇಕು. ಪ್ರತಿಯೊಬ್ಬರು ಒಂದು ಪ್ರಮಾಣದ ಮೂಲಕ ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಬೇಕು. ತತ್ವಜ್ಞಾನವೆಂದರೆ ಪ್ರಮಾಣೀಕರಿಸಿಕೊಳ್ಳುವ ವಿಧಾನವೇ ಆಗಿದೆ” ಎಂದು ಹೇಳಿದ್ದಾರೆ.

ಅಂಬೇಡ್ಕರ್ ಮನುಷ್ಯನ ಸಂಬಂಧವನ್ನು ದೇವರೊಂದಿಗೆ ಅಥವಾ ಆತ್ಮ ಮತ್ತು ದೇವರ ಸಂಬಂಧವನ್ನು ಕಲ್ಪಿಸಲಿಲ್ಲ. ಆದರೆ ಅವರಿಗೆ ಮನುಷ್ಯ ಮತ್ತು ಮನುಷ್ಯರ ನಡುವಿನ ಸಂಬಂಧವನ್ನು ಒಪ್ಪಗೊಳಿಸುವುದು ಮುಖ್ಯವಾಗಿತ್ತು. ಹಾಗಾಗಿ ದೇವರ ಅಸ್ತಿತ್ವ, ಆತ್ಮದ ಮರುಜನ್ಮ, ಸ್ವರ್ಗ-ನರಕಗಳ ಕಲ್ಪನೆ -ಇವೆಲ್ಲವುಗಳನ್ನು ಅವರು ತಿರಸ್ಕರಿಸಿದರು. ಮನುಷ್ಯನ ಸಾಮಾಜಿಕ ನೆಲೆಯಿಂದ ತತ್ವಜ್ಞಾನವನ್ನು ನೋಡಿದರು. ಮನುಷ್ಯ ಮನುಷ್ಯರ ನಡುವೆ ತರತಮ ನೀತಿಯನ್ನು ಪಸರಿಸಿರುವ ʼವರ್ಣ ಪದ್ಧತಿʼಯನ್ನು ನಿರಾಕರಿಸಿ ʼಸಾಮಾನತೆಯ ಸಮಾಜ ಪದ್ಧತಿʼಯನ್ನು ಅನುಮೋದಿಸಿದರು. ಮನುಷ್ಯರನ್ನು ಅವರ ಜನ್ಮ, ಸ್ಥಳ, ಧರ್ಮ, ಜಾತಿ ಮತ್ತು ಸಂಪತ್ತಿನ ನೆಲೆಯಿಂದ ವಿಂಗಡಿಸಬಾರದು, ತಾರತಮ್ಯ ನೀತಿ ಅನುಸರಿಸಬಾರದು ಎಂಬುದು ಅಂಬೇಡ್ಕರ್ ತತ್ವವಾಗಿತ್ತು.

Advertisements

ಇದನ್ನು ಓದಿದ್ದೀರಾ?: ಅಂದು ಬ್ರಾಹ್ಮಣ ಹೆಣ್ಣುಮಕ್ಕಳಿಗೆಂದೇ ಮಂಗಳೂರಿನಲ್ಲಿ ಶಾಲೆ ತೆರೆದಿದ್ದ ಮಿಷನರಿಗಳು

ಅಂಬೇಡ್ಕರ್, ”ಭಗವದ್ಗೀತೆಯನ್ನು ಆಧರಿಸಿದ ಹಿಂದೂ ಸಾಮಾಜಿಕ ತತ್ವಶಾಸ್ತ್ರವನ್ನು ನಾನು ವಿರೋಧಿಸುತ್ತೇನೆ. ಅದು ಕಪಿಲ ಎತ್ತಿಹಿಡಿದ ಸಾಂಖ್ಯ ತ್ವತ್ವಶಾಸ್ತ್ರದ ತ್ರಿಗುಣವನ್ನು ಆಧರಿಸಿದೆ. ಅದು ಜಾತಿ ಪದ್ಧತಿಯನ್ನು ನಿರ್ಮಿಸಿತು ಹಾಗೂ ಅಂತಸ್ತುಗಳ ಅಸಮಾನತೆಯನ್ನು ನಿರ್ಮಿಸುವುದರ ಮೂಲಕ ಅದನ್ನು ಹಿಂದು ಸಾಮಾಜಿಕ ಜೀವನವೆಂದು ಸ್ಥಿರಗೊಳಿಸಿತು. ನನ್ನ ದೃಷ್ಟಿಯಲ್ಲಿ ಇದು ಅತ್ಯಂತ ಕ್ರೂರ, ಅಮಾನವೀಯ ಪದ್ಧತಿಯಾಗಿದೆ” ಎಂದಿದ್ದಾರೆ. ಅವರು ಮುಂದುವರೆದು ”ನನ್ನ ಸಾಮಾಜಿಕ ಫಿಲಾಸಫಿಯು ಮೂರು ಶಬ್ದಗಳಲ್ಲಿ ಅಡಗಿದೆ: ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವ. ಬಹಳಷ್ಟು ಜನರು ಅಂದುಕೊಂಡಿರುವಂತೆ, ನಾನು ಇವುಗಳನ್ನು ಫ್ರೆಂಚ್‌ ಕ್ರಾಂತಿಯಿಂದ ಎರವಲು ಪಡೆದುಕೊಂಡಿಲ್ಲ. ನನ್ನ ಫಿಲಾಸಫಿಯ ಬೇರುಗಳು ರಿಲಿಜಿಯನ್‌ನಲ್ಲಿದೆ; ರಾಜ್ಯಶಾಸ್ತ್ರದಲ್ಲಿ ಅಲ್ಲ. ನಾನು ಇವುಗಳನ್ನು ನನ್ನ ಗುರು ಬುದ್ಧನ ಬೋಧನೆಗಳಿಂದ ಪಡೆದುಕೊಂಡಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.

ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದ ಈ ಮೂರು ತತ್ವಗಳು ಅಂಬೇಡ್ಕರ್ ಫಿಲಾಸಫಿಯ ಅಪ್ರೋಚ್‌ನ್ನು ಹೇಳುತ್ತದೆ. ಮನುಷ್ಯ ಸಂಬಂಧಗಳ ಬೆಸುಗೆಯಲ್ಲಿ ಇವುಗಳ ಪ್ರಸ್ತುತತೆಯನ್ನು ಎತ್ತಿಹಿಡಿಯುತ್ತದೆ. ಈ ತತ್ವಗಳಿಂದಲೇ ಒಬ್ಬ ವ್ಯಕ್ತಿಯ ಸಾಮಾಜಿಕ, ರಾಜಕೀಯ, ಆರ್ಥಿಕ ಚಿಂತನೆಗಳನ್ನು ಅಳೆಯಬಹುದಾಗಿದೆ. ಅಂಬೇಡ್ಕರರು ತತ್ವಜ್ಞಾನವನ್ನು ಅಧ್ಯಾತ್ಮ ಹಾಗೂ ಭೌತ ವಸ್ತುಗಳಿಗೆ ಸಂಬಂಧಿಸಿದ ಅಧ್ಯಯನವೆಂದು ನೋಡಲಿಲ್ಲ. ಅದು ಮನುಷ್ಯರ ನೈತಿಕತೆಯ ಪ್ರಮಾಣದ ಅಳತೆಗೋಲು. ಇದು ನೇರವಾಗಿ ಪ್ರಜಾಪ್ರಭುತ್ವದ ಜೊತೆಯಲ್ಲಿ ನಂಟನ್ನು ಹೊಂದಿರುವಂತಹದ್ದು. ”ಪ್ರಜಾಪ್ರಭುತ್ವ ಎಂಬುದು ಒಂದು ಬಗೆಯ ಸರ್ಕಾರವಲ್ಲ. ಅದು ಮೂಲತಃ ಸಂವಾದಿದ ಅನುಭವದ ನೆಲೆಯಲ್ಲಿ ಒಟ್ಟುಗೂಡಿ ಸಾಗುವ ಒಂದು ಜೀವಂತಿಕೆಯ ಕ್ರಮ. ಅದು ಸಹಚರರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವ ಹಾಗೂ ನಡೆಯಿಸಿಕೊಳ್ಳುವ ಮನೋಧರ್ಮದ ತಿರುಳಾಗಿದೆ” ಎಂದು ಹೇಳಿದ್ದಾರೆ ಅಂಬೇಡ್ಕರ್.

ಅಂಬೇಡ್ಕರರು ಮಹಾನ್‌ ಮಾನವತಾವಾದಿಯಾಗಿದ್ದ ಭಗವಾನ ಬುದ್ಧನ ಅನುಯಾಯಿ. ಬುದ್ಧ ಮನಷ್ಯನ ಯೋಗ್ಯತೆಯನ್ನು ಹುಟ್ಟು ಮತ್ತು ಜಾತಿಯಿಂದ ಗುರುತಿಸಲಿಲ್ಲ. ಹಾಗೆಯೇ ಅಂಬೇಡ್ಕರ್ ಕೂಡ ಆಧುನಿಕ ಭಾರತದಲ್ಲಿ ಹುಟ್ಟು ಮತ್ತು ಜಾತಿಯನ್ನು ಆಧರಿಸಿದ ಪ್ರಮಾಣವನ್ನು ನಿರಾಕರಿಸಿದರು. ಬುದ್ಧನಂತೆಯೇ ಅವರು ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವವನ್ನು ಪ್ರತಿಪಾದಿಸಿದರು. ಇದು ಅಂಬೇಡ್ಕರರನ್ನು ಪ್ರಜಾಪ್ರಭುತ್ವ ಮತ್ತು ಉದಾರ ಮಾನವತಾವಾದದ ಕಡೆಗೆ ಎಳೆಯಿತು. ಅವರು ಧಮ್ಮಕ್ಕೆ ಮಹತ್ವಪೂರ್ಣ ಸ್ಥಾನವನ್ನು ನೀಡಿದರು. ಏಕೆಂದರೆ ನೈತಿಕತೆಯ ಮತ್ತೊಂದು ಹೆಸರೇ ಧಮ್ಮ ಅನ್ನಬಹುದು. ಅಂಬೇಡ್ಕರ್ ಪ್ರಕಾರ ”ಧಮ್ಮದಲ್ಲಿ ದೇವರಿಗೆ ಸ್ಥಾನವೇ ಇಲ್ಲ. ನೈತಿಕತೆಯು ದೇವರ ಸ್ಥಾನವನ್ನು ಪಡೆದುಕೊಂಡಿದೆ. ಧಮ್ಮದಲ್ಲಿ ಪ್ರಾರ್ಥನೆ, ಪುಣ್ಯಸ್ಥಳ ಯಾತ್ರೆ, ಆಚರಣೆ, ಬಲಿದಾನ ಅಥವಾ ಸಂಸ್ಕಾರದ ವಿಧಿಗಳಿಗೆ ಅವಕಾಶವಿಲ್ಲ. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಪ್ರೀತಿಸುವ ಅವಶ್ಯಕತೆಯಾಗಿ ಧಮ್ಮದಲ್ಲಿ ನೈತಿಕತೆಯು ಉದ್ಭವಿಸಿದೆ.”

ಅದೇಕೆ ಅಂಬೇಡ್ಕರ್ ಧಮ್ಮವನ್ನು ಅಷ್ಟೊಂದು ಜಪಿಸುತ್ತಾರೆ? ಏಕೆಂದರೆ ಅವರೇ ಹೇಳುವಂತೆ ”ಧಮ್ಮದ ಉದ್ದೇಶವೇ ಇರುವ ಜಗತ್ತನ್ನು ಪುನರ್‌ ರಚಿಸುವುದಾಗಿದೆ.” ಅವರಿಗೆ ಹಿಂದೂ, ಇಸ್ಲಾಂ ಮತ್ತು ಕ್ರಿಶ್ಚಿಯನ್‌ ಧರ್ಮಗಳಲ್ಲಿ ಆಸಕ್ತಿ ಇರಲಿಲ್ಲ. ಕಾರಣವೆಂದರೆ ಅವುಗಳ ಮೂಲ ಉದ್ದೇಶವೇ ಮನುಷ್ಯನ ಸಂಬಂಧವನ್ನು ದೇವರು (ಶಿವ, ವಿಷ್ಣು, ಬ್ರಹ್ಮ ಇತ್ಯಾದಿ), ಅಲ್ಲಾ ಮತ್ತು ಏಸು ಅವರೊಂದಿಗೆ ಸ್ಥಾಪಿಸುವುದಾಗಿತ್ತು. ಧಮ್ಮಕ್ಕೊಂದು ಸಾಮಾಜಿಕ ಹಾಗೂ ನೈತಿಕ ಪ್ರಣಾಳಿಕೆ ಇರುವುದರಿಂದ ಅದು ಅಂಬೇಡ್ಕರರನ್ನು ಇನ್ನಿಲ್ಲದಂತೆ ಸೆಳೆಯಿತು. ಆದ್ಧರಿಂದ ಅವರು ಮೇರು ವ್ಯಕ್ತಿತ್ವದ ಮಾನವತಾವಾದಿ ಆಗಿದ್ದಾರೆ.

ಭೌತಿಕ ಜಗತ್ತಿನ ವಿವರಣೆಯ ಬಗ್ಗೆ ಅಂಬೇಡ್ಕರರಿಗೆ ಅಷ್ಟೇನು ಸಮಾಧಾನವಿರಲಿಲ್ಲ. ಈ ಭೌತಿಕ ಜಗತ್ತಿನ ಹೊರತಾಗಿ ಮನುಷ್ಯ ಜಗತ್ತು ಅನುಭವಿಸುತ್ತಿರುವ ದುಃಖ ಮತ್ತು ಯಾತನೆಯ ಬಗ್ಗೆ ಅವರಿಗೆ ಅರಿವಿತ್ತು. ಆದ್ಧರಿಂದಲೇ ಅವರು ಮನುಷ್ಯ ಪ್ರಯತ್ನದಲ್ಲಿ ಅಗಾಧವಾದ ನಂಬಿಕೆಯನ್ನು ಇರಿಸುತ್ತಾರೆ ಹಾಗೂ ಅದನ್ನು ಪುನರ್‌ ರಚಿಸಲು ಇಚ್ಛಿಸುತ್ತಾರೆ. ಅಂಬೇಡ್ಕರರು ತಾನು ಎಷ್ಟೇ ದಮನಿತ ಸಮುದಾಯದಿಂದ, ಕಡು ಬಡತನದಿಂದ ಬಂದಿದ್ದರೂ ಮನುಷ್ಯ ಪ್ರಯತ್ನದಲ್ಲಿ ಅಚಲ ನಂಬಿಕೆಯನ್ನು ಇಟ್ಟುಕೊಂಡಿದ್ದರು. ಅತ್ಯಂತ ಕೆಳಸ್ತರದಲ್ಲಿರುವ ದಲಿತರ ನೋವು, ಹತಾಶೆಗಳನ್ನು ಸ್ವತಃ ಅನುಭವಿಸಿ ಬಲ್ಲವರಾಗಿದ್ದರು. ಆದ್ದರಿಂದ  ದಲಿತರನ್ನು ಶೋಷಣೆ, ಜಾತಿ, ಅಸ್ಪೃಶ್ಯತೆಗಳಿಂದ ವಿಮೋಚಿಸಲು ಹಂಬಲಿಸಿದ್ದರು. ಅಂಬೇಡ್ಕರರು ತಮ್ಮ ಅಪಾರವಾದ, ಆಳವಾದ ವಿದ್ವತ್ತಿನಿಂದ ಭಾರತದ ಭೂತವನ್ನು ಶೋಧಿಸಿದರು; ಮಾನವತಾವಾದಿ ಸಿದ್ಧಾಂತ ಮತ್ತು ಬೌದ್ಧ ಧಮ್ಮದ ತಳಹದಿಯ ಮೇಲೆ ತಮ್ಮ ಕಾರ್ಯಯೋಜನೆಯನ್ನು ರೂಪಿಸಿಕೊಂಡರು. ಭಾರತೀಯ ದಲಿತರು ತಮ್ಮ ಸಾಮಾಜಿಕ ಮತ್ತು ರಾಜಕೀಯ ಹಕ್ಕುಗಳ  ಬಗ್ಗೆ ಜಾಗೃತವಾಗಬೇಕೆಂಬುದು ಅಂಬೇಡ್ಕರರ ಮೂಲಭೂತ ಗುರಿಯಾಗಿತ್ತು. ದಲಿತರು ತಮ್ಮಷ್ಟಕ್ಕೆ ತಾವು ಶಿಕ್ಷಣ, ಸಂಘಟನೆ ಮತ್ತು ಸಂಘರ್ಷಗಳ ಮೂಲಕ ಕ್ರಾಂತಿಯನ್ನು ನಡೆಸಲು ಸಿದ್ಧರಾಗುವಂತೆ ಪ್ರಚೋದಿಸಿದರು. ಅಂಬೇಡ್ಕರರು ಭಾರತೀಯ ದುರ್ಬಲ ವರ್ಗಗಳು ಸಾಂಪ್ರದಾಯಿಕ ಪದ್ಧತಿಯಲ್ಲಿ ಅಭೂತಪೂರ್ವ ಬದಲಾವಣೆಯನ್ನು ತರಲು ಅದ್ಭುತವಾದ ಈ ತ್ರಿವಳಿ ತತ್ವದ ಅಸ್ತ್ರವನ್ನು ನೀಡಿದರು.

ಬುದ್ಧ ಮತ್ತು ಅಂಬೇಡ್ಕರ್
ಬುದ್ಧ ಮತ್ತು ಅಂಬೇಡ್ಕರ್

ಭಾರತದ ಶೋಷಿತ ಜನಸಮುದಾಯಗಳಲ್ಲಿ ಶಿಕ್ಷಣವು ಹೊಸ ಅರಿವನ್ನು ಹಾಗೂ ಹೊಸ ಆಲೋಚನೆಯನ್ನು ಮೂಡಿಸುತ್ತದೆ ಎಂದು ಅಂಬೇಡ್ಕರರು ಗಾಢವಾಗಿ ನಂಬಿದ್ದರು. ಸಮಾಜದ ಎಲ್ಲ ವರ್ಗದ ಜನರಿಗೂ ಶಿಕ್ಷಣ ಸಿಗಬೇಕೆಂದು ಬಯಸಿದ್ದರು. ಮನುಷ್ಯನ ವ್ಯಕ್ತಿತ್ವದ ನಿರ್ಮಾಣಕ್ಕಾಗಿ ಶಿಕ್ಷಣದ ಅಗತ್ಯವಿದೆ ಎನ್ನುತ್ತಿದ್ದರು. ಮನುಷ್ಯ ತನ್ನ ಪರಿಶ್ರಮ ಮತ್ತು ಪ್ರಯತ್ನಗಳ ಮುಖಾಂತರ ಸ್ವತಂತ್ರ ಜೀವಿಯಾಗಿ, ಸ್ವಾವಲಂಬಿಯಾಗಿ ಬದುಕನ್ನು ಕಟ್ಟಿಕೊಳ್ಳಬೇಕೆ ಹೊರತು ಮತ್ತೊಬ್ಬರ ಹಂಗಿನಲ್ಲಿ ಅಥವಾ ನಿಯಂತ್ರಣದಲ್ಲಿ ಇರಬಾರದೆಂದು ಹೇಳಿದ್ದಾರೆ. ಅಂಬೇಡ್ಕರರ ಪ್ರಕಾರ ಶಿಕ್ಷಣವು ಮನುಷ್ಯರ ಏಳ್ಗೆಗಾಗಿ ಹೆಚ್ಚಿನ ಒತ್ತನ್ನು ನೀಡಬೇಕು; ಶಿಕ್ಷಣವು ಮನಸ್ಸಿಗೆ ಹೊಸ ಆಕಾರವನ್ನು ಕೊಡಬೇಕು; ಮನಸ್ಸು ಸ್ವನಿಯಂತ್ರಣದಲ್ಲಿಬೇಕು. ಆಗ ಮಾತ್ರ ವೈಯಕ್ತಿಕ ಮತ್ತು ಸಾಮಾಜಿಕ ಜೀವನವು ಸಾಮರಸ್ಯವನ್ನು ಕಾಣಲು ಸಾಧ್ಯವಾಗುತ್ತದೆ. ಅಂಬೇಡ್ಕರರು ಮನುಷ್ಯನ ಮನಸ್ಸು ಹಾಗೂ ಬೌದ್ಧಿಕ ಕ್ರಿಯಾಶೀಲತೆ ಅರಳುವುದೇ ಮಾನವೀಯ ಮೌಲ್ಯಗಳಿಂದ ಎಂದು ಯಾವಾಗಲೂ ಹೇಳುತ್ತಿದ್ದರು. ವ್ಯಕ್ತಿಯೊಬ್ಬ ಶಿಕ್ಷಣದ ಮೂಲಕ ತನ್ನೊಳಗಿನ ಬೌದ್ಧಿಕ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಂಡರೆ ಮಾನವ ಅಭ್ಯುದಯದ ಅತ್ಯಂತ ಉನ್ನತ ಸ್ತರವೆಂದು ಹೇಳುತ್ತಿದ್ದರು. ಇದನ್ನು ಸ್ವತಃ ಅಂಬೇಡ್ಕರರು ತಮ್ಮ ಬದುಕಿನಲ್ಲಿ ಪ್ರಾಯೋಗಿಕವಾಗಿ ಸಾಧಿಸಿದ್ದಾರೆ. ಶಿಕ್ಷಣದಿಂದಲೇ ಸ್ವ ಅರಿವನ್ನು ಪಡೆಯಬಹುದು ಎಂಬುದಕ್ಕೆ ಅಂಬೇಡ್ಕರ್ ಅವರೇ ಸಾಕ್ಷಿಯಾಗಿದ್ದಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಶಿಕ್ಷಣ ಮತ್ತು ಸಂಘಟನೆಯಿಲ್ಲದೆ ಯಾವ ಚಳವಳಿಯೂ, ಹೋರಾಟವೂ ಯಶಸ್ವಿಯಾಗಲು ಸಾಧ್ಯವಿಲ್ಲ.

ಅಂಬೇಡ್ಕರರ ಫಿಲಾಸಾಫಿಯ ಮುಖ್ಯ ಸಂಗತಿಗಳನ್ನು ಹೀಗೆ ಹೇಳಬಹುದಾಗಿದೆ: 1. ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವ 2. ಶಿಕ್ಷಣ, ಸಂಘಟನೆ ಮತ್ತು ಸಂಘರ್ಷ 3. ಬುದ್ಧ, ಧಮ್ಮ ಮತ್ತು ಸಂಘ 4. ಈ ತತ್ವಗಳು ಕೇವಲ ದಲಿತರ ವಿಮೋಚನೆಗಷ್ಟೇ ಸೀಮಿತವಲ್ಲ. ಸಕಲ ಮನುಷ್ಯ ಲೋಕಕ್ಕೆ ಸಂಬಂಧಿಸಿವೆ. 5. ಅಂಬೇಡ್ಕರರ ಫಿಲಾಸಫಿ ಒಳಗೊಂಡಿರುವ ಈ ಒಂಬತ್ತು ಅಂಶಗಳೇ ಅವರ ಸಾಮಾಜಿಕ ಮಾನವತಾವಾದದ ಮುಖ್ಯ ತಿರುಳಾಗಿದೆ.

-ಪ್ರೊ. ಡಿ.ಆರ್.‌ ಜಾತವಾ, ತತ್ವಜ್ಞಾನದ ಪ್ರಾಧ್ಯಾಪಕರು, ರಾಜಸ್ತಾನ

ಕನ್ನಡಕ್ಕೆ: ಸುಭಾಷ್‌ ರಾಜಮಾನೆ

ಸುಭಾಷ್ ರಾಜಮಾನೆ
ಸುಭಾಷ್ ರಾಜಮಾನೆ
+ posts

ಲೇಖಕ, ವಿಮರ್ಶಕ, ಸಹಾಯಕ ಪ್ರಾಧ್ಯಾಪಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸುಭಾಷ್ ರಾಜಮಾನೆ
ಸುಭಾಷ್ ರಾಜಮಾನೆ
ಲೇಖಕ, ವಿಮರ್ಶಕ, ಸಹಾಯಕ ಪ್ರಾಧ್ಯಾಪಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X