ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿರುವುದು ಬಿಜೆಪಿಗೆ ಅರಗಿಸಿಕೊಳ್ಳಲಾಗದ ಸತ್ಯ. ಈಗ ವಿರೋಧ ಪಕ್ಷವಾಗಿರುವ ಬಿಜೆಪಿ ಸೌಜನ್ಯದಿಂದಲೇ ಈ ಪಾತ್ರವನ್ನು ನಿರ್ವಹಿಸಬೇಕು. ವಿರೋಧ ಪಕ್ಷಕ್ಕೂ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಘನತೆ ಇದೆ; ಗೌರವ ಇದೆ. ಸರ್ಕಾರ ದಿಕ್ಕು ತಪ್ಪಿದಾಗ, ಜನ ವಿರೋಧಿ ಕೆಲಸಗಳಿಗೆ ಮುಂದಾದಾಗ ಜನರ ಪರವಾಗಿ, ಸಮಾಜದ ಪರವಾಗಿ ನಿಂತು ಸೆಣಸಬೇಕು. ಆಗ ಜನತೆಯ ಗೌರವವೂ, ನಂಬಿಕೆಯೂ ವಿರೋಧ ಪಕ್ಷಕ್ಕೆ ಸಿಕ್ಕುತ್ತದೆ.
ರಾಜ್ಯದಲ್ಲಿ ಇದೀಗ ಅಧಿಕಾರವನ್ನು ಹಿಡಿದಿರುವ ಕಾಂಗ್ರೆಸ್ ಸರ್ಕಾರದ ʼಅನ್ನಭಾಗ್ಯʼದ ಹಿಂದೆ ಒಂದು ತಾತ್ವಿಕ ಸಿದ್ಧಾಂತವಿದೆ. ಹಸಿವಿನಿಂದ ಯಾರೂ ಸಾಯಬಾರದು. ಹಿಂದೆಯೂ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ಸಿದ್ಧಾಂತವನ್ನು ಅದು ಗೌರವಿಸಿತ್ತು.
ಆ ಕಾರಣಕ್ಕಾಗಿಯೇ ಬಡ ಕುಟುಂಬಗಳಿಗೆ ಅಕ್ಕಿಯನ್ನು ಪ್ರತಿ ತಿಂಗಳೂ ನೀಡುವ ಉದಾರತೆ ಮತ್ತು ಬದ್ಧತೆಯನ್ನು ಸರ್ಕಾರ ತೋರಿಸಿತ್ತು. ಇದೀಗ ಮತ್ತೆ ಅದೇ ತತ್ವವನ್ನು ಪಾಲಿಸಲು ಮುಂದಾಗಿದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿದ್ದ ಐದು ಗ್ಯಾರಂಟಿಗಳಲ್ಲಿ ‘ಅನ್ನಭಾಗ್ಯ’ವೂ ಒಂದು.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಈ ತತ್ವವನ್ನು ಗಾಳಿಗೆ ತೂರಲು ಸಿದ್ಧವಾಗಿದೆ. ರಾಜ್ಯ ಸರ್ಕಾರಕ್ಕೆ ಅನ್ನಭಾಗ್ಯದ ಅಕ್ಕಿ ಸಿಗದಂತೆ ಕಂಟಕಗಳನ್ನು ಒಡ್ಡುತ್ತಿದೆ. ಹಸಿವಿನಿಂದ ಯಾರೂ ಸಾಯಬಾರದು ಎಂಬುದು ಬಹುದೊಡ್ಡ ಮಾನವೀಯ ಕಾಳಜಿ. ಇದನ್ನು ಗೌರವಿಸುವುದು ಎಂದರೆ ಮಾನವೀಯತೆಯನ್ನು ಗೌರವಿಸುವುದು ಎಂದೇ ಅರ್ಥ.
ಅಧಿಕಾರದಲ್ಲಿ ಕಾಂಗ್ರೆಸ್, ಕಮ್ಯುನಿಸ್ಟ್, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ಆಮ್ ಆದ್ಮಿ, ತೃಣಮೂಲ ಕಾಂಗ್ರೆಸ್, ಎನ್‌ಸಿಪಿ. ಬಿಜೆಪಿ ಹೀಗೆ ಯಾವುದೇ ಪಕ್ಷ ಇರಲಿ, ಈ ತತ್ವವನ್ನು ಮಾನ್ಯಮಾಡಬೇಕಾಗುತ್ತದೆ.
ರಾಜಕೀಯ ಸೆಣಸಾಟ, ಪಕ್ಷದ ಪ್ರಣಾಳಿಕೆ, ಧ್ಯೇಯ ಉದ್ದೇಶಗಳು ಬೇರೆ-ಬೇರೆಯಾಗಿರುವುದು ಸಹಜ ಮತ್ತು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮಾನ್ಯ. ಆದರೆ ಬಡವರ ಅನ್ನದ ಪ್ರಶ್ನೆ ಬಂದಾಗ, ಅವರ ಉಳಿವಿನ ಪ್ರಶ್ನೆ ಬಂದಾಗ ಯಾವ ರಾಜಕೀಯ ಪಕ್ಷವೂ ಅಡ್ಡಗಾಲು ಹಾಕಬಾರದು. ರಾಜಕೀಯ ಬೇರೆ, ಸಾಮಾಜಿಕ ಬದ್ಧತೆಯ ಪ್ರಶ್ನೆ ಬೇರೆ.
ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದದ್ದು, ಹೆಚ್ಚು ಸ್ಥಾನಗಳನ್ನು ಪಡೆದದ್ದು ಬಿಜೆಪಿಗೆ ಅರಗಿಸಿಕೊಳ್ಳಲಾಗದ ಸತ್ಯವಾಗಿದೆ. ಈಗ ವಿರೋಧ ಪಕ್ಷವಾಗಿರುವ ಬಿಜೆಪಿ ಸೌಜನ್ಯದಿಂದಲೇ ಈ ಪಾತ್ರವನ್ನು ನಿರ್ವಹಿಸಬೇಕು.
ವಿರೋಧ ಪಕ್ಷಕ್ಕೂ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಘನತೆ ಇದೆ; ಗೌರವ ಇದೆ. ಸರ್ಕಾರ ದಿಕ್ಕು ತಪ್ಪಿದಾಗ, ತಪ್ಪು ಹೆಜ್ಜೆಗಳನ್ನಿಟ್ಟಾಗ, ಜನ ವಿರೋಧಿ ಕೆಲಸಗಳಿಗೆ ಮುಂದಾದಾಗ ವಿರೋಧ ಪಕ್ಷ ಜನರ ಪರವಾಗಿ, ಸಮಾಜದ ಪರವಾಗಿ ನಿಂತು ಸೆಣಸಬೇಕು. ಆಗ ಜನತೆಯ ಗೌರವವೂ, ನಂಬಿಕೆಯೂ ವಿರೋಧ ಪಕ್ಷಕ್ಕೆ ಸಿಕ್ಕುತ್ತದೆ.
ವಿರೋಧ ಪಕ್ಷವಾಗಿ ತನ್ನನ್ನು ತಾನು ಸಂಭಾಳಿಸಿಕೊಳ್ಳಲು ಇನ್ನೂ ಬಿಜೆಪಿ ಕರ್ನಾಟಕದಲ್ಲಿ ಪರದಾಡುತ್ತಿದೆ. ಸಕಾರಾತ್ಮಕ ಟೀಕೆ ಮತ್ತು ಕ್ರಿಯೆ ಏನೆಂಬುದೇ ಅದಕ್ಕೆ ತಿಳಿದಂತೆ ಕಾಣುವುದಿಲ್ಲ. ಇನ್ನೂ ತನ್ನೊಳಗನ್ನು ತಾನು ನೋಡಿಕೊಳ್ಳುವ ಆತ್ಮವಿಮರ್ಶೆಯೇ ಅದಕ್ಕೆ ಸಾಧ್ಯವಾಗಿಲ್ಲ.
ಕೇಂದ್ರದಲ್ಲಿರುವ ಮೋದಿ ಸರ್ಕಾರವಾದರೂ ದೊಡ್ಡದಾಗಿ ನಡೆದುಕೊಳ್ಳಬಹುದಿತ್ತು; ಬಡವರ ಅನ್ನಕ್ಕೆ ಅಡ್ಡಗಾಲು ಹಾಕಬಾರದಿತ್ತು. ಬಿಜೆಪಿಯ ಈ ಅಡ್ಡಗಾಲು ಜನತೆಗೆ ಸ್ಪಷ್ಟ ಸೂಚನೆಯನ್ನು ನೀಡುತ್ತಿದೆ.
ಯಾವ ಪಕ್ಷ ಯಾರ ಪರ ಎಂಬ ಸಂದೇಶವೂ ಈಗ ಜನತೆಯ ಮನವನ್ನು ಮುಟ್ಟಿದೆ. ಕಾಂಗ್ರೆಸ್ಸಿನ ಭರವಸೆಯನ್ನು, ಯೋಜನೆಯ ಜಾರಿಯನ್ನು ತಾನು ತಡೆಯುತ್ತಿದ್ದೇನೆ ಎಂದು ಕೇಂದ್ರ ಸರ್ಕಾರ ತಿಳಿದರೆ, ಅದು ಅದರ ವಿಚಾರ ದಾರಿದ್ರ್ಯವನ್ನು ಮಾತ್ರ ಹೇಳುತ್ತದೆ.
ಕೇಂದ್ರದ ನೆರವಿಲ್ಲದೆಯೂ ರಾಜ್ಯ ಸರ್ಕಾರ ಈ ಯೋಜನೆಯನ್ನು ಯಶಸ್ವಿಗೊಳಿಸಿ ಬಡವರ ಪರ ನಿಲ್ಲಬಹುದು. ಬಿಜೆಪಿಯ ಆಡಳಿತವಿಲ್ಲದ ರಾಜ್ಯಗಳು ಈಗಾಗಲೇ ನೆರವು ನೀಡಲು ಮುಂದಾಗಿವೆ. ಇದು ಕೇಂದ್ರದಲ್ಲಿ ವಿರೋಧ ಪಕ್ಷಗಳಾಗಿರುವ ಎಲ್ಲ ಪಕ್ಷಗಳೂ ಒಂದುಗೂಡಲು ಒಂದು ಅಪರೂಪದ ಅವಕಾಶವನ್ನೂ ನೀಡುತ್ತದೆ.
ವಿಚಿತ್ರ ಎಂದರೆ ನಮ್ಮ ಸಮಾಜವೂ ಇಂಥ ಸೂಕ್ಷ್ಮಗಳನ್ನು ಅರಿತಂತೆ ಕಾಣುವುದಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿಯನ್ನು ಬಡವರಿಗೆ ನೀಡಿ ಸರ್ಕಾರ ಅವರನ್ನು ಸೋಮಾರಿಗಳಾಗಿ ಮಾಡುತ್ತಿದೆ ಎಂಬ ಟೀಕೆಯೂ ಕೇಳಿ ಬರುತ್ತಿದೆ. ಯಾರಿಂದ ಈ ರೀತಿಯ ಟೀಕೆಗಳು ಬರುತ್ತಿವೆ ಎಂಬುದನ್ನೂ ನೋಡಬೇಕು.
ಹೊಟ್ಟೆತುಂಬ ಉಂಡು, ಬೆಚ್ಚಗಿನ ಮನೆಯಲ್ಲಿದ್ದು, ಉದ್ಯೋಗ ಮಾಡುವ ನೌಕರದಾರರು; ತಮ್ಮ ಜಮೀನಿಗೆ ಕೆಲಸಕ್ಕೆ ಕೂಲಿಗಳು ಸಿಕ್ಕಬೇಕು ಎಂಬ ಸ್ಥಿತಿವಂತರು ಈ ಟೀಕೆಯನ್ನು ಮಾಡುವವರಲ್ಲಿ ಹೆಚ್ಚಾಗಿದ್ದಾರೆ. ಈ ಟೀಕೆ ಸಂಪೂರ್ಣ ಅರ್ಥ ಇಲ್ಲದ್ದು ಎಂದು ಹೇಳಲಾಗದು.
ಕೂಲಿ ಕಾರ್ಮಿಕರು ಸೋಮಾರಿಗಳಾಗಿರುವುದೂ ಸ್ವಲ್ಪ ಮಟ್ಟಿಗೆ ನಿಜವಿರಬಹುದು. ಆದರೆ ನೂರಾರು ವರ್ಷಗಳಿಂದ ಹೀಗೆ ದುಡಿಮೆಯನ್ನೇ ಮಾಡುತ್ತ, ಅದೇ ಬವಣೆಯಲ್ಲಿ ಬದುಕನ್ನು ಸವೆಸುತ್ತ ನಿರಾಶೆಯ ಅಂಚಿಗೆಬಂದ ಈ ಜನವರ್ಗದ ಬಗ್ಗೆ, ಅವರ ಹಸಿವಿನ ಬಗ್ಗೆ ಎಷ್ಟು ಜನ ಯೋಚಿಸಿದ್ದಾರೆ. ಅವರಿಗೂ ಘನತೆಯ ಬದುಕೊಂದು ಇರಬೇಕು ಎಂದು ಚಿಂತಿಸಿದವರು ಎಷ್ಟು ಮಂದಿ?
ಇದನ್ನು ಓದಿದ್ದೀರಾ? ‘ಈ ದಿನ’ ಸಂಪಾದಕೀಯ | ಶಿವಮೊಗ್ಗ ವಿಮಾನ ನಿಲ್ದಾಣ ಬಹಿರಂಗ ಸಭೆ; ಖಾಸಗಿ ಬಸ್‌ನವರಿಗೆ ಯಡಿಯೂರಪ್ಪನವರೇ ಹಣ ಪಾವತಿಸಲಿ
ಕೊರೊನಾ ದಿನಗಳನ್ನೇ ತೆಗೆದುಕೊಳ್ಳಿ. ಗುಳೆ ಹೋದ ಕಾರ್ಮಿಕರು ತಮ್ಮ ಊರುಗಳಿಗೆ ಹಿಂದಿರುಗಲು ನಡೆಸಿದ ಮಹಾಯಾತ್ರೆಯಲ್ಲಿ ಎಷ್ಟು ಜನ ಸತ್ತರು, ಎಷ್ಟು ಜನ ತೊಳಲಾಡಿದರು. ಅನ್ನ ನೀರಿಲ್ಲದೆ, ಬರಿಗಾಲಲ್ಲಿ ನಡೆದು ಊರು ಸೇರಿದರು. ಇವರೆಲ್ಲ ದುಡಿಯುವ ಜನ, ಬಡತನದ ಬೇಗೆಯಲ್ಲಿ ಬಳಲಿದ ಜನ. ಕೊರೊನಾ ಇಡೀ ಜಗತ್ತನ್ನೇ ಅಲ್ಲಾಡಿಸಿತು ಎಂದು ಹೇಳಿದರೂ, ದುಡಿಯುವ ಜನರ ಪಾಡು ಎಂಥ ಭೀಕರವಾಗಿತ್ತು.
ಇದರಾಚೆಗಿನ ಮತ್ತು ಈಗಿನ ವಿದ್ಯಮಾನಗಳನ್ನೂ ಗಮನಿಸಿ. ಬೆಲೆ ಏರಿಕೆಯ ಬಿಸಿಯಲ್ಲಿ ಕೈಮೈ ಸುಟ್ಟುಕೊಂಡವರು ಮತ್ತು ಸುಟ್ಟುಕೊಳ್ಳುತ್ತಿರುವವರು ಬಡವರೇ. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರೂ ಈ ಬೇಗೆಯಲ್ಲಿ ಬೇಯುತ್ತಿದ್ದಾರೆ. ಹಸಿವಿನಿಂದ ಸಾಯುವ ಸ್ಥಿತಿ ಬಡವರಿಗೆ, ದುಡಿಯುವವರಿಗೆ ಬರಲಾರದೆಂದು ಹೇಳುವ ಧೈರ್ಯ ಯಾರಿಗಿದೆ?
ಭ್ರಷ್ಟಾಚಾರ 40 ಪರ್ಸೆಂಟ್ ಇರಲಿ, 60 ಪರ್ಸೆಂಟ್ ಇರಲಿ, ನಮ್ಮ ಸಮಾಜ ಧ್ವನಿ ಎತ್ತುವುದಿಲ್ಲ. ನಮ್ಮ ಬಹುಪಾಲು ಶಿಕ್ಷಣ ಸಂಸ್ಥೆಗಳು ಬಡವರ ನೆರಳನ್ನೂ ಸಹಿಸುವುದಿಲ್ಲ. ಬಹಳ ಉತ್ತಮ ಸ್ಥಿತಿಯಲ್ಲಿರುವ ಆಸ್ಪತ್ರೆಗಳಲ್ಲಿ ಬಡವರ ಭೂತಗಳು ಮಾತ್ರ ಓಡಾಡಬಹುದು. ಮೇಜು, ಮೇಜವಾನಿಯ ಕಲ್ಪನೆಯೂ ಬಡವರ ಬಳಿಗೆ ಸುಳಿಯುವುದಿಲ್ಲ., ಸಮಾಜದಲ್ಲಿನ ಅಂತರ ಭೂಮ್ಯಾಕಾಶಗಳ ಅಂತರವಾಗಿರುವುದೂ ನಮ್ಮ ತಲೆ ಕೆಡಿಸುವುದಿಲ್ಲ.
ಎಲ್ಲವನ್ನೂ ಮೌನವಾಗಿ ನೋಡುತ್ತ, ಮೌನದ ಒಪ್ಪಿಗೆಯನ್ನು ನೀಡುತ್ತ ಬಂದ ಸಮಾಜಕ್ಕೆ ʼಅನ್ನಭಾಗ್ಯʼ ಮಾತ್ರ ಮುಳ್ಳಿನಂತೆ ಚುಚ್ಚುತ್ತಿದೆ. ಬಡವರಿಗೆ ಕೊಡುವ ಅಕ್ಕಿ ಅವರನ್ನು ಸೋಮಾರಿಗಳಾಗಿ ಮಾಡುತ್ತದೆ, ಕುಡುಕರನ್ನಾಗಿ ಮಾಡುತ್ತದೆ ಎಂದೆಲ್ಲ ನಾವು ಟೀಕಿಸುತ್ತೇವೆ.
ಟೀಕಿಸುವ ಹಕ್ಕು ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ. ಈ ವ್ಯವಸ್ಥೆಯನ್ನೇ ನಿರ್ನಾಮ ಮಾಡಲು ಹೊರಟ ಪಕ್ಷಗಳ ಬಗ್ಗೆ, ಸರ್ಕಾರಗಳ ಬಗ್ಗೆ ಕಟು ಟೀಕೆಯನ್ನು ನಾವೇಕೆ ಮಾಡುವುದಿಲ್ಲ?
ಬುದ್ಧಿವಂತರಾದ, ಕುಶಲಿಗಳಾದ ನಮಗೆಲ್ಲ ಗೊತ್ತು. ನಮ್ಮ ಮಾತುಗಳು ಹರಿತವಾದರೆ, ಆಳುವವರನ್ನು ಗಾಯಗೊಳಿಸಿದರೆ ಕಂಬಿ ಎಣಿಸಬೇಕಾಗುತ್ತದೆ ಎಂಬ ಸತ್ಯ. ಸದ್ಯ ಕರ್ನಾಟಕದಲ್ಲಿ ಅಂಥ ಪರಿಸ್ಥಿತಿ ಇಲ್ಲ. ಎಲ್ಲರೂ ಮಾತನಾಡಬಹುದು, ಟೀಕಿಸಬಹುದು. ಈಗ ಹೇಳಿ: ಬಡವರ ಅನ್ನವನ್ನು ಕಸಿದುಕೊಳ್ಳಬಹುದೇ? ಕಸಿದುಕೊಳ್ಳುತ್ತಿರುವವರು ಯಾರು? ಇದನ್ನು ನಾವು ಮಾತಿಲ್ಲದೆ, ಸದ್ದಿಲ್ಲದೆ ನೋಡಬೇಕೇ? ಬಡವರ ಪಾಡನ್ನು ಬಡವರೇ ತೀರ್ಮಾನಿಸಬೇಕೇ?
