ಅಪ್ಪಟ ಕನ್ನಡತಿ ಅಪರ್ಣಾ | ಶುದ್ಧ, ಅಶುದ್ಧ ಅನ್ನೋದು ಭಾಷಾ ಭಯೋತ್ಪಾದನೆ

Date:

Advertisements

ನಿರೂಪಕಿ, ನಟಿ ಅಪರ್ಣಾ ಮೊನ್ನೆ ತೀರಿ ಹೋದಾಗ ಆಕೆಗೆ ಐವತ್ತೇಳರ ಹರೆಯ ಎಂದು ನಂಬಲಾಗಲಿಲ್ಲ. ಆಕೆ ಕನ್ನಡ ಭಾಷೆಯಲ್ಲಿ ಮಾಡುತ್ತಿದ್ದ ನಿರೂಪಣೆ, ಆಕೆಯ ಕಂಠಸಿರಿಯನ್ನು ಬಾಲ್ಯದಿಂದಲೇ ಕೇಳುತ್ತಾ ಬಂದಿದ್ದರೂ, ತೀರಾ ಇತ್ತೀಚಿನವರೆಗೂ ಅವರು ಅದನ್ನು ಮುಂದುವರೆಸಿಕೊಂಡು ಬಂದದ್ದರಿಂದ ಏನೋ, ಆಕೆ ಯಾವತ್ತೂ ಐವತ್ತೇಳರ ಹರೆಯವನ್ನು ಮುಟ್ಟಿರಬಹುದೆಂದು ಅನಿಸುತ್ತಿದ್ದಿಲ್ಲ. ಕನ್ನಡದಲ್ಲಿ ಕಾರ್ಯಕ್ರಮ ನಿರೂಪಣೆಗೆ ಒಂದು ಹೊಸ ಆಯಾಮ ಕೊಟ್ಟದ್ದೇ ಅಪರ್ಣಾ ಎನ್ನುವುದನ್ನು ನಿರಾಕರಿಸುವಂತಿಲ್ಲ. ಅದರಲ್ಲೂ ಆಕೆ ಕಾರ್ಯಕ್ರಮ ನಿರೂಪಣೆಯ ಉತ್ತುಂಗವೇರುವ ಮೊದಲು ಈ ಕ್ಷೇತ್ರದಲ್ಲಿ ಮಹಿಳೆಯರು ಅಷ್ಟೊಂದು ಎತ್ತರಕ್ಕೆ ಏರುವುದು ಅಸಾಧ್ಯವೆನ್ನುವ ಪರಿಸ್ಥಿತಿ ಇತ್ತು. ಇಂಥ ಪರಿಸ್ಥಿತಿಯನ್ನು ಮೆಟ್ಟಿನಿಂತು ತನ್ನ ಪ್ರತಿಭೆ, ಹಾರ್ಡ್‌ವರ್ಕ್‌ನಿಂದಲೇ ಆಕೆ ನಿರೂಪಣೆ ಕ್ಷೇತ್ರದಲ್ಲಿ ಯಾರೂ ಏರಲಾಗದ ಎತ್ತರವನ್ನು ಏರಿದ್ದು. ಯಾವುದೇ ಕ್ಷೇತ್ರದಲ್ಲಿ ಸಾಧನೆಗೈಯುವುದು, ನಂಬರ್ ವನ್ ಸ್ಥಾನ ಗಳಿಸುವುದು ಸಾಧ್ಯ. ಆದರೆ ಒಮ್ಮೆ ಸಾಧನೆಗೈದ ಮೇಲೆ, ಒಮ್ಮೆ ಅಷ್ಟೆತ್ತರಕ್ಕೆ ಏರಿದ ಮೇಲೆ ಅಲ್ಲಿ ಗಟ್ಟಿ ನೆಲೆ ನಿಲ್ಲುವುದು ಸುಲಭವಲ್ಲ. ಅಪರ್ಣಾ ಗಟ್ಟಿಗಿತ್ತಿ, ಅಪ್ಪಟ ಕನ್ನಡತಿ. ಆಕೆ ಸಾಧನೆಗೈದಿದ್ದು ಮಾತ್ರವಲ್ಲ, ಆ ಸಾಧನೆಯ ಉತ್ತುಂಗದಲ್ಲಿ ದಶಕಗಳ ಕಾಲ, ಮೊನ್ನೆ ತೀರಿ ಹೋಗುವ ತನಕ ನಿಂತಿದ್ದು ಗ್ರೇಟ್.

ನಾನು ಭಾಷಾ ಶುದ್ಧತೆ ಬಗ್ಗೆ ತಲೆಕೆಡಿಸಿಕೊಳ್ಳುವವನಲ್ಲ. ಭಾಷಾ ಶುದ್ಧತೆ ಎನ್ನುವುದೇ ಒಂದು ಶ್ರೇಷ್ಠತೆಯ ವ್ಯಸನ. ಭಾಷೆ ಇರುವುದೇ ಸಂಹವನಕ್ಕಾಗಿ. ನಾವು ಯಾರೊಂದಿಗೆ ಸಂವಹನ ನಡೆಸುತ್ತಿದ್ದೇವೆಯೋ, ನಾವು ಯಾರಿಗಾಗಿ ಬರೆಯುತ್ತೇವೆಯೋ ಅವರಿಗೆ ನಾವು ಮಾತನಾಡುವುದು, ಬರೆದಿರುವುದು ಅರ್ಥವಾಗಬೇಕು, ಮುಟ್ಟಬೇಕು. ಅಷ್ಟಿದ್ದರೆ ಸಾಕು ಎನ್ನುವುದು ನನ್ನ ಅನಿಸಿಕೆ. ಭಾಷೆಗೆ ಇರುವುದು ಕೇವಲ ವ್ಯಾಕರಣದ ಚೌಕಟ್ಟು ಮಾತ್ರ. ಅದನ್ನು ಬಿಟ್ಟು ಶುದ್ಧ, ಅಶುದ್ಧ ಅನ್ನುವುದು ಒಂದು ರೋಗ. ನಮ್ಮ ನೆಲ ವಿವಿಧತೆಯ ನೆಲ. ಇಲ್ಲಿ ಕಿಲೋಮೀಟರಿಗೆ ಆಹಾರ, ಉಡುಪು, ಸಂಸ್ಕೃತಿ, ಭಾಷೆಯಲ್ಲಿ ವಿವಿಧತೆ ಇರುವಾಗ, ಯಾವುದೋ ಒಂದು ಭಾಷಾ ಗ್ರಾಮ್ಯ, ಯಾವುದೋ ಒಂದು ಪ್ರದೇಶ ಅಥವಾ ಸಮುದಾಯದ ನುಡಿ ಮಾತ್ರ ಶುದ್ಧ, ಮಿಕ್ಕಿದ್ದು ಅಶುದ್ಧ, ಅಸಂಬದ್ಧ ಅನ್ನೋದು ಭಾಷಾ ಭಯೋತ್ಪಾದನೆ.

ಅಪರ್ಣಾರ ವಿಷಯದಲ್ಲಿ ಬಹುಶಃ ಆಕೆಯೇ ಎಲ್ಲೂ ತನ್ನದು ಶುದ್ಧ ಕನ್ನಡ, ಮಿಕ್ಕ ನಿರೂಪಕರು ತನ್ನಂತೆ ಶುದ್ಧ ಕನ್ನಡದಲ್ಲಿ ಮಾತನಾಡುತ್ತಿಲ್ಲವೆಂದು ಹೇಳಿರಲ್ಲಿಕ್ಕಿಲ್ಲ. ಅವರಿಗೆ ಭಾಷೆಯ ಮೇಲೆ, ತಾನು ನಿರೂಪಿಸುತ್ತಿದ್ದ ಕಾರ್ಯಕ್ರಮದ ಮೇಲೆ, ಸಭಿಕರ ಮೇಲೆ ಹಿಡಿತವಿತ್ತು. ಎಲ್ಲಿ, ಯಾವಾಗ ಏನು, ಎಷ್ಟು ಮಾತನಾಡಬೇಕೆಂಬ ಅರಿವಿತ್ತು. ಈ ಅರಿವು ಬರುವುದು ಅವಕಾಶ ಹಾಗೂ ಅನುಭವದಿಂದ. ಬಹುಶಃ ನಮ್ಮ ಪೀಳಿಗೆಯ ಮಟ್ಟಿಗೆ ಕನ್ನಡ ಕಾರ್ಯಕ್ರಮದ ನಿರೂಪಣೆಯ ವಿಷಯ ಬಂದಾಗ ಆಕೆ ಮೊದಲ ಸೆಲೆಬ್ರಿಟಿ ನಿರೂಪಕಿ. ಆ ಕಾರಣದಿಂದಿರಬೇಕು ಆಕೆಗೆ ಧಾರಾಳವಾಗಿ ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದವು. ಅದರ ಜೊತೆ ಸಿಕ್ಕ ಅವಕಾಶಗಳನ್ನು ಪರಿಣಾಮಕಾರಿಯಾಗಿ ಹಾಗೂ ಯಶಸ್ವಿಯಾಗಿ ಆಕೆ ಗಳಿಸಿಕೊಳ್ಳುತ್ತಿದ್ದುದ್ದರಿಂದ, ಸಂಘಟಕರು, ಸರ್ಕಾರಿ ಸಂಸ್ಥೆ, ಸಚಿವಾಲಯಗಳು ಆಕೆಗೆ ಹೆಚ್ಚಿನ ಅವಕಾಶ ಹಾಗೂ ಪ್ರಾಶಸ್ತ್ಯ ಕೊಡುತ್ತಿದ್ದವು. ಕನ್ನಡದ ಮಟ್ಟಿಗೆ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ವಿವಿಧ ನ್ಯೂಸ್ ಹಾಗೂ ಇತರೇ ವಾಹಿನಿಗಳ ಭರಾಟೆಯಲ್ಲೂ, ಅಪರ್ಣಾ ತನ್ನ ನಿರೂಪಣೆಯಲ್ಲಿ ಯಾವುದೇ ರಾಜಿ ಮಾಡಿಕೊಂಡಂತಿಲ್ಲ ಅಥವಾ ಆಕೆ ಎಲ್ಲೂ, ಯಾವತ್ತೂ ಸಂಘಟಕರಿಗಾಗಲಿ ತೊಂದರೆ ಕೊಟ್ಟಿದ್ದಿಲ್ಲ. ಹಾಗಾಗಿ ಆಕೆಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದವು.

Advertisements

ಕೆಲವರ ಪ್ರಕಾರ ಆಕೆಗೆ ಸತತವಾಗಿ ಅವಕಾಶಗಳು ಸಿಗುವಲ್ಲಿ ಜಾತಿಯೂ ಒಂದು ಕಾರಣವಾಗಿತ್ತು. ಆಗಿರಲೂಬಹುದು. ನಮ್ಮ ವ್ಯವಸ್ಥೆಯಲ್ಲಿ ಜಾತಿ ಢಾಳಾಗಿ ಹೊಕ್ಕಿಕೊಂಡಿರುವುದರಿಂದ ಇದನ್ನು ಸಂಪೂರ್ಣವಾಗಿ ನಿರಾಕರಿಸುವಂತಿಲ್ಲ. ಆದರೆ ನನ್ನ ಪ್ರಕಾರ ಆಕೆಗೆ ಜಾತಿಯ ಕಾರಣದಿಂದಲೋ, ಇನ್ಯಾವುದೋ ವಶೀಲಿಯಿಂದಲೋ ಅವಕಾಶಗಳು ಸಿಕ್ಕರೂ, she deserved it because she justified every opportunity. ಎಷ್ಟೇ ದೊಡ್ಡ ಕಾರ್ಯಕ್ರಮವಾಗಲಿ, ಎಷ್ಟೇ ಗಣ್ಯ ವ್ಯಕ್ತಿಗಳಿರಲಿ, ಕೊನೆಯ ಕ್ಷಣದ ಯಾವುದೇ ಬದಲಾವಣೆ ಇರಲಿ, ಅಪರ್ಣಾ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದಾರೆಂದರೆ, ಸಂಘಟಕರು ನಿರಾಳ. ಅಷ್ಟರಮಟ್ಟಿಗೆ ಆಕೆಯ ಪ್ರತಿಭೆ ಹಾಗೂ ಹಾರ್ಡ್‌ವರ್ಕ್ ನಂಬಬಹುದಿತ್ತು.

ಇನ್ನು ಅಧಿಕೃತ, ಸರ್ಕಾರಿ ಕಾರ್ಯಕ್ರಮಗಳೆಂದರೆ ಅದಕ್ಕೊಂದು ಪ್ರೊಟೋಕಾಲ್, ಚೌಕಟ್ಟು ಎಲ್ಲವೂ ಇದೆ. ಅಲ್ಲಿ ಕಾರ್ಯಕ್ರಮ ನಿರೂಪಣೆ ಮಾಡಲು ಕೇವಲ ನಿರರ್ಗಳ ಮಾತು ಬಂದರೆ ಸಾಕಾಗಲ್ಲ. ಸಮಯ ಪ್ರಜ್ಞೆ, ಕಾರ್ಯಕ್ರಮದ ಹಾಗೂ ಸಂಘಟಕರು ಹಾಗೂ ಪ್ರೇಕ್ಷಕರ ಅಪೇಕ್ಷೆ, ಇತಿಮಿತಿಗಳ ಬಗ್ಗೆ ಅರಿವಿರಬೇಕು, ಶಬ್ದ ಪ್ರಯೋಗಗಳ ಬಗ್ಗೆ ಹಿಡಿತವಿರಬೇಕು ಹಾಗೂ ಎಲ್ಲದಕ್ಕಿಂತ ಹೆಚ್ಚಾಗಿ ಹೇಳಲಿಕ್ಕಿರುವುದನ್ನು ಚೊಕ್ಕದಾಗಿ, ಚಿಕ್ಕದಾಗಿ ಹೇಳುವ ಕಲೆ ತಿಳಿದಿರಬೇಕು. ಹಾಗಾಗಿ ಅಧಿಕೃತ ಕಾರ್ಯಕ್ರಮಗಳೆಂದರೆ ಅಪರ್ಣಾ ಎನ್ನುವ ಮಟ್ಟಿಗೆ ಆಕೆ ತನ್ನ ಗುಣಮಟ್ಟವನ್ನು ಉಳಿಸಿಕೊಂಡಿದ್ದರು.

ಆಕೆಯ ಕಾರಣದಿಂದ ಬಹಳಷ್ಟು ಪ್ರತಿಭಾವಂತ ನಿರೂಪಕ, ನಿರೂಪಕಿಯರಿಗೆ ಅವಕಾಶ ಸಿಗುತ್ತಿದ್ದಿಲ್ಲವೆನ್ನುತ್ತಿರುವವರು ಈಗ ಆಕೆಯಿಂದ ತೆರವಾದ ಜಾಗವನ್ನು ಯಾರು ತುಂಬುತ್ತಾರೆಂದು ನೋಡಬೇಕು. ಆಕೆಗಿಂತ ಹೆಚ್ಚು ಪ್ರತಿಭಾವಂತ, ಆಕೆಗಿಂತ ಚೆನ್ನಾಗಿ ನಿರೂಪಣೆ ಮಾಡುವವರು ಮುಂದೆ ಬರಬಹುದು. ಆದರೆ ಅಪರ್ಣಾ ಮತ್ತೆ ಬರಲಾರರು. Not at all easy to walk in her shoes and reach those celebrity heights, she reached. She has set such benchmark that cannot be easily emulated. ಕನ್ನಡದಲ್ಲಿ ಈವಾಗ ಸಂಗೀತ ಕಾರ್ಯಕ್ರಮಗಳು, ಇತರೆ ಮನರಂಜನಾ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವವರ ದಂಡೇ ಇದೆ. ಅದರಲ್ಲಿ ಹೆಚ್ಚಿನವರ ಟ್ಯಾಲೆಂಟ್ ಎಂದರೆ ಬೊಬ್ಬೆ ಹಾಗೂ ಭಯಂಕರ, ಕೆಲವೊಮ್ಮೆ ಅತಿ ಭಯಂಕರ ಹಾವಭಾವ, ಡಬ್ಬಲ್ ಮೀನಿಂಗ್ ಜೋಕ್ಸ್. ಈ ನಿರೂಪಣೆ ಒಂಥರಾ T20 ಕ್ರಿಕೆಟ್ ರೀತಿ, ಪ್ರೇಕ್ಷಕರ ಅಭಿರುಚಿಗನುಗುಣವಾಗಿ, ಪ್ರೇಕ್ಷಕರ ಅಪೇಕ್ಷೆಗನುಗುಣವಾಗಿ ಹಾಗೂ ಸಂಘಟಕರ ಚಪಲಕ್ಕಾಗಿ. ಸಿಕ್ಸರ್, ಬೌಂಡರಿಗಳ ಸುರಿಮಳೆಯಲ್ಲಿ ಬೌಲಿಂಗ್ ಹಾಗೂ ಬೌಲರ್ ನಗಣ್ಯ. ಆದರೆ ಅಧಿಕೃತ ಕಾರ್ಯಕ್ರಮವೆನ್ನುವುದು ಟೆಸ್ಟ್ ಮ್ಯಾಚ್ ಥರಾ. ಇಲ್ಲಿ ಆಡುವ ಆಟಗಾರರೂ, ಪ್ರೇಕ್ಷಕರದ್ದೂ ಒಂದು ಪ್ರತ್ಯೇಕ ಸ್ಟ್ಯಾಂಡರ್ಡ್ ಹಾಗೂ ಅಭಿರುಚಿ. ಇಲ್ಲಿ ಮನರಂಜನೆಗಿಂತ ಪ್ರತಿಭೆ, ದೃಢತೆ, ತಾಳ್ಮೆ ಅಗತ್ಯ. ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ ಬರದಿದ್ದರೂ, ಪ್ರೇಕ್ಷಕರು ಇಲ್ಲದಿದ್ದರೂ ನಮ್ಮ ಕೆಲಸವನ್ನು ನಾವು ಮಾಡಲೇಬೇಕು. ಇವೆರಡರ ನಡುವೆ ಮಾಸ್ ಹಾಗೂ ಕ್ಲಾಸ್‌ನ ವ್ಯತ್ಯಾಸವುಂಟು. ಅಪರ್ಣಾ ಇದನ್ನು ದಶಕಗಳ ಕಾಲ ಬಹಳ ಶ್ರದ್ಧೆಯಿಂದ, ಜವಾಬ್ದಾರಿಯಿಂದ ಮಾಡಿದ್ದರು.

ಈಗ ಆಕೆಯಿಂದ ತೆರವಾದ ಜಾಗದಲ್ಲಿ ಅವಕಾಶ ಪಡೆದುಕೊಳ್ಳುವ ಅದೆಷ್ಟು ಮಂದಿ ಅಪರ್ಣಾ ಈ ಕ್ಷೇತ್ರದಲ್ಲಿ ಮಾಡಿದ ಸಾಧನೆ ಮಾಡುತ್ತಾರೋ ನೋಡಬೇಕು. ಯಾರು, ಎಷ್ಟು ಮಂದಿ ಬಂದರೂ, ಅಪರ್ಣಾರಂತೆ ದಶಕಗಳ ಕಾಲ ಈ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಉಳಿಸಿಕೊಳ್ಳುವುದು, ಬಾಳುವುದು ಸುಲಭವಲ್ಲ.

ಅಪರ್ಣಾ ಹೋದರೂ ಅವರು ಬಿಟ್ಟು ಹೋಗಿರುವ ನೆನಪುಗಳು, ಅವರ ಮತ್ತೆ ಮತ್ತೆ ಕೇಳಬೇಕಿನಿಸುವ ದನಿ, ಅವರ ವೈಶಿಷ್ಟ್ಯತೆ, ಭಾಷಾ ಹಿಡಿತ ಹಾಗೂ ನಿರೂಪಣೆಯ ಸೊಗಸು ಮಾತ್ರ ಸದಾಕಾಲ ನೆನಪಿನಲ್ಲಿರಲಿದೆ. ಬೆಂಗಳೂರು ಮೆಟ್ರೋ ಪ್ರತಿನಿತ್ಯ, ಪ್ರತೀ ನಿಮಿಷ ಅಪರ್ಣಾರನ್ನು ನಮ್ಮ ಕಣ್ಮುಂದೆ ತಂದಿಡಲಿದೆ, ಮುಂದಿನ ದಶಕಗಳ ಕಾಲ. ಅಷ್ಟರಮಟ್ಟಿಗೆ ಅಪರ್ಣಾ ಅನ್ನುವುದು ಕನ್ನಡದ, ಕರ್ನಾಟಕದ ಒಂದು ಆಸ್ತಿ. ಆಕೆ ಇಂದು, ಮುಂದೆಂದೂ ಅಪರೂಪದ ಕನ್ನಡತಿಯಾಗಿಯೇ ನೆನಪಿನಲ್ಲಿರುವುದಂತೂ ಗ್ಯಾರಂಟಿ.

– ಅಲ್ಮೇಡಿಯಾ ಗ್ಲಾಡ್ಸನ್

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಭಾಷೆ ಎನ್ನುವುದು ಎಲ್ಲರೂ ಅರಿಯುವಂತಿದ್ದರೆ ಸಾಕು. ಆದರೆ ತಪ್ಪುಗಳನ್ನು ತಿದ್ದದೆ ಹಾಗೇ ಸಹಿಸಿಕೊಂಡು ಹೋದರೆ ಆ ಭಾಷೆಯನ್ನು ಕೊಂದಂತೆ ಅಲ್ಲವೇ? ಮೂಖರ ಭಾಷೆಯು ಒಬ್ಬರನ್ನ ಒಬ್ಬರು ಅರಿಯಲು ಸಹಕಾರಿ ಆದರೂ ಆ ಭಾಷೆಯ ಸಿರಿ ಹೆಚ್ಚಿಸಲು ಸಾಧ್ಯವಿಲ್ಲ. ಭಾಷದೋಷ ಸಹಿಸುವುದು ಭಾಷೆ ಕೊಲ್ಲುವ ಭಯತ್ಪೊದನೆ ಅಲ್ಲವೇ?

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X