ಇಂದು ನಮ್ಮನ್ನು ಅಗಲಿದ ಖ್ಯಾತ ಸಾಹಿತಿ ಕೆ.ಟಿ.ಗಟ್ಟಿಯವರು ತನ್ನ ವೈಚಾರಿಕ ನಿಲುವು, ಬರಹಗಳ ಮೂಲಕ ಕನ್ನಡಿಗರ ಓದುವ ಅಭಿರುಚಿಯನ್ನು ಪೋಷಿಸಿದವರು. ಪತ್ರಿಕಾ ಧಾರಾವಾಹಿಗಳ ಮೂಲಕವೇ ಅವರು ಕನ್ನಡಿಗರನ್ನು ತಲುಪಿದ್ದು ಹೆಚ್ಚು.
ತುಳು,ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಬರೆಯುತ್ತಿದ್ದ ಕೆ.ಟಿ.ಗಟ್ಟಿ (85 ವರ್ಷ)ಅವರು ಕಾದಂಬರಿಗಾರನಾಗಿ ಹೆಚ್ಚು ಜನಪ್ರಿಯರಾಗಿದ್ದರು. ಕವಿತೆ, ನಾಟಕ, ಭಾಷಾ ಶಾಸ್ತ್ರದ ಬಗ್ಗೆ ಕೆ.ಟಿ.ಗಟ್ಟಿಯವರ ಕೊಡುಗೆಗಳು ಕೂಡ ಮಹತ್ವದ್ದಾಗಿದೆ.
ಕಾಸರಗೋಡು ಜಿಲ್ಲೆಯ ಮಧೂರು ಸಮೀಪದ ಕೂಡ್ಲೂವಿನಲ್ಲಿ ಕೆ.ಟಿ.ಗಟ್ಟಿ ಅವರು 1938 ಜುಲೈ 22 ರಂದು ಜನಿಸಿದ್ದರು. ಕೂಡ್ಲು ತಿಮ್ಮಪ್ಪ ಗಟ್ಟಿ ಇದು ಅವರ ಪೂರ್ಣ ಹೆಸರು.
ಯಕ್ಷಗಾನ ಕಲಾವಿದರಾಗಿದ್ದ ತಂದೆ ದೂಮಪ್ಪ ಅವರು ಮನೆಯಲ್ಲಿ ಹೇಳುತ್ತಿದ್ದ ಕಥೆಗಳು ಹಾಗೂ ಅವರು ತರುತ್ತಿದ್ದ ಪುಸ್ತಕಗಳು ಮತ್ತು ತಾಯಿ ಪರಮೇಶ್ವರಿಯರು ಹಾಡುತ್ತಿದ್ದ ತುಳು-ಮಲಯಾಳಂ ಪಾಡ್ದನಗಳ ಪ್ರೇರಣೆಯಿಂದಾಗಿ ಕೆ.ಟಿ.ಗಟ್ಟಿ ಅವರು 1957ರಿಂದಲೇ ಬರೆಯಲು ಆರಂಭಿಸಿದರು. ಕೆ.ಟಿ.ಗಟ್ಟಿಯವರು ವಯೋಸಹಜ ಆರೋಗ್ಯ ಸಮಸ್ಯೆಗೆ ಎದುರಾಗಿ ಬರೆಯುವುದಕ್ಕೆ ಪೂರ್ಣ ವಿರಾಮ ಕೊಡುವ ವೇಳೆಗೆ 40 ಕಾದಂಬರಿಗಳನ್ನು ಓದುಗರ ಕೈಗಿಟ್ಟಿದ್ದರು.
ಕೆ.ಟಿ.ಗಟ್ಟಿ ಅವರು ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಓದುಗ ಅಭಿಮಾನಿಗಳು, ಶಿಷ್ಯ ವರ್ಗವನ್ನು ಅಗಲಿದ್ದಾರೆ.
ಕೇರಳದ ಕಲ್ಲಿಕೋಟೆ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಎಂ.ಎ. ಪದವಿ ಪಡೆದ ಕೆ.ಟಿ.ಗಟ್ಟಿ, 1968ರಲ್ಲಿ ಮಣಿಪಾಲ ಎಂ.ಐ.ಟಿ.ಯಲ್ಲಿ ಉಪನ್ಯಾಸಕರಾಗಿ ಸೇವೆ ಆರಂಭಿಸಿ ಆರು ವರ್ಷ ಅಲ್ಲಿ ಸೇವೆ ಸಲ್ಲಿಸಿ ಬಳಿಕ ಒಂದು ವರ್ಷ ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕರಾಗಿ ಸಲ್ಲಿಸುತ್ತಾರೆ. ಆ ಬಳಿಕ ಭಾರತ ಸರಕಾರದ ವಿಶೇಷ ನಿಯೋಜನೆ ಮೂಲಕ ಇಥಿಯೋಪಿಯಾ ದೇಶದಲ್ಲಿ ಶಿಕ್ಷಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದರು.
ಇಥಿಯೋಪಿಯಾ ದೇಶದಲ್ಲಿ ಅಧ್ಯಾಪನ ಮಾಡುತ್ತಿದ್ದ ಅವಧಿಯಲ್ಲಿ ಕೆ.ಟಿ.ಗಟ್ಟಿಯವರು ಇಂಗ್ಲೆಂಡ್ ನ ಟ್ರಿನಿಟಿ ಮತ್ತು ಆಕ್ಸ್‌ಫರ್ಡ್ ಕಾಲೇಜಿನಿಂದ ಇಂಗ್ಲೀಷ್ ಕಲಿಕೆಯಲ್ಲಿ ಡಿಪ್ಲೊಮಾ ಪಡೆದಿದ್ದರು.
1982ರಲ್ಲಿ ಸ್ವದೇಶಕ್ಕೆ ಮರಳಿದ ಗಟ್ಟಿಯವರು, ಉಜಿರೆಯಲ್ಲಿ ‘ವನಸಿರಿ’ಯಲ್ಲಿ ಪ್ರಕೃತಿಯ ನಡುವೆ ನೆಲೆಸಿ ಬರೆಯುವುದನ್ನು ಮುಂದುವರಿಸಿದ್ದರು. ಇತ್ತೀಚೆಗೆ ಅವರು ಮಂಗಳೂರಿಗೆ ಬಂದು ನೆಲೆಸಿದ್ದರು.
ಸನ್ನಿವೇಶ, ಕಾರ್ಮುಗಿಲು, ಪುನರುಪಿ ಜನನಂ, ಗ್ಲಾನಿ, ಬಿಸಿಲುಗುದುರೆ, ಶಬ್ದಗಳು , ನಿರಂತರ, ಸ್ವರ್ಣ ಮೃಗ, ಅಬ್ರಾಹ್ಮಣ, ಅರಗಿನ ಅರಮನೆ, ಯುದ್ಧ, ಕಾಮರೂಪಿ, ಯುಗಾಂತರ, ರಾಗಲಹರಿ, ಮಿತಿ , ಭೂಮಿಗೀತೆ, ಕರ್ಮಣ್ಯೇವಾಧಿಕರಸ್ತೆ ಇವೆಲ್ಲಾ ಕೆ.ಟಿ.ಗಟ್ಟಿಯವರ ಪ್ರಮುಖ ಕಾದಂಬರಿಗಳು.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಂದೇಶ ಸಾಹಿತ್ಯ ಪ್ರಶಸ್ತಿ, ಚದುರಂಗ ನಾಟಕ ಪ್ರಶಸ್ತಿ , ಸಾಹಿತ್ಯ ಸವ್ಯಸಾಚಿ ಪ್ರಶಸ್ತಿ ಪುರಸ್ಕೃತರಾಗಿದ್ದ ಕೆ.ಟಿ.ಗಟ್ಟಿ ಅವರು, ಹತ್ತನೇ ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನ, 2ನೇ ಕಾಸರಗೋಡು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವನ್ನು ಪಡೆದಿದ್ದರು.
ಯಾವುದೇ ಪ್ರಶಸ್ತಿ, ಪುರಸ್ಕಾರ, ಪ್ರಚಾರದ ಹಿಂದೆ ಹೋದವರಲ್ಲ ಗಟ್ಟಿಯವರು. ಈ ಕಾರಣದಿಂದ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ತೀರಾ ಇಳಿ ವಯಸ್ಸಿನಲ್ಲಿ ಬಂತು. ಸಾಹಿತ್ಯ ಕೂಟ, ಚಳವಳಿ, ಸಮಾವೇಶದಿಂದ ಅಂತರ ಕಾಯ್ದುಕೊಳ್ಳುತ್ತಿದ್ದ ಗಟ್ಟಿಯವರು ಬರವಣಿಗೆಗೆ ಮಾತ್ರ ತನ್ನ ಸಮಯ ಕೊಡುತ್ತಿದ್ದರು.
ಕಾದಂಬರಿಕಾರರಾಗಿ ದೊಡ್ಡ ಖ್ಯಾತಿ ಪಡೆದಿದ್ದ ಕೆ.ಟಿ.ಗಟ್ಟಿಯವರ ಮೊದಲ ಕಾದಂಬರಿ ಶಬ್ದಗಳು 1976 ರಲ್ಲಿ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿ, ಬಳಿಕ ಅಂದಿನ ಕಾಲದಲ್ಲಿ ನಾಲ್ಕು ಮುದ್ರಣಗಳನ್ನು ಕಂಡಿತ್ತು. ಕಥೆಗಾರರಾಗಿ, ನಾಟಕಗಾರರಾಗಿ, ಭಾಷಾಶಾಸ್ತ್ರಜ್ಞರಾಗಿಯೂ ಗಟ್ಟಿಯವರು ಅನೇಕ ಕೃತಿಗಳನ್ನು ರಚಿಸಿದವರು.
ಕನ್ನಡ ಆಲಿಸಿ ಕಲಿಸಿ, ಇಂಗ್ಲೀಷ್ ಆಲಿಸಿ ಕಲಿಸಿ , ಹೌ ಟು ಟೀಚ್ ಯುವರ್ ಚೈಲ್ಡ್ ಇಂಗ್ಲೀಷ್ ಆಂಡ್ ಕನ್ನಡ, ಲರ್ನ್ ಕನ್ನಡ ತ್ರೂ ಇಂಗ್ಲೀಷ್, ಲರ್ನ್ ತುಳು ತ್ರೂ ಇಂಗ್ಲೀಷ್ ಮೊದಲಾದ ಕೃತಿಗಳ ಮೂಲಕ ಗಟ್ಟಿಯವರು ಜನರ ಭಾಷಾ ಕಲಿಕೆಗೆ ನೆರವಾದವರು.
‘ಝೇಂಕಾರದ ಹಕ್ಕಿ’ ಕನ್ನಡ ಕವಿತಾ ಸಂಕಲನವಾಗಿದ್ದರೆ, ‘ನನ್ನ ಪ್ರೇಮದ ಹುಡುಗಿ’ , ಇಂಗ್ಲೀಷ್ ನಿಂದ ಅನುವಾದಿಸಿದ ಕವನ ಸಂಕಲನ.
ಕೆಂಪು ಕಾಗೆ, ಕುರುಡರು, ಸತ್ಯಕ್ಕೆ ಜಯ, ನಗರ ಪರ್ವ, ಬೊಂಬೆಯಾಟ ಕೆ.ಟಿ.ಗಟ್ಟಿಯವರ ಪ್ರಮುಖ ನಾಟಕಗಳು. ಅವರ ಇಪ್ಪತಕ್ಕೂ ಹೆಚ್ಚು ಬಾನುಲಿ ನಾಟಕಗಳು ಆಕಾಶವಾಣಿಯಲ್ಲಿ ಪ್ರಸಾರವಾಗಿದೆ. ನಿಸರ್ಗ ಕನ್ಯೆ ಅಂಡಮಾನ್ ಪ್ರವಾಸ ಕಥನವಾಗಿದ್ದರೆ, ‘ತೀರ’ ಕೆ.ಟಿ.ಗಟ್ಟಿಯವರ ಆತ್ಮಕಥೆ.
ಇದನ್ನು ಓದಿದ್ದೀರಾ? ಕಾದಂಬರಿಕಾರ, ಭಾಷಾತಜ್ಞ, ಪ್ರಾಧ್ಯಾಪಕ ಕೆ.ಟಿ. ಗಟ್ಟಿ ನಿಧನ
ಇಥಿಯೋಪಿಯಾ ದೇಶದಿಂದ ಕೆ.ಟಿ.ಗಟ್ಟಿಯವರು ಮರಳಿ ತಾಯ್ನಾಡಿಗೆ ಬಂದು ನಾಲ್ಕು ದಶಕಗಳ ಬಳಿಕ ಈಗ ಕೂಡ ಇಥಿಯೋಪಿಯಾದ ಶಾಲೆಯಲ್ಲಿ ಹತ್ತನೇ ತರಗತಿಗೆ ಇಂಗ್ಲಿಷ್ ವ್ಯಾಕರಣ ಪಠ್ಯ ಪುಸ್ತಕವಾಗಿ ಕೆ.ಟಿ. ಗಟ್ಟಿಯವರು ಬರೆದ ಪುಸ್ತಕವನ್ನೇ ಬಳಸಲಾಗುತ್ತಿದೆ.
ದೇಹದಾನ ಮಾಡಬೇಕೆಂಬ ಕೆ.ಟಿ.ಗಟ್ಟಿಯವರ ಇಚ್ಛೆಯನ್ನು ಅವರ ಪತ್ನಿ ಮಕ್ಕಳು ದೇಹದಾನದ ಮುಖಾಂತರ ನೆರವೇರಿಸಿದರು.

ಅವರ ಅನೇಕ ಕಥೆ ಗಳನ್ನು ಮಾಸ ಪತ್ರಿಕೆ ಎಲ್ಲ್ಲಿ ಓದಿದ್ದೇನೆ ಸುಲಲಿತ ಶೈಲಿಯ
ಉತ್ತಮ ಲೇಖಕರು .ಅವರ ಬಗ್ಗೆ ಬಂದ ಈ ಲೇಖನ ತುಂಬ ಉಪಯುಕ್ತ. ಲೇಖಕರಿಗೆ. ಅಭಿನಂದನೆ ಗಳು.