ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ವಲಯದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಅತುಲ್ ಸುಭಾಷ್, ತನ್ನನ್ನು ತೊರೆದಿದ್ದ ಪತ್ನಿ ಮತ್ತು ಆಕೆಯ ಕುಟುಂಬದ ನಿರಂತರ ಕಿರುಕುಳ ಹಾಗೂ ತನ್ನ ಮಗುವನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲವೆಂದು ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಡಿಯೋ ಜೊತೆಗೆ ಸುಮಾರು 24 ಪುಟಗಳ ಡೆತ್‌ನೋಟ್‌ಅನ್ನೂ ಬರೆದಿಟ್ಟಿದ್ದಾರೆ. ಅದರಲ್ಲಿ ಉಲ್ಲೇಖಿಸಿರುವ ಹಲವಾರು ಕಾರಣಗಳು ತಮ್ಮ ಜೀವನ ಜಂಜಾಟಗಳನ್ನು ವಿವರಿಸಿವೆ. ಅವರ ಸಾವಿನ ಬಳಿಕ, ಆ ಎಲ್ಲ ವೈಯಕ್ತಿಕ ಕಾರಣಗಳು ನ್ಯಾಯಾಂಗವನ್ನೂ ಎಳೆಯುತ್ತಿವೆ. ವಿಚ್ಛೇದನ ಕಾನೂನುಗಳ ಬಗ್ಗೆ ಚರ್ಚೆ ಹುಟ್ಟುಹಾಕಿವೆ.
ಡೆತ್‌ನೋಟ್ ಬರೆದಿಟ್ಟಿರುವ ಅತುಲ್ ತನ್ನ ಪತ್ನಿಯ ವಿರುದ್ಧ ಹಲವಾರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ಅತುಲ್ ಹೇಳಿರುವಂತೆ, ಅತುಲ್ ವಿರುದ್ಧ ಅವರ ಪತ್ನಿ ನಿಖಿತಾ ಸುಮಾರು 9 ಪ್ರಕರಣಗಳನ್ನು ದಾಖಲಿಸಿದ್ದಾರೆ. ಅದರಲ್ಲಿ, ಅವುಗಳಲ್ಲಿ ಕೊಲೆ, ವರದಕ್ಷಿಣೆ ಕಿರುಕುಳ ಹಾಗೂ ಅಸ್ವಾಭಾವಿಕ ಲೈಂಗಿಕತೆಯ ಆರೋಪಗಳೂ ಇವೆ.
2022ರಲ್ಲಿ ಅತುಲ್ ವಿರುದ್ಧ ಕೊಲೆ ಆರೋಪದ ದೂರು ದಾಖಲಿಸಿದ್ದ ನಿಖಿತಾ, ವರದಕ್ಷಿಣೆಯಾಗಿ ದೊಡ್ಡ ಮೊತ್ತದ ಹಣಕ್ಕೆ ಅತುಲ್ ಬೇಡಿಕೆ ಇಟ್ಟಿದ್ದರಿಂದ ತನ್ನ ತಂದೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಆ ನಂತರ, ಮಧುಮೇಹ ಸೇರಿದಂತೆ ಹಲವಾರು ಕಾಯಿಲೆಗಳಿಂದಾಗಿ 2019ರಲ್ಲಿಯೇ ತನ್ನ ತಂದೆ ಸಾವನ್ನಪ್ಪಿದ್ದರೆಂದು ನಿಖಿತಾ ಅವರೇ ಒಪ್ಪಿಕೊಂಡಿದ್ದರು. ಇಂತಹ ಸುಳ್ಳು ಆರೋಪಗಳನ್ನು ಹೊರಿಸಿ, ಹಿಂಸೆ ನೀಡಿದ್ದಾರೆ ಎಂದು ಅತುಲ್ ತಮ್ಮ ಡೆತ್‌ನೋಟ್‌ಅನ್ನು ಬರೆದಿದ್ದಾರೆ.
ಅಲ್ಲದೆ, ಆರಂಭದಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನೂ ದಾಖಲಿಸಿದ್ದರು. ಬಳಿಕ, ವಿಚ್ಛೇದನದ ಮೊಕದಮೆ ದಾಖಲಿಸಿ ಮಾಸಿಕ 2 ಲಕ್ಷ ರೂ. ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಪ್ರಕರಣಗಳನ್ನು ಉತ್ತರ ಪ್ರದೇಶದ ಜೌನ್‌ಪುರದ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಆ ನ್ಯಾಯಾಧೀಶರು ತಮ್ಮ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಲಂಚ ಕೇಳುತ್ತಾರೆ. ನನ್ನ ಮೇಲಿನ ಆರೋಪಗಳು ಸುಳ್ಳು ಎಂದು ಮನವರಿಕೆ ಮಾಡಿಕೊಟ್ಟರೂ, ಅದನ್ನು ನಿರಾಕರಿಸಿದ್ದ ನ್ಯಾಯಾಧೀಶರು ನನ್ನ ಬಳಿಯೂ 5 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು ಎಂದು ನ್ಯಾಯಾಧೀಶರ ವಿರುದ್ಧವೂ ಅತುಲ್ ಗಂಭೀರ ಆರೋಪ ಮಾಡಿದ್ದಾರೆ.
ಅವರ ವಿಡಿಯೋ ಮತ್ತು ಡೆತ್‌ನೋಟ್ ಗಮನಿಸಿದರೆ, ಅವರ ವಿಚ್ಛೇದನ ಪ್ರಕರಣದ ವಿಚಾರಣೆಯ ನಿಧಾನಗತಿ, ಒಬ್ಬಂಟಿ ಭಾವನೆ, ಅಸಹಾಯಕತೆ ಹಾಗೂ ಕೆಲವು ವಿಚಾರಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿನ ಅಸಮರ್ಥತೆಯು ಅವರು ಈ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಿದೆ ಎಂಬುದನ್ನು ಸೂಚಿಸುತ್ತದೆ. ಜೊತೆಗೆ, ತನ್ನ ವಿಚಾರದಲ್ಲಿ ಕಾನೂನುಗಳು ದುರುಪಯೋಗವಾಗುತ್ತಿವೆ ಎಂಬ ಬೇಸರವನ್ನೂ ಬಿಂಬಿಸುತ್ತದೆ.
ಅತುಲ್ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದ ಬಳಿಕ ಸಾಮಾಜಿಕ ಜಾಲತಾಣದಲ್ಲಿ #ಮೀಟೂ ರೀತಿಯಲ್ಲಿ #ಮೆನ್‌ಟೂ ಹ್ಯಾಷ್‌ಟ್ಯಾಗ್ ವೈರಲ್ ಆಗುತ್ತಿದೆ. ಪುರುಷರ ಆತ್ಮಹತ್ಯೆಯಂತಹ ಸಾವುಗಳಿಗೆ ಮಹಿಳೆಯರೇ (ಪತ್ನಿ) ಕಾರಣವೆಂಬ ಆರೋಪಗಳು ಗರಿಗೆದರಿವೆ. ಎಲ್ಲ ಕೆಡಕಿಗೂ ಹೆಣ್ಣೇ ಕಾರಣವೆಂದು ದೂರುವ, ಅದನ್ನೇ ಬಿಂಬಿಸುವ, ಹೆಣ್ಣಿಗೆ ಹೆಣ್ಣೇ ಶತ್ರು, ಎಲ್ಲ ಘಟನೆಗಳಿಗೂ ಹೆಣ್ಣೇ ಕಾರಣವೆಂದು ಚಿತ್ರಿಸುವ ಧಾರಾವಾಹಿ, ಸಿನಿಮಾಗಳಿರುವ ಈ ಸಂದರ್ಭದಲ್ಲಿ ಹೆಣ್ಣು ಮಕ್ಕಳನ್ನು ವಿಲನ್‌ಗಳಾಗಿ ಬಿಂಬಿಸಲು ಸೆಕೆಂಡುಗಳು ಸಾಕು. ಈಗ ಅದೇ ನಡೆಯುತ್ತಿದೆ. ಹೆಣ್ಣನ್ನೇ ದೂರುವ ಸಮಾಜಕ್ಕೆ ಅತುಲ್ ಪ್ರಕರಣ ಅಸ್ತ್ರವಾಗಿ ದೊರೆತಿದೆ.
ಈ ಹ್ಯಾಷ್‌ಟ್ಯಾಗ್ ಯಾವ ಮಟ್ಟಿಗೆ ಪ್ರಚಲಿತಕ್ಕೆ ಬಂದಿದೆ ಎಂದರೆ, ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ, ಹಿಂಸೆಗಳನ್ನೂ ಸಮರ್ಥಿಸುತ್ತಿವೆ.
ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿರುವ #ಮೆನ್‌ಟೂ ಹ್ಯಾಸ್‌ಟ್ಯಾಗ್ ಅಷ್ಟು ಸಮಂಜಸವಲ್ಲದಿದ್ದರೂ, ಅತುಲ್ ಪ್ರಕರಣ ವಿಭಿನ್ನವಾದದ್ದು. ಅತುಲ್ ಪ್ರಕರಣದಲ್ಲಿ ಆತನ ಡೆತ್‌ನೋಟ್, ವಿಡಿಯೋ ಮತ್ತು ಆತ್ಮಹತ್ಯೆಯಂತಹ ಗಂಭೀರ ನಿರ್ಧಾರಗಳು ಆತ ಸಂತ್ರಸ್ತ ಎಂಬುದನ್ನು ಸೂಚಿಸುತ್ತವೆ.
ಅತುಲ್ ಪ್ರಕರಣದಲ್ಲಿ ಕೌಟುಂಬಿಕ, ವಿಚ್ಛೇದನ ಕಾನೂನುಗಳು ದುರುಪಯೋಗವಾಗಿರವ ಸಾಧ್ಯತೆಯನ್ನು ಎತ್ತಿತೋರಿಸುತ್ತದೆ. ಕಾನೂನಾತ್ಮಕವಾಗಿಯೂ ತಮಗೆ ನ್ಯಾಯ ದೊರೆಯುವುದಿಲ್ಲ ಎಂಬ ಭಯದಿಂದಲೂ ಅತುಲ್ ತಮ್ಮ ಜೀವ ಕಳೆದುಕೊಂಡಿದ್ದಾರೆ ಎಂಬುದನ್ನೂ ಬಿಂಬಿಸುತ್ತದೆ. ಅದರಾಚೆಗೂ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಇನ್ನೂ ಹೊರಬರಬೇಕಿದೆ. ಆ ನಿಟ್ಟಿನಲ್ಲಿ ತನಿಖೆಗಳು ನಡೆಯುತ್ತಿವೆ.
ವಿಚ್ಛೇದನ ಕಾನೂನು ದುರುಪಯೋಗಕ್ಕೆ ಕಡಿವಾಣ ಅಗತ್ಯ
ಭಾರತದಲ್ಲಿ ವಿಚ್ಛೇದನ, ಜೀವನಾಂಶ ಮತ್ತು ಕೌಟುಂಬಿಕ ಸಮಸ್ಯೆಗಳಲ್ಲಿ ಸಮಾನ ಪರಿಹಾರಗಳನ್ನು ಒದಗಿಸಲು ಮತ್ತು ಪ್ರಕರಣದ ಸಂತ್ರಸ್ತರನ್ನು ರಕ್ಷಿಸಲು ಕೌಟಿಂಬಿಕ ಕಾನೂನುಗಳನ್ನು ರಚಿಸಲಾಗಿದೆ. ವಿಶೇಷವಾಗಿ, ಐತಿಹಾಸಿಕವಾಗಿ ವ್ಯವಸ್ಥಿತ ತಾರತಮ್ಯ ಮತ್ತು ದಬ್ಬಾಳಿಕೆಗಳಿಂದ ಮಹಿಳೆಯರನ್ನು ಈ ಕಾನೂನುಗಳು ರಕ್ಷಿಸುತ್ತಿವೆ. ಆದಾಗ್ಯೂ, ಕೆಲ ಸಂದರ್ಭಗಳಲ್ಲಿ ಈ ಕಾನೂನುಗಳು ದುರುಪಯೋಗ ಆಗಬಹುದು. ಅದರಲ್ಲಿ ಅನುಮಾನವಿಲ್ಲ. ಆದರೆ, ಕಾನೂನಿನ ದುರುಪಯೋಗವಾಗುತ್ತಿದೆ ಎಂಬುದನ್ನು ತೋರಿಸಲು, ಸಾಬೀತುಪಡಿಸಲು ಎಲ್ಲರಿಗೂ ಅವಕಾಶವಿದೆ.
ಕೆಲವು ಮಹಿಳೆಯರು ಅನ್ಯಾಯದ ಮಾರ್ಗದಲ್ಲಿ ತಮ್ಮ ವೈಯಕ್ತಿಕ ಲಾಭ ಸಾಧಿಸಿಕೊಳ್ಳಲು ಕೌಟುಂಬಿಕ ಕಾನೂನು ನಿಬಂಧನೆಗಳನ್ನು ದುರುಪಯೋಗಕ್ಕೆ ಬಳಸಿಕೊಳ್ಳುತ್ತಾರೆ. ಇದರಿಂದಾಗಿ ಕಾನೂನು ವ್ಯವಸ್ಥೆಯಲ್ಲಿ ಹುದುಗಿರುವ ನ್ಯಾಯ ಮತ್ತು ನ್ಯಾಯಸಮ್ಮತತೆಯ ಉದ್ದೇಶವವೂ ದುರ್ಬಲಗೊಳ್ಳುತ್ತಿದೆ ಎಂದು ಕೆಲವು ವಿಮರ್ಶಕರು ವಾದಿಸುತ್ತಾರೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ (NCRB) ಆತ್ಮಹತ್ಯೆಗಳ ವರದಿಗಳು ಹೇಳುವಂತೆ, ದಾಖಲಾಗುವ ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ 50%ಗಿಂತ ಹೆಚ್ಚು ಪ್ರಕರಣಗಳು ಕೌಟುಂಬಿಕ-ಸಂಬಂಧಿತ ಸಮಸ್ಯೆಗಳು, ದೈಹಿಕ ಮತ್ತು ಮಾನಸಿಕ ಆರೋಗ್ಯ ಪರಿಸ್ಥಿತಿಗಳಿಂದ ಉಂಟಾಗುವ ತೊಂದರೆಗಳ ಕಾರಣಕ್ಕಾಗಿ ಸಂಭವಿಸುತ್ತವೆ. ಆತ್ಮಹತ್ಯೆ ಸಾವುಗಳಿಗೆ ಪ್ರಮುಖ ಕಾರಣಗಳಲ್ಲಿ ಮದುವೆ ಮತ್ತು ‘ರಿಲೇಷನ್‌ಶಿಪ್’]’ ಸಂಬಂಧಿತ ಸಮಸ್ಯೆಗಳು 3ನೇ ಕಾರಣವಾಗಿವೆ.
ಈ ವರದಿ ಓದಿದ್ದೀರಾ?: ಮುಡಾ ಹಗರಣ | ಕರ್ನಾಟಕ ಹೈಕೋರ್ಟ್ ದೋಷಪೂರಿತ ತೀರ್ಪು ನೀಡಿತೆ?
ಭಾರತೀಯ ಕಾನೂನು ವ್ಯವಸ್ಥೆಯು ಮದುವೆ, ವಿಚ್ಛೇದನ ಮತ್ತು ಕೌಟುಂಬಿಕ ನಿರ್ವಹಣೆಯ ಸಮಸ್ಯೆಗಳನ್ನು ಪರಿಹರಿಸಲು ಹಲವಾರು ಕಾನೂನುಗಳನ್ನು ಒದಗಿಸುತ್ತದೆ:
- ಹಿಂದು ವಿವಾಹ ಕಾಯಿದೆ-1955- ಇದು ಹಿಂದುಗಳಲ್ಲಿ ಮದುವೆ ಮತ್ತು ವಿಚ್ಛೇದನವನ್ನು ನಿರ್ವಹಿಸುತ್ತದೆ. ಜೀವನಾಂಶವನ್ನು ಒದಗಿಸುತ್ತದೆ.
- ವಿಶೇಷ ವಿವಾಹ ಕಾಯಿದೆ-1954- ಒಂದು ಜಾತ್ಯತೀತ ಕಾನೂನಾಗಿದ್ದು, ಅಂತರ್‌ಧರ್ಮೀಯ ವಿವಾಹಗಳಿಗೆ ಅವಕಾಶ ನೀಡುತ್ತದೆ. ಅಂತಹ ಮದುವೆ ಮತ್ತು ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡುತ್ತದೆ.
- ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯಿದೆ (PWDVA)-2005- ಇದು ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರನ್ನು ರಕ್ಷಿಸುತ್ತದೆ. ಜೊತೆಗೆ, ಸಂತ್ರಸ್ತ ಮಹಿಳೆಗೆ ಹಣಕಾಸು ಪರಿಹಾರ, ವಸತಿ ಹಕ್ಕುಗಳು ಮತ್ತು ನಿರ್ವಹಣೆಯನ್ನು ಒದಗಿಸುತ್ತದೆ.
- ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 125- ಇದು ಪತ್ನಿ, ಮಕ್ಕಳು ಮತ್ತು ಪೋಷಕರಿಗೆ ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ.
ಈ ಕಾನೂನುಗಳು ವಿಚ್ಛೇದನದ ನಂತರ ಅಥವಾ ದಂಪತಿಗಳು ಪ್ರತ್ಯೇಕತೆಗೊಂಡ ನಂತರ ಮಹಿಳೆಯರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿವೆ. ಪಿತೃಪ್ರಧಾನ ವ್ಯವಸ್ಥೆಯೊಳಗೆ ಪತಿಯಿಂದ ದೂರವಾದ ಪತ್ನಿ ತನ್ನ ಭವಿಷ್ಯದ ಜೀವನದಲ್ಲಿ ಬಡತನದಿಂದ ಬಳಲುವುದಿಲ್ಲ ಎಂದು ಖಚಿತಪಡಿಸುತ್ತದೆ. ಆದಾಗ್ಯೂ, ಈ ಕಾನೂನುಗಳು ಕೆಲವು ಸಮಯದಲ್ಲಿ ಸಾಂದರ್ಭಿಕವಾಗಿ ದುರುಪಯೋಗವಾಗುವ ಆರೋಪಗಳಿವೆ.
ಕಾನೂನುಗಳು ಹೇಗೆ ದುರ್ಬಳಕೆಯಾಗುತ್ತವೆ?
ವಿಚ್ಛೇದನ ಮತ್ತು ಜೀವನಾಂಶ ಪ್ರಕರಣಗಳಲ್ಲಿ ಮಹಿಳೆಯರು ಕಾನೂನುಗಳನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ ಎಂಬುದು ವಿವಾದಾಸ್ಪದ ವಿಷಯವಾಗಿದೆ. ಈ ಕಾನೂನುಗಳು ಹೇಗೆ ದುರುಪಯೋಗ ಆಗುತ್ತವೆ ಎಂಬುದಕ್ಕೆ ವಿಮರ್ಶಕರು ಕೆಲವು ಅಂಶಗಳನ್ನು ಪಟ್ಟಿ ಮಾಡಿದ್ದಾರೆ:
- ಕೌಟುಂಬಿಕ ಹಿಂಸಾಚಾರದ ಪ್ರಕರಣದಲ್ಲಿ ಕೆಲವು ಮಹಿಳೆಯರು ತನ್ನ ಪತಿಯಿಂದ ಹೆಚ್ಚಿನ ಜೀವನಾಂಶ ಪಡೆಯಲು ಅಥವಾ ಆತನಿಗೆ ಕಿರುಕುಳ ನೀಡುವ ಉದ್ದೇಶದಿಂದ ತಮ್ಮ ಪತಿ ಅಥವಾ ಅವರ ಕುಟುಂಬದ ವಿರುದ್ಧ PWDVA ಅಥವಾ ಐಪಿಸಿ ಸೆಕ್ಷನ್ 498A ಅಡಿಯಲ್ಲಿ ಸುಳ್ಳು ಆರೋಪಗಳನ್ನು ದಾಖಲಿಸಬಹುದು.
- ತಮ್ಮ ಹಣಕಾಸಿನ ಅಗತ್ಯಗಳನ್ನು ಹೆಚ್ಚಿಕೊಳ್ಳಲು ಮತ್ತು ತಮ್ಮ ಅಗತ್ಯಗಳನ್ನು ನಿರ್ವಹಿಸಲು ಹೆಚ್ಚಿನ ಜೀವನಾಂಶಕ್ಕಾಗಿ ಬೇಡಿಕೆ ಇಟ್ಟು ತಮ್ಮ ಆದಾಯದ ಮೂಲಗಳನ್ನು ಮರೆಮಾಚಬಹುದು.
- ಮಕ್ಕಳನ್ನು ತಮ್ಮ ಸುರ್ಪದಿಯಲ್ಲಿ ಇಟ್ಟುಕೊಂಡು ಆ ಮಕ್ಕಳ ಹೆಸರಿನಲ್ಲಿ ಪತಿಯಿಂದ ಆರ್ಥಿಕ ಪ್ರಯೋಜನಗಳನ್ನು ಪಡೆಯುವುದು ಅಥವಾ ಪತಿಯನ್ನು ಭಾವನಾತ್ಮಕವಾಗಿ ಹತೋಟಿಯಲ್ಲಿ ಇಟ್ಟುಕೊಳ್ಳಲು ಬಯಸುವುದು.
- ತಾತ್ಕಾಲಿಕ ಆರ್ಥಿಕ ಪ್ರಯೋಜನಗಳನ್ನು ಪಡೆಯಲು ಕ್ಷುಲ್ಲಕ ಪ್ರಕರಣಗಳನ್ನು ದಾಖಲಿಸುವ ಮೂಲಕ ಮಧ್ಯಂತರ ನಿರ್ವಹಣೆಯ ನಿಬಂಧನೆಗಳನ್ನು ದುರುಪಯೋಗ ಮಾಡಿಕೊಳ್ಳಬಹುದು.
ಆದಾಗ್ಯೂ, ಇಂತಹ ದುರುಪಯೋಗಗಳನ್ನು ತಡೆಯಲು ಸಾಕಷ್ಟು ಅವಕಾಶಗಳಿವೆ. ಪ್ರಕರಣಗಳಲ್ಲಿ ಪತಿಯೇ ಸಂತ್ರಸ್ತನಾಗಿದ್ದು, ಆತನ ವಿರುದ್ಧ ಪತ್ನಿ ಸುಳ್ಳು ಆರೋಪಗಳನ್ನು ಮಾಡಿದ್ದರೆ, ಅದಕ್ಕೆ ಸಾಕ್ಷ್ಯಗಳನ್ನು ಒದಗಿಸಬಹುದು. ಸುಳ್ಳೆಂದು ಸಾಬೀತು ಮಾಡಬಹುದು. ಆಕೆಯ ಆದಾಯ ಮೂಲಗಳು ಹಾಗೂ ತನ್ನ ಆರ್ಥಿಕ ಪರಿಸ್ಥಿತಿಗಳ ಬಗ್ಗೆಯೂ ಆರೋಪಿ ಸ್ಥಾನದಲ್ಲಿದ್ದ ಪತಿ ನ್ಯಾಯಾಲಯದ ಗಮನ ಸೆಳೆಯಲು ಅವಕಾಶ ಇದ್ದೇ ಇರುತ್ತದೆ. ಕಾನೂನು ದುರುಪಯೋಗ ಮಾಡಿಕೊಂಡ ಮಹಿಳೆಯರಿಗೇ ನ್ಯಾಯಾಲಯಗಳು ದಂಡ ವಿಧಿಸಿರುವ ನಿದರ್ಶನಗಳು ಇವೆ.
ಲಿಂಗ-ಆಧಾರಿತ ದ್ವೇಷ ಮತ್ತು ಕಾನೂನು ದುರುಪಯೋಗದ ಆರೋಪಗಳು, ಲಿಂಗ ಸಮಾನತೆಯ ದೊಡ್ಡ ಗುರಿಯಿಂದ ದೂರವಿಡುತ್ತವೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಹೀಗಾಗಿ, ನಿಜವಾದ ಸಂತ್ರಸ್ತರನ್ನು ರಕ್ಷಿಸಲು ಕಾನೂನುಗಳು ಅತ್ಯಗತ್ಯ. ಆ ಕಾನೂನುಗಳು ದುರುಪಯೋಗವಾಗದಂತೆ ತಡೆಯುವುದು ಸಾಮಾಜಿಕವಾಗಿ ಎಲ್ಲರ ಕರ್ತವ್ಯ.
ಭಾರತದಲ್ಲಿ ಮಹಿಳೆಯರಿಂದ ವಿಚ್ಛೇದನ ಮತ್ತು ಜೀವನಾಂಶ ಕಾನೂನುಗಳ ದುರುಪಯೋಗದ ಆರೋಪಗಳು ಲಿಂಗ, ಕಾನೂನು ಮತ್ತು ನ್ಯಾಯದ ನಡುವಿನ ಸಂಕೀರ್ಣತೆಯನ್ನು ಎತ್ತಿ ತೋರಿಸುತ್ತದೆ. ಕಾನೂನು ವ್ಯವಸ್ಥೆಯ ಸಮಗ್ರತೆಯನ್ನು ರಕ್ಷಿಸಲು ದುರುಪಯೋಗದ ನಿದರ್ಶನಗಳನ್ನು ಪರಿಹರಿಸುವುದು ನಿರ್ಣಾಯಕವಾಗಿದೆ. ಆದರೂ, ನಮ್ಮ ಕಾನೂನು ವ್ಯವಸ್ಥೆಯು ನಿಜವಾದ ಸಂತ್ರಸ್ತರ ಹಕ್ಕುಗಳನ್ನು ದುರ್ಬಲಗೊಳಿಸುವುದಿಲ್ಲ ಅಥವಾ ಪಿತೃಪ್ರಭುತ್ವದ ನಿಯಮಗಳನ್ನು ಶಾಶ್ವತಗೊಳಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಷ್ಟೇ ಮುಖ್ಯ.
ಕಾನೂನು ದುರುಪಯೋಗಕ್ಕೆ ಸುಪ್ರೀಂ ಕಡಿವಾಣ
ಅತುಲ್ ಆತ್ಮಹತ್ಯೆ ಪ್ರಕರಣದ ಬಳಿಕ ವಿಚ್ಛೇದನ ಮತ್ತು ಜೀವನಾಂಶ ಕಾನೂನುಗಳ ದುರುಪಯೋಗದ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಸುಪ್ರಿಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪ್ರವೀಣ್ ಕುಮಾರ್ ಜೈನ್ ಮತ್ತು ಅಂಜು ಜೈನ್ ದಂಪತಿಯ ವಿಚ್ಛೇದನ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯವು ವಿಚ್ಛೇದನ ಪ್ರಕರಣಗಳಲ್ಲಿ ಜೀವನಾಂಶ ಮೊತ್ತ ನಿರ್ಧರಿಸುವಾಗ 8 ಅಂಶಗಳನ್ನು ಗಮನಿಸುವಂತೆ ಮತ್ತು ಪಾಲಿಸುವಂತೆ ಎಲ್ಲ ವಿಚಾರಣಾ ನ್ಯಾಯಾಲಯಗಳಿಗೆ ಸೂಚಿಸಿದೆ:
- ಪತಿ ಮತ್ತು ಪತ್ನಿಯ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ಅವಲೋಕನ
- ಭವಿಷ್ಯದಲ್ಲಿ ಪತ್ನಿ ಮತ್ತು ಮಕ್ಕಳ ಮೂಲಭೂತ ಅಗತ್ಯಗಳು ಏನಿವೆ
- ಪತಿ-ಪತ್ನಿಯ ಅರ್ಹತೆ ಮತ್ತು ಉದ್ಯೋಗಗಳೇನು?
- ದಂಪತಿಗಳ ಆದಾಯ ಮತ್ತು ಆಸ್ತಿಗಳ ಮೂಲಗಳು ಯಾವುವು?
- ಅತ್ತೆಯ ಮನೆಯಲ್ಲಿ ವಾಸಿಸುತ್ತಿರುವಾಗ ಪತ್ನಿಯ ಜೀವನ ಮಟ್ಟ ಹೇಗಿದೆ?
- ಕುಟುಂಬವನ್ನು ನೋಡಿಕೊಳ್ಳಲು ಪತ್ನಿ ತನ್ನ ಕೆಲಸವನ್ನು ತೊರೆದಿದ್ದಾರೆಯೇ ಅಥವಾ ಉದ್ಯೋಗದಲ್ಲಿದ್ದಾರೆಯೇ?
- ಕೆಲಸಕ್ಕೆ ತೆರಳುತ್ತಿಲ್ಲ ಎಂದಾದರೆ ಪತ್ನಿಗೆ ಕಾನೂನು ಹೋರಾಟಕ್ಕೆ ಸಮಂಜಸವಾದ ಮೊತ್ತ
- ಪತಿಯ ಆರ್ಥಿಕ ಸ್ಥಿತಿ ಹೇಗಿದೆ? ಅವನ ಗಳಿಕೆ ಮತ್ತು ಇತರ ಜವಾಬ್ದಾರಿಗಳು ಏನೇನು?