ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯದ ಬಗ್ಗೆ ವೈದ್ಯರ ಚಿಕಿತ್ಸೆಯ ಜೊತೆಗೆ ಅವರ ಮನೆಯವರೂ ಹೆಚ್ಚಿನ ಕಾಳಜಿ ವಹಿಸಬೇಕಾದ ತುರ್ತು ಇಂದು ಇದೆ. ಗರ್ಭಾವಸ್ಥೆಯ ಆರಂಭದ ದಿನಗಳಿಂದಲೂ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡರೆ ಮುಂದೆ ಗಂಭೀರ ಪರಿಸ್ಥಿತಿ ಉಂಟಾಗುವುದನ್ನು ತಪ್ಪಿಸಬಹುದು
ಇತ್ತೀಚೆಗೆ ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಹೆರಿಗೆ ನಂತರ ಬಾಣಂತಿಯರ ಸಾವು ಸಾಕಷ್ಟು ಸುದ್ದಿಯಾಗಿದೆ. ಸಿಸೇರಿಯನ್ ಮಾಡಿಸಿಕೊಂಡ ನಂತರ ಅಲ್ಲಿನ ಸಿಬ್ಬಂದಿ ದೋಷಪೂರಿತ ಔಷಧಿಯನ್ನು ಕೊಟ್ಟ ಬಳಿಕ ಅವರಿಗೆ ಮೂತ್ರಪಿಂಡ ವೈಫಲ್ಯ, ಬಹುಅಂಗಾಂಗ ವೈಫಲ್ಯ ಮುಂತಾದ ಸಮಸ್ಯೆಗಳು ಕಾಣಿಸಿಕೊಂಡು ದೈಹಿಕ ಪರಿಸ್ಥಿತಿ ಗಂಭೀರವಾಗಿ ಕೊನೆಗೆ ಮರಣಿಸಿದ್ದಾರೆ. ಈ ತಾಯಂದಿರ ಮರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಈ ದಿಸೆಯಲ್ಲಿ ಸುಧಾರಣೆಗಳನ್ನು ತರಲು ಕಾನೂನು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ವಾಸ್ತವವಾಗಿ ಹೇಳಬೇಕೆಂದರೆ ರಾಜ್ಯದಲ್ಲಿ ತಾಯಂದಿರ ಮರಣ ಅನುಪಾತ ಇತ್ತೀಚಿನ ವರ್ಷಗಳಲ್ಲಿ ಇಳಿಮುಖವಾಗಿದೆ. ಪ್ರಸವಪೂರ್ವ ಆರೈಕೆ, ಸಾಂಸ್ಥಿಕ ಹೆರಿಗೆಯಲ್ಲಿ ಸುಧಾರಣೆ, ಕಬ್ಬಿಣ ಮತ್ತು ಫೋಲಿಕ್ ಆಸಿಡ್ ಮಾತ್ರೆಗಳ ವಿತರಣೆ, ಹೆಚ್ಚಿನ ಅಪಾಯದ ಗರ್ಭಧಾರಣೆಯ ಅನುಸರಣೆ ಮತ್ತು ಪ್ರಸವಪೂರ್ವ ಮತ್ತು ನವಜಾತ ಶಿಶುವಿನ ಆರೈಕೆಯ ಕಟ್ಟುನಿಟ್ಟಿನ ಅನುಷ್ಠಾನವು ತಾಯಂದಿರ ಮರಣ ಅನುಪಾತವನ್ನು ಗಣನೀಯವಾಗಿ ಕಡಿಮೆ ಮಾಡಿದೆ ಎಂದು ಕರ್ನಾಟಕ ಆರೋಗ್ಯ ಇಲಾಖೆಯ ದಾಖಲೆಗಳೇ ಹೇಳುತ್ತವೆ. ಪರಿಸ್ಥಿತಿ ಹೀಗಿರುವಾಗ ಬಳ್ಳಾರಿಯ ಆಸ್ಪತ್ರೆಯಲ್ಲಿ ನಡೆದಿರುವ ಘಟನೆ ಖಂಡನೀಯ ಮತ್ತು ಸರ್ಕಾರ ಇಂತಹ ಘಟನೆಗಳನ್ನು ನಡೆಯಲು ಬಿಡಬಾರದು.
ತಾಯ್ತನದ ಮರಣ ಅನುಪಾತವನ್ನು (ಎಂಎಂಆರ್) ಗಮನಿಸಿದರೆ 2017-18ರಲ್ಲಿ ಪ್ರತಿ ಒಂದು ಲಕ್ಷ ಮಂದಿಗೆ 83 ಇತ್ತು. ಇದು 2018-20 ರಲ್ಲಿ 69ಕ್ಕೆ ಇಳಿಕೆಯಾಗಿತ್ತು. ಇನ್ನು 2023-2024ರಲ್ಲಿ ಈ ಸಂಖ್ಯೆಯು 64ಕ್ಕೆ ಮತ್ತೆ ಕುಸಿಯಿತು ಎನ್ನಲಾಗಿದೆ. ಬಳಿಕ ಈ 12 ತಿಂಗಳಲ್ಲಿ ಏಪ್ರಿಲ್ನಿಂದ ಇಲ್ಲಿಯವರೆಗೆ 327 ತಾಯಂದಿರ ಸಾವುಗಳು ವರದಿಯಾಗಿವೆ ಎಂದು ತಿಳಿದುಬಂದಿದೆ. ಸೀಮಿತ ವೈದ್ಯಕೀಯ ಸಂಪನ್ಮೂಲಗಳು, ಹಳ್ಳಿಗಳಿಂದ ನಗರ-ಪಟ್ಟಣಗಳ ಆಸ್ಪತ್ರೆಗೆ ಹೋಗಲು ದೀರ್ಘ ಸಾರಿಗೆ ಸಮಯ ಮತ್ತು ಕಳಪೆ ಗುಣಮಟ್ಟದ ಆರೈಕೆಯು ರಾಜ್ಯದಲ್ಲಿ ತಾಯಂದಿರ ಮರಣಕ್ಕೆ ಕಾರಣವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಕಳೆದ 35 ವರ್ಷಗಳಿಂದ ಉತ್ತರ ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿ ತರಬೇತಿ ಪಡೆದ ಮಾನವ ಸಂಪನ್ಮೂಲಗಳು ಮತ್ತು ಸಾಕಷ್ಟು ವೈದ್ಯಕೀಯ ಉಪಕರಣಗಳು, ವಿಶೇಷವಾಗಿ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಇಲ್ಲ. ಸೂಕ್ತ ವೈದ್ಯರ ಅಲಭ್ಯತೆ, ಆಂಬ್ಯುಲೆನ್ಸುಗಳ ಮೂಲಕ ರೆಫರಲ್ ಆಸ್ಪತ್ರೆಗಳಿಗೆ ಸರಿಯಾಗಿ ಸಂಪರ್ಕ ಇಲ್ಲದಿರುವಿಕೆ, ರಕ್ತದ ಅಸಮರ್ಪಕ ಲಭ್ಯತೆ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಸುಧಾರಿಸಲು ಹಣದ ಕಳಪೆ ಹಂಚಿಕೆ ಕೂಡ ಪರಿಸ್ಥಿತಿಯನ್ನು ಹದಗೆಡಿಸಿದೆ.
ಸಾಮಾನ್ಯವಾಗಿ ತಾಲ್ಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಬರುವ ಮಹಿಳೆಯರು ಆರ್ಥಿಕವಾಗಿ ಹಿಂದುಳಿದ ಹಳ್ಳಿಗಾಡಿನ ಜನರು ಎಂಬುದು ಸಾಮಾನ್ಯ ಸಂಗತಿ. ಅವರ ಆರೋಗ್ಯ ರಕ್ಷಣೆಗೆಂದೇ ಸರ್ಕಾರ ಆಸ್ಪತ್ರೆಗಳನ್ನು ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾಕೇಂದ್ರಗಳಲ್ಲಿ ನಿರ್ಮಿಸಿದೆ. ಹಲವಾರು ಆರೋಗ್ಯ ಸೇವೆಗಳನ್ನು ಬಡಜನರಿಗೆಂದೇ ನೀಡಿದೆ. ಆದರೆ ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯದ ಬಗ್ಗೆ ವೈದ್ಯರ ಚಿಕಿತ್ಸೆಯ ಜೊತೆಗೆ ಅವರ ಮನೆಯವರೂ ಹೆಚ್ಚಿನ ಕಾಳಜಿ ವಹಿಸಬೇಕಾದ ತುರ್ತು ಇಂದು ಇದೆ. ಗರ್ಭಾವಸ್ಥೆಯ ಆರಂಭದ ದಿನಗಳಿಂದಲೂ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡರೆ ಮುಂದೆ ಗಂಭೀರ ಪರಿಸ್ಥಿತಿ ಉಂಟಾಗುವುದನ್ನು ತಪ್ಪಿಸಬಹುದು.

ಬಾಣಂತಿಯರ ಆಹಾರ ವಿಷಯದಲ್ಲಿ ಅತಿಯಾದ ಕಟ್ಟುನಿಟ್ಟು ಬೇಡ. ಹೆರಿಗೆಯಾದ ಮೊದಲೆರಡು ದಿನ ಬಾಣಂತಿಯರಿಗೆ ಮೃದುವಾಗಿ ಬೇಯಿಸಿದ ಅನ್ನ, ಸಾರು, ಇಡ್ಲಿ ಮತ್ತು ಸ್ವಲ್ಪ ಬೇಯಿಸಿದ ತರಕಾರಿ ಕೊಡಬೇಕು. ದಿನಕ್ಕೆರಡು ಬಾರಿ ಹಾಲು ಕೊಡಬೇಕು. ಕುಡಿಯಲು ಕುದಿಸಿ ಆರಿಸಿದ ನೀರನ್ನು ಕೊಡಬೇಕು. ಕೆಲವರು ನೀರು ಕೊಡುವುದೇ ಇಲ್ಲ. ಕೊಟ್ಟರೂ ಅತ್ಯಲ್ಪ ಪ್ರಮಾಣದಲ್ಲಿ ಕೊಡುತ್ತಾರೆ. ನೀರು ಕೊಡದಿದ್ದಲ್ಲಿ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಹಾಲು ಕೂಡ ಕಡಿಮೆಯಾಗುತ್ತದೆ. ಸಾಕಷ್ಟು ನೀರು ಕುಡಿಯದಿದ್ದರೆ ಮಲಬದ್ಧತೆಯುಂಟಾಗಿ ಮುಂದುವರಿದು ಮೂಲವ್ಯಾಧಿಯೂ ಕಾಣಿಸಿಕೊಳ್ಳಬಹುದು. ಬಾಣಂತಿಯರು ಸಾಕಷ್ಟು ನೀರು ಕುಡಿದರೆ ಆಹಾರ ಜೀರ್ಣಶಕ್ತಿಯೂ ಹೆಚ್ಚಾಗುತ್ತದೆ.
ಇದಲ್ಲದೇ ಕೆಲವು ಜನರು ಬಾಣಂತಿಯರಿಗೆ ಎಲ್ಲಾ ತರಕಾರಿ ಮತ್ತು ಹಣ್ಣುಗಳನ್ನು ಕೊಡುವುದಿಲ್ಲ. ಈ ಸಮಯದಲ್ಲಿ ಬಾಣಂತಿಯರಿಗೆ ಪೋಷಣೆಯ ಅವಶ್ಯಕತೆ ಹೆಚ್ಚಾಗಿರುತ್ತದೆ. ಆದ್ದರಿಂದ ಅವರಿಗೆ ತಾಜಾ ಹಸಿರು ತರಕಾರಿಗಳು, ಸೊಪ್ಪು ಮತ್ತು ಹಣ್ಣುಗಳನ್ನು ನೀಡಬೇಕು. ಮೊಟ್ಟೆ, ಚಿಕನ್ ಎಲ್ಲವನ್ನೂ ಕೊಡಬಹುದು. ಕೇವಲ ಗಂಜಿ ಮತ್ತು ತಿಳಿಸಾರು ಅನ್ನ ಕೊಟ್ಟರೇ ಸಾಲದು. ಇದರಿಂದ ಅಪೌಷ್ಟಿಕತೆ ಮತ್ತು ರಕ್ತಹೀನತೆ ಉಂಟಾಗಬಹುದು.
ಕೆಲವು ಹಳ್ಳಿಗಳಲ್ಲಿ ಶೌಚಾಲಯವೇ ಇರುವುದಿಲ್ಲ. ಮನೆಯಲ್ಲಿ ಬೆಳಗ್ಗೆ ಬೇಗನೇ ಎದ್ದು ನೈಸರ್ಗಿಕ ಕರೆಯನ್ನು ದೂರ ಹೋಗಿ ಪೂರೈಸಬೇಕಾಗುತ್ತದೆ. ಜೊತೆಗೆ ಅವರ ಜೊತೆಗೊಬ್ಬರು ಹೋಗಬೇಕಾಗುತ್ತದೆ. ಇದು ಬಾಣಂತಿಯರಿಗೆ ಮಾನಸಿಕವಾಗಿ ಕಿರಿಕಿರಿಯಾಗುತ್ತದೆ. ಹೀಗಾಗದಂತೆ ನೋಡಿಕೊಳ್ಳಬೇಕು ಮತ್ತು ಶೌಚಾಲಯ ಮನೆಗೊಂದು ಇರಲೇಬೇಕು. ಕೆಲವರಿಗೆ ಈ ಸಮಯದಲ್ಲಿ ಮನಸ್ಸಿನ ಸ್ಥಿತಿ ಸೂಕ್ಷö್ಮವಾಗಿರಬಹುದು. ಬಾಣಂತಿ ಸನ್ನಿಯೂ ಕಾಣಿಸಿಕೊಳ್ಳಬಹುದು. ಆದ್ದರಿಂದ ಅವರ ಆರೋಗ್ಯ ಮತ್ತು ಆರೈಕೆ ಚೆನ್ನಾಗಿರಲು ಮನೆಯವರು ಕಾಳಜಿ ವಹಿಸಬೇಕು.

ಪೌಷ್ಟಿಕ ಮತ್ತು ಸಮತೋಲನ ಆಹಾರ
• ಮೊದಲಿಗೆ ಬಾಣಂತಿಯರಿಗೆ ಪೌಷ್ಟಿಕ ಮತ್ತು ಸಮತೋಲನ ಆಹಾರ ಅವಶ್ಯಕ. ಅವರು ದಿನವೂ ಪ್ರತಿ ಸಲ ಬಿಸಿ ಬಿಸಿ ಆಹಾರ ಸೇವಿಸಬೇಕು.
• ದಂಟು, ಹರಿವೆ, ಪಾಲಕ್, ಹೊನಗೊನೆ, ಸಬ್ಬಸಿಗೆ, ಅಗಸೆ ಸೇರಿದಂತೆ ಎಲ್ಲ ಬಗೆಯ ಸೊಪ್ಪುಗಳನ್ನು ಸೇವಿಸಬೇಕು.
• ಗೋಧಿ, ಅಕ್ಕಿ, ಬೆಳ್ಳುಳ್ಳಿ, ಈರುಳ್ಳಿ ಸೇವಿಸಬೇಕು.
• ಪಪ್ಪಾಯ, ಟೊಮೆಟೊ, ನೆಲ್ಲಿಕಾಯಿ, ಕ್ಯಾರೆಟ್ ಮುಂತಾದವು ಅವರ ಆಹಾರದಲ್ಲಿ ಇರಬೇಕು.
• ಹೆಸರುಬೇಳೆ ಪಾಯಸ, ಹಾಲಿನಿಂದ ತಯಾರಿಸಿದ ಖೀರು ಉತ್ತಮ.
• ಎದೆಹಾಲಿನ ಪ್ರಮಾಣ ಕಡಿಮೆಯಾಗಿದ್ದಲ್ಲಿ ತಾಜಾ ದಂಟಿನ ಸೊಪ್ಪಿನ ರಸವನ್ನು ಜೇನುತುಪ್ಪ ಮತ್ತು ಏಲಕ್ಕಿ ಪುಡಿಯೊಂದಿಗೆ ಬೆರೆಸಿ ಕುಡಿಯಬೇಕು. ನುಗ್ಗೆಸೊಪ್ಪನ್ನು ಬೇಯಿಸಿ ರಸ ತೆಗೆದು ಕುಡಿಯಬೇಕು. ಹೊನಗೊನೆ ಸೊಪ್ಪಿನ ಪಲ್ಯ ತಿನ್ನಬೇಕು.
• ಸಬ್ಬಸಿಗೆ ಸೊಪ್ಪನ್ನು ಹಬೆಯಲ್ಲಿ ಬೇಯಿಸಿ ಉಪ್ಪು ಮತ್ತು ಕಾಳುಮೆಣಸಿನ ಪುಡಿ ಬೆರೆಸಿ ಚಪಾತಿ ಸೇವಿಸಬೇಕು.
• ಕೆಸುವಿನ ಗಡ್ಡೆ ಬೇಯಿಸಿ ಅದರಿಂದ ತಯಾರಿಸಿದ ಪಲ್ಯ ಇಲ್ಲದೇ ಮೊಸರುಬಜ್ಜಿ ಸೇವಿಸಬೇಕು. ತೊಂಡೆಹಣ್ಣಿನ ಸೇವನೆಯೂ ಬಿಳಿಯ ಎಳನ್ನು ಹಾಲಿನಲ್ಲಿ ಅರೆದು ಕುಡಿಯಬೇಕು. ಎಳ್ಳಿನ ಪುಡಿಯಲ್ಲಿ ತುಪ್ಪ, ಹಾಲು, ಬೆಲ್ಲ. ಜೇನು ಬೆರೆಸಿ ಕುಡಿಯಬೇಕು.
• ಬಾಣಂತಿಯರಿಗೆ ಶಕ್ತಿ ಬರಲೆಂದೇ ಅಂಟಿನುಂಡೆ ಮಾಡಿಕೊಡುವ ಪದ್ಧತಿ ನಮ್ಮಲ್ಲಿದೆ. ಅಂಟಿನುAಡೆ ಮಾಡಲು ಬೇಕಾದ ಸಾಮಗ್ರಿಗಳು ಹೀಗಿವೆ: ಗಿಟುಕ ಕೊಬ್ಬರಿ 1/2 ಕೆಜಿ, ಉತ್ತುತ್ತಿ 50 ಗ್ರಾಂ, ಗಸಗಸೆ 100 ಗಾಂ, ಲವಂಗ 50 ಗ್ರಾಂ, ಅಂಟು 100 ಗ್ರಾಂ, ಬೆಲ್ಲ 1 ಕೆಜಿ ಬಾದಾಮಿ 100 ಗ್ರಾಂ ಮತ್ತು ತುಪ್ಪ 1/4 ಕೆ.ಜಿ, ಇದನ್ನು ಮಾಡುವ ವಿಧಾನ ಹೀಗಿದೆ: ಮೊದಲಿಗೆ ಕೊಬ್ಬರಿಯನ್ನು ತುರಿದಿಟ್ಟುಕೊಳ್ಳಬೇಕು. ಬಾದಾಮಿ, ಉತ್ತುತ್ತಿ, ಲವಂಗವನ್ನು ಸಣ್ಣ ತುಂಡುಗಳನ್ನಾಗಿಸಿಕೊಳ್ಳಬೇಕು.ಈ ಎಲ್ಲವುಗಳನ್ನು ತುಪ್ಪದಲ್ಲಿ ಕೆಂಪಗಾಗುವವರೆಗೆ ಹುರಿದುಕೊಳ್ಳಬೇಕು. ಗಸಗಸೆ ಅಂಟುವನ್ನು ಕೂಡ ಹುರಿದುಕೊಳ್ಳಬೇಕು. ನಂತರ ಬೆಲ್ಲವನ್ನು ಕರಗಿಸಿ ಅದರೊಂದಿಗೆ ಉಂಡೆ ತಯಾರಿಸಿಕೊಳ್ಳಬೇಕು.
ರಕ್ತಹೀನತೆಗೆ ಮದ್ದು
ಬಾಣಂತಿಯರಿಗೆ ದೇಹದಲ್ಲಿ ರಕ್ತದ ಕೊರತೆ ಕಾಣಿಸಿಕೊಂಡರೆ ಅದಕ್ಕೆ ರಕ್ತಹೀನತೆ ಎಂದು ಕರೆಯುತ್ತಾರೆ. ಪ್ರತಿಯೊಬ್ಬರ ದೇಹದಲ್ಲಿ ನಿಗದಿತ ಪ್ರಮಾಣದಲ್ಲಿ ರಕ್ತ ಮತ್ತು ಆ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಇರಬೇಕಾಗುತ್ತದೆ. ಹಿಮೋಗ್ಲೋಬಿನ್ ಪ್ರಮಾಣ ಮಹಿಳೆಯರಲ್ಲಿ 12 ಗ್ರಾಂಗಳಿಗಿಂತ ಕಡಿಮೆಯಾದರೆ ರಕ್ತಹೀನತೆ ಎನ್ನುತ್ತೇವೆ. ಆರು ತಿಂಗಳಿಂದ ಆರು ವರ್ಷದ ಮಕ್ಕಳಲ್ಲಿ 11 ಗ್ರಾಂಗಿಂತ ಕಡಿಮೆಯಾದರೆ ಮತ್ತು ಆರರಿಂದ ಹನ್ನೆರಡು ವರ್ಷದವರಲ್ಲಿ 12 ಗ್ರಾಂಗಿಂತ ಕಡಿಮೆಯಾದರೆ ರಕ್ತಹೀನತೆ ಎನ್ನುತ್ತೇವೆ. ಮುಟ್ಟು ಆರಂಭವಾದಾಗಿನಿಂದ ಮುಟ್ಟು ನಿಲ್ಲುವವರೆಗಿನ ಅವಧಿಯಲ್ಲಿ, ಗರ್ಭಿಣಿ, ಬಾಣಂತಿಯರಲ್ಲಿ ಹಿಮೋಗ್ಲೋಬಿನ್ ಅಂಶ 12 ಗ್ರಾಂಗಿಂತ ಕಡಿಮೆಯಾದಲ್ಲಿ ರಕ್ತಹೀನತೆ ಎಂದು ತಿಳಿಯಬೇಕು.
ಹಿಮೋಗ್ಲೋಬಿನ್ ಉತ್ಪತ್ತಿಯಾಗಲು ಕಬ್ಬಿಣ ಅತ್ಯಂತ ಅವಶ್ಯಕ. ಬಹುತೇಕೆ ಸಂದರ್ಭಗಳಲ್ಲಿ ಆಹಾರದ ಅಭಾವದಿಂದ ಕಬ್ಬಿಣದ ಕೊರತೆಯುಂಟಾಗುತ್ತದೆ. ಕರುಳಿನಲ್ಲಿ ಕೊಕ್ಕೆಹಾಳು ಇದ್ದಲ್ಲಿ ಅ ದಿನಕ್ಕೆ 0.2 ಮಿಲಿ ಗ್ರಾಂ ರಕ್ತವನ್ನು ಸೇವಿಸಿ ರಕ್ತಹೀನತೆ ತರುತ್ತದೆ. ಇದನ್ನು ಬಹಳಷ್ಟು ಜನರು ಅಲಕ್ಷ ಮಾಡುತ್ತಾರೆ. ಗ್ರಾಮಾತಂರ ಪ್ರದೇಶದಲ್ಲಿ ಸ್ವಚ್ಛತೆಯ ಅಭಾವದಿಂದ ಕೊಕ್ಕೆಹುಳು ದೇಹವನ್ನು ಅನಾಯಾಸವಾಗಿ ಸೇರುತ್ತದೆ. ರಕ್ತಹೀನತೆಗೆ ಇತರೆ ಕಾರಣಗಳೆಂದರೆ ಮಲದಲ್ಲಿ ರಕ್ತ ಹೋಗುವ ಮೂಲವ್ಯಾಧಿ, ಮೂಗಿನಿಂದಾಗುವ ರಕ್ತಸ್ರಾವ, ತಿಂಗಳ ಮುಟ್ಟಿನಲ್ಲಿ ಹೋಗುವ ಅಧಿಕ ರಕ್ತಸ್ರಾವ ಮುಂತಾದ ಕಾರಣದಿಂದ ರಕ್ತಹೀನತೆ ಉಂಟಾಗುತ್ತದೆ. ಹೆರಿಗೆಯ ಸಮಯದಲ್ಲಿ ಆಗುವ ರಕ್ತಸ್ತಾವ ಮತ್ತು ಗರ್ಭಪಾತದಿಂದ ಆಗುವ ರಕ್ತಸ್ರಾವದಿಂದ ರಕ್ತಹೀನತೆ ಉಂಟಾಗುತ್ತದೆ. ಹೆಣ್ಣುಮಗಳು ಮೇಲಿಂದ ಮೇಲೆ ಗರ್ಭ ಧರಿಸುವುದರಿಂದ ರಕ್ತಹೀನತೆ ಹೆಚ್ಚುತ್ತದೆ ಅವರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಪ್ರತಿ ನೂರು ಮಹಿಳೆಯರಲ್ಲಿ 42 ಜನರು ರಕ್ತಹೀನತೆಯಿಂದ ಬಳಲುತ್ತಿರುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ. 67 ರಷ್ಟು ಮಹಿಳೆಯರು ರಕ್ತ ತೆಯಿಂದ ಬಳಲುತ್ತಿದ್ದು ಶೇ. 17ರಷ್ಟು ಮಹಿಳೆಯರು ಅತಿರಕ್ತಹೀನತೆಯಿಂದ ಬಳಲುತ್ತಿದ್ದಾರೆ. ರಕ್ತಹೀನತೆಗೆ ಮತ್ತೊಂದು ಪ್ರಮುಖ ಕಾರಣವೆಂದರೆ ಸಣ್ಣ ಕರುಳಿನಲ್ಲಿ ಬಿ12 ಮತ್ತು ಪೋಲಿಕ್ ಆಮ್ಲ ಹೀರಲ್ಪಡದಿರುವುದು.
ರಕ್ತಹೀನತೆಯಿದ್ದಾಗ ಆಯಾಸ, ಕೆಲಸ ಮಾಡುವಾಗ ಬೇಗ ಸುಸ್ತು, ಸ್ವಲ್ಪ ದೂರ ನಡೆದರೂ ಉಸಿರಾಡಲು ಕಷ್ಟ, ಎದೆ ಬಡಿತ ಕೇಳುವುದು, ಕೈ ಬೆರಳುಗಳು ಜುಮ್ಮೆನ್ನುವುದು, ಉಗುರುಗಳು ಬಿಳಿಚಿಕೊಳ್ಳುವುದು ಮತ್ತು ನುಣುಪಾಗಿ ಚಮಚದಂತೆ ಹಳ್ಳ ಬೀಳುವುದು, ಕಣ್ಣು, ನಾಲಿಗೆ, ಚರ್ಮ ಬಿಳಿಚಿಕೊಳ್ಳುವುದು, ಹಸಿವೆಯಿಲ್ಲದಿರುವುದು ಮತ್ತು ಬೆಳಗ್ಗೆ ಎದ್ದಾಗ ಮುಖ ಊದಿಕೊಳ್ಳುವುದು ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಆಹಾರದಲ್ಲಿ ಸೊಪ್ಪುಗಳನ್ನು ಹೆಚ್ಚು ಬಳಸಬೇಕು. ಎಲ್ಲ ಸೊಪ್ಪುಗಳಲ್ಲಿ ಕಬ್ಬಿಣದಂಶ ಇರುತ್ತದೆ. ಪಾಲಕ್, ಮೆಂತ್ಯ, ಹರಿವೆ, ದಂಟು, ಕೊತ್ತಂಬರಿ, ಕರಿಬೇವು ಎಲ್ಲದರಲ್ಲಿಯೂ ಕಬ್ಬಿಣದಾಂಶ ಇರುತ್ತದೆ. ಚಕ್ರಮುನಿ ಸೊಪ್ಪಿನಲ್ಲಿ ಅತಿಹೆಚ್ಚು ಕಬ್ಬಿಣದಂಶ ಇರುತ್ತದೆ.
ಪರಿಹಾರವೇನು?
• ಸಜ್ಜೆಯಲ್ಲಿ 14.3 ಮಿ.ಗ್ರಾಂ/100ಗ್ರಾಂ ಇರುತ್ತದೆ ಸಜ್ಜೆ ಹಿಟ್ಟನ್ನು ಹುರಿದು ಬೆಲ್ಲದ ಪಾಕ ಬೆರೆಸಿ ತುಪ್ಪದೊಂದಿಗೆ ಸೇರಿಸಿ ಉಂಡೆ ತಯಾರಿಸಬೇಕು. ಗೋಧಿಯಲ್ಲಿ 11.5 ಮಿ.ಗ್ರಾಂ ಕಬ್ಬಿಣದಾಂಶ ಇರುತ್ತದೆ ಗೋಧಿಯ ಹಿಟ್ಟು ಹುರಿದು ಬೆಲ್ಲ, ತುಪ್ಪ ಬೆರೆಸಿ ಉಂಡೆ ತಯಾರಿಸಿ ತಿನ್ನಬಹುದು.
• ಆಡುಸೋಗೆ ಎಲೆಯ ರಸಕ್ಕೆ ಜೇನುತುಪ್ಪ ಬೆರೆಸಿ ಕುಡಿಯಬೇಕು.
• ಚಕ್ರಮುನಿಸೊಪ್ಪಿನಲ್ಲಿ 23 ಮಿ.ಗ್ರಾಂ ಕಬ್ಬಿಣದಂಶ ಇರುತ್ತದೆ.
• ಚಕ್ರಮುನಿ ಸೊಪ್ಪಿನಿಂದ ಪಲ್ಯ, ಸಾರು ತಯಾರಿಸಬಹುದು. ಇಡ್ಲಿ, ದೋಸೆ, ರೊಟ್ಟಿ ಹಿಟ್ಟಿನೊಂದಿಗೆ ಚಕ್ರಮುನಿ ಸೊಪ್ಪನ್ನು ಬೆರೆಸಬೇಕು. ಚಿಟ್ನಿ, ತಂಬುಳಿ, ವಡೆಯನ್ನು ತಯಾರಿಸಬಹುದು.
• ನುಗ್ಗೆಸೊಪ್ಪಿನಲ್ಲಿ ಹೆಚ್ಚು ಕಬ್ಬಿಣದಂಶ ಇರುತ್ತದೆ. ಎಳೆಯ ಎಲೆ ಮತ್ತು ಹೂವಿಗೆ ಉಪ್ಪು ಬೆರೆಸಿ ಬೇಯಿಸಿ ಸೂಪ್ ತಯಾರಿಸಿ ಕುಡಿಯಬೇಕು.
• ಬಸಳೆಯಲ್ಲಿ 10 ಮಿಗ್ರಾಂ ಕಬ್ಬಿಣದಾಂಶ ಇರುತ್ತದೆ. ಬಸಳೆಯಿಂದ ದೋಸೆ, ದಂಟಿನ ಸಾಂಬರ್. ಕೂಟು, ಉದುರು ಉಪ್ಪಿಟ್ಟು, ಬೇಳೆಕಾಳಿನ ಪಲ್ಯ ತಯಾರಿಸಬೇಕು. ಇಡ್ಲಿ, ದೋಸೆ ಹಿಟ್ಟಿಗೆ ಉದ್ದಿನಬೇಳೆ ಬದಲು ಬಸಳೆ ಸೊಪ್ಪು ಬೆರೆಸಿ ರುಬ್ಬಿಕೊಳ್ಳಬೇಕು.
• ಒಂದು ಚಮಚ ಹಿಪ್ಪಲಿ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಬೇಕು.
• ಕಪ್ಪು ಎಳ್ಳಿನಲ್ಲಿ 10.3 ಮಿ.ಗ್ರಾಂ ಕಬ್ಬಿಣದಂಶವಿರುತ್ತದೆ. ಕರಿಎಳ್ಳನ್ನು ನೀರಿನಲ್ಲಿ ನವಿನೆಯಿಸಿ ಅರದು ಬೆಲ್ಲದೊಂದಿಗೆ ಬೆರೆಸಿ ಉಂಡೆ ತಯಾರಿಸಬೇಕು. ಬೆಲ್ಲದಲ್ಲಿ ಕ್ಯಾಲ್ಲಿಯಂ(ಸುಣ್ಣದಂಶ) ಇರುತ್ತದೆ. ಅದಕ್ಕೆ ಒಂದು ಲೋಟ ಹಾಲು, ಬೆಲ್ಲ ಸೇರಿಸಿ ಕುಡಿಯಬೇಕು. ಎಳ್ಳನ್ನು ಹುರಿದು ಉಂಡೆ ಮಾಡಿ ಬೆಲ್ಲದೊಂದಿಗೆ ಬೆರೆಸಿ ಉಂಡೆ ತಯಾರಿಸಬೇಕು. ಬೆಲ್ಲದಲ್ಲಿ ಕ್ಯಾಲ್ಸಿಯಂ (ಸುಣ್ಣದಂಶ) ಇರುತ್ತದೆ. ತರಕಾರಿಗಳಲ್ಲಿ ಬೀಟ್ರೂಟ್, ಕ್ಯಾರೆಟ್, ಬದನೆಕಾಯಿ, ನುಗ್ಗೆಕಾಯಿ, ಗೋರಿಕಾಯಿ, ಈರುಳ್ಳಿ, ಮೂಲಂಗಿಗಳಲ್ಲಿ ಕಬ್ಬಿಣದಂಶ ಅಧಿಕವಾಗಿರುತ್ತದೆ.

• ಹಣ್ಣುಗಳಲ್ಲಿ, ಬಾಳೆಹಣ್ಣು, ಅಂಜೂರ, ಸೇಬು, ಸೀಬೆ, ಪಪ್ಪಾಯ, ಮಾವಿನಹಣ್ಣು- ಎಲ್ಲವುಗಳಲ್ಲಿಯೂ ಕಬ್ಬಿಣಾಂಶಗಳು ಇರುತ್ತವೆ. ಆದರೆ ಕಲ್ಲಂಗಡಿಯಲ್ಲಿ ಅಧಿಕ ಕಬ್ಬಿಣ ಅಂಶವಿರುತ್ತದೆ.
• ಖರ್ಜೂರ, ಒಣದ್ರಾಕ್ಷಿ, ಬಾದಾಮಿ, ಅಂಜೂರಗಳಂತಹ ಒಣ ಹಣ್ಣುಗಳಲ್ಲಿ ಕಬ್ಬಿಣಾಂಶ ಅಧಿಕವಾಗಿರುತ್ತದೆ. ಆದ್ದರಿಂದ ಒಣಹಣ್ಣುಗಳಿಂದ ತಯಾರಿಸಿದ ಅಂಟಿನ ಉಂಡೆಯನ್ನು ಋತುಮತಿಯರಿಗೆ ಮತ್ತು ಬಾಣಂತಿಯರಿಗೆ ಕೊಡುವುದು ರೂಢಿಯಲ್ಲಿದೆ.
• ನೆಲ್ಲಿಕಾಯಿಯ ರಸ ಅಥವಾ ಪುಡಿಯಲ್ಲಿ ಜೇನುತುಪ್ಪ ಬೆರೆಸಿ ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ಸೇವಿಸಬೇಕು.
• ಒಂದು ಲೋಟ ಕಬ್ಬಿನ ರಸದಲ್ಲಿ ಹುರಿದ ಗೋದಿಹಿಟ್ಟನ್ನು ಬೆರೆಸಿ ಕುಡಿಯಬೇಕು.
• ಕೆಂಪು ಉತ್ರಾಣಿ ಸೊಪ್ಪಿನ ರಸ ಮತ್ತು ಹಳೆಯ ಬೆಲ್ಲ ಎರಡನ್ನೂ ಸೇರಿಸಿ ಕುಡಿಯಬೇಕು.
• ಜೀವಸತ್ವ ಬಿ12 ಕೊರತೆಯ ರಕ್ತಹೀನತೆಯಿದ್ದಲ್ಲಿ ಹಾಲು ಕುಡಿಯಬೇಕು.
• ಫೋಲಿಕ್ ಆಸಿಡ್ ಕೊರೆತೆಯಿದ್ದಲ್ಲಿ ಮೊಳಕೆಕಾಳುಗಳು, ಕಿತ್ತಳೆ ಹಣ್ಣು ಸೇವಿಸಬೇಕು.
• ಜೀವಸತ್ವ ಸಿ ಕಬ್ಬಿಣಾಂಶದ ಹೀರುವಿಕೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಜೀವಸತ್ವ ಸಿ ಹೊಂದಿರುವ ಮೊಳಕೆ ಕಾಳುಗಳು, ಕಿತ್ತಳೆ, ಬೋಸಂಬಿ, ನಿಂಬೆ ಹಣ್ಣನ್ನು ಹೆಚ್ಚು ಸೇವಿಸಬೇಕು.
• ಜಂತುಹುಳು ಬಾಧೆ ತಡೆಗಟ್ಟಲು ಚಪ್ಪಲಿ ಧರಿಸಿ ಓಡಾಡಬೇಕು. ಎಷ್ಟೋ ಹಳ್ಳಿಗಳಲ್ಲಿ ಮಲವಿಸರ್ಜನೆಗೆ ಬಯಲು ಪ್ರದೇಶಕ್ಕೆ, ಶೌಚಾಲಯಕ್ಕೆ ಬರಿಗಾಲಲ್ಲಿ ಓಡಾಡುವುದಿದೆ, ಅದನ್ನು ತಪ್ಪಿಸಬೇಕು.
• ರಕ್ತ ಹೀನತೆ ತಡೆಯಲು ಜೇನುತುಪ್ಪ ಅತ್ಯಂತ ಉತ್ಕೃಷ್ಟ ಔಷಧ ಮತ್ತು ಆಹಾರ, ಜೇನುತುಪ್ಪದಲ್ಲಿ ಕಬ್ಬಿಣಾಂಶ, ಮೆಗ್ನಿಷಿಯಂ, ಸುಣ್ಣದ ಅಂಶ, ಮ್ಯಾಂಗನೀಸ್, ತಾಮ್ರ, ಸಾವಯವ ಆಮ್ಲಗಳಾದ ಫಾರ್ಮಿಕ್, ಅಸಿಟಿಕ್, ಮ್ಯಾಲಿಕ್, ಅಮೈನೋ ಆಮ್ಲ, ಸೆಕ್ಸನಿಕ್ ಆಮ್ಲ, ಪ್ರೊಟೀನ್, ಜೀವಸತ್ವ ಬಿ, ಬಿ2, ಬಿ6, ಬಿ12, ಸಿ ಮತ್ತು ಕೆ ಇರುತ್ತದೆ.

• ಜೇನು ನೈಸರ್ಗಿಕ ಮೂಲದ ಆಹಾರವಾಗಿದೆ. ಸಕ್ಕರೆಯ ಅಂಶಗಳ ಜೊತೆಗೆ ಶರ್ಕರ ವಸ್ತುಗಳನ್ನು ಅಧಿಕ ಜೇನು ನೈ¸ರ್ಗಿಕ ಮೂಲದ ಆಹಾರವಾಗಿದೆ. ಸಕ್ಕರೆಯ ಅಂಶಗಳ ಜೊತೆಗೆ ಶರ್ಕರ ವಸ್ತುಗಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿದೆ. ಹಾಲಿನಲ್ಲಿ, ನೀರಿನಲ್ಲಿ ಜೇನು ಬೆರೆಸಿ ಕುಡಿಯಬಹುದು . ಅಲ್ಲದೇ, ಕಾಫಿ, ಟೀಗೂ ಬೆರೆಸಿ ಕುಡಿಯಬಹುದು. ಚಪಾತಿ, ರೊಟ್ಟಿಯ ಜೊತೆಗೂ ತಿನ್ನಬಹುದು. ಬ್ರೆಡ್ ಬಿಸ್ಕತ್ತುಗಳ ಜೊತೆ ತಿನ್ನಬಹುದು. ಪರಿಶುದ್ಧ ಜೇನುತುಪ್ಪ ಅಮೃತ ಸಮಾನ.
ಹೆರಿಗೆ ನಂತರದ ಖಿನ್ನತೆ
ಸಾಮಾನ್ಯವಾಗಿ ಹೆರಿಗೆ ಆದ ನಂತರ ಕೆಲವು ತಾಯಂದಿರು ಕೆಲಬಗೆಯ ನೇತ್ಯಾತ್ಮಕ ಭಾವನೆಗಳನ್ನು ಅನುಭವಿಸುತ್ತಾರೆ. ಇದೇ ಹೆರಿಗೆ ನಂತರದ ಖಿನ್ನತೆ. ಅದರಲ್ಲೂ ಮೊದಲನೇ ಹೆರಿಗೆಯ ನಂತರಇAತಹ ಖಿನ್ನತೆ ಕಾಡುತ್ತದೆ.ಕೆಲವು ಸ್ತ್ರೀಯರು ಅತೃಪ್ತಿ ಹಾಗೂ ಬೇಸರದ ಭಾವಗಳನ್ನು ತೋರ್ಪಡಿಸುತ್ತಾರೆ.ಈ ಖಿನ್ನತೆ ದೀರ್ಘಕಾಲದವರೆಗೆ ಇರುವುದಿಲ್ಲ. ಹೆಚ್ಚೆಂದರೆ ಒಂದು ತಿಂಗಳ ಒಳಗಾಗಿ ಬಾಣಂತಿಯರೂ ಯಥಾಸ್ಥಿತಿಗೆ ಮರಳುತ್ತಾರೆ. ಆತ್ಮಹತ್ಯೆಯಂತಹ ಗಂಭೀರ ಕ್ರಮಗಳನ್ನು ಕೈಗೊಳ್ಳಲು ಬೇರೆ ಬೇರೆ ಸಮಸ್ಯೆಗಳು ಕಾರಣವಾಗಬಹುದು. ಅದರತ್ತಲೂ ಕುಟುಂಬಸ್ಥರು ಗಮನಹರಿಸಬೇಕು.
ಇದನ್ನೂ ಓದಿ ಬಸುರಿ-ಬಾಣಂತಿಯರ ತೀರದ ಬವಣೆ
ಮಗುವಿಗೆ ಜನ್ಮ ನೀಡಿದ ಬಳಿಕ ತೀವ್ರ ಸ್ವರೂಪದ ಶಾರೀರಿಕ ಹಾಗೂ ಮಾನಸಿಕ ಬದಲಾವಣೆಗಳು ತಾಯಿಯಲ್ಲಿ ಕಾಣಿಸಿಕೊಳ್ಳುತ್ತವೆ. ಆಗ ಇಂತಹ ಬದಲಾವಣೆಗಳು, ಭಾವನೆಗಳು ಮತ್ತು ಸವಾಲುಗಳು ಸಹಜ. ನಿದ್ರಾಹೀನತೆ, ಕಾರಣವಿಲ್ಲದೇ ಆಗಾಗ್ಗೆ ಅಳುವುದು, ಖಿನ್ನ ಮನಸ್ಥಿತಿ, ನಿತ್ರಾಣ, ಉದ್ವೇಗ, ಆಹಾರ ಸೇವನಾ ಕ್ರಮದಲ್ಲಿ ಬದಲಾವಣೆ ಇವೇ ಮೊದಲಾದವು ಹೆರಿಗೆ ನಂತರದ ಖಿನ್ನತೆಯ ಕೆಲವು ಲಕ್ಷಣಗಳಾಗಿವೆ. ಇವು ಬಹುಕಾಲ ಇರುವುದಿಲ್ಲ. ಕೆಲವರು ಬೇಗನೇ ಇಂತಹ ಲಕ್ಷಣಗಳಿಂದ ಹೊರಬರುತ್ತಾರೆ. ಇನ್ನೂ ಕೆಲವರಿಗೆ ಇವುಗಳಿಂದ ಹೊರಬರಲು ಸ್ವಲ್ಪ ಸಮಯ ಹಿಡಿಯುತ್ತದೆ.

ಡಾ ವಸುಂಧರಾ ಭೂಪತಿ
ವೈದ್ಯೆ, ಹಿರಿಯ ಲೇಖಕಿ