ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್-ವೇ ಸಂಚಾರ ಮುಕ್ತವಾದಾಗಿನಿಂದ ಉಪಯುಕ್ತಕ್ಕಿಂತ ಸಮಸ್ಯೆಗಳ ಕಾರಣಕ್ಕೆ ಹೆಚ್ಚು ಸುದ್ದಿಯಲ್ಲಿದೆ. ಟೀಕೆ, ವ್ಯಂಗ್ಯ, ಟ್ರೋಲ್‌ಗಳಿಗೆ ತುತ್ತಾಗಿದೆ. ಇದೀಗ, ಎಕ್ಸ್‌ಪ್ರೆಸ್-ವೇ ವಿಚಾರ ಮತ್ತೆ ಸುದ್ದಿಯಲ್ಲಿದೆ. ಈ ರಸ್ತೆಯಲ್ಲಿ ಟೋಲ್ ಸಂಗ್ರಹ ಆರಂಭವಾದಾಗಿನಿಂದ ಈವರೆಗೆ (ಕಳೆದ 20 ತಿಂಗಳು) ಬರೋಬ್ಬರಿ 438 ಕೋಟಿ ರೂ. ಟೋಲ್ ವಸೂಲಿ ಮಾಡಲಾಗಿದೆ. ಈ ದುಬಾರಿ ಟೋಲ್ ಸಂಗ್ರಹದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಬೆಂಗಳೂರು ಮತ್ತು ಮೈಸೂರು ನಡುವಿನ 118 ಕಿ.ಮೀ ಉದ್ದದ ಎಕ್ಸ್‌ಪ್ರೆಸ್-ವೇಯನ್ನು ಕಾಮಗಾರಿ ಪೂರ್ಣಗೊಳ್ಳದಿದ್ದರೂ 2023ರ ಮಾರ್ಚ್‌ನಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಕಾಮಗಾರಿ ಅಪೂರ್ಣವಾಗಿದ್ದಾಗಲೇ 2023ರ ಏಪ್ರಿಲ್ 1ರಿಂದ ರಸ್ತೆಯಲ್ಲಿ ಟೋಲ್ ಸಂಗ್ರಹ ಆರಂಭಿಸಲಾಗಿತ್ತು. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮಾಹಿತಿ ಪ್ರಕಾರ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್-ವೇ ನಿರ್ಮಾಣಕ್ಕೆ ಭೂಸ್ವಾಧೀನದ ಖರ್ಚು ಹೊರತುಪಡಿಸಿ 4,473 ಕೋಟಿ ರೂ. ಖರ್ಚು ಮಾಡಲಾಗಿದೆ. ಈ ಮೊತ್ತದ 10% ಹಣವನ್ನು (438 ಕೋಟಿ ರೂ.) ಕಳೆದ ಇಪ್ಪತ್ತೇ ತಿಂಗಳಲ್ಲಿ ಟೋಲ್ ಮೂಲಕ ವಸೂಲಿ ಮಾಡಲಾಗಿದೆ ಎಂಬುದು ಈಗ ಗಮನ ಸೆಳೆಯುತ್ತಿದೆ.
ಚಳಿಗಾಲದ ಸಂಸತ್ ಅಧಿವೇಶನದಲ್ಲಿ ದೇಶದ ಹೆದ್ದಾರಿಗಳಲ್ಲಿ ಸಂಗ್ರಹವಾದ ಟೋಲ್ ಹಣದ ಬಗ್ಗೆ ಸಂಸದ ಅಸಾದುದ್ದೀನ್ ಒವೈಸಿ ಪ್ರಶ್ನೆ ಎತ್ತಿದ್ದರು. ಅವರ ಪ್ರಶ್ನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಉತ್ತರಿಸಿದ್ದಾರೆ. ಅವರ ಉತ್ತರದಲ್ಲಿ ಹೇಳಿರುವಂತೆ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್-ವೇನಲ್ಲಿ 438 ಕೋಟಿ ರೂ. ಟೋಲ್ ಸಂಗ್ರಹವಾಗಿದೆ.
ಎಕ್ಸ್‌ಪ್ರೆಸ್-ವೇನಲ್ಲಿ ಮೂರು ಟೋಲ್‌ಗಳಿವೆ. ಬೆಂಗಳೂರು ದಕ್ಷಿಣ ತಾಲೂಕಿನ ಕಣಿಮಿಣಿಕೆ, ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಹಾಗೂ ಶ್ರೀರಂಗಪಟ್ಟಣದ ಗಣಂಗೂರಿನಲ್ಲಿ ಟೋಲ್ ಕೇಂದ್ರಗಳಿವೆ. ಈ ಪೈಕಿ, ಕಣಮಿಣಿಕೆ ಮತ್ತು ಶೇಷಗಿರಿಹಳ್ಳಿ ಟೋಲ್‌ಗಳಲ್ಲಿ ಒಟ್ಟು 278.91 ಕೋಟಿ ರೂ. ಟೋಲ್ ಸಂಗ್ರಹವಾಗಿದ್ದರೆ, ಗಣಂಗೂರು ಟೋಲ್‌ಗಳಲ್ಲಿ 159.37 ಕೋಟಿ ರೂ. ವಸೂಲಿ ಮಾಡಲಾಗಿದೆ.
ಸಂಗ್ರಹವಾದ ಒಟ್ಟು 438 ಕೋಟಿ ರೂ. ಟೋಲ್ ಪೈಕಿ 2023-24ನೇ ಆರ್ಥಿಕ ವರ್ಷದಲ್ಲಿ 270.96 ಕೋಟಿ ರೂ. ಮತ್ತು 2024-25ನೇ ಆರ್ಥಿಕ ವರ್ಷದಲ್ಲಿ ಈವರೆಗೆ (ಏಪ್ರಿಲ್-ನವೆಂಬರ್) 167.32 ಕೋಟಿ ರೂ. ಟೋಲ್ ವಸೂಲಿ ಮಾಡಲಾಗಿದೆ. ಪ್ರಸ್ತುತ ಆರ್ಥಿಕ ವರ್ಷ ಪೂರ್ಣಗೊಳ್ಳಲು ಇನ್ನೂ 4 ತಿಂಗಳುಗಳಿದ್ದು, ಆ ವೇಳೆಗೆ, ಇನ್ನೂ 80ರಿಂದ 90 ಕೋಟಿ ರೂ. ಸುಂಕ ವಸೂಲಾಗುವ ಸಾಧ್ಯತೆಗಳಿವೆ.
ಗಮನಾರ್ಹ ವಿಚಾರವೆಂದರೆ, ಇದೇ ಕಳೆದ 20 ತಿಂಗಳಲ್ಲಿ ಎಕ್ಸ್‌ಪ್ರೆಸ್-ವೇನಲ್ಲಿ ಮೂರು ಬಾರಿ ಟೋಲ್ ಶುಲ್ಕ ಪರಿಷ್ಕರಣೆ ಮಾಡಲಾಗಿದೆ. 2023ರ ಏಪ್ರಿಲ್‌ನಲ್ಲಿ ಟೋಲ್ ವಸೂಲಿ ಆರಂಭವಾಗಿತ್ತು. ಅದಾದ, ಒಂದೇ ತಿಂಗಳಲ್ಲಿ ಜುಲೈ 1ರಂದು ಶುಲ್ಕ ಪರಿಷ್ಕರಣೆ ಮಾಡಿ, 22% ಟೋಲ್ ದರ ಹೆಚ್ಚಿಸಲಾಗಿತ್ತು. ಆ ಬಳಿಕ, 2024ರ ಮಾರ್ಚ್‌ನಲ್ಲಿ ಮತ್ತೆ 3% ಹೆಚ್ಚಿಸಲಾಗಿತ್ತು. ಪದೇ-ಪದೇ ಟೋಲ್ ದರ ಹೆಚ್ಚುತ್ತಿರುವ ಬಗ್ಗೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.
ದುಬಾರಿ ಟೋಲ್ ಸಂಗ್ರಹದಿಂದ ಕಾರು ಚಾಲಕರು ಪ್ರತಿ ಕಿ.ಮೀ.ಗೆ 2.7 ರೂ. ಸುಂಕ ಕಟ್ಟುತ್ತಿದ್ದರೆ, ವಾಣಿಜ್ಯ ವಾಹನಗಳು 10 ರೂ. ಸುಂಕ ಪಾವತಿಸುತ್ತಿವೆ. ಇನ್ನು, ಭಾರೀ ಗಾತ್ರದ ವಾಹನಗಳು ಪ್ರತಿ ಕಿ.ಮೀ.ಗೆ 18 ರೂ. ಸುಂಕ ಪಾವತಿಸುತ್ತಿವೆ. ಇಷ್ಟು ದುಬಾರಿ ಮೊತ್ತದ ಸುಂಕ ವಸೂಲಿಯಿಂದಾಗಿ ಇಪ್ಪತ್ತೇ ತಿಂಗಳಲ್ಲಿ 438 ಕೋಟಿ ರೂ. ಸುಂಕವನ್ನು ಹೆದ್ದಾರಿ ಪ್ರಾಧಿಕಾರ ವಸೂಲಿ ಮಾಡಿದೆ.
ಈ ವರದಿ ಓದಿದ್ದೀರಾ?: ಮೋದಾನಿ ಫೈಲ್ಸ್ | ಜಾರ್ಖಂಡ್‌ನ ಅದಾನಿ ವಿದ್ಯುತ್ ಸ್ಥಾವರದ ವಿಚಿತ್ರ ಕಥೆ ಇದು!
ಆದರೆ, ಇಷ್ಟು ದುಬಾರಿ ಶುಲ್ಕ ಪಾವತಿಸುತ್ತಿದ್ದರೂ, ವಾಹನ ಚಾಲನೆಗೆ ಹೆದ್ದಾರಿ ಸುರಕ್ಷಿತವಾಗಿಲ್ಲ. ಆರಂಭದಲ್ಲಿ ಹೇಳಿದ್ದಂತೆ 90 ನಿಮಿಷಗಳಲ್ಲಿ ಉಭಯ ನಗರಗಳನ್ನು (ಬೆಂಗಳೂರು/ಮೈಸೂರು) ತಲುಪಲು ಸಾಧ್ಯವಾಗುತ್ತಿಲ್ಲ. ಮಳೆ ಬಂದಾಗ, ಬಿಡದಿ ಸಮೀಪದಲ್ಲಿ ಎಕ್ಸ್‌ಪ್ರೆಸ್-ವೇ ಸಂಪೂರ್ಣ ಜಲಾವೃತವಾಗುತ್ತದೆ. ಕಳೆದ ವರ್ಷ ಮಳೆಗಾಲದಲ್ಲಿ ರಸ್ತೆ ಜಲಾವೃತಗೊಂಡು ಹಲವಾರು ವಾಹನಗಳು ನೀರಿನಲ್ಲಿ ಮುಳುಗಿದ್ದವು.
ಅಲ್ಲದೆ, 2023ರ ಮಾರ್ಚ್‌ನಿಂದ ನವೆಂಬರ್‌ವರೆಗೆ 9 ತಿಂಗಳಲ್ಲಿ ಬರೋಬ್ಬರಿ 595 ಅಪಘಾತಗಳು ಸಂಭವಿಸಿ, 158 ಮಂದಿ ಜೀವ ಕಳೆದುಕೊಂಡಿದ್ದಾರೆ. ಅಲ್ಲದೆ, 2024ರ ಜನವರಿಯಿಂದ ಮೇ ನಡುವೆ 31 ಸಾವುಗಳು ಸಂಭವಿಸಿವೆ. ಅಪಘಾತದ ಕಾರಣದಿಂದಾಗಿ ಎಕ್ಸ್‌ಪ್ರೆಸ್-ವೇನಲ್ಲಿಯೂ ವಾಹನಗಳು ವೇಗವಾಗಿ ಚಲಿಸದಂತೆ ನಿರ್ಬಂಧ ಹೇರಲಾಗಿದೆ. ವೇಗದ ಮಿತಿಯನ್ನು 120 ಕಿ.ಮೀ.ಗೆ ಇಳಿಸಲಾಗಿದೆ.
ದುಬಾರಿ ಟೋಲ್ ಸಂಗ್ರಹದ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಮಂಡ್ಯ ನಿವಾಸಿ ಜಗದೀಶ್, “ಎಕ್ಸ್‌ಪ್ರೆಸ್-ವೇನಲ್ಲಿ ಪ್ರಯಾಣಿಕರು ಅಥವಾ ವಾಹನ ಸವಾರರಿಗೆ ಯಾವುದೇ ಸೌಲಭ್ಯಗಳಿಲ್ಲ. ವೇಗದ ಮಿತಿ ಕಡಿತ ಮಾಡಿದ್ದರೂ, ರಸ್ತೆಯಲ್ಲಿ ಸಂಚರಿಸುವಾಗ ಅಪಘಾತದ ಆತಂಕ ಇದ್ದೇ ಇರುತ್ತದೆ. ಈ ಹಿಂದೆ ಇದ್ದ ರಸ್ತೆಯಲ್ಲಿ ಸುಂಕ ಪಾವತಿಸದೇ ಈಗಿನ ಸಮಯಕ್ಕಿಂತ ಕೊಂಚ ಹೆಚ್ಚು ಸಮಯದಲ್ಲಿ ತಲುಪಬೇಕಾದ ಸ್ಥಳವನ್ನು ತಲುಪುತ್ತಿದ್ದೆವು. ರಸ್ತೆ ಸುರಕ್ಷತೆಯ ಬಗ್ಗೆಯೂ ಆತಂಕವಿರಲಿಲ್ಲ. ಈಗ ಹಣ ಕೊಟ್ಟು ಭಯದಲ್ಲಿ ಓಡಾಡಬೇಕಾದ ಪರಿಸ್ಥಿತಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.