“ಮೈಸೂರಿನಂತಹ ಮಹಾನಗರದಲ್ಲಿ ಮನೆಗಳಿಗೆ ಹಾವುಗಳು ವಿಪರೀತವಾಗಿ ನುಗ್ಗಿವೆ” ಎನ್ನುತ್ತಾರೆ ಸ್ನೇಕ್ ಶ್ಯಾಮ್
ಬಿರು ಬಿರುಬಿಸಿಲಿಗೆ ಮಾನವಕುಲವಷ್ಟೇ ಅಲ್ಲ; ಇಡೀ ವನ್ಯಜೀವಿ ಸಂಕುಲವೂ ತತ್ತರವಾಗಿದ್ದು, ಕಾಡು ಬಿಟ್ಟು ನಾಡಿಗೆ ಧಾವಿಸುತ್ತಿವೆ. ಕಾಡ್ಗಿಚ್ಚಿನ ಪರಿಣಾಮ ಹಾವುಗಳು ಊರುಗಳಿಗೆ ನುಗ್ಗುತ್ತಿವೆ. ಮೈಸೂರು, ಮಂಡ್ಯ, ಚಾಮರಾಜನಗರ- ಹೀಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಾವಿನ ಹಾವಳಿ ಹೆಚ್ಚುತ್ತಿರುವ ವರದಿಗಳು ಬರುತ್ತಿವೆ.
ತಾಪಮಾನಕ್ಕೆ ಮಾನವಕುಲ ಮಾತ್ರವಲ್ಲ ಜೀವರಾಶಿಗಳೂ ನಲುಗುತ್ತಿವೆ. ಜೀವರಾಶಿಗಳ ಆಹಾರಕ್ಕಾಗಿ ಹಲವಾರು ದೇಶಗಳು ಅನೇಕ ಕಾರ್ಯಕ್ರಮಗಳನ್ನೇ ಹಮ್ಮಿಕೊಂಡಿವೆ. ನೇರವಾಗಿ ಕಾಡಿನ ಮಧ್ಯಭಾಗಕ್ಕೆ ತೆರಳಿ ಟ್ಯಾಂಕರ್‌ಗಳ ಮೂಲಕ ನೀರುಣಿಸುವುದು, ಸಾಕು ಪ್ರಾಣಿಗಳ ಆಹಾರವನ್ನು ಖರೀದಿಸಿ ಕಾಡು ಪ್ರಾಣಿಗಳಿಗೂ ನೀಡಿ ಉಳಿಸಿಕೊಳ್ಳಲಾಗುತ್ತಿದೆ.
ಅತೀ ಮುಖ್ಯವಾದ ಸಂಗತಿ- ಉದುರಿರುವ ಎಲೆಗಳಿಗೆ ಉರಿ ಬಿಸಿಲು ತಾಕಿ ಆಗಬಹುದಾದ ಅಪಾಯಗಳನ್ನು ತಪ್ಪಿಸಲು ಕಾಡುಗಳನ್ನು ಕಣ್ಣಲ್ಲಿ ಕಣ್ಣಟ್ಟು ಕಾಯುತ್ತಿದ್ದಾರೆ. ಆಸ್ಟ್ರೇಲಿಯಾ, ಕಝಾಕಿಸ್ತಾನ್ ಮತ್ತು ಚೀನಾ ಸೇರಿದಂತೆ ಇನ್ನೂ ಅನೇಕ ದೇಶಗಳು ಅತ್ಯಂತ ಕಟ್ಟುನಿಟ್ಟಾದ ಪಾಲನೆಯಲ್ಲಿ ತೊಡಗಿವೆ.
ಅಪ್ಪಿತಪ್ಪಿಯೂ ಕಾಡುಗಳಿಗೆ ಬೆಂಕಿ ಬಿದ್ದರೆ ಇಡೀ ಜೀವ ಕುಲವೇ ನಾಶವಾಗುವ ಅಥವಾ ಜನ ವಾಸಿಸುವ ಕಡೆಗೆ ವನ್ಯಜೀವಿಗಳು ನುಗ್ಗಿಬರುವ ಸಾಧ್ಯತೆಗಳನ್ನು ಮೊದಲೇ ಅರಿತು ಈ ಸತ್ಕಾರ್ಯಗಳಲ್ಲಿ ಅನೇಕ ದೇಶಗಳು ತೊಡಗಿಕೊಂಡಿವೆ.
ಭಾರತದಲ್ಲಿ ಮಾತ್ರ ಯಾವುದೇ ಚಕಾರವೆತ್ತದ ಸರ್ಕಾರಗಳು ಮೌನದಿಂದಿವೆ. ಅಲ್ಲಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಂಡಿರುವ ಪ್ರಕಾರ, ಅನಕ್ಷರಸ್ಥ ರೈತರು ಊರಿನ ಜಾನುವಾರುಗಳಿಗೆ ಮತ್ತು ಪ್ರಾಣಿ ಪಕ್ಷಿಗಳಿಗಾಗಿ ತನ್ನ ಸ್ವಂತ ಪಂಪ್ ಸೆಟ್ ಬೋರ್‌ವೆಲ್‌ಗಳಿಂದ ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ರಿಂಗ್ ಗುಂಡಿಗಳಿಗೆ ನೀರು ತುಂಬಿಸಿ ಮಾನವೀಯತೆ ಮೆರೆದಿದ್ದಾರೆ.
ಆದರೆ ಕಳೆದ ಐದಾರು ತಿಂಗಳಿನಿಂದ ಇದೇ ರೈತರು ಹಾವು ಕಡಿತದಿಂದ ಸಾಯುತ್ತಿದ್ದಾರೆ. ಹೌದು, ಮೇಲುಕೋಟೆಯ ಗುಡ್ಡಗಾಡು ಪ್ರದೇಶಗಳು ಮತ್ತು ಮೈಸೂರಿನ ಚಾಮುಂಡಿ ಬೆಟ್ಟದ ಸುತ್ತಲಿನ ಪ್ರದೇಶ, ಮಂಡ್ಯದ ಬ್ಯಾಡರಹಳ್ಳಿ ಹಳ್ಳ ಪ್ರದೇಶಗಳಲ್ಲಿ ಬೆಂಕಿ ಬಿದ್ದ ಪರಿಣಾಮದಿಂದಾಗಿ, ಗಿಡಘಂಟಿಗಳಲ್ಲಿ ತೆರಗೆಲೆಗಳ ಪದರಗಳಲ್ಲಿ ವಾಸಮಾಡುತ್ತಿದ್ದ ವಿಷಕಾರಿ ಹಾವುಗಳು ಊರುಗಳನ್ನು ಪ್ರವೇಶ ಮಾಡಿವೆ. ಇದರಿಂದಾಗಿ ಹಾವುಗಳಿಂದ ಕಚ್ಚಿಸಿಕೊಳ್ಳುತ್ತಿರುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ.
ಕೆಲವು ಕಿಡಿಕೇಡಿಗಳು ಕಾಡಿಗೆ ಬೆಂಕಿ ಹಚ್ಚುವ ಪರಿಣಾಮ ಹಳ್ಳಿಗಳ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆಶ್ರಯಕ್ಕೆ ಬಂದ ಹಾವುಗಳೂ ಕೊನೆಗೆ ಇದೇ ಜನರಿಂದ ಸಾಯುತ್ತವೆ.
ಕಳೆದ ನಲವತ್ತು ವರ್ಷಗಳಿಂದ ಹಾವುಗಳನ್ನು ಸಂರಕ್ಷಿಸುತ್ತಿರುವ ಮೈಸೂರಿನ ಸ್ನೇಕ್ ಶ್ಯಾಮ್ ಮತ್ತು ಅವರ ಮಗ ಸೂರ್ಯಕೀರ್ತಿ ಪ್ರತಿಕ್ರಿಯಿಸಿದ್ದು, “ಮೈಸೂರಿನಂತಹ ಮಹಾನಗರದಲ್ಲಿ ಮನೆಗಳಿಗೆ ಹಾವುಗಳು ವಿಪರೀತವಾಗಿ ನುಗ್ಗಿವೆ. ದಿನಕ್ಕೆ ಹತ್ತಾರು ಹಾವುಗಳನ್ನು ಹಿಡಿದು ಸಂರಕ್ಷಿಸಲಾಗುತ್ತಿದೆ. ಇನ್ನು ಹಲವು ಕಡೆ ಜನರು ಕಚ್ಚಿಸಿಕೊಂಡು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ, ಹಾಗಾಗಿ ಸೂಕ್ಷತೆಯಿಂದಬೇಕು” ಎಂದಿದ್ದಾರೆ.
ನಾಗರಹಾವು, ಕೊಳಕುಮಂಡಲ, ಕಟ್ಟುಹಾವು, ಗರಗಸ ಮಂಡಲ ಸೇರಿದಂತೆ ಇನ್ನೂ ಅನೇಕ ಹಾವುಗಳು ರಾತ್ರಿ ಸಂಚಾರ ಮಾಡುತ್ತವೆ. ಇವುಗಳು ಈಗಾಗಲೇ ನಾಡು ಪ್ರವೇಶ ಮಾಡಿದ್ದರಿಂದ ಮನೆಯ ಅಕ್ಕ ಪಕ್ಕ ಓಡಾಡುವ ಇಲಿಗಳು, ಕಪ್ಪೆಗಳನ್ನು ಹಿಡಿಯಲು ಚರಂಡಿ ಪ್ರವೇಶಿಸಿ ಅಲ್ಲಿನ ಪೈಪುಗಳ ಮೂಲಕ ಮನೆಯನ್ನೂ ಪ್ರವೇಶ ಮಾಡುವ ಸಂಗತಿಗಳು ಅತಿಯಾಗಿ ಕಂಡುಬರುತ್ತಿವೆ.
ಮನೆಯ ಅಕ್ಕಪಕ್ಕದಲ್ಲಿ ನಿರುಪಯುಕ್ತ ವಸ್ತುಗಳನ್ನು ಇಟ್ಟಿರುವ ಕಡೆ, ಚಪ್ಪಲಿ- ಶೂ ಗಳನ್ನು ಬಿಡುವ ಕಡೆ, ಹೂವಿನ ಪಾಟ್‌ಗಳಲ್ಲಿ ತಂಗಿರುವ ಸಾಧ್ಯತೆಗಳು ಅತಿ ಹೆಚ್ಚು. ಹಾಗಾಗಿ ಯಾವುದೇ ವಸ್ತುವನ್ನು ಮುಟ್ಟುವಾಗ ಅತೀ ಸೂಕ್ಷ್ಮತೆ ವಹಿಸುವುದು ಮುಖ್ಯ.
ಒಂದು ವೇಳೆ ಹಾವುಗಳು ಕಚ್ಚಿದರೆ ಅತಿಯಾಗಿ ಓಡಾಡುವುದು ಅಥವಾ ಮತ್ತೊಬ್ಬರು ಹೇಳುವ ಯಾವುದೇ ಪ್ರಥಮ ಚಿಕಿತ್ಸೆಗೆ ಒಳಗಾಗುವುದನ್ನು ನಿಲ್ಲಿಸಬೇಕು. ಬದಲಿಗೆ ಅತ್ಯಂತ ವೇಗವಾಗಿ ಆಸ್ಪತ್ರೆ ಸೇರಬೇಕು. ದೂರವಿದ್ದು ಹಾವಿನ ಒಂದು ಫೋಟೊ ತೆಗೆದುಕೊಂಡರೆ ಕಚ್ಚಿದ ವ್ಯಕ್ತಿಗೆ ಚಿಕಿತ್ಸೆ ಕೊಡಲು ವೈದ್ಯರಿಗೆ ಅನುಕೂಲವಾಗಬಹುದು.
ಯಾವುದೇ ಹಾವುಗಳು ಕಚ್ಚುವ ಮುನ್ನ ಬುಸುಗುಟ್ಟುವ ಮೂಲಕ ಎಚ್ಚರಿಸುತ್ತವೆ. ಅದನ್ನು ಮೀರಿ ಮತ್ತೆ ಮತ್ತೆ ಪ್ರಯತ್ನಿಸಿದಾಗ ಕಚ್ಚುವುದು ಖಚಿತ. ಅವುಗಳ ಸಿಗ್ನಲ್‌ಗಳನ್ನು ಗಮನಿಸಿ ದೂರವುಳಿದು ಒಂದು ಉದ್ದನೆಯ ಕಡ್ಡಿಯ ಮೂಲಕ ಹಾವನ್ನು ಪತ್ತೆಹಚ್ಚಿ ಎಲ್ಲಿಯೂ ಹೋಗದಂತೆ ತಡೆಯಬೇಕು. ಸಂರಕ್ಷಣೆ ಮಾಡುವವರನ್ನು ಸಂಪರ್ಕಿಸಿ ಅವರಿಗೆ ಒಪ್ಪಿಸಬೇಕು.
ಹಾವುಗಳು ನಮ್ಮಷ್ಟೇ ಹೆದರುತ್ತವೆ. ಅವಕ್ಕೂ ಭಯವಿದೆ, ಜೊತೆಗೆ ಬದುಕುವ ಹಕ್ಕಿದೆ ಎನ್ನುವುದನ್ನು ಮರೆಯದಿರೋಣ. ನಿವಾಸದ ಅಕ್ಕ ಪಕ್ಕ ಹಾವುಗಳು ಕಂಡರೆ ಅವುಗಳನ್ನು ಕೊಲ್ಲಬೇಡಿ, ಕಾಲ್ ಮಾಡಿ. ಸಂರಕ್ಷಕರಿಗೆ ಎಲ್ಲಾ ರೀತಿಯ ಸಹಾಯಮಾಡಿ. ಸೂರ್ಯಕೀರ್ತಿ: 96861 50150 – 70220 42028
(ಹಾವಿನ ಚಿತ್ರ: ಸಾಂದರ್ಭಿಕ)
