ಭಾಗವತ್ ಗೀತೋಪದೇಶ; ಮೋದಿ ಯುಗಾಂತ್ಯದ ಮುನ್ಸೂಚನೆಯೇ?!

Date:

Advertisements

ಭಾಗವತ್‌ ಅವರ ಈ ಗೀತೋಪದೇಶ ಮುಂದಿನ ಮಹತ್ವದ ಬದಲಾವಣೆಯ ಸೂಚನೆಯಂತಿದೆ. ಅದು ಮೋದಿ ಯುಗಾಂತ್ಯವೂ ಇರಬಹುದು. ಜನಪ್ರಿಯತೆಯ ಉತ್ತುಂಗದಲ್ಲಿರುವ (?) ಮೋದಿ ಮುಂದಿನ ದಿನಗಳಲ್ಲಿ ಪಕ್ಷ-ಪರಿವಾರಕ್ಕಿಂತ ದೊಡ್ಡವರೇ ಅಥವಾ ಪರಿವಾರ ಮತ್ತು ಪಕ್ಷವೇ ದೊಡ್ಡದೇ ಎಂಬುದನ್ನು ಕಾದುನೋಡಬೇಕು

 

ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ ಎಸ್)ದ ನಡುವಿನ ಕರುಳ ಸಂಬಂಧ ಹಳಸಿದೆ. ಎಲ್ಲವೂ ಸರಿಯಿಲ್ಲ ಎಂಬ ಚರ್ಚೆ ಮುನ್ನಲೆಗೆ ಬರುತ್ತಿದೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲೇ ಬಿಜೆಪಿ ಬಹುಮತ ಗಳಿಸಿದರೂ ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗುವುದು ಕಷ್ಟಕರ. ಅವರ ಬದಲಿಗೆ ನಿತಿನ್‌ ಗಡ್ಕರಿ, ರಾಜನಾಥ ಸಿಂಗ್, ಯೋಗಿ ಆದಿತ್ಯನಾಥ್ ಅವರುಗಳಲ್ಲಿ ಒಬ್ಬರನ್ನು ಸಂಘಪರಿವಾರ ಪ್ರಧಾನಿ ಹುದ್ದೆಗೆ ಪ್ರತಿಷ್ಠಾಪಿಸಲಿದೆ ಎಂಬ ಮಾತುಗಳು ಬಿಜೆಪಿಯ ಪಡಸಾಲೆಯಿಂದಲೇ ಕೇಳಿಬರುತ್ತಿದ್ದವು.

ಬಿಜೆಪಿ ನಿಚ್ಚಳ ಬಹುಮತ ಪಡೆಯದೆ ಎನ್‌ಡಿಎ ಒಕ್ಕೂಟದ ಪಕ್ಷಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿಯ ಲಾಭ ಮೋದಿ ಅವರ ಪಾಲಾಯಿತು ಎನ್ನುತ್ತಿರುವಾಗಲೇ ಆರ್‌ಎಸ್‌ಎಸ್‌ನ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯ ಇಂದ್ರೇಶ್‌ಕುಮಾರ್ ಬಿಜೆಪಿಗೆ 240 ಸ್ಥಾನಗಳನ್ನು ಕೊಡುವ ಮೂಲಕ ಮತದಾರರು ’ಅಹಂಕಾರ’ಕ್ಕೆ ಕಡಿವಾಣ ಹಾಕಿದ್ದಾರೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದರು. ಇದು ’ಯಾರ’ ಅಹಂಕಾರವನ್ನು ಉದ್ದೇಶಿಸಿದ್ದು ಅನ್ನೋದನ್ನು ಹೇಳಬೇಕಾಗಿಲ್ಲ. ಇಂದ್ರೇಶ್‌ಕುಮಾರ್ ಅವರ ಈ ಹೇಳಿಕೆ ಮೋದಿ ಅವರನ್ನೇ ಕುರಿತದ್ದಾಗಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನ ಕೂಡ ಉಳಿದಿರಲಿಲ್ಲ.

Advertisements
Indresh kumar RSS
ಆರ್‌ಎಸ್‌ಎಸ್‌ ನ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯ ಇಂದ್ರೇಶ್‌ ಕುಮಾರ್‌

ಇದೀಗ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು “ಸ್ವಯಂ ಅಭಿವೃದ್ಧಿಯ ಹಾದಿಯಲ್ಲಿ ಒಬ್ಬ ವ್ಯಕ್ತಿಯು ಸೂಪರ್‌ಮ್ಯಾನ್ ಆಗಲು ಬಯಸಬಹುದು. ನಂತರ ’ದೇವತೆ’ ಮತ್ತು ’ಭಗವಾನ್’ ಮತ್ತು ’ವಿಶ್ವರೂಪ’ ಆಗಲು ಹಾತೊರೆಯಬಹುದು. ಆದರೆ, ಮುಂದೆ ಏನಾಗುತ್ತದೆ ಅರಿವು ಇರುವುದಿಲ್ಲ. ಹೀಗಾಗಿ ಮಹತ್ವಾಕಾಂಕ್ಷೆಗೆ ಅಂತ್ಯವಿಲ್ಲದ ಕಾರಣ ಜನರು ಮನುಕುಲದ ಕಲ್ಯಾಣಕ್ಕಾಗಿ ಪಟ್ಟು ಬಿಡದೆ ಶ್ರಮಿಸಬೇಕು” ಎಂದು ಪ್ರತಿಪಾದಿಸಿದ್ದಾರೆ. ಸದ್ಯ ಭಾರತದಲ್ಲಿ ಈ ಮಾತುಗಳು ತಮ್ಮವರೇ ಆದ ಮೋದಿ ಅವರಿಗಲ್ಲದೆ ಇನ್ನಾರಿಗೂ ಅನ್ವಯಿಸಲಾಗದಷ್ಟು ನಿಚ್ಚಳ ಸಂದರ್ಭವೊಂದು ನೆಲೆಗೊಂಡಿರುವುದನ್ನು ಕಾಣಬಹುದು.

ಆರ್‌ಎಸ್‌ಎಸ್ ಬಿಜೆಪಿಯ ರಾಜಕೀಯ ನಿರ್ಧಾರಗಳಲ್ಲಿ ನೇರವಾಗಿ ಭಾಗವಹಿಸುವುದಿಲ್ಲ ಎಂದು ಹೇಳಿಕೊಂಡರೂ ಬಿಜೆಪಿಯ ‘ಆತ್ಮ’ ಆರ್‌ಎಸ್‌ಎಸ್‌ನೊಳಗಿದೆ ಎನ್ನುವುದನ್ನು ನಿರಾಕರಿಸಲು ಸಾಧ್ಯವೇ ಇಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಬಿಜೆಪಿ ಆರ್‌ಎಸ್‌ಎಸ್ ನ ರಾಜಕೀಯ ಘಟಕ. ಪಕ್ಷದ ಸಿದ್ದಾಂತ ಮತ್ತು ರಾಜಕೀಯ ನಿರ್ಧಾರಗಳು ಈ ’ಆತ್ಮʼದಿಂದಲೇ ನಿರ್ದೇಶಿಸಲ್ಪಡುತ್ತವೆ. ಅದೇ ಕಾಲಕ್ಕೆ ಪರಿವಾರವನ್ನು ಮತ್ತು ಪಕ್ಷವನ್ನು ಮೀರಿ ಯಾರೊಬ್ಬರೂ ನಡೆಯುವುದನ್ನು ಸಂಘವು ಎಂದಿಗೂ ಸಹಿಸುವುದಿಲ್ಲ ಎನ್ನುವುದಕ್ಕೆ ಅನೇಕ ಉದಾಹರಣೆಗಳು ಸಿಗುತ್ತವೆ.

modi advani bjp list 0 e1721633101771

ವಾಜಪೇಯಿ ನಂತರದಲ್ಲಿ ಪ್ರಧಾನಿಯಾಗುವ ಹೊಸ್ತಿಲಿನಲ್ಲಿದ್ದ ಉಗ್ರ ಹಿಂದುತ್ವ ಪ್ರತಿಪಾದಕರಾಗಿದ್ದ ಎಲ್ ಕೆ ಅಡ್ವಾಣಿ ಪಾಕಿಸ್ತಾನದ ನೆಲದಲ್ಲಿ ನಿಂತು “ಪಾಕಿಸ್ತಾನದ ಪಿತಾಮಹ ಮೊಹಮ್ಮದ್ ಅಲಿ ಜಿನ್ನಾ ಓರ್ವ ಸೆಕ್ಯೂಲರ್, ಹಿಂದೂ -ಮುಸ್ಲಿಂ ಬಾಂಧವ್ಯದ ರಾಯಭಾರಿ” ಎಂದು ಬಹಿರಂಗವಾಗಿ ಕೊಂಡಾಡಿದ್ದು ದೊಡ್ಡ ನಷ್ಟವನ್ನೇ ತಂದು ಕೊಟ್ಟಿತು. ಅದೆಷ್ಟರ ಮಟ್ಟಿಗೆ ಎಂದರೆ ಅಡ್ವಾಣಿ ಅವರ ಪರಮ ಶಿಷ್ಯನೇ ಆಗಿದ್ದ ಮೋದಿಯನ್ನೇ ಪ್ರಧಾನಿ ಪಟ್ಟಕ್ಕೆ ಕೂರಿಸುವ ಮೂಲಕ ಅಡ್ವಾಣಿಯನ್ನು ಮಾರ್ಗದರ್ಶಕ ಮಂಡಳಿ ಎಂಬ ವೃದ್ಧಾಶ್ರಮಕ್ಕೆ ನೂಕಲಾಯಿತು. ಅಡ್ವಾಣಿ ಆಡಿದ ಒಂದೇ ಒಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಹೇಳಿಕೆ ಅವರ ಅರ್ಧ ಶತಮಾನದ ರಾಜಕೀಯ ಬದುಕು, ಹೋರಾಟ, ಬಿಜೆಪಿಯನ್ನು ಕಟ್ಟಲು ಪಟ್ಟ ಶ್ರಮ ಎಲ್ಲವನ್ನೂ ನುಚ್ಚು ನೂರು ಮಾಡಿಬಿಟ್ಟಿತು. ಪರಿವಾರದ ಸೈದ್ಧಾಂತಿಕ ನಿಲುವಿಗೆ ವಿರುದ್ದವಾದ ಮಾತು ಆಡಿದ ದೊಡ್ಡ ನಾಯಕ ಅಡ್ವಾಣಿ ಅವರನ್ನೇ ಪರಿವಾರ ಮೂಲೆಗೆ ತಳ್ಳಿಬಿಟ್ಟಿತು. ಇದೇ ಪರಿಸ್ಥಿತಿ ಹಿರಿಯ ನಾಯಕ ಜಸ್ವಂತ್‌ ಸಿಂಗ್ ಅವರಿಗೂ ಬಂದೊದಗಿತು. ಮುರಳಿ ಮನೋಹರ ಜೋಷಿ, ಯಶವಂತ ಸಿನ್ಹ, ಉಮಾಭಾರತಿ, ಕಲ್ಯಾಣಸಿಂಗ್, ವಸುಂಧರ ರಾಜೆ… ಇವರೆಲ್ಲಾ ನೇಪಥ್ಯಕ್ಕೆ ಸರಿದು ಹೋದದ್ದು ಬಿಜೆಪಿ ಪಕ್ಷದ ರಾಜಕೀಯ ನಿರ್ಧಾರದಿಂದಲ್ಲ. ಆರ್‌ಎಸ್‌ಎಸ್‌ನ ನಿರ್ಧಾರದಿಂದ.

ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶದೊಡ್ಡದು ಎಂಬ ಧ್ಯೇಯ ವಾಕ್ಯದ ಆಂತರ್ಯದಲ್ಲಿ ಇವೆರಡಕ್ಕಿಂತ ’ಪರಿವಾರ’ ದೊಡ್ಡದು ಎಂಬ ಕಠಿಣ ಸಂದೇಶಕ್ಕೆ ತನ್ನ ಸುಪರ್ದಿಯಲ್ಲಿರುವ ಎಲ್ಲರೂ ತಲೆಬಾಗಬೇಕು ಎಂದು ಸಂಘ ಎಲ್ಲಾ ಕಾಲಕ್ಕೂ ಬಯಸುತ್ತದೆ. ಅದಕ್ಕೆ ಎದುರಾಡುವವರನ್ನು ನಿರ್ದಾಕ್ಷಿಣ್ಯವಾಗಿ ತುಳಿದು ಮುಂದೆ ಹೋಗುತ್ತದೆ. ಹಾಗೆ ನೋಡಿದರೆ ಕರ್ನಾಟಕದಲ್ಲಿ ಬಿ ಎಸ್ ಯಡಿಯೂರಪ್ಪ ಅವರು ಸಂಘ ಪರಿವಾರಕ್ಕೆ ವಿರುದ್ದವಾಗಿ ಹೆಜ್ಜೆ ಹಾಕುವಲ್ಲಿ ಒಂದು ಹಂತದವರೆಗೂ ಯಶಸ್ವಿಯಾದರೂ ಅಂತಿಮವಾಗಿ ಪರಿವಾರದ ಮುಂದೆ ತಲೆಬಾಗಿಸಿ ಅಧಿಕಾರದಿಂದ ಇಳಿಯಲೇ ಬೇಕಾಯಿತು.

ಪರಿವಾರಕ್ಕಿಂತ ದೊಡ್ಡವರಾದರಾ ಮೋದಿ?!

ಆರು ವರ್ಷಗಳ ಹಿಂದೆಯೇ ಮೋದಿ ಆಡಳಿತವನ್ನೇ ಗುರಿಯಾಗಿಸಿಕೊಂಡು ಈ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದ ಅಡ್ವಾಣಿ ಅವರ ಮಾತನ್ನು ಕೇಳಿದರೂ ಕೇಳಿಸಿಕೊಳ್ಳದಂತಿದ್ದ ಆರ್‌ಎಸ್‌ಎಸ್ ನಾಯಕರು ಈಗ ಮೋದಿಯ ನಡೆಯನ್ನು ಅದೇ ಧಾಟಿಯಲ್ಲಿ ವಿಮರ್ಶಿಸತೊಡಗಿದ್ದಾರೆ. ಅದೂ ಮೋದಿ ’ದೇವತೆ’, ’ಭಗವಾನ್’, ’ವಿಶ್ವರೂಪಿ’ ಆಗಲು ಹೊರಟಿದ್ದಾರೆ ಎಂಬರ್ಥದಲ್ಲಿ ಮೋದಿಯ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸತೊಡಗಿದ್ದಾರೆ. ’ಪರಿವಾರದ ಸ್ವಯಂ ಸೇವಕ ಎಂದಿಗೂ ಅಹಂಕಾರಿ ಆಗಿರುವುದಿಲ್ಲ’ ಎಂದು ಮೋಹನ್‌ ಭಾಗವತ್ ಅವರು ಕೆಲವು ತಿಂಗಳ ಹಿಂದೆಯಷ್ಟೇ ಆಡಿದ ಮಾತು ಯಾರನ್ನು ಕುರಿತಾಗಿತ್ತು ಎನ್ನುವುದು ದೇಶಕ್ಕೆ ಅರ್ಥವಾಗಿತ್ತು.

ಈ ಮಟ್ಟಿಗೆ ಸಂಘದ ನಾಯಕರು ಅಸಮಾಧಾನಿತರಾಗಬೇಕಾದರೆ ನರೇಂದ್ರ ಮೋದಿ ಪರಿವಾರದ ನಿರ್ದೇಶನಗಳನ್ನು ಧಿಕ್ಕರಿಸಿದರೆ? ಬಿಜೆಪಿಗೆ ತಾವೊಬ್ಬರೇ ಅಧಿನಾಯಕ ಅಥವಾ ತನ್ನಿಂದಲೇ ಇಂದು ಬಿಜೆಪಿ ಅಧಿಕಾರ ಪಡೆಯುತ್ತಿದೆ ಎಂಬ ಅಹಂಕಾರದಲ್ಲಿ ಮುಳುಗಿದರೆ? ಅಥವಾ ಸಂಘದ ಸೈದ್ದಾಂತಿಕ ನಿಲುವುಗಳಿಗೆ ಪರ್ಯಾಯ ನಾಯಕರಾಗಿ ಹೊರಹೊಮ್ಮಲು ಹೊರಟಿದ್ದಾರಾ? ಬಿಜೆಪಿ ಮತ್ತದರ ಮಾತೃಸಂಸ್ಥೆ ಸಂಘ ಪರಿವಾರ ಧ್ಯೇಯಕ್ಕೆ ವಿರುದ್ದವಾಗಿ ಪಕ್ಷ-ಪರಿವಾರ-ದೇಶಕ್ಕಿಂತ ವ್ಯಕ್ತಿ ದೊಡ್ಡವನು ಎಂಬ ಅಪವ್ಯಾಖ್ಯಾನವನ್ನು ಮೋದಿ ಸಾಧಿಸ ಹೊರಟಿದ್ದಾರಾ? ಹಾಗೊಮ್ಮೆ ಇಂತಹ ಅನುಮಾನಗಳು ನಿಜವೇ ಆದರೆ ಸಾಮಾನ್ಯ ಪ್ರಚಾರಕರಾಗಿದ್ದ ಮೋದಿ ಅವರು ಇಂದು ಸೂಪರ್‌ಮ್ಯಾನ್, ದೇವರು, ವಿಶ್ವರೂಪ, ಭಗವಾನ್, ಕೊನೆಗೆ ಅಜೈವಿಕ ಜೀವಿ ಯಾಗುವತ್ತ ಸಾಗುವಲ್ಲಿ ಆರ್‌ಎಸ್‌ಎಸ್‌ನ ಕೊಡುಗೆ ಇಲ್ಲವೇ?

ಇದ್ದಾಗ್ಯೂ ಈಗ ಏಕೆ ಮೋದಿ ಭಿನ್ನವಾಗಿ ಕಾಣತೊಡಗಿದ್ದಾರೆ? ಪರಿವಾರದ ಮುಂಚೂಣಿಯ ಸಾಮಾನ್ಯ ಪ್ರಚಾರಕರಾಗಿದ್ದ ಮೋದಿ ಅವರನ್ನು ಗುಜರಾತ್ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಇದೇ ಸಂಘಪರಿವಾರವೇ ಹೊರತು ಸಂವಿಧಾನ ಪ್ರಕಾರ ಅಂದು ಗುಜರಾತಿನ ಬಿಜೆಪಿ ಶಾಸಕಾಂಗ ಸಭೆಯ ತೀರ್ಮಾನವಲ್ಲ ಎಂಬುದನ್ನು ಪರಿವಾರಿಗರು ಮರೆತು ಬಿಟ್ಟಿರಬೇಕು.

ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಆಡಳಿತದ 2002ರಲ್ಲಿ ನಡೆದ ಮತೀಯ ಹತ್ಯಾಕಾಂಡ ಎಂದಿಗೂ ಮರೆಯಲಾಗದ್ದು, ಈ ಸಂದರ್ಭದಲ್ಲಿ ಅವತ್ತಿನ ಪ್ರಧಾನಿ ವಾಜಪೇಯಿ ಮೋದಿಗೆ ’ರಾಜಧರ್ಮ’ ಪಾಲಿಸುವಂತೆ ತಾಕೀತು ಮಾಡಿದ್ದರು. ಒಂದು ಹಂತದಲ್ಲಿ ಮೋದಿ ರಾಜೀನಾಮೆ ಕೊಡಬೇಕೆಂಬ ವಾಜಪೇಯಿ ಅವರ ನಿಲುವಿಗೆ ಅಡ್ಡಲಾಗಿ ಬಂದವರು ಅಡ್ವಾಣಿ. ಮೋದಿಗೆ ಬೆಂಗಾವಲಾಗಿ ನಿಂತದ್ದು ಆರ್‌ಎಸ್‌ಎಸ್.  ಮೋದಿ ಆರ್‌ಎಸ್‌ಎಸ್‌ ಪಾಲಿಗೆ ತನ್ನ ಹಿಂದುತ್ವದ ಮತ್ತು ಅಖಂಡ ಹಿಂದೂಸ್ತಾನದ ಮರುನಿರ್ಮಾಣಕ್ಕೆ ಅವತರಿಸಿದ ಪ್ರವರ್ತಕನಂತೆ ಕಂಡಿರಬೇಕು. ಆದ್ದರಿಂದಲೇ ಮೋದಿಯನ್ನು ತಂದು ಪ್ರಧಾನಿ ಪಟ್ಟಕ್ಕೂ ಪ್ರತಿಷ್ಠಾಪಿಸಲಾಯಿತು. ಈಗ ಮೋದಿ ಪಕ್ಷವನ್ನು ಮೀರಿ ಬೆಳೆದು ನಿಂತಿದ್ದಾರೆ. ಸಿದ್ದಾಂತದ ಬದಲಿಗೆ ಮೋದಿಯೇ ವಿರಾಟ ನಾಯಕನಂತೆ ವ್ಯಕ್ತಿಗತವಾಗಿ ಇಂದು ಕಂಗೊಳಿಸುತ್ತಿದ್ದಾರೆ. ಇದು ಆರ್‌ಎಸ್‌ಎಸ್ ನಾಯಕರನ್ನು ಕಂಗೆಡಿಸಿರಬೇಕು.

ಮೋದಿ ಯುಗಾಂತ್ಯ?!

2019ರ ಲೋಕಸಭಾ ಚುನಾವಣೆಯಲ್ಲಿ 303 ಸ್ಥಾನಗಳ ವಿರಾಟ ವಿಜಯ ಸಾಧಿಸಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 2024 ರ ಚುನಾವಣೆಯಲ್ಲಿ ಬಹುಮತಕ್ಕೂ ನಿಲುಕದೇ ಕೇವಲ 240 ಸ್ಥಾನಗಳನ್ನು ಗಳಿಸಿ ಹಿನ್ನಡೆ ಸಾಧಿಸಿದ್ದು ಪರಿವಾರದ ಅಸಂತೋಷಕ್ಕೆ ಕಾರಣವಾಗಿರುವುದಂತು ನಿಜ.‌ ಈ ಬಾರಿ 400 ಸ್ಥಾನಗಳನ್ನು ಗಳಿಸಿ ಸಂವಿಧಾನವನ್ನೆ ಬದಲಾಯಿಸಬೇಕೆಂಬ ಪರಿವಾರದ ಪರಮೋಚ್ಛ ಗುರಿಗೆ ಚುನಾವಣೆ ಫಲಿತಾಂಶ ದೊಡ್ಡ ಪೆಟ್ಟು ಕೊಟ್ಟಿದೆ. ಇದನ್ನೇ ’ದೇಶದ ಜನ ಅಹಂಕಾರಕ್ಕೆ ಕಡಿವಾಣ ಹಾಕಿದ್ದಾರೆ’ ಎಂದು ಪರಿವಾರದ ನಾಯಕ ಇಂದ್ರೇಶ್ ಕುಮಾರ್ ವಿಶ್ಲೇಷಿಸಿರಬೇಕು. ನರೇಂದ್ರ ಮೋದಿ ಅವರ ಚರಿಷ್ಮಾ ಕಳೆಗುಂದಿರುವ ಸ್ಪಷ್ಟ ಸೂಚನೆ ಕೂಡ ಚುನಾವಣಾ ಫಲಿತಾಂಶವೂ ಆಗಿರುವಂತೆ ಪರ‍್ಯಾಯ ನಾಯಕನನ್ನು ಪ್ರತಿಷ್ಠಾಪಿಸಲು ಪರಿವಾರದ ಆರಂಭಿಕ ಮಾತುಗಳನ್ನು ಆಡಿದಂತಿದೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ‌ ತಾನೊಬ್ಬ ಹಿಂದುಳಿದ ವರ್ಗಕ್ಕೆ ಸೇರಿದವನು ಎಂದು ನನ್ನ ವಿರುದ್ಧ ದಾಳಿ ಮಾಡಲಾಗುತ್ತಿದೆ ಎಂದಾಡಿದ ಮಾತು ಅದು ಎದುರಾಳಿ ‘ಇಂಡಿಯಾ’ ಕೂಟಕ್ಕೆ ಎಸೆದ ಗೂಗ್ಲಿಯಷ್ಟೆ ಅಲ್ಲ, ಈ ಮಾತು ಪರಿವಾರವನ್ನು ತಾಗಿಕೊಂಡು ಹೋಗಿರಬಹುದೇನೊ!

“ನಾನು ಜೈವಿಕವಾಗಿ ಜನಿಸಿದಂತೆ ಭಾಸವಾಗುತ್ತಿಲ್ಲ. ನನ್ನನ್ನು ಭಗವಂಗತನೇ ಕಳಿಸಿದ್ದಾನೆ ಎಂಬಂತೆ ಭಾಸವಾಗುತ್ತಿದೆ” ಎಂಬ ಮೋದಿ ಅವರ ಹೇಳಿಕೆ ತಮ್ಮನ್ನು ಈ ಮಟ್ಟಿಗೆ ಬೆಳೆಸಿದ ಸಾಂಸ್ಥಿಕ ಪರಿವಾರವನ್ನು ಮರೆತು ಆಡಿದ ಉದ್ಧಟತನದ ಮಾತಿರಬೇಕು. ಅದಕ್ಕಾಗಿಯೇ ಆರ್‌ಎಸ್‌ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್‌ ಅವರು “ಸ್ವಯಂ ಅಭಿವೃದ್ದಿಯ ಹಾದಿಯಲ್ಲಿ ಒಬ್ಬ ವ್ಯಕ್ತಿಯು ಸೂಪರ್‌ಮ್ಯಾನ್ ಆಗಲು ಬಯಸಬಹುದು. ನಂತರ ’ದೇವತೆ’ ಮತ್ತು ’ಭಗವಾನ್’ ಮತ್ತು ’ವಿಶ್ವರೂಪ’ ಆಗಲು ಹಾತೊರೆಯಬಹುದು, ಆದರೆ, ಮುಂದೆ ಏನಾಗುತ್ತದೆ ಎಂಬ ಅರಿವು ಇರುವುದಿಲ್ಲ. ಹೀಗಾಗಿ ಮಹತ್ವಾಕಾಂಕ್ಷೆಗೆ ಅಂತ್ಯವಿಲ್ಲದ ಕಾರಣ ಜನರು ಮನುಕುಲದ ಕಲ್ಯಾಣಕ್ಕಾಗಿ ಪಟ್ಟು ಬಿಡದೆ ಶ್ರಮಿಸಬೇಕು” ಎಂದು ಹೇಳಿದ್ದು.

ಭಾಗವತ್‌ ಅವರ ಈ ಗೀತೋಪದೇಶ ಮುಂದಿನ ಮಹತ್ವದ ಬದಲಾವಣೆಯ ಸೂಚನೆಯಂತಿದೆ. ಅದು ಮೋದಿ ಯುಗಾಂತ್ಯವೂ ಇರಬಹುದು. ಜನಪ್ರಿಯತೆಯ ಉತ್ತುಂಗದಲ್ಲಿರುವ (?) ಮೋದಿ ಮುಂದಿನ ದಿನಗಳಲ್ಲಿ ಪಕ್ಷ-ಪರಿವಾರಕ್ಕಿಂತ ದೊಡ್ಡವರೇ ಅಥವಾ ಪರಿವಾರ ಮತ್ತು ಪಕ್ಷವೇ ದೊಡ್ಡದೇ ಎಂಬುದನ್ನು ಕಾದುನೋಡಬೇಕು. ಭೂತಗಳನ್ನು ಸಾಕಬಾರದು, ಅವುಗಳು ಒಂದಲ್ಲ ಒಂದು ದಿನ ಸಾಕಿದವರನ್ನೆ ತಿನ್ನುತ್ತವೆ.

ರವಿಕುಮಾರ್
ಎನ್‌ ರವಿಕುಮಾರ್
+ posts

ಪತ್ರಕರ್ತ, ಲೇಖಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಎನ್‌ ರವಿಕುಮಾರ್
ಎನ್‌ ರವಿಕುಮಾರ್
ಪತ್ರಕರ್ತ, ಲೇಖಕ

1 COMMENT

  1. ಪ್ರಸ್ತುತ ರಾಜಕೀಯ ಸಂದರ್ಭಗಳನ್ನು ಇಷ್ಟು ಖಡಕ್ ಆಗಿ ಮತ್ತು ಅತ್ಯಂತ ಸ್ಪಷ್ಟವಾಗಿ ಇನ್ಯಾರು ಬರೆಯಲಾರರು. ಅತ್ಯದ್ಭುತ ಚಿಂತನಾ ಬರಹ. ಭಕ್ತರು ದಗದಗ ಉರಿದಾರು. ಜನಸಾಮಾನ್ಯರು ನಿರುಮ್ಮಳವಾಗಿ ಬದುಕುವ ದಿನಗಳು ತುರ್ತಾಗಿ ಬರಲಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X