ಒಂದು ಹಂತದಲ್ಲಿ ಇದು ಸರ್ಕಾರದ ಮತೀಯ ಕಾರ್ಯಾಚರಣೆ ಎಂಬ ಕೂಗು ಜೋರಾಗಿ ಕೇಳಿಬಂದ ಹಿನ್ನೆಲೆಯಲ್ಲಿ ಕೆಲವು ಹಿಂದೂ ಆರೋಪಿಗಳ ಮನೆಗಳನ್ನೂ ಕೆಡವಿದ್ದರು. ಕಾಶಿ, ಅಯೋಧ್ಯೆ ದೇವಸ್ಥಾನ ಕಾರಿಡಾರ್ ಯೋಜನೆಗೂ ಅನೇಕ ಹಿಂದೂಗಳ ಮನೆ, ಚಿಕ್ಕಪುಟ್ಟ ದೇವಸ್ಥಾನ, ಅಂಗಡಿಗಳನ್ನೂ ಧ್ವಂಸ ಮಾಡಿ ಸ್ಥಳ ವಶಪಡಿಸಿಕೊಂಡಿದ್ದರು.
ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಕ್ರಿಮಿನಲ್ ಗಳನ್ನು ಮಟ್ಟ ಹಾಕಲು ಸಂಕಲ್ಪ ಮಾಡಿತ್ತು. ಇದು ಆಗಬೇಕಾದ್ದೆ ಎಂಬ ಕಾರಣಕ್ಕೆ ಜನರೂ ಖುಷಿ ಪಟ್ಟಿದ್ದರು. ಆದರೆ ಯೋಗಿ ಸರ್ಕಾರ ಇದಕ್ಕಾಗಿ ಅನುಸರಿಸಿದ ಮಾರ್ಗ ಮಾತ್ರ ಪ್ರಜಾಪ್ರಭುತ್ವದ ಆಶಯಗಳಿಗೇ ಬುಲ್ಡೋಜರ್ ಹಾಕಿತ್ತು. ಕ್ರಿಮಿನಲ್‌ಗಳು, ವಿಶೇಷವಾಗಿ ಕೋಮು ಹಿಂಸೆಯಲ್ಲಿ ಪಾಲ್ಗೊಳ್ಳುವ ಆರೋಪಿಗಳ ಮನೆಗಳನ್ನು, ಅನಧಿಕೃತವಾಗಿ ಕಟ್ಟಿದ್ದು ಎಂಬ ನೆಲೆಯಲ್ಲಿ ಬುಲ್ಡೋಜರ್ ಮೂಲಕ ಧ್ವಂಸಗೊಳಿಸಲು ಪ್ರಾರಂಭಿಸಿದ್ದರು.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಏನೆಂದರೆ, ಆರೋಪ ಸಾಬೀತಾಗಿ ಅಪರಾಧಿಯೆಂದು ಘೋಷಣೆಯಾಗುವವರ ಮನೆಗಳನ್ನು ಕೆಡವಿದ್ದಲ್ಲ. ಕೇಸ್‌ನಲ್ಲಿ ಹೆಸರು ಸೇರ್ಪಡೆಯಾದವರ ಮನೆಗಳನ್ನೂ ಧ್ವಂಸ ಮಾಡಲು ಶುರು ಮಾಡಿದ್ದರು. ಇಲ್ಲಿ ಬಹುತೇಕ ಮುಸ್ಲಿಮರ ಹೆಸರುಗಳನ್ನು ಕೇಸ್ ಗಳಲ್ಲಿ ಸೇರಿಸುವುದು. ಯಾವ ನೋಟಿಸ್ ಕೂಡಾ ಕೊಡದೇ ಮನೆ ಧ್ವಂಸ ಮಾಡುತ್ತಿದ್ದರು. ಸರ್ಕಾರಿ ಅಧಿಕಾರಿಗಳೇ, ಮತೀಯ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.
ಒಂದು ಹಂತದಲ್ಲಿ ಇದು ಸರ್ಕಾರದ ಮತೀಯ ಕಾರ್ಯಾಚರಣೆ ಎಂಬ ಕೂಗು ಜೋರಾಗಿ ಕೇಳಿಬಂದ ಹಿನ್ನೆಲೆಯಲ್ಲಿ ಕೆಲವು ಹಿಂದೂ ಆರೋಪಿಗಳ ಮನೆಗಳನ್ನೂ ಕೆಡವಿದ್ದರು. ಕಾಶಿ, ಅಯೋಧ್ಯೆ ದೇವಸ್ಥಾನ ಕಾರಿಡಾರ್ ಯೋಜನೆಗೂ ಅನೇಕ ಹಿಂದೂಗಳ ಮನೆ, ಚಿಕ್ಕಪುಟ್ಟ ದೇವಸ್ಥಾನ, ಅಂಗಡಿಗಳನ್ನೂ ಧ್ವಂಸ ಮಾಡಿ ಸ್ಥಳ ವಶಪಡಿಸಿಕೊಂಡಿದ್ದರು. ಅವರಿಗೆ ಸರಿಯಾದ ಪರಿಹಾರವೂ ಸಿಗಲಿಲ್ಲ. ಮುಸ್ಲಿಂ ಮನೆಗಳನ್ನು ಕೆಡವುವಾಗ ನಗುತ್ತಿದ್ದವರ ಮನೆಗಳ ಬಳಿಗೂ ಬುಲ್ಡೋಜರ್ ಬಂದಾಗ ಜನ ಕಂಗಾಲಾಗಿದ್ದರು. ಇದರ ಪರಿಣಾಮವೇ ಅಯೋಧ್ಯೆ ರಾಮನ ಭಕ್ತರು ಚುನಾವಣೆಯಲ್ಲಿ ಬಿಜೆಪಿಗೆ ಕಹಿ ಕಜ್ಜಾಯ ತಿನ್ನಿಸಿದ್ದು.
ಇನ್ನೊಂದು ಅಂಶವೆಂದರೆ, ಒಂದು ಮನೆಯಲ್ಲಿ ಯಾರೋ ಒಬ್ಬ ಆರೋಪಿತನಾದರೂ ಇಡೀ ಕುಟುಂಬಕ್ಕೇ ಶಿಕ್ಷೆ ಕೊಡುವ ಕಾನೂನು ಜಗತ್ತಿನ ಯಾವ ದೇಶದಲ್ಲೂ ಇಲ್ಲ. ಯಾವುದೇ ತನಿಖೆ, ನ್ಯಾಯಾಲಯದ ವಿಚಾರಣೆ ಇಲ್ಲದೇ ಎಲ್ಲರನ್ನೂ ಶಿಕ್ಷಿಸುವ ತುಘಲಕ್ ದರ್ಬಾರ್ ಯೋಗಿ ಆಡಳಿತದಲ್ಲಿ ನಿರಂತರವಾಗಿ ನಡೆಯಿತು. ಬಿಜೆಪಿ ತನ್ನ ಎಂದಿನ ಚಾಳಿಯಂತೆ, ಕ್ರಿಮಿನಲ್‌ಗಳನ್ನು ಮಟ್ಟ ಹಾಕಿದ ಯೋಗಿಯನ್ನು ಹೀರೋವನ್ನಾಗಿ ಪ್ರಚಾರ ಮಾಡಿತು. ಚುನಾವಣೆಯಲ್ಲಿ ಬುಲ್ಡೋಜರ್‌ಗಳನ್ನೆ ತಮ್ಮ ಹೆಮ್ಮೆಯ ಸಂಕೇತವಾಗಿಟ್ಟು ಪ್ರಚಾರವನ್ನೂ ಮಾಡಿದ್ದರು.
ಅಸಲಿಗೆ ಇದೊಂದು ಸರ್ಕಾರದ ಮತೀಯ ದ್ವೇಷದ ಕಾರ್ಯಾಚರಣೆಯಾಗಿತ್ತು. ಮೋದಿಯ ಗೋದಿ ಮಾಧ್ಯಮಗಳು ಇದನ್ನು ಭಾರೀ ಕ್ರಾಂತಿಕಾರಿ ಕಾರ್ಯಕ್ರಮ ಎಂದು ಬಿಂಬಿಸಿ, ಬಿಜೆಪಿ ಮೇಲಿನ ಋಣ ತೀರಿಸಿದ್ದವು.
ಯಾರು ಆರೋಪಿ, ಯಾರು ಅಪರಾಧಿ ಎಂದು ತಿಳಿಯುವ ಮೊದಲೇ, ನ್ಯಾಯಾಲಯದ ವಿಚಾರಣೆಯೂ ಆಗದೇ ಇರುವಾಗ ಉತ್ತರ ಪ್ರದೇಶದ ಅನೇಕ ಕುಟುಂಬಗಳು ಬೀದಿಗೆ ಬಂದಾಗಿತ್ತು. ಇದನ್ನು ನೋಡಿದ ಕೆಲವು ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲೂ ಇದೇ ರೀತಿ ಕಾರ್ಯಾಚರಣೆ ಪ್ರಾರಂಭವಾಯಿತು.
ಕರ್ನಾಟಕದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾವೇ ಗೆಲ್ಲುತ್ತೇವೆ ಎಂಬ ಆಸೆಯಲ್ಲಿದ್ದ ಬಿಜೆಪಿಯ, ಸಿ ಟಿ ರವಿ, ಸುನಿಲ್ ಕುಮಾರ್, ಯತ್ನಾಳ ಇತ್ಯಾದಿ ಮುಖಂಡರು ತಮ್ಮ ಸರ್ಕಾರವೂ ಬುಲ್ಡೋಜರ್ ಕಾರ್ಯಾಚರಣೆ ಮಾಡಲಿದೆ ಎಂದೂ ಘೋಷಿಸಿದ್ದರು. ಬಹುಶಃ ಕೆಲವು ಬುಲ್ಡೋಜರ್ ಗಳನ್ನು ಖರೀದಿ ಮಾಡಿಟ್ಟುಕೊಂಡಿದ್ದರೇನೋ! ಆದರೆ, ಕರುನಾಡ ಜನತೆ ಬಿಜೆಪಿಗೆ ಬುಲ್ಡೋಜರ್ ಹಚ್ಚಿದ್ದರು.
ಇಲ್ಲಿ ಮನೆಗಳನ್ನು ಕೆಡುವುವಾಗ ಅವರು ಕೊಡುತ್ತಿದ್ದ ಒಂದು ಕಾರಣ “ಆ ಮನೆ ಅಕ್ರಮವಾಗಿ ಕಟ್ಟಿದೆ” ಎಂದಾಗಿತ್ತು. ಇಂತಹ ಮನೆ ಮತ್ತು ಕಟ್ಟಡಗಳು ದೇಶದಲ್ಲಿ ಕೋಟಿ ಲೆಕ್ಕದಲ್ಲಿವೆ. ಅದನ್ನು ತೆರವುಗೊಳಿಸಲು ಅದಕ್ಕೆಂದೇ ಕಾನೂನು, ನೀತಿ -ನಿಯಮವಿದೆ. ಈ ಕ್ರಿಮಿನಲ್ ನಿಯಂತ್ರಣ ಅಥವಾ ಅದಕ್ಕೆ ಸಂಬಂಧಿಸಿದ ಕಾನೂನಿಗೂ ಅಕ್ರಮ ಕಟ್ಟಡ ಕೆಡುವುವ ಪ್ರಕ್ರಿಯೆಗೂ ಯಾವುದೇ ಸಂಬಂಧವಿಲ್ಲ ಮತ್ತು ಆ ಮನೆಯ ನಿರಪರಾಧಿಗಳಿಗೆ ಶಿಕ್ಷೆ ಕೊಡುವ ಬಿಜೆಪಿಯವರ ದುಂಡಾವರ್ತನೆಯಾಗಿತ್ತು.
ಇದೀಗ ಸುಪ್ರೀಂ ಕೋರ್ಟ್ ಇಂತಹ ಬುಲ್ಡೋಜರ್ ಕಾರ್ಯಾಚರಣೆಗೆ, “ಇದು ಸಂವಿಧಾನಬಾಹಿರ, ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧ, ನೆಲದ ಕಾನೂನುಗಳ ಉಲ್ಲಂಘನೆ” ಎಂಬ ಕಾರಣ ನೀಡಿ ತಡೆ ನೀಡಿದೆ. ಬಿಜೆಪಿಗರ ಸರ್ವಾಧಿಕಾರಿ ಧೋರಣೆ, ಮತೀಯ ಕಾರ್ಯಾಚರಣೆಗೆ ಬ್ರೇಕ್ ಬಿದ್ದಿದೆ. ಪ್ರಜಾಪ್ರಭುತ್ವ ಗೆದ್ದಿದೆ. ರಾಜಧರ್ಮದ ಕನಿಷ್ಠ ಪ್ರಜ್ಞೆಯೂ ಇಲ್ಲದ ಬಿಜೆಪಿ ಮಾತ್ರ ಧರ್ಮದ ಗುತ್ತಿಗೆ ಪಡೆದವರಂತೆ ಇನ್ನೂ ಮಾತನಾಡುತ್ತಿರುವುದೇ ವಿಪರ್ಯಾಸ.
ಇದನ್ನೂ ಓದಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಯೋಗಿ ಸರ್ಕಾರ; ಒಂದೇ ದಿನ ಯುಪಿಪಿಎಸ್‌ಸಿ ಪರೀಕ್ಷೆ ನಡೆಸಲು ಅಸ್ತು

ಎಂ ಜಿ ಹೆಗಡೆ, ಮಂಗಳೂರು
ಲೇಖಕ, ಜನಪರ ಹೋರಾಟಗಾರ