ಬುಲ್ಡೋಜರ್ ನ್ಯಾಯ | ಭಾರತವನ್ನು ಆಕ್ರಮಿಸಿಕೊಂಡಿದ್ದು ಹೇಗೆ ಮತ್ತು ಏಕೆ?

Date:

Advertisements

ಭಾರತದ ನಾನಾ ರಾಜ್ಯಗಳ ಸರ್ಕಾರಗಳು ಮತ್ತು ಅಧಿಕಾರಿಗಳನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತು. ಆಡಳಿತ ವ್ಯವಸ್ಥೆಯಲ್ಲಿ ತ್ವರಿತ ನ್ಯಾಯ ಒದಗಿಸುತ್ತೇವೆಂಬ ಅಸಂವಿಧಾನಿಕ ‘ಬುಲ್ಡೋಜರ್ ನ್ಯಾಯ’ದ ಬಗ್ಗೆ ಸುಪ್ರೀಂ ಕೋರ್ಟ್ ಕಿಡಿಕಾರಿದೆ. ಈಗ ‘ಬುಲ್ಡೋಜರ್ ನ್ಯಾಯ’ದ ಬಗ್ಗೆ ಮತ್ತೆ ಚರ್ಚೆ ಮುನ್ನೆಲೆಗೆ ಬಂದಿದೆ.

ದೆಹಲಿಯ ಜ್ಯೂಸ್ ಅಂಗಡಿ ಮಾಲೀಕ, ರಾಜಸ್ಥಾನದ ಟೆಂಪೋ ಡ್ರೈವರ್‌, ಮಧ್ಯಪ್ರದೇಶದ ಕೂಲಿ ಕಾರ್ಮಿಕನ ಮನೆಯನ್ನು ಧ್ವಂಸಗೊಳಿಸಿದಂತಹ ಹಲವಾರು ಪ್ರಕರಣಗಳು ದೇಶಾದ್ಯಂತ ಸಂಭವಿಸಿವೆ. ಸರ್ಕಾರಗಳ ‘ಬುಲ್ಡೋಜರ್‌’ಗಳಿಗೆ ಬಲಿಯಾದ ಹಲವಾರು ಸಂತ್ರಸ್ತರು ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ‘ಬುಲ್ಡೋಜರ್ ನ್ಯಾಯ’ದ ವಿರುದ್ಧ ಕ್ರಮ ಕೈಗೊಳ್ಳುವಂತೆ, ತಮಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.

ಅರ್ಜಿದಾರರ ಅಳಲು, ಅಹವಾಲುಗಳನ್ನು ಆಲಿಸಿರುವ ಸುಪ್ರೀಂ ಕೋರ್ಟ್‌, ”ವ್ಯಕ್ತಿಯು ಅಪರಾಧಿಯೆಂದು ಘೋಷಿಸಲ್ಪಟ್ಟರೂ, ಆತನ ಆಸ್ತಿಯನ್ನು ಕೆಡವಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಆರೋಪಿಯಾಗಿರುವ ಮಾತ್ರಕ್ಕೆ ಅವರ ಮನೆಯನ್ನು ಹೇಗೆ ಕೆಡವುತ್ತೀರಿ. ಓರ್ವ ವ್ಯಕ್ತಿ ದಂಗೆಕೋರ ಆಗಿರಬಹುದು. ಆ ಕಾರಣಕ್ಕೆ ಆತನ ತಂದೆಯ ಮನೆ ಕೆಡವಿದರೆ, ಅವರು ಎಲ್ಲಿ ಹೋಗಬೇಕು. ಏನು ಮಾಡಬೇಕು. ಇದು ಸರಿಯಾದ ನಡೆಯಲ್ಲ. ನಾವು ಪ್ಯಾನ್-ಇಂಡಿಯಾ ಆಧಾರದ ಮೇಲೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಲು ಪ್ರಸ್ತಾಪಿಸುತ್ತೇವೆ” ಎಂದು ಹೇಳಿದೆ.

Advertisements

”ಅಪರಾಧಿ ಅಥವಾ ಆರೋಪಿಗಳ ಕಟ್ಟಡವು ಕಾನೂನುಬಾಹಿರವಾಗಿದ್ದರೆ ಮಾತ್ರ ಅಂತಹ ಮನೆಗಳನ್ನು ನೆಲಸಮವನ್ನು ಮಾಡಬಹುದು. ಅಂತಹ ಪ್ರಕರಣಗಳಲ್ಲಿಯೂ ಮೊದಲ ನೋಟಿಸ್ ನೀಡಿ, ಉತ್ತರಿಸಲು ಸಮಯ ಕೊಡಬೇಕು. ನಂತರ ಕ್ರಮ ಕೈಗೊಳ್ಳಬೇಕು” ಎಂದು ನ್ಯಾಯಾಲಯ ಹೇಳಿದೆ. ಸುಪ್ರೀಂ ಕೋರ್ಟ್‌ನ ಈ ಆದೇಶವು ‘ಬುಲ್ಡೋಜರ್ ಕ್ರಮ’ದಿಂದ ತಮ್ಮ ಮನೆಗಳನ್ನು ಕಳೆದುಕೊಂಡ ಹಲವರಲ್ಲಿ ನ್ಯಾಯದ ಭರವಸೆಯನ್ನು ಹುಟ್ಟುಹಾಕಿದೆ.

image 11 4

ಅಂದಹಾಗೆ, 2022ರ ಏಪ್ರಿಲ್ 16ರಂದು ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದಿತ್ತು. ಹಿಂಸಾಚಾರ ನಡೆದ ಮೂರು ದಿನಗಳ ನಂತರ, ಏಪ್ರಿಲ್ 19ರಂದು ದೆಹಲಿ ಬಿಜೆಪಿ ನಾಯಕರು ದೆಹಲಿ ಮುನ್ಸಿಪಲ್ ಕಾರ್ಪೋರೇಷನ್‌ಗೆ ಪತ್ರ ಬರೆದು, ಗಲಭೆಕೋರರ ಮನೆಗಳನ್ನು ಧ್ವಂಸಗೊಳಿಸುವಂತೆ ಮನವಿ ಮಾಡಿದ್ದರು. ಅವರ ಉದ್ದೇಶ ಮುಸ್ಲಿಮರ ಮನೆಗಳನ್ನು ಉರುಳಿಸಬೇಕೆಂಬುದಾಗಿತ್ತು. ಆದಾಗ್ಯೂ, ದೆಹಲಿ ಪಾಲಿಕೆ ಜಹಾಂಗೀರ್‌ಪುರಿಯಲ್ಲಿದ್ದ ಗಣೇಶ್‌ ಗುಪ್ತಾ ಎಂಬವರ ಜ್ಯೂಸ್‌ ಅಂಗಡಿಯನ್ನು ಕೆಡವಿತು.

ಪಾಲಿಕೆಯ ‘ಬುಲ್ಡೋಜರ್ ಕ್ರಮ’ದ ವಿರುದ್ಧ ಮಾಜಿ ರಾಜ್ಯಸಭಾ ಸಂಸದೆ ಮತ್ತು ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್ ಮತ್ತು ಜಮಿಯತ್-ಉಲಮಾ-ಇ-ಹಿಂದ್ ಮುಖಂಡರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ‘ಬುಲ್ಡೋಜರ್ ಕ್ರಮ’ಕ್ಕೆ ತಡೆಯೊಡ್ಡಿ ಸುಪ್ರೀಂ ಆದೇಶಿಸಿತ್ತು. ಆದಾಗ್ಯೂ, ಗುಪ್ತಾ ಅವರ ಅಂಗಡಿಯನ್ನು ಸಂಪೂರ್ಣವಾಗಿ ದೆಹಲಿ ಪಾಲಿಕೆ ಧ್ವಂಸಗೊಳಿಸಿತು. ಅದಾದ ಬಳಿಕ, ಗುಪ್ತಾ ತಮ್ಮ ಅಂಗಡಿಯನ್ನು ಮತ್ತೆ ಆರಂಭಿಸಲು ಸಾಕಷ್ಟು ಕಷ್ಟಪಡಬೇಕಾಯಿತು. ಅವರು ಪಾಲಿಕೆಯ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಈಗಲೂ ಹೋರಾಟ ನಡೆಸುತ್ತಿದ್ದಾರೆ.

ಇಂತಹ ಪ್ರಕರಣಗಳು ದೇಶಾದ್ಯಂತ ಸಾಕಷ್ಟು ಘಟಿಸಿವೆ. ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ದೆಹಲಿ, ಅಸ್ಸಾಂ ಮತ್ತು ಮಹಾರಾಷ್ಟ್ರಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿವೆ. ಅದೇ ರೀತಿ, ಕಾಂಗ್ರೆಸ್‌ ಆಡಳಿತದಲ್ಲೂ ‘ಬುಲ್ಡೋಜರ್ ನ್ಯಾಯ’ ಪ್ರಕರಣಗಳು ನಡೆದಿವೆ ಎಂಬುದು ಗಮನಾರ್ಹ.

‘ಬುಲ್ಡೋಜರ್ ನ್ಯಾಯ’ ಎಂದರೇನು?

‘ಬುಲ್ಡೋಜರ್ ನ್ಯಾಯ’ದ ಹಿಂದೆ ‘ಬುಲ್ಡೋಜರ್ ಕ್ರಮ’ವಿದೆ. ತಾವು ನೆಲೆಸಿರುವ ಭೂಮಿ ತಮ್ಮದೆಂಬುದಕ್ಕೆ ಹಕ್ಕು ಪತ್ರಗಳನ್ನು ಹೊಂದಿರದ, ತಾವು ಭಾರತೀಯರೆಂದು ಸಾಬೀತು ಮಾಡಲು ಯಾವುದೇ ಪುರಾವೆಗಳನ್ನು ಹೊಂದಿಲ್ಲದಿದ್ದ, ಕಾಡಂಚಿನಲ್ಲಿ ವಾಸಿಸುತ್ತಿದ್ದ ಆದಿವಾಸಿ, ಬುಡಕಟ್ಟು ಹಾಗೂ ನಗರ ಪ್ರದೇಶಗಳ ಕೊಳಗೇರಿಗಳಲ್ಲಿ ವಾಸಿಸುತ್ತಿದ್ದ ಸ್ಲಂ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಆಡಳಿತ ಸರ್ಕಾರವು ನಡೆಸುತ್ತಿದ್ದ ದೌರ್ಜನ್ಯವೇ ‘ಬುಲ್ಡೋಜರ್ ಕ್ರಮ’. ಯಾವುದೋ ಒಂದು ದಿನ ಇದ್ದಕ್ಕಿದ್ದಂತೆ ಈ ಜನರು ವಾಸಿಸುತ್ತಿದ್ದ ಪ್ರದೇಶಗಳಿಗೆ ಬುಲ್ಡೋಜರ್‌ಗಳು ನುಗ್ಗುತ್ತಿದ್ದವು. ಅವರ ಶೆಡ್, ಗುಡಿಸಲುಗಳ ಮೇಲೆ ಆಕ್ರಮಣ ನಡೆಸುತ್ತಿದ್ದವು. ಎಲ್ಲವನ್ನೂ ಧ್ವಂಸಗೊಳಿಸಿ, ಆದಿವಾಸಿ, ಬುಡಕಟ್ಟು, ಸ್ಲಂ ಜನರನ್ನು ಬೀದಿಗೆ ದೂಡಿ ಹೋಗುತ್ತಿದ್ದವು. ದೌರ್ಜನ್ಯ ನಡೆಸುತ್ತಿದ್ದವು.

ಇಂಥದ್ದೇ ಕ್ರಮಗಳ ಮೂಲಕ ಶೋಷಿತ, ಅಲ್ಪಸಂಖ್ಯಾತ ಸಮುದಾಯಗಳನ್ನು ಮತ್ತಷ್ಟು ಶೋಷಿಸಲು ಸರ್ಕಾರಗಳು ಮುಂದಾಗಿವೆ. ಅದಕ್ಕೆ ‘ಬುಲ್ಡೋಜರ್ ನ್ಯಾಯ’ ಎಂಬ ಹೆಸರಿಟ್ಟುಕೊಂಡಿವೆ. ಆಪಾದಿತ ಅಪರಾಧಿಗಳು, ಕೋಮು ಗಲಭೆಕೋರರು ಮತ್ತು ಇತರ ಪ್ರಕರಣಗಳ ಆರೋಪಿಗಳ ಮನೆಗಳನ್ನು ಕೆಡವಲು ಸರ್ಕಾರಗಳು ಉತ್ಸುಕವಾಗಿವೆ. ಹಿಂದುಳಿತ ಸಮುದಾಯಗಳಿಗೆ ಸೇರಿದ ಆರೋಪಿಗಳ ಮನೆಗಳು, ಅಂಗಡಿಗಳು ಮತ್ತು ಸಣ್ಣ ಸಂಸ್ಥೆಗಳ ಮೇಲೆ ಬುಲ್ಡೋಜರ್‌ಗಳನ್ನು ಹರಿಸುತ್ತಿವೆ. ಅವರ ಕುಟುಂಬದ ಜೀವನವನ್ನೇ ಮಣ್ಣುಪಾಲು ಮಾಡುತ್ತಿವೆ.

ಆದರೆ, ಈ ಕ್ರಮವು ಆರಂಭದಿಂದಲೇ ತೀವ್ರ ಟೀಕೆಗೆ ಗುರಿಯಾಗಿದೆ. ವ್ಯಕ್ತಿಯ ಮೇಲಿನ ಆರೋಪ ಸಾಬೀತಾಗುವ ಮುನ್ನವೇ ಕ್ರಮ ಕೈಗೊಳ್ಳುವುದು ಹೇಗೆ ಎಂದು ಹಲವರು ಪ್ರಶ್ನಿಸಿದ್ದಾರೆ. ಒಬ್ಬರ ಅಪರಾಧಕ್ಕಾಗಿ ಇಡೀ ಕುಟುಂಬವನ್ನೇ ಆಡಳಿತವು ಶಿಕ್ಷಿಸುವುದೇಕೆ ಎಂದು ಕಿಡಿಕಾರಿದ್ದಾರೆ. ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ, ಸುಪ್ರೀಂ ಕೋರ್ಟ್‌ ಕೂಡ ಈ ಕ್ರಮದ ವಿರುದ್ಧ ಕೆಂಡಕಾರಿದೆ.

‘ಬುಲ್ಡೋಜರ್ ನ್ಯಾಯ’ದ ಕರ್ತೃ ಬುಲ್ಡೋಜರ್ ಬಾಬಾ ಯೋಗಿ

2017ರ ಸೆಪ್ಟಂಬರ್‌ನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಯೋಗಿ ಆದಿತ್ಯನಾಥ್‌, ಕೆಲವೇ ತಿಂಗಳಲ್ಲಿ ಅಪರಾಧ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಬುಲ್ಡೋಜರ್‌ಗಳನ್ನು ಬಳಸುವುದಾಗಿ ಬೆದರಿಕೆ ಹಾಕಿದರು. ”ಸಮಾಜದಲ್ಲಿ ಅಪರಾಧವನ್ನು ಎಸಗುವವರು ಯಾರೇ ಆಗಿದ್ದರೂ, ಅವರ ಮನೆಗಳನ್ನು ತಮ್ಮ ಸರ್ಕಾರವು ಧ್ವಂಸಗೊಳಿಸುತ್ತದೆ” ಎಂದು ಯೋಗಿ ಘೋಷಿಸಿದರು.

image 11 3

ನಂತರದ ವರ್ಷಗಳಲ್ಲಿ ಹಲವಾರು ಮನೆಗಳನ್ನು ಯೋಗಿ ಸರ್ಕಾರ ಧ್ವಂಸಗೊಳಿಸಿತು. ಆದರೆ, ಅವರ ಬುಲ್ಡೋಜರ್‌ಗಳು ದಾಳಿ ನಡೆಸಿದ್ದು- ಮುಸ್ಲಿಮರು, ದಲಿತರ ಮನೆಗಳ ಮೇಲೆ ಮಾತ್ರ. ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಬುಲ್ಡೋಜರ್ ಹರಿಸುವುದಾಗಿ ಹೇಳಿದ್ದ ಯೋಗಿ, ಉನ್ನಾವೋದಲ್ಲಿ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ, ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ವಿರುದ್ಧ ತನ್ನ ಬುಲ್ಡೋಜರ್‌ಗಳನ್ನು ಹರಿಸಲಿಲ್ಲ. ಹತ್ರಾಸ್‌ನಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿ, ಕ್ರೌರ್ಯ ಮೆರೆದಿದ್ದ ಆರೋಪಿಗಳ ಮನೆಗಳತ್ತ ಯೋಗಿಯ ಬುಲ್ಡೋಜರ್‌ಗಳು ತಿರುಗಲಿಲ್ಲ. ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಬಿಜೆಪಿ ಮಾಜಿ ಸಂಸದ, ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧವೂ ಯೋಗಿಯ ಬುಲ್ಡೋಜರ್‌ ಹೋಗಲಿಲ್ಲ.

ಆದರೆ, ದಲಿತರು, ಅಲ್ಪಸಂಖ್ಯಾತರ ವಿರುದ್ಧ ಯೋಗಿಯ ಬುಲ್ಡೋಜರ್‌ಗಳು ಎಗ್ಗಿಲ್ಲದೆ ದಾಳಿ ಮಾಡಿದವು. ಆರೋಪಿ, ಅಪರಾಧಿಗಳು ಮಾತ್ರವಲ್ಲದೆ, ನಿರ್ಮಾಣ ಉಲ್ಲಂಘನೆಯ ನೆಪವೊಡ್ಡಿಯೂ ಹಲವಾರು ಅಲ್ಪಸಂಖ್ಯಾತರ ಮನೆಗಳ ಮೇಲೆ ಬುಲ್ಡೋಜರ್‌ ದಾಳಿಗಳು ನಡೆದವು. ಇಂತಹ ಪ್ರಕರಣಗಳಲ್ಲಿ ಪ್ರಯಾಗರಾಜ್‌ನ ಮೊಹಮದ್ ಜಾದೇವ್ ಅವರ ಪ್ರಕರಣವೂ ಒಂದು. ಅವರು ತಮ್ಮ ಮನೆ ನಿರ್ಮಾಣದ ವೇಳೆ ನಿರ್ಮಾಣ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ನೋಟಿಸ್ ಕೊಟ್ಟ ಒಂದೇ ದಿನದಲ್ಲಿ ಅವರ ಮನೆಯನ್ನು ಯೋಗಿ ಸರ್ಕಾರ ಉರುಳಿಸಿತು.

image 11 2

ಹೀಗಾಗಿಯೇ, ಯೋಗಿಗೆ ‘ಬುಲ್ಡೋಜರ್ ಬಾಬಾ’ ಎಂಬ ಅಡ್ಡಹೆಸರನ್ನೂ ಇಡಲಾಯಿತು. 2022ರ ಮೇ ತಿಂಗಳ ನಂತರ ಈ ‘ಬುಲ್ಡೋಜರ್ ನ್ಯಾಯ’ವು ರಾಷ್ಟ್ರೀಯ ಪ್ರವೃತ್ತಿಯಾಗಿ ಮಾರ್ಪಟ್ಟಿತು. ಆಗ, ಉತ್ತರ ಪ್ರದೇಶದ ಬಿಜೆಪಿ ವಕ್ತಾರರಾಗಿದ್ದ ನೂಪುರ್ ಶರ್ಮಾ ಅವರು ಟಿವಿ ಚರ್ಚೆಯೊಂದರಲ್ಲಿ ಪ್ರವಾದಿ ಮುಹಮ್ಮದ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.

ಅವರ ಹೇಳಿಕೆ ಖಂಡಿಸಿ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ವೇಳೆ ಹಿಂಸಾಚಾರ ನಡೆದಾಗ ಯೋಗಿ ಸರ್ಕಾರವು ಮುಸ್ಲಿಮರ ಹಲವಾರು ಮನೆಗಳನ್ನು ಉರುಳಿಸಿತು. ಬಳಿಕ, ‘ಬುಲ್ಡೋಜರ್ ಕ್ರಮ’ ದೇಶಾದ್ಯಂತ ಪ್ರವರ್ಧಮಾನಕ್ಕೆ ಬಂದಿತು.

ಈ ವರದಿ ಓದಿದ್ದೀರಾ?: ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗವತ್‌ಗೆ ಪ್ರಧಾನಿಗೆ ಸಮನಾದ ಭದ್ರತೆ ಏಕೆ, ಏನಿದರ ಗುಟ್ಟು?

ಈಗ, ‘ಬುಲ್ಡೋಜರ್ ನ್ಯಾಯ’ ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಮಧ್ಯಪ್ರದೇಶಕ್ಕೂ ವ್ಯಾಪಿಸಿಕೊಂಡಿದೆ. 2022ರಲ್ಲಿ ಮಧ್ಯಪ್ರದೇಶದಲ್ಲಿ ನಡೆದ ಕೋಮು ಘರ್ಷಣೆಯ ಬಳಿಕ, ಅಂದಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಖಾರ್ಗೋನ್‌ನಲ್ಲಿ 16 ಮನೆಗಳು ಮತ್ತು 29 ಅಂಗಡಿಗಳನ್ನು ಕೆಡವಲು ಅಧಿಕಾರಿಗಳಿಗೆ ಆದೇಶಿಸಿದ್ದರು. ಆ ಕಾರಣಕ್ಕೆ ಅವರು ‘ಬುಲ್ಡೋಜರ್ ಮಾಮಾ’ ಎಂಬ ಅಪಖ್ಯಾತಿಯನ್ನೂ ಪಡೆದುಕೊಂಡರು.

2022ರ ಏಪ್ರಿಲ್‌ನಲ್ಲಿ ನಡೆದ ದೆಹಲಿ ಹಿಂಸಾಚಾರದ ಬಳಿಕ, ‘ಬುಲ್ಡೋಜರ್ ನ್ಯಾಯ’ವು ದೆಹಲಿಗೂ ವ್ಯಾಪಿಸಿತು. ಇತ್ತೀಚೆಗೆ 2024 ಜನವರಿಯಲ್ಲಿ, ಮಹಾರಾಷ್ಟ್ರದ ಅಧಿಕಾರಿಗಳು ಮುಂಬೈನ ಮೀರಾ ರೋಡ್ ಉಪನಗರದಲ್ಲಿ ಬುಲ್ಡೋಜರ್ ಕ್ರಮವನ್ನು ಅನುಸರಿಸಿದರು. ಮೀರಾ ರೋಡ್ ಪ್ರದೇಶದಲ್ಲಿ ಕೋಮು ಘರ್ಷಣೆ ನಡೆದ ಎರಡು ದಿನಗಳ ನಂತರ ಅತಿಕ್ರಮಣ ತೆರವಿನ ಹೆಸರಿನಲ್ಲಿ 15 ಮನೆಗಳನ್ನು ಅಧಿಕಾರಿಗಳು ಧ್ವಂಸಗೊಳಿಸಿದರು. ಇನ್ನು, ಆರು ಜನರನ್ನು ಬಲಿ ಪಡೆದ ಕೋಮುಗಲಭೆ ನಡೆದ ಬಳಿಕ ಹರಿಯಾಣದ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಕೂಡ ‘ಬುಲ್ಡೋಜರ್ ಕ್ರಮ’ವನ್ನು ಅನುಸರಿಸಿ ಹಲವಾರು ಮನೆಗಳು ಮತ್ತು ಕಟ್ಟಡಗಳನ್ನು ನೆಲಸಮಗೊಳಿಸಿತು.

image 11 1

ಕಾಂಗ್ರೆಸ್‌ ಅಧಿಕಾರದಲ್ಲಿರುವ ತೆಲಂಗಾಣವನ್ನೂ ‘ಬುಲ್ಡೋಜರ್ ನ್ಯಾಯ’ ಆಕ್ರಮಿಸಿಕೊಂಡಿದೆ. ಕಳೆದ ಜೂನ್ ತಿಂಗಳಿನಲ್ಲಿ ಹೈದರಾಬಾದ್‌ನಲ್ಲಿ ‘ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿ ಸಂರಕ್ಷಣಾ ಸಂಸ್ಥೆ’ (HYDRA) ಸುಮಾರು 166ಕ್ಕೂ ಹೆಚ್ಚು ಕಟ್ಟಡಗಳನ್ನು ನೆಲಸಮಗೊಳಿಸಿತು. ಇದನ್ನು, ಹಲವರು ಕಾಂಗ್ರೆಸ್‌ ಸರ್ಕಾರ ಸೇಡಿನ ಕ್ರಮ ಎಂದು ಬಣ್ಣಿಸಿದರು. ಆದರೆ, ಮುಖ್ಯಮಂತ್ರಿ ರೇವಂತ್ ರೆಡ್ಡಿ, ‘ತಮ್ಮ ಸರ್ಕಾರದ ಕ್ರಮಗಳು ಮೇಲ್ಮಟ್ಟದ್ದಾಗಿವೆ. ತೆಲಂಗಾಣದ ಕೆರೆಗಳ ಪ್ರಾಚೀನ ವೈಭವಕ್ಕೆ ಮರುಸ್ಥಾಪಿಸುವ ಗುರಿಯನ್ನು ಹೊಂದಿವೆ’ ಎಂದು ಹೇಳಿಕೊಂಡರು. ಆದಾಗ್ಯೂ, ಅವರ ಕ್ರಮವನ್ನು ಬಿಆರ್‌ಎಸ್‌ ಪಕ್ಷವು ಯೋಗಿಯ ‘ಬುಲ್ಡೋಜರ್ ನ್ಯಾಯ’ಕ್ಕೆ ಹೋಲಿಸಿದ್ದಾರೆ. ”ತೆಲಂಗಾಣವನ್ನು ಬುಲ್ಡೋಜರ್ ರಾಜ್ಯವನ್ನಾಗಿ ಮಾಡದಂತೆ ನೋಡಿಕೊಳ್ಳಬೇಕು” ಎಂದು ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಅವರು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರನ್ನು ಒತ್ತಾಯಿಸಿದ್ದಾರೆ.

‘ಬುಲ್ಡೋಜರ್ ನ್ಯಾಯ’ ಎಂಬುದು ವಿದ್ವಂಸಕ ಕೃತ್ಯ

‘ಬುಲ್ಡೋಜರ್ ನ್ಯಾಯ’ದ ಹೆಸರಿನಲ್ಲಿ ಮನೆಗಳನ್ನು ಧ್ವಂಸಗೊಳಿಸುವ ಕೃತ್ಯಕ್ಕೆ ಸಾಮಾಜಿಕ ಸಿಂಧುತ್ವ ನೀಡುವುದನ್ನು ಹಲವಾರು ವಿಮರ್ಶಕರು ಪ್ರಶ್ನಿಸಿದ್ದಾರೆ ಮತ್ತು ಟೀಕಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮದನ್ ಬಿ ಲೋಕೂರ್, “ಬುಲ್ಡೋಜರ್ ನ್ಯಾಯವು ಕಾನೂನಿನ ಎಲ್ಲ ನಿಯಮಗಳಿಗೆ ವಿರುದ್ಧವಾಗಿದೆ. ಕೋಮುಗಲಭೆ ಅಥವಾ ಗಲಭೆಯಲ್ಲಿ ಭಾಗವಹಿಸಿದ ಮಾತ್ರಕ್ಕೆ ಅಥವಾ ಕಾನೂನುಬಾಹಿರ ಕೃತ್ಯ ಎಸಗಿದ್ದಾರೆ ಎಂಬ ಕಾರಣಕ್ಕೆ ವ್ಯಕ್ತಿಯ ಮನೆಯನ್ನು ಕೆಡವಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ಮತ್ತು ರಾಜ್ಯ ಹೈಕೋರ್ಟ್‌ಗಳು ಕೂಡ ‘ಬುಲ್ಡೋಜರ್ ನ್ಯಾಯ’ವನ್ನು ಅಸಿಂಧು ಎಂದಿವೆ. 2023ರಲ್ಲಿ ಸುಪ್ರೀಂ ಕೋರ್ಟ್‌ ಉತ್ತರ ಪ್ರದೇಶದ ಸರ್ಕಾರದ ಬುಲ್ಡೋಜರ್ ಕ್ರಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಇನ್ನು, 2024ರ ಫೆಬ್ರವರಿಯಲ್ಲಿ, ನೈಸರ್ಗಿಕ ನ್ಯಾಯ ಮತ್ತು ಕಾನೂನಿನ ತತ್ವಗಳನ್ನು ಅನುಸರಿಸದೆ ಆಸ್ತಿಯನ್ನು ಕೆಡವಿದ್ದಕ್ಕಾಗಿ ಉಜ್ಜಯಿನಿಯ ಸ್ಥಳೀಯ ಆಡಳಿತವನ್ನು ಮಧ್ಯಪ್ರದೇಶ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. “ಸ್ಥಳೀಯ ಆಡಳಿತವು ಸಾಂವಿಧಾನಿಕ ಕಾನೂನನ್ನು ಅನುಸರಿಸದೆ, ಯಾವುದೇ ಮನೆಯನ್ನು ಕೆಡವುವುದು ಮತ್ತು ತನ್ನ ಕೃತ್ಯಗಳನ್ನು ಪತ್ರಿಕೆಗಳಲ್ಲಿ ಪ್ರಚಾರ ಮಾಡುವುದು ಫ್ಯಾಶನ್ ಆಗಿದೆ” ಎಂದು ಕಿಡಿಕಾರಿತ್ತು.

image 11 5

‘ಬುಲ್ಡೋಜರ್ ನ್ಯಾಯ’ ಪ್ರವೃತ್ತಿಯನ್ನು ಟೀಕಿಸಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ”ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕಾನೂನು ಮತ್ತು ನಾಗರಿಕರ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಬಿಜೆಪಿ ಸರ್ಕಾರಗಳ ಬುಲ್ಡೋಜರ್ ಕ್ರಮವು ಅಮಾನವೀಯ ಮತ್ತು ಅನ್ಯಾಯದ ಕ್ರಮವಾಗಿದೆ. ಬಿಜೆಪಿ ಸರ್ಕಾರಗಳು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡಿರುವುದು ತೀವ್ರ ಕಳವಳಕಾರಿ” ಎಂದು ಹೇಳಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ, ‘ಬುಲ್ಡೋಜರ್ ನ್ಯಾಯ’ ಕ್ರಮವು ಕಾನೂನು ಪ್ರಕ್ರಿಯೆಯನ್ನು ಬೈಪಾಸ್ ಮಾಡುತ್ತದೆ. ಸರಿಯಾದ ಪ್ರಕ್ರಿಯೆ ಮತ್ತು ನ್ಯಾಯೋಚಿತ ವಿಚಾರಣೆಯ ತತ್ವಗಳನ್ನು ಕಡೆಗಣಿಸುತ್ತದೆ. ಯಾವುದೇ ವ್ಯಕ್ತಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರೆ ಅವರನ್ನು ವಿಚಾರಣೆ ಒಳಪಡಿಸಬೇಕು ಮತ್ತು ಶಿಕ್ಷಿಸಬೇಕು. ಅದನ್ನು ಬಿಟ್ಟು, ಕಾನೂನುಬಾಹಿರವಾಗಿ ಅವರ ಮನೆಗಳನ್ನು ಧ್ವಂಸಗೊಳಿಸುವುದು ತಪ್ಪಿತಸ್ಥರಿಗೆ ಮಾತ್ರವಲ್ಲದೆ, ಅವರ ಕುಟುಂಬಕ್ಕೂ ಶಿಕ್ಷೆ ನೀಡುತ್ತದೆ. ಇದು ನ್ಯಾಯೋಚಿತವಲ್ಲ. ಜೊತೆಗೆ, ಇದು ಸಮಾಜದಲ್ಲಿ ಅಲ್ಪಸಂಖ್ಯಾತರಿಗೆ ಆಡಳಿತದಿಂದ ಭಯ, ಬೆದರಿಕೆ ಹಾಗೂ ಪ್ರತೀಕಾರದ ಸಂಸ್ಕೃತಿಯನ್ನು ಪ್ರಚೋದಿಸುತ್ತದೆ.  

‘ಬುಲ್ಡೋಜರ್‌ ನ್ಯಾಯ’ ಎಂದರೆ ಬಿಜೆಪಿಯ ವಿಕೃತ, ದ್ವೇಷಪೂರಿತ ಕ್ರಮವೆಂದೇ ಹೇಳಲಾಗುತ್ತಿದೆ. ಈ ಬುಲ್ಡೋಜರ್ ನ್ಯಾಯವನ್ನು ಶಿಕ್ಷೆಯ ಸಾಧನವಾಗಿ ಬಳಸುವುದು ಪ್ರತೀಕಾರದ ಸಂಕೇತವಾಗಿದೆ. ಇದು ಕಾನೂನು ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಪ್ರಜಾಸತ್ತಾತ್ಮಕ ಸಮಾಜದಲ್ಲಿ, ನ್ಯಾಯವು ಪ್ರತೀಕಾರದಿಂದ ಕೂಡಿರಬಾರದು. ಶಿಕ್ಷೆಯ ಕ್ರಮಗಳು ತಪ್ಪಿತಸ್ಥರನ್ನು ಸುಧಾರಿಸುವ ಗುರಿಯನ್ನು ಹೊಂದಿರಬೇಕೇ ಹೊರತು, ಅವರನ್ನು ಮತ್ತಷ್ಟು ವಿಕೃತಿ ಮತ್ತು ವಿಚಲಿತಗೊಳಿಸುವಂತಿರಬಾರದು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X