ಎಲ್ಲಾ ಜಾತಿ ವರ್ಗಗಳಿಗೂ ಸಾಮಾಜಿಕ ನ್ಯಾಯಕ್ಕಾಗಿ ಜಾತಿ ಗಣತಿ ವರದಿ ಜಾರಿಯಾಗಬೇಕು

Date:

Advertisements
ಚರಿತ್ರೆಯಲ್ಲಿ ನಡೆದು ಹೋಗಿರುವ ಅನ್ಯಾಯಗಳನ್ನು ಕಾಂತರಾಜ ಸಮಿತಿ ನಡೆಸಿರುವ ಜಾತಿ ಗಣತಿ ಸರಿಪಡಿಸಬಹುದಾದ್ದರಿಂದ ವರದಿ ಜಾರಿಗೆ ಬರಲೇ ಬೇಕಾಗಿದೆ. ಕರ್ನಾಟಕದ ಎಲ್ಲಾ ಜಾತಿ ವರ್ಗಗಳಿಗೂ ಸಾಮಾಜಿಕ ನ್ಯಾಯ ಸಿಗಬೇಕಾದರೆ ಸರಕಾರ ಈ ವರದಿಯನ್ನು ಅಂಗೀಕರಿಸಲೇಬೇಕಾಗಿದೆ

 

ಭಾರತ ಜಾತಿ ಪ್ರಧಾನ ರಾಷ್ಟ್ರ. ಇಲ್ಲಿ ಸಮುದಾಯಗಳನ್ನು ಜಾತಿ ಹಿನ್ನೆಲೆಯಿಂದ ಗುರುತಿಸಲಾಗುತ್ತದೆ. ಅವರ ಜಾತಿಯನ್ನು ಗುರುತಿಸಲು ಅವರ ಭಾಷೆ, ಉಡುಗೆ ತೊಡುಗೆ, ಆಹಾರ, ನಂಬಿಕೆ, ಕಸುಬು, ವಾಸಸ್ಥಳ, ನಡವಳಿಕೆ ಇವುಗಳನ್ನು ಪ್ರಧಾನ ಮಾನದಂಡಗಳಾಗಿ ಪರಿಗಣಿಸಲಾಗಿದೆ. ಹೀಗೆ ಪರಿಗಣಿಸಿದ ಜಾತಿಗಳಿಗೆ ಶ್ರೇಷ್ಠ- ಕನಿಷ್ಠ, ಶುದ್ಧ – ಅಶುದ್ಧಗಳ ನೆಲೆಗಳನ್ನು ಆರೋಪಿಸಿ ಶ್ರೇಷ್ಠ ಎನ್ನುವ ಸಮುದಾಯಗಳು ಮೇಲುಜಾತಿಗಳೆಂದು ಅನಿಸಿಕೊಳ್ಳುವ ಸಮುದಾಯಗಳನ್ನು ಕೆಳ ಜಾತಿಗಳೆಂದು ಗುರುತಿಸಲಾಗಿದೆ. ಹುಟ್ಟಿನ ಮೂಲಕವೇ ಮೇಲು ಜಾತಿಗಳು ಶ್ರೇಷ್ಠರಾಗಿರುವುದರಿಂದ ಅವರು ಹೇಳಿದಂತೆ ಹುಟ್ಟಿನ ಮೂಲಕ ಕನಿಷ್ಠರಾಗಿರುವ ಕೆಳಜಾತಿಗಳು ಪಾಲಿಸಬೇಕೆನ್ನುವ ನಿಯಮವನ್ನು ಹೆಣೆಯಲಾಗಿದೆ. ಅದಕ್ಕೆ ಮನುಸ್ಮೃತಿ ಎನ್ನುವ ಮನುಷ್ಯ ವಿರೋಧಿ ಕಾನೂನನ್ನು ರೂಪಿಸಲಾಗಿದೆ. ಜಾತಿ ಶ್ರೇಣೀಕರಣದ ವಂಚನೆಯ ಈ ಚಾರಿತ್ರಿಕ ನಡೆಯಲ್ಲಿ ಮೇಲು ಜಾತಿಗಳ ಶ್ರೇಷ್ಠತೆ, ಶುದ್ದತೆ, ಮೇಲು ಎನ್ನುವ ವ್ಯಸನವು ಕೆಲಸ ಮಾಡಿ ಅಧಿಕಾರ, ಸಂಪತ್ತನ್ನು ಕಬಳಿಸಿದ್ದರಿಂದ ಪರಂಪರೆಯುದ್ದಕ್ಕೂ ಕೆಳ ಜಾತಿಗಳು ನಷ್ಟವನ್ನು ಅನುಭವಿಸಿವೆ. ಚರಿತ್ರೆ, ಸಂಸ್ಕೃತಿಗಳಲ್ಲಿ ಇಂತ ಕೆಳ ಜಾತಿಗಳ ಬದುಕುಗಳು ದಾಖಲಾಗಿಯೇ ಇಲ್ಲ. ಚರಿತ್ರೆ ಅವರನ್ನು ಕನಿಷ್ಠ ಮನುಷ್ಯರು ಎಂದೂ ಪರಿಗಣಿಸಿಲ್ಲ.

ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ಭಾರತದ ಕೆಳ ಜಾತಿಗಳ ಬದುಕು ಬದಲಾಗಿಲ್ಲ. ಈಗಲೂ ಅವರು ಮೀಸೆ ಬಿಟ್ಟರೆ, ಹೊಸ ಬಟ್ಟೆ ಹಾಕಿದರೆ, ಕುದುರೆ ಮೇಲೆ ಕೂತರೆ, ದೇವಾಲಯ ಪ್ರವೇಶಿಸಿದರೆ, ದೇವರ ಕೋಲು ಮುಟ್ಟಿದರೆ ಮೇಲು ಜಾತಿಗಳ ಜನ ಅವರನ್ನು ಹೊಡೆಯುತ್ತಾರೆ. ಇವೆಲ್ಲಾ ಕೆಲಸಗಳು ಮೇಲಿನ ಜಾತಿಗಳ ಸ್ವಂತ ಅನ್ನುವ ಸಾಂಸ್ಕೃತಿಕ ಅಧಿಕಾರದ ಅಹಂ ಅವರಲ್ಲಿ ಕೆಲಸ ಮಾಡುತ್ತಿದೆ. ಈಗಲೂ ಕರ್ನಾಟಕದ ದಲಿತರು ಶಿಕ್ಷಣವನ್ನು ಆಕಾಶದ ಕುಸುಮವಾಗಿಯೇ ನೋಡುತ್ತಾರೆ. ಈಗಲೂ ದಲಿತರು, ಆದಿವಾಸಿಗಳು, ಮಹಿಳೆಯರು ಭೂಮಿ ಹೊಂದಲು, ನೌಕರಿ ಪಡೆಯಲು ಹರಸಾಹಸ ಪಟ್ಟು ಹೆಣಗಬೇಕಾಗಿದೆ. ಇನ್ನು ರಾಜಕೀಯದಲ್ಲಿ ಅವರ ಸ್ಥಾನ ತುಂಬ ಕನಿಷ್ಠದಿಂದ ಕೂಡಿದೆ. ಸಂವಿಧಾನದಲ್ಲಿ ಎಲ್ಲಾ ಜಾತಿಗಳಿಗೂ ಮೀಸಲಾತಿ ಇದ್ದರೂ ದಲಿತರು ಮಾತ್ರ ಮೀಸಲಾತಿಯ ಭಿಕ್ಷೆಯಲ್ಲಿ ಬದುಕುತ್ತಿರುವವರು ಎನ್ನುವ ಸುಳ್ಳನ್ನು ಸಮಾಜದಲ್ಲಿ ಹಬ್ಬಿಸುತ್ತಿದ್ದಾರೆ. ಮೀಸಲಾತಿಯ ನಿಜವಾದ ಸ್ವರೂಪವನ್ನು ಇವರು ಒಪ್ಪಲು ತಯಾರಿಲ್ಲ. ಸುಳ್ಳುಗಳ ಕಟ್ಟು ಚರಿತ್ರೆ, ಪುರಾಣಗಳೇ ಇವರ ಲಾಭಕ್ಕೆ ಆಧಾರ.

ಚರಿತ್ರೆಯಲ್ಲಿ ನಡೆದು ಹೋಗಿರುವ ಅನ್ಯಾಯಗಳನ್ನು ಕರ್ನಾಟಕ ಸರಕಾರ ನಡೆಸಿರುವ ಜಾತಿ ಸಮೀಕ್ಷೆ ಸರಿಪಡಿಸಬಹುದಾದ್ದರಿಂದ ಜಾತಿ ಜನಗಣತಿ ಜಾರಿಗೆ ಬರಲೇ ಬೇಕಾಗಿದೆ. ಕರ್ನಾಟಕದ ಎಲ್ಲಾ ಜಾತಿ ವರ್ಗಗಳಿಗೂ ಸಾಮಾಜಿಕ ನ್ಯಾಯ ಸಿಗಬೇಕಾದರೆ ಸರಕಾರ ಈ ವರದಿಯನ್ನು ಅಂಗೀಕರಿಸಲೇಬೇಕಾಗಿದೆ. ಜಾತಿ ಜನಗಣತಿ ಕುರಿತಂತೆ ಪರ ಮತ್ತು ವಿರೋಧದ ಚರ್ಚೆಗಳು ನಡೆಯುತ್ತಿದೆ. 2015ರಲ್ಲಿಯೇ ಕಾಂಗ್ರೆಸ್ ಸರಕಾರ ಇದ್ದಾಗ ಕಾಂತರಾಜ ಸಮಿತಿಯನ್ನು ರಚಿಸಿ ಆ ಮೂಲಕ ಜಾತಿ ಜನಗಣತಿಯನ್ನು ಮಾಡಿ ಮುಗಿಸಲು ರೂ.180 ಕೋಟಿ ಖರ್ಚು ಮಾಡಿದೆ. ಇದು ನಮ್ಮದೇ ಹಣ. ಮನೆ ಮನೆಗೂ ಹೋಗಿ ವೈಜ್ಞಾನಿಕವಾಗಿ ಈ ವರದಿಯನ್ನು ತಯಾರಿಸಲಾಗಿದೆ. ಈ ವರದಿಯನ್ನು ಜಾರಿ ಮಾಡದಿದ್ದರೆ ಇಷ್ಟು ದೊಡ್ಡ ಮೊತ್ತದ ಹಣ ವ್ಯರ್ಥವೇ ಆಗುತ್ತದೆ.

Advertisements

ಅದಕ್ಕಿಂತಲೂ ಮುಖ್ಯವಾಗಿ ಈ ಸಮೀಕ್ಷೆಯಲ್ಲಿ ಸಮುದಾಯಗಳನ್ನು ಗುರುತಿಸಲು ಜಾತಿ, ಲಿಂಗ, ಆಹಾರ, ದೇವರು, ಶಿಕ್ಷಣ, ಆರೋಗ್ಯ, ಭೂಮಿ ಒಡೆತನ, ಭಾಷೆ, ಉದ್ಯೋಗ ಎಲ್ಲವನ್ನು ಪರಿಗಣಿಸಲಾಗಿದೆ. ಇದರಿಂದ ಎಲ್ಲಾ ಜಾತಿಗಳಲ್ಲಿ ಇರುವ ಭೂಮಿ ಇಲ್ಲದ ಬಡವರು, ನಿರುದ್ಯೋಗಿಗಳು, ಕೂಲಿಕಾರ್ಮಿಕರು, ಮಹಿಳೆಯರು, ಕೆಳ ಜಾತಿಗಳು, ಅಂಗವಿಕಲರು ಎಲ್ಲರನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಸಮುದಾಯಗಳ ರಾಜಕೀಯ ಸ್ಥಿತಿ, ಸಾಮಾಜಿಕ ಸ್ಥಿತಿ, ಆರ್ಥಿಕ ಸ್ಥಿತಿ, ಶೈಕ್ಷಣಿಕ ಸ್ಥಿತಿ ಬುಡಕಟ್ಟುಗಳ ಸ್ಥಿತಿ ಎಲ್ಲವನ್ನು ಈ ಸಮೀಕ್ಷೆ ಗುರುತಿಸುತ್ತದೆ. ಇದರಿಂದ ಮುಂದಿನ ಅಧ್ಯಯನವನ್ನು ಕೈಗೊಳ್ಳುಲು ಮತ್ತು ಸರಕಾರ ಯೋಜನೆಗಳನ್ನು ರೂಪಿಸಲು ಈ ವರದಿ ಸಹಾಯಕವಾಗುತ್ತದೆ. ಒಳ ಮೀಸಲಾತಿಯನ್ನು ಜಾರಿಗೊಳಿಸಲು ಸಹ ಈ ವರದಿ ಸಹಾಯಕವಾಗುತ್ತದೆ. ಮಹಿಳಾ ಮೀಸಲಾತಿ, ಮಹಿಳಾ ಒಳ ಮೀಸಲಾತಿಯನ್ನು ಕುರಿತಂತೆ ಯೋಚಿಸಲು, ಕೆಲಸ ಮಾಡಲು ಈ ವರದಿ ಪೂರಕ ಮಾಹಿತಿಯನ್ನು ಒದಗಿಸುತ್ತದೆ. ಆದರೆ ಈ ಅಂಕಿ ಅಂಶಗಳನ್ನು ಸರಕಾರಗಳು ಹೇಗೆ ಪರಿಗಣಿಸುತ್ತವೆ ಎನ್ನುವುದರ ಆಧಾರದ ಮೇಲೆ ಅವರ ಅಭಿವೃದ್ಧಿ ನಿಂತಿದೆ. ಸರಕಾರಗಳು ಈ ನೆಲೆಯಲ್ಲಿ ನಿರ್ಲಕ್ಷ್ಯ ತೋರಿದರೂ ಅಂಕಿ ಅಂಶಗಳ ಸತ್ಯ ಸಮುದಾಯಗಳಿಗೆ ಗೊತ್ತಾದರೆ ಅವರು ಒಕ್ಕೊರಲಿನಿಂದ ತಮ್ಮ ಹಕ್ಕೊತ್ತಾಯಗಳಿಗೆ ದನಿ ಎತ್ತಲು ಈ ವರದಿ ಸಹಾಯಕವಾಗುತ್ತದೆ.

ಆದರೆ, ಕರ್ನಾಟಕದ ಪ್ರಬಲ ಜಾತಿಗಳಾದ ಒಕ್ಕಲಿಗ ಸಮುದಾಯ ಮತ್ತು ಲಿಂಗಾಯತ ಸಮುದಾಯ ಈ ವರದಿಯನ್ನು ವಿರೋಧಿಸುತ್ತಿವೆ. ಜಾತಿ ಜನಗಣತಿ ವರದಿ ಅವೈಜ್ಞಾನಿಕವಾಗಿದೆ. ಈ ವರದಿಯಿಂದ ಒಬಿಸಿ ಸಮುದಾಯಗಳಿಗೆ ಅನ್ಯಾಯವಾಗಲಿದೆ. ಈ ಸಮೀಕ್ಷೆ ನಡೆದು ಐದು ವರ್ಷಗಳು ಕಳೆದುಹೋಗಿರುವುದರಿಂದ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯವನ್ನು ಕಡಿಮೆ ಸಂಖ್ಯೆಯಲ್ಲಿ ತೋರಿಸುತ್ತದೆ ಎನ್ನುತ್ತಾರೆ. ಮತ್ತೊಮ್ಮೆ ಸಮೀಕ್ಷೆ ನಡೆಯಲಿ ಎನ್ನುತ್ತಾರೆ. ವರದಿ ಇನ್ನು ಬಿಡುಗಡೆಯೇ ಆಗದೆ ಇವರು ವರದಿ ಬಗ್ಗೆ ಮಾತನಾಡಲು ಹೇಗೆ ಸಾಧ್ಯ? ಇದು ಕಲ್ಪನೆ ಅಲ್ಲವೇ? ಸತ್ಯ ಹೊರ ಬಂದರೆ ಮಾತ್ರ ಎಲ್ಲವೂ ಹೊರಬರುತ್ತದೆ ಅಲ್ಲವೇ?

ಈ ವರದಿಯನ್ನು ವಿರೋಧಿಸುವ ಗುಂಪಿನಲ್ಲಿ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ, ಅರಣ್ಯ ಸಚಿವ ಈಶ್ವರ ಖಂಡ್ರೆ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಇದ್ದಾರೆ. ಇದು ಅಚ್ಚರಿ ಅಲ್ಲ. ಸಚಿವರಾಗಿ ತಳ ಸಮುದಾಯಗಳ ಅಭಿವೃದ್ದಿಗಾಗಿ ಇವರು ದುಡಿಯಬೇಕು. ಆದರೆ, ಇವರಿಗೆ ಸಮಾಜದ ಏಳಿಗೆಗಿಂತ ಜಾತಿ ಹಿತಾಸಕ್ತಿಯೇ ಮುಖ್ಯವಾಗಿರುವುದು ದುರಂತ.

2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ಈ ವರದಿ ಮಾರಕವಾಗಬಹುದು ಎನ್ನುವ ಆತಂಕದಲ್ಲಿ ಮೇಲುಜಾತಿಯ ಸಮುದಾಯಗಳಿವೆ. ಒಂದು ಸಮುದಾಯ ಬಿಟ್ಟುಕೊಟ್ಟಾಗ, ಮತ್ತೊಂದು ಸಮುದಾಯ ಪಡೆದುಕೊಳ್ಳಲು ಸಾಧ್ಯ ಎನ್ನುವ ಪ್ರಕೃತಿ ಸತ್ಯವನ್ನು ಇವರು ಒಪ್ಪದೆ ಇರುವುದರ ಹಿಂದೆ ಇವರು ಮೇಲು ಎನ್ನುವ ಜಾತಿ ಅಹಂ, ಅಧಿಕಾರ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಸರಕಾರ ಅವಧಿಯಲ್ಲಿ ಈ ಸಮೀಕ್ಷೆ ಮಾಡಲಾಗಿದೆ ಎನ್ನುವ ಕಾರಣಕ್ಕೆ ವಿರೋಧ ಪಕ್ಷಗಳು ಈ ವರದಿಯನ್ನು ವಿರೋಧಿಸುತ್ತಿವೆ. ಇದರ ವರದಿ ಕಳೆದುಹೋಗಿದೆ ಮತ್ತು ಕಾರ್ಯದರ್ಶಿಯ ಸಹಿ ಇಲ್ಲ ಎನ್ನುವ ನಾಟಕಗಳು ನಾಚಿಕೆಗೇಡಿನಿಂದ ಕೂಡಿರುವುದಾಗಿದೆ. ಬಡವರ ಹಣವನ್ನು ಪೋಲು ಮಾಡಲು ಇವರಿಗೆ ಕರಗತವಾಗಿದೆ. ಸಚಿವ ಸ್ಥಾನವನ್ನು ಸ್ವಂತ ಆಸ್ತಿ ಎನ್ನುವಂತೆ ನೋಡುವ ಇವರಿಗೆ ನಿಜವನ್ನು ಅರ್ಥಮಾಡಸಬೇಕಾಗಿದೆ.

ಇದನ್ನೂ ಓದಿ ಜಾತಿ ಆಧಾರಿತ ಸಮೀಕ್ಷಾ ವರದಿಗೆ ವಿರೋಧ ಯಾಕೆ?

ಜಾತಿಗಳ ಬಗ್ಗೆ ಇಲ್ಲಿಯವರೆಗೂ ಸೂಕ್ತವಾದ ಅಂಕಿ ಅಂಶಗಳು ಇಲ್ಲದ ಕಾರಣ ಮೇಲು ಜಾತಿಗಳಾದ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಸಮುದಾಯಗಳು ಅನ್ಯಾಯವಾಗಿ ಇಲ್ಲಿಯವರೆಗೂ ವಿಶೇಷ ಸವಲತ್ತುಗಳನ್ನು ಕಬಳಿಸಿದ್ದಾರೆ. ಮೇಲ್ಜಾತಿಗಳು ಇದುವರೆಗೆ ಪಡೆದುಕೊಂಡಿರುವ ಲಾಭ ಮುಂದುವರೆಯುವುದಿಲ್ಲ ಎನ್ನುವ ಭಯ ಅವರಲ್ಲಿ ಆತಂಕ ಮೂಡಿಸಿದೆ. ಜಾತಿಗಣತಿಯ ವಿರೋಧದ ಹಿಂದೆ ಕಳೆದುಕೊಳ್ಳುವ ಭಯ ಮೇಲುಜಾತಿಗಳನ್ನು ಕಾಡುತ್ತಿದೆ. ಜೊತೆಗೆ ಕೆಳಜಾತಿಗಳು ಹೆಚ್ಚು ಮೀಸಲಾತಿಯನ್ನು ಪಡೆಯುವ ಮೂಲಕ ಅನುಕೂಲ ಪಡೆದುಕೊಳ್ಳುತ್ತಾರೆ, ಅಧಿಕಾರವನ್ನು ಪಡೆದುಕೊಳ್ಳುತ್ತಾರೆ ಎನ್ನುವ ಭಯ ಬ್ರಾಹ್ಮಣಶಾಹಿ, ಊಳಿಗಮಾನ್ಯಶಾಹಿ ಸಮುದಾಯಗಳಲ್ಲಿ ಮನೆ ಮಾಡಿದೆ.

ಜಾತಿಗಣತಿ ವರದಿ ಬಹಿರಂಗವಾದರೆ ವಾಸ್ತವಿಕ ಅಂಶ ಹೊರಬರುತ್ತದೆ. ಇಡೀ ಕರ್ನಾಟಕದ ಆರೋಗ್ಯ ಪೂರ್ಣವಾದ ಅಭಿವೃದ್ದಿಗೆ ಜಾತಿಗಣತಿ ವರದಿ ಜಾರಿಯಾಗುವ ಜರೂರು ಇದೆ.

ಇದನ್ನೂ ಓದಿ ಜಾತಿ ಗಣತಿಗೆ ವಿರೋಧ; ನಿರ್ದಯಿ ಸಾಮಾಜಿಕ ದ್ರೋಹ

Netra ೧
ಡಾ. ಕೆ.ವಿ. ನೇತ್ರಾವತಿ
+ posts

ಉಪನ್ಯಾಸಕರು, ಕನ್ನಡ ವಿಭಾಗ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಕೆ.ವಿ. ನೇತ್ರಾವತಿ
ಡಾ. ಕೆ.ವಿ. ನೇತ್ರಾವತಿ
ಉಪನ್ಯಾಸಕರು, ಕನ್ನಡ ವಿಭಾಗ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X