ಇಂದು ಮುಂಜಾನೆ (ಜ. 4) ನಿಧನರಾದ ರೈತಮುಖಂಡ ಕಾಂ. ಜಿ ಸಿ ಬಯ್ಯಾರೆಡ್ಡಿ ಅವರ ಹೋರಾಟದ ಬದುಕಿನ ಸಂಪೂರ್ಣ ಪರಿಚಯ ಇಲ್ಲಿದೆ
ಕಾಂ. ಜಿ.ಸಿ. ಬಯ್ಯಾರೆಡ್ಡಿ ಅವರು ಹುಟ್ಟಿದ್ದು ಅಕ್ಟೋಬರ್ 10, 1960ರಂದು, ಅವಿಭಜಿತ ಕೋಲಾರ ಜಿಲ್ಲೆ, ಚಿಂತಾಮಣಿ ತಾಲ್ಲೂಕಿನ ಗಡಿಗವಾರಪಲ್ಲಿಯಲ್ಲಿ. ಅವರ ತಾತ ಚಿಕ್ಕ ಸುಬ್ಬಾರೆಡ್ಡಿ ಬಾಗೇಪಲ್ಲಿ ತಾಲ್ಲೂಕಿನ ಪೋಲನಾಯಕನಹಳ್ಳಿಯವರು. ಬಯ್ಯಾರೆಡ್ಡಿಯವರ ತಾತ ವ್ಯಾಪಾರ–ವ್ಯವಸಾಯ ಎರಡನ್ನೂ ನಡೆಸುತ್ತಿದ್ದ ವ್ಯಕ್ತಿ. ಅವರು ಒಂದಷ್ಟು ಜಮೀನು ಇದ್ದ ಭೂಮಾಲಕರೂ ಅದೇ ಸಮಯದಲ್ಲಿ ವ್ಯಾಪಾರಿಯೂ ಆಗಿದ್ದರು. ಬಯ್ಯಾರೆಡ್ಡಿಯವರ ತಂದೆ ಜಿ.ಎಸ್. ಚೌಡಪ್ಪ. ತಾಯಿ ಬಯ್ಯಮ್ಮ. 1917 ರಲ್ಲಿ ಹುಟ್ಟಿದ ತಂದೆ ಜಿ.ಎಸ್. ಚೌಡಪ್ಪನವರು 7 ತರಗತಿಯಲ್ಲಿ ಇರುವಾಗಲೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿದ್ದವರು. 1930ರ ಸುಮಾರಿನಲ್ಲಿ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ವಕೀಲರಾದ ಪಟ್ಟಾಭಿರಾಮನ್, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ (ಕೆ.ಚೆಂಗಲರಾಯರೆಡ್ಡಿ), ಎಂ.ವಿ. ಕೃಷ್ಣಪ್ಪ ಮುಂತಾದವರ ತಂಡ ಕಾಂಗ್ರೆಸ್ ಕಾರ್ಯಕರ್ತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ಆಗಿನ ನಾಯಕರ ಸಂಪರ್ಕಕ್ಕೆ ಬಂದವರಾಗಿದ್ದರು.
ಬಾಲ್ಯಕಾಲದ ಪ್ರಭಾವಗಳು
1962 ರಲ್ಲಿ ಚಿಂತಾಮಣಿ ವಿಧಾನ ಸಭಾ ಕ್ಷೇತ್ರದ ಶಾಸಕರೂ ಆಗಿದ್ದ ಟಿ.ಕೆ. ಗಂಗೀರೆಡ್ಡಿ ತುಳವನೂರು, ಬಯ್ಯಾರೆಡ್ಡಿಯವರ ತಾಯಿಯ ಅಣ್ಣ ವಿ. ಸೀತಪ್ಪ ಚಿಲಕಲ ನೇರ್ಪು, ಬಯ್ಯಾರೆಡ್ಡಿಯವರ ತಂದೆ ಜಿ.ಎಸ್. ಚೌಡಪ್ಪ ಈ ಮೂವರೂ ಸಂಬಂಧಿಗಳು ಮತ್ತು ಆ ಭಾಗದ ಸ್ವಾತಂತ್ರ್ಯ ಹೋರಾಟಗಾರರು. ಸ್ವಾತಂತ್ರ್ಯ ಚಳವಳಿಯಲ್ಲಿ ಈ ಮೂವರು ಜೈಲಿಗೆ ಹೋಗಿದ್ದರು. ಅವರು ಆಗಿನ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಹತ್ತಿರ ಹತ್ತಿರ ಸುಮಾರು 2 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ.
ಟಿ.ಕೆ.ಗಂಗೀರೆಡ್ಡಿಯವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾರಾಷ್ಟ್ರದ ವಾರ್ಧಾದಲ್ಲಿರುವ ಗಾಂಧಿ ಸೇವಾಶ್ರಮಕ್ಕೆ ಇಲ್ಲಿಂದ ನಡೆದುಕೊಂಡು ಹೋಗಿದ್ದವರು. ಸ್ವಾತಂತ್ರ್ಯಾನಂತರ 1962ರಲ್ಲಿ ಚಿಂತಾಮಣಿ ವಿಧಾನ ಸಭಾ ಕ್ಷೇತ್ರದಿಂದ ಆಗಿನ ಕಾಂಗ್ರೆಸ್ ವಿರೋಧಿ ಕೂಟವಾದ ‘ಸಂಯುಕ್ತ ರಂಗ’ದ ಭಾಗವಾಗಿ ಅವಿಭಜಿತ ಕಮ್ಯುನಿಸ್ಟ್ ಪಕ್ಷ -ಸಿಪಿಐನಿಂದ, ಸೈಕಲ್ ಗುರುತಿನಲ್ಲಿ ಸ್ಪರ್ಧಿಸಿ ಗೆದ್ದು ಶಾಸಕರಾಗಿದ್ದರು. ವಿ. ಸೀತಪ್ಪನವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರೂ ಆಗಿದ್ದರು. ಅಲ್ಲದೇ ಎರಡು ಬಾರಿ ಚಿಂತಾಮಣಿ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಯ್ಯಾರೆಡ್ಡಿಯವರು ಸಣ್ಣವರಿದ್ದಾಗಿನಿಂದ ಹಿಡಿದು ಕಾಲೇಜಿಗೆ ಬರುವವರೆಗೂ ದಿನ ನಿತ್ಯ ಸ್ವಾತಂತ್ರ್ಯ ಚಳವಳಿಯ ವಿಷಯ, ನಾನಾ ಸಾಮಾಜಿಕ ವಿಚಾರಗಳು ಚರ್ಚೆಯಾಗುತ್ತಿದ್ದ ವಾತಾವರಣದಲ್ಲಿ ಬೆಳೆದರು. ಬಯ್ಯಾರೆಡ್ಡಿಯವರ ಅಣ್ಣ ವಕೀಲರಾಗಿರುವ ಜಿ.ಸಿ. ಶಿವಶಂಕರ್ ಅವರು ಸಹ ಕಾಲೇಜಿನಲ್ಲಿ ಓದುವಾಗ ವಿದ್ಯಾರ್ಥಿ ಮುಖಂಡರಾಗಿದ್ದರು. ನಂತರ ಅಣ್ಣ ಜಿ.ಸಿ. ಶಿವಶಂಕರ್ 20-25 ವರ್ಷ ಪಂಚಾಯ್ತಿ ಸದಸ್ಯರಾಗಿ ಸಹ ದುಡಿದವರು. ಮತ್ತೊಬ್ಬ ಅಣ್ಣ ಜಿ.ಸಿ. ಶಿವರಾಮ್ ಸಹ ಕಾಂಗ್ರೆಸ್ ಪಕ್ಷದ ಮುಖಂಡರು. ಇಂತಹ ಮನೆಯ ವಾತಾವರಣ, ಅವರ ಹತ್ತಿರದ ಸಂಬಂಧಿಕರ ಚಟುವಟಿಕೆಗಳ ಪ್ರಭಾವದಲ್ಲಿ ಬಯ್ಯಾರೆಡ್ಡಿಯವರು ಹಲವು ಸಾಮಾಜಿಕ ರಾಜಕೀಯ ವಿಚಾರಗಳ ಕುರಿತು ಆಸಕ್ತಿ ಬೆಳೆಸಿಕೊಂಡರು.
ವಿದ್ಯಾರ್ಥಿ ಚಳವಳಿಗೆ ಸೇರಿದ್ದು
ಜಿ.ಸಿ. ಬಯ್ಯಾರೆಡ್ಡಿಯವರ ಇಡೀ ಕುಟುಂಬದಲ್ಲಿ ಒಂದು ಬಗೆಯ ವೈಚಾರಿಕ ವಾತಾವರಣ ಇತ್ತು. ಪೂಜೆ, ಪುನಸ್ಕಾರಗಳು ಹೆಚ್ಚು ಇರುತ್ತಿರಲಿಲ್ಲ. 1973ನೇ ಇಸವಿಯಲ್ಲಿ ಬಯ್ಯಾರೆಡ್ಡಿಯವರು ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಬಯ್ಯಾರೆಡ್ಡಿಯವರ ಸೋದರ ಮಾವ ಸೀತಪ್ಪ ಚಿಂತಾಮಣಿ ವಿಧಾನಸಭೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ. ಈಗಿನ ಚಿಂತಾಮಣಿ ಕ್ಷೇತ್ರದ ಶಾಸಕರು, ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ. ಸುಧಾಕರರವರ ಅಪ್ಪ ಚೌಡರೆಡ್ಡಿಯವರು ಆಗ ಬಂಡಾಯ ಕಾಂಗ್ರೆಸ್ ಅಭ್ಯರ್ಥಿ. ಕಮ್ಯುನಿಸ್ಟ್ ಪಕ್ಷದ ಪ್ರಭಾವವಿದ್ದ ಚಿಂತಾಮಣಿ ಕ್ಷೇತ್ರವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಆಗಿನ ಯುವಜನ ಮುಖಂಡರಾಗಿದ್ದ ಜಿ.ವಿ. ಅಶ್ವಥ ನಾರಾಯಣರೆಡ್ಡಿ (ಜಿ.ವಿ.ಶ್ರೀರಾಮರೆಡ್ಡಿಯವರ ಅಣ್ಣ)ಯವರನ್ನು ಸಿಪಿಐ(ಎಂ) ಪಕ್ಷದಿಂದ ಅಭ್ಯರ್ಥಿಯನ್ನಾಗಿ ಮಾಡಲಾಗಿತ್ತು. 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಯಿತು. ತುರ್ತು ಪರಿಸ್ಥಿತಿಯ ಈ ಸಮಯದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ಅವರು ಬಡವರಿಗೆ ಭೂಮಿ ಕೊಡುತ್ತಿದ್ದಾರೆ, 20 ಅಂಶಗಳ ಕಾರ್ಯಕ್ರಮವನ್ನು ಜಾರಿ ಮಾಡುತ್ತಿದ್ದಾರೆ, ಇಂದಿರಾ ಗಾಂಧಿಯವರು ಬಡವರ ಪರ ಇದ್ದಾರೆ ಎಂಬ ಭಾವನೆಗಳ ಆಧಾರದಲ್ಲಿ ಬಯ್ಯಾರೆಡ್ಡಿಯವರು ಕಾಂಗ್ರೆಸ್ ಪಕ್ಷದ ಪರವಾಗಿದ್ದರು. ಚಿಂತಾಮಣಿಯಲ್ಲಿ ಇಂದಿರಾ ಗಾಂಧಿಯವರು ಪಾಲ್ಗೊಂಡ ಬಹಿರಂಗ ಸಭೆ ನಡೆದಾಗ ಸಕ್ರಿಯವಾಗಿ ಭಾಗವಹಿಸಿದ್ದರು.
ಇಂತಹ ಪರಿಸ್ಥಿತಿಯಲ್ಲಿ ಎಸ್.ಎಫ್.ಐ. ಸಂಘಟನೆಯ ಎರಡನೇ ತಲೆಮಾರಿನ ನಾಯಕರಾದ ಮುನಿ ನಾರಾಯಣಸ್ವಾಮಿ, ಕೆ.ವಿ. ಸತ್ಯ ನಾರಾಯಣ ಮುಂತಾದವರು ಚಿಂತಾಮಣಿಯಲ್ಲಿ ವಿದ್ಯಾರ್ಥಿಗಳನ್ನು ಸಂಘಟಿಸಲು ಕೆಲಸ ಮಾಡುತ್ತಿದ್ದರು. ಆಗ ಚಿಂತಾಮಣಿಯಲ್ಲಿ ವಿದ್ಯಾರ್ಥಿಗಳಾದ ಹರೀಂದ್ರ, ಶಿವಾರೆಡ್ಡಿ, ಸುಬ್ಬಾರೆಡ್ಡಿ, ಬಯ್ಯಾರೆಡ್ಡಿ ಮುಂತಾದವರು ಸ್ನೇಹಿತರಾಗಿದ್ದರು. ಕಾಲೇಜು ಚುನಾವಣೆ ಬಂದಾಗ ಎನ್.ಎಸ್.ಯು.ಐ. ನಿಂದ ಸ್ಪರ್ಧಿಸಬೇಕೆಂಬ ಆಸಕ್ತಿಯೂ ಬಯ್ಯಾರೆಡ್ಡಿಯವರಿಗೆ ಇತ್ತು. ಆದರೆ ಮುಂದೆ ಬಯ್ಯಾರೆಡ್ಡಿಯವರು 1978ರಲ್ಲಿ ಎಸ್.ಎಫ್.ಐ. ಸೇರಿದರು.

ಈ ಹಂತದಲ್ಲಿ ಅವರನ್ನು ಎಸ್.ಎಫ್.ಐ. ಸಂಘಟನೆಗೆ ಸೆಳೆಯಬೇಕೆಂದು ಮುನಿ ನಾರಾಯಣಸ್ವಾಮಿ ಮತ್ತು ಕೆ.ವಿ. ಸತ್ಯ ನಾರಾಯಣ ಪ್ರಯತ್ನಿಸುತ್ತಿದ್ದರು. ಆಗಿನ ಎಸ್.ಎಫ್.ಐ. ರಾಜ್ಯ ಮುಖಂಡರಾಗಿದ್ದ ಎಸ್.ಆರ್. ಆರಾಧ್ಯ ಅವರು ಚಿಂತಾಮಣಿಗೆ ಬಂದು ಮನವೊಲಿಸಿ ಎಸ್.ಎಫ್.ಐ. ಸೇರಲು ಬಯ್ಯಾರೆಡ್ಡಿಯವರನ್ನು ಒಪ್ಪಿಸಿದರು. ಮುನಿ ನಾರಾಸ್ವಾಮಿಯವರು ಪ್ರಸಿದ್ಧ ‘ತಾತಗುಣಿ’ ಎಸ್ಟೇಟ್ ಕಾರ್ಮಿಕರ ಬಗೆಗೆ, ನೆರೆಯ ಆಂಧ್ರದ ಚಾರಿತ್ರಿಕ ತೆಲಂಗಾಣ ಹೋರಾಟದ ಕುರಿತು ವಿವರಿಸಿದ್ದು ಸಹ ಬಯ್ಯಾರೆಡ್ಡಿಯವರ ಮೇಲೆ ಪ್ರಭಾವ ಬೀರಿತು.
ಚಳವಳಿಯಲ್ಲಿ ಹೆಜ್ಜೆಗಳು
ಆ ಸಮಯದಲ್ಲಿ ಬಯ್ಯಾರೆಡ್ಡಿಯವರಿಗೆ ಆರೋಗ್ಯದ ಸಮಸ್ಯೆ (ಕ್ಷಯ) ಎದುರಾಯಿತು. ಆದರೂ ಸಂಘಟನೆಯ ಕೆಲಸ ನಿಲ್ಲಿಸಲಿಲ್ಲ. ಸಂಗಾತಿಗಳಾದ ಹರೀಂದ್ರ, ಶಿವಾರೆಡ್ಡಿ ಮುಂತಾದವರ ಜೊತೆ ಉತ್ಸಾಹದಲ್ಲಿ ಕೆಲಸ ಮಾಡಿದರು. ಈ ಹಂತದಲ್ಲಿ ಚಿಂತಾಮಣಿಯಲ್ಲಿ ಎಸ್.ಎಫ್.ಐ. ಸಂಘಟನೆಯ ಮೂರನೇ ರಾಜ್ಯ ಸಮ್ಮೇಳನವನ್ನು ನಡೆಸಬೇಕೆಂದು ತೀರ್ಮಾನವಾಗಿ ಅದನ್ನು ಯಶಶ್ವಿಗೊಳಿಸಲು ಶ್ರಮಿಸಿದರು. ಆ ಸಂದರ್ಭದಲ್ಲಿ ಎಂ.ಕೆ. ಭಟ್ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಆಗಿದ್ದು, ವಿದ್ಯಾರ್ಥಿ ಸಮ್ಮೇಳನದ ಯಶಸ್ಸಿಗೆ ಬೆಂಬಲ ನೀಡಿದ್ದ ಎಂ.ಕೆ. ಭಟ್ ಅವರು ಬಯ್ಯಾರೆಡ್ಡಿಯವರ ಮೇಲೆ ಪ್ರಭಾವ ಬೀರಿದರು. ಸಮ್ಮೇಳನದ ಸಿದ್ಧತೆಯ ಭಾಗವಾಗಿ ನಿಧಿ ಸಂಗ್ರಹ ಇತ್ಯಾದಿಗಳಿಗೆ ಜನರ ಬಳಿ ತೆರಳಿದಾಗ, ಬಯ್ಯಾರೆಡ್ಡಿಯವರಿಗೆ ಚಿಂತಾಮಣಿಯ ಜನರಿಂದ ಎ.ಕೆ.ಗೋಪಾಲನ್ ಅವರ ಭೂ ಹೋರಾಟಗಳು, ಅವರ ಸರಳತೆ, ಮಹಾ ವ್ಯಕ್ತಿತ್ವದ ಬಗೆಗೆ ತಿಳಿದು ಅದರಿಂದ ಬಹಳಷ್ಟು ಪ್ರಭಾವಿತರಾದರು.
ಎಸ್.ಎಫ್.ಐ.ನ ಅಂದಿನ ಅಖಿಲ ಭಾರತ ಜಂಟಿ ಕಾರ್ಯದರ್ಶಿ, ಆಗಿನ ಕಾಲದ ಅತಿ ಕಿರಿಯ ಸಂಸದರಾಗಿದ್ದ ಕಾಂ. ಸೈಫುದ್ಧೀನ್ ಚೌಧರಿಯವರು ಎಸ್.ಎಫ್.ಐ. ಸಮ್ಮೇಳನಕ್ಕೆ ಮಾರ್ಗದರ್ಶಕರಾಗಿ ಬಂದಿದ್ದು ಅವರಿಂದಲೂ ಬಯ್ಯಾರೆಡ್ಡಿಯವರು ಪ್ರಭಾವಿತರಾದರು. ಇದಾದ ನಂತರ ಬಯ್ಯಾರೆಡ್ಡಿಯವರು 1981ರಲ್ಲಿ ಮುಂಬೈನಲ್ಲಿ ನಡೆದ ಎಸ್.ಎಫ್.ಐ. ಅಖಿಲ ಭಾರತ ಸಮ್ಮೇಳನದಲ್ಲಿ ಪಾಲ್ಗೊಂಡರು. ಈ ನಡುವೆ ಚಿಂತಾಮಣಿಯ ಕಾಂಗ್ರೆಸ್ ಮುಖಂಡರು, ಮುಂದೆ ರಾಜ್ಯ ಸರಕಾರದಲ್ಲಿ ಮಂತ್ರಿಯೂ ಆದ ಕೆ.ಎಂ. ಕೃಷ್ಣಾರೆಡ್ಡಿಯವರು ಹೇರಿದ ಒತ್ತಡಗಳು ಮತ್ತು ವಿರೋಧದ ನಡುವೆಯೂ ಬಯ್ಯಾರೆಡ್ಡಿಯವರು ಎಸ್.ಎಫ್.ಐ.ನಲ್ಲಿ ಕ್ರಿಯಾಶೀಲರಾಗಿಯೇ ಮುಂದುವರಿದರು. ಚಟುವಟಿಕೆಗಳನ್ನು ನಿಲ್ಲಿಸಲಿಲ್ಲ.
ಆಗಿನ ಸಿಪಿಐ(ಎಂ) ಕಾರ್ಯದರ್ಶಿ ಎಂ.ಕೆ.ಭಟ್ ಪ್ರಭಾವವೂ ಸೇರಿ ಬಯ್ಯಾರೆಡ್ಡಿಯವರ ಉತ್ಸಾಹದಲ್ಲಿ ಕೆಲಸ ಮಾಡಿದರು. ಅವಿಭಜಿತ ಕೋಲಾರ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಸಂಘಟನೆಯನ್ನು ವಿಸ್ತರಿಸಿತು. ಆ ಹಂತದಲ್ಲಿ ಹರೀಂದ್ರ, ಶಿವಾರೆಡ್ಡಿಯವರು ಚಿಂತಾಮಣಿಗೆ ಹೆಚ್ಚಿನ ಗಮನ ನೀಡುತ್ತಿದ್ದರೆ ಬಯ್ಯಾರೆಡ್ಡಿಯವರು ಜಿಲ್ಲೆಯ ಬೇರೆ ಬೇರೆ ತಾಲ್ಲೂಕುಗಳಿಗೆ ಓಡಾಡುತ್ತಿದ್ದರು. ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಶಿಡ್ಲಘಟ್ಟ, ಗೌರಿಬಿದನೂರು, ಗುಡಿಬಂಡೆ, ಶ್ರೀನಿವಾಸಪುರ, ಮುಳಬಾಗಿಲು, ಕೆ.ಜಿ.ಎಫ್. ಬಂಗಾರಪೇಟೆ… ಹೀಗೆ ಎಲ್ಲ ತಾಲ್ಲೂಕುಗಳಲ್ಲಿ ಎಸ್.ಎಫ್.ಐ. ಘಟಕಗಳು ರಚನೆಯಾಗಿ ಹಲವಾರು ಹೋರಾಟಗಳು ನಡೆದವು.
ಐತಿಹಾಸಿಕ ನರಗುಂದ, ನವಲಗುಂದ ರೈತ ಬಂಡಾಯದಲ್ಲಿ ಭಾಗಿ
ಆರೋಗ್ಯ ಸಮಸ್ಯೆಯ ಜೊತೆಗೇ ಕೆಲಸ ಮಾಡುತ್ತಿದ್ದ ಬಯ್ಯಾರೆಡ್ಡಿಯವರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಆಗಿನ ಎಸ್.ಎಫ್.ಐ. ರಾಜ್ಯ ಮುಖಂಡರಾಗಿದ್ದ ಎಸ್.ಆರ್. ಆರಾಧ್ಯ ಚಿಕಿತ್ಸೆ ಕೊಡಿಸುತ್ತಿದ್ದರು. ಈ ಮಧ್ಯೆ ಗುಂಡೂರಾಯರ ನೇತೃತ್ವದ ದೌರ್ಜನ್ಯ, ದಬ್ಬಾಳಿಕೆ, ಜನವಿರೋಧಿ ನೀತಿಗಳ ವಿರುದ್ಧ 1981ರಲ್ಲಿ ಐತಿಹಾಸಿಕ ನರಗುಂದ, ನವಲಗುಂದ ರೈತ ಬಂಡಾಯ ಸ್ಪೋಟಿಸಿತು.
ಆಗಿನ ಮುಖ್ಯಮಂತ್ರಿ ಗುಂಡೂರಾಯರು ಚಳವಳಿ ಮಾಡುತ್ತಿದ್ದ ರೈತರನ್ನು ಬಾಡಿಗೆ ರೈತರು ಎಂದು ಕರೆದು ಅವಮಾನಿಸಿದ್ದು ಎಲ್ಲ ಕಡೆ ಆಕ್ರೋಶವನ್ನು ಹುಟ್ಟು ಹಾಕಿತ್ತು. ಈ ದುಷ್ಟತನದ ಧೋರಣೆ ವಿರುದ್ದ ವ್ಯಾಪಕವಾಗಿ ಪ್ರತಿಭಟನೆಗಳು ಆರಂಭವಾದವು. ಕೋಲಾರ ಜಿಲ್ಲೆಯಲ್ಲಿ ಎಸ್.ಎಫ್.ಐ.ನಿಂದ ಪ್ರತಿಭಟನೆ ನಡೆಯಿತು. ಚಿಂತಾಮಣಿ ಸರಕಾರಿ ಕಾಲೇಜಿನಲ್ಲಿಯೇ ಸುಮಾರು 1,000 ವಿದ್ಯಾರ್ಥಿಗಳಿದ್ದರು. ಒಟ್ಟಾರೆ ಸುಮಾರು 1,500 ವಿದ್ಯಾರ್ಥಿಗಳ ಬೃಹತ್ ಮೆರವಣಿಗೆ ಹೊರಟಿತು. ಪೊಲೀಸ್ ಪಡೆ ಮೆರವಣಿಗೆಯನ್ನು ತಡೆಯಲು ಪ್ರಯತ್ನಿಸುತ್ತಿತ್ತು. ಚಿಂತಾಮಣಿಯಲ್ಲಿ ಅವತ್ತು ಬಾರಿ ಪೊಲೀಸ್ ಪಡೆಯ ಪಹರೆ ಇತ್ತು. ಸುಮಾರು 300 ರಷ್ಟು ಪೊಲೀಸರನ್ನು ವಿದ್ಯಾರ್ಥಿಗಳನ್ನು ನಿಯಂತ್ರಿಸಲು ನಿಯೋಜಿಸಲಾಗಿತ್ತು. ಕಾಲೇಜಿನಿಂದ ಸುಮಾರು 200-300 ಮೀಟರ್ ದೂರದಲ್ಲಿ ಸರ್ಕಲ್ನಲ್ಲಿ ಘರ್ಷಣೆ-ಗಲಾಟೆಗಳು ಶುರುವಾಯಿತು. ಪೊಲೀಸರು ಅತಿರೇಕದ ನಡವಳಿಕೆ ತೋರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದರು. ಟೀಯರ್ ಗ್ಯಾಸ್ಗಳನ್ನು ಸಿಡಿಸಿದರು. ವಿದ್ಯಾರ್ಥಿಗಳು ಪೊಲೀಸರ ದೌರ್ಜನ್ಯವನ್ನು ತೀವ್ರವಾಗಿ ಪ್ರತಿಭಟಿಸಿದರು. ಕೊನೆಗೆ ಪೋಲೀಸರು ಗುಂಡು ಹಾರಿಸಿ ಫೈರಿಂಗ್ನಲ್ಲಿ ಶಿವಾನಂದ ಎಂಬ ಯುವಕ ಪ್ರಾಣ ಕಳೆದುಕೊಂಡ. ವಿದ್ಯಾರ್ಥಿಗಳೆಲ್ಲಾ ಚೆಲ್ಲಾಪಿಲ್ಲಿಯಾದರು. ಈ ಸಂದರ್ಭದಲ್ಲಿ ಬಯ್ಯಾರೆಡ್ಡಿ ಮುಂತಾದವರು ಪೊಲೀಸರಿಂದ ತಪ್ಪಿಸಿಕೊಳ್ಳಲು ಸುರಕ್ಷಿತ ಜಾಗಗಳಿಗೆ ಹೋದರು. ಈ ಬೆಳವಣಿಗೆಯ ನಂತರ ಬಯ್ಯಾರೆಡ್ಡಿಯವರು ಬೆಂಗಳೂರಿನ ಸುಲ್ತಾನ್ ಪೇಟೆಯಲ್ಲಿದ್ದ ಸಿಪಿಐ(ಎಂ) ಪಕ್ಷದ ರಾಜ್ಯ ಸಮಿತಿ ಕಚೇರಿಗೆ ಬಂದರು. ಅಲ್ಲಿನ ಸಂಗಾತಿಗಳ ಪರಿಚಯ-ಬಾಂಧವ್ಯ ಬೆಳೆಯಿತು.
ಆಗ ನರಗುಂದ ನವಲಗುಂದ ರೈತ ಚಳವಳಿಯನ್ನು ಸಮನ್ವಯ ಮಾಡುತ್ತಿದ್ದ ಕೇಂದ್ರವು ಈಗ ಬಿ.ಎಂ.ಟಿ.ಸಿ. ಬಸ್ ನಿಲ್ದಾಣ ಇರುವ ಜಾಗದಲ್ಲಿತ್ತು. ಆಗ ಜನತಾ ಪಕ್ಷ, ಸಿಪಿಐ, ಸಿಪಿಐ(ಎಂ) ಮುಂತಾದ ಪಕ್ಷಗಳೆಲ್ಲಾ ಸೇರಿ ‘ಜನತಾ ರಂಗ’ ಎಂಬ ವೇದಿಕೆಯನ್ನು ಮಾಡಿಕೊಂಡು ರೈತ ಚಳವಳಿಯ ಬೆಂಬಲಕ್ಕೆ ನಿಂತಿದ್ದವು. ಚಿಂತಾಮಣಿಯ ಹೋರಾಟಗಾರರು ಉಳಿಯಲು ಸಿಪಿಐ(ಎಂ) ಪಕ್ಷದ ಕಚೇರಿ ಕೂಡ ಸುರಕ್ಷಿತ ಜಾಗ ಅಲ್ಲ ಎಂದು ಹೇಳಿ ಬಯ್ಯಾರೆಡ್ಡಿಯವರನ್ನು ಆ ರೈತ ಚಳವಳಿಯ ಕೇಂದ್ರಕ್ಕೆ ಕಳಿಸಿಕೊಡಲಾಯಿತು. ಅವರು ಆ ಟೆಂಟ್ನಲ್ಲಿ 2-3 ದಿನ ಇದ್ದರು. ರೈತರು ಜಾಥಾದಲ್ಲಿ ಸಾಗಿ ಬರುವಾಗ ಜನರು ಕೊಟ್ಟ ರೊಟ್ಟಿ ಹೆಚ್ಚಾಗಿ ಅವನ್ನು ಆ ಟೆಂಟ್ನಲ್ಲಿ ಸಂಗ್ರಹ ಮಾಡಿ ಇಡಲಾಗಿತ್ತು. ಅಷ್ಟು ಜನ ಬೆಂಬಲ ಚಳವಳಿಗೆ ಇತ್ತು. ಬಯ್ಯಾರೆಡ್ಡಿಯವರು ಇದಕ್ಕೆಲ್ಲಾ ಸಾಕ್ಷಿಯಾದರು.

ಚಿಂತಾಮಣಿ ವಿದ್ಯಾರ್ಥಿಗಳ ಹೋರಾಟ ವಿಷಯದಲ್ಲಿ ವಿದ್ಯಾರ್ಥಿ ನಾಯಕರ ವಿರುದ್ಧ ಪೊಲೀಸ್ ಮೊಕದ್ದಮೆಗಳು ದಾಖಲಾದವು. ಬಯ್ಯಾರೆಡ್ಡಿಯವರು ಎ-2. ಬೆಂಗಳೂರಿನಿಂದ ಹೋರಾಟಗಾರರಿಗೆ ವಕೀಲ ಸಂಗಾತಿಗಳ ಸಹಾಯ, ಮಾರ್ಗದರ್ಶನ ದೊರಕಿತು. ಸ್ವಲ್ಪ ದಿನ ಆದ ಮೇಲೆ ಮತ್ತೆ ಬಯ್ಯಾರೆಡ್ಡಿಯವರು ಕಾಲೇಜಿಗೆ ಹೊರಟರು. ಮತ್ತೊಂದು ಕಡೆ ರೈತ ಚಳವಳಿಯ ಕಾವು ಜೋರಾಗುತ್ತಿತ್ತು. ಹುತಾತ್ಮ ಯುವಕ ಶಿವಾನಂದ ನೆನಪಿನ ಜ್ಯೋತಿ ಹಿಡಿದುಕೊಂಡು ಪಾದಯಾತ್ರೆ ನಡೆಸಲಾಯಿತು. ರಾಜ್ಯ ರಾಜಕೀಯ ಪರಿಸ್ಥಿತಿಯನ್ನೇ ಬದಲಿಸಿದ ಆ ಐತಿಹಾಸಿಕ ರೈತ ಹೋರಾಟ, ರೈತ-ಕಾರ್ಮಿಕರ ಸಖ್ಯತೆ ಇವುಗಳನ್ನು ಕಂಡು ಬಯ್ಯಾರೆಡ್ಡಿಯವರು ಚಳವಳಿಯಲ್ಲಿ ಗಟ್ಟಿಯಾದರು. ರೈತ-ಕಾರ್ಮಿಕರ-ವಿದ್ಯಾರ್ಥಿಗಳ ಈ ಹೋರಾಟದ ಫಲವಾಗಿ ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮ ಕಾಂಗ್ರೆಸೇತರ ಸರಕಾರವಾದ ಜನತಾ ಪಕ್ಷದ ಸರಕಾರ ಅಧಿಕಾರಕ್ಕೆ ಬಂದಿತು. ಕರ್ನಾಟಕದ ರಾಜಕಾರಣದ ಮಹತ್ವದ ಮೈಲುಗಲ್ಲು, ರೈತ-ಕಾರ್ಮಿಕರ ಮತ್ತು ವಿದ್ಯಾರ್ಥಿಗಳ ಈ ಕಾಲಾವಧಿಯ ಹೋರಾಟ. ಇದಲ್ಲದೇ ಇದೇ ಸಮಯದಲ್ಲಿ ಎಸ್.ಎಫ್.ಐ.ನ ಬಾಂಬೆ ಅಖಿಲ ಭಾರತ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮತ್ತಷ್ಟು ಗಟ್ಟಿಯಾದರು.
1984ರಲ್ಲಿ ಬೆಂಗಳೂರಿನಲ್ಲಿ ನಡೆದ ಎಸ್.ಎಫ್.ಐ. ರಾಜ್ಯ ಸಮ್ಮೇಳನದಲ್ಲಿ ಅವರು ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಯ್ಯಾರೆಡ್ಡಿಯವರು 1988ರ ಜನವರಿಯಲ್ಲಿ ಗುಲ್ಬರ್ಗಾದಲ್ಲಿ ನಡೆದ ಎಸ್.ಎಫ್.ಐ. ರಾಜ್ಯ ಸಮ್ಮೇಳನದಲ್ಲಿ ಎಸ್.ಎಫ್.ಐ. ರಾಜ್ಯ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು. ವಿದ್ಯಾರ್ಥಿ ಚಳವಳಿಯಿಂದ 1994ರಲ್ಲಿ ಬಿಡುಗಡೆಯಾದ ನಂತರ ಕರ್ನಾಟಕ ಪ್ರಾಂತ ರೈತ ಸಂಘದ ಜವಾಬ್ದಾರಿಯನ್ನು ವಹಿಸಿಕೊಂಡು ಸಾಮೂಹಿಕ ಚಳವಳಿಯನ್ನು ಕಟ್ಟಲು ಶ್ರಮಿಸಿದರು. ಮುಂದೆ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ನಂತರ ರಾಜ್ಯ ಅಧ್ಯಕ್ಷರಾಗಿ ಇಲ್ಲಿಯವರೆಗೂ ಕೆಲಸ ಮಾಡುತ್ತಾ ಬಂದಿದ್ದರು.
1991ರಲ್ಲಿ ಮಂಗಳೂರಿನಲ್ಲಿ ನಡೆದ ಸಿಪಿಐ(ಎಂ)ನ ರಾಜ್ಯ ಸಮ್ಮೇಳನದಲ್ಲಿ ರಾಜ್ಯ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು. ನಂತರದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯರಾಗಿ ಶಮಿಸುತ್ತಾ ಬಂದಿದ್ದರು. ಆರೋಗ್ಯ ಸಮಸ್ಯೆಗೆ ಬೆಂಗಳೂರಿನ ಸುಗುಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಜ.4 ರಂದು ನಿಧನರಾದರು.
***
ಕೆಪಿಆರ್ಎಸ್ ಸಂತಾಪ
ಸುಮಾರು ನಲವತ್ತು ವರ್ಷಗಳ ಕಾಲದ ರೈತ ಚಳವಳಿ ಮುನ್ನಡೆಸಿದ್ದ ಅಪಾರ ಅನುಭವಿ ರೈತ ನಾಯಕನ ಸಾವಿನಿಂದ ರಾಜ್ಯದ ಐಕ್ಯ ರೈತ ಚಳವಳಿಗೆ ಹಾಗೂ ಎಡಪಂಥೀಯ ರೈತ ಹೋರಾಟಕ್ಕೆ ಬಹಳ ದೊಡ್ಡ ಹಿನ್ನಡೆ ಉಂಟಾಗಿದ್ದು ಸಾಮೂಹಿಕ ಪ್ರಯತ್ನದಿಂದ ಅವರ ಹೋರಾಟವನ್ನು ಮುಂದುವರೆಸುವುದು ಕಾಂ.ಜಿಸಿ ಬಯ್ಯಾರೆಡ್ಡಿ ಅವರಿಗೆ ಸಲ್ಲಿಸುವ ಸರಿಯಾದ ಶ್ರದ್ಧಾಂಜಲಿ ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್) ಕರ್ನಾಟಕ ರಾಜ್ಯ ಸಮಿತಿ ಅಭಿಪ್ರಾಯಪಟ್ಟಿದೆ.
ಅಂತ್ಯಕ್ರಿಯೆ ನಾಳೆ
ಜನವರಿ 5 ರಂದು ಬೆಳಗ್ಗೆ 10 ಗಂಟೆಗೆ ಹುಟ್ಟೂರಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.
ಯು ಬಸವರಾಜ, ರಾಜ್ಯ ಉಪಾಧ್ಯಕ್ಷರು
ಟಿ ಯಶವಂತ, ರಾಜ್ಯ ಪ್ರಧಾನ ಕಾರ್ಯದರ್ಶಿ