ಕಾಂಗ್ರೆಸ್ ಅಧ್ಯಕ್ಷ ಖರ್ಗೆ; ಒಮ್ಮತ ಸಲಹೆ ಸಮಾಲೋಚನೆಗಳಿಗೆ ತೆರೆದ ಮನಸಿನ ನಿಷ್ಠುರ ನಾಯಕ

Date:

Advertisements

ಇದೇ ಅಕ್ಟೋಬರ್ 26ಕ್ಕೆ ಖರ್ಗೆಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಒಂದು ವರ್ಷದ ಅವಧಿ ಪೂರ್ಣಗೊಳಿಸಲಿದ್ದಾರೆ. ಎರಡೂವರೆ ದಶಕಗಳ ನಂತರ ಗಾಂಧಿ ಕುಟುಂಬದಾಚೆಗೆ ಮೊತ್ತಮೊದಲ ಕಾಂಗ್ರೆಸ್ ಅಧ್ಯಕ್ಷರಾದವರು ಖರ್ಗೆ. ಅವರಿಗೀಗ 81 ವರ್ಷದ ಪ್ರಾಯ. ಸ್ವಂತ ನಿರ್ಧಾರ ತೆಗೆದುಕೊಳ್ಳಬಲ್ಲರು. ದೃಢವಾಗಿ ವರ್ತಿಸುವ ಜೊತೆ ಜೊತೆಗೆ ಇತರರ ಅಭಿಮತಗಳಿಗೂ ಅವಕಾಶ ನೀಡಬಲ್ಲರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಕನ್ನಡಿಗರೂ ಆದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಇದೇ 26ಕ್ಕೆ ವರ್ಷ ತುಂಬುತ್ತದೆ. ನಿಷ್ಠುರ ನಿರ್ಧಾರಗಳ ದೃಢಚಿತ್ತದ ಜೊತೆಗೆ ಸಲಹೆ ಸಮಾಲೋಚನೆಗಳಿಗೆ ಮುಕ್ತ ಮನಸ್ಸಿನವರು ತಾವೆಂದು ತೋರಿಸಿದ್ದಾರೆ. ಸ್ವತಂತ್ರ ಹಾದಿ ತುಳಿಯಲು ಹಿಂಜರಿಯದ ಅವರು ಗಾಂಧಿ ಕುಟುಂಬದ ಇಂಗಿತಗಳನ್ನು ನಡೆಸಿಕೊಟ್ಟಿದ್ದಾರೆ.

2022ರ ಡಿಸೆಂಬರ್ ತಿಂಗಳು. ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಎರಡೇ ತಿಂಗಳಾಗಿತ್ತು. ವಿಧಾನಸಭೆ ಚುನಾವಣೆಗಳು ಸಮೀಪಿಸಿದ್ದ ಈ ರಾಜ್ಯದಲ್ಲಿ ಕಾಂಗ್ರೆಸ್ ಘಟಕ ಹೋಳಾಗುವ ಸಾಧ್ಯತೆಯಿದೆ ಎಂಬ ವರ್ತಮಾನ ಖರ್ಗೆಯವರನ್ನು ಮುಟ್ಟಿತ್ತು. ತುರ್ತಾಗಿ ದಿಗ್ವಿಜಯಸಿಂಗ್ ಅವರನ್ನು ಕಳಿಸಲು ತೀರ್ಮಾನಿಸಿದ್ದರು. ಈ ಕುರಿತು ಖರ್ಗೆ ಕಳಿಸಿದ್ದ ಟಿಪ್ಪಣಿಯು ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಲ್ಲಿ ಒಬ್ಬರಾದ ಕೆ.ಸಿ.ವೇಣುಗೋಪಾಲ್ ಅವರಲ್ಲಿ ಅಚ್ಚರಿ ಮೂಡಿಸಿತ್ತು. ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತರೆಡ್ಡಿ ಅವರ ಉಚ್ಚಾಟನೆಗೆ ಆಗ್ರಹಿಸಿತ್ತು ರಾಜ್ಯ ಕಾಂಗ್ರೆಸ್ಸಿಗರ ಒಂದು ವರ್ಗ. ಎಐಸಿಸಿ ಪರವಾಗಿ ತೆಲಂಗಾಣ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮಾಣಿಕಂ ಟಾಗೂರ್, ರೇವಂತ ರೆಡ್ಡಿಯವರ ಏಕಪಕ್ಷೀಯ ನಡವಳಿಕೆಯನ್ನು ಬೆಂಬಲಿಸುತ್ತಿದ್ದು ತಮ್ಮ ದೂರು ದುಮ್ಮಾನಗಳಿಗೆ ಕಿವಿಗೊಡುತ್ತಿಲ್ಲ ಎಂಬುದೂ ಈ ವರ್ಗದ ಅಸಮಾಧಾನವಾಗಿತ್ತು. ವೇಣುಗೋಪಾಲ್ ಅವರ ಸಮೀಪವರ್ತಿ ಟಾಗೂರ್, ರಾಹುಲ್ ತಂಡದ ಸದಸ್ಯ.

Advertisements

2023ರ ಜನವರಿ ಮೊದಲ ವಾರ. ಟಾಗೂರ್ ಅವರನ್ನು ಗೋವಾಕ್ಕೆ ವರ್ಗಾಯಿಸಿದ ಖರ್ಗೆ, ತೆಲಂಗಾಣ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿಯನ್ನು ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಮಾಣಿಕರಾವ್ ಠಾಕ್ರೆ ಅವರಿಗೆ ವಹಿಸಿದರು. ರಾಹುಲ್ ಮೂಗು ತೂರಿಸಲಿಲ್ಲ, ವಿರೋಧಿಸಲೂ ಇಲ್ಲ. ಕಾಂಗ್ರೆಸ್ ಕಾರ್ಯಕರ್ತರು ಪದಾಧಿಕಾರಿಗಳ ನಡುವೆ ರೇವಂತ್ ಅಪಾರ ಜನಪ್ರಿಯ ನಾಯಕ ಎಂಬುದನ್ನು ಅರಿತ ಖರ್ಗೆ, ರೇವಂತ್ ರೆಡ್ಡಿಯವರನ್ನು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮುಂದುವರೆಸಿದರು. ಆದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜೊತೆಗೆ ಕರೆದೊಯ್ಯಬೇಕೆಂದು ರೇವಂತ್‌ಗೆ ಸೂಚನೆ ನೀಡಿದರು.

ಇದೇ ವರ್ಷದ ಮೇ ತಿಂಗಳು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಘನ ಗೆಲುವಿನ ನಂತರ ಮುಖ್ಯಮಂತ್ರಿ ಹುದ್ದೆ ತಮಗೇ ಸಿಗಬೇಕೆಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ಬಿಗಿ ಪಟ್ಟು ಹಿಡಿದಿದ್ದರು. ನಾಲ್ಕು ದಿನಗಳಾದರೂ ಮುಖ್ಯಮಂತ್ರಿ ಯಾರೆಂಬ ತೀರ್ಮಾನ ಆಗಿರಲಿಲ್ಲ. ಇಬ್ಬರನ್ನೂ ಬಿಟ್ಟು ಮೂರನೆಯ ಅಭ್ಯರ್ಥಿಯನ್ನು ಹುಡುಕಿಕೊಳ್ಳುತ್ತೇವೆ ಎಂಬ ಇಂಗಿತ ನೀಡಿದರು ಖರ್ಗೆ. ದೃಢ ಸಂದೇಶ ಗುರಿ ಮುಟ್ಟಿತ್ತು. ಅಪೇಕ್ಷಿತ ಪರಿಣಾಮವನ್ನೂ ಬೀರಿತ್ತು. ಕೆಲವೇ ತಾಸುಗಳಲ್ಲಿ ಇಬ್ಬರೂ ನಾಯಕರು ಮುಖ್ಯಮಂತ್ರಿ ಮತ್ತು ಏಕೈಕ ಉಪಮುಖ್ಯಮಂತ್ರಿ ಹುದ್ದೆಯ ಸೂತ್ರವನ್ನು ಒಪ್ಪಿದರು.

ಇದೇ ಅಕ್ಟೋಬರ್ 26ಕ್ಕೆ ಖರ್ಗೆಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಒಂದು ವರ್ಷದ ಅವಧಿ ಪೂರ್ಣಗೊಳಿಸಲಿದ್ದಾರೆ. ಎರಡೂವರೆ ದಶಕಗಳ ನಂತರ ಗಾಂಧಿ ಕುಟುಂಬದಾಚೆಗೆ ಮೊತ್ತಮೊದಲ ಕಾಂಗ್ರೆಸ್ ಅಧ್ಯಕ್ಷರಾದವರು ಖರ್ಗೆ. ಅವರಿಗೀಗ 81 ವರ್ಷದ ಪ್ರಾಯ. ಸ್ವಂತ ನಿರ್ಧಾರ ತೆಗೆದುಕೊಳ್ಳಬಲ್ಲರು ಮತ್ತು ಬಿಗಿಯಾಗಿ ದೃಢವಾಗಿ ವರ್ತಿಸುವ ಜೊತೆ ಜೊತೆಗೆ ಇತರರ ಅಭಿಮತಗಳಿಗೂ ಅವಕಾಶ ನೀಡಬಲ್ಲರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮತ್ತೆ ಮತ್ತೆ ಗೊಂದಲ ಅರಾಜಕತೆ ಎದುರಿಸುವ ರಾಷ್ಟ್ರೀಯ ಪಕ್ಷವೊಂದರಲ್ಲಿ ಒಮ್ಮತವನ್ನು ಕಟ್ಟಬಲ್ಲ ಸಾಮರ್ಥ್ಯ ತಮಗಿದೆಯೆಂದು ಸಾಬೀತು ಮಾಡಿದ್ದಾರೆ.

2022 10img19 Oct 2022 PTI10 19 2022 000168B

ಈ ಹಿಂದೆ ಗಾಂಧಿ ಕುಟುಂಬಕ್ಕೆ ಸೇರಿಲ್ಲದ ಕಾಂಗ್ರೆಸ್ ಅಧ್ಯಕ್ಷರು ಯಾರೆಂದು ನೋಡಿದರೆ ತೋರುವ ಹೆಸರು ಸೀತಾರಾಮ್ ಕೇಸರಿ ಅವರದು. ಕೇಸರಿಯವರಿಗೂ ಹಿಂದಿನವರು ಪಿ.ವಿ.ನರಸಿಂಹರಾವ್. ಖರ್ಗೆಯವರ ಪರಿಸ್ಥಿತಿ ಇವರಿಬ್ಬರಿಗಿಂತ ಭಿನ್ನ. ರಾವ್ ಮತ್ತು ಕೇಸರಿ ಅಧ್ಯಕ್ಷರಾಗಿದ್ದಾಗ ಗಾಂಧಿ ಕುಟುಂಬ ಸಕ್ರಿಯ ರಾಜಕಾರಣದಲ್ಲಿ ಇರಲಿಲ್ಲ. ರಾಜೀವ್ ಗಾಂಧಿ ಹತ್ಯೆಯ ನಂತರ 1991-1998ರ ಅವಧಿಯಲ್ಲಿ ಸೋನಿಯಾ ಗಾಂಧಿ ಅವರು ಪಕ್ಷದ ವ್ಯವಹಾರಗಳಲ್ಲಿ ಅಷ್ಟಿಷ್ಟು ಮೂಗು ತೂರಿಸಿದ್ದರೆ ಅದು ತೆರೆಮರೆಯಿಂದ. ಈಗ ಹಾಗಿಲ್ಲ. ಪ್ರಿಯಾಂಕ ಗಾಂಧಿ ವಾದ್ರಾ ಸೇರಿದಂತೆ ಗಾಂಧಿ ಕುಟುಂಬದ ಮೂವರು ಈಗ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಆದರೆ ಕಾಂಗ್ರೆಸ್ ಅಧ್ಯಕ್ಷರಿಗೆ ಸಲ್ಲಬೇಕಾದ ಗೌರವಾದರವನ್ನು ಖರ್ಗೆಯವರಿಗೆ ನೀಡಬೇಕೆಂಬ ಸಂದೇಶವನ್ನು ಸೋನಿಯಾ-ರಾಹುಲ್ ಅನುಮಾನಕ್ಕೆ ಎಡೆಯೇ ಇಲ್ಲದಂತೆ ತಮ್ಮ ಪಕ್ಷದ ನಾಯಕ ಸಮೂಹಕ್ಕೆ ರವಾನಿಸಿದ್ದಾರೆ.

ಈ ದಿಸೆಯಲ್ಲಿ ಸಣ್ಣಪುಟ್ಟ ಚರ್ಯೆಗಳು ನಡವಳಿಕೆಗಳು ಕೂಡ ಮುಖ್ಯ ಎಂಬುದನ್ನು ಸೋನಿಯಾ- ರಾಹುಲ್ ಇಬ್ಬರೂ ಬಲ್ಲರು. ಸಭೆ ಸಮಾರಂಭಗಳಿರಬಹುದು, ಸ್ಮಾರಕಗಳಿಗೆ ಭೇಟಿ ನೀಡುವ ಕಾರ್ಯಕ್ರಮಗಳೇ ಆಗಬಹುದು, ಇಬ್ಬರೂ ಮುಂಚಿತವಾಗಿಯೇ ಸ್ಥಳವನ್ನು ತಲುಪುತ್ತಾರೆ. ಖರ್ಗೆಯವರು ನಂತರವೇ ತಲುಪುವಂತೆ ಏರ್ಪಾಡು ಮಾಡಿ, ಇಬ್ಬರೂ ನಿಂತು ಅಧ್ಯಕ್ಷರನ್ನು ಬರಮಾಡಿಕೊಳ್ಳುತ್ತಾರೆ. ಈ ಎಲ್ಲವೂ ಸುಸಜ್ಜಿತವಾಗಿ ಸಂಯೋಜನೆಯಾಗಿರುತ್ತದೆ. ಸೋನಿಯಾ ಕಚೇರಿ ಅಥವಾ ರಾಹುಲ್ ತಂಡದಿಂದ ತಾವು ಸ್ಥಳವನ್ನು ತಲುಪಿರುವುದಾಗಿ ಸಂದೇಶವೊಂದನ್ನು ಅಧ್ಯಕ್ಷರ ಕಚೇರಿಗೆ ರವಾನಿಸಲಾಗುತ್ತದೆ. ಸಂದೇಶ ತಲುಪಿದ ಹತ್ತು ನಿಮಿಷಗಳ ನಂತರವೇ ಖರ್ಗೆ ಹೊರಡುತ್ತಾರೆ. ಸೋನಿಯಾ ಮತ್ತು ರಾಹುಲ್ ಇಬ್ಬರೂ ಖರ್ಗೆಯವರನ್ನು ಗೌರವಿಸುತ್ತಾರೆ. ರಾಹುಲ್ ಪ್ರೀತಿ ಅವರ ಆಂಗಿಕ ಭಾಷೆ, ಹಾವಭಾವಗಳಲ್ಲೇ ವ್ಯಕ್ತವಾಗುತ್ತದೆ ಎನ್ನುತ್ತಾರೆ ಕಾಂಗ್ರೆಸ್ಸಿನ ನಾಯಕರೊಬ್ಬರು.

ಹಾಗೆಂದಾಕ್ಷಣ ಖರ್ಗೆಯವರ ಕೆಲಸ ಕಾರ್ಯ ಕೊಡಕೊಳುವುದರಿಂದ ಇಲ್ಲವೇ ಬಿಗುವು ಅಥವಾ ಟೆನ್ಷನ್‌ನಿಂದ ಸಂಪೂರ್ಣ ಮುಕ್ತವಾಗಿರುತ್ತದೆ ಎಂದೇನೂ ಅಲ್ಲ. ಉದಾಹರಣೆಗೆ ಪಕ್ಷದ ನೀತಿ ನಿರ್ಧಾರ ಕೈಗೊಳ್ಳುವ ಅತ್ಯುನ್ನತ ಸಮಿತಿಯಾದ ಕಾಂಗ್ರೆಸ್ ವರ್ಕಿಂಗ್ ಕಮಿಟಿಯ (ಸಿ.ಡಬ್ಲ್ಯೂ.ಸಿ.) ಪುನಾರಚನೆಯ ಕೆಲಸ ತೀವ್ರ ಒತ್ತಡಗಳಿಂದ ಕೂಡಿತ್ತು. ಈ ಪಟ್ಟಿಯನ್ನು 25 ಸಲ ಪರಿಷ್ಕರಿಸಲಾಯಿತು ಎಂಬುದಾಗಿ ಮತ್ತೊಬ್ಬ ನಾಯಕರು ತುಸು ಉತ್ಪ್ರೇಕ್ಷೆ ಬೆರೆಸಿ ಹೇಳಿದರು.

ಆರಂಭದ ಪಟ್ಟಿಯಲ್ಲಿ ಎ.ಕೆ.ಆಂಟನಿಯವರಂತಹ ಕೆಲವು ಹಿರಿಯ ಕಾಂಗ್ರೆಸ್ಸಿಗರ ಹೆಸರುಗಳು ಇರಲಿಲ್ಲ. ಆಂಟನಿ ರಾಜಕೀಯದಿಂದ ಬಹುತೇಕ ನಿವೃತ್ತರಾಗಿದ್ದಾರೆಂದೇ ಭಾವಿಸಲಾಗಿರುವವರು. ಆಂಟನಿ ಮತ್ತು ಹರೀಶ್ ರಾವತ್ ಅಂತಹ ಹಿರಿಯರನ್ನು ಸೇರಿಸಿಕೊಂಡು ಅವರಿಗೆ ಸಿಗಬೇಕಾದ ಸ್ಥಾನಮಾನ ನೀಡಬೇಕು. ಕೈಬಿಡುವುದು ನಿರ್ದಯಿ ಕ್ರಮ ಎಂಬುದು ಸೋನಿಯಾ ಅವರ ಅಭಿಪ್ರಾಯವಾಗಿತ್ತು. ರಾಹುಲ್ ಕೂಡ ಕೆಲ ಬದಲಾವಣೆಗಳನ್ನು ಬಯಸಿದ್ದರು. ಪಕ್ಷದ ದಿನನಿತ್ಯದ ವ್ಯವಹಾರಗಳಲ್ಲಿ ರಾಹುಲ್ ಆಸಕ್ತಿ ತೋರುತ್ತಿಲ್ಲ ಎಂಬುದು ಸಂಪೂರ್ಣ ವಾಸ್ತವ ಅಲ್ಲ. ನಿಗಾ ಇಟ್ಟಿರುತ್ತಾರೆ. ಬಿಡಿಸಿ ಸಿಡಬ್ಲ್ಯೂಸಿ ಸದಸ್ಯರ ಪಟ್ಟಿಯ ಮೇಲೊಮ್ಮೆ ಕಣ್ಣಾಡಿಸಿ. ಅದು ಹಲವು ಕತೆಗಳನ್ನು ಹೇಳುತ್ತದೆ ಎಂದರು ಹಿರಿಯ ನಾಯಕರು.

ಸಿಡಬ್ಲ್ಯೂಸಿ ಪುನಾರಚನೆ ಕಸರತ್ತು ಸ್ನೇಹಪೂರ್ಣವಾಗಿತ್ತೇ ವಿನಾ ಕಹಿಯೇನೂ ಇರಲಿಲ್ಲ. ಪಕ್ಷದ ಮೊದಲ ಕುಟುಂಬದ ಬಯಕೆಗಳನ್ನು ಗಮನದಲ್ಲಿರಿಸಿಕೊಂಡು ಸರಿಯಾದ ಸಮತೂಕ ಸಾಧಿಸಲು ಬಯಸಿದ್ದರು ಖರ್ಗೆ. ಹೀಗಾಗಿಯೇ ಪಟ್ಟಿ ಹೊರಬೀಳುವುದು ತಡವಾಯಿತು ಎಂಬುದು ಇನ್ನೊಬ್ಬ ನಾಯಕರ ವ್ಯಾಖ್ಯಾನ. ಯುವಚಹರೆಯನ್ನು ಉಳ್ಳ ಕಡಿಮೆ ಸಂಖ್ಯೆಯ ಸಿಡಬ್ಲ್ಯೂಸಿ ರಚನೆ ಖರ್ಗೆಯವರ ಇರಾದೆಯಾಗಿತ್ತು. ಶಶಿ ತರೂರ್, ಮನೀಶ್ ತಿವಾರಿ, ರಮೇಶ್ ಚೆನ್ನಿತಲ ಹಾಗೂ ಸೈಯದ್ ನಾಸಿರ್ ಹುಸೇನ್ ಖರ್ಗೆಯವರ ಆಯ್ಕೆಗಳಾಗಿದ್ದರು, ಕಾಂಗ್ರೆಸ್ ಅಧ್ಯಕ್ಷತೆಗೆ ನಡೆದ ಚುನಾವಣೆಯಲ್ಲಿ ತರೂರ್ ತಮ್ಮ ವಿರುದ್ಧ ಸ್ಪರ್ಧಿಸಿದ್ದರೂ ಅವರ ಹೆಸರನ್ನು ಸೇರಿಸಿದ್ದರು ಖರ್ಗೆ. ಪಂಜಾಬಿನ ಮೊದಲ ದಲಿತ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ಮೀನಾಕ್ಷಿ ನಟರಾಜನ್, ಗಿರೀಶ್ ಚೋದಂಕರ್ ಅವರ ಸೇರ್ಪಡೆಯನ್ನು ರಾಹುಲ್ ಬಯಸಿದ್ದರು.

ರಾಜಸ್ತಾನ ಕಾಂಗ್ರೆಸ್ಸಿನಲ್ಲಿ ಅಶೋಕ್ ಗೆಹಲೋತ್ ಮತ್ತು ಸಚಿನ್ ಪೈಲಟ್ ನಡುವಣ ಕದನವನ್ನು ತಣ್ಣಗೆ ಬಗೆಹರಿಸಿದ್ದು ಖರ್ಗೆಯವರ ಅತಿ ದೊಡ್ಡ ಯಶಸ್ಸುಗಳಲ್ಲೊಂದು ಎನ್ನಲಾಗುತ್ತದೆ. ಇಬ್ಬರೂ ನಾಯಕರು ಪರಸ್ಪರ ಮುಖಕೊಟ್ಟು ಮಾತಾಡದಿದ್ದವರು ಖರ್ಗೆ ಮತ್ತು ವೇಣುಗೋಪಾಲ್ ಜೊತೆ ಕುಳಿತರು. ಮಾತಾಡುವುದು ಏನೂ ಇಲ್ಲ ಎಂದು ಆರಂಭಿಸಿದ್ದವರು ಗೆಹಲೋತ್. ಅಂತಹ ನೇತ್ಯಾತ್ಮಕ ಬಿಂದುವಿನಿಂದ ಶುರುವಾದ ಸಭೆಯಲ್ಲಿ ಕಡೆಗೆ ಇಬ್ಬರನ್ನೂ ರಾಜಿ ಮಾಡಿಸಿದ್ದು ದೊಡ್ಡ ಸಾಧನೆಯೇ ಸರಿ. ವ್ಯಕ್ತಿಗತ ಮಹತ್ವಾಕಾಂಕ್ಷೆಗಳು ತಪ್ಪೇನೂ ಅಲ್ಲ. ಆದರೆ ಪಕ್ಷದ ಹಿತ ಹೆಚ್ಚು ಮುಖ್ಯ ಎಂದು ಇಬ್ಬರಿಗೂ ನಿಚ್ಚಳವಾಗಿ ವಿವರಿಸಿದ್ದರು ಖರ್ಗೆ. ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿ ಮೂರು ಸಲ ಸೋತ ನಂತರವೂ ಬಂಡಾಯ ಏಳದೆ ಪಕ್ಷಕ್ಕಾಗಿ ದುಡಿಯುವುದನ್ನು ಮುಂದುವರೆಸಿದ ವ್ಯಕ್ತಿ ಹೇಳಿದ ಈ ಮಾತುಗಳನ್ನು ತಳ್ಳಿ ಹಾಕುವುದು ಗೆಹಲೋತ್ ಮತ್ತು ಪೈಲಟ್ ಗೆ ಸುಲಭ ಸಾಧ್ಯವಿರಲಿಲ್ಲ.

Mallikarjun Kharge and Rahul Gandhi

ಇಂತಹುದೇ ತೀರ್ಮಾನ ತೆಗೆದುಕೊಳ್ಳಬೇಕೆಂಬ ಒತ್ತಡಕ್ಕೆ ತಾವು ಬಾಗುವುದಿಲ್ಲವೆಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ. ಈ ಮಾತಿಗೆ ಹಿಮಾಚಲಪ್ರದೇಶವೇ ಉದಾಹರಣೆ. ಚುನಾವಣೆಯಲ್ಲಿ ಬಹುಮತ ಪಡೆದಿದ್ದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಇನ್ನೂ ನಡೆದೇ ಇರಲಿಲ್ಲ. ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾಸಿಂಗ್ ಹೇಳಿಕೆಯೊಂದನ್ನು ನೀಡಿದ್ದರು. ವೀರಭದ್ರಸಿಂಗ್ (ಪ್ರತಿಭಾ ಅವರ ದಿವಂಗತ ಪತಿ ಮತ್ತು ಹಿಮಾಚಲದ ಮುಖ್ಯಮಂತ್ರಿಯಾಗಿದ್ದವರು) ಕುಟುಂಬವನ್ನು ನಿರ್ಲಕ್ಷಿಸುವುದು ಸಾಧ್ಯವೇ ಇಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಕಾಪಾಡಿದ್ದೇ ವೀರಭದ್ರಸಿಂಗ್ ಅವರು ಮಾಡಿದ್ದ ಅಭಿವೃದ್ಧಿ ಯೋಜನೆಗಳ ಆಧಾರದ ಮೇರೆಗೆ ಎಂದಿದ್ದರು. ಆದರೆ ಖರ್ಗೆ ಈ ಒತ್ತಡಕ್ಕೆ ಮಣಿಯಲಿಲ್ಲ. ಮುಖ್ಯಮಂತ್ರಿ ಆಯ್ಕೆಗೆ ನಿರ್ದಿಷ್ಟ ವಿಧಿ ವಿಧಾನವಿದೆ. ಇಂತಹ ಹೇಳಿಕೆಗಳನ್ನು ಮಾಡಕೂಡದೆಂದು ಆಕೆಗೆ ತಿಳಿಸಿ ಹೇಳುವಂತೆ ಹೈಕಮಾಂಡ್ ನಿರೀಕ್ಷಕರ ಮೂಲಕ ಹೇಳಿ ಕಳಿಸಿದ್ದರು.

ಛತ್ತೀಸಗಢದಲ್ಲಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಟಿ.ಎಸ್.ಸಿಂಗ್ ದೇವರ್ ಅವರನ್ನು ಒಪ್ಪಿಸುವಂತೆ ಮಾಡಿದ ಯಶಸ್ಸೂ ಒಂದು ಅಚ್ಚರಿಯೇ. ಖರ್ಗೆ ಮತ್ತು ರಾಹುಲ್ ಮುಂಚಿತವಾಗಿಯೇ ಮಾತಾಡಿಕೊಂಡಿದ್ದರು. ಇಬ್ಬರ ಪೈಕಿ ಇದು ಯಾರ ಆಲೋಚನೆಯೆಂಬುದು ತಿಳಿಯದು. ಆದರೆ ಇಬ್ಬರೂ ಒಂದೇ ರೀತಿ ಆಲೋಚಿಸಿ ಕೆಲಸ ಮಾಡಿದ್ದರು.

ಸಂಘಟನಾತ್ಮಕವಾಗಿ ಖರ್ಗೆ ಇದೀಗ ಪದಾಧಿಕಾರಿಗಳ ಆಯ್ಕೆಯ ಹೊಸ ಸವಾಲೊಂದನ್ನು ಎದುರಿಸಿದ್ದಾರೆ. ತೀವ್ರ ಒತ್ತಡಗಳ ಮತ್ತೊಂದು ಸುತ್ತು ಕಾದಿದೆ. ರಾಹುಲ್ ಅವರ ಹಲವು ಆಪ್ತರಿಗೆ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿ ದೊರೆಯಬಹುದು. ಉತ್ತರಪ್ರದೇಶದ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿ ನೋಡಿಕೊಳ್ಳುವ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಮುಂದುವರೆಯಲು ಪ್ರಿಯಾಂಕ ಗಾಂಧಿ ಅವರಿಗೆ ಆಸಕ್ತಿಯಿಲ್ಲ. ಆಕೆಗೆ ಯಾವ ಪಾತ್ರ ನೀಡಬೇಕೆಂಬ ಕುರಿತು ಸ್ಪಷ್ಟತೆ ಮೂಡಿಲ್ಲ. ಪ್ರಿಯಾಂಕ ಅವರಿಗೆ ಪಕ್ಷದಲ್ಲಿ ಇನ್ನಷ್ಟು ದೊಡ್ಡ ಪಾತ್ರ ನೀಡುವುದು ಗಾಂಧಿ ಕುಟುಂಬದ ಹೊರಗಿನವರೊಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ಉದ್ದೇಶವನ್ನೇ ವಿಫಲಗೊಳಿಸೀತು. ಉತ್ತರಪ್ರದೇಶದ ವಿಚಾರಕ್ಕೆ ಬಂದರೆ ಖರ್ಗೆ ಅಷ್ಟು ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳುವಂತಿಲ್ಲ.

ಆದರೆ ಸಲಹೆ ಸಮಾಲೋಚನೆ, ಒಮ್ಮತದ ಹಾದಿ ಹಿಡಿದರೆ ಈ ತೊಡಕಿಗೂ ಪರಿಹಾರ ಉಂಟು. ಈ ದಾರಿ ಖರ್ಗೆಯವರಿಗೆ ಸಮ್ಮತ ಕೂಡ. ರಾಜ್ಯಗಳ ನಾಯಕರೊಂದಿಗೆ ಅವರು ಸುದೀರ್ಘ ಸಮಗ್ರ ಸಭೆಗಳನ್ನು ನಡೆಸಿದ್ದಾರೆ. ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜು ಮಾಡುವ ಅಗತ್ಯವನ್ನು ಚರ್ಚಿಸಿದ್ದಾರೆ. ಅವರ ಜೊತೆ ರಾಹುಲ್ ಕೂಡ ಬಹುತೇಕ ಸಭೆಗಳಲ್ಲಿ ಕುಳಿತಿದ್ದಾರೆ. ರಾಜ್ಯಗಳ ನಾಯಕರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಲು ಅವಕಾಶ ನೀಡಲಾಗಿದೆ. ಆದರೆ ಮುಚ್ಚಿದ ಕದಗಳ ಹಿಂದೆ ನಡೆದಿರುವ ಈ ಸಭೆಗಳಲ್ಲಿ ನಡೆದದ್ದೇನು ಎಂಬುದನ್ನು ‘ಮೀಡಿಯಾ’ದವರಿಗೆ ತಿಳಿಸಕೂಡದು ಎಂಬುದು ಖರ್ಗೆಯವರು ಹಾಕಿದ್ದ ಬಿಗಿ ಷರತ್ತು.

ಖರ್ಗೆಯವರು ಕಾಲಕ್ರಮೇಣ ಪ್ರತಿಪಕ್ಷಗಳ ನಾಯಕರೊಂದಿಗೆ ಉತ್ತಮ ಬಾಂಧವ್ಯವನ್ನು ಸಾಧಿಸಿದ್ದಾರಲ್ಲದೆ, ಉತ್ತಮ ವಾಗ್ಮಿಯಾಗಿಯೂ ಹೊರಹೊಮ್ಮುತ್ತಿದ್ದಾರೆ. ಬಿಜೆಪಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಯಾವುದೇ ಮುಲಾಜಿಲ್ಲದ ನಿಷ್ಠುರ ದಾಳಿ ಅವರದು. ರಾವಣ ಮತ್ತು ವಿಷದ ಹಾವು ಎಂಬುದಾಗಿ ಮೋದಿಯವರನ್ನು ಬಣ್ಣಿಸಿದ ಅವರ ಹೇಳಿಕೆಗಳು ವಿವಾದಗಳನ್ನು ಎಬ್ಬಿಸಿರಬಹುದು. ಆದರೆ ವಿವಾದಗಳು ಅವರ ದಾಳಿಯ ಮೊನಚನ್ನು ಮೊಂಡಾಗಿಸಿಲ್ಲ. ಸನಾತನ ಧರ್ಮದ ವಿಷಯ ಬಂದಾಗ ಬಿಜೆಪಿ ವಿರುದ್ಧದ ದಾಳಿಯ ಮುಂಚೂಣಿಯಲ್ಲಿ ತಮ್ಮ ಮಗ ಪ್ರಿಯಾಂಕ್ ಖರ್ಗೆ ಇದ್ದದ್ದೂ ಅವರಿಗೆ ಸಮ್ಮತವೇ.

ಸಾಮಾಜಿಕ ನ್ಯಾಯದ ರಾಜಕಾರಣವನ್ನು ಕಾಂಗ್ರೆಸ್ ಯಾವುದೇ ಹಿಂಜರಿಕೆಯಿಲ್ಲದೆ ಆಲಿಂಗಿಸಿರುವ ಕ್ರಿಯೆಯ ಹಿಂದೆ ಖರ್ಗೆಯವರ ಪಾತ್ರವೂ ಇದೆ ಎಂಬುದು ಹಲವರ ಅಭಿಪ್ರಾಯ. 1999ರಲ್ಲಿ ಜೆ.ಎನ್.ಯು.ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಬಳ್ಳಾರಿಯ ಸೈಯದ್ ನಾಸಿರ್ ಹುಸೇನ್ ಈಗ ಸಿಡಬ್ಲ್ಯೂಸಿ ಸದಸ್ಯರೂ ಹೌದು, ಯುವ ಕಾಂಗ್ರೆಸ್ಸಿನಲ್ಲಿ ರಾಜಕಾರಣ ಆರಂಭಿಸಿದ ಝಾರ್ಖಂಡ್ ನ ಪ್ರಣವ್ ಝಾ, ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರ ವಿಶೇಷ ಕರ್ತವ್ಯಾಧಿಕಾರಿ ಮತ್ತು ರಾಜ್ಯಸಭಾ ಟೀವಿಯ ಸಿಇಒ ಆಗಿದ್ದ ಗುರುದೀಪ್ ಸಿಂಗ್ ಸಪ್ಪಲ್, ಪಕ್ಷದ ಸೋಶಿಯಲ್ ಮೀಡಿಯಾ ನೋಡಿಕೊಳ್ಳುವ ಗೌರವ್ ಪಾಂಧಿ ಮತ್ತು ರಚಿತ್ ಸೇಠ್ ಅವರು ಖರ್ಗೆಯವರ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ.

ಕೃಪೆ: ಸಿ.ಜಿ.ಮನೋಜ್, ‘ದಿ ಇಂಡಿಯನ್ ಎಕ್ಸ್ ಪ್ರೆಸ್‌’. ಅನುವಾದ : ಡಿ ಉಮಾಪತಿ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X