ಪರಿಶಿಷ್ಟ ಜಾತಿ ಮಾದರಿಯಲ್ಲಿಯೇ ಪರಿಶಿಷ್ಟ ಪಂಗಡದಲ್ಲಿರುವ ಅಲೆಮಾರಿ, ಅರಣ್ಯಾಧಾರಿತ ಹಾಗೂ ಆದಿಮ ಬುಡಕಟ್ಟು ಜನರಿಗೆ ಪ್ರತ್ಯೇಕವಾಗಿ ಒಳಮೀಸಲಾತಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ 50 ಬುಡಕಟ್ಟುಗಳಿವೆ. ಇದರಲ್ಲಿ ಅರಣ್ಯಾಧಾರಿತ 12 ಮೂಲ ಆದಿವಾಸಿ ಬುಡಕಟ್ಟುಗಳಿವೆ. ಆದರೆ ಇವರಿಗೆ ಮೀಸಲಾತಿಯ ಪರಿವೆಯಿಲದೇ, ಇಂದಿಗೂ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೇ ಕಾಡು ಮೇಡುಗಳಲ್ಲಿ ಅಲೆಯುತ್ತಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಆದೇಶ ದೇಶದ SC & ST ಗಳಿಗೆ ಒಳಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಗಳಿಗೆ ಅವಕಾಶ ಕಲ್ಪಿಸಿದೆ. ಆದರೆ, ಕರ್ನಾಟಕ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ತೀರ್ಪು ದಿಕ್ಕರಿಸಿ, ಬಲಾಢ್ಯರ ಒತ್ತಡಕ್ಕೆ ಮಣಿದು ಕೇವಲ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ಏಕಸದಸ್ಯ ಆಯೋಗ ರಚನೆ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನಿಸಿರುವುದು ಖಂಡನೀಯ. ಇದು ಬುಡಕಟ್ಟುಗಳ ಅಭಿವೃದ್ಧಿ ವಿರೋಧಿ ನೀತಿ.
ಪರಿಶಿಷ್ಟ ಜಾತಿ ಮಾದರಿಯಲ್ಲಿಯೇ ಪರಿಶಿಷ್ಟ ಪಂಗಡದಲ್ಲಿರುವ ಅಲೆಮಾರಿ, ಅರಣ್ಯಾಧಾರಿತ ಹಾಗೂ ಆದಿಮ ಬುಡಕಟ್ಟು ಜನರಿಗೆ ಪ್ರತ್ಯೇಕವಾಗಿ ಒಳಮೀಸಲಾತಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ 50 ಬುಡಕಟ್ಟುಗಳಿವೆ. ಇದರಲ್ಲಿ ಅರಣ್ಯಾಧಾರಿತ 12 ಮೂಲ ಆದಿವಾಸಿ ಬುಡಕಟ್ಟುಗಳಿವೆ. ಆದರೆ ಇವರಿಗೆ ಮೀಸಲಾತಿಯ ಪರಿವೇ ಇಲ್ಲದೇ, ಇಂದಿಗೂ ಕಾಡು ಮೇಡುಗಳಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೆ ಅಲೆಯುತ್ತಿದ್ದಾರೆ.
ಇದಕ್ಕೆ ನಿದರ್ಶನ ಎಂಬಂತೆ ಮೊನ್ನೆಯಷ್ಟೇ ಚಾಮರಾಜನಗರ ಜಿಲ್ಲೆಯಲ್ಲಿರುವ 1854 ಕುಟುಂಬಗಳಿಗೆ ದೀಪದ ಬೆಳಕಿನ ಮುಖ ನೋಡುವಂತಾಗಿದೆ ಎಂದು ಎಲ್ಲಾ ಪತ್ರಿಕೆಯಲ್ಲೂ ಸುದ್ದಿಯಾಯಿತು. 1902ರಲ್ಲಿ ವಿದ್ಯುತ್ ಪಡೆದ ಕರ್ನಾಟಕ ರಾಜ್ಯದಲ್ಲಿರುವ 22 ಆದಿವಾಸಿಗಳ ಹಾಡಿಗಳು 2024ರಲ್ಲಿ ಬೆಳಕು ಕಂಡವು!
ಆದರೆ, ಇನ್ನೂ ನೂರಾರು ಮೂಲ ಆದಿವಾಸಿಗಳ ಹಾಡಿಗಳು ಇಂದಿಗೂ ಬೆಳಕು ಕಾಣದೇ ಅಂಧಕಾರದಲ್ಲಿವೆ. ನೆನ್ನೆ ಮೊನ್ನೆ ಬೆಳಕು ಕಂಡ ನಮ್ಮ ಹಾಡಿ, ಗದ್ದೆ, ಪೋಡು, ಕಾಲೋನಿ ಹಾಗೂ ದೊಡ್ಡಿಗಳಲ್ಲಿ ಸರ್ಕಾರದ ಮೂಲಭೂತ ದಾಖಲಾತಿಗಳಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ, ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಇಂದಿಗೂ ಸಮರ್ಪಕವಾಗಿ ಪಡೆದುಕೊಳ್ಳಲು ಸಾಧ್ಯವೇ ಆಗಿಲ್ಲ.
ಇನ್ನು ಶಿಕ್ಷಣ ಪಡೆದು ಸರ್ಕಾರಿ ಉದ್ಯೋಗ ಪಡೆದುಕೊಳ್ಳುವ ಮಾತೆಲ್ಲಿ! ಬಲಿಷ್ಠ ಭಾರತ, ಡಿಜಿಟಲ್ ಭಾರತ ಎನ್ನುವ ಕಾಲದಲ್ಲೂ ವಿದ್ಯುತ್ ದೀಪಗಳಿಲ್ಲದೇ ಬದುಕುತ್ತಿರುವ ಆದಿವಾಸಿಗಳು, ವಾಸಿಸಲು ಮನೆಗಳಿಲ್ಲದೇ ಸಿಕ್ಕ ಸಿಕ್ಕಲ್ಲಿ ಹುಲ್ಲಿನ ಜೋಪಡಿಗಳನ್ನು ಹಾಕಿಕೊಂಡು, ಹಳ್ಳಕೊಳ್ಳದ ನೀರುಗಳನ್ನು ಕುಡಿದು ಬದುಕುತ್ತಿದ್ದಾರೆ.
ಇದಕ್ಕೆ ಸಾಕ್ಷಿಯೆಂಬಂತೆ ಇವತ್ತಿಗೂ ಚಾಮರಾಜನಗರ ಜಿಲ್ಲೆಯಲ್ಲಿ ಕರೆದಿಂಬಾ, ಗೊಂಬೆಗಲ್ಲು, ನಲ್ಲಿಕತ್ರು, ಕೊಕ್ಕಬಾರೆ ಹಾಡಿಗಳು, ಕೊಡಗು ಜಿಲ್ಲೆಯ ಕೊಡಂಗೆ ಹಾಡಿ, ಬೊಂಬುಕಾಡು, ಬೊಮ್ಮನ ಹಳ್ಳಿ ಹಾಡಿಗಳು, ಮೈಸೂರು ಜಿಲ್ಲೆಯ ಬಳ್ಳೆಹಾಡಿ ಕೆರೆ ಹಾಡಿ ಹಾಗೂ ರಾಮನಗರ ಜಿಲ್ಲೆಯ ಮಂಜುನಾಥನಗರ, ಊಜಿಗಲ್ಲು ಬೆಟ್ಟದಲ್ಲಿ ಇಂದಿಗೂ ವಿದ್ಯುತ್ ದೀಪದ ಮಾತಿರಲಿ, ಇಲ್ಲಿರುವ ಸುಮಾರು 20 ರಿಂದ 30 ಕುಟುಂಬ ಕಲ್ಲು ಬಂಡೆಯ ಕೊರಕಲಲ್ಲಿ ನಿಂತಿರುವ ನೀರು ಕುಡಿದು ಬದುಕುತ್ತಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ಬಂದು ಇಂದಿಗೆ 76 ವರ್ಷಗಳು ಕಳೆದು ಸಂವಿಧಾನ ರಚನೆಯಾಗಿ, ಮೀಸಲಾತಿಯೂ ಜಾರಿಗೆ ತಂದು 74 ವರ್ಷಗಳು ಕಳೆದಿದೆ. ರಾಜ್ಯದ ಪರಿಶಿಷ್ಟ ಪಂಗಡದಲ್ಲಿರುವ ಮೂಲ ಆದಿವಾಸಿಗಳಾದ ಜೇನುಕುರುಬ, ಇರುಳಿಗ, ಸೋಲಿಗ, ಯರವ, ಪಣಿಯನ್, ಹಸಲರು, ಗೌಡಲು, ಸಿದ್ದಿ, ಕೊರಗ, ಬೆಟ್ಟ ಕುರುಬ, ಕುಡಿಯ, ತೋಡ, ಕಣಿಯನ್, ಕೊಕ್ಕಣಿ, ಕೋಯ, ವರ್ಲಿ ಮತ್ತು ಮಲೆಕುಡಿಯ ಬುಡಕಟ್ಟುಗಳು ರಾಜ್ಯದಲ್ಲಿ 2,01,620 ಜನಸಂಖ್ಯೆಯನ್ನು ಹೊಂದಿದೆ. ಇವರೆಲ್ಲ ರಾಜಕೀಯ, ಸಾಮಾಜಿಕ, ಆರ್ಥಿಕ, ಔದ್ಯೋಗಿಕ ಮತ್ತು ಆರೋಗ್ಯದ ದೃಷ್ಟಿಯಿಂದಲೂ ತೀರಾ ಹಿಂದುಳಿದ, ಕಾಡು ಮೇಡುಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದೇ ಆದಿಮಾನವರಂತೆ ನಿಕೃಷ್ಟ ಜೀವನ ಸಾಗಿಸುತ್ತಿದ್ದಾರೆ.
ಕರ್ನಾಟಕ ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ 50 ಬುಡಕಟ್ಟುಗಳಿವೆ. 2011ರ ಜನಗಣತಿಯಂತೆ ಪರಿಶಿಷ್ಟ ಪಂಗಡದ ಜನಸಂಖ್ಯೆ 42,48,987 ಆಗಿದ್ದು, ಇದರಲ್ಲಿ ಕ್ರಮಸಂಖ್ಯೆ 38ರಲ್ಲಿ ಬರುವ ಒಂದೇ ಸಮುದಾಯದ 32,96,354 ಜನಸಂಖ್ಯೆಯಿದ್ದರೆ, ಉಳಿದ 49 ಬುಡಕಟ್ಟುಗಳು ಜನಸಂಖ್ಯೆ 9,52,633ರಷ್ಟಿದೆ.
ಗೊಂಡ, ನಾಯ್ಕಪೊಡ್, ರಾಜಗೊಂಡ-1,58,243, ಕೋಳಿ ಧೋರ್, ಟೋಕ್ರಿಕೋಳಿ-1,12,190, ಮರಾಠಿ-82,447, ಮೇದ, ಮೇದಾರಿ-44,160, ಜೇನು ಕುರುಬ-36,076 ಹಾಗೂ ಸೋಲಿಗರು-33,819 ಜನಸಂಖ್ಯೆ ಇದ್ದರೆ, ಕೊಕ್ನ, ಕೋಕ್ನಿ, ಕುಕ್ನ-32, ಮಲಸಾರ್-82, ಪಟೇಲಿಯಾ-57, ರಥಾವ-45, ಶೋಲಗ-52, ವರ್ಲಿ-58, ವಿಟೋಲಿಯಾ, ಬರೋಡಿಯ-23, ಬರ್ದಾ-266, ಚೋಧರ-117, ಕತೋಡಿ, ಕಾತ್ಕಾರಿ, ಧೋರ-274, ಕೊಟ-121, ಕಾಟ್ಟುನಾಯಕನ್-168 ಜನರಿದ್ದಾರೆ.
ಇನ್ನೂ 1000 ಜನಸಂಖ್ಯೆಗೂ ಕಡಿಮೆ ಇರುವ 28 ಬುಡಕಟ್ಟುಗಳು, 5000 ಜನಸಂಖ್ಯೆಗೂ ಕಡಿಮೆ ಇರುವ 3 ಬುಡಕಟ್ಟುಗಳು ಹಾಗೂ 10,000ಕ್ಕೂ ಕಡಿಮೆ ಇರುವ 6 ಬುಡಕಟ್ಟುಗಳಿವೆ. (2011ರ ಜನಗಣತಿಯಂತೆ) ಆದರೆ, ಪರಿಶಿಷ್ಟ ಪಂಗಡದ ಶೇ.7% ಮೀಸಲಾತಿಯಲ್ಲಿ ಮೇಲ್ಕಂಡ ಮೂಲ ಆದಿವಾಸಿಗಳು ಇಂದಿಗೂ ಒಂದೇ ಒಂದು ಹೇಳಿಕೊಳ್ಳುವ ಸರ್ಕಾರಿ ಕೆಲಸವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ.
ರಾಜ್ಯದಲ್ಲಿರುವ 15 MLAಗಳು, 3 MPಗಳು, ಕುಲಪತಿ, IAS, IPS, IFS, KAS, ಕುಲಸಚಿವರು, ಪೊಫೆಸರ್ ಹುದ್ದೆಗಳಾದಿಯಾಗಿ, ಸರ್ಕಾರದ A ಶ್ರೇಣಿಯಿಂದ ಹಿಡಿದು Dವರೆಗಿನ ಎಲ್ಲಾ ಹಂತದಲ್ಲೂ, ಮೀಸಲಾತಿ ಏಕಮುಖವಾಗಿ ಹರಿದು, ಬಹುಸಂಖ್ಯಾತ ಬಲಾಢ್ಯ ಸಮುದಾಯದ ಪಾಲಾಗಿ ಉಳಿದ 49 ಬುಡಕಟ್ಟುಗಳಿಗೆ ಅನ್ಯಾಯವಾಗುತ್ತಿದೆ.

ಆದರೆ, ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಅಸಂಘಟಿತ ಅರಣ್ಯಾಧಾರಿತ ಮೂಲ ಆದಿವಾಸಿಗಳು, ಮೀಸಲಾತಿಯ ಪರಿವೇ ಇಲ್ಲದೆ ಬದುಕುತ್ತಿದ್ದಾರೆ. ಸರ್ಕಾರದ ದಾಖಲಾತಿಗಳಾದ ಆಧಾರ್ ಕಾರ್ಡ್, ವೋಟ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರಗಳಿಲ್ಲದೆ ಶಿಕ್ಷಣ ಪಡೆಯಲು ಸಾಧ್ಯವಾಗದೇ ಹಾಡಿಗಳಲ್ಲಿಯೇ ಉಳಿದು ಅಪೌಷ್ಟಿಕತೆ ಹಾಗೂ ದುಶ್ಚಟಗಳಿಗೆ ಬಲಿಯಾಗಿ ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ಒಳಗಾಗಿ ಅಲ್ಪಕಾಲದಲ್ಲೇ ಮರಣ ಹೊಂದುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಇವರ ಜನಸಂಖ್ಯೆ ಇಳಿಮುಖವಾಗುತ್ತಾ, ಅಳಿವಿನಂಚಿಗೆ ಬಂದು ನಿಂತಿದೆ.
ಹೊತ್ತಿನ ಚೀಲ ತುಂಬಿಸಲು ಇಂದಿಗೂ ಆದಿವಾಸಿಗಳು ಕಾಫಿ ಎಸ್ಟೇಟ್‌ಗಳು, ಲೈನ್ ಮನೆಗಳು, ಇಟ್ಟಿಗೆ ಗೂಡುಗಳಲ್ಲಿ ಜೀತದಾಳುಗಳಾಗಿ ದುಡಿಯುತ್ತಾ, ಸ್ವಂತ ಮನೆ ಇಲ್ಲದೇ, ದುಡಿದು ಬದುಕಲು ಭೂಮಿಯಿಲ್ಲದೇ ಕಾಡು ಮೇಡುಗಳಲ್ಲಿ ಜೀವನ ಮಾಡುತ್ತಿದ್ದಾರೆ. ಇದರಿಂದ ತಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ. ಆಗೊಮ್ಮೆ ಶಿಕ್ಷಣ ಪಡೆದರೂ ಪರಿಶಿಷ್ಟ ಪಂಗಡಕ್ಕಿರುವ ಶೇ.7% ಮೀಸಲಾತಿಯಲ್ಲಿ ನಗರದ ಬಹುಸಂಖ್ಯಾತ ಬಲಾಢ್ಯ ಬುಡಕಟ್ಟುಗಳ ಜೊತೆ ಸ್ಪರ್ಧಿಸಲಾರದೆ, ಉದ್ಯೋಗವೂ ಸಿಗದೆ, ಇತ್ತ ನಗರಗಳಲ್ಲೂ ಇರಲಾಗದೆ, ಅತ್ತ ಹಾಡಿಗಳಿಗೂ ಹೋಗಲಾಗದೆ ಅತಂತ್ರ ಸ್ಥಿತಿಯಲ್ಲಿ ಮೊದಲ ತಲೆಮಾರಿನ ಆದಿವಾಸಿ ವಿದ್ಯಾವಂತರು ತೊಳಲಾಡುತ್ತಿದ್ದಾರೆ.
ಆದ್ದರಿಂದಲೇ ಪರಿಶಿಷ್ಟ ಜಾತಿಯಂತೆಯೇ ಪರಿಶಿಷ್ಟ ವರ್ಗದಲ್ಲಿಯೂ 51 ಬುಡಕಟ್ಟುಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿನ ಹಿಂದುಳಿದಿರುವಿಕೆಯ ಆಧರಿಸಿ ಸುಪ್ರೀಂಕೋರ್ಟ್‌ನ ಆದೇಶದನ್ವಯ ಪ್ರತ್ಯೇಕ ಒಳಮೀಸಲಾತಿ ಜಾರಿಗೆ ಒತ್ತಾಯ ಮಾಡಬೇಕಾಗಿದೆ.
ಹಿಂದೆಂದಿಗಿಂತಲೂ ಇಂದು ಬುಡಕಟ್ಟು ಜನರಿಗೆ ಒಳಮೀಸಲಾತಿ ಅನಿವಾರ್ಯತೆ ಇದೆ. ಆದ್ದರಿಂದ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ನೀಡಿದೆ. ಆದರೆ, ಪ್ರಸ್ತುತ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗೆ ಒಳಮೀಸಲಾತಿ ನೀಡಲು ಆಯೋಗವನ್ನು ರಚನೆ ಮಾಡಿದೆ. ಇದೇ ಆಯೋಗವೇ ಪರಿಶಿಷ್ಟ ಪಂಗಡಗಳ ನಡುವೆಯೂ ಒಳ ಮೀಸಲಾತಿಗಾಗಿ ಅಧ್ಯಯನ ನಡೆಸಿ ಒಳಮೀಸಲಾತಿ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಬೇಕಿದೆ.
ಇದನ್ನೂ ಓದಿ ರಾಜ್ಯೋತ್ಸವ ಪ್ರಶಸ್ತಿಗೆ ‘ಮಲಹೊರುವವರ ಯೋಗ್ಯತೆ’ ಬಗ್ಗೆ ಪ್ರಶ್ನೆ: ವಿವಾದದ ಕಿಡಿ ಹೊತ್ತಿಸಿದ ನಾಗೇಶ್ ಹೆಗಡೆ ಪೋಸ್ಟ್
ಈ ಬಗ್ಗೆ ರಾಜ್ಯ ಸರ್ಕಾರ ಬಲಾಢ್ಯ ಬುಡಕಟ್ಟುಗಳ ಒತ್ತಾಯಕ್ಕೆ ಮಣಿದು ಬುಡಕಟ್ಟುಗಳ ಅಭಿವೃದ್ದಿಗೆ ಪೂರಕವಾದ ಒಳಮೀಸಲಾತಿ ಬಗ್ಗೆ ಬಾಯಿಬಿಡದೆ ಜಾಣ ಕುರುಡುತನದ ಪ್ರದರ್ಶನ ಮಾಡುತ್ತಿರುವುದು ವಿಷಾದನೀಯ.
ಕೂಡಲೇ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗೆ ಒಳಮೀಸಲಾತಿ ನೀಡಲು ರಚನೆ ಮಾಡಿರುವ ಆಯೋಗ ಮೂಲಕವೇ ಪರಿಶಿಷ್ಟ ಪಂಗಡದ ಒಳ ಮೀಸಲಾತಿಯ ಬಗ್ಗೆಯೂ ಆಯೋಗದಿಂದ ವರದಿ ತರಿಸಿಕೊಂಡು ಪರಿಶಿಷ್ಟ ಪಂಗಡಗಳಲ್ಲಿರುವ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೆ ಕಾಡು ಮೇಡುಗಳಲ್ಲಿ ಸರಿಯಾದ ಅನ್ನ ನೀರಿಲ್ಲದೆ ಅಪೌಷ್ಟಿಕತೆ ಮತ್ತು ದುಶ್ಚಟಗಳಿಗೆ ಬಲಿಯಾಗಿ ಅಳಿವಿನಂಚಿಗೆ ಬಂದು ತಲುಪಿರುವ ಮೂಲ ಆದಿವಾಸಿಗಳಿಗಾಗಿ ಹಾಗೂ ಇವರ ಮಕ್ಕಳ ಭವಿಷ್ಯಕ್ಕಾಗಿ ಒಳ ಮೀಸಲಾತಿ ಜಾರಿ ಮಾಡಬೇಕಾಗಿದೆ.

ಕುಡಿಯರ ಭರತ್ ಚಂದ್ರ ದೇವಯ್ಯ
ರಾಜ್ಯಾಧ್ಯಕ್ಷರು
ಕರ್ನಾಟಕ ಕಾಡು, ಕಾಡಂಚಿನ ಅರಣ್ಯಾಧಾರಿತ ಆದಿವಾಸಿಗಳ ಒಕ್ಕೂಟ (ರಿ)