ಅರವೀಡು ವಂಶಸ್ಥರ ಭಾಷೆಯೇ ʼಅರೆಭಾಷೆʼಯ ಮೂಲವಿರಬಹುದೇ?

Date:

Advertisements

ವಿಜಯನಗರ ಸಾಮ್ರಾಜ್ಯವನ್ನು ಸಂಗಮ, ಸಾಳುವ, ತುಳುವ ಹಾಗೂ ಅರವೀಡು ವಂಶಸ್ಥರು ಆಳಿರುತ್ತಾರೆ. ಇವರಲ್ಲಿ ಕೊನೆಯ ರಾಜವಂಶ ಅರವೀಡು ವಂಶಸ್ಥರು ಆರ್ಕಾಟಿನ ಮೂಲದವರಾಗಿರುತ್ತಾರೆ. ಹಾಗಿದ್ದರೂ ಅವರು ಚಾಲುಕ್ಯ ವಂಶ ಮೂಲಿಗರೆಂಬ ನಂಬಿಕೆಯೂ ಇದೆ. ಅದೇ ಅರವೀಡು ವಂಶಸ್ಥರ ಭಾಷೆಯೇ ಅರೆಭಾಷೆಯ ಮೂಲವಿರಬಹುದೇ? ಅರವೀಡು ಭಾಷೆ ಅರಭಾಷೆಯಾಗಿ ಅರೆಭಾಷೆ ಆಗಿರಬಾರದೇಕೆ? ಇದೊಂದು ಜಿಜ್ಞಾಸೆಯಷ್ಟೇ.

ಭಾರತ ದೇಶವೆಂಬುದು ಹಲವು ಭಾಷಾ ಸಂಗಮದ ವೈಶಿಷ್ಟ್ಯತೆಯುಳ್ಳದ್ದು. ಒಂದು ದಾಖಲೆಯಂತೆ ಸರಿಸುಮಾರು ಏಳುನೂರು ಭಾಷೆಗಳಿಗೂ ಮಿಕ್ಕಿದ ಭಾಷಾ ವೈವಿಧ್ಯತೆ ಇದೆ. ಇಂದು ಇಪ್ಪತ್ತೆರಡು ಭಾಷೆಗಳು ಸಂವಿಧಾನದಲ್ಲಿ ಅಧಿಕೃತವಾಗಿ ಮಾನ್ಯತೆಗೊಂಡಿದ್ದು ಉಳಿದ ಭಾಷೆಗಳು ಉಳಿವು ಅಳಿವಿನ ಹೋರಾಟದಲ್ಲಿ ಕ್ಷೀಣಗೊಂಡಿವೆ. ಹಾಗಿದ್ದರೂ ತಮ್ಮ ಭಾಷೆಯ ಅಸ್ಥಿತ್ವದ ಉಳಿಯುವಿಕೆಗಾಗಿ ಆಯಾ ಭಾಷಿಗರ ಹೋರಾಟ ಸಣ್ಣದೇನಲ್ಲ.

ಭಾಷೆ ಎಂಬುದರಲ್ಲಿ ದೊಡ್ಡದು, ಸಣ್ಣದು ಎಂಬುದು ಕೇವಲ ಹಾರಿಕೆಯ ಮಾತು. ಆಯಾ ಭಾಷೆಗಳಿಗೆ ಅದರದೇ ಆದ ವಿಶೇಷತೆಗಳಿರುತ್ತವೆ. ಈ ದೇಶದ ಹಿರಿಮೆಗೆ ವೇದ, ವೇದಾಂತ, ಶ್ಲೋಕ, ಮಂತ್ರ, ಸಾಹಿತ್ಯ, ಪುರಾಣ, ತತ್ವ ಸಿದ್ಧಾಂತಗಳನ್ನು ಅವಲೋಕಿಸಿದಾಗ ಮಂಚೂಣಿಯಲ್ಲಿ ಕಂಡುಬರುವುದು ಸಂಸ್ಕೃತವೇ ಹೌದು. ಹಾಗಿದ್ದರೂ ಅದಕ್ಕೊಂದು ಸ್ವಂತ ಲಿಪಿ ಇಲ್ಲದಿರುವುದೂ ಅಷ್ಟೇ ಸತ್ಯ.

ನಾನೀಗ ಹೇಳಲು ಹೊರಟಿರುವುದು ಅಂತಹದೊಂದು ಭಾಷೆಯ ಬಗ್ಗೆ. ಅದುವೇ ಅರೆಭಾಷೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ ಹಾಗೂ ಅದರ ಸುತ್ತಲಿನ ಪರಿಸರದಲ್ಲಿ, ಕೊಡಗಿನ ಮಡಿಕೇರಿ ತಾಲ್ಲೂಕು ಹಾಗೂ ಅದರ ಸುತ್ತಲಿನ ತಾಲ್ಲೂಕುಗಳಲ್ಲಿ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ ಕಲ್ಲಪ್ಪಳ್ಳಿ ಹಾಗೂ ಬಂದ್ಯಡ್ಕ ಎಂಬಲ್ಲಿ ಜನರ ಮನೆಮಾತಾಗಿ ದಟ್ಟವಾಗಿ ಹರಡಿಕೊಂಡಿರುವ ಈ ಅರೆಭಾಷೆಯ ಬಗ್ಗೆ ಬಹಳ ಅಧ್ಯಯನಗಳೇನೂ ನಡೆದಿಲ್ಲವಾದರೂ ನಾನು ಮೇಲ್ಕಾಣಿಸಿರುವ ಊರುಗಳ ಗೌಡ ಜನಾಂಗದ ಬಹುತೇಕರ ಮನೆ ಮಾತು ಅರೆಭಾಷೆಯಾಗಿದೆ. ಈ ಭಾಷಿಗರು ತಮ್ಮನ್ನು ಹತ್ತಾರು ಕುಟುಂಬ, ಹದಿನೆಂಟು ಗೋತ್ರದ (ಬಳಿ) ಅರೆಭಾಷೆ ಗೌಡರೆಂದು ಗುರುತಿಸಿಕೊಂಡಿದ್ದಾರೆ. ಕನ್ನಡ, ತುಳು, ಮಲೆಯಾಳಂ, ಕೊಡವ ಭಾಷೆಗಳ ನಡುವೆಯೂ ಭಾಷೆಯೊಂದು ತನ್ನ ಸಂಸ್ಕೃತಿಗಳ ಜೊತೆಗೆ ತನ್ನತನದೊಂದಿಗೆ ಉಳಿದಿರುವುದನ್ನು ಕಂಡಾಗ ಆಶ್ಚರ್ಯವೆನಿಸುತ್ತದೆ, ಕುತೂಹಲ ಮೂಡಿಸುತ್ತದೆ.

ಬಲಿಯೇಂದ್ರ
ಸುಳ್ಯದ ಗೌಡರು ದೀಪಾವಳಿಯಲ್ಲಿ ಪೂಜಿಸುವ ಬಲಿಯೇಂದ್ರ

ಭಾಷಾ ಅಧ್ಯಯನಕಾರರ ಹೇಳಿಕೆಯಂತೆ ಭಾಷೆಯೊಂದು ತನ್ನ ಸುತ್ತಲಿನ ಬೇರೆಲ್ಲೂ ಕಂಡುಬರದಿದ್ದರೂ ಒಂದು ಅಥವಾ ಕೆಲ ಪಂಗಡದಲ್ಲಿ ಮಾತ್ರ ಉಳಿದಿದೆಯೆಂದರೆ ಅದು ಬೇರೆಲ್ಲೋ ದೂರದೆಡೆಯಿಂದ ಗುಂಪು ವಲಸೆಯಿಂದ ಬಂದ ಭಾಷೆ ಆಗಿರುತ್ತದೆಂಬುದು. ತನ್ನೊಳಗಿನ ದಟ್ಟ ಶಬ್ಧ ಸಂಪತ್ತು, ಆಡ್ನುಡಿ, ಗಾದೆ ಮಾತುಗಳು, ಸೋಬಾನೆ ಹಾಡುಗಳು, ಆಚರಣೆಯ ವೈಶಿಷ್ಟ್ಯಗಳನ್ನು ಕಂಡಾಗ ಈ ಭಾಷೆ ತಲತಲಾಂತರದಿಂದ ಹರಿದು ಬಂದ ಯಾವುದೋ ಗಂಭೀರ ಭಾಷೆಯೆನಿಸುತ್ತದೆ ಹಾಗೂ ಯಾವುದೋ ದೂರದ ನಾಡಿನಿಂದ ಗುಂಪು ವಲಸೆಯೊಂದಿಗೇ ಬಂದಿರುವ ಭಾಷೆಯೆನಿಸುತ್ತದೆ.

ಹಾಗಿದ್ದರೆ ಎಲ್ಲಿಂದ ಬಂದಿರಬಹುದು‌? ಯಾವ ಕಾರಣದಿಂದ ಬಂದಿಳಿದ ವಲಸೆಯ ಗುಂಪಾಗಿರಬಹುದು? ವಲಸೆಗೆ ಕಾರಣವೇನಿರಬಹುದು? ತೀರಾ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಇತಿಹಾಸದತ್ತ ಹಿಂತಿರುಗಿ ನೋಡಿದಾಗ ಕಂಡು ಬರುವ ಮೂಲವೇ ಅದೊಂದು ಕಾಲ. ಕರುನಾಡಿನ ಇತಿಹಾಸದಲ್ಲೊಂದು ಮಹಾ ಕದಲಿಕೆಗೆ ಕಾರಣವಾಗಿದ್ದ ದುರಂತ ಕಾಲ. ಅದು ಘಟಿಸಿದ್ದು ಹದಿನಾರನೇ ಶತಮಾನದ ಉತ್ತರಾರ್ಧದ 1565ನೇ ಇಸವಿಯ ಜನವರಿ 23ರಂದು. ಅಂದು ವಿಜಯನಗರದ ತಾಳೀಕೋಟೆಯಲ್ಲಿನ ಕೊನೆಯ ಯುದ್ಧ. ಸುಲ್ತಾನರ ಒಕ್ಕೂಟದೆದುರಿನ ಯುದ್ದದಲ್ಲಿ ಅಳಿಯ ರಾಮರಾಯ ಮರಣಿಸುವುದರೊಂದಿಗೆ ವಿಜಯನಗರ ಸಾಮ್ರಾಜ್ಯ ಇನ್ನಿಲ್ಲವಾಗುತ್ತದೆ. ಅದಾದ ತಕ್ಷಣವೇ ವಿಜಯನಗರದ ಕೊನೆಯ ಅರಸ ತಿರುಮಲರಾಯ ಹಾಗೂ ಸಹೋದರ ರಂಗರಾಯ ವಿಜಯನಗರದ ಅಪಾರ ಸಂಪತ್ತಿನೊಡನೆ ಪೆನಗೊಂಡದತ್ತ ಪಲಾಯನ ಮಾಡುತ್ತಾರೆ. ಅರಾಜಕತೆಗೆ ಒಳಗಾದ ಹಾಗೂ ಸುಲ್ತಾನರ ಲೂಟಿಗೆ ಬೆದರಿದ ವಿಜಯನಗರದಿಂದ ಮಹಾ ವಲಸೆ ಪ್ರಾರಂಭವಾಗುತ್ತದೆ.

Advertisements

ಅಂದಿನ ವಲಸೆಯಲ್ಲಿ ಗುಂಪೊಂದು ವಿಜಯನಗರದ ಅಂದಿನ ಬಲಿಷ್ಠ ಸಾಮಂತರಾಗಿದ್ದ ಕೆಳದಿ ಸಂಸ್ಥಾನದತ್ತ ಸಾಗಿ ಬಂದು ಕೆಲಕಾಲದ ಆಶ್ರಯದ ನಂತರ ಈ ದಿಕ್ಕಿನತ್ತ ಸಾಗಿರುವ ಸಾಧ್ಯತೆ ಹಾಗೂ ಅವರೊಡನೆಯೇ ಬಂದ ಭಾಷೆ ಇದಾಗಿರಬಹುದೆಂದು ನಂಬಬಹುದಾಗಿದೆ. ವಿಜಯನಗರ ಸಾಮ್ರಾಜ್ಯವನ್ನು ಸಂಗಮ, ಸಾಳುವ, ತುಳುವ ಹಾಗೂ ಅರವೀಡು ವಂಶಸ್ಥರು ಆಳಿರುತ್ತಾರೆ. ಇವರಲ್ಲಿ ಕೊನೆಯ ರಾಜವಂಶ ಅರವೀಡು ವಂಶಸ್ಥರು ಆರ್ಕಾಟಿನ ಮೂಲದವರಾಗಿರುತ್ತಾರೆ, ಹಾಗಿದ್ದರೂ ಅವರು ಚಾಲುಕ್ಯ ವಂಶ ಮೂಲಿಗರೆಂಬ ನಂಬಿಕೆಯೂ ಇದೆ. ಅದೇ ಅರವೀಡು ವಂಶಸ್ಥರ ಭಾಷೆಯೇ ಅರೆಭಾಷೆಯ ಮೂಲವಿರಬಹುದೇ ? ಅರವೀಡು ಭಾಷೆ ಅರಭಾಷೆಯಾಗಿ ಅರೆಭಾಷೆ ಆಗಿರಬಾರದೇಕೆ?

ಕೋಡಿ ಕುಶಾಲಪ್ಪ ಗೌಡ
ಭಾಷಾವಿಜ್ಞಾನಿ ಪ್ರೊ ಕೋಡಿ ಕುಶಾಲಪ್ಪ ಗೌಡ

ಈ ಮಾತಿಗೆ ಪೂರಕವೆಂಬಂತ ಮಾತುಗಳು ಅಲ್ಲಿಲ್ಲಿ ಕೇಳಿ ಬರುತ್ತವೆ. ಬರಹಗಾರ ನಿಡಂಜಿ ಕರುಣಾಕರ ಎಂಬವರು ತಮ್ಮ ಲೇಖನವೊಂದರಲ್ಲಿ ಈ ಭಾಷೆಯನ್ನು ರಾಜರ ಭಾಷೆಯೆಂದು ನಮೂದಿಸಿರುತ್ತಾರೆ. ಅನಂತರಾಜ ಗೌಡ ಎಂಬವರು ತಮ್ಮ ಇತಿಹಾಸ ಅಧ್ಯಯನದ ಪುಸ್ತಕದಲ್ಲಿ ಈ ಭಾಷೆಯಾಡುವ ಜನರನ್ನು ರಾಜಪರಂಪರೆಯ ಮೂಲದವರೆಂದು ಉಲ್ಲೇಖಿಸುತ್ತಾರೆ. ಡಾ ಪುರುಷೋತ್ತಮ ಬಿಳಿಮಲೆಯವರು ಈ ಭಾಷೆ ರಾಜಭಾಷೆಯೆಂದು ಹೇಳುತ್ತಾರೆ. ಕನ್ನಡದ ಭಾಷಾ ವಿಜ್ಞಾನಿ ದಿ. ಪ್ರೊ ಕೋಡಿ ಕುಶಾಲಪ್ಪ ಗೌಡರು ಅರೆಭಾಷೆಗೆ ವ್ಯಾಕರಣ ಬರೆದರು. ಈ ಅರೆಭಾಷೆಗೂ ಹಾಗೂ ವಿಜಯನಗರದಲ್ಲಿ ಪ್ರಚಲಿತವಿದ್ದ ತೆಲುಗಿಗೂ ಇರುವ ಹಲವು ವ್ಯಾಕರಣ ಸಾಮ್ಯತೆಯ ಬಗ್ಗೆ ಹೇಳಿರುತ್ತಾರೆ. ಇವೆಲ್ಲವನ್ನು ಕಂಡಾಗ ಈ ಭಾಷೆಯ ಬಗೆಗಿನ ಅಧ್ಯಯನ ಅಗತ್ಯವೆನಿಸುತ್ತದೆ ಹಾಗೂ ಅದು ಈ ಭಾಷೆಯ ಬಗೆಗಿನ ಮಹತ್ವ ಸಾರಬಲ್ಲದ್ದಾಗಿರುತ್ತದೆ.

ಕೊನೆಯದಾಗಿ ಈ ಭಾಷೆಯನ್ನಾಡುವ ಸುಳ್ಯದ ಗೌಡ ಜನಾಂಗದಲ್ಲಿನ ಕೆಲವೊಂದು ಮನೆತನಗಳವರು ರಾಜವಂಶಿಗರೆಂಬ ಐತಿಹ್ಯಗಳೂ ಕೇಳಿಬರುತ್ತವೆ. ಇಂದಿನ ಸುಳ್ಯದ ಹಿಂದಿನ ಹೆಸರು ಅಮರ ಸುಳ್ಯ ಎಂಬುದಾಗಿ. ಇಲ್ಲಿ ಅಮರ ಎಂಬ ಪದಬಳಕೆಯ ಬಗ್ಗೆ ಹಲವು ಕತೆಗಳಿವೆ. ಆದರೆ ಆ ಅಮರ ಪದದ ಕೊಂಡಿಯೂ ಮತ್ತೆ ವಿಜಯನಗರದತ್ತ ಜೋಡಣೆಗೊಳ್ಳುತ್ತದೆ. ವಿಜಯನಗರದ ಆಡಳಿತದಲ್ಲಿ ರಾಜ್ಯನಿಷ್ಠನಾದ ಅಪ್ರತಿಮ ಸೈನಿಕರಿಗೆ ನೀಡುವ ಜಹಗೀರು ಭೂಮಿಗೆ ಅಮರ ಅಥವಾ ಅಮರಮ್ ಎಂಬ ಹೆಸರಿರುತ್ತದೆ. ಅದೇ ಅಮರ ಪದವೂ ವಿಜಯನಗರದ ಸಾಮಂತರಾಗಿದ್ದ ಕೆಳದಿ‌ ಸಂಸ್ಥಾನದಿಂದ ನಮ್ಮ ಸುಳ್ಯಕ್ಕೆ ಬಂದಿರುವ ಸಾಧ್ಯತೆಯಿದೆ.

ಒಟ್ಟಿನಲ್ಲಿ ಕುತೂಹಲಿಗರಾದ ಇಲ್ಲಿನ ಇತಿಹಾಸದ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಮುಂದುವರಿಯಬೇಕಿದೆ. ಹಾಗೂ ಕರ್ನಾಟಕ ಅರೆಭಾಷೆ ಸಾಹಿತ್ಯ ಹಾಗೂ ಸಂಸ್ಕೃತಿ ಅಕಾಡೆಮಿ ಈ ಬಗ್ಗೆ ಗಮನಹರಿಸಿ ಮುಂದುವರಿಯಬೇಕಿದೆ.

Tejkumar K R
ತೇಜ್‌ಕುಮಾರ್‌ ಬಡ್ಡಡ್ಕ, ಸುಳ್ಯ
+ posts

ಕೃಷಿಕ,
ಕಾದಂಬರಿಕಾರ. ಪ್ರಸ್ತುತ
ಅರೆಭಾಷೆ ಸಾಹಿತ್ಯ ಅಕಾಡೆಮಿ ಸದಸ್ಯ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ತೇಜ್‌ಕುಮಾರ್‌ ಬಡ್ಡಡ್ಕ, ಸುಳ್ಯ
ತೇಜ್‌ಕುಮಾರ್‌ ಬಡ್ಡಡ್ಕ, ಸುಳ್ಯ
ಕೃಷಿಕ, ಕಾದಂಬರಿಕಾರ. ಪ್ರಸ್ತುತ ಅರೆಭಾಷೆ ಸಾಹಿತ್ಯ ಅಕಾಡೆಮಿ ಸದಸ್ಯ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X