ಚೀನಾದ ಎರಡು ಕಂಪನಿಗಳಿಂದ 2020ರ ಏಪ್ರಿಲ್ ತಿಂಗಳಲ್ಲಿ ಪ್ರತಿ ಪಿಪಿಇ ಕಿಟ್‌ಗೆ 2000 ರೂಪಾಯಿ ದರ ಕೊಟ್ಟು ಖರೀದಿಸಿದ್ದಾರೆ. ಭಾರತದಲ್ಲಿ ಆಗ ಅಂತಹ ಕಿಟ್ ಒಂದಕ್ಕೆ ಕೇವಲ 300 ರೂಪಾಯಿಗಳು ಇತ್ತು. ಇದಕ್ಕೆ ಯಾವ ಟೆಂಡರೂ ಕರೆದಿರಲಿಲ್ಲ. ಜೊತೆಗೆ ಸರ್ಕಾರದ ಪಾರದರ್ಶಕ ಕಾಯಿದೆಯ ನೀತಿನಿಯಮಗಳನ್ನೂ ಪಾಲಿಸಿಲ್ಲ.
ನಾಲ್ಕು ವರ್ಷಗಳ ಹಿಂದೆ ಕೋವಿಡ್ ಮಹಾಮಾರಿ ಬಂದು ಎಲ್ಲರನ್ನೂ ಕಾಡಿ ಹೋದರೂ ಅದರ ಬಗ್ಗೆ ಚರ್ಚೆ ಇನ್ನೂ ನಿಲ್ಲುತ್ತಿಲ್ಲ. ಕೋವಿಡ್ ಸಮಯದಲ್ಲಿ ಆಗಿನ ಆಡಳಿತಾರೂಢ ಪಕ್ಷ ಬಿಜೆಪಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅಕ್ರಮ ನಡೆಸಿತ್ತು ಎಂಬ ಆರೋಪ ಕೇಳಿಬಂದಿತ್ತು. ವಿರೋಧ ಪಕ್ಷ ಕಾಂಗ್ರೆಸ್ ದಾಖಲೆ ಸಹಿತ ಆರೋಪ ಮಾಡಿತ್ತು. ಅದೇ ರೀತಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಕೋವಿಡ್-19 ವೈದ್ಯಕೀಯ ಉಪಕರಣಗಳ ಖರೀದಿ ಅವ್ಯವಹಾರ ತನಿಖೆಗೆ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಅವರ ವಿಚಾರಣಾ ಆಯೋಗವನ್ನು ರಚಿಸಿತ್ತು. ಈ ಆಯೋಗ ಆಗಸ್ಟ್ 31ರಂದು ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಿದೆ. ಅದರ ಕೆಲವು ಅಂಶಗಳು ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿವೆ.
ಇತ್ತೀಚೆಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ವರದಿಯ ಆಧಾರದ ಮೇಲೆ ಕೈಗೊಳ್ಳಬೇಕಾಗುವ ಕ್ರಮಗಳ ಕುರಿತು ಚರ್ಚೆ ನಡೆದಿದೆ. ಆಯೋಗವು 11 ಸಂಪುಟಗಳಲ್ಲಿ ವರದಿ ನೀಡಿದೆ. 7,223.64 ಕೋಟಿ ರೂಪಾಯಿಗಳ ಮೊತ್ತದ ಅವ್ಯವಹಾರದ ತನಿಖೆ ನಡೆದಿದೆ ಮತ್ತು 500 ಕೋಟಿ ರೂಪಾಯಿಗಳ ವಸೂಲಾತಿಗೆ ಶಿಫಾರಸ್ಸು ಮಾಡಿದೆ. ಬಿಬಿಎಂಪಿಯ ನಾಲ್ಕು ವಲಯಗಳ ಹಾಗೂ 31 ಜಿಲ್ಲೆಗಳ ವರದಿ ಸಂಗ್ರಹ ಬಾಕಿ ಇದೆ. ಸುಮಾರು 55 ಸಾವಿರ ಕಡತಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದು ಪರಿಶೀಲಿಸಿ ವರದಿ ನೀಡಲಾಗಿದೆ. ಅದರ ಮೇಲೆ ಕೆಲವು ನಿರ್ಣಯಗಳನ್ನು ಸರ್ಕಾರ ಕೈಗೊಂಡಿದೆ. ಇದರಲ್ಲಿ ಕ್ರಿಮಿನಲ್ ಕಂಟೆಂಟ್ ಇರುವುದರಿಂದ ವಿಶೇಷ ತನಿಖಾ ತಂಡ (ಎಸ್‍ಐಟಿ) ರಚನೆಗೆ ತೀರ್ಮಾನ ಮಾಡಲಾಗಿದೆ. ಇದರ ಜೊತೆಗೆ ಕ್ಯಾಬಿನೆಟ್ ಸಬ್ ಕಮಿಟಿ ಸಹ ರಚನೆ ಮಾಡಲು ಸರ್ಕಾರ ನಿರ್ಣಯ ಕೈಗೊಂಡಿದೆ.
ಈ ಹಗರಣದ ಒಂದು ಉದಾಹರಣೆ ಕೊಡುವುದಾದರೆ ಮೂರು ಲಕ್ಷ ಸುರಕ್ಷತಾ (ಪಿಪಿಇ) ಕಿಟ್‌ಗಳ ಖರೀದಿಯಲ್ಲಿ ಚೀನಾದ ಎರಡು ಕಂಪನಿಗಳಿಂದ 2020ರ ಏಪ್ರಿಲ್ ತಿಂಗಳಲ್ಲಿ ಪ್ರತಿ ಕಿಟ್‌ಗೆ 2000 ರೂಪಾಯಿ ದರ ಕೊಟ್ಟು ಖರೀದಿಸಿದ್ದಾರೆ. ಭಾರತದಲ್ಲಿ ಆಗ ಇಂತಹ ಪಿಪಿಇ ಕಿಟ್ ಒಂದಕ್ಕೆ 300 ರೂಪಾಯಿಗಳು ಇತ್ತು. ಇದಕ್ಕೆ ಯಾವ ಟೆಂಡರೂ ಕರೆದಿಲ್ಲ. ಜೊತೆಗೆ ಸರ್ಕಾರದ ಪಾರದರ್ಶಕ ಕಾಯಿದೆಯ ನೀತಿನಿಯಮಗಳನ್ನೂ ಪಾಲಿಸಿಲ್ಲ. ವರದಿಯ ಪ್ರಕಾರ ಇದನ್ನು ಆಗಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರ ನಿರ್ದೇಶನದ ಪ್ರಕಾರ ಮಾಡಲಾಗಿದೆ. ತಮಗೆ ಬೇಕಾದ ಕಂಪನಿಗಳಿಗೆ ಪಿಪಿಇ ಕಿಟ್‌ಗಳನ್ನು ಪೂರೈಸುವಂತೆ ಆದೇಶ ನೀಡಲಾಗಿದೆ. ಇದೊಂದೇ ಬಾಬ್ತಿನಲ್ಲಿ ಒಟ್ಟು 14 ಕೋಟಿ ರೂಪಾಯಿ ಅಕ್ರಮ ಆಗಿದೆ ಎಂದು ತಿಳಿದುಬಂದಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ವಸ್ತುಸ್ಥಿತಿ ಹೀಗಿರಬೇಕಾದರೆ ಇನ್ನೂ ಕೆದಕಿ ತನಿಖೆ ಮಾಡಿದರೆ ಅದೆಷ್ಟು ಅಕ್ರಮ ಬೆಳಕಿಗೆ ಬರಲಿದೆಯೋ! ಭಾರತೀಯ ಕಂಪನಿಗಳನ್ನು ಏಕೆ ಈ ವೈದ್ಯಕೀಯ ಪರಿಕರ ಪೂರೈಕೆಗೆ ನಿಯೋಜಿಸಿಕೊಳ್ಳಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಬೇಕಿದೆ.
ಕೋವಿಡ್ ಹಗರಣದಲ್ಲಿ ಭಾಗಿಯಾದ ಕಂಪನಿಗಳು ಮತ್ತು ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಎಲ್ಲೆಲ್ಲಿ ಅವ್ಯವಹಾರ ಆಗಿದೆ ಅದರ ಬಗ್ಗೆ ಎಸ್‍ಐಟಿ ಗಮನ ಹರಿಸಿ ಆಮೂಲಾಗ್ರ ತನಿಖೆ ಮಾಡಬೇಕು. ಇದಿಷ್ಟೇ ಅಲ್ಲ, ಇಷ್ಟು ದೊಡ್ಡ ಹಗರಣದಲ್ಲಿ ಯಾರ ಪಾತ್ರ ಏನು ಎಂಬುದು ತನಿಖೆಯಿಂದ ತಿಳಿದು ಬರಬೇಕು. ಪೂರ್ಣ ವರದಿ ಬಂದ ಮೇಲೆ ಅವ್ಯವಹಾರದ ಪಾಲುದಾರರು ಮತ್ತು ಯಾರೇ ತಪ್ಪಿತಸ್ಥರಿದ್ದರೂ ಅವರ ಮೇಲೆ ಕಾನೂನಿನ ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸ ಮಾಡಿದವರು ತಪ್ಪಿಸಿಕೊಳ್ಳಬಾರದು. ತಪ್ಪಿಸಿಕೊಳ್ಳಲು ಬಿಡಲೂ ಬಾರದು. ಜನತೆಗೆ ಈ ವಿಷಯಗಳೆಲ್ಲಾ ತಿಳಿಯಬೇಕು. ಇಂತಹ ಪ್ರಕರಣಗಳು ಮುಂದೆ ನಡೆಯಬಾರದು.
ಇದನ್ನೂ ಓದಿ ನ್ಯಾ. ಡಿ ಕುನ್ಹಾ ವಿರುದ್ಧ ಹೇಳಿಕೆ; ಪ್ರಲ್ಹಾದ್ ಜೋಶಿ ವಿರುದ್ಧ ರಾಜ್ಯಪಾಲರಿಗೆ ಸಚಿವರಿಂದ ದೂರು

ಡಾ ವಸುಂಧರಾ ಭೂಪತಿ
ವೈದ್ಯೆ, ಹಿರಿಯ ಲೇಖಕಿ