ರಾಜ್ಯಗಳ ರಾಜಕೀಯ ಭವಿಷ್ಯಕ್ಕೆ ‘ಜನಸಂಖ್ಯೆ’ ಮಾನದಂಡ – ಅಪಾಯಕಾರಿಯಲ್ಲವೇ?

Date:

Advertisements
ಜನಸಂಖ್ಯೆಯು ರಾಜಕೀಯ ಚೌಕಟ್ಟಿನೊಳಗೆ ಬಂದಿದ್ದು, ಅದು ರಾಜ್ಯಗಳ ರಾಜಕೀಯ ಭವಿಷ್ಯದ ಮಾನದಂಡವೂ ಆಗುತ್ತಿರುವುದು ಅಪಾಯಕಾರಿ ಪ್ರವೃತ್ತಿಯಾಗುತ್ತಿದೆ. ಇದು, ಪ್ರಾದೇಶಿಕ ಅಸಮಾನತೆಯನ್ನು ಹೆಚ್ಚಿಸುತ್ತದೆ. 

ಅಂತಾರಾಷ್ಟ್ರೀಯ ಮಹಿಳಾ ದಿನ – ಮಾರ್ಚ್‌ 8ರಂದು, ತೆಲುಗು ದೇಶಂ ಪಕ್ಷದ (ಟಿಡಿಪಿ) ಸಂಸದ ಕಾಳಿಸೆಟ್ಟಿ ಅಪ್ಪಲನಾಯ್ಡು ಅವರು, ”ಒಬ್ಬ ಮಹಿಳೆಯು ಮೂರನೇ ಮಗುವಿಗೆ (ಹೆಣ್ಣು ಮಗುವಿಗೆ) ಜನ್ಮ ನೀಡಿದರೆ 50,000 ರೂ. ಹಣ ನೀಡುತ್ತೇನೆ. ಆ ಮಗು ಗಂಡಾಗಿದ್ದರೆ ಹಸುವನ್ನು ಉಡುಗೊರೆ ನೀಡುತ್ತೇನೆ” ಎಂದು ಘೋಷಿಸಿದ್ದರು.

ಅವರ ಹೇಳಿಕೆಯು, 2024ರ ಅಕ್ಟೋಬರ್‌ನಲ್ಲಿ ತಮ್ಮ ಪಕ್ಷದ ನಾಯಕ, ಆಂಧಪ್ರದೇಶ ಮುಖ್ಯಮಂತ್ರಿ ಎನ್‌ ಚಂದ್ರಬಾಬು ನಾಯ್ಡು ಅವರು ಹೇಳಿದ್ದ ‘ರಾಜ್ಯದ ಮಹಿಳೆಯರು ಹೆಚ್ಚು ಮಕ್ಕಳನ್ನು ಹೆರಬೇಕು. ಮಕ್ಕಳ ಸಂಖ್ಯೆಯನ್ನು ಲೆಕ್ಕಿಸದೆ ಎಲ್ಲ ಹೆರಿಗೆಗಳಿಗಾಗಿ ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ರಜೆ ನೀಡಲಾಗುವುದು’ ಎಂಬ ಮಾತಿನ ಮುಂದುವರಿಕೆಯಾಗಿತ್ತು.

ಅಲ್ಲದೆ, ಈ ವರ್ಷದ ಜನವರಿಯ ಆರಂಭದಲ್ಲಿ ಮಾತನಾಡಿದ್ದ ನಾಯ್ಡು, “ಒಬ್ಬ ವ್ಯಕ್ತಿ ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗುತ್ತಾರೆ. ಅವರು ಸರ್ಪಂಚ್, ಪುರಸಭೆ ಕೌನ್ಸಿಲರ್ ಅಥವಾ ಮೇಯರ್ ಆಗಬಹುದು” ಎಂದು ಹೇಳಿದ್ದರು.

Advertisements

ಇಂತಹ ಹೇಳಿಕೆಗಳು ಮತ್ತು ಘೋಷಣೆಗಳು ಆಂಧ್ರಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ದಕ್ಷಿಣ ರಾಜ್ಯಗಳಾದ್ಯಂತ, ರಾಜಕೀಯ ಧ್ವನಿಯಲ್ಲಿ ಇಂತಹ ಹೇಳಿಕೆಗಳು ಹೊರಹೊಮ್ಮುತ್ತಿವೆ.

ಕಳೆದ ವಾರ, ಡಿಎಂಕೆ ನಾಯಕ – ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ನಾಗಪಟ್ಟಣಂನಲ್ಲಿ ನಡೆದ ತಮ್ಮ ಪಕ್ಷದ ಮುಖಂಡನ ವಿವಾಹ ಸಮಾರಂಭದಲ್ಲಿ ಮಾತನಾಡಿದ್ದರು. ”ಹಿಂದೆ, ನಾವು ಮದುವೆ ಬಳಿಕ ಮಕ್ಕಳನ್ನು ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳಿ, ಆತುರಪಡಬೇಡಿ, ಫ್ಯಾಮಿಲಿ ಪ್ಲಾನಿಂಗ್ ಮಾಡಿಕೊಳ್ಳಿ ಎನ್ನುತ್ತಿದ್ದೆವು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ವಿವಾಹಿತ ದಂಪತಿಗಳು ವಿಳಂಬವಿಲ್ಲದೆ ಮಕ್ಕಳನ್ನು ಮಾಡಿಕೊಳ್ಳಿ ಎನ್ನಬೇಕಾದ ಪರಿಸ್ಥಿತಿಯಿದೆ. ನಮ್ಮಲ್ಲಿ ಹೆಚ್ಚಿನ ಜನಸಂಖ್ಯೆ ಇದ್ದರೆ ಮಾತ್ರ ನಮಗೆ ಹೆಚ್ಚಿನ ಸಂಸದರು ಸಿಗುತ್ತಾರೆ ಎಂಬಂತಾಗಿದೆ. ನಾವು ಜನಸಂಖ್ಯಾ ನಿಯಂತ್ರಣದಲ್ಲಿ ಯಶಸ್ವಿಯಾದದ್ದೇ ಈ ಪರಿಸ್ಥಿತಿಗೆ ಕಾರಣ ಎನ್ನುವಂತಾಗಿದೆ. ತಕ್ಷಣ ಮಕ್ಕಳನ್ನು ಮಾಡಿಕೊಳ್ಳಿ, ಅವರಿಗೆ ಸುಂದರವಾದ ತಮಿಳು ಹೆಸರುಗಳನ್ನೇ ಇಡಿ” ಎಂದು ಹೇಳಿದ್ದರು.

ಅಂತೆಯೇ, ದಕ್ಷಿಣ ರಾಜ್ಯಗಳ ಕಾಂಗ್ರೆಸ್‌ ಮುಖ್ಯಮಂತ್ರಿಗಳಾದ ಕರ್ನಾಟಕದ ಸಿದ್ದರಾಮಯ್ಯ ಮತ್ತು ತೆಲಂಗಾಣದ ಎ. ರೇವಂತ್ ರೆಡ್ಡಿ ಅವರು ‘ಜನಸಂಖ್ಯಾ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡು ಯಶಸ್ಸು ಸಾಧಿಸಿದ್ದಾಗಿ, ದಕ್ಷಿಣದ ರಾಜ್ಯಗಳು ಅನ್ಯಾಯವಾಗಿ ಶಿಕ್ಷೆಗೆ ಗುರಿಯಾಗುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೇವಂತ್ ರೆಡ್ಡಿ ಹೇಳಿದಂತೆ, “ಕೇಂದ್ರ ಸರ್ಕಾರವು ರಾಷ್ಟ್ರೀಯ ಕುಟುಂಬ ನೀತಿಯಡಿ ‘ಹಮ್ ದೋ, ಹಮಾರೆ ದೋ’ (ನಾವಿಬ್ಬರು, ನಮಗಿಬ್ಬರು) ಎಂಬ ಯೋಜನೆ ತಂದಿತು. ಅದನ್ನು ದಕ್ಷಿಣದ ರಾಜ್ಯಗಳು ಜಾರಿಗೆ ತಂದು, ಪಾಲಿಸಿದರು. ಅದೇ ಕಾರಣಕ್ಕೆ ಈಗ ಅವರು ನಮ್ಮನ್ನು ಶಿಕ್ಷಿಸಲು ಬಯಸುತ್ತಿದ್ದಾರೆ” ಎಂದು ಹೇಳಿದ್ದಾರೆ.

ಈ ಕಳವಳಕಾರಿ ಹೇಳಿಕೆಗಳು ದಕ್ಷಿಣ ರಾಜ್ಯಗಳಲ್ಲಿ ಜನಸಂಖ್ಯಾ ನಿಯಂತ್ರಣವೇ ಮುಳುವಾಗಿದೆ ಎಂದು ಭಾವಿಸುವಂತೆ ಮಾಡಿವೆ. ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಿ, ತಮಿಳು ಹೆಸರನ್ನೇ ಇಡಿ ಎನ್ನುವ ಸ್ಟಾಲಿನ್ ಅವರ ಕರೆಯಲ್ಲಿ ಜನಸಂಖ್ಯೆಯನ್ನು ಹೆಚ್ಚಿಸುವುದು ಮಾತ್ರವೇ ಉದ್ದೇಶವಲ್ಲ. ಅದನ್ನೂ ಮೀರಿದ ಹಲವಾರು ಕಾಳಜಿಗಳನ್ನು ಪ್ರತಿಬಿಂಬಿಸುತ್ತಿವೆ. ತಮಿಳು ಸೇರಿದಂತೆ ದಕ್ಷಿಣ ರಾಜ್ಯಗಳ ‘ಐಡೆಂಟಿಟಿ’ಗೆ ಇರುವ ಬೆದರಿಕೆಗಳನ್ನು ಮೆಟ್ಟಿ, ಸಾಂಸ್ಕೃತಿಕ ಸಂರಕ್ಷಣೆಯ ಉದ್ದೇಶವನ್ನೂ ಒತ್ತಿ ಹೇಳುತ್ತದೆ.

ಇದೆಲ್ಲವೂ ಚರ್ಚೆಯಾಗುತ್ತಿರುವುದು ಕೇಂದ್ರ ಸರ್ಕಾರವು ಜನಸಂಖ್ಯೆ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡುತ್ತೇವೆ ಎಂದು ಹೇಳಿರುವ ಕಾರಣದಿಂದಾಗಿ. ಉತ್ತರದ ರಾಜ್ಯಗಳಿಗೆ ಹೋಲಿಸಿದರೆ, ದಕ್ಷಿಣದ ರಾಜ್ಯಗಳು ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸಲು ಹೆಚ್ಚು ಶ್ರಮಿಸಿವೆ. ಮಾತ್ರವಲ್ಲ, ನಿಯಂತ್ರಿಸಿವೆ. ಆದರೆ, ಉತ್ತರದ ರಾಜ್ಯಗಳಲ್ಲಿ ಜನಸಂಖ್ಯಾ ಬೆಳವಣಿಗೆ ಎಗ್ಗಿಲ್ಲದೆ ಬೆಳೆದುನಿಂತಿದೆ.

ಹೀಗಿರುವಾಗ, ಕ್ಷೇತ್ರ ಮರುವಿಂಗಡಣೆಗೆ ಜನಸಂಖ್ಯೆಯೇ ಮಾನದಂಡವಾಗಿಬಿಟ್ಟರೆ, ಅಧಿಕ ಜನಸಾಂದ್ರತೆ ಹೊಂದಿರುವ ಉತ್ತರದ ರಾಜ್ಯಗಳು ಹೆಚ್ಚು ಲೋಕಸಭಾ ಸ್ಥಾನಗಳನ್ನು ಪಡೆಯುತ್ತವೆ. ಅದರಲ್ಲೂ, ಉತ್ತರ ಪ್ರದೇಶದಂತಹ ರಾಜ್ಯ ಬರೋಬ್ಬರಿ 63 ಅಧಿಕ (80ರಿಂದ 143ಕ್ಕೆ ಏರಿಕೆ) ಸ್ಥಾನಗಳನ್ನು ಪಡೆಯಲಿದೆ. ಅಂತೆಯೇ ಉತ್ತರ ರಾಜ್ಯಗಳು ಈಗಿರುವ ಸ್ಥಾನಗಳಿಗಿಂತ ಅರ್ಧ ಪಟ್ಟು ಹೆಚ್ಚು ಸ್ಥಾನಗಳನ್ನು ಪಡೆಯಲಿವೆ. ಆದರೆ, ಜನಸಂಖ್ಯೆಯನ್ನು ನಿಯಂತ್ರಿಸಿರುವ ದಕ್ಷಿಣದ ರಾಜ್ಯಗಳು ಇರುವ ಸ್ಥಾನಗಳಲ್ಲೂ ಕೆಲವನ್ನು ಕಳೆದುಕೊಳ್ಳುವ ಆತಂಕದಲ್ಲಿವೆ. ಸ್ಥಾನಗಳನ್ನು ಕಳೆದುಕೊಳ್ಳುವುದು ಸಂಸತ್‌ನಲ್ಲಿ ದಕ್ಷಿಣದ ಧ್ವನಿಯನ್ನೇ ಅಡಗಿಸಿದಂತಾಗುತ್ತದೆ. ಇದೇ ಹೆಚ್ಚು ಮಕ್ಕಳನ್ನು ಹೊಂದುವ ಚರ್ಚೆಗೆ ಮೂಲ ಕಾರಣವೂ ಆಗಿದೆ.

ಕೇಂದ್ರ ಸಚಿವ ಅಮಿತ್ ಶಾ ಅವರು ‘ದಕ್ಷಿಣದ ರಾಜ್ಯಗಳು ಒಂದೇ ಒಂದು ಕ್ಷೇತ್ರವನ್ನೂ ಕಳೆದುಕೊಳ್ಳುವುದಿಲ್ಲ’ ಎಂಬ ಹೇಳಿಕೆ ನೀಡಿದ್ದಾರೆ. ಆದರೆ, ಅವರ ಮಾತಿನಲ್ಲಿ ದಕ್ಷಿಣದ ರಾಜ್ಯಗಳು ಕೂಡ ಹೆಚ್ಚು ಕ್ಷೇತ್ರಗಳನ್ನು ಪಡೆಯುತ್ತವೆ ಎಂಬ ಭರವಸೆ ಇರಲಿಲ್ಲ. ಅಂದರೆ, ಉತ್ತರ ರಾಜ್ಯಗಳ ಸಂಸದ ಸ್ಥಾನಗಳು ಗಣನೀಯವಾಗಿ ಏರುತ್ತವೆ. ದಕ್ಷಿಣ ರಾಜ್ಯಗಳ ಸ್ಥಾನಗಳಲ್ಲಿ ಯಾವುದೇ ಏರಿಕೆ ಇರುವುದಿಲ್ಲ ಎಂಬುದು ಸ್ಪಷ್ಟ.

ಹೀಗಾಗಿ, ದಕ್ಷಿಣದ ರಾಜ್ಯಗಳು ಸಂಸತ್‌ನಲ್ಲಿ ತಮ್ಮ ಧ್ವನಿಯನ್ನು ಉಳಿಸಿಕೊಳ್ಳಲು, ತಮ್ಮ ಇರುವಿಕೆಯನ್ನು ದೃಢಪಡಿಸಲು, ತಮ್ಮ ‘ಐಡೆಂಟಿಟಿ’ಯನ್ನು ಖಾತ್ರಿಪಡಿಸಿಕೊಳ್ಳಲು, ಮುಖ್ಯವಾಗಿ ಹೆಚ್ಚು ಸ್ಥಾನಗಳನ್ನು ಪಡೆಯಲು ಹೆಚ್ಚು ಮಕ್ಕಳನ್ನು ಹೊಂದುವುದು ಅನಿವಾರ್ಯವೆಂದು ಭಾವಿಸಿವೆ. ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಮಾಡುವುದನ್ನು ದಕ್ಷಿಣದ ರಾಜ್ಯಗಳು ವಿರೋಧಿಸುತ್ತಿವೆ.

ಆದಾಗ್ಯೂ, ಆಂಧ್ರ ಮುಖ್ಯಮಂತ್ರಿ ನಾಯ್ಡು ಅವರು ಕ್ಷೇತ್ರ ಮರುವಿಂಗಡಣೆಯಿಂದ ತಮಗೆ ಬೆದರಿಕೆ ಇಲ್ಲ ಎನ್ನುತ್ತಿದ್ದಾರೆ. ಈ ಪ್ರಕ್ರಿಯೆಯು ‘ರಾಷ್ಟ್ರೀಯ ಹಿತಾಸಕ್ತಿ’ಗೆ ಪೂರಕವೆಂದು ಅವರು ಪ್ರತಿಪಾದಿಸುತ್ತಿದ್ದಾರೆ. ಅವರು ಕೇಂದ್ರ ಸರ್ಕಾರದಲ್ಲಿ ಎನ್‌ಡಿಎ ಭಾಗವಾಗಿದ್ದಾರೆ. ಮೋದಿ-ಶಾ ಜೊತೆ ಜಟಾಪಟಿ ನಡೆಸಿ ಆಂಧ್ರಕ್ಕೆ ಹೆಚ್ಚುವರಿ ಸ್ಥಾನಗಳನ್ನು ದಕ್ಕಿಸಿಕೊಳ್ಳಲು ತಮಗೆ ಅವಕಾಶವಿದೆ ಎಂದು ಅವರು ಭಾವಿಸಿದ್ದಾರೆ. ಹೀಗಾಗಿಯೇ, ಅವರು ಕೇಂದ್ರದ ನಿಲುವಿನ ಜೊತೆಗಿದ್ದಾರೆ. ಆದರೆ, ಅದು ಸಾಧ್ಯವಾಗುತ್ತದೆ ಎಂಬುದಕ್ಕೆ ಯಾವುದೇ ಖಾತರಿಯಿಲ್ಲ. ಆದ್ದರಿಂದಲೇ, ಅವರೂ ಕೂಡ ಹೆಚ್ಚು ಮಕ್ಕಳು ಪಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ.

ದಕ್ಷಿಣದ ಉಳಿದ ರಾಜ್ಯಗಳಲ್ಲಿ ಕ್ಷೇತ್ರ ಕಡಿತಗೊಳ್ಳುವ ಆಂತಕ ಹೆಚ್ಚಾಗಿದೆ. ಕೇಂದ್ರದ ನಿಲುವನ್ನು ವಿರೋದಿಸುತ್ತಿವೆ. ಹೋರಾಟ ರೂಪಿಸುತ್ತಿವೆ. ಹೋರಾಟದಲ್ಲಿ ತಮಿಳುನಾಡು ಮುಂಚೂಣಿಯಲ್ಲಿದೆ. ಈ ಬಗ್ಗೆ ಚರ್ಚಿಸಲು ಮಾರ್ಚ್‌ 5ರಂದು ಎಂ.ಕೆ ಸ್ಟಾಲಿನ್ ಅವರು ತಮಿಳುನಾಡಿನ ಸರ್ವಪಕ್ಷಗಳ ಸಭೆ ಕರೆದಿದ್ದರು. ಆ ಸಭೆಯಿಂದ ಬಿಜೆಪಿ ಮಾತ್ರವೇ ಹೊರಗುಳಿಯಿತು.

ಜೊತೆಗೆ, ತಮಿಳುನಾಡು ಸರ್ಕಾರದ ನಿಯೋಗವು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದೆ, ಕ್ಷೇತ್ರಮರುವಿಂಗಡಣೆ ವಿರುದ್ಧದ ಹೋರಾಟದಲ್ಲಿ ಜೊತೆಗೂಡುವಂತೆ ಮನವಿ ಮಾಡಿದೆ. ತಮಿಳುನಾಡಿನ ಕರೆಗೆ ಓಗೊಟ್ಟಿರುವ ಸಿದ್ದರಾಮಯ್ಯ, ಹೋರಾಟಕ್ಕೆ ಕರ್ನಾಟಕದ ಬೆಂಬಲವಿದೆ ಎಂದು ಹೇಳಿದ್ದಾರೆ.

ಈ ವರದಿ ಓದಿದ್ದೀರಾ?: ಕ್ಷೇತ್ರ ಪುನರ್ವಿಂಗಡಣೆ ಎಂಬ ಅನ್ಯಾಯ; ನಾಶವಾಗುವ ಮುನ್ನ ಎಚ್ಚೆತ್ತುಕೊಳ್ಳಿ

ಕ್ಷೇತ್ರ ಮರುವಿಂಗಡಣೆಯ ಜೊತೆಗೆ, ಹಿಂದಿ ಹೇರಿಕೆ ಹುನ್ನಾರದಿಂದ ಜಾರಿಗೊಳಿಸಲು ಮುಂದಾಗಿರುವ ‘ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು (ಎನ್‌ಇಪಿ) ದಕ್ಷಿಣದ ರಾಜ್ಯಗಳು ವಿರೋಧಿಸುತ್ತಿವೆ. ಎನ್‌ಇಪಿ ಜಾರಿಗೆ ನಿರಾಕರಿಸಿದ ಕಾರಣಕ್ಕಾಗಿ ತಮಿಳುನಾಡಿಗೆ ಬಿಡುಗಡೆಯಾಗಬೇಕಿದ್ದ ಅನುದಾನವನ್ನು ಕೇಂದ್ರವು ತಡೆಹಿಡಿದಿದೆ. ಬಹಿರಂಗವಾಗಿಯೇ ಬೆದರಿಕೆ ಹಾಕುತ್ತಿದೆ. ಇದು ಕೇಂದ್ರದ ಹೇರಿಕೆ, ದಮನಕಾರಿ ಆಡಳಿತವನ್ನು ಪ್ರತಿಬಿಂಬಿಸುತ್ತದೆ. ಇಂತಹ ನಿದರ್ಶನಗಳು ದಕ್ಷಿಣ ರಾಜ್ಯಗಳು ತಮ್ಮ ‘ಐಡೆಟಿಂಟಿ’ ಮತ್ತು ಧ್ವನಿಯನ್ನು ಗಟ್ಟಿಯಾಗಿ ಉಳಿಸಿಕೊಳ್ಳಬೇಕು ಎಂಬುದನ್ನು ಒತ್ತಿ ಹೇಳುತ್ತವೆ.

ಜನಸಂಖ್ಯೆಯು ರಾಜಕೀಯ ಚೌಕಟ್ಟಿನೊಳಗೆ ಬಂದಿದ್ದು, ಅದು ರಾಜ್ಯಗಳ ರಾಜಕೀಯ ಭವಿಷ್ಯದ ಮಾನದಂಡವೂ ಆಗುತ್ತಿರುವುದು ಅಪಾಯಕಾರಿ ಪ್ರವೃತ್ತಿಯಾಗುತ್ತಿದೆ. ಇದು, ಪ್ರಾದೇಶಿಕ ಅಸಮಾನತೆಯನ್ನು ಹೆಚ್ಚಿಸುತ್ತದೆ. ಈಗಾಗಲೇ ಎದ್ದು ಕಾಣುತ್ತಿರುವ, ತೆರಿಗೆ ಪಾಲಿನ ಹಂಚಿಕೆ ಮತ್ತು ಅನುದಾನದಲ್ಲಿನ ತಾರತಮ್ಯಗಳು ಮತ್ತಷ್ಟು ಅಂತರವನ್ನು ಸೃಷ್ಟಿಸುತ್ತವೆ. ಈ ಅನ್ಯಾಯ, ಅಸಮಾನತೆ ಹಾಗೂ ತಾರತಮ್ಯಕ್ಕೆ ದಕ್ಷಿಣದ ರಾಜ್ಯಗಳು ಬಲಿಯಾಗುತ್ತವೆ.

ಆದರೂ, ಕ್ಷೇತ್ರ ಪುನರ್‌ ವಿಂಗಡಣೆಯನ್ನು ‘ರಾಷ್ಟ್ರೀಯ ಹಿತಾಸಕ್ತಿ’ಯೊಂದಿಗೆ ತಳುಕು ಹಾಕಲಾಗುತ್ತಿದೆ. ಪರಿಣಾಮವಾಗಿ, ದಕ್ಷಿಣ ರಾಜ್ಯಗಳ ಬೇಡಿಕೆಗಳು, ಹಕ್ಕೊತ್ತಾಯಗಳು ತ್ಯಾಗಗಳಾಗಿ ಬದಲಾಗಬೇಕಾಗುತ್ತದೆ. ತ್ಯಾಗದ ಹೆಸರಿನಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯ ಎಸಗಲಾಗುತ್ತದೆ. ಇದೆಲ್ಲ ಸಂಭವಿಸುವುದಕ್ಕೂ ಮುನ್ನವೇ ದಕ್ಷಿಣ ರಾಜ್ಯಗಳ ಸರ್ಕಾರಗಳು ಮತ್ತು ಪಕ್ಷಗಳು ಮಾತ್ರವಲ್ಲದೆ, ಜನ ಸಮುದಾಯವೂ ಎಚ್ಚೆತ್ತುಕೊಳ್ಳಬೇಕಿದೆ. ಕೇಂದ್ರದ ನೀತಿಯನ್ನು ವಿರೋಧಿಸಬೇಕಿದೆ. ದಕ್ಷಿಣ ರಾಜ್ಯಗಳ ನೆಲೆ, ಧ್ವನಿ, ಹಕ್ಕುಗಳನ್ನು ಉಳಿಸಿಕೊಳ್ಳಬೇಕಿದೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X