ತಜ್ಞವೈದ್ಯರ ಸಲಹೆ, ಚಿಕಿತ್ಸೆಯನ್ನು ಸರಿಯಾದ ಸಮಯಕ್ಕೆ ತೆಗೆದುಕೊಂಡರೆ ಡೆಂಘೀ ಜ್ವರ ಅಪಾಯದ ಹಂತಕ್ಕೆ ಹೋಗದಂತೆ ತಡೆಯಬಹುದು. ಡೆಂಘೀ ಕುರಿತು ಹೆದರಿಕೆ, ಆಂತಕ ಬೇಡ, ಎಚ್ಚರಿಕೆ-ಜಾಗೃತಿ ಇದ್ದರೆ ಡೆಂಘೀ ಗೆಲ್ಲಬಹುದು
ಮಳೆಗಾಲದ ಪ್ರಾರಂಭದಲ್ಲಿ ಜನರನ್ನು ವಿವಿಧ ಜ್ವರಗಳು ಬಾಧಿಸುವುದು ಸಾಮಾನ್ಯ. ಈ ಬಾರಿ ಡೆಂಘೀ ಜ್ವರ ಸದ್ದುಮಾಡುತ್ತಿದೆ. ರಾಜ್ಯದ ರಾಜಧಾನಿಯಿಂದ ಹಿಡಿದು ಗ್ರಾಮೀಣ ಪ್ರದೇಶದವರೆಗೆ ಡೆಂಘೀ ಜ್ವರ ಜನರಲ್ಲಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದೆಲ್ಲದರ ನಡುವೆ ಡೆಂಘೀ ಬರದಂತೆ ಹಾಗೂ ಬಂದ ಮೇಲೆ ಪಪ್ಪಾಯ ಎಲೆಗಳ ರಸ ಕುಡಿಯುವುದು, ಕಿವಿ-ಡ್ರ್ಯಾಗನ್ ಹಣ್ಣು ತಿನ್ನುವುದು, ಪಪ್ಪಾಯ ಎಲೆಗಳಿಂದ ತಯಾರಿಸಿದ ದುಬಾರಿ ಮಾತ್ರೆ ತಿನ್ನುವುದು ಡೆಂಘೀಯನ್ನು ವಾಸಿಮಾಡುತ್ತದೆ ಎಂಬಂತಹ ಹಸಿಬಿಸಿ ಸುದ್ದಿಗಳು, ಪ್ರಚಾರ ವಾಟ್ಸ್ಆಪ್ ಯುನಿವರ್ಸಿಟಿಯಲ್ಲಿ ಅವ್ಯಾಹತವಾಗಿ ಸಾಗುತ್ತಿದೆ.
ಡೆಂಘೀ ಮಾರಣಾಂತಿಕ ಜ್ವರವೇ?
ವಿಶ್ವದ ಜನಸಂಖ್ಯೆ ಅರ್ಧದಷ್ಟು ಜನರಿಗೆ ಡೆಂಘೀ ಹರಡಬಹುದೆಂಬ ಮಾತನ್ನು ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬಿದ್ದಿದೆ. ಅಂದರೆ ಜಗತ್ತಿನ 80ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ ಕಳೆದ 20 ವರ್ಷಗಳಿಂದ ಈ ಡೆಂಘೀ ಜ್ವರ ಕಂಡುಬರುತ್ತಿದೆ. ಸಾಮಾನ್ಯವಾಗಿ ಉಷ್ಣವಲಯ ಮತ್ತು ಸಮಶೀತೋಷ್ಣ ವಲಯದ ದೇಶಗಳಲ್ಲಿ ಈ ಜ್ವರ ಕಾಣಿಸಿಕೊಳ್ಳುತ್ತದೆ. 2023ನೇ ಸಾಲಿನಲ್ಲಿ ವಿಶ್ವದೆಲ್ಲೆಡೆ ಸುಮಾರು 6.5.ಮಿಲಿಯನ್ ಜನರು ಈ ಜ್ವರದಿಂದ ಬಳಲಿದ್ದು ಅವರಲ್ಲಿ ಅಂದಾಜು 7,300 ಜನ ಮೃತಪಟ್ಟಿದ್ದರು. ಆದರೆ ಕೋಟ್ಯಂತರ ಡೆಂಘೀ ಪೀಡಿತರು ಯಾವುದೇ ರೋಗಲಕ್ಷಣವಿರದೆ ಗುಣಮುಖರಾಗಿದ್ದಾರೆ. ಹಾಗೆಯೇ ಬಹುಪಾಲು ಜನರು ಜ್ವರ ಬಂದರೂ ಸಂಬಂಧಪಟ್ಟ ರಕ್ತಪರೀಕ್ಷೆ ಮಾಡಿಸಿಕೊಳ್ಳದೇ ಇದ್ದುದರಿಂದ ಡೆಂಘೀ ಜ್ವರ ಎಂದು ರೋಗಪತ್ತೆಯಾಗಿಲ್ಲ. ಬಹುಪಾಲು ಜನರಲ್ಲಿ ಡೆಂಘೀ ಹೇಳಿಕೊಳ್ಳುವಂತಹ ತೊಂದರೆ ಉಂಟುಮಾಡದೆ ಸಾಮಾನ್ಯವಾಗಿ ಬರುವ ಇತರೇ ಜ್ವರಗಳಂತೆ ತಲೆನೋವು, ಮಾಂಸಖಂಡ-ಸಂಧಿಗಳಲ್ಲಿ ನೋವು, ವಾಕರಿಕೆ, ವಾಂತಿ ಮುಂತಾದ ಲಕ್ಷಣಗಳನ್ನು ಹೊಂದಿರುತ್ತದೆ. ಡೆಂಘೀ ಜ್ವರ ನಿರ್ದಿಷ್ಟವಾದ ಔಷಧ ಇಲ್ಲದಿರುವುದರಿಂದ ಲಕ್ಷಣಧಾರಿತ ಚಿಕಿತ್ಸೆ ಪಡೆದುಕೊಳ್ಳುವುದರಿಂದ ವಾಸಿಯಾಗುತ್ತದೆ.
ಕೆಲವೊಂದು ಪ್ರಕರಣಗಳಲ್ಲಿ ತೀವ್ರ ರಕ್ತಸ್ರಾವ ಮತ್ತು ಆಘಾತದಿಂದ ಸಾವು ಸಂಭವಿಸುವ ಸಾಧ್ಯತೆಯೂ ಇದ್ದು, ಪ್ರಾರಂಭಿಕ ಹಂತದಲ್ಲಿನ ನಿರ್ಲಕ್ಷ್ಯ ಹಾಗೂ ಸರಿಯಾದ ಚಿಕಿತ್ಸೆಯನ್ನು ಪಡೆಯದೇ ಇರುವುದು ಅದಕ್ಕೆ ಮುಖ್ಯ ಕಾರಣ ಎನ್ನಬಹುದು.
ಡೆಂಘೀ ಹರಡುವುದು ಹೇಗೆ?
ಡೆಂಘೀ ಜ್ವರಕ್ಕೆ ಕಾರಣವಾಗುವ ಫ್ಲೇವಿವೈರಸ್, ರೋಗವಾಹಕವಾದ ಈಡಿಸ್ ಗುಂಪಿನ ಈಡಿಸ್ ಇಜಿಪ್ಟ್, ಈಡಿಸ್ ಅಲ್ಬೊಪಿಕ್ಟಸ್ (tiger mosquito) ಸೊಳ್ಳೆಗಳ ಮೂಲಕ ಮಾನವನ ರಕ್ತವನ್ನು ಸೇರುತ್ತವೆ. ಈ ಈಡಿಸ್ ಗುಂಪಿನ ಸೊಳ್ಳೆಗಳು ನಿಂತ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನಾಭಿವೃದ್ದಿ ಮಾಡುತ್ತವೆ. ಈ ಸೊಳ್ಳೆಯು ಹೆಚ್ಚಾಗಿ ಹಗಲು ಹೊತ್ತಿನಲ್ಲಿ ಕಾರ್ಯಚರಿಸುತ್ತದೆ. ಹಾಗಾಗಿ ಸೊಳ್ಳೆಗಳಿರುವ ಪರಿಸರದಲ್ಲಿ ಹಗಲಿನಲ್ಲಿ ಕೆಲಸ ಮಾಡುವವರಿಗೆ ಇವು ಕಚ್ಚುವುದರಿಂದ ವೈರಸ್ ಮನುಷ್ಯನ ರಕ್ತವನ್ನು ಸೇರುತ್ತದೆ. ಸೊಳ್ಳೆಯ ದೇಹವನ್ನು ಒಮ್ಮೆ ಈ ವೈರಸ್ ಹೊಕ್ಕಿದರೆ ಸೊಳ್ಳೆಯು ಸಾಯುವ ತನಕವೂ ಅಲ್ಲಿರುತ್ತದೆ. ಸುಮಾರು 8-12 ದಿನಗಳ ಸೊಳ್ಳೆಯ ದೇಹದಲ್ಲಿ ವೈರಸ್ ಬೆಳವಣಿಗೆ ಹೊಂದುತ್ತದೆ. ಡೆಂಘೀ ಪೀಡಿತ ರೋಗಿಯಲ್ಲಿ 4-12 ದಿನಗಳವರೆಗೆ ಈ ವೈರಸ್ ಇರುತ್ತದೆ. ಆತನ ರಕ್ತವನ್ನು ಸೊಳ್ಳೆ ಹೀರಿದಾಗ ಅದು ಸೊಳ್ಳೆಯ ದೇಹವನ್ನು ಸೇರುತ್ತದೆ. ಇಂತಹ ಸೊಳ್ಳೆ ಯಾರಿಗೆಲ್ಲ ಚುಚ್ಚುತ್ತದೋ ಅವರಿಗೆ ವೈರಸ್ ವರ್ಗಾವಣೆಯಾಗುತ್ತಾ ಹೋಗುತ್ತದೆ. ಈ ಫ್ಲೇವಿ ಕುಟುಂಬದ ವೈರಸ್ ಗಳು ಡೆಂಘೀ ಜ್ವರ ಅಲ್ಲದೆ ಹಳದಿ ಜ್ವರ ಸೇರಿದಂತೆ ಹಲವಾರು ಇತರೇ ಜ್ವರಗಳನ್ನು ಉತ್ಪತ್ತಿ ಮಾಡುವ ಸೂಕ್ಷ್ಮಾಣುಜೀವಿಗಳಾಗಿವೆ.
ಡೆಂಘೀ ಲಕ್ಷಣ : ಮನುಷ್ಯನ ರಕ್ತವನ್ನು ಸೇರಿದ ವೈರಸ್ 4-10 ದಿನಗಳಲ್ಲಿ ಜ್ವರ ಹಾಗೂ ಇತರೇ ರೋಗಲಕ್ಷಣಗಳನ್ನುಂಟು ಮಾಡುತ್ತದೆ. ಬಹುಮುಖ್ಯವಾಗಿ ತೀವ್ರ ಜ್ವರ, ತಲೆನೋವು, ಮಾಂಸ-ಸಂಧಿ ನೋವು, ವಾಂತಿ, ವಾಕರಿಕೆ ಸೇರಿದಂತೆ ಫ್ಲೂ ಜ್ವರದ ಲಕ್ಷಣಗಳು ಇಲ್ಲಿಯೂ ಕಂಡುಬರುತ್ತದೆ. ಸಾಕಷ್ಟು ಪ್ರಕರಣಗಳಲ್ಲಿ ಯಾವುದೇ ಲಕ್ಷಣಗಳು ಕಂಡು ಬರದೇ ಗುಣವಾಗುತ್ತವೆ. ಕೆಲವು ತೀವ್ರವಾದ ಪ್ರಕರಣಗಳಲ್ಲಿ ಬಾಯಿ ಮತ್ತು ವಸಡಿನಲ್ಲಿ ರಕ್ತಸ್ರಾವ, ರಕ್ತನಾಳದಿಂದ ರಕ್ತ ಮತ್ತು ಪ್ಲಾಸ್ಮಾ ಹೊರಚಿಮ್ಮುವುದು, ಪಿತ್ತಕೋಶದ ಊತ, ಕರುಳಿನಲ್ಲಿ ಸೋಂಕು ಮೊದಲಾದ ಲಕ್ಷಣಗಳು ಕಂಡುಬರುತ್ತವೆ.
ಡೆಂಘೀ ಜ್ವರದಲ್ಲಿ ಪ್ಲೇಟ್ಲೆಟ್ ಏಕೆ ಕಡಿಮೆಯಾಗುತ್ತದೆ?
ಎಲ್ಲರಿಗೂ ತಿಳಿದಿರುವಂತೆ ಡೆಂಘೀ ಸೋಂಕಿತರಿಗೆ ಇರುವ ಬಹುದೊಡ್ಡ ಆತಂಕವೆಂದರೆ ರಕ್ತದಲ್ಲಿ ಪ್ಲೇಟ್ ಲೆಟ್ ಅಥವಾ ಹೆಪ್ಪುಗಟ್ಟುವ ಅಂಶಗಳು ನಿರಂತರವಾಗಿ ಕಡಿಮೆಯಾಗುವುದು. ಇದರಿಂದ ರಕ್ತಸ್ರಾವವಾಗುವ ಸಾಧ್ಯತೆಗಳು ಹೆಚ್ಚುವುದು. ಹಾಗಾದರೆ ಹೀಗೆ platelet ಕಡಿಮೆಯಾಗುವುದೇಕೆ ಎಂದರೆ ಡೆಂಘೀ ರೋಗಕಾರಕ ವೈರಸ್ ಮಾನವನ ದೇಹ ಹೊಕ್ಕಾಗ ಅಲ್ಲಿ ಪ್ರತಿಕಾಯ ಅಥವಾ antibody ಉತ್ಪಾದನೆಯಾಗುತ್ತದೆ. ಈ ಪ್ರತಿಕಾಯಗಳು ದೊಡ್ಡಪ್ರಮಾಣದಲ್ಲಿ ಪ್ಲೇಟ್ ಲೆಟ್ಗಳ ವಿನಾಶಕ್ಕೆ ಕಾರಣವಾಗುತ್ತವೆ. ಇದಲ್ಲದೆ ಸೋಂಕಿತ ರಕ್ತದ ಕಣಗಳು ಸಹ ಹೆಪ್ಪುಗಟ್ಟುವ ಅಂಶ ಅಥವಾ ಪ್ಲೇಟ್ಲೆಟ್ಗಳನ್ನು ಹಾಳು ಮಾಡುತ್ತವೆ. ಇದರ ಜೊತೆಗೆ ರಕ್ತವನ್ನು ಉತ್ಪಾದಿಸುವ ಅಸ್ತಿಮಜ್ಜಾ ಅಥವಾ bone marrow ಡೆಂಘೀ ಕಾರಣದಿಂದ ಕಾರ್ಯಕ್ಷಮತೆಯನ್ನು ಸ್ವಲ್ಪಮಟ್ಟಿಗೆ ಕಳೆದುಕೊಳ್ಳುವುದರಿಂದಾಗಿ ಪ್ಲೇಟ್ಲೆಟ್ ಗಳ ಉತ್ಪಾದನೆ ಕುಂಠಿತಗೊಳ್ಳುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಪ್ಲೇಟ್ಲೆಟ್ ಗಳ ಸಂಖ್ಯೆ ಅಪಾಯದ ಮಟ್ಟಕ್ಕೆ ಕುಸಿಯುತ್ತದೆ. ಇದರಿಂದಾಗಿ ತೀವ್ರ ರಕ್ತಸ್ರಾವವಾಗುವ ಅಪಾಯವಿರುತ್ತದೆ.
ಡೆಂಘೀಗೆ ಚಿಕಿತ್ಸೆ
ಬಹುತೇಕ ಪ್ರಕರಣಗಳಲ್ಲಿ ಡೆಂಗ್ಯೂ ಸುಲಭದಲ್ಲಿ ಗುಣಪಡಿಸಬಹುದಾದ ಸಾಧ್ಯತೆಯನ್ನು ಹೊಂದಿರುತ್ತದೆ. ಡೆಂಘೀಗೆ ಪ್ರತ್ಯೇಕ ಹಾಗೂ ನಿರ್ದಿಷ್ಟವಾದ ಔಷಧವೇನು ಇಲ್ಲವಾದ ಕಾರಣ ಲಕ್ಷಣಾಧರಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ರಕ್ತದಲ್ಲಿ ಹೆಪ್ಪುಗಟ್ಟುವ ತಟ್ಟೆಗಳು ನಿರಂತರವಾಗಿ ಕಡಿಮೆಯಾಗುವುದರಿಂದ Ibuprofen, Aspirin ಮೊದಲಾದ ಔಷಧಗಳನ್ನು ಕೊಡದೇ ಇರುವುದು ಉತ್ತಮ. ಹೆಚ್ಚೆಚ್ಚು ದ್ರವಾಹಾರ ಸೇವನೆ ಮತ್ತು ವಿಶ್ರಾಂತಿ ಡೆಂಘೀಜ್ವರವನ್ನು ಗೆಲ್ಲಲು ಸಹಕಾರಿಯಾಗಿದೆ.
ಮುನ್ನೆಚ್ಚರಿಕೆ ಮತ್ತು ಇತರೇ ಉಪಕ್ರಮಗಳು
ಡೆಂಘೀ ಜ್ವರ ಬಂದ ಮೇಲೆ ಚಿಕಿತ್ಸೆ ಪಡೆಯುವುದು ಒಂದು ಕಡೆಯಾದರೆ ಡೆಂಘೀ ಬರದಂತೆ ತಡೆಗಟ್ಟುವುದು ಪ್ರಮುಖವಾದ ವಿಚಾರವಾಗಿದೆ. ಸೊಳ್ಳೆಯಿಂದ ಈ ವೈರಸ್ ಹರಡುವುದರಿಂದ ಸೊಳ್ಳೆ ವಂಶಾಭಿವೃದ್ದಿ ಮಾಡದಂತೆ ನಮ್ಮ ಪರಿಸರವನ್ನು ನಿರ್ಮಲವಾಗಿರಿಸಬೇಕು.
- ಸುತ್ತಮುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಹಳೆಯ ಡಬ್ಬ, ಒಡೆದ ಪಾತ್ರೆ, ಎಳನೀರಿನ ಕವಚ, ತೆಂಗಿನ ಕಾಯಿಯ ಚಿಪ್ಪು, ರಬ್ಬರ್ ತೋಟದಲ್ಲಿ ರಬ್ಬರ್ ಹಾಲು ಸಂಗ್ರಹಿಸುವ ಪಾತ್ರೆ, ಪೈಪ್ ಮೊದಲಾದುವುಗಳಲ್ಲಿ ನೀರು ಸಂಗ್ರಹವಾಗಿ ಅಲ್ಲಿಯೇ ಸೊಳ್ಳೆ ಮೊಟ್ಟೆ ಇಡುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಅವುಗಳಲ್ಲಿ ನೀರು ತುಂಬಿಕೊಳ್ಳದಂತೆ ಕ್ರಮಕೈಗೊಳ್ಳಬೇಕು.
- ತಗ್ಗುಪ್ರದೇಶಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಹಗಲು ಹೊತ್ತಿನಲ್ಲಿ ಮಲಗುವುದಿದ್ದರೆ ಸೊಳ್ಳೆ ಪರದೆಯೊಳಗೆ ಮಲಗುವುದು ಉತ್ತಮ, ಕಿಟಕಿಗಳಿಗೆ ಪರದೆ ಅಳವಡಿಸಿಕೊಳ್ಳುವುದು ಒಳಿತು, ಆದಷ್ಟು ದೇಹದ ಭಾಗವನ್ನು ಬಟ್ಟೆಯಿಂದ ಮುಚ್ಚಿಕೊಂಡರೆ ಒಳ್ಳೆಯದು. ಸೊಳ್ಳೆಗಳ ನಿಯಂತ್ರಣಕ್ಕೆ ಹೊಗೆ, ಸೊಳ್ಳೆಬತ್ತಿ ಮೊದಲಾದುವುಗಳ ಬಳಕೆ ಮಾಡಬಹುದು. ಹೀಗೆ ಸೊಳ್ಳೆಗಳ ನಿಯಂತ್ರಣ ಮಾಡಿದರೆ ಡೆಂಘೀ ಜ್ವರದ ಕುರಿತು ಆತಂಕ ಕಡಿಮೆಯಾಗುತ್ತದೆ.
ಅಪಪ್ರಚಾರಕ್ಕೆ ಕಿವಿಗೊಡಬೇಡಿ
ಕಿವಿಹಣ್ಣು, ಪಪ್ಪಾಯ ಎಲೆಯ ರಸ ಇತ್ಯಾದಿಗಳ ಸೇವನೆಯಿಂದ ಡೆಂಘೀ ಗುಣಪಡಿಸಬಹುದು ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳನ್ನು ನಂಬಿಕೊಂಡು ಡೆಂಘೀಯನ್ನು ಅಪಾಯದ ಮಟ್ಟಕ್ಕೆ ಹೋಗುವಂತೆ ಮಾಡದಿರಿ. ಏಕೆಂದರೆ ಈ ಪಪ್ಪಾಯ ಎಲೆಯ ರಸ, ಕಿವಿಹಣ್ಣು, ಡ್ರ್ಯಾಗನ್ ಫ್ರುಟ್ ಮೊದಲಾದವುಗಳ ಸೇವನೆ ಪರಿಣಾಮದ ಕುರಿತು ವೈಜ್ಞಾನಿಕ ಸಂಶೋಧನಾ ವರದಿ ನಮ್ಮ ಬಳಿ ಇಲ್ಲ. ಡೆಂಘೀಜ್ವರ ಯಾವ ಹಂತದಲ್ಲಿದೆ ಎಂದು ಸರಿಯಾಗಿ ಅರಿಯದೆ ಏನೇನೊ ಸೇವಿಸುತ್ತಾ ಕುಳಿತರೆ ಅದರಿಂದ ಅಪಾಯವೇ ಜಾಸ್ತಿ.
ಹಾಗೆಯೇ ತಜ್ಞವೈದ್ಯರ ಸಲಹೆ, ಚಿಕಿತ್ಸೆಯನ್ನು ಸರಿಯಾದ ಸಮಯಕ್ಕೆ ತೆಗೆದುಕೊಂಡರೆ ಡೆಂಘೀ ಜ್ವರ ಅಪಾಯದ ಹಂತಕ್ಕೆ ಹೋಗದಂತೆ ತಡೆಯಬಹುದು. ಡೆಂಘೀ ಕುರಿತು ಹೆದರಿಕೆ, ಆಂತಕ ಬೇಡ, ಎಚ್ಚರಿಕೆ-ಜಾಗೃತಿ ಇದ್ದರೆ ಡೆಂಘೀ ಗೆಲ್ಲಬಹುದು.
