ಸಂವಿಧಾನ ನೀಡಿರುವ ಘನತೆಯ ಜೀವನ ವಿಶೇಷಚೇತನರಿಗೂ ಲಭಿಸಲಿ

Date:

Advertisements

ಜನವರಿ 26- ಭಾರತದ ಸಂವಿಧಾನವನ್ನು ಅಧಿಕೃತವಾಗಿ ಅಂಗೀಕರಿಸಲಾದ ದಿನ. ಇದು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಮಾಡಿತು. ಈ ಐತಿಹಾಸಿಕ ದಿನವು ಬ್ರಿಟೀಷರ ಕಾಲದ ಸಾಂವಿಧಾನಿಕ ರಾಜಪ್ರಭುತ್ವದಿಂದ ಮುಕ್ತಿ ಪಡೆದು ಗಣರಾಜ್ಯವಾಗಿ ಗುರುತಿಸಿಕೊಂಡಿತು. ರಾಜರ ಕೈಯಲ್ಲಿದ್ದ ಅಧಿಕಾರ ಜನರ ಕೈಗೆ ಬದಲಾಯಿತು. ಜನರೇ ಆರಿಸಿದ ಜನಪ್ರತಿನಿಧಿಗಳು ಆಡಳಿತ ನಡೆಸುವಂತಾಯಿತು.

ಭಾರತದಲ್ಲಿ ಗಣರಾಜ್ಯೋತ್ಸವವು ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಗೆ ನಮ್ಮ ಬಲವಾದ ಬದ್ಧತೆಯನ್ನು ತೋರಿಸುವ ವಿಶೇಷ ದಿನವಾಗಿದೆ. ಸಂವಿಧಾನವು ಎಲ್ಲಾ ಕಾನೂನುಗಳ ಮುಖ್ಯಸ್ಥನಂತೆ, ದೇಶವನ್ನು ಹೇಗೆ ನಡೆಸುತ್ತದೆ ಮತ್ತು ಅದರ ಜನರ ಹಕ್ಕುಗಳನ್ನು ಹೇಗೆ ರಕ್ಷಿಸುತ್ತದೆ ಎಂಬುದನ್ನು ಇದು ಎತ್ತಿ ತೋರಿಸುತ್ತದೆ.

ನಾವಿಂದು 75ನೇ ಗಣರಾಜ್ಯೋತ್ಸವದ ಹೊಸ್ತಿಲಿನಲ್ಲಿದ್ದೇವೆ. ಒಂದು ಕಾಲದಲ್ಲಿ ವಿಶೇಷಚೇತನರಿಗೆ ಇಲ್ಲದ ಮಾನ್ಯತೆಗಳು, ಗೌರವಾದರಗಳು ಇಂದು ಸಮಾಜದಲ್ಲಿ ಒಂದಿಷ್ಟು ಕಾಣಲು ಸಾಧ್ಯವಾಗುತ್ತಿದೆ. ಆದರೆ, ವಿಶೇಷಚೇತನರಿಗೆ ಬೇಕಾಗುವ ಸಮಸಮಾಜವನ್ನು ಎಲ್ಲರೂ ಸೇರಿ ನಿರ್ಮಿಸಬೇಕಾದ ಅಗತ್ಯತೆ ಈಗಲೂ ಇದೆ‌. ಶೈಕ್ಷಣಿಕ ರಂಗ, ಉದ್ಯೋಗ ರಂಗ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ವಿಶೇಷಚೇತನರ ಗುರುತಿಸುವಿಕೆ ಗರಿಗೆದರಬೇಕಾಗಿದೆ.

Advertisements

ಒಂದು ರೀತಿಯಲ್ಲಿ, ವಿಶೇಷಚೇತನ ಮಕ್ಕಳನ್ನು ಗ್ರಾಮೀಣ ಮಟ್ಟದಲ್ಲಿ ಸರಿಯಾದ ವಿದ್ಯಾಭ್ಯಾಸ ನೀಡದೇ ಮೂಲೆಗುಂಪು ಮಾಡುವುದು ಈಗಲೂ ಕಂಡು ಬರುತ್ತಿದ್ದರೆ, ಮತ್ತೊಂದೆಡೆ ಸ್ಪೆಷಲ್ ಸ್ಕೂಲ್‌ಗಳಿಗೆ ಸೇರಿಸಲು ಸೂಚಿಸುವ ಶಿಕ್ಷಕರ ಸಂಖ್ಯೆಯೂ ಹೆಚ್ಚಾಗಿದೆ. ಕಾರಣ- ಇಲ್ಲಿ ವಿಶೇಷಚೇತನ ಮಕ್ಕಳಿಗೆ ಬೇಕಾದ ಪೂರಕ ವ್ಯವಸ್ಥೆ ಇಲ್ಲದಿರುವುದು. ಈ ಪರಿಸ್ಥಿತಿಯನ್ನು ಬದಲಾಯಿಸಿ ಎಲ್ಲರ ಜೊತೆಗೆ ಸಮನ್ವಯ ಶಿಕ್ಷಣ ನೀಡಲು ಸರಕಾರ ಪ್ರೋತ್ಸಾಹ ನೀಡುವ ಮೂಲಕ ಸಂವಿಧಾನವು ನೀಡಿರುವ ಶಿಕ್ಷಣದ ಹಕ್ಕನ್ನು ಎತ್ತಿಹಿಡಿಯಬೇಕಿದೆ. ಇದನ್ನು ಬಯಸಲು ಕಾರಣವೂ ಕೂಡ ಬಾಲ್ಯದಲ್ಲಿ ಶಾಲೆಯನ್ನೇ ಕಾಣದ ನನ್ನ ಹಸಿ ನೆನಪುಗಳು‌.

ಬಾಲ್ಯದಲ್ಲಿಯೇ ಪೋಲಿಯೋ ಬಾಧೆಯಿಂದಾಗಿ ನನ್ನ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡೆ. ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ವಿಶೇಷಚೇತನರಾದರೆ ಸಮಾಜ ಕಾಣುವ ದೃಷ್ಟಿಕೋನಗಳ ಪ್ರಭಾವ ನನ್ನ ಮೇಲೆಯೂ ಆಳವಾಗಿ ಪ್ರಭಾವ ಬೀರಿದೆ. ಎಳೆಯ ಪ್ರಾಯದಲ್ಲಿ ನನಗೆ ನನ್ನ ಪರಿಸ್ಥಿತಿಯ ಬಗ್ಗೆ ಅರಿವಿರಲಿಲ್ಲ. ಆದರೆ, ನನ್ನ ಹೆತ್ತವರು ನಾನು ಹುಟ್ಟಿ ಭಾರವಾದೆ ಎಂದುಕೊಳ್ಳದೆ ಚೆನ್ನಾಗಿ ಪಾಲನೆ ಪೋಷಣೆ ಮಾಡಿದುದರ ಫಲವಾಗಿ ನಾನಿಂದು ವಿಶೇಷಚೇತನಳಾದರೂ ಸ್ವಂತ ಕಾಲುಗಳ ಮೇಲೆ ನಿಲ್ಲಲು ಸಾಧ್ಯವಾಯ್ತು ಎಂಬುದು ನೈಜ ಸತ್ಯ.

ಮಾನವರ ಘನತೆಯನ್ನು ಎತ್ತಿ ಹಿಡಿಯುವ ಸಂವಿಧಾನದ ಆಶಯಗಳನ್ನು ಕಂಡಾಗಲೆಲ್ಲ ರಾಜ್ಯ ರಾಜಧಾನಿಯ ರಸ್ತೆಬದಿಯ ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುವ ವಿಶೇಷಚೇತನರ ಬಗ್ಗೆ ನನ್ನ ಮನಸು ಮರುಗುತ್ತದೆ. ನಮ್ಮಿಂದ ಚುನಾಯಿತ ಪ್ರತಿನಿಧಿಗಳು ಈ ವಿಶೇಷಚೇತನರಿಗೆ ಯಾಕೆ ಪೂರಕವಾದ ಸ್ವ ಉದ್ಯೋಗ ಅಥವಾ ಜೀವನ ನಡೆಸಲು ಯೋಗ್ಯವಾದ ತರಬೇತಿಯನ್ನು ನೀಡಲು ಮುಂದಾಗುತ್ತಿಲ್ಲ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಘನತೆಯ ಜೀವನ ನಡೆಸಲು ಎಲ್ಲರಿಗೂ ಸಂವಿಧಾನ ಅವಕಾಶ ಮಾಡಿಕೊಟ್ಟಿರುವಾಗ, ವಿಶೇಷಚೇತನರೆಂಬ ಅನುಕಂಪ ತೋರುವ ಬದಲು ಅವರ ಬದುಕನ್ನು ಕಟ್ಟಿಕೊಳ್ಳಲು ಪೂರಕವಾದ ವಾತಾವರಣವನ್ನು ನಿರ್ಮಿಸಲು ನಮ್ಮ ಸಮಾಜ ಯಾಕೆ ಮುಂದಾಗುತ್ತಿಲ್ಲ ಎಂಬುದು ಮಾರ್ಮಿಕ.

ಚಿಕ್ಕ ಹುಡುಗಿಯಾಗಿದ್ದಾಗ ನಾನು ಅಂಗವಿಕಲೆ ಎಂಬ ಯಾವುದೇ ಭಾವನೆ ನನ್ನ ಮನಸ್ಸಿನಲ್ಲಿ ಇರಲಿಲ್ಲ, ಎಲ್ಲರೂ ಎತ್ತಿಕೊಂಡೇ ಓಡಾಡುತ್ತಿದ್ದುದು ಇದಕ್ಕೆ ಕಾರಣವಾಗಿರಲೂಬಹುದು. ಆದರೆ, ಹತ್ತು ವರ್ಷ ಪ್ರಾಯದವಳಾದಾಗ ನನಗೆ ನನ್ನ ದೈಹಿಕ ಸ್ಥಿತಿಯ ಬಗ್ಗೆ ಅರಿವಿಗೆ ಬಂತು. ಎತ್ತಿ ಓಡಾಡುವವರಿಗೂ ನನ್ನನ್ನು ಎತ್ತಿಕೊಳ್ಳುವುದು ಭಾರವಾಗತೊಡಗಿತು‌.

ಕಾಲುಗಳು ಸ್ವಾಧೀನ ಕಳೆದುಕೊಂಡಾಗ ಶಾಲೆಗೆ ಹೋಗಲು ವ್ಹೀಲ್‌ಚೇರ್ ಆಗಲಿ ಅಥವಾ ರಿಕ್ಷಾದಲ್ಲಿ ಕರೆದುಕೊಂಡು ಹೋಗಲು ಹೆತ್ತವರ ಬಳಿ ಆರ್ಥಿಕ ಸಾಮರ್ಥ್ಯವಾಗಲಿ ಇಲ್ಲದೇ ಇದ್ದುದರಿಂದ ಆರಂಭಿಕ ಶಿಕ್ಷಣದಿಂದ ವಂಚಿತಳಾದ ನಾನು ಮನೆಯಲ್ಲೇ ಉಳಿಯಬೇಕಾಯ್ತು. ಆದರೆ, ಮನೆಯಲ್ಲಿದ್ದುಕೊಂಡೇ ವಿದ್ಯಾಭ್ಯಾಸ ಮಾಡಿ ನೇರವಾಗಿ ಏಳನೇ ತರಗತಿ ಪಬ್ಲಿಕ್ ಪರೀಕ್ಷೆಯನ್ನು ಬರೆದೆ. ತದನಂತರ ಹಾಸ್ಟೆಲ್ ನಲ್ಲಿ ಶಿಕ್ಷಣವನ್ನು ಮುಂದುವರಿಸಿ ಎಸ್‌ಎಸ್‌ಎಲ್‌ಸಿ ವರೆಗಿನ ಶಿಕ್ಷಣವನ್ನು ಪಡೆದುಕೊಂಡೆ. ಉನ್ನತ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣ ಲಭಿಸದ ಕಾರಣದಿಂದಾಗಿ ನಾನು ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬೇಕಾಯ್ತು.

ಈ ವರದಿ ಓದಿದ್ದೀರಾ?: ಮಂಡ್ಯ ಬೇಕು, ಇಲ್ಲಾಂದ್ರೆ ರಾಜಕೀಯವೇ ಬೇಡ ಎಂದ ಸುಮಲತಾ

ನಂತರ 2014ರಲ್ಲಿ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ) ನಾನು ಟ್ರೈನಿಂಗ್ ಮುಗಿಸಿದೆನಾದರೂ ಕೆಲಸಕ್ಕೆ ಹೋಗುವುದಕ್ಕೆ ನನಗೆ ಆಕ್ಸೆಸೆಬಿಲಿಟಿ ಸಮಸ್ಯೆಗಳನ್ನು ಎದುರಿಸಬೇಕಾಯ್ತು. ಹೆಚ್ಚಿನ ಕಟ್ಟಡಗಳಲ್ಲಿ ಸರಿಯಾದ ಇಳಿಜಾರು(ರ್‍ಯಾಂಪ್), ರೈಲಿಂಗ್, ಲಿಫ್ಟ್ ವ್ಯವಸ್ಥೆ ಇಲ್ಲದೇ ಇದ್ದುದರಿಂದ ಮೆಟ್ಟಿಲುಗಳನ್ನು ಹತ್ತಿ ಬಹುಮಹಡಿ ತಲುಪಲಾಗದೇ ನಾನು ಉದ್ಯೋಗ ಜೀವನದ ಕನಸನ್ನು ಬಿಟ್ಟು ಮನೆಯಲ್ಲಿಯೇ ಇರಬೇಕಾಯ್ತು. ಒಂದು ರೀತಿಯಲ್ಲಿ ನಾನು ಶೈಕ್ಷಣಿಕ ಸಾಧನೆಯ ಹಾದಿಯನ್ನು ತುಳಿದರೂ ಉದ್ಯೋಗ ರಂಗದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ ಮನೆಯಲ್ಲೇ ಮೂಲೆಗುಂಪಾದೆನಲ್ಲ ಎಂಬ ಕೊರಗು ನನ್ನನ್ನೂ ಆವರಿಸಿತು.

ಸಾಧಿಸುವ ಛಲವಿದ್ದರೆ ಏನು ಬೇಕಾದರೂ ಮಾಡಬಹುದು ಎಂಬ ಮಾತಿನಂತೆ ನಾನೂ ಉದ್ಯೋಗವನ್ನರಸಿ ಚಿತ್ರದುರ್ಗದಿಂದ ನೇರವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದೆ. ಎಪಿಡಿ ಸಂಸ್ಥೆಯಲ್ಲಿಯೇ ರಿಸೆಪ್ಷನಿಸ್ಟ್ ಆಗಿ ಉದ್ಯೋಗಕ್ಕೆ ಸೇರಿಕೊಂಡೆ. ವಿಶೇಷಚೇತನರಾದರೂ ನಾವು ನಮ್ಮ ಆರೋಗ್ಯ ಸ್ಥಿತಿಗೆ ತಕ್ಕುದಾದ ಉದ್ಯೋಗವನ್ನು ಮಾಡುವ ಮೂಲಕ ಉತ್ತಮ ಜೀವನ ನಡೆಸಬಹುದು ಎಂಬುದನ್ನು ಅರಿತುಕೊಂಡೆ. ಆದರೆ, ಎಲ್ಲ ವಿಶೇಷಚೇತನರಿಗೂ ನನ್ನಂತೆ ಸಮಾಜದಲ್ಲಿ ಅವಕಾಶಗಳು ಲಭಿಸುವುದೇ? ‘ಇಲ್ಲ’ ಎಂದು ಒಪ್ಪಿಕೊಳ್ಳಬೇಕಾದುದು ಕಠಿಣ ಸತ್ಯ.

ಸಮಾಜದಲ್ಲಿ ವಿಶೇಷಚೇತನರನ್ನು ಕೀಳಾಗಿ ಕಾಣುವ ತಾತ್ಸಾರದ ದೃಷ್ಟಿ ಬೀರುವ ಮೊದಲು ಜನರು ತಮ್ಮ ಮನಃಸ್ಥಿತಿಗಳನ್ನು ಬದಲಾಯಿಸಿಕೊಳ್ಳಬೇಕಾದ ಅಗತ್ಯತೆ ಇದೆ. ಸ್ವಾಭಿಮಾನಿ ಬದುಕನ್ನು ಕಟ್ಟಿಕೊಳ್ಳಲು ಸರಕಾರ ಎಲ್ಲ ವಿಶೇಷಚೇತನರಿಗೆ ನೆರವಾಗಬೇಕಿದೆ. ಆಗ ಮಾತ್ರ ಸಮ ಸಮಾಜವನ್ನು ನಿರ್ಮಿಸಲು ಸಾಧ್ಯ‌.‌ ಸಂವಿಧಾನ ನೀಡಿರುವ ಘನತೆಯ ಜೀವನವನ್ನು ನಡೆಸಲು ಸಾಧ್ಯ.

ನಮಗೆ ಬೇಕಿರುವುದು ಕರುಣೆಯಲ್ಲ, ಅನುಕಂಪವಲ್ಲ… ಅವಕಾಶ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X