ಬಿಜೆಪಿ ಮಣಿಸಲು ’ಮಾಡು ಇಲ್ಲವೇ ಮಡಿ’ ಹೋರಾಟ ಅನಿವಾರ್ಯ: ಹಿರೇಮಠ್

Date:

Advertisements

ಬ್ರಿಟಿಷರನ್ನು ಮಣಿಸಿ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಮಹಾತ್ಮ ಗಾಂಧೀಜಿಯವರು 1942ರಲ್ಲಿ ಮಾಡು ಇಲ್ಲವೇ ಮಡಿ ಎಂಬ ಕರೆ ನೀಡಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಇದೇ ರೀತಿಯಲ್ಲಿ ನಾವು ಹೋರಾಟ ಮಾಡಬೇಕಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್‌.ಹಿರೇಮಠ ಹೇಳಿದರು.

ಸಿಟಿಜನ್ ಫಾರ್‌ ಡೆಮಾಕ್ರಸಿ, ಜನಾಂದೋಲನಗಳ ಮಹಾಮೈತ್ರಿ, ಜನತಂತ್ರ ಪ್ರಯೋಗ ಶಾಲೆ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಕರ್ನಾಟಕ- ಮಹಾರಾಷ್ಟ್ರ ಜಂಟಿ ಕಾರ್ಯಪಡೆ ಸಮಿತಿಯು ಬೆಂಗಳೂರಿನ ಗಾಂಧಿಭವನದಲ್ಲಿ ಶನಿವಾರ ಆಯೋಜಿಸಿದ್ದ ’ಅಖಿಲ ಭಾರತ ಅನುಭವ ಮಂಟಪ ಜನ ಸಂಸ್ಕೃತಿ ಸಮಾವೇಶ’ದ ಉದ್ಘಾಟನೆಯಲ್ಲಿ ಅವರು ಮಾತನಾಡಿದರು.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು 2024ರಲ್ಲಿ ನಿರ್ಣಾಯಕವಾಗಿ ಸೋಲಿಸುವ ತಕ್ಷಣದ ಗುರಿಯನ್ನು ಈ ಸಮಾವೇಶ ಹೊಂದಿದೆ. ನಮ್ಮ ಸಂವಿಧಾನ, ಅದು ಪ್ರತಿನಿಧಿಸುವ ಮೌಲ್ಯಗಳು ಮತ್ತು ಜನರು ಭಾವಿಸಿದ ಇಂಡಿಯಾ ಪ್ರಣಾಳಿಕೆಯ ಆಧಾರದ ಮೇಲೆ ರಾಷ್ಟ್ರವ್ಯಾಪಿ ಸಾಂಸ್ಕೃತಿಕ ಆಂದೋಲನವನ್ನು ಆರಂಭಿಸುವುದು ನಮ್ಮ ದೀರ್ಘಾವಧಿಯ ಉದ್ದೇಶವಾಗಿದೆ ಎಂದು ವಿವರಿಸಿದರು.

Advertisements

ತುರ್ತು ಪರಿಸ್ಥಿತಿಯನ್ನು ಹೇರಿಕೆ ಮಾಡಿದ ಇಂದಿರಾ ಗಾಂಧಿಯವರನ್ನು ಚುನಾವಣೆಯಲ್ಲಿ ಸೋಲಿಸಿದ್ದೆವು. ಈಗ ಕೋಮುವಾದಿ ಫ್ಯಾಸಿಸ್ಟ್‌ ಬಿಜೆಪಿ ಅಧಿಕಾರದಲ್ಲಿದೆ. ಗಾಂಧೀಜಿಯವರು ನೀಡಿದ ’ಡೂ ಆರ್‌ ಡೈ’ ಮಾದರಿಯಲ್ಲಿ ಹೋರಾಟ ಮಾಡಬೇಕಿದೆ. ನಮ್ಮ ಸರ್ವಸ್ವವನ್ನೂ ಬಳಸಿ ಈ ಕೋಮುವಾದಿ ಆರ್‌ಎಸ್‌ಎಸ್‌, ಬಿಜೆಪಿಯನ್ನು ಸೋಲಿಸಬೇಕಿದೆ ಎಂದು ಆಶಿಸಿದರು.

ಕರ್ನಾಟಕ ಜನತೆ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ ಮತಗಳನ್ನು ಚಲಾಯಿಸಿ ಬಿಜೆಪಿಯನ್ನು ಮನೆಗೆ ಕಳಿಸಿದ್ದಾರೆ. ಆದರೂ ಕಳೆದ ಚುನಾವಣೆಯಲ್ಲಿ ಪಡೆದಿದ್ದಕ್ಕಿಂತ ಎಂಟು ಲಕ್ಷ ಹೆಚ್ಚು ಮತಗಳನ್ನು ಬಿಜೆಪಿ ಪಡೆದಿರುವುದು ಆತಂಕಕಾರಿ. ಈ ಅಪಾಯವನ್ನು ತಪ್ಪಿಸಲು ಸಾಂಸ್ಕೃತಿಕ ಆಂದೋಲನವನ್ನು ದೇಶಾದ್ಯಂತ ಮಾಡಬೇಕಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್, “ಪ್ರತಿ ವರ್ಷವೂ ಭೂಮಿಯನ್ನು ಉಳುತ್ತಿದ್ದರೆ ಕಳೆ ಬೆಳೆಯುವುದಿಲ್ಲ. ನಾವು ಕಾಲಕಾಲಕ್ಕೆ ಸರಿಯಾಗಿ ಉಳುಮೆ ಮಾಡದೆ ಕೆಲವು ಗಂಟುಗಳು ಬೆಳೆದುಕೊಂಡಿವೆ. ಆದರೆ ನಾವೀಗ ನಮ್ಮ ನೇಗಿಲನ್ನು ಆಳಕ್ಕೆ ಇಳಿಸಿ ಉಳುಮೆ ಮಾಡಬೇಕಾಗಿದೆ” ಎಂದು ಮಾರ್ಮಿಕವಾಗಿ ನುಡಿದರು.

ಕೆಲವು ವರ್ಷಗಳ ಹಿಂದೆ ಸಂವಿಧಾನವನ್ನು ಸುಡುತ್ತೇವೆ, ಬದಲಿಸುತ್ತೇವೆ ಎಂದು ಮಾತುಗಳನ್ನು ಆಡಿದ್ದರು. ಆಗ ನಾವೆಲ್ಲ ದನಿ ಎತ್ತಿದೆವು. ಈಗ ದೇಶದಲ್ಲಿ ಸಂವಿಧಾನ ಸುಡುತ್ತೇವೆ, ಬದಲಿಸುತ್ತೇವೆ ಎನ್ನುವುದಿಲ್ಲ. ಆದರೆ ಸಂವಿಧಾನವನ್ನು ಅಪವ್ಯಾಖ್ಯಾನ ಮಾಡುತ್ತಿದ್ದಾರೆ ಮತ್ತು ಅಪ್ರಸ್ತುತಗೊಳಿಸುತ್ತಿದ್ದಾರೆ ಎಂದು ಎಚ್ಚರಿಸಿದರು.

ಕೆಲವು ದಿನಗಳ ಹಿಂದೆ ಹೊಸ ಪಾರ್ಲಿಮೆಂಟ್‌ ಕಟ್ಟಡದಲ್ಲಿ ಅಧಿವೇಶನ ನಡೆಯುವ ವೇಳೆಗೆ ಜಾತ್ಯತೀತ, ಸಮಾಜವಾದಿ, ಸಮಗ್ರತೆ ಎಂಬ ಪದಗಳನ್ನು ಹೊಂದಿರದ ಸಂವಿಧಾನ ಪ್ರತಿಯನ್ನು ಸಂಸದರಿಗೆ ನೀಡಿದ್ದಾರೆ. ಈ ಶಕ್ತಿಗಳ ಧಿಮಾಕು ಎಲ್ಲಿಯವರೆಗೆ ಹೋಗಿರಬಹುದು? ಎಂದು ಪ್ರಶ್ನಿಸಿದರು.

ಈ ಸಂವಿಧಾನ ಬೇಡ ಎಂದರೆ ಈ ದೇಶದಲ್ಲಿ ಅರಾಜಕತೆ ಉಂಟಾಗುತ್ತದೆ, ಕೋಮುವಾದಿ ಶಕ್ತಿಗಳು ರಾರಾಜಿಸುತ್ತವೆ. ನಾವು ನೀವು ಬಾಯಿಗೆ ಬೀಗ ಹಾಕಿಕೊಳ್ಳಬೇಕಾಗುತ್ತದೆ. ಈ ಸಂವಿಧಾನಕ್ಕೆ ಪರ್ಯಾಯವಾದ ಗಟ್ಟಿಯಾದ ವ್ಯವಸ್ಥೆ ನಮಗೆ ಕಾಣುತ್ತಿಲ್ಲ. ಇದನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು.

ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಸಂವಿಧಾನವನ್ನು ಉಳಿಸಿಕೊಳ್ಳಬೇಕಿದೆ. ಹಾಗಿದ್ದರೆ ಮಾತ್ರ ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯುತ್ತದೆ. ಹಲವು ದೇಶಗಳಲ್ಲಿ ಪ್ರಜಾಪ್ರಭುತ್ವ ಬಿರುಕು ಬಿಟ್ಟಿದೆ. ಪ್ರಜಾಪ್ರಭುತ್ವಕ್ಕೆ ಪರ್ಯಾಯವಾದ ಸೂಕ್ತವಾದ ವ್ಯವಸ್ಥೆ ಯಾವುದೂ ಕಾಣುತ್ತಿಲ್ಲ. ಇರುವ ನ್ಯೂನತೆಗಳನ್ನು ಸರಿಪಡಿಸಿಕೊಂಡು ನಾವು ಸಾಗಬೇಕು. ಚುನಾವಣಾ ವ್ಯವಸ್ಥೆಯಲ್ಲಿ ನ್ಯೂನತೆಗಳಿವೆ. ಜಾತಿ, ಹಣ, ತೋಳ್ಬಲ, ಧರ್ಮದ ಪ್ರಭಾವದಲ್ಲಿ ಚುನಾವಣೆಗಳು ನಡೆಯುತ್ತಿವೆ ಎಂದು ವಿಷಾದಿಸಿದರು.

ಸೆಕ್ಯುಲರಿಸಂ ಎಂಬುದನ್ನು ಅಪವ್ಯಾಖ್ಯಾನ ಮಾಡಲಾಗಿದೆ. ಧರ್ಮವನ್ನು ರಾಜಕಾರಣದಿಂದ ಬೇರ್ಪಡಿಸುವುದು, ಸರ್ಕಾರಕ್ಕೆ ಯಾವುದೇ ಧರ್ಮ ಇರದೇ ಇರುವುದು ಸೆಕ್ಯುಲರಿಸಂ ಆಗುತ್ತದೆ. ಸಿಎಎ, ಲವ್ ಜಿಹಾದ್, ಗೋರಕ್ಷಣೆ ಮೊದಲಾದವುಗಳ ಮೂಲಕ ರಾಜಕಾರಣದೊಂದಿಗೆ ಧರ್ಮವನ್ನು ಬೆರೆಸಲಾಗುತ್ತಿದೆ ಎಂದು ಟೀಕಿಸಿದರು.

ಕೋಮುವಾದಿ ಶಕ್ತಿಗಳು ದಿನಕ್ಕೊಂದು ಅಜೆಂಡಾ ಕೊಡುತ್ತಿದ್ದಾರೆ. ಭಗವದ್ಗೀತೆ, ಘರ್ ವಾಪಸಿ, ಲವ್ ಜಿಹಾದ್, ಒನ್ ನೇಷನ್ ಒನ್ ಎಲೆಕ್ಷನ್- ಹೀಗೆ ದಿನವೂ ಒಂದೊಂದು ಅಜೆಂಡಾ ನೀಡುತ್ತಿದ್ದಾರೆ. ಈ ಕೋಮುವಾದಿಗಳಿಗೆ ನಾವು ಅಜೆಂಡಾವನ್ನು ಕೊಡುವಂತಾಗಬೇಕಿದೆ ಎಂದು ಹೇಳಿದರು.

ಹಿರಿಯ ವಿಮರ್ಶಕ ಪ್ರೊ.ಪ್ರೊ.ರಾಜೇಂದ್ರ ಚೆನ್ನಿ ಅವರು ಮಾತನಾಡಿ, “ನಮ್ಮ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಇಂದು ಸೈದ್ಧಾಂತಿಕ ಕಾರಣಗಳಿಗಾಗಿ ಹಿಂಸೆ ನಡೆಯುತ್ತಿದೆ. ನಾಗರಿಕರ ಮೇಲೆ ಗುಂಪು ದಾಳಿ ಆಗುತ್ತಿವೆ. ಈ ಘಟನೆಗಳನ್ನೆಲ್ಲ ಸಾಮಾನ್ಯೀಕರಣಗೊಳಿಸಲಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿರಿ: ಮಣಿಪುರದಲ್ಲಿ ಇಂಟರ್‌ನೆಟ್‌ ಪುನರಾರಂಭ: ಸಿಎಂ ಬಿರೇನ್ ಸಿಂಗ್

ಶ್ರೇಣೀಕರಣ, ಅಸಮಾನತೆಯಲ್ಲಿ ಆರ್‌ಎಸ್‌ಎಸ್ ನಂಬಿಕೆ ಇಟ್ಟಿದೆ. ಆರ್‌ಎಸ್‌ಎಸ್‌ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟುಕೊಂಡಿಲ್ಲ. ಆದರೆ ಈ ಸಿದ್ಧಾಂತ ಈಗ ನಾಗರಿಕ ಸಮಾಜದಲ್ಲಿ ಸಾಮಾನ್ಯವಾಗಿಬಿಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೋಮುವಾದ ಮಣಿಸಲು ಸಾಂಸ್ಕೃತಿಕ ಪರಂಪರೆಯಲ್ಲಿಯೇ ಅಸ್ತ್ರಗಳಿವೆ: ರಹಮತ್ ತರೀಕೆರೆ

’ಜನರ ಸಾಂಸ್ಕೃತಿಕ ರಾಜಕಾರಣ’ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಚಿಂತಕ ರಹಮತ್ ತರೀಕೆರೆ ಅವರು, “ಕರಾವಳಿ ಬಹಳಷ್ಟು ವೈವಿಧ್ಯಮಯ ಪ್ರದೇಶ. ಆದರೆ ಈ ನೆಲ ಕೋಮುವಾದದ ಪ್ರಯೋಗ ಶಾಲೆಯಾಗಿದ್ದು ಹೇಗೆ? ಕರ್ನಾಟಕದಲ್ಲಿ ಹೆಚ್ಚು ಬಿಜೆಪಿ ಎಂಎಲ್‌ಎಗಳು ಕರಾವಳಿಯಿಂದ ಆಯ್ಕೆಯಾಗಿದ್ದಾರೆ. ಒಂದು ಕಾಲದಲ್ಲಿ ಕರಾವಳಿ ಕಮ್ಯುನಿಸ್ಟ್ ಚಳವಳಿಗಾರರ ನಾಡಾಗಿತ್ತು” ಎಂದು ಪರಂಪರೆಯನ್ನು ಮೆಲುಕು ಹಾಕಿದರು.

“ನಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿಯೇ ಕೋಮುವಾದವನ್ನು ಮಣಿಸಬಹುದಾದ ಅಸ್ತ್ರಗಳಿವೆ. ನಮ್ಮ ಕಲೆ ರಾಜಕೀಯ ಅಸ್ಮಿತೆಯ ಅಸ್ತ್ರವೂ ಆಗಿದೆ. ನಮ್ಮಲ್ಲಿ ರಾಜಕೀಯ ಚರ್ಚೆ ಎಂಬುದು ಕಲೆಯ ಭಾಗವಾಗಿಯೇ ಇದೆ. ನಮ್ಮ ಕರ್ನಾಟಕವು ಸಾಂಸ್ಕೃತಿಕ ರಾಜಕಾರಣವನ್ನು ಕಟ್ಟಿದೆ. ಪ್ರಯೋಗಗಳನ್ನು ನಡೆಸಿದೆ. ನಮ್ಮ ಪರಂಪರೆಯ ಜೊತೆಗೆ ಸಾಂಸ್ಕೃತಿಕ ಅನುಸಂಧಾನವನ್ನು ಮಾಡಿಕೊಳ್ಳಬೇಕಾಗಿದೆ” ಎಂದು ಅಭಿಪ್ರಾಯಪಟ್ಟರು.

ದಲಿತ ಸಾಹಿತ್ಯ ಕಲಾಮಂಚ್‌ನ ಪ್ರೊ.ವಿಮಲಾ ಥೋರಟ್, ಕರ್ನಾಟಕ ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ, ಹೋರಾಟಗಾರ್ತಿ ದು.ಸರಸ್ವತಿ, ಸಂಘಟಕ ರಾಘವೇಂದ್ರ ಕುಷ್ಟಗಿ, ಶಾಸಕರಾದ ಬಿ.ಆರ್‌.ಪಾಟೀಲ್, ದರ್ಶನ್ ಪುಟ್ಟಣ್ಣಯ್ಯ,  ಪ್ರೊ.ಆನಂದಕುಮಾರ್‌, ಮಾಜಿ ಶಾಸಕ ಡಿ.ಆರ್‌.ಪಾಟೀಲ್ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X