ಕತೆ, ಕಾದಂಬರಿ, ಕವಿತೆಗಳನ್ನ ಓದುವ ಪ್ರತಿ ಓದುಗನೂ ಅತಿ ದೊಡ್ಡ voyeur- ಅಪರಿಚಿತರ ಚಟುವಟಿಕೆಗಳನ್ನು ನೋಡಿ, ತಿಳಿದು ಸುಖಿಸುವವ. ಓದುವ ಕೃತಿಗಳಲ್ಲಿ ಓದುಗ ಕರ್ತೃವನ್ನ ಹುಡುಕುತ್ತಲೇ ಇರುತ್ತಾನೆ. ಓದುಗ ದರ್ಶನ ತೃಪ್ತನಾಗುವುದೇ ಇಲ್ಲ. ಆ ಅತೃಪ್ತಿ ಆತನನ್ನ ಹೆಚ್ಚೆಚ್ಚು ಪುಸ್ತಕಗಳನ್ನ explore ಮಾಡುವಂತೆ ಪ್ರೇರೇಪಿಸುತ್ತದೆ. ಓದಿನಿಂದ ಹೀಗೆ ಬೇರೊಬ್ಬರ ಬದುಕು explore ಮಾಡುತ್ತಾ ಒಮ್ಮೊಮ್ಮೆ ತಮ್ಮನ್ನ ತಾವೇ ಕಂಡುಕೊಳ್ಳುವುದೂ ಇದೆ. ಈ ತಣಿಯದ ಆಕರ್ಷಣೀಯ alluring voyeurist ಗಳಿಗೆ ಶ್ರೇಷ್ಠ ಲೇಖಕರ ಪತ್ರಗಳು ಸಿಕ್ಕರೆ ಬಿಡುವುದುಂಟೆ?
ಆ ದಿನಗಳಲ್ಲಿ ಎಲ್ಲಾ ಅಪ್ಪ ಹೇಳಿದಂತೆ ನಡೆಯಬೇಕಿತ್ತು. ಅಪ್ಪನನ್ನು ಕಂಡರೆ ಪ್ರೀತಿಯಿತ್ತೋ ಇರಲಿಲ್ಲವೋ ಗೊತ್ತಿಲ್ಲ ಆದರೆ ಭಯವಂತೂ ಇತ್ತು. ಸದಾ ಓದಿಗೆ ಆದ್ಯತೆ ನೀಡುತ್ತಿದ್ದ ಅವರ ಬಗ್ಗೆ ನನ್ನಲ್ಲಿ ವಿಚಿತ್ರ ಅಸಹನೆ ಮೂಡಿತ್ತು. ಅವರನ್ನು ಬಿಟ್ಟು ದೂರ ಎಲ್ಲಾದರೂ ಹೋಗಿಬಿಡಬೇಕು ಅಂತ ಅನಿಸಿದರೂ ಬಾಲ್ಯದ ಅಸಹಾಯಕತೆ ನನ್ನನ್ನು ಕಟ್ಟಿ ಹಾಕಿತ್ತು. ನನಗೆ ವರುಷದಲ್ಲಿ ಎರಡು ಬಾರಿ ಸಿಗುತ್ತಿದ್ದ ಬಿಡುಗಡೆಯ ದಿನಗಳಿಗಾಗಿ- ದಸರಾ ಮತ್ತು ಬೇಸಿಗೆ- ಹಾತೊರೆಯುತ್ತಿದ್ದೆ. ತಾತಾ ಅಜ್ಜಿಯಿದ್ದ ಹಳ್ಳಿಗೆ ಓಡಿಬಿಡುತ್ತಿದ್ದೆ. ಅಪ್ಪನ ಕಣ್ಮುಂದೆ ಇಲ್ಲದ ಮುಕ್ತ ದಿನಗಳವು! ದಿನವೆಲ್ಲಾ ಆಟ, ಈಜು, ಎಮ್ಮೆ ಮೇಯಿಸುವುದು, ಅವುಗಳ ಸವಾರಿ, ತೋತಾಪುರಿ ಮಾವಿನಕಾಯಿಯನ್ನು ಜಜ್ಜಿ ಉಪ್ಪುಖಾರ ಹಾಕಿ ತಿನ್ನುವುದು, ಹಲಸಿನ ತೊಳೆ, ಸೀಬೆ ಹಣ್ಣಿನ ಸವಿ… ಆಹಾ… ಆಲೆಮನೆಯಲ್ಲಿ ಕುಡಿಯುತ್ತಿದ್ದ ಶುಂಠಿ, ಮೆಣಸಿನಕಾಯಿ, ನಿಂಬೆ ಮಿಶ್ರಿತ ಕಬ್ಬಿನ ಹಾಲು, ಕದ್ದು ಮುಚ್ಚಿ ಸೇದುತ್ತಿದ್ದ ತಾತಾನ ಮೋಟು ಬೀಡಿ…
ಆದರೆ ಈ ದಸರಾ ಮತ್ತು ಬೇಸಿಗೆ ರಜಗಳಿಗೆ ಒಂದು ಹಾಳಾದ ಗುಣವು ಇತ್ತು! ಅವು ಕಣ್ಮುಚ್ಚಿ ತೆರೆಯುವುದರಲ್ಲಿ ಕಳೆದುಹೋಗುತ್ತಿದ್ದವು. ತಿಂಗಳು ನಿಮಿಷವೆಂಬಂತೆ! ಬೇಸಿಗೆ ರಜಾ ಕಳೆದು ಹೊರಟು ನಿಂತಾಗ ತಾತಾ ಅಜ್ಜಿಯ ಕಣ್ಣಲ್ಲಿ ಕಣ್ಣೀರು ಜಿನುಗುತ್ತಿತ್ತು, ನಾನು ಗೊಳೋ ಅಂತ ಅಳುತ್ತಿದ್ದೆ. ಅಜ್ಜಿ ಕೈಗೆ ಎರಡು, ಐದು, ಹತ್ತರ ನೋಟಿಟ್ಟು ಸಮಾಧಾನ ಮಾಡಿ ಎತ್ತಿನಗಾಡಿಯಲ್ಲಿ ಮೂರೂ ಕಿಲೋಮೀಟರ್ ಬಂದು ಬಸ್ ಹತ್ತಿಸಿ ಹೋಗೋರು. ಅನಕ್ಷರಸ್ಥಳಾದ ಅಜ್ಜಿ “ತಾತಾನ ಹತ್ತಿರ ಲೆಟರ್ ಬರೆಸ್ತಿನಿ ಹೋಗು. ಬೇಗ ಬರುವಿಯಂತೆ ಮತ್ತೆ” ಅಂತ ಹೇಳೋರು. ನೀಡಿದ ಆಶ್ವಾಸನೆಯಂತೆ ತಾತಾ ಬರೆಯುತ್ತಿದ್ದ ಲೆಟರ್‌ಗಳು ನನ್ನನ್ನು ಮತ್ತೊಂದು ಬೇಸಿಗೆ ರಜೆಯವರೆಗೆ ಸಂತೈಸುತ್ತಿದ್ದವು.
ಚಿರಂಜೀವಿ ಹರೀಶ್ ಅಂತ ತಾತಾನ ಇಂಲ್ಯಾಂಡ್ ಲೆಟರ್ ಶುರುವಾದರೆ, ತೀರ್ಥರೂಪು ತಂದೆಯವರಿಗೆ ಅಂತ ಈ ಕಡೆಯಿಂದ ಅಮ್ಮ ಲೆಟರ್ ಬರೆಯೊಳು. ಅಂದಿನಿಂದ ನನಗೆ ಪತ್ರಗಳು ಎಂದರೆ ಆಕರ್ಷಣೆ. ಪತ್ರ ಅಂದ್ರೆ ಅದು ಬರಿಯ ಪತ್ರವಲ್ಲ ಅಜ್ಜಿ ತಾತಾನ ಸ್ಪರ್ಶ, ಹಳ್ಳಿಯ ಮಣ್ಣಿನ ವಾಸನೆ, ಅಜ್ಜಿ ಬಳಿಯುತ್ತಿದ್ದ ರಾಗಿ ರೊಟ್ಟಿ, ರೊಟ್ಟಿಯ ನಡುವೆ ಹಾಕುತ್ತಿದ್ದ ಒಂದು ಗುಡ್ಡೆ ಬೆಣ್ಣೆ ಮತ್ತು ಗುಂಡುಕಲ್ಲಲ್ಲಿ ರುಬ್ಬಿದ ಚಟ್ನಿ… ಪತ್ರ ನನ್ನ ತಲೆಯಲ್ಲಿ ಹುಟ್ಟು ಹಾಕುತ್ತಿದ್ದ ಕಲ್ಪನಾ ಲೋಕದಲ್ಲಿ ವಿಹರಿಸುವುದೇ ಅತಿ ದೊಡ್ಡ ಮೋಜಾಗಿತ್ತು!
ತಾತಾ ಅಜ್ಜಿ ಹುಟ್ಟು ಹಾಕಿದ ಪತ್ರಗಳ ಬಗೆಗಿನ ವ್ಯಾಮೋಹ ಹಾಗೆ ಮುಂದುವರೆಯಿತು. ಕಾಲೇಜು ದಿನಗಳಲ್ಲಿ ನನಗೆ ತಿಳಿದ ವಿಷ್ಯ ಏನು ಅಂದ್ರೆ ಜಗತ್ತಿನ ಶ್ರೇಷ್ಠ ಲೇಖಕರೆಲ್ಲ ಕಥೆ, ಕಾದಂಬರಿ, ಸಣ್ಣ ಕತೆ, ವಿಮರ್ಶಾ ಲೇಖನಗಳ ಜೊತೆಗೆ ಎಷ್ಟು ಸೊಗಸಾಗಿ ಪತ್ರಗಳನ್ನ ಬರೆಯುತ್ತಿದ್ದರು ಎಂಬುದು. ನನಗೆ ಪತ್ರದಲ್ಲಿ ಅಜ್ಜಿ, ತಾತಾ, ನಮ್ಮಳ್ಳಿ ಮತ್ತೆಲ್ಲವು ಹೇಗೆ ಕಾಣುತ್ತಿದ್ದವೋ, ಜಗತ್ತಿನ ಶ್ರೇಷ್ಠ ಲೇಖಕರ ಪತ್ರಗಳನೊಮ್ಮೆ ಓದಿದರೆ ಅವರ ವ್ಯಕ್ತಿತ್ವ ಅನಾವರಣಗೊಳ್ಳುತ್ತಿದ್ದವು ಎಂಬುದು.
ವರ್ಜೀನಿಯ ವೂಲ್ಫ್, ಸಿಲ್ವಿಯಾ ಪ್ಲಾತ್, ಜಾರ್ಜ್ ಆರ್ವೆಲ್, ಎಮಿಲಿ ಡಿಕೆನ್ಸನ್, ಅರ್ನೆಸ್ಟ್ ಹೆಮಿಂಗ್ವೇ, ಪಿ ಜಿ ವುಡ್‌ಹೌಸ್ ಗೆಳೆಯರಿಗೆ, ಆತ್ಮೀಯರಿಗೆ, ಮಕ್ಕಳಿಗೆ, ಕುಟುಂಬದವರಿಗೆ ಬರೆದ ಪತ್ರಗಳು ಅವರು ಬರೆದ ಚಿರಪರಿಚಿತ ಶ್ರೇಷ್ಠ ಕೃತಿಗಳಷ್ಟೇ ಆಸಕ್ತಿದಾಯಕವಾಗಿವೆ ಎಂಬುದು ನನ್ನ ಅರಿವಿಗೆ ಬಂತು. ಅವರ ಪತ್ರಗಳನ್ನ ಓದುವುದು, ಲೇಖಕರ ಬದುಕು, ಬರಹ ಆಳವಾಗಿ ಅರಿಯುವ ಮಾರ್ಗವೆಂದು ಅರ್ಥವಾಯಿತು…
ಇಲ್ಲಿ ಒಂದು ಮಾತು ಹೇಳ್ಬೇಕು. ನನ್ನ ದೃಷ್ಟಿಯಲ್ಲಿ ಕತೆ, ಕಾದಂಬರಿ, ಕವಿತೆಗಳನ್ನ ಓದುವ ಪ್ರತಿ ಓದುಗನೂ ಅತಿ ದೊಡ್ಡ voyeur- ಅಪರಿಚಿತರ ಚಟುವಟಿಕೆಗಳನ್ನು ನೋಡಿ, ತಿಳಿದು ಸುಖಿಸುವವ. ಓದುವ ಕೃತಿಗಳಲ್ಲಿ ಓದುಗ ಕರ್ತೃವನ್ನ ಹುಡುಕುತ್ತಲೇ ಇರುತ್ತಾನೆ. ಓದುಗ ದರ್ಶನ ತೃಪ್ತನಾಗುವುದೇ ಇಲ್ಲ. ಆ ಅತೃಪ್ತಿ ಆತನನ್ನ ಹೆಚ್ಚೆಚ್ಚು ಪುಸ್ತಕಗಳನ್ನ explore ಮಾಡುವಂತೆ ಪ್ರೇರೇಪಿಸುತ್ತದೆ. ಓದಿನಿಂದ ಹೀಗೆ ಬೇರೊಬ್ಬರ ಬದುಕು explore ಮಾಡುತ್ತಾ ಒಮ್ಮೊಮ್ಮೆ ತಮ್ಮನ್ನ ತಾವೇ ಕಂಡುಕೊಳ್ಳುವುದೂ ಇದೆ. ಈ ತಣಿಯದ ಆಕರ್ಷಣೀಯ alluring voyeurist ಗಳಿಗೆ ಶ್ರೇಷ್ಠ ಲೇಖಕರ ಪತ್ರಗಳು ಸಿಕ್ಕರೆ ಬಿಡುವುದುಂಟೆ?
ನೊಬೆಲ್ ಪ್ರಶಸ್ತಿ ವಿಜೇತ ಜೆ ಎಂ ಕಟ್ಝೀ ತನ್ನ ಗೆಳೆಯ ಪಾಲ್ ಆಸ್ಟರ್‌ಗೆ ಬರೆದ ಪತ್ರಗಳು, ಕಾಫ್ಕ ಬರೆದ ಪತ್ರಗಳು, ಹನ್ನಾ ಆರೆಂಟ್ ತನ್ನ ಗೆಳತಿ ಮೇರಿ ಮಕಾರ್ತಿಗೆ ಬರೆದ ಪತ್ರಗಳು, ಆರ್ವೆಲ್ ಮತ್ತು ಸ್ಟೈನ್ ಬೆಕ್ ಬರೆದ ಪತ್ರಗಳು, ರಿಲ್ಕ್ ಯುವ ಕವಿಗೆ ಬರೆದ ಪತ್ರಗಳು, ವಿನ್ಸೆಂಟ್ ವ್ಯಾನ್ ಗಾಗ್ ಸಹೋದರ ಥಿಯೋಗೆ ಬರೆದ ಪತ್ರಗಳು, ನೆಹರು ಇಂದಿರಾಗೆ ಬರೆದ ಪತ್ರಗಳು, ಅಸ್ಪೃಶ್ಯತೆ ಕುರಿತು ಅಂಬೇಡ್ಕರ್ ಡಬ್ಲ್ಯೂ ಈ ಬಿ ದುಬ್ವಾ ಅವರಿಗೆ ಬರೆದ ಪತ್ರ… ಅಬ್ಬಬ್ಬಾ ಪತ್ರಗಳಲ್ಲಿ ಎಷ್ಟೆಲ್ಲಾ ಮಾಹಿತಿ ಅಡಗಿದೆ ಅಂತ ಅನ್ಸೋಕೆ ಶುರುವಾಯಿತು.
ನನ್ನನ್ನು ಪರ್ಟಿಕ್ಯುಲರ್ ಆಗಿ ಕಾಡಿದ್ದು ಕಾಫ್ಕ ಬರೆದ ಪತ್ರಗಳು-
ʼʼನಮ್ಮನ್ನು ಗಾಯಗೊಳಿಸುವ, ಇರಿಯುವ ಪುಸ್ತಕಗಳನ್ನು ನಾವು ಓದಬೇಕೆಂಬುದು ನನ್ನ ಅನಿಸಿಕೆ. ತಲೆ ಮೇಲೆ ಬಡಿದು ನಮ್ಮನ್ನ ಎಚ್ಚರಿಸದ ಪುಸ್ತಕವನ್ನು ಓದುವ ಅಗತ್ಯವಾದರೂ ಏನಿದೆ? ಖುಷಿ ನೀಡುವ ಪುಸ್ತಕಗಳನ್ನು ಓದಬೇಕೆ? ಓದಿ ಪುಳಕಿತರಾಗಬೇಕೇ? ಅಯ್ಯೋ ದೇವರೇ, ಪುಸ್ತಕ ಇಲ್ಲದೆಯೂ ಪುಳಕಿತರಾಗಬಹುದಲ್ಲ? ಮುದ ನೀಡುವ ಪುಟಗಳನ್ನ ನಾವೇ ಬರೆದು ಬಿಡಬಹುದಲ್ಲ… ಆದರೆ ದುರಂತಗಳಂತೆ ಕಾಡುವ ಪುಸ್ತಕಗಳು ಬೇಕು, ನಾವು ನಮ್ಮ ಜೀವಕ್ಕಿಂತ ಹೆಚ್ಚು ಇಷ್ಟಪಡುವ ಪ್ರೀತಿ ಪಾತ್ರರ ಸಾವಿನಂತೆ ಕಾಡುವ ಪುಸ್ತಕಗಳನ್ನು ಓದಬೇಕು, ಕಾಡು ಪಾಲಾದವನನ್ನು ಕಾಡುವಂತೆ, ಆತ್ಮಹತ್ಯೆಯಂತೆ ಕಾಡುವ ಪುಸ್ತಕವನ್ನು ಓದಬೇಕು, ಪುಸ್ತಕವೆನ್ನುವುದು ನಮ್ಮೊಳಗೆ ಹೆಪ್ಪುಗಟ್ಟಿದ ಸಾಗರವನ್ನು ಕೊಚ್ಚುವ ಕೊಡಲಿಯಾಗಬೇಕು.ʼʼ ಕಾಫ್ಕನ ಬಾಲ್ಯದ ಗೆಳೆಯ ಓಸ್ಕರ್ ಪೊಲೋಕ್‌ಗೆ ಬರೆದ ಪತ್ರವೊಂದು ನಾನು ಯಾವ ಪುಸ್ತಕಗಳನ್ನು ಕೊಂಡು ಓದಬೇಕು ಎಂಬ ನಿಖರತೆ ನೀಡಿತ್ತು.
ಅಪ್ಪನ ಸರ್ವಾಧಿಕಾರಿ ಧೋರಣೆಯನ್ನು ಒಪ್ಪದ ನನಗೆ, ಕಾಫ್ಕ ತನ್ನ ಅಪ್ಪನಿಗೆ ಬರೆದ ಪತ್ರಗಳನ್ನು ಓದುವುದು ಗಾಯಕ್ಕೆ ಮುಲಾಮು ಹಚ್ಚಿಕೊಳ್ಳುವ ಪ್ರಕ್ರಿಯೆಯಾಗಿತ್ತು. ಕಾಫ್ಕ ತನ್ನ ಅಪ್ಪನಿಗೆ ಬರೆದ ಪತ್ರಗಳ ಕೆಲ ಸಾಲುಗಳನ್ನು ಅನುವಾದಿಸಿದ್ದೇನೆ:
ʼʼಅಪ್ಪ ನನ್ನ ಮತ್ತು ನಿನ್ನಲ್ಲಿ ಎಷ್ಟೆಲ್ಲಾ ವ್ಯತ್ಯಾಸಗಳಿವೆ, ವೈರುಧ್ಯಗಳಿವೆ. ಈ ವೈರುಧ್ಯಗಳಲ್ಲೇ ಅಷ್ಟೇ ದೊಡ್ಡ ಅಪಾಯಗಳೂ ಇವೆ. ನಾನೋ ಇನ್ನು ಬೆಳೆಯುತ್ತಿರುವ ಪುಟ್ಟ ಹುಡುಗ, ನೀನೋ ಬೆಳೆದು ನಿಂತ ದೈತ್ಯ, ನಾವಿಬ್ಬರು ಎದುರಾದರೆ ನೀನು ನನ್ನನ್ನು ತುಳಿದು ಹೊಸಕಿ ಹಾಕಿಬಿಡುತ್ತಿದ್ದೆ ಅಂತ ಯಾರು ಬೇಕಾದರೂ ಅಂದಾಜು ಮಾಡಬಹುದಿತ್ತು.ʼʼ
ʼʼಎಲ್ಲಾ ಮಕ್ಕಳಂತೆ ನಾನೊಬ್ಬ ಅಂಜುಬುರಕನಾಗಿದ್ದೆ, ನಿಜವಾಗಿಯೂ ಹಠಮಾರಿಯಾಗಿದ್ದೆ. ಅಮ್ಮನ ಮುದ್ದು ನನ್ನನ್ನು ಹಾಳು ಮಾಡಿತ್ತೆಂಬುದು ಕೂಡ ಸತ್ಯ. ಆದರೆ ನಾನೊಬ್ಬ ನಿಭಾಯಿಸಲಾಗದ ತುಂಟನಾಗಿದ್ದೆ ಎಂಬುದನ್ನು ನಂಬಲಿಕ್ಕಾಗುವುದಿಲ್ಲ. ಒಂದು ನಯವಾದ ಮಾತು, ನಾಜೂಕಾಗಿ ಕೈ ಹಿಡಿದು ಹೇಳಿದ ಒಂದು ಪದ, ಒಂದು ಕರುಣೆಯ ನೋಟ ಸಾಕಿತ್ತು ನೀನು ಹೇಳಿದ ಹಾಗೆ ನಾ ನಡೆದುಕೊಳ್ಳಲು… ನನ್ನ ಮೇಲೆ ನಿನಗೆ ನಂಬಿಕೆ ಇರಲಿಲ್ಲವಲ್ಲ ಅದನ್ನು ನನಗೆ ನಂಬಲಾಗುತ್ತಿಲ್ಲ…ʼʼ
ʼʼನಿನಗೆ ನೆನಪಿದೆಯೇ ಒಂದು ದಿನ ನಡುರಾತ್ರಿಯಲ್ಲಿ ʼನನಗೆ ದಾಹ, ನೀರು ಬೇಕೆಂದುʼ ನಾನು ರಚ್ಚೆ ಹಿಡಿದಿದ್ದೆ. ನಿಮ್ಮನ್ನು ಕಿರಿಕಿರಿ ಮಾಡಲು, ನಿಮ್ಮ ಗಮನಸೆಳೆಯಲು ಹಾಗೆ ಮಾಡಿದ್ದೆ. ಕೋಪಗೊಂಡ ನೀನು ನನ್ನನ್ನು ದರದರನೆ ಎಳೆದುಕೊಂಡು ಹೋಗಿ ಬಾಲ್ಕನಿಯಲ್ಲಿ ದೂಡಿ ಬಂದಿದ್ದೆ. ಆ ಘಟನೆಯ ನಂತರ ನಾನು ವಿಧೇಯನಾದೆ, ಆದರೆ ಅತಿಯಾಗಿ ಘಾಸಿಗೊಂಡಿದ್ದೆ ಕೂಡ. ನಾನು ಹುಚ್ಚನಂತೆ, ಅರ್ಥಹೀನವಾಗಿ ನೀರಿಗಾಗಿ ಹಠ ಹಿಡಿದು ಕೂತಿದ್ದು, ದರದರನೆ ನೀನು ಎಳೆದು ನನ್ನ ಹೊರಹಾಕಿದಾಗ ನನ್ನಲ್ಲಿ ಹುಟ್ಟಿದ ಅಸಾಧಾರಣ ದಿಗಿಲನ್ನು ತಾಳೆ ಹಾಕಲು ನನಗೆ ಆಗಲೇ ಇಲ್ಲ…
ಈ ಘಟನೆ ನಡೆದು ವರುಷಗಳೇ ಉರುಳಿದರು ದೈತ್ಯನೊಬ್ಬ- ಅಪ್ಪನೆಂಬ ಸರ್ವಾಧಿಕಾರಿ- ಬಂದು ಹಾಸಿಗೆಯಿಂದ ಎಬ್ಬಿಸಿ ದರದರನೆ ಎಳೆದುಕೊಂಡು ಹೋಗಿ ಮನೆಯಿಂದ ಹೊರಹಾಕುತ್ತಿದ್ದ ದುಃಸ್ವಪ್ನ ನನ್ನನ್ನು ಹಿಂಸಿಸುತ್ತಲೇ ಇತ್ತು. ನಾನು ಅವನಿಗೆ ಏನೇನು ಅಲ್ಲ ಎಂಬ ವ್ಯಥೆ ಹೇಳತೀರದ ನೋವು ನೀಡುತ್ತಲೇ ಇತ್ತು.”
ಇದನ್ನು ಓದಿದ್ದೀರಾ: ಈ ದಿನ ವಿಶೇಷ | ತಮಿಳುನಾಡಿನ ರಾಜಕಾರಣದಲ್ಲಿ ಧೂಳೆಬ್ಬಿಸಲಿದ್ದಾರೆಯೇ ದಳಪತಿ ವಿಜಯ್?
ತನ್ನ ತಂದೆಗೆ ಕಾಫ್ಕ ಬರೆದ ಈ ಪತ್ರಗಳು ನನ್ನ ಮೇಲೆ ಬಹಳ ಕ್ಯಾಥರ್ಟಿಕ್ ಪರಿಣಾಮವನ್ನು ಬೀರಿದ್ದಂತೂ ನಿಜ.
ನಂತರದ ದಿನಗಳಲ್ಲಿ ಕೆಲ ಪತ್ರಗಳು ಥೆರಪೆಟಿಕ್ ಆಗಿಯು ಕೂಡ ಕೆಲಸ ಮಾಡಿದವು!
ಅದು 1958. ನೊಬೆಲ್ ಪ್ರಶಸ್ತಿ ಪುರಸ್ಕೃತ ಜಾನ್ ಸ್ಟೇನ್ಬೆಕ್‌ನಿಗೆ ಹಿರಿಯ ಮಗ ಥಾಮ್ ಪತ್ರವೊಂದನ್ನು ಬರೆಯುತ್ತಾನೆ.
ಬೋರ್ಡಿಂಗ್ ಸ್ಕೂಲಿನಲ್ಲಿ ಓದುತ್ತಿದ್ದ ಥಾಮ್‌ಗೆ ಸೂಸಾನ್ ಎಂಬ ಹುಡುಗಿಯ ಮೇಲೆ ಪ್ರೇಮಾಂಕುರವಾಗಿರುತ್ತದೆ. ಅಪ್ಪನಾದ ಜಾನ್ ಸ್ಟೇನ್ಬೆಕ್ಕನಿಗೆ ಪತ್ರ ಬರೆದು ಥಾಮ್ ವಿಷಯ ತಿಳಿಸುತ್ತಾನೆ. ಅದಕ್ಕೆ ಉತ್ತರವಾಗಿ ಜಾನ್ ಸ್ಟೇನ್ಬೆಕ್ ಬರೆದ ನವಿರಾದ, ಆಶಾವಾದದ, ಜಾಣತನದ ಪತ್ರ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಅನುವಾದಿಸಿದ್ದೇನೆ:
ಪ್ರೀತಿಯ ಥಾಮ್
ʼʼಮೊದಲಿಗೆ, ನಿನಗೆ ಪ್ರೇಮಾಂಕುರವಾಗಿರುವುದು ಒಳ್ಳೆಯ ವಿಷಯ. ಪ್ರತಿಯೊಬ್ಬರಿಗೂ ಆಗಬಹುದಾದ ಶ್ರೇಷ್ಠ ವಿಷಯವದು. ನಿನ್ನ ಪ್ರೀತಿಯನ್ನು ಯಾರು ಮೇಲು, ಕೀಳು ಎಂದು ವಿಭಾಗಿಸದ ಹಾಗೆ ನೋಡ್ಕೋ.
ಎರಡನೆಯದಾಗಿ- ಪ್ರೀತಿಯಲ್ಲಿ ಹಲವು ಬಗೆಗಳಿವೆ. ಸ್ವಾರ್ಥದ, ಅಧಿಕಾರ ಚಲಾವಣೆಯ, ʼನಾನುʼ ಎಂಬ ಅಹಮ್ಮಿಗೆ ಆಹಾರ ನೀಡುವ ಕಳಪೆ ಪ್ರೀತಿ ಒಂದು ಕಡೆ. ಅದು ಕುರೂಪ ಮತ್ತು ಕುಂಠಿತ ಪ್ರೀತಿ. ದಯೆ, ಗೌರವ, ನೋವು, ನಲಿವನ್ನು ಪರಿಗಣಿಸುವ, ಕಡಲಂತೆ ಉಕ್ಕುವ, ಸಹಜ ವಿಶಾಲ ಪ್ರೀತಿ ಮತ್ತೊಂದೆಡೆ. ಅವಳು ಅನನ್ಯ, ಅಮೂಲ್ಯವೆಂದು ಗುರುತಿಸುವ ಪ್ರೀತಿಯದು. ಕುರೂಪ ಪ್ರೀತಿ ನಿನ್ನಲ್ಲಿ ಸಣ್ಣತನ, ರೋಗ ತುಂಬಿ ಕೃಷವಾಗಿಸಿದರೆ, ಮತ್ತೊಂದು ಪ್ರೀತಿ ನಿನ್ನೊಳಗಿದ್ದ (ಅಥವಾ ಇಲ್ಲದ) ಧೈರ್ಯ, ಬಲ, ಒಳ್ಳೆಯತನ, ಅರಿವನ್ನು ವೃದ್ಧಿಸುತ್ತದೆ.
ಪ್ರೀತಿ ಶ್ರೇಷ್ಠ, ಸುಂದರ. ಅದರ ಘನತೆಯನ್ನು ಎಂದೆಂದಿಗೂ ಉಳಿಸಿಕೋ. ಪ್ರೀತಿಯ ನಿವೇದನೆ ತಪ್ಪಲ್ಲ. ಅದರಿಂದ ಯಾವ ಹಾನಿಯು ಇಲ್ಲ. ಕೆಲವರು ನಾಚಿಕೆಯ ಸ್ವಭಾವದವರಿರುತ್ತಾರೆ ನಿವೇದಿಸಿಕೊಳ್ಳುವ ಮೊದಲು ಅವರ ನಾಚಿಕೆಯ ಸ್ವಭಾವವನ್ನು ಗಣನೆಗೆ ತೆಗೆದುಕೊ.
ಹುಡುಗೀಯರಿಗೆ ನಿನ್ನ ಭಾವನೆಗಳನ್ನು, ನಿನ್ನ ತಲೆ ಹೊಕ್ಕಿರುವ ವಿಷಯಗಳನ್ನು ಅರಿಯುವ ಶಕ್ತಿಯಿದೆ ಆದರೆ ನಿನ್ನ ಮನದ ಮಾತನ್ನು ಕೇಳುವ ಹಂಬಲವೂ ಇರುತ್ತೆ.
ಹಲವು ಬಾರಿ ನಿನ್ನ ಪ್ರೀತಿಗೆ ಯಾವುದೇ ಪ್ರತಿಕ್ರಿಯೆ ಬಾರದೆ ಇರಬಹುದು. ಅದಕ್ಕೆ ಒಂದಲ್ಲ ಒಂದು ಕಾರಣವೂ ಇರುತ್ತೆ. ಪ್ರೀತಿ ಒಪ್ಪಲಿ ಅಥವಾ ನಿರಾಕರಿಸಲಿ ನಿನ್ನ ಒಳ್ಳೆಯತನ, ಆತ್ಮಾಭಿಮಾನ ಹಾಳಾಗದಿರಲಿ. ಆತ್ಮವಿಶ್ವಾಸ ಸದಾ ಉಳಿಯಲಿ.
ಕೊನೆಯದಾಗಿ, ನಿನ್ನ ಭಾವನೆಗಳು ನನಗೆ ಅರ್ಥವಾಗುತ್ತೆ. ಪ್ರೀತಿ ನನ್ನಲ್ಲಿದೆ ಅದು ನಿನ್ನಲ್ಲಿಯೂ ಮನೆ ಮಾಡಿದೆ ಎಂಬ ಖುಷಿ ನನ್ನದು. ಬಹು ಬೇಗ ಸೂಸಾನ್ ಭೇಟಿ ಮಾಡುವ. ಅವಳಿಗಾಗಿ ಮನ, ಮನೆ ಸದಾ ತೆರೆದಿರುತ್ತದೆ.
ಪ್ರೀತಿ ಕಳೆದುಕೊಳ್ಳುವ ಭಯ ಬೇಡ. ನಿನ್ನ ಪ್ರೀತಿ ಸರಿಯಿದ್ದರೆ, ಒಳಿತಾಗುತ್ತದೆ. ಆತುರ ಪಡಬೇಡ.
ಒಳಿತು ನಿನ್ನಿಂದ ತಪ್ಪಿಸಿಕೊಂಡು ದೂರ ಹೋಗಲಾರದು
ನಿನ್ನಪ್ಪ.
ಫಾ

ಹದಿ ಹರೆಯದಲ್ಲಿ ಸಹಜವಾಗಿ ಮೂಡುವ ಪ್ರೀತಿಯನ್ನು ಭೀಭತ್ಸಗೊಳಿಸದೆ ಕೋಮಲವಾಗಿ ಕಂಡ ಜಾನ್ ತನ್ನ ಮಗನಲ್ಲಿ ಪತ್ರದ ಮೂಲಕ ತುಂಬಿದ ಮಾನಸಿಕ ಸ್ಥೈರ್ಯವೆಂತದ್ದು! ಪ್ರೀತಿಯ ಎಲ್ಲಾ ಆಯಾಮಗಳಿಗೆ ಮಗನನ್ನು ಮಾನಸಿಕವಾಗಿ ತಯಾರುಗೊಳಿಸಿದ ಪರಿ ಎಂತದ್ದು!
ಹೀಗೆ ಪತ್ರಗಳು ಬಾಲ್ಯದಿಂದಲೂ ಗಾಢವಾದ ಪರಿಣಾಮವನ್ನೇ ಬೀರಿವೆ. ಗೆಳೆತನವನ್ನು, ಸಂಬಂಧಗಳನ್ನು, ಪ್ರೇಮವನ್ನು ಎಲ್ಲಕ್ಕಿಂತ ಹೆಚ್ಚಾಗಿ ಅಪ್ಪನನ್ನು ಅರಿಯುವ ಸಾಧನವಾಗಿದೆ. ಕಾಫ್ಕನ ಅಪ್ಪನಂತೆ ನನ್ನ ಅಪ್ಪನೂ ಸರ್ವಾಧಿಕಾರಿಯೇ ಎಂದು ಆ ದಿನಗಳಲ್ಲಿ ಅನಿಸಿದ್ದರೂ ನನ್ನ ಹದಿಹರೆಯದ ದಿನಗಳಲ್ಲಿ ಅಪ್ಪ ಜಾನ್ ಸ್ಟೇನ್ಬೆಕ್ ಆಗಿ ಬದಲಾಗಿದ್ದು ಅಚ್ಚರಿಯನ್ನು ಮೂಡಿಸಿದೆ… ಅದೇಕೋ ತ್ವರಿತ ಗತಿಯ ಈಮೇಲ್, ವಾಟ್ಸಾಪ್ ಅಳೆದು ತೂಗಿ ಬರೆದ ಪತ್ರಕ್ಕೆ ಸರಿಸಮನಾದುದು ಅಥವಾ ಪರ್ಯಾಯವೆಂದು ಎಂದು ನನಗನಿಸಿಲ್ಲ. ತಾತಾ ಮತ್ತು ಅಪ್ಪ ಇಂದು ಬದುಕಿಲ್ಲ. ಆದರೆ ಇಂದಿಗೂ ಅವರ ಪತ್ರಗಳಿಗೆ ಕಾಯುತ್ತೇನೆ. ಹೌದು ಪತ್ರಗಳಿಗೆ ಮುಲಾಮಿನ ಗುಣವಿದೆ.

ಹರೀಶ್ ಗಂಗಾಧರ್
ಲೇಖಕ, ಪ್ರಾಧ್ಯಾಪಕ